ಗೌಹರ್ ತನ್ನ ಕೆರಿಯರ್‌ನ್ನು ಮಾಡೆಲಿಂಗ್‌ನಿಂದ ಶುರು ಮಾಡಿದರು. ಆಕೆ ಮಾನೀಷ್ ಮಲ್ಹೋತ್ರಾ, ರಿತು ಕುಮಾರ್, ಪಾಯಲ್ ಜೈನ್, ನೀತಾ ಲುಲ್ಲಾರಂತಹ ಘಟಾನುಘಟಿ ಫ್ಯಾಷನ್ ಡಿಸೈನರುಗಳ ಜೊತೆ ಕೆಲಸ ಮಾಡಿದ್ದಾರೆ. ನಂತರ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಆಮೇಲೆ ಆಕೆ ಮ್ಯೂಸಿಕ್ ವೀಡಿಯೋ, ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲೂ ಕೆಲಸ ಮಾಡಿದರು.
ಬೋಲ್ಡ್ ಹಾಗೂ ಹಸನ್ಮುಖಿ ಸ್ವಭವಾದ ಗೌಹರ್‌ಗೆ ಬಿಗ್ ಬಾಸ್ (ಸೀಸನ್)ನ ಗೆಲುವು ದೊಡ್ಡ ಪರಿವರ್ತನೆ ತಂದುಕೊಟ್ಟಿತು. ಅದಾದ ನಂತರ ಹಲವಾರು ಸಿನಿಮಾಗಳಲ್ಲಿ ಆಫರ್ಸ್ ಬರತೊಡಗಿತು. ಪ್ರಸ್ತುತ ಈಕೆ `ಖತರೋಂಕಿ ಖಿಲಾಡಿ’ (ಸೀಸನ್) ರಿಯಾಲಿಟಿ ಶೋನಲ್ಲಿ ಪ್ರಮುಖ ಸ್ಪರ್ಧಿ. ಇಲ್ಲಿ ಭಯಪಡುವಂತೆಯೇ ಇಲ್ಲ. ಯಾರು ಭಯವನ್ನು ಗೆಲ್ಲುತ್ತಾರೋ ಅವರೇ ವಿಜೇತರು.
ಗೌಹರ್ ಹೇಳುತ್ತಾರೆ, “ಇಂಥ ಶೋ ನನ್ನ ಪಾಲಿಗೆ ಸಿಕ್ಕಿದ್ದು ನಿಜಕ್ಕೂ ಸಂತೋಷದ ವಿಷಯ. ನಾನಂತೂ ಮೊದಲ ಬಾರಿಗೆ ಅತಿ ಎತ್ತರದಿಂದ ಜಿಗಿದೆ. ಕೆಲವೊಂದು ಡಿಫರೆಂಟ್ ಸ್ಟಂಟ್ಸ್ ನಿಭಾಯಿಸುವುದು, ನಂತರ ದ. ಅಫ್ರಿಕಾಗೆ ಹೋಗುವುದು ಎಲ್ಲ ಬಹಳ ರೋಮಾಂಚಕವೆನಿಸಿತು. ನಾನಂತೂ ಬಲು ಪುಕ್ಕಲು ಸ್ವಭಾವದವಳು. ಆದರೆ ಈ ಶೋಗಾಗಿ ನಾನು ನನ್ನ ಮೈಂಡ್ ಸೆಟ್ ಬದಲಾಯಿಸಿಕೊಂಡೆ, ಆತ್ಮವಿಶ್ವಾಸ ಬೆಳೆಸಿಕೊಂಡೆ.”
ಗೌಹರ್‌ಗೆ ಮೊದಲಿನಿಂದಲೂ ಅಭಿನಯದ ವ್ಯಾಮೋಹ ಜಾಸ್ತಿ. ಆದರೆ ಸಿಕ್ಕಿದ್ದು ಮಾತ್ರ ಮಾಡೆಲಿಂಗ್‌ನ ಆಫರ್. ಆಕೆ 8-10 ವರ್ಷ ಮಾಡೆಲಿಂಗ್ ಮಾಡಿದರು. ನೀವು ಮಾಡೆಲಿಂಗ್ ಮಿಸ್ ಮಾಡಿಕೊಳ್ತೀರಾ? ಎಂದಿದ್ದಕ್ಕೆ, “ನಾನು ಮಾಡೆಲಿಂಗ್‌ನ್ನು ಏಕ್‌ದಂ ಮಿಸ್ ಮಾಡಲ್ಲ. ಅದರಲ್ಲಿ ನಾವು ಪಡುವ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದಿಲ್ಲ. ಆರ್ಗನೈಸರ್ಸ್ ಮಾಡೆಲ್ಸ್ ಬಗ್ಗೆ ಗಮನ ಹರಿಸುವುದಿಲ್ಲ. ಹೆಸರಿಗೆ ದೊಡ್ಡ ಮಾಡೆಲ್ಸ್ ಆದರೂ ಇಂದಿಗೂ ಎಷ್ಟೋ ಜನರನ್ನು ಸರಿಯಾಗಿ ಟ್ರೀಟ್ ಮಾಡುವುದಿಲ್ಲ. ಅವರಿಗೆ ಬಂದುಹೋಗಲು, ಉಳಿದುಕೊಳ್ಳಲು ಉತ್ತಮ ವ್ಯವಸ್ಥೆ ಇರುವುದಿಲ್ಲ.
“ಮತ್ತೆ ಮತ್ತೆ ಮೇಕಪ್ ಮಾಡಿ ತೆಗೆಸುವುದು, ಕೂದಲನ್ನು ಚಿತ್ರವಿಚಿತ್ರವಾಗಿ ಸೆಟ್ ಮಾಡಿಸುವುದು ಇತ್ಯಾದಿ ಬಹಳ ಸುಸ್ತು ಮಾಡಿಸುತ್ತದೆ. ಆದರೆ ಯಾರೂ ನಮ್ಮ ಈ ತೊಂದರೆಗಳನ್ನು ಗುರುತಿಸುವುದಿಲ್ಲ. ಇಲ್ಲಿ ಬಹಳಷ್ಟು ಶೋಷಣೆ ಇದೆ, ಅವು ಕೊನೆಗೊಳ್ಳಲೇಬೇಕು. ಹೊಸದಾಗಿ ಬಂದ ಮಾಡೆಲ್ಸ್ ಗತಿ ಅಂತೂ ಇನ್ನೂ ವರ್ಸ್ಟ್! ಆದರೆ ನಾನು ಇದೇ ಕೆಲಸದಿಂದ ಖುಷಿ ಕಂಡಳು,” ಎನ್ನುತ್ತಾರೆ ಗೌಹರ್.
ಬಿಗ್ ಬಾಸ್‌ನ ಸ್ಪರ್ಧಿಗಳಾದ ಗೌಹರ್ ಖಾನ್ ಹಾಗೂ ಕುಶಾಲ್ ಟಂಡನ್‌ರ ನಡುವಿನ ಕೆಮಿಸ್ಟ್ರಿ ಈಗ ಮೀಡಿಯಾದ ಮುಖ್ಯ ಮಾತು.
“ಇದು ಕೇವಲ ಫ್ರೆಂಡ್ ಶಿಪ್ ಅಷ್ಟೆ. ನಾನು ಇದುವರೆಗೂ ಮೀಡಿಯಾದಲ್ಲಿ ಮೀಟ್ ಆದವರಲ್ಲಿ ಕುಶಾಲ್ ಎಲ್ಲರಿಗಿಂತ ಒಳ್ಳೆಯವರು. ನನಗೆ ಬೇಕಾದಾಗೆಲ್ಲ ಆತ ನನ್ನ ಪರ ನಿಲ್ಲುತ್ತಾರೆ. ನಾನು ಯಾವುದೇ ಕಷ್ಟದಲ್ಲಿದ್ದರೂ ಅದರಿಂದ ಹೊರಬರುವವರೆಗೂ ಸಹಾಯ ಮಾಡುತ್ತಾರೆ.”
ಗೌಹರ್‌ಗೆ ಶಾಪಿಂಗ್ ಬಹಳ ಇಷ್ಟವಂತೆ. ಆಕೆ ಎಲ್ಲೇ ಹೋದರೂ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುತ್ತಾರೆ. ಆಕೆಗೆ ವೈವಿಧ್ಯಮಯ ಡಿಸೈನ್‌ಗಳ ಪರ್ಸುಗಳನ್ನು ಸಂಗ್ರಹಿಸುವುದೆಂದರೆ ಅಚ್ಚುಮೆಚ್ಚು.
ಐಟಂ ಸಾಂಗ್ ಅಥವಾ ಡ್ಯಾನ್ಸ್ ಬಗ್ಗೆ, “ಗ್ಲಾಮರಸ್ ಡ್ಯಾನ್ಸ್ ಎಂದ ಮೇಲೆ ಅದು ಕಾಲಕ್ಕೆ ತಕ್ಕಂತೆ ಚೆನ್ನಾಗಿಯೇ ಇರುತ್ತದೆ. ಯಾವುದೇ ವಿಧದ ಡ್ಯಾನ್ಸ್ ನಲ್ಲಿ ಸೈ ಎನಿಸಿಕೊಳ್ಳುವುದು ಸುಲಭವಲ್ಲ ಬಿಡಿ. ಪ್ರತಿಯೊಬ್ಬರೂ ಎಲ್ಲಾ ತರಹದ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ. ನನಗೆ ಡ್ಯಾನ್ಸ್ ಅಂದ್ರೆ ಇಷ್ಟ, ಅದು ರೊಮ್ಯಾಂಟಿಕ್ ಅಥವಾ ಐಟಂ ಯಾವುದೇ ಆಗಿರಲಿ, ಡೋಂಟ್ ಕೇರ್!” ಎನ್ನುತ್ತಾರೆ ಗೌಹರ್.
ಈಕೆ ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಪ್ರತಿದಿನ ಬೆಳಗ್ಗೆ 4-5 ಗ್ಲಾಸ್ ನೀರು ಕುಡಿದೇ ಕೆಲಸ ಆರಂಭಿಸುವುದು. ಸದಾ ಹೆಲ್ದಿ, ಪೌಷ್ಟಿಕ ಆಹಾರ ಸೇವಿಸುತ್ತಾರೆ. ಶೂಟಿಂಗ್‌ನಲ್ಲಿ ಹಸಿವು ಎನಿಸಿದರೆ ಜೂಸ್ ಕುಡಿಯುತ್ತಾರೆ. ವಾರದಲ್ಲಿ 3-4 ದಿನ 2 ಗಂಟೆಗಳ ವ್ಯಾಯಾಮ ಮಾಡುತ್ತಾರೆ. ಇದರಲ್ಲಿ ಸ್ವಿಮ್ಮಿಂಗ್, ಜಾಗಿಂಗ್, ಏರೋಬಿಕ್ಸ್ ಅಗತ್ಯ ಇರುತ್ತವೆ. ಆಕೆಗೆ ಅಡುಗೆ ಮಾಡುವುದೆಂದರೆ ಬಲು ಇಷ್ಟ, ಆಕೆಗೆ ತಾಯಿ ರಝಿಯಾ ಖಾನ್‌ರ ಕೈ ಅಡುಗೆ ಅಚ್ಚುಮೆಚ್ಚು.
ಗೌಹರ್‌ರ ಬರಲಿರುವ ಚಿತ್ರ `ಫಿರ್,’ ಇದೊಂದು ಥ್ರಿಲ್ಲರ್ ರೊಮ್ಯಾಂಟಿಕ್ ಚಿತ್ರ. ಆಕೆಗೆ ಸದಾ ಖುಷಿ ಖುಷಿಯಾಗಿರುವುದೆಂದರೆ ಇಷ್ಟ. ಹಳೆಯ ಯಾವುದೋ ದುಃಖದ, ಬೇಸರದ ಘಟನೆ ನೆನೆಸಿ ಕೊರಗುವುದು ಆಕೆಗೆ ಬೇಕಿಲ್ಲ. ಮದುವೆ ಬಗ್ಗೆ ಈಗಲೇ ಅವಸರವಿಲ್ಲ ಎನ್ನುವ ಗೌಹರ್, ಕೆರಿಯರ್ ನನ್ನ ಮೊದಲ ಆದ್ಯತೆ, ಎನ್ನುತ್ತಾರೆ.
– ಜಿ. ಸುಮಾ