`ಗಾಳಿಪಟ’ ಸಿನಿಮಾ ನೋಡಿದವರಿಗೆ ಮಾಂದಾಲ ಪಟ್ಟಿಯ ನಿಸರ್ಗ ಸೌಂದರ್ಯ ಕಣ್ಮುಂದೆ ಹಾಗೆಯೇ ಬರುತ್ತದೆ. ಮಾಂದಾಲ ಪಟ್ಟಿ ಎಂದರೆ ಕೊಡವ ಭಾಷೆಯಲ್ಲಿ ಎತ್ತರದ ಜಾಗ ಎಂದರ್ಥ. ಮಾಂದಾಲ ಪಟ್ಟಿ ಮಡಿಕೇರಿಗೆ ಸುಮಾರು 20 ಕಿ.ಮೀ. ದೂರದಲ್ಲಿದ್ದು ಪುಷ್ಪಗಿರಿ ವನ್ಯಧಾಮಕ್ಕೆ ಸೇರಿದೆ. ಅರಣ್ಯ ಇಲಾಖೆಯ ಅಧೀನದಲ್ಲಿ ಇರುವುದರಿಂದ, ಅಲ್ಲಿಗೆ ಹೋಗುವವರು ಇಲಾಖೆಯ ಅನುಮತಿ ಪಡೆಯುವುದು ಅಗತ್ಯ. ಇಲ್ಲಿಗೆ ತೆರಳಬೇಕಾದರೆ ಮಡಿಕೇರಿಯಿಂದ ಅಬ್ಬಿ ಫಾಲ್ಸ್ ರಸ್ತೆಯಲ್ಲಿ ಹಾಗೂ ಮಡಿಕೇರಿಯಿಂದ ಸೋಮಾರಪೇಟೆಗೆ ತೆರಳುವ ರಸ್ತೆಯಲ್ಲಿ ಸಾಗಿದರೆ 8 ಕಿ.ಮೀ. ದೂರದಲ್ಲಿ ಮಕ್ಕೂಂದೂರು ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಎಡಕ್ಕಿರುವ ರಸ್ತೆಯಲ್ಲಿ ಸಾಗಿದರೆ ಮಾಂದಾಲ ಪಟ್ಟಿ ತಲುಪಬಹುದು.
ಮಡಿಕೇರಿಯಿಂದ ಅಬ್ಬಿಫಾಲ್ಸ್ ಗೆ ಕಡಿದಾದ ರಸ್ತೆಯಲ್ಲಿ ಸಾಗುವುದೇ ಒಂದು ರೀತಿಯ ಥ್ರಿಲ್. ಸುತ್ತಮುತ್ತ ಕಾಣಸಿಗುವ ಕಾಫಿ, ಏಲಕ್ಕಿ ತೋಟಗಳು, ತೊರೆ ಝರಿಗಳು, ಪಶ್ಚಿಮ ಘಟ್ಟ ಶ್ರೇಣಿಗಳು ಅವುಗಳ ನಡುವಿನ ಕಂದಕದಲ್ಲಿ ಬೆಳೆದು ನಿಂತ ಗಿಡಮರಗಳನ್ನು ನೋಡುತ್ತಾ ಹೋದರೆ ಸಮಯವೇ ಸಾಲದು. ಸಮುದ್ರ ಮಟ್ಟದಿಂದ ಸುಮಾರು 4000 ಅಡಿ ಎತ್ತರದಲ್ಲಿರುವ ಮಾಂದಾಲ ಪಟ್ಟಿಗೆ ಆಗೊಮ್ಮೆ ಈಗೊಮ್ಮೆ ಪ್ರವಾಸಿಗರು ಬರುತ್ತಾರಾದರೂ ವರ್ಷದ ಹೆಚ್ಚಿನ ದಿನಗಳು ಇಲ್ಲಿ ನೀರವ ಮೌನ ನೆಲೆಸಿರುತ್ತದೆ.
ಮಾಂದಾಲ ಪಟ್ಟಿ ಪ್ರವಾಸಿಗರಿಗೆ ಸ್ವರ್ಗ ತಾಣ ಎಂದರೆ ತಪ್ಪಾಗಾರದು. ಏಕೆಂದರೆ ಏರು ರಸ್ತೆಯಲ್ಲಿ ಸಾಗುವಾಗ ಆಯಾಸವಾಗುವುದು ಸಹಜ. ಆದರೆ ಬೆಟ್ಟದ ತುದಿ ತಲುಪಿದಾಗ ಕೈಗೆ ಎಟುಕುತ್ತದೋ ಎಂಬಂತೆ ಭಾಸವಾಗುವ ಮುಗಿಲು, ಪರ್ವತ ಶ್ರೇಣಿಗಳು, ಅಲೆ ಅಲೆಯಾಗಿ ತೇಲಿ ಬರುವ ಮಂಜು, ಸುಂದರ ನಿಸರ್ಗ ಸೌಂದರ್ಯ ನಿಮ್ಮ ಆಯಾಸವನ್ನೆಲ್ಲಾ ಮಾಯ ಮಾಡಿಬಿಡುತ್ತದೆ.
ನಗರದ ವಾಹನಗಳ ಗಲಾಟೆ, ಹೊಗೆಭರಿತ ಮಾಲಿನ್ಯಮಯ ಜಗತ್ತಿನಿಂದ ದೂರ ಹೋಗಿ ನಿಸರ್ಗದ ರಮಣೀಯತೆಯಲ್ಲಿ ಕೂಲಾಗಿ ಮೈ ಮರೆಯಬೇಕೆಂದರೆ ಇಲ್ಲಿಗೆ ಬರಬೇಕು. ಇಲ್ಲಿಗೆ ಭೇಟಿ ನೀಡುವವರು ತಿಂಡಿ ತಿನಿಸುಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಒಳ್ಳೆಯದು. ಇಲ್ಲಿ ಯಾವುದೇ ಅಂಗಡಿ ಹೋಟೆಲ್‌ಗಳು ಇರುವುದಿಲ್ಲ. ಉಳಿದುಕೊಳ್ಳುವುದಕ್ಕೆ ಹತ್ತಿರದ ಮಡಿಕೇರಿಗೆ ಬರಬೇಕು. ಇಂತಹ ಸುಂದರ ನಿಗರ್ಸತಾಣವನ್ನು ಒಮ್ಮೆಯಾದರೂ ಭೇಟಿ ಮಾಡಿ.
– ತಿಪಟೂರು ಎಸ್. ಲೀಲಾ