ದಟ್ಟವಾದ ಕಾಡುಳ್ಳ ಪಶ್ಚಿಮ ಘಟ್ಟದಲ್ಲಿ ಮೈತುಂಬಿದ ಮಾಂಡವಿ ನದಿಯು ಹರಿದು ಬರುವಾಗ ದೂಧ್‌ ಸಾಗರ್‌ ಜಲಪಾತವಾಗಿ ಭೋರ್ಗರೆಯುತ್ತಾ ನಿಸರ್ಗ ಪ್ರಿಯರಿಗೆ ರೋಮಾಂಚನ ನೀಡುತ್ತಾಳೆ.

ಗೋವಾ-ಕರ್ನಾಟಕದ ಗಡಿಯಲ್ಲಿರುವ ಈ ದಾರಿಯಲ್ಲಿ ಬರುವ ಕೊಂಕಣ ರೈಲಿನ ಸುರಂಗ ಮಾರ್ಗಗಳ ಪ್ರಯಾಣವಂತೂ ಮನಕ್ಕೆ ಮುದ ನೀಡುತ್ತದೆ. ಮಲೆನಾಡಿನ ವೈಭವವನ್ನು ಮಳೆಗಾಲದಲ್ಲಿಯೇ ನೋಡಬೇಕು. ಮಲೆನಾಡಿನ ತೆಕ್ಕೆಯಲ್ಲಿ ಹರಿಯುವ ಮಹದಾಯಿ, ಮಾಂಡವಿ ನದಿ ಎಂದು ಕರೆಯಿಸಿಕೊಳ್ಳುವ ಈ ಜಲಧಾರೆಯು ಸುಮಾರು 1017 ಅಡಿಗಳ ಎತ್ತರದಿಂದ ಹಾಲಿನಂತೆ ನೊರೆ ನೊರೆಯಾಗಿ ಧುಮ್ಮಿಕ್ಕುವುದರಿಂದ ಈ ಜಲಪಾತವನ್ನು ಮಳೆಗಾಲದ ಸಂದರ್ಭದಲ್ಲಿ ನೋಡಬೇಕು. ಆಗ ಅದರ ಐಸಿರಿಯನ್ನು ವರ್ಣಿಸಲು ಶಬ್ದಗಳೇ ಸಾಲುವುದಿಲ್ಲ. ಹಾಲು ಮತ್ತು ಬೆಳದಿಂಗಳ ಮಿಶ್ರಣದಂತಿರುವ ಜಲರಾಶಿ, ಸುತ್ತಲೂ ಹಸಿರು ಮುಕ್ಕಳಿಸುವ ವನರಾಶಿ, ದೃಷ್ಟಿ ಹಾಯಿಸಿದಷ್ಟೂ ಮಹದಾನಂದದ ವೃಷ್ಟಿಯ ದಿವ್ಯ ಅನುಭೂತಿಯನ್ನು ನೀಡುತ್ತದೆ. ದಟ್ಟ ಕಾನನದ ಮಧ್ಯದಲ್ಲಿರುವ ಇಲ್ಲಿಗೆ ಹೋಗುವುದೇ ಒಂದು ಸವಾಲು!

ಮೇಲಿನಿಂದ ಟಿಸಿಲಾಗಿ ಕೆಳಗೆ ದುಮುಕುವಾಗ ಮೇಲಕ್ಕೆ ಹಾರುತ್ತಿರುವ ತುಂತುರು ನೀರ ಹನಿಗಳು, ಅದರಿಂದುಂಟಾಗುವ ಮೋಡ ಮುಸುಕಿದ ಭೀಕರ ಮಂಜು, ದಟ್ಟ ಕಾನನ ದೇವಿಗೆ ಬಿಳಿಯ `ಓಡ್ನಿ’ (ಮೇಲು ಮುಸುಕು)ಯನ್ನು ಹೊದಿಸಿದಂತೆ ಭಾಸವಾಗುತ್ತದೆ.

ಈ ಜಲಪಾತ ಭೋರ್ಗರೆಯುತ್ತಾ, ಕಿವಿಗಡಚಿಕ್ಕುವಂತೆ ಭಯಾನಕ ಶಬ್ದ ಮಾಡುತ್ತಾ ಮೇಲಿನಿಂದ ಕೆಳಗೆ ದುಮುಕುತ್ತಾ, ಮುಂದೆ ಹಸಿರು ಕಾಡಿನಲ್ಲಿ ಹರಿದು ಮರೆಯಾಗುತ್ತಾಳೆ. ಈ ಪರಿಸರ ಎಂತಹ ಅನಾಗರಿಕನನ್ನೂ ಅಂತರ್ಮುಖಿಯಾಗಿಸುತ್ತದೆ. ಜಲಪಾತದ ಪಕ್ಕದಲ್ಲಿಯೇ ಕೊಂಕಣ ರೈಲಿನ ದಾರಿ ಈಕೆಯ ಸೊಬಗನ್ನು ಇನ್ನಷ್ಟು ಹೆಚ್ಚಿಸಿದೆ.

ಈಗ ಅಲ್ಲಿ ಬಿಡುವಿಲ್ಲದ ಮಳೆ ಸುರಿಯುತ್ತದೆ. ಆ ಸುರಿಯುವ ಮಳೆಯಲ್ಲಿ ನೆನೆಯುತ್ತಾ ಇದರ ಸವಿಯನ್ನು ಅನುಭವಿಸುವುದು ಬಹು ಚೇತೋಹಾರಿ ಅನುಭವ. ಇಲ್ಲಿಗೆ ಬರುವುದಾದರೆ ರೈಲಿನಲ್ಲಿಯೇ ಬರಬೇಕು ಬೇರೆ ದಾರಿಯೇ ಇಲ್ಲ. ಇದರಿಂದ ಇದು ತನ್ನ ಶುದ್ಧತೆಯನ್ನು ಕಾಯ್ದುಕೊಂಡರೂ, ಗೋವಾದಲ್ಲಿ ಯಥೇಚ್ಛವಾಗಿ ಗುಂಡು ಸಿಗುವುದರಿಂದ, ಪಾನಪ್ರಿಯರ ಹಾವಳಿಯಿಂದ ಇದು ಮುಕ್ತವಾಗಿಲ್ಲ.

ಸೌಲಭ್ಯಗಳ ಕೊರತೆಯಂತೂ ಇಲ್ಲಿ ಅಸದಳ. ಅವಶ್ಯಕತೆಯು ಆವಿಷ್ಕಾರದ ತಾಯಿಯಲ್ಲವೇ? ರೈಲ್ವೆ ನಿಲ್ದಾಣವಿಲ್ಲ. ಒಂದು ಗೂಡಿನಂಥ ಕಟ್ಟಡವಿದೆ. ಪ್ರವಾಸಿಗರಿಗಾಗಿ ರೈಲು ಒಂದು ಕ್ಷಣ ನಿಲ್ಲುತ್ತದೆ. ಮಳೆಯಾದರೆ ಪ್ರವಾಸಿಗರಿಗೆ ನಿಲ್ಲಲು ಆಶ್ರಯವಿಲ್ಲ. ತಿನ್ನಲು ಏನೂ ಸಿಗುವುದಿಲ್ಲ. ಒಮ್ಮೆ ರೈಲು ಬಂದು ಹೋದರೆ ಮುಗಿಯಿತು. ಮತ್ತೆ ಬರುವುದು ಅಪರೂಪ. ಹೀಗಾಗಿ ಕನಸುಗಳನ್ನು ಕಟ್ಟಿಕೊಂಡು ಬಂದವರ ಕಥೆ ಹೇಳತೀರದು. ರಾತ್ರಿಯಾದರೆ ವಸತಿ ಮಾಡಲು ಯಾವುದೇ ವ್ಯವಸ್ಥೆ ಇಲ್ಲದೆ ಕಾಡಿನಲ್ಲಿಯೇ ಮಲಗಬೇಕು. ಗೋವಾದಿಂದ ಬರುವವರು ಕೋಲ್ಯಂ ನಿಲ್ದಾಣದಿಂದ, ಕರ್ನಾಟಕದಿಂದ ಬರುವವರು ಕ್ಯಾಸರ್‌ ವಾಕ್‌ ನಿಲ್ದಾಣದಿಂದ ಬರಬಹುದು. ಆದರೆ ಇಲ್ಲಿನ ಜಲಪಾತದವರೆಗೆ ಬರಲು ರಸ್ತೆ ಇಲ್ಲ. ಒಟ್ಟಿನಲ್ಲಿ ಇದೊಂದು ಅದ್ಭುತ ಪ್ರೇಕ್ಷಣೀಯ ತಾಣ!

– ಡಾ. ಮಲ್ಲಿಕಾರ್ಜುನ ಕುಂಬಾರ.    

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ