ದ್ವಾಪರಯುಗದ ಕೃಷ್ಣನ ದ್ವಾರಕಾ ಪಟ್ಟಣ ಸಮುದ್ರದಲ್ಲಿ ಮುಳುಗಡೆಯಾಗಿ ಅದರ ಅವಶೇಷಗಳು ಸಮುದ್ರ ತಳದಲ್ಲಿರುವುದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ.

ಆದರೆ, ಅದನ್ನು ಎಲ್ಲರಿಗೂ ನೋಡಲು ಸಾಧ್ಯವಾಗದಿರಬಹುದು. ಆದರೆ, ಈ ಕಲಿಯುಗದಲ್ಲಿ ಆತನಿಗಾಗಿ ನಿರ್ಮಿಸಿದ್ದ ಸುಂದರ ಆಲಯವೆಂದು ಯಾರ ಅರಿವಿಗೂ ಬಾರದಂತೆ ಮೈಸೂರಿನ ಸುಪ್ರಸಿದ್ಧ ಕೃಷ್ಣರಾಜ ಸಾಗರದ ಕಾವೇರಿ ಒಡಲಲ್ಲಿ ಮುಳುಗಡೆಯಾಗಿ, ಈಗ ನಂಬಲಸಾಧ್ಯವಾಗುವಂತೆ ಮತ್ತೆ ಮರುಜನ್ಮ ಪಡೆದು ಜಲಾಶಯದ ಬಲದಂಡೆಯ ಮೇಲೆ ನವಜಾತ ಶಿಶುವಿನಂತೆ ನೆವೆ ಕಂಡುಕೊಂಡಿರುವ ಕೌತುಕದ ಸಂಗತಿಯನ್ನು ಯಾರು ಬೇಕಾದರೂ ಸಾಕ್ಷೀಕರಿಸಬಹುದಾಗಿದೆ. ಇದೆಲ್ಲದರ ಕುತೂಹಲಕಾರಿ ಘಟನಾವಳಿಗಳು ಇಂತಿವೆ.

ಪಶ್ಚಿಮ ಘಟ್ಟದ ತೆಕ್ಕೆಯಲ್ಲಿರುವ ಬ್ರಹ್ಮಗಿರಿ ಪರ್ವತದ ಮಡಿಲಲ್ಲಿ ಉಗಮಿಸುವ ಕಾವೇರಿ, ಗುಪ್ತಗಾಮಿನಿಯಾಗಿ ಗಿರಿಯನ್ನಿಳಿದು, ಅಲ್ಲಿ ಇಲ್ಲಿ ಸುತ್ತಿ ಸುಳಿದು, ಕಾಡು ಮೇಡುಗಳನ್ನು ಅಲೆದು, ಮೇಲಿನಿಂದ ಜಿಗಿದು, ಪ್ರಪಾತದಲ್ಲಿ ಸುಳಿದು ತನ್ನ ಪಾಡಿಗೆ ತಾನು ಹರಿದು ಬಂಗಾಳಕೊಲ್ಲಿಯೊಡನೆ ಸಂಲಗ್ನಗೊಳ್ಳುತ್ತಿದ್ದಳು. ಆದರೆ, ಆಕೆ ವ್ಯರ್ಥವಾಗಿ ಹರಿಯುವುದನ್ನು ಕಂಡ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಕೃಷ್ಣರಾಜ ಒಡೆಯರ್‌ರವರು ಜನತೆಯ ಉಪಯೋಗಕ್ಕಾಗಿ ಕನ್ನಂಬಾಡಿ ಎಂಬ ಗ್ರಾಮದ ಬಳಿ ವಿಶ್ವವೇ ಬೆರಗುಪಡುವಂತಹ ಅಣೆಕಟ್ಟನ್ನು ನಿರ್ಮಿಸಿದರು. ಇದರ ಪರಿಣಾಮವಾಗಿ ಅಡೆತಡೆ ಇಲ್ಲದೆ ಹರಿಯುತ್ತಿದ್ದ ಕಾವೇರಿ ಅಣೆಕಟ್ಟೆಯ ಎಡ ಬದಿಗೆ ಶರಧಿಯಂತೆ ಮೈ ಹರವಿ ಕೃಷ್ಣರಾಜಸಾಗರದ ಹೆಸರಲ್ಲಿ ನೆಲೆ ನಿಂತು ಮಂಡ್ಯ ಮತ್ತು ಮೈಸೂರು ಜನತೆಯ ಜೀವಸೆಲೆಯಾದಳು.

ಅಣೆಕಟ್ಟೆಯ ಮತ್ತೊಂದೆಡೆ ನಂದನವನಕ್ಕೆ ಕಿಚ್ಚುಹಚ್ಚುವಂತಹ ಬೃಂದಾನ ಉದ್ಯಾನ ಮೈದಳೆದು ವಿಶ್ವದಾದ್ಯಂತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಯಿತು. ಅಣೆಕಟ್ಟೆಯಿಂದ ಸಹಸ್ರಾರು ಜನರ ಬದುಕೇನೋ ಹಸನಾಯಿತು. ಆದರೆ, ತನ್ನ ನಾಗಾಲೋಟಕ್ಕೆ ತಡೆಯೊಡ್ಡಿದ 125 ಅಡಿ ಎತ್ತರದ ಹಾಗೂ ಸುಮಾರು 3.5 ಕಿ.ಮೀ. ಉದ್ದದ ಕಟ್ಟೆಯ ಪ್ರಭಾವದಿಂದ ಹಿಮ್ಮೆಟ್ಟಬೇಕಾದ ಕಾವೇರಿ ಆಸುಪಾಸಿನ ಮೂವತ್ತೈದಕ್ಕೂ ಹೆಚ್ಚಿನ ಹಳ್ಳಿಗಳನ್ನು ಆಪೋಶನ ತೆಗೆದುಕೊಳ್ಳುವುದನ್ನು ತಪ್ಪಿಸಲು ಮಾತ್ರ ಸಾಧ್ಯವಾಗಲಿಲ್ಲ.

ಅದರ ಪರಿಣಾಮವಾಗಿ ಅಲ್ಲಿ ನೆಲೆಸಿದ್ದ ಜನ ತಮ್ಮ ಮನೆಮಠಗಳನ್ನು ತೊರೆದು ಜಾನುವಾರುಗಳೊಡನೆ ಹಿನ್ನೀರಿನಿಂದ ಹಾನಿಗೊಳಪಡದ ನಾರ್ಥ್‌ ಬ್ಯಾಂಕ್‌ ಎಂಬ ಸುರಕ್ಷಿತ ಸ್ಥಳಕ್ಕೆ ವಲಸೆ ಹೋದರು.

ದೇಗುಲದ ಹಿನ್ನೆಲೆ

ಅಣೆಕಟ್ಟು ತಲೆಯೆತ್ತಿರುವ ಅತ್ಯಂತ ಸನಿಹದ ತೀರ ಪ್ರದೇಶದಲ್ಲಿರುವ ಹಳ್ಳಿಯೇ ಕನ್ನಂಬಾಡಿ. ಈ ಹಿನ್ನೆಲೆಯಲ್ಲಿ ಅದನ್ನು ಕನ್ನಂಬಾಡಿ ಕಟ್ಟೆಯೆಂದೇ ಸ್ಥಳೀಯರು ಈಗಲೂ ಕರೆಯುತ್ತಾರೆ. ಪುರಾತತ್ವ ಇಲಾಖೆಯ ವರದಿ ಪ್ರಕಾರ 1912ರಲ್ಲಿ ಈ ಹಳ್ಳಿಯಲ್ಲಿದ್ದ ಮಹಾಲಕ್ಷ್ಮಿ, ಕಣೇಶ್ವರ, ಹರಿದೇವಿ ಮತ್ತು ವೇಣುಗೋಪಾಲ ಸ್ವಾಮಿ ದೇಗುಲಗಳು ಮುಳುಗಡೆಯಾದವೆಂದು ತಿಳಿದುಬರುತ್ತದೆ.

1bb

ಹಿಂದೊಮ್ಮೆ ಅಂದರೆ 1953ರಲ್ಲಿ ಕಾವೇರಿ ಸೊರಗಿದಾಗ ಈ ಗುಡಿ ಗೋಚರಿಸಿತಂತೆ. ಆ ವಿಷಯವನ್ನು 2000ದ ಇಸವಿಯಷ್ಟು ಹೊತ್ತಿಗೆ ಎಲ್ಲರೂ ಮರೆತೇಬಿಟ್ಟಿದ್ದರು. ಹೀಗಾಗಿ ಜಲರಾಶಿಯ ಒಡಲಿನಲ್ಲಿ ಈ ಗುಡಿ ಇರು ಕಲ್ಪನೆಯೇ ಸಾರ್ಜನಿಕರಿಗೆ ಇರಲಿಲ್ಲ. ಅಷ್ಟು ರ್ಷಗಳಾದ ಮೇಿ ಅದು ನಾಮಾಶೇಷ ಆಗಿರಬಹುದೆಂದು ಭಾವಿಸಿರಲಿಕ್ಕೂ ಸಾಕು. ಆದರೆ, 56 ವರ್ಷಗಳ ಹಿಂದೆ ವರುಣನ ಅವಕೃಪೆಯ ಫಲವಾಗಿ ಹಾಗೂ ನೀರಿಗಾಗಿ ತಮಿಳುನಾಡು ನಡೆಸಿದ ಇನ್ನಿಲ್ಲದ ಸಂಘರ್ಷದ ಪರಿಣಾಮವಾಗಿ ಕಾವೇರಿ ಸೊರಗಿ ಕೊಂಚ ಕೊಂಚವಾಗಿ ಧರೆಯನ್ನಪ್ಪುನ ಪರಿಸ್ಥಿತಿ ನಿರ್ಮಾಣವಾದಾಗ ಜಾದೂವಿನಂತೆ ಅದರ ಗರ್ಭದಲ್ಲಿದ್ದ ದೇಗುಲಗಳು ಗೋಚರಿಸಿ ಸಂದರ್ಶಕರನ್ನು ವಿಸ್ಮಯಗೊಳಿಸಿದವು. ಇದು ಮನೆ ಮನೆಯ ಸುದ್ದಿಯಾಗಲು, ಪ್ರತಿ ವರ್ಷ ಬೇಸಿಗೆ ಬಂತೆಂದರೆ ಭಗ್ನಗೊಂಡ ದೇಗುಲವನ್ನು ವೀಕ್ಷಿಸಲು ಜನ ಸಾಗರವೇ ಹರಿದುಬರತೊಡಗಿತು.

ಲಭ್ಯವಿರುವ ಶಾಸನಗಳ ಆಧಾರಗಳ ಅನುಸಾರ ಈ ದೇಗುಲ 12ನೇ ಶತಮಾನದ ಆದಿಭಾಗದಲ್ಲಿ ನಿರ್ಮಾಣವಾಗಿರಬಹುದೆಂದು ಅಭಿಪ್ರಾಯಪಡಲಾಗಿದೆ. ಆದರೆ, ವಿಜಯನಗರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದ ಹೊಯ್ಸಳ ವಾಸ್ತುಶಿಲ್ಪದ ಈ ದೇಗುಲ ಸೋಮನಾಥಪುರದ ಚೆನ್ನಕೇಶವ ದೇವಾಲಯ, ಮಂಡ್ಯ ಜಿಲ್ಲೆಯ ಬೂದನೂರಿನ ಅನಂತ ಪದ್ಮನಾಭ, ಈಶ್ವರ ದೇವಾಲಯ ಹಾಗೂ ತುಮಕೂರು ಜಿಲ್ಲೆಯ ತುರುವೇಕೆರೆಯ ಹೊಯ್ಸಳ ದೇವಾಲಯಗಳು, ತಲಕಾಡಿನ ಕೀರ್ತಿನಾರಾಯಣ ಮತ್ತು ದೊಡ್ಡ ಗದ್ದಳ್ಳಿಯ ಲಕ್ಷ್ಮಿ ನರಸಿಂಹ ದೇವಾಲಯಗಳ ಪ್ರತಿ ರೂಪವೆಂದೂ ಹೇಳಲಾಗುತ್ತದೆ.

ಈ ದೇಗುಲ ಸತತವಾಗಿ 80 ವರ್ಷಗಳಿಗೂ ಹೆಚ್ಚು ಕಾಲ ನೀರೊಳಗೇ ಇದ್ದರೂ ಇದರ ನಿರ್ಮಾಣಕ್ಕೆ ಬಳಸಲಾಗಿದ್ದ ಇಟ್ಟಿಗೆ ಮತ್ತು ಗಾರೆ ಕರಗದೆ ಗಟ್ಟಿಯಾಗೇ ಇದ್ದುದು ಆಶ್ಚರ್ಯದ ಸಂಗತಿಯಷ್ಟೇ ಆಗಿರದೆ, ಆಗಿನ ಕಾಲದ ಇಟ್ಟಿಗೆ ಮತ್ತು ಗಾರೆಯ ಸಾಮರ್ಥ್ಯಕ್ಕೆ ದ್ಯೋತಕವಾಗಿತ್ತು.

ಅಣೆಕಟ್ಟೆಯ ಏರಿಯ ಮೇಲೆ ಸಾಗಿ, ಉತ್ತರ ತುದಿಯನ್ನು ತಲುಪಿ, ಕೆಳಗಿಳಿದು ಬರಿದಾಗುತ್ತಿರುವ ಜಲಾಶಯದ ಅಂಚಿನಲ್ಲಿ ಸುತ್ತಿ ಬಳಸಿ ಸುಮಾರು 2 ಕಿ.ಮೀ. ಕ್ರಮಿಸಿದರೆ ಅಥವಾ ಬಾಡಿಗೆ ವಾಹನಗಳಲ್ಲಿ ಬಳಸಿ ಹಾದಿಯಲ್ಲಿ ನೇರವಾಗಿ ಹೋದರೆ ಮೊದಲಿಗೆ 40 ಅಡಿ ಅಗಲದ ಚಚ್ಚೌಕಾಕಾರದ ಎರಡು ಕಲ್ಯಾಣಿಗಳು ಹಾಗೂ ಮುಳುಗಡೆಯಾದ ಕನ್ನಂಬಾಡಿಯ ಅವಶೇಷಗಳು ಗೋಚರವಾಗುತ್ತಿದ್ದವು. ಅಲ್ಲಿಂದ ಮುಂದುವರಿದರೆ ಸ್ವಲ್ಪ ತಗ್ಗು ಪ್ರದೇಶದಲ್ಲಿರುವ ದೇಗುಲ ಮತ್ತು ಅದರ ಮುಂದಿರುವ ಮಂಟಪವನ್ನು ಉಳಿದ ಹಿನ್ನೀರಿನ ಬದಿಯಲ್ಲಿ ಕಾಣಬಹುದಾಗಿತ್ತು.

ಅವಶೇಷಕಗಳ ಸ್ಥಳಾಂತರ

ಈ ಗುಡಿಯ ಆಕರ್ಷಣೆಯೋ, ಯೋಗವೋ ಅಥವಾ ವೇಣುಗೋಪಾಲ ಸ್ವಾಮಿಯ ಪ್ರಭಾವವೋ ಏನೋ ಪ್ರಖ್ಯಾತ ಉದ್ಯಮಿ ಹರಿಖೋಡೇಸ್‌ ಮಾಲೀಕರು ತಮ್ಮ ಹರಿಖೋಡೆ ಫೌಂಡೇಶನ್‌ ಮೂಲಕ ಅವಶೇಷಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪುನಃಶ್ಚೇತನ ನೀಡುವ ಕೋಟ್ಯಂತರ ರೂಪಾಯಿಗಳ ವೆಚ್ಚದ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಿದರು. ಮೊದಲಿಗೆ ಪ್ರತಿಯೊಂದು ಅವಶೇಷಗಳನ್ನು ಒಂದು ಕಿ.ಮೀ. ದೂರದ ತುಸು ಎತ್ತರದ ತೀರ ಪ್ರದೇಶಕ್ಕೆ ಸ್ಥಳಾಂತರಿಸಿ ಹಂತಹಂತವಾಗಿ ಪುನರ್‌ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲಾಯಿತು. ಮುರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮಕ್ಕಳ ಆಟಿಕೆ ವಸ್ತುಗಳಂತೆ ಕೆಸರು, ಕರೆಗಳನ್ನು ಮೆತ್ತಿಕೊಂಡು ಚೆಲ್ಲಾಪಿಲ್ಲಿಯಾಗಿ ಹರವಿಕೊಂಡಿದ್ದ ಅವಶೇಷಗಳಿಗೆ ಕ್ರಮ ಸಂಖ್ಯೆಗಳನ್ನು ನೀಡಿ ಅವುಗಳನ್ನು ಮತ್ತೊಂದೆಡೆಗೆ ಸಾಗಿಸಿ ಕ್ರಮಬದ್ಧವಾಗಿ ಜೋಡಿಸುವ ಕೆಲಸ ಹೊಸದಾಗಿ ದೇಗುಲವನ್ನು ನಿರ್ಮಿಸುವುದಕ್ಕಿಂತ ಕಠಿಣಾತಿ ಕಠಿಣವಾದ ಸವಾಲಿನ ಕೆಲಸವಾಗಿತ್ತು.

ಈ ಕೆಲಸಕ್ಕಾಗಿ ಪರಿಣಿತರಾದ ತಮಿಳುನಾಡಿನ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಕುಶಲಕರ್ಮಿಗಳನ್ನು ನಿಯೋಜಿಸಲಾಗಿತ್ತು. ಅವರ ನೈಪುಣ್ಯತೆ ಹಾಗೂ ಅಪಾರ ಪರಿಶ್ರಮದ ಫಲವಾಗಿ, ನೂತನವಾಗಿ ನಿರ್ಮಾಣಗೊಂಡ ಗುಡಿಗೂ ಸಾಟಿ ಇಲ್ಲವೆಂಬಂತೆ ತನ್ನ ಮೂಲ ಸ್ವರೂಪದಲ್ಲಿ ಎದೆಯುಬ್ಬಿಸಿ ನಿಂತಿದೆ. ಅವಶೇಷದ ರೂಪದಲ್ಲಿದ್ದ ದೇಗುಲವನ್ನು ನೋಡಿದ್ದರು ಈಗೇನಾದರೂ ಈ ದೇಗುಲವನ್ನು ಸಂದರ್ಶಿಸಿದರೆ ಇದು ಅದೇ ದೇಗುಲವೆಂದು ನಂಬಲು ಆಗುವುದೇ ಇಲ್ಲ. ಏಕೆಂದರೆ, ಇದೀಗ ಶಿಲ್ಪಕಲಾ ಶ್ರೀಮಂತಿಕೆಯಿಂದ ಭವ್ಯವಾಗಿ ಕಂಗೊಳಿಸುತ್ತಾ ಕುತೂಹಲಿ ಸಂದರ್ಶಕರನ್ನು ತನ್ನತ್ತ ಸೆಳೆಯುತ್ತಿದೆ.

ವಿಸ್ಮಯಗಳ ಆಗರ

ಹಲವು ವಿಸ್ಮಯಗಳಿಗೆ ಕಾರಣವಾಗಿರುವ ಈ ದೇಗುಲ, ದೇಗುಲ ಸಂಸ್ಕೃತಿಯ ಇತಿಹಾಸದಲ್ಲಿಯೇ ವಿನೂತನ ಯಶಸ್ವಿ ಪ್ರಯತ್ನದ ಅತ್ಯದ್ಭುತ ಸ್ಮಾರಕವಾಗಿದೆ.

ನಯನ ಮನೋಹರ ಹಾಗೂ ಸದಾ ತಂಗಾಳಿ ಸೂಸುವ ಸುಂದರ ಪರಿಸರದ ಪ್ರಶಾಂತ ಸ್ಥಳದಲ್ಲಿ ನೆಲೆ ಕಂಡುಕೊಂಡಿರುವ ವೇಣುಗೋಪಾಲ ಸ್ವಾಮಿ ಗುಡಿಯ ಮುಂಭಾಗದ ಮುಖಮಂಟಪದಿಂದ ಸುಮಾರು 50 ಅಡಿ ದೂರದಲ್ಲಿ ಮತ್ತೊಂದು ಮಂಪಟಪವಿರುವುದು ಗುಡಿಯ ವಿಶೇಷತೆಗಳಲ್ಲೊಂದು. 3 ಅಡಿ ಎತ್ತರದ ಮುಖಮಂಟಪವಾದರೂ ಕೌಶಲ್ಯಪೂರ್ಣ ಕೆತ್ತನೆಗಳಿಂದ ಇದು ಅತಿ ಆಕರ್ಷಣೀಯವಾಗಿದೆ. ಇದರ ಮೇಲೆ ಸುಂದರ ಕೆತ್ತನೆಯ ವೇದಿಕೆಯೊಂದಿದ್ದು, ಅದರ ಮೇಲೆ ಪುಟ್ಟ ಪಿರಮಿಡ್‌ ನಂತಹ ಶಿಲಾಗೋಪುರವಿದೆ. ಮುಖಮಂಟಪಕ್ಕೆ ಹೊಂದಿಕೊಂಡಂತೆ ಮೊದಲನೇ ಸುತ್ತಿನ ಪ್ರಾಕಾರದ ಗೋಡೆಗಳು ಹಾದುಹೋಗಿವೆ. ಮುಖಮಂಟಪ ದ್ವಾರದ ಮೂಲಕ ಪ್ರವೇಶ ಮಾಡಿದರೆ ಸುತ್ತಲೂ ಇರುವ ತೆರೆದ ಪ್ರಾಕಾರದ ಮಧ್ಯಭಾಗದಲ್ಲಿ ಸುಂದರವಾಗಿ ತಲೆ ಎತ್ತಿ ನಿಂತಿರುವ 30 ಅಡಿ ಎತ್ತರದ ಗರುಡಗಂಬ ಸ್ವಾಗತಿಸುತ್ತದೆ.

ದೇಗುಲದ ಭವ್ಯತೆ

ದೇಗುಲ ಮೂಲ ಸ್ಥಾನದಲ್ಲಿದ್ದಾಗ ಮೂಲ ಗರುಡಗಂಬ ಭಗ್ನಗೊಂಡಿದ್ದರಿಂದ ಇದನ್ನು ಹೊಸದಾಗಿ ಕಡೆದು ನಿಲ್ಲಿಸಲಾಗಿದೆ. ಇದರ ಶಿರಭಾಗ ಮುಕುಟದಂತೆ ಕಂಗೊಳಿಸುತ್ತದೆ. ಇದರ ಮುಂಭಾಗದಲ್ಲಿರುವ ಮತ್ತೊಂದು ಸುಂದರವಾದ ದ್ವಾರ ಮಂಟಪವನ್ನು ಪ್ರವೇಶಿಸಿದರೆ ಶಿಲಾ ಕಂಬಗಳನ್ನಾಧರಿಸಿದ ವಿಸ್ತಾರವಾದ ಎರಡನೇ ಸುತ್ತಿನ ಪ್ರಾಂಗಣ ತೆರೆದುಕೊಳ್ಳುತ್ತದೆ. ಇದರ ಕೇಂದ್ರ ಭಾಗದಲ್ಲಿರುವುದೇ ಸುಂದರ ಕೆತ್ತನೆಗಳಿಂದ ಕೂಡಿರುವ ವೇಣುಗೋಪಾಲ ಸ್ವಾಮಿ ದೇಗುಲ. ಇವೆರಡರ ನಡುವಿರುವ ತೆರೆದ ಪ್ರಾಕಾರದ ನೆಲಕ್ಕೆ ಸಿಮೆಂಟ್‌ ಹೆಂಚುಗಳನ್ನು ಅಳವಡಿಸಲಾಗಿದೆ. ಸುಮಾರು 100 ಅಡಿಗಳಷ್ಟು ಉದ್ದವಿರುವ ಎರಡೂ ಬದಿಯ ಸಾಲು ಕಂಬಗಳ ಪ್ರಾಂಗಣವನ್ನು ನೋಡುವುದೇ ಚೆನ್ನ!

ಪ್ರಾಕಾರದ ಮಧ್ಯ ಭಾಗದಲ್ಲಿರುವ ಗುಡಿಯ ಪ್ರಧಾನ ಭಾಗದ ವಿನ್ಯಾಸ ಅತ್ಯಂತ ಆಕರ್ಷಣೀಯವಾಗಿದೆ. ಹೊರಮೈನಷ್ಟೇ ಒಳಮೈ ಕೂಡ ಅತ್ಯಂತ ಕಲಾತ್ಮಕವಾಗಿದೆ. ಇಲ್ಲಿಯೂ ಸಹ ಮೊದಲಿಗೆ ಸುಂದರ ಕೆತ್ತನೆಯ ಮಂಟಪಗಳನ್ನಾಧರಿಸಿದ ತೆರೆದ ಮಂಟಪವಿದೆ. ದೇಗುಲವನ್ನು ಎದುರು ನಿಂತು ನೋಡುವುದಕ್ಕಿಂತ ಪ್ರಾಂಗಣದ ನಾಲ್ಕು ಮೂಲೆಗಳಲ್ಲಿ ಅದರಲ್ಲೂ ಹಿಂಬದಿಯ ಮೂಲೆಗಳಲ್ಲಿ ನಿಂತು ವೀಕ್ಷಿಸುವುದರಿಂದ ಶಿಲ್ಪಕಲಾ ಪ್ರೌಢಿಮೆಯ ಸುಂದರ ಕೆತ್ತನೆಯಿಂದ ಕೂಡಿರುವ ವಿಹಂಗಮ ದೃಶ್ಯ ಅನಾವರಣಗೊಂಡು ಕಣ್ತುಂಬಿ ಸಂದರ್ಶಕರ ಹೃನ್ಮನಗಳು ಪುಳಕಗೊಳ್ಳುತ್ತವೆ. ನವರಂಗ, ಸುಕಾನಾಸಿ ಆಧರಿಸಿದ ಶಿಲಾ ಕಂಬಗಳ ಮೇಲೆ ಹಾಗೂ ಛಾವಣಿಯ ಒಳಭಾಗದಲ್ಲಿ ಒಡಮೂಡಿರುವ ನಾನಾ ವಿನ್ಯಾಸದ ಕೆತ್ತನೆಗಳು ಕಲಾತ್ಮಕ, ಮನಮೋಹಕವಾಗಿ ಸಂದರ್ಶಕರ ಗಮನವನ್ನು ಸೆಳೆಯುತ್ತವೆ. ಸುಕನಾಸಿಯ ಎರಡೂ ಪಾರ್ಶ್ವಗಳಲ್ಲಿ ಮಹಿಷಮರ್ದಿನಿ ಮತ್ತು ಗಣೇಶ ವಿಗ್ರಹಗಳಿರುವ ಕೋಷ್ಠಗಳಿವೆ. ಪುಟ್ಟದಾದ ಗರ್ಭಗುಡಿಯೊಳಗೆ ವಿಗ್ರಹವನ್ನು ಪ್ರತಿಷ್ಠಾಪಿಸಬೇಕಾಗಿದೆ. ತನ್ನ ಅಂಗಾಂಗಗಳಿಗೆಲ್ಲಾ ಗಾಢವಾಗಿ ಅಡರಿಕೊಂಡಿದ್ದ ಮಣ್ಣು ಮತ್ತು ಪಾಚಿ ಕಲೆಗಳನ್ನು ಕಳೆದುಕೊಂಡು ಆಧುನಿಕ ತಾಂತ್ರಿಕತೆಯ ಪಾಲಿಶ್‌ ಮೂಲಕ ಪುನರ್ಜನ್ಮ ಪಡೆದಿರುವ ಶಿಲಾ ದೇಗುಲವೀಗ ಸ್ನಿಗ್ಧ ಸೌಂದರ್ಯದ ಶ್ವೇತ ಸುಂದರಿಯಂತೆ ಮೋಹಕ ಚೆಲುವಿನೊಂದಿಗೆ ಕಂಗೊಳಿಸುತ್ತಾ ಮತ್ತೊಮ್ಮೆ ಲೋಕಾರ್ಪಣೆಗೊಳ್ಳುವ ದಿನದ ನಿರೀಕ್ಷೆಯಲ್ಲಿದೆ. ಆದರೆ ಅದಕ್ಕೂ ಮುನ್ನವೇ ಸಾಕಷ್ಟು ಜನ ವಿಶೇಷವಾಗಿ ರಜಾ ದಿನಗಳಂದು ಈ ಸ್ಥಳವನ್ನು ಸಂದರ್ಶಿಸಿ ದೇಗುಲ ಪುನರ್‌ ನಿರ್ಮಾಣದ ವಿಸ್ಮಯಕಾರಿ ಪರಿಶ್ರಮ ಹಾಗೂ ಮೂಲ ಸ್ವರೂಪದ ಸೊಬಗನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ.

ಪ್ರಯಾಸದ ಪ್ರಯಾಣ

ಹೆಚ್ಚಿನ ಮಳೆಯಾಗಿ ಅಣೆಕಟ್ಟೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾದಾಗಲಂತೂ ದೇಗುಲವಿರುವ ಸ್ಥಳ ಎತ್ತರದಲ್ಲಿರುವುದರಿಂದ ಇಡೀ ಪ್ರದೇಶ ಒಂದು ಪರ್ಯಾಯ ದ್ವೀಪದಂತೆ ಗೋಚರಿಸುತ್ತದೆ. ಭಾನುವಾರದಂದು ಪ್ರವಾಸಿಗರ ಸಂಖ್ಯೆ ಹೆಚ್ಚು. ದೇಗುಲವಿರುವ ತೀರ ಪ್ರದೇಶ ಮೃದು ಮರಳಿನ ಹರವಿನಿಂದ ಆವೃತ್ತವಾಗಿದೆ. ದೋಣಿ ವಿಹಾರ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆ. ಹೀಗಾಗಿ ವಿಹಾರಾರ್ಥವಾಗಿ ಬರುವವರಿಗೆ ಇದೊಂದು ಮುದ ನೀಡುವ ಪ್ರಮುಖ ಪ್ರವಾಸಿ ತಾಣವಾಗುವ ಎಲ್ಲಾ ಲಕ್ಷಣಗಳನ್ನೂ ಕಾಣಬಹುದಾಗಿದೆ. ಆದರೆ, ಈಗ ಇದನ್ನು ಸಂದರ್ಶಿಸಲು ಬಸ್ತಿಹಳ್ಳಿ ಕನ್ನಂಬಾಡಿ ಹೊಸ ಕನ್ನಂಬಾಡಿ ಮಾರ್ಗವಾಗಿ ಸುಮಾರು 10  ಕಿ.ಮೀಗಳನ್ನು ಕ್ರಮಿಸಬೇಕು. ಈ ಮಾರ್ಗ ಬಹಳಷ್ಟು ರಸ್ತೆಗುಂಡಿಗಳಿಂದ ಹಾಗೂ ಕಡಿದಾದ ಸುತ್ತು ಬಳಸಿನ ಹಾದಿಯಿಂದ ಕೂಡಿರುವುದರಿಂದ, ತುಸು ಪ್ರಯಾಸಕರ ಹಾಗೂ ಬೇಸರದ ಪ್ರಯಾಣವೆಂದರೆ ತಪ್ಪಾಗಲಾರದು. ಕೆ.ಆರ್‌.ಎಸ್‌. ಅಣೆಕಟ್ಟೆಯ ಬಲತುದಿಯಿಂದ ನೇರವಾಗಿ ದೇವಾಲಯಕ್ಕೆ ಸೇತುವೆ ಮಾರ್ಗವನ್ನು ನಿರ್ಮಿಸಿದಲ್ಲಿ ಅಥವಾ ಕನ್ಯಾಕುಮಾರಿಯಲ್ಲಿರುವಂತೆ ದೋಣಿಗಳ ವ್ಯವಸ್ಥೆ ಮಾಡಿದರೆ ಪ್ರಯಾಣದ ಕಾಲ ಮತ್ತು ಶ್ರಮವೆಲ್ಲಾ ಕಡಿಮೆಯಾಗುತ್ತದೆ. ಇದರ ಜೊತೆಗೆ ಸಾಹಸ ಜಲಕ್ರೀಡೆಗಳೂ ಸೇರ್ಪಡೆಯಾದರೆ ವಿಶೇಷ ಆಕರ್ಷಣೆಗಳ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹರಿಖೋಡೇಸ್‌ಮಾಲೀಕರು ವೇಣುಗೋಪಾಲ ಸ್ವಾಮಿ ದೇಗುಲವನ್ನು ಪುನರ್‌ ನಿರ್ಮಿಸಿರುವುದರ ಜೊತೆಗೆ ಕಾವೇರಿ ಜಲಾಶಯದ ತೀರದಲ್ಲಿರುವ ಪ್ರಶಾಂತ ಪರಿಸರದ ಸುಂದರ ತೀರ ಪ್ರದೇಶವನ್ನು ಒಂದು ಪ್ರವಾಸಿ ಆಕರ್ಷಣೆಯ ಕೇಂದ್ರವನ್ನಾಗಿಸುವ ಉದ್ದೇಶವನ್ನೂ ಹೊಂದಿದ್ದಾರಂತೆ. ಅದಕ್ಕಾಗಿ 5 ಎಕರೆಯಷ್ಟು ಭೂ ಪ್ರದೇಶವನ್ನು ಖರೀದಿಸಿ ಹೊರಗಿನಿಂದ ಬರುವ ಪ್ರವಾಸಿಗರಿಗೆ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಸುಂದರ ಉದ್ಯಾನವನ್ನು ನಿರ್ಮಿಸುವ ಮಹತ್ವದ ಯೋಜನೆಯನ್ನೂ ಹಾಕಿಕೊಂಡಿರುವರಂತೆ.

ರಾಮಕೃಷ್ಣಾರ್ಪಣಾನಂದ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ