“ನೀವು ಸ್ವಲ್ಪ ಸಮಾಧಾನದಿಂದ ಮಾತನಾಡುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಕೂಗಾಡುತ್ತಿದ್ದರೆ ಮಾತ್ರ ಕೆಲಸಗಳು ಆಗುತ್ತವೆ ಎಂದುಕೊಂಡಿರುವಿರಾ?” ಎಂದು ಮಹಾಲಕ್ಷ್ಮಿ ತಮ್ಮ ಪತಿ ಸೀತಾಪತಿಯವರಿಗೆ ಸಾವಿರ ಸಲ ಹೇಳಿದ್ದರೂ ಪ್ರಯೋಜನವಾಗಿರಲಿಲ್ಲ. ಅವರು ಮನೆಯವರೆಲ್ಲರ ಮೇಲೆ ಆರ್ಭಟಿಸುತ್ತಾ ಹರಿಹಾಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲರೂ ಅವರ ಇರಾದೆಯಂತೆಯೇ ನಡೆದುಕೊಳ್ಳ ಬೇಕಾದಂತಹ ಪರಿಸ್ಥಿತಿಯಿತ್ತು. ಕೆಲವೊಮ್ಮೆ ಅವರ ಮಾತುಗಳು ಈಟಿಯಿಂದ ಇರಿದಷ್ಟೇ ಮೊನಚಾಗಿರುತ್ತಿದ್ದವು. ಸೀತಾಪತಿಯವರಿಗೆ ಇಬ್ಬರು ಗಂಡು ಮಕ್ಕಳು. ಅಜಯ್ ಮತ್ತು ವಿಜಯ್. ಇಬ್ಬರದೂ ಮದುವೆಯಾಗಿತ್ತು. ವಧುವರರ ಜಾತಕ ಸಂಪೂರ್ಣ ಹೊಂದಾಣಿಕೆಯಾದ ನಂತರವೇ, ಸೀತಾಪತಿ ಅವರುಗಳ ವಿವಾಹ ನೆರವೇರಿಸಿದ್ದರು. ಹೆಸರಾಂತ ಜ್ಯೋತಿಷಿ ರಾಘವ ಶಾಸ್ತ್ರಿಗಳು ಇವರ ಸ್ನೇಹಿತರು. ಅವರನ್ನು ವಿಚಾರಿಸದೆ ಸೀತಾಪತಿ ಯಾವ ಕೆಲಸ ಕಾರ್ಯಗಳನ್ನೂ ಕೈಗೆತ್ತಿಕೊಳ್ಳುತ್ತಿರಲಿಲ್ಲ.
ಮನೆ ಕೆಲಸವಿರಲಿ, ಕಾರ್ಖಾನೆ ಕೆಲಸವಿರಲಿ, ಹೆಂಡತಿಗೇ ಒಂದು ಆಭರಣ ಕೊಳ್ಳಬೇಕೆಂದರೂ ಶಾಸ್ತ್ರಿಗಳಿಂದ ಮುಹೂರ್ತ ಕೇಳಿಯೇ ಖರೀದಿಸುತ್ತಿದ್ದರು. ಆ ರಾಘವ ಶಾಸ್ತ್ರಿಗಳು, ಸೀತಾಪತಿಯ ನಂಬಿಕೆಯನ್ನೇ ಬಳಸಿಕೊಂಡು ಬೇಕಾದಷ್ಟು ದುಡ್ಡು ಮಾಡಿಕೊಂಡಿದ್ದರು. ಸೀತಾಪತಿಯವರದು ಕಷ್ಟಪಟ್ಟು ಸಂಪಾದಿಸಿದ ಶ್ರೀಮಂತಿಕೆ. ಪಿತ್ರಾರ್ಜಿತವಾಗಿ ಬಂದ ಸಾಕಷ್ಟು ಜಮೀನು ಅವರ ಬಳಿಯಲ್ಲಿತ್ತು. ಆದರೆ ಸೀತಾಪತಿ ಮಾತ್ರ, ಇದೆಲ್ಲ ಚರಸ್ಥಿರಾಸ್ತಿ, ಸಿರಿವಂತಿಕೆಗಳೆಲ್ಲ ಶಾಸ್ತ್ರಿಗಳ ಕೃಪೆಯಿಂದಲೇ ಪಡೆದದ್ದು ಎಂದು ನಂಬಿ ಕುಳಿತಿದ್ದರು.
ಸೀತಾಪತಿಯವರ ಕೊನೆಯ ಮಗಳು ಆವಂತಿಕಾ ಸ್ವಲ್ಪ ವೈಚಾರಿಕ ಮನೋಭಾವದವಳು. ಅಜಯ್ ಮತ್ತು ಆವಂತಿಕಾಳ ಮಧ್ಯೆ ತುಂಬ ಸಲುಗೆಯಿತ್ತು. ಕೆಲವೊಮ್ಮೆ ಆವಂತಿಕಾ ತನ್ನ ತಂದೆಯ ವಿಚಾರಗಳನ್ನು ವಿರೋಧಿಸುತ್ತಿದ್ದಳು. ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾದ್ದರಿಂದ, ಎಲ್ಲರಿಗೂ ಆಕೆ ಅಚ್ಚುಮೆಚ್ಚಿನವಳಾಗಿದ್ದಳು. ಹೀಗಾಗಿ ಸೀತಾಪತಿ ಕೂಡ ಕೆಲವೊಮ್ಮೆ ಅವಳ ಹಠಮಾರಿತನವನ್ನು ಉದಾಸೀನ ಮಾಡುತ್ತಿದ್ದರು. ಆವಂತಿಕಾ ಎಂಬಿಎ ಮುಗಿಸಿದ ನಂತರ ಮಲ್ಟಿ ನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಳು. ಕೆಲವು ದಿನಗಳ ಹಿಂದೆಯೇ ಸೀತಾಪತಿ ಅವಳ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದರು. ಆದರೆ ಅವಳ ಜಾತಕದಲ್ಲಿ ಕುಜದೋಷ ಇದ್ದುದರಿಂದ, ಯಾವ ಜಾತಕದೊಂದಿಗೂ ಅವಳ ಜಾತಕ ಹೊಂದಾಣಿಕೆ ಆಗುತ್ತಿರಲಿಲ್ಲ.
ಇದೇ ಕಾರಣದಿಂದಾಗಿ ಸುಸಂಸ್ಕೃತ, ಸುಶೀಲ, ಸುಶಿಕ್ಷಿತ ವರಗಳೆಲ್ಲ ಇವರ ಕೈತಪ್ಪಿ ಹೋಗಿದ್ದರು. ಅವರುಗಳಲ್ಲಿ ರಾಜೀವ್ ಎಂಬ ವರ, ಆವಂತಿಕಾಳಿಗೂ ತುಂಬಾ ಇಷ್ಟವಾಗಿದ್ದ. ಆದರೆ ಈ ವಿಚಾರದಲ್ಲಿ ಅವಳು ತನ್ನ ತಂದೆಗೂ ಬಲವಂತ ಮಾಡುವಂತಿರಲಿಲ್ಲ. ಜಾತಕ ಕೂಡಿ ಬರಲಿಲ್ಲ! ಅಷ್ಟೇ ಮುಗಿಯಿತು ಕಥೆ.
ವರಾನ್ವೇಷಣೆ ಇನ್ನೂ ಜಾರಿಯಲ್ಲಿತ್ತು. ಅದೇ ಸಮಯದಲ್ಲಿ ಮಹಾಲಕ್ಷ್ಮಿಯ ಅಕ್ಕ ಮಹಾದೇವಿ ತಮ್ಮ ಗಂಡನ ಅಣ್ಣ ಮತ್ತು ಅತ್ತಿಗೆಯೊಂದಿಗೆ ಬೆಂಗಳೂರಿಗೆ ಆಗಮಿಸಿದರು. ಜೊತೆಗೆ ಆವಂತಿಕಾಳಿಗೆ ಒಂದು ಸಂಬಂಧವನ್ನು ಹುಡುಕಿಕೊಂಡು ಬಂದಿದ್ದರು. ತನ್ನ ಗಂಡನ ಅತ್ತಿಗೆಯ ಸಂಬಂಧದಲ್ಲೇ ವರ ಹುಡುಕಿದ್ದರು. ಮಹಾದೇವಿಯ ಭಾವ ವೃಷಭೇಂದ್ರ ತುಂಬಾ ಚಾಣಾಕ್ಷ. ಇಲ್ಲಿಗೆ ಬಂದಾಕ್ಷಣವೇ ಸೀತಾಪತಿ, ಶಾಸ್ತ್ರಿಗಳು ಹಾಕಿದ ಗೆರೆ ದಾಟುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದ. ತಕ್ಷಣ ಕಾರ್ಯಪ್ರವೃತ್ತನಾಗಿ ಶಾಸ್ತ್ರಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಮ್ಮ ಕಡೆಯ ವರನ ಜಾತಕವನ್ನು ತೋರಿಸಿದ. ತುಸು ಹೊತ್ತು ಜಾತಕವನ್ನೇ ದಿಟ್ಟಿಸಿ ನೋಡಿ, ಅದೇನೇನೊ ಲೆಕ್ಕಾಚಾರ ಮಾಡಿದ ಶಾಸ್ತ್ರಿಗಳು, “ವೃಷಭೇಂದ್ರರವರೇ, ಜಾತಕ ಸರಿದೂಗುವ ಲಕ್ಷಣಗಳು ಗೋಚರಿಸುತ್ತಿಲ್ಲ,” ಎಂದರು.
ತಕ್ಷಣ ವೃಷಬೇಂದ್ರ ಕ್ಯಾಶ್ ಬ್ಯಾಗ್‌ನಿಂದ ದೊಡ್ಡ ನೋಟಿನ ಕಂತೆಯೊಂದನ್ನು ತೆಗೆದು ಶಾಸ್ತ್ರಿಗಳ ಎದುರಿಗೆ ಇಡುತ್ತ, “ಈಗಲೂ ಜಾತಕ ಹೊಂದಾಣಿಕೆ ಆಗುವುದೋ ಇಲ್ಲವೋ?” ಎಂದು ಕೇಳಿದ. ಶಾಸ್ತ್ರಿಗಳು ಕ್ಷಣ ಕಾಲ ಅತ್ತಿತ್ತ ಯಾರಾದರೂ ನೋಡುತ್ತಿರುವರೇ ಎಂದು ಗಮನಿಸಿ, ಲಗುಬಗೆಯಿಂದ ನೋಟಿನ ಕಂತೆಯನ್ನು ಜೋಳಿಗೆಗೆ ಸೇರಿಸಿಕೊಳ್ಳುತ್ತಾ, “ಇರಿ, ಇನ್ನೊಂದ್ಸಲ ಪರೀಕ್ಷಿಸುತ್ತೇನೆ,” ಎಂದರು.
ಸುಮಾರು ಐದಾರು ನಿಮಿಷಗಳ ನಂತರ ಶಾಸ್ತ್ರಿಗಳು ಹೇಳಿದರು, “ವೃಷಭೇಂದ್ರ, ನೀವು ಮದುವೆ ತಯಾರಿ ಮಾಡಿಕೊಳ್ಳಿ.”
ತಕ್ಷಣ ವೃಷಭೇಂದ್ರ, “ಅಣ್ಣ, ನಾವು ಬಂದಿದ್ದ ಉದ್ದೇಶ ಈಡೇರಿತು,” ಎಂದು ಫೋನ್ ಮಾಡಿ ತಿಳಿಸಿದ. ಪೋನ್‌ನಲ್ಲಿ ಮಾತನಾಡಿ ಮುಗಿಸುತ್ತಿದ್ದಂತೆಯೇ, ವೃಷಭೇಂದ್ರ ಮತ್ತೊಂದು ನೋಟಿನ ಕಂತೆಯನ್ನು ಶಾಸ್ತ್ರಿಗಳ ಕೈಗಿಡುತ್ತ, “ಈ ವಿಷಯ ಸೀತಾಪತಿಗೆ ತಿಳಿಯದಂತೆ ನೋಡಿಕೊಳ್ಳಿ, ಮೂರೇ ತಿಂಗಳಲ್ಲಿ ಮದುವೆ ನಡೆದುಬಿಡುವಂತೆ ಮುಹೂರ್ತ ಹುಡುಕಿ,” ಎಂದು ಅಪ್ಪಣೆಯಿತ್ತ.
“ನಿಮ್ಮ ಕೆಲಸವಾಯಿತೆಂದೇ ತಿಳಿದುಕೊಳ್ಳಿ. ನೀವಿನ್ನು ಹೊರಡಿ. ನಾನೂ ಸೀತಾಪತಿಯನ್ನು ನೋಡಲು ಹೊರಡಬೇಕಿದೆ,” ಎನ್ನುತ್ತ ಶಾಸ್ತ್ರಿಗಳು ನೋಟುಗಳ ಕಂತೆಗಳನ್ನು ಜೋಪಾನವಾಗಿರಿಸಿಕೊಂಡರು.
“ನಡೆಯಿರಿ ಜೊತೆಯಲ್ಲೇ ಹೋಗೋಣ, ಅವರೂ ಇಲ್ಲಿಯೇ ಕೆಳಗೆ ಹಾಲ್‌ನಲ್ಲಿ ಕಾಯುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ನಾನು ಮತ್ತೆ ಬೆಳಗಾವಿಗೆ ಹೊರಡಬೇಕು. ನನ್ನನ್ನು ಬಿಟ್ಟರೆ ಅಲ್ಲಿನ ಕೆಲಸಗಳನ್ನು ನಿಭಾಯಿಸಲು ಬೇರಾರೂ ಇಲ್ಲ,” ಎನ್ನುತ್ತ ವೃಷಭೇಂದ್ರ ಮೀಸೆ ತೀಡಿಕೊಂಡ.
“ಸೀತಾಪತಿಯವರೇ, ಬಾಯಿ ಸಿಹಿ ಮಾಡಿಕೊಳ್ಳಿ, ನಿಮ್ಮ ಮಗಳು ಆವಂತಿಕಾಳನ್ನು ನಾವು ಬೆಳಗಾವಿಗೆ ಕರೆದುಕೊಂಡು ಹೋಗುವಂತಾಯಿತು,” ಎನ್ನುತ್ತ ವೃಷಭೇಂದ್ರ ಹಾಲ್‌ನಲ್ಲಿ ಕುಳಿತಿದ್ದ ಎಲ್ಲರಿಗೂ ಸಿಹಿಸುದ್ದಿ ತಿಳಿಸುತ್ತ, ನಮ್ಮ ಕಡೆಯಿಂದ ಆವಂತಿಕಾಳ ಸಂಬಂಧಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಡಂಗೂರ ಸಾರಿಬಿಟ್ಟ.“ಇದು ನಿಜವೇ ಶಾಸ್ತ್ರಿಗಳೇ?” ಎನ್ನುತ್ತಾ ಸೀತಾಪತಿ ಸಂತೋಷದಿಂದ ಪುಟಿದೆದ್ದರು.
“ಅಯ್ಯೋ, ಹುಡುಗನ ಬಗ್ಗೆ ಒಂಚೂರಾದ್ರೂ ವಿಚಾರಿಸಬಾರದೇನ್ರಿ….” ಎಂದು ಮಧ್ಯೆ ಬಂದ ಮಹಾಲಕ್ಷ್ಮಿಯ ತಕರಾರಿನ ಧ್ವನಿ ಆ ಸಂತೋಷದ ಸಂಭ್ರಮದಲ್ಲಿ ಯಾರಿಗೂ ಕೇಳಿಸಲಿಲ್ಲ.
”ಈ ಸಂಬಂಧ ಮಹಾದೇವಿ ಕಡೆಯಿಂದಲೇ ಬಂದಿರುವುದರಿಂದ ಚಿಂತಿಸುವ ಅಗತ್ಯವೇ ಇಲ್ಲ ಬಿಡಿ. ಅದೂ ಅಲ್ಲದೆ ಇಬ್ಬರ ಜಾತಕದಲ್ಲೂ ಸಂಪೂರ್ಣ ಹೊಂದಾಣಿಕೆ ಇದೆಯಲ್ಲ ಅಷ್ಟು ಸಾಕು,” ಎಂದು ಸೀತಾಪತಿ ಸಡಗರದಿಂದ ಸಂಭ್ರಮಿಸತೊಡಗಿದರು.
ವೃಷಭೇಂದ್ರ, ಅಲ್ಲಿದ್ದ ಎಲ್ಲರಿಗೂ ವರನ ಕುರಿತಾಗಿ ಪರಿಚಯ ಮಾಡಿಕೊಡತೊಡಗಿದ, “ಬೆಳಗಾವಿಯಲ್ಲಿ ವರನಿಗೆ ದೊಡ್ಡ ಬಿಸ್‌ನೆಸ್ ಇದೆ. ವಯಸ್ಸಿನಲ್ಲಿ ಆವಂತಿಕಾಳಿಗಿಂತ ಸ್ವಲ್ಪ ಹಿರಿಯನು. ಏಕೆಂದರೆ ಬಿಸ್‌ನೆಸ್‌ನಲ್ಲಿ ಸಾಕಷ್ಟು ಹೆಸರು ದುಡ್ಡು ಮಾಡಿಕೊಂಡು, ತನ್ನ ಇಬ್ಬರು ಸಹೋದರಿಯರ ಮದುವೆ ಮಾಡಿಕೊಟ್ಟ ಮೇಲೆಯೇ ತಾನು ಮದುವೆ ಆಗುವುದಾಗಿ ನಿರ್ಧರಿಸಿದ್ದ. ಅವನ ಹೆಸರು ಶಶಾಂಕ್,” ಎಂದು ತನ್ನ ಪರಿಚಯ ಭಾಷಣ ಮುಗಿಸಿದ.
ಶಶಾಂಕನ ಪರಿವಾರ ಮತ್ತು ಕೌಟುಂಬಿಕ ಹಿನ್ನೆಲೆಗಳೆಲ್ಲ ಸೀತಾಪತಿಯರಿಗೆ ತುಂಬಾ ಇಷ್ಟವಾಯಿತು. ತಕ್ಷಣ ಆವಂತಿಕಾಳ ನಿಶ್ಚಿತಾರ್ಥದ ದಿನಾಂಕವನ್ನು ಗೊತ್ತು ಮಾಡಿದರು. ಕಾರ್ಯಕ್ರಮದ ಎಲ್ಲಾ ವಿಚಾರಗಳನ್ನು ಪಕ್ಕಾಗೊಳಿಸಿದ ನಂತರ ವೃಷಭೇಂದ್ರ ತನ್ನ ಹೆಂಡತಿೂಂದಿಗೆ ಬೆಳಗಾವಿಗೆ ತೆರಳಿದ. ಸೀತಾಪತಿ, ಮಹಾದೇವಿಯನ್ನು ಬಲವಂತದಿಂದ ತಮ್ಮಲ್ಲಿಯೇ ಉಳಿಸಿಕೊಂಡು, ಆವಂತಿಕಾಳ ಮದುವೆಯಾದ ನಂತರವೇ ಹೊರಡಬೇಕು ಎಂದು ಹೇಳಿದರು. ಕೇವಲ ಶಶಾಂಕನ ಭಾವಚಿತ್ರ ನೋಡಿ, ಜಾತಕಗಳು ತಾಳೆಯಾದವೆಂಬ ಒಂದೇ ಕಾರಣಕ್ಕೆ ತರಾತುರಿಯಲ್ಲಿ ಸಂಬಂಧ ನಿಶ್ಚಯಿಸಿದ್ದರಿಂದ, ಆವಂತಿಕಾ ಮತ್ತು ಅವಳ ಪರಿವಾರದವರಿಗೆಲ್ಲ ಕಸಿವಿಸಿಯಾಗಿತ್ತು. ಶಶಾಂಕನ ಕುರಿತಾಗಿ ಮಹಾದೇವಿ ಮತ್ತು ವೃಷಭೇಂದ್ರ ಏನು ಹೇಳಿದ್ದರೊ, ಅದಷ್ಟೆ ಮಾಹಿತಿ ಸಮಾಧಾನಕರ ಎಂದು ಅನಿಸಿರಲಿಲ್ಲ.
ಅಜಯ್ ಅದೆಲ್ಲಿಯೋ ಆಚೆಗೆ ಹೋಗಿದ್ದ. ಮನೆಗೆ ಬರುತ್ತಿದ್ದಂತೆಯೇ, ಆವಂತಿಕಾಳನ್ನು ಕಂಡು ನಾಳೆಯೇ ಶಶಾಂಕ್ ಬೆಂಗಳೂರಿಗೆ ಬರುತ್ತಿದ್ದಾರೆ. ಒಂದು ವಾರ ಕೆಲಸದ ಮೇಲೆ ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಎಂದು ತಿಳಿಸಿದ. ಅಷ್ಟೇ ಅಲ್ಲದೆ, ನೀನು ಶಶಾಂಕ್‌ನನ್ನು ಭೇಟಿಯಾಗಿ ಅವನೊಂದಿಗೆ ಸ್ವಲ್ಪ ಸಮಯ ಕಳೆದರೆ, ಅವನನ್ನು ಅರ್ಥಮಾಡಿಕೊಳ್ಳಬಹುದು ಎಂದಾಗ ಆವಂತಿಕಾಳಿಗೆ ಕೊಂಚ ನಿರಾಳವಾಯಿತು. ನೆಮ್ಮದಿಯ ನಿದ್ರೆ ಆವರಿಸಿಕೊಂಡಿತು.
ಅವಳಿಗೆ ಎಚ್ಚರವಾದಾಗ ತನ್ನ ತಂದೆ ಮತ್ತು ಶಾಸ್ತ್ರಿಗಳು ಮಾತನಾಡುತ್ತಿರುವ ಧ್ವನಿ ಕೇಳಿಸಿತು. ಹೊರ ಬಂದು ನೋಡಿದಾಗ ಮನೆ ತುಂಬ ಗಡಿಬಿಡಿಯ ವಾತಾವರಣ ಸೃಷ್ಟಿಯಾಗಿತ್ತು. ಶಾಸ್ತ್ರಿಗಳು ನಿಶ್ಚಿತಾರ್ಥದ ಮುಹೂರ್ತ ನಿಗದಿಪಡಿಸಿದ್ದರು. ಆವಂತಿಕಾ ಮತ್ತು ಶಶಾಂಕ್‌ರ ಜಾತಕಗಳು ಪರಿಪೂರ್ಣ ಮೇಳೈಸಿದ್ದರಿಂದ ಸೀತಾಪತಿಗೆ ಅತ್ಯಂತ ಖುಷಿಯಾಗಿತ್ತು.
ಶಶಾಂಕ್ ಹಾಗೂ ಅವನ ಪರಿವಾರದವರನ್ನು ಕರೆತರಲು ಮಹಾದೇವಿ ಏರ್‌ಪೋರ್ಟ್‌ಗೆ ತೆರಳಿದ್ದರು. ಇನ್ನುಳಿದವರೆಲ್ಲ ಲಗುಬಗೆಯಿಂದ ಸ್ನಾನ ತಿಂಡಿ ಮುಗಿಸಿ ಬರಲಿರುವ ಅತಿಥಿಗಳ ಸತ್ಕಾರದ ತಯಾರಿಯಲ್ಲಿ ಮಗ್ನರಾದರು. ಕೊನೆಗೆ ಆ ಕ್ಷಣ ಬಂದೇಬಿಟ್ಟಿತು. ಮಹಾದೇವಿ ಅತಿಥಿಗಳನ್ನು ಕರೆದುಕೊಂಡು ಮನೆ ತಲುಪಿಯೇಬಿಟ್ಟರು. ಶಶಾಂಕನ ಪರಿವಾರದವರೆಲ್ಲರೂ ಸೀತಾಪತಿಯವರ ಆದರಾತಿಥ್ಯ ಕಂಡು ಪ್ರಸನ್ನರಾದರು.
ನಿಶ್ಚಿತಾರ್ಥದ ಕಾರ್ಯಕ್ರಮ ಸಂಭ್ರಮ ಸಡಗರಗಳಿಂದ ನೆರವೇರಿತು. ಅಜಯ್ ಮಾರನೇ ದಿನ ಶಶಾಂಕ್‌ನನ್ನು ಹೊಟೇಲೊಂದರಲ್ಲಿ ಭೇಟಿಯಾಗುವುದಾಗಿ ತಿಳಿಸಿದ. ಮರುದಿನ ಆವಂತಿಕಾ ತನ್ನ ಅಣ್ಣ ಅತ್ತಿಗೆಯೊಂದಿಗೆ ಶಶಾಂಕನನ್ನು ಭೇಟಿಯಾಗಲು ಹೊರಟಳು. ಅಜಯ್ ದಂಪತಿಗಳು ಆವಂತಿಕಾಳನ್ನು ಶಶಾಂಕ್‌ನ ಬಳಿಬಿಟ್ಟು, ಪಕ್ಕದ ಮಾಲ್‌ಗೆ ಶಾಪಿಂಗ್ ಮಾಡಲು ತೆರಳಿದರು. ರೆಸ್ಟೋರೆಂಟ್‌ಲ್ಲಿ ಕುಳಿತ ಶಶಾಂಕ್ ಮತ್ತು ಆವಂತಿಕಾ ಸಾಕಷ್ಟು ವಿಷಯಗಳನ್ನು ಚರ್ಚಿಸುತ್ತಾ, ಹೊಟ್ಟೆ ತುಂಬಾ ತಿಂದರು. ಅನಂತರ ಅವರು ಪಕ್ಕದ ಮಾಲ್‌ಗೆ ತೆರಳಿ ಅಜಯ್ ದಂಪತಿಗಳನ್ನು ಸೇರಿಕೊಂಡು ತಾವು ಶಾಪಿಂಗ್‌ನಲ್ಲಿ ಮಗ್ನರಾದರು. ಆದರೆ, ಆವಂತಿಕಾಳಿಗೆ ತಾನು ಮನೆಯಿಂದ ಹೊರಬಂದಾಗಿನಿಂದ ಯಾರೋ ತನ್ನನ್ನೇ ಹಿಂಬಾಲಿಸುತ್ತಿದ್ದಾರೆ ಎಂಬ ಭಾವನೆ ಮೂಡಿತ್ತು. ರಾತ್ರಿ ಬಟ್ಟೆ ಬದಲಾಯಿಸಿದ ಆವಂತಿಕಾ ಇನ್ನೇನು ಮಂಚದ ಮೇಲೆ ಉರುಳಬೇಕು ಎನ್ನುವಷ್ಟರಲ್ಲಿ, ಅವಳ ಮೊಬೈಲ್ ರಿಂಗಣಿಸಿತು. ಯಾವುದೊ ಹೊಸ ನಂಬರ್‌ನಿಂದ ಕರೆ ಬಂದಿತ್ತು.
“ಹಲೋ….!” ಎಂದಳು.
ಅತ್ತ ಕಡೆಯಿಂದ ಹೆಣ್ಣಿನ ಧ್ವನಿ, “ಆವಂತಿಕಾ, ನಿಮಗೆ ಹೃತ್ಪೂರ್ಕ ಶುಭಾಶಯಗಳು ಹಾಗೂ ನಿಶ್ಚಿತಾರ್ಥಕ್ಕೆ ಕಂಗ್ರಾಟ್ಸ್.”
“ಥ್ಯಾಂಕ್ಯು ವೆರಿಮಚ್. ಯಾರು ಮಾತನಾಡುತ್ತಿರುವುದು? ನಿಮ್ಮ ಪರಿಚಯವಾಗಲಿಲ್ಲ,” ಎಂದಳು ಆವಂತಿಕಾ.
“ಹೌದು, ನಿಮಗೆ ನನ್ನ ಗುರುತು, ಪರಿಚಯ ಇಲ್ಲ. ನಾನು ನಿಮ್ಮ ಹಿತೈಷಿ ಎಂದು ಮಾತ್ರ ಹೇಳಬಲ್ಲೆ. ನೀವು ಶಶಾಂಕ್‌ಗೆ ಇನ್ನೂ ಹತ್ತಿರವಾಗುವ ಮೊದಲೇ, ಅವನ ಕುರಿತು ಒಂದೆರಡು ವಿಚಾರಗಳನ್ನು ತಿಳಿಸೋಣ ಎಂದು ಫೋನ್ ಮಾಡಿದೆ.”
“ನಿಮಗೆ ಶಶಾಂಕ್ ಬಗ್ಗೆ ಹೇಗೆ ಗೊತ್ತು? ಅವರ ಬಗ್ಗೆ ಏನು ಹೇಳಬೇಕೆಂದಿರುವಿರಿ? ಅದೂ ಅಲ್ಲದೆ ನನ್ನ ಮೊಬೈಲ್ ನಂಬರ್ ನಿಮಗೆ ಹೇಗೆ ಸಿಕ್ಕಿತು?”
“ಎಲ್ಲ ವಿಷಯವನ್ನು ಫೋನ್‌ನಲ್ಲಿಯೇ ಹೇಳೋಕಾಗಲ್ಲ ಆವಂತಿಕಾ. ನಾಳೆ ಮಾಲ್‌ನಲ್ಲಿ ಭೇಟಿಯಾಗೋಣ. ನಿನ್ನೆ ನೀವು ಶಶಾಂಕ್‌ನೊಂದಿಗೆ ಸುತ್ತಾಡಲು ಹೋಗಿದ್ದಿರಲ್ಲ ಅದೇ ಮಾಲ್,” ಎಂದಳು ಆ ಕಡೆಯ ವ್ಯಕ್ತಿ.
“ಆದರೆ ನಾನು ಹಾಗೆಲ್ಲ ಅಪರಿಚಿತರನ್ನು ಭೇಟಿ ಮಾಡಲು ಹೋಗಲ್ಲ,” ಎಂದು ಆವಂತಿಕಾ ಸ್ವಲ್ಪ ಕಠಿಣವಾಗಿಯೇ ಹೇಳಿದಳು.
“ಇದು ನಿಮ್ಮ ಜೀವನದ ಪ್ರಶ್ನೆ ಎಂದರೂ ಬರುದಿಲ್ಲವೇ? ಬೇಕೆಂದರೆ ಜೊತೆಯಲ್ಲಿ ನಿಮ್ಮ ತಂದೆಯನ್ನೂ ಕರೆದುಕೊಂಡು ಬನ್ನಿ.”
“ಸರಿ ಹಾಗಾದರೆ, ನಾಳೆ ಮುಂಜಾನೆ, 11 ಗಂಟೆಗೆ, ಅಣ್ಣನ ಜೊತೆ ಬರುತ್ತೇನೆ,” ಎಂದ ಆವಂತಿಕಾ ಫೋನ್ ಕಟ್ ಮಾಡಿದಳು. ಸ್ವಲ್ಪ ಸಮಯದ ನಂತರ, ಅಣ್ಣನ ರೂಮಿನತ್ತ ನಡೆದಳು. ಅವನಿಗೆ ಎಲ್ಲಾ ವಿಷಯ ತಿಳಿಸಿ ಈ ಕುರಿತಾಗಿ ಯಾರೊಂದಿಗೂ ಮಾತನಾಡಬೇಡ ಎಂದು ಹೇಳಿದಳು. ಮರುದಿನ, ನಿಗದಿತ ಸಮಯಕ್ಕೆ ಅಣ್ಣ ತಂಗಿ ಮಾಲ್ ತಲುಪಿದರು. ಸ್ವಲ್ಪ ಸಮಯದಲ್ಲಿಯೇ ಆಕರ್ಷಕ ಹುಡುಗಿಯೊಬ್ಬಳು ಬಂದು ಅವರಿಗೆ ವಿಶ್ ಮಾಡಿ ಪಕ್ಕದಲ್ಲೇ ಕುಳಿತಳು.
“ನೀವು ಯಾರು? ನಮ್ಮನ್ನು ಏಕೆ ಇಲ್ಲಿಗೆ ಬರ ಹೇಳಿದಿರಿ? ಶಶಾಂಕ್‌ನ ಕುರಿತು ಏನು ಹೇಳಬೇಕೆಂದಿರುವಿರಿ?” ಎಂದು ಅಜಯ್ ಜಿಜ್ಞಾಸೆಯಿಂದ ಕೇಳಿದ.
“ನನ್ನ ಹೆಸರು ಮಾನಸಿ. ಐದು ವರ್ಷಗಳ ಹಿಂದೆ ಶಶಾಂಕ್‌ನ ಆಫೀಸಿನಲ್ಲಿ ಅವನ ಪಿಎ ಆಗಿ ಸೇರಿಕೊಂಡಿದ್ದೆ. ಶಶಾಂಕ್ ಅದೇ ತಾನೆ ಆಸ್ಟ್ರೇಲಿಯಾದಿಂದ ಎಂಬಿಎ ಡಿಗ್ರಿ ಮುಗಿಸಿ ಬಂದಿದ್ದ. ತಂದೆ ಕಟ್ಟಿ ಬೆಳೆಸಿದ್ದ ಕಂಪನಿಯನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕೆಂಬ ಮಹಾತ್ವಾಕಾಂಕ್ಷಿ. ಕೆಲಸದೆಡೆಗೆ ಅವನಿಗಿರುವ ಶ್ರದ್ಧೆ ಕಂಡು ನಾನು ಪ್ರಭಾವಿತಳಾಗಿದ್ದೆ. ಒಂದು ದಿನ ಹೀಗೆ ಮಾತು ಮಾತಲ್ಲಿ ಆತ ತನ್ನ ವಿದೇಶಿ ಗೆಳತಿಯ ಬಗ್ಗೆ ಹೇಳಿದ್ದ. ಅವಳು ಸಿಡ್ನಿಯವಳಂತೆ. ಇಬ್ಬರೂ ಆಸ್ಟ್ರೇಲಿಯ ಯೂನಿವರ್ಸಿಟಿಯಲ್ಲಿ ಒಟ್ಟಿಗೆ ಓದುತ್ತಿದ್ದರಂತೆ, ಕೆಲವು ದಿನಗಳಲ್ಲಿ ಅವರಿಬ್ಬರೂ ತುಂಬಾ ಆತ್ಮೀಯರಾದರಂತೆ. ಕೆಲವೇ ದಿನಗಳಲ್ಲಿ ಶಶಾಂಕ್ ನನಗೂ ತುಂಬಾ ಹತ್ತಿರಾದ. ಕ್ರಮೇಣ ನಮ್ಮಿಬ್ಬರ ಸಾಮೀಪ್ಯ ತೀವ್ರಗೊಂಡು, ಒಂದು ದಿನ ನಡೆಯಬಾರದ್ದು ನಡೆದುಬಿಟ್ಟಿತು. ಅನಂತರವೇ ನಮಗೆ. ನಾವು ಮಾಡಿದ್ದು ಮಹಾಪರಾಧ ಎಂದು ಅರ್ಥವಾಯಿತು. ತಕ್ಷಣ ನಾನು ಅಲ್ಲಿನ ನೌಕರಿ ಬಿಟ್ಟು ಬೇರೆ ಕಡೆ ಸೇರಿಕೊಂಡೆ. ಆಮೇಲೆ ಶಶಾಂಕ್‌ನನ್ನು ಭೇಟಿಯಾಗಲೇ ಇಲ್ಲ. ಒಂದೂರೆ ವರ್ಷದ ಹಿಂದೆ ನನಗೆ ಡೆಂಗ್ಯು ಜ್ವರ ಕಾಣಿಸಿಕೊಂಡಾಗ ರಕ್ತ ಪರೀಕ್ಷೆ ಮಾಡಲಾಯಿತು….” ಎಂದು ಹೇಳುತ್ತಿದ್ದ ಮಾನಸಿಯ ಕಣ್ಣಾಲಿಗಳು ತುಂಬಿಬಂದಿದ್ದವು.
“ಆ ರಕ್ತ ಪರೀಕ್ಷೆಯಿಂದ ನಾನು ಎಚ್‌ಐವಿ ಪಾಸಿಟಿವ್ ಎಂದು ತಿಳಿಯಿತು. ಅವನ ತಪ್ಪಿನಿಂದಾಗಿ ನನ್ನ ಬದುಕೇ ಸರ್ವನಾಶವಾಗಿ ಹೋಯಿತು. ಹೀಗಾಗಿ ಇನ್ಯಾವುದೇ ಹುಡುಗಿ ಅವನಿಂದ ತನ್ನ ಜೀವನ ಹಾಳು ಮಾಡಿಕೊಳ್ಳಬಾರದೆಂಬುದೇ ನನ್ನ ಉದ್ದೇಶ.”
ಇದನ್ನೆಲ್ಲ ಕೇಳಿ ಆವಂತಿಕಾ ಮತ್ತು ಅಜಯ್ ದಂಗಾಗಿದ್ದರು. ಆಗ ಸುಧಾರಿಸಿಕೊಂಡ ಅಜಯ್, “ಶಶಾಂಕ್ ನಮ್ಮೊಂದಿಗೆ ಸಂಬಂಧ ಬೆಳೆಸುತ್ತಿರುವ ವಿಷಯ ನಿಮಗೆ ಹೇಗೆ ಗೊತ್ತಾಯಿತು?” ಎಂದು ಕೇಳಿದ.
“ಒಂದು ವರ್ಷ ಪೂರ್ತಿ ನನ್ನನ್ನು ಸುಧಾರಿಸಿಕೊಳ್ಳುವುದರಲ್ಲಿ ಕಳೆದುಹೋಯಿತು. ಆಮೇಲೆ ಮತ್ಯಾರಿಗೂ ಹೀಗಾಗದಂತೆ ಮಾಡಬೇಕೆಂಬ ಆಸೆ ದೃಢವಾಯಿತು. ಸ್ವತಃ ತನ್ನ ದೇಹದಲ್ಲಿ ಎಚ್‌ಐವಿ ವೈರಸ್ ತುಂಬಿಕೊಂಡು ತಿರುಗಾಡುತ್ತಿರುವ ವಿಷಯ ಅವನಿಗೇ ತಿಳಿದಿರಲಿಕ್ಕಿಲ್ಲ. ನಿಮಗೆ ಅದೆಷ್ಟು ಹೇಳಬೇಕೊ ಅಷ್ಟು ಹೇಳಿದ್ದೇನೆ. ಮುಂದಿನದು ನಿಮ್ಮ ವಿವೇಚನೆಗೆ ಬಿಟ್ಟಿದ್ದು,” ಎನ್ನುತ್ತ ಮಾನಸಿ ಅಲ್ಲಿಂದ ಹೊರಟುಹೋದಳು.
“ಈಗ ಏನು ಮಾಡೋದಣ್ಣ? ಇವತ್ತು ಸಂಜೆಯೇ ಆತ ನನ್ನನ್ನು ಭೇಟಿ ಮಾಡಲು ಅದೇ ರೆಸ್ಟೋರೆಂಟ್‌ಗೆ ಆಹ್ವಾನಿಸಿದ್ದಾನೆ,” ಎಂದ ಆವಂತಿಕಾಳ ಧ್ವನಿ ಕಂಪಿಸುತ್ತಿತ್ತು.
“ಇವತ್ತಿನಿಂದ ನೀನು ಅವನನ್ನು ಭೇಟಿಯಾಗುವುದೂ ಬೇಡ, ಅವನ ಯಾವುದೇ ಕಾಲ್‌ಗಳನ್ನೂ ಅಟೆಂಡ್ ಮಾಡುವುದೂ ಬೇಡ. ನಾನೇ ಖುದ್ದಾಗಿ ಅವನೊಂದಿಗೆ ಮಾತನಾಡುತ್ತೇನೆ. ಅದಕ್ಕೂ ಮೊದಲು ಆ ಶಾಸ್ತ್ರಿಗಳೊಂದಿಗೆ ಮಾತನಾಡಬೇಕು.”
ಆವಂತಿಕಾಳನ್ನು ಮನೆ ತಲುಪಿಸಿದ ಅಜಯ್ ನೇರವಾಗಿ ಶಾಸ್ತ್ರಿಗಳ ಆಫೀಸಿಗೆ ತೆರಳಿದ. ಅಜಯ್‌ನನ್ನು ಕಂಡ ಶಾಸ್ತ್ರಿ ಅಯೋಮಯವಾದರು, “ಅವರೇ, ಬಾಪ್ಪ ಆಜಯ್!” ಎಂದರು.
“ನಾನು ನಿಮ್ಮೊಂದಿಗೆ ಏಕಾಂತವಾಗಿ ಮಾತನಾಡಬೇಕು,” ಎಂದ ಅಜಯ್. ಇಬ್ಬರೂ ಪಕ್ಕದ ರೂಮಿಗೆ ತೆರಳಿದರು.
“ಶಾಸ್ತ್ರಿಗಳೇ, ಜಾತಕ ನೋಡಿದರೆ ಸಾಕು, ಎಲ್ಲವನ್ನು ಕಂಡುಹಿಡಿಯುವವರು ನೀವು. ಯಾವುದೇ ಪ್ರಾಯವಾಗಲಿ, ರೋಗವಾಗಲಿ, ದಾಂಪತ್ಯ, ಉದ್ಯೋಗ ಎಲ್ಲವನ್ನೂ ಕಂಡುಹಿಡಿಯಬಲ್ಲಿರಿ ತಾನೆ?”
“ಹೌದು ಖಂಡಿತ, ಆದರೆ ನೀನೀಗ ಯಾರ ಬಗ್ಗೆ ಕೇಳಬೇಕೆಂದಿರುವೆ?” ಎಂದರು ಶಾಸ್ತ್ರಿಗಳು.
“ಶಶಾಂಕ್‌ನ ಬಗ್ಗೆ. ಭವಿಷ್ಯದಲ್ಲಿ ಅವನ ಬದುಕು ಸುಖಕರವಾಗಿರುತ್ತದೆಯೇ ಎಂಬುದು ನನಗೆ ಗೊತ್ತಾಗಬೇಕು,” ಎಂದು ಅಜಯ್ ಕೇಳಿದ.
“ಅಜಯ್, ಅವನ ಭವಿಷ್ಯದ ಬಗ್ಗೆ ಚಿಂತಿಸಲೇಬೇಡ. ನನ್ನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವನು ಮತ್ತು ಅವನ ಪತ್ನಿ ಇಬ್ಬರಿಗೂ ಮೊಮ್ಮಕ್ಕಳ ಮದುವೆ ನೋಡುವ ಯೋಗವಿದೆ. ಇಷ್ಟು ಹೇಳಿಯೂ ನಿನಗೇನಾದರೂ ಸಂಶಯವಿದ್ದರೆ ಹೇಳು. ಒಂದು ಹೋಮ ಮಾಡಿದರೆ ಸಾಕು, ಎಲ್ಲಾ ಸರಿಹೋಗುತ್ತೆ. ಅದಕ್ಕೆ ಸ್ವಲ್ಪ ಖರ್ಚು ಮಾತ್ರ ಖಂಡಿತ ಆಗುತ್ತೆ.”
“ಈ ಹೋಮ ಮಾಡಲು ಎಷ್ಟು ಖರ್ಚಾಗಬಹುದು?” ಎಂದು ಕೇಳಿದ ಅಜಯ್.
“25 ಸಾವಿರ ರೂ. ಆದೀತು. ಇಂತಹ ಸಮಯದಲ್ಲಿ ದುಡ್ಡಿಗೆ ಮಹತ್ವ ನೀಡಬಾರದು. ಈ ಹೋಮದಿಂದಾಗಿ ಎರಡೂ ಕಡೆಯವರಿಗೆ ಒಳ್ಳೆಯದಾಗುತ್ತದೆ,” ಎಂದು ಅರ್ಥಗರ್ಭಿತವಾಗಿ ನಗುತ್ತ ಹೇಳಿದರು ಶಾಸ್ತ್ರಿಗಳು.
`ಒಳ್ಳೆಯದಾಗೋದು ನಿಮಗೋ ಅವರಿಗೋ’ ಅಜಯ್ ಮನದಲ್ಲೇ ಅಂದುಕೊಂಡು, “ಸರಿ, ನಾನು ಅಪ್ಪನೊಡನೆ ಮಾತಾಡಿ ನಿಮಗೆ ನಾಳೆ ಫೋನ್ ಮಾಡ್ತೀನಿ,” ಎಂದ.
“ಅರೆ, ಸೀತಾಪತಿ ನನ್ನ ವಿಷಯಾನ ಯಾವತ್ತೂ ತೆಗೆದುಹಾಕಲ್ಲ. ನೀನು ಹಣ ತೆಗೆದುಕೊಂಡು ಸೋಮವಾರ ಬಂದುಬಿಡು. ಹಾಗೇ ಆವಂತಿಕಾಳನ್ನೂ ಕರೆದುಕೊಂಡು ಬಾ,” ಶಾಸ್ತ್ರಿಗಳು ಹೇಳಿದರು. ಅಜಯ್ ಮನೆಯತ್ತ ಹೊರಟ. ಹಾಲ್‌ನಲ್ಲಿ ಸೀತಾಪತಿ ತಮ್ಮ ಇಬ್ಬರು ಮ್ಯಾನೇಜರ್‌ಗಳೊಂದಿಗೆ ಯಾವುದೋ ಗಂಭೀರ ವಿಷಯದ ಬಗ್ಗೆ ಮಾತಾಡುತ್ತಿದ್ದರು. ಅಜಯ್ ಅಪ್ಪನ ಬಳಿ ಹೋದ.
“ನೀನು ಬಂದಿದ್ದು ಒಳ್ಳೇದಾಯ್ತು ಅಜಯ್. ನಾಳೆ ಅಮ್ಮನ ತಿಥಿ ಪ್ರಯುಕ್ತ ಫ್ಯಾಕ್ಟರಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸ್ತಿದ್ದಾರೆ. ಇವರಿಬ್ಬರೂ ಅದರ ಬಗ್ಗೆ ಮಾತಾಡೋಕೆ ಬಂದಿದ್ದಾರೆ,” ಎಂದರು.
ಇದ್ದಕ್ಕಿದ್ದಂತೆ ಅಜಯ್ ಮಧ್ಯದಲ್ಲಿ ಮಾತಾಡಿ, “ನಾವು ಶಶಾಂಕ್‌ರಿಂದ ರಕ್ತದಾನ ಶಿಬಿರ ಉದ್ಘಾಟನೆ ಮಾಡಿಸಿದ್ರೆ ಚೆನ್ನಾಗಿರುತ್ತೆ. ರಕ್ತದಾನಿಗಳ ಲಿಸ್ಟ್ ನಲ್ಲಿ ಅವರ ಹೆಸರು ಎಲ್ಲರಿಗಿಂತ ಮುಂದಿರುತ್ತೆ.”
ಅಜಯ್‌ನ ಮಾತು ಕೇಳಿ ಸೀತಾಪತಿಗೆ ಬಹಳ ಸಂತೋಷವಾಯಿತು. ಉದ್ಘಾಟನೆಗೆ ಯಾರನ್ನು ಕರೆಸುವುದೆಂದು ಅವರು ಚಿಂತಿಸುತ್ತಿದ್ದರು.
ಮರುದಿನ ಶಿಬಿರದ ಉದ್ಘಾಟನೆ ಶಶಾಂಕ್‌ನಿಂದ ನೆರವೇರಿತು. ಅವನೇ ಮೊದಲು ರಕ್ತದಾನ ಮಾಡಿದ. ಆಸ್ಪತ್ರೆಯ ಲ್ಯಾಬ್ ಅಸಿಸ್ಟೆಂಟ್ ಕೂಡಲೇ ಅವನ ರಕ್ತವನ್ನು ಪರೀಕ್ಷೆಗೆ ಕೊಂಡೊಯ್ದ.
ರಿಪೋರ್ಟ್ ಬರಲು 1-2 ದಿನ ಬೇಕಾಗುತ್ತೆ ಎಂದು ಆಸ್ಪತ್ರೆಯವರು ತಿಳಿಸಿದರು. ಅಜಯ್ ಶಾಸ್ತ್ರಿಗಳಿಗೆ ಫೋನ್ ಮಾಡಿ ಮುಂದಿನ ವಾರ ಹೋಮ ನಡೆಸುತ್ತೇವೆ ಎಂದ. ಮೂರನೇ ದಿನ ಶಶಾಂಕ್‌ನ ರಕ್ತದ ರಿಪೋರ್ಟ್ ಬಂದಿತು. ಅಷ್ಟರಲ್ಲಿ ಅವನು ಬೆಳಗಾವಿಗೆ ಹೊರಟುಹೋಗಿದ್ದ.
ಮಾನಸಿ ಹೇಳಿದ್ದು ನಿಜವಾಗಿತ್ತು. ಶಶಾಂಕ್ ಎಚ್.ಐ.ವಿ. ಪಾಸಿಟಿವ್ ಆಗಿದ್ದ. ಅಜಯ್ ಆವಂತಿಕಾಗೆ ಫೋನ್ ಮಾಡಿ ಎಲ್ಲ ವಿಷಯ ತಿಳಿಸಿದ. ಆವಂತಿಕಾಗೆ ಬಹಳ ದುಃಖವಾಯಿತು.
ಮನೆಗೆ ಬಂದ ಮೇಲೆ ಅಪ್ಪನಿಗೆ ಎಲ್ಲ ಸತ್ಯಾಂಶಗಳನ್ನು ತಿಳಿಸಿ ಶಾಸ್ತ್ರಿಗಳ ಮೋಸ ಬಯಲು ಮಾಡಬೇಕೆಂದು ಇಬ್ಬರೂ ನಿರ್ಧರಿಸಿದರು. ಇಬ್ಬರೂ ಹಾಲ್‌ಗೆ ಹೋದರು. ಅಲ್ಲಿ ಶಾಸ್ತ್ರಿಗಳು ಹಾಗೂ ಸೀತಾಪತಿ ಇಬ್ಬರೂ ಕುಳಿತು ಆವಂತಿಕಾಳ ಮದುವೆಗೆ ಮುಹೂರ್ತ ನಿಶ್ಚಯಿಸಲು ಜಾತಕ ಪರಿಶೀಲಿಸುತ್ತಿದ್ದರು.
“ಅಜಯ್, ಆವಂತಿಕಾ ಬನ್ನಿ, ಮದುವೆಗೆ ಇನ್ನು 3 ತಿಂಗಳು ಮಾತ್ರ ಇದೆ. ಆವಂತಿಕಾ ಮತ್ತು ಶಶಾಂಕ್‌ರ ಜಾತಕಗಳು ಬಹಳ ಪ್ರಶಸ್ತವಾಗಿವೆ. ಎಲ್ಲ ಕೂಟಗಳೂ ಚೆನ್ನಾಗಿ ಹೊಂದುತ್ತವೆಂದು ಶಾಸ್ತ್ರಿಗಳು ಹೇಳಿದರು.
“ಅಪ್ಪಾ, ಈ ಮದುವೆ ನಡೆಯಲ್ಲ,” ಅಜಯ್ ಹೇಳಿದ.
“ಯಾಕೆ, ಏನಾಯ್ತು? ಜಾತಕಗಳು ಹೊಂದಿದ ಮೇಲೆ ನೀನು ಹೀಗೆ…..”
“ಅಪ್ಪಾ, ಅಣ್ಣ ಹೇಳೋದನ್ನು ಪೂರ್ತಿ ಕೇಳಿ,” ಆವಂತಿಕಾ ಮಧ್ಯ ಮಾತಾಡಿದಳು.
“ಏನು ಕೇಳೋದು?” ಸೀತಾಪತಿ ಎಷ್ಟು ಜೋರಾಗಿ ಕಿರುಚಿದರೆಂದರೆ ಮನೆಯ ಉಳಿದ ಸದಸ್ಯರು ಹಾಲ್‌ಗೆ ಬಂದರು.
“ಶಾಸ್ತ್ರಿಗಳ 15 ದಿನಗಳ ಪರಿಶ್ರಮಕ್ಕೆ ನೀವಿಬ್ರೂ 1 ನಿಮಿಷದಲ್ಲಿ ತಣ್ಣೀರೆರಚಿದ್ರಿ. ಜಾತಕಗಳನ್ನು ಕೂಡಿಸೋಕೆ ಎಷ್ಟು ದುಡ್ಡು ಖರ್ಚಾಗಿದೇಂತ ನಿಮಗೇನಾದರೂ ಗೊತ್ತಾ?”
“ಜಾತಕ, ಜಾತಕ, ಜಾತಕ…. ಅಪ್ಪಾ ನೀವಂತೂ ಈ ಶಾಸ್ತ್ರಿಗಳು ಹೇಳಿದ್ದನ್ನು ಕಣ್ಣು ಮುಚ್ಕೊಂಡು ನಂಬ್ತೀರಿ. ಇವರು ನಿಮ್ಮ ಹತ್ರ ಎಷ್ಟು ದುಡ್ಡು ತಿಂದಿದ್ದಾರೇಂತ ನಿಮಗೇ ಗೊತ್ತು. 10,000, 5,000, 1,000 ರೂ. ಹೀಗೆ ದುಡ್ಡು ಕೊಡ್ತಾನೇ ಇರ್ತೀರಿ.
“ಈ ಬಾರಿ ಇವರು ಮಿತಿಮೀರಿಬಿಟ್ಟರು. ನನ್ನ ಹತ್ರ 25 ಸಾವಿರ ರೂ. ಕೇಳಿದ್ರು. ಆವಂತಿಕಾ ಮತ್ತು ಶಶಾಂಕ್ ಮದುವೆಗೆ ಮುಂಚೆ ಏನೋ ಹೋಮ ಮಾಡ್ಬೇಕಂತೆ,” ಅಜಯ್ ಕೋಪದಿಂದ ಹೇಳಿದ.
“ಹೌದಾ! ಆ ಹೋಮ ಮೊದಲೇ ಮಾಡಾಯ್ತಲ್ಲಾ? ಅದಕ್ಕೆ ನನ್ನಿಂದ ಶಾಸ್ತ್ರಿಗಳು 25 ಸಾವಿರ ರೂ. ತಗೊಂಡ್ರು,” ಸೀತಾಪತಿಯವರ ಮುಖ ಸಿಟ್ಟಿನಿಂದ ಕೆಂಪಾಗಿತ್ತು.
“ಸೀತಾಪತಿಯವರೇ, ಇವರ ಲೀಲೆ ಅಪಾರ. ಇವರು ಅಷ್ಟು ಸುಲಭವಾಗಿ ಜಾತಕಗಳನ್ನು ಹೊಂದಿಸೋದಿಲ್ಲ. ದುಡ್ಡಿನ ದರ್ಶನ ಮಾಡಿಸಿದರೆ ಜಾತಕಗಳನ್ನು ಆರಾಮವಾಗಿ ಹೊಂದಿಸಿಬಿಡ್ತಾರೆ. ನಾನು ಹೇಳೋದು ನಿಜ ತಾನೆ ಶಾಸ್ತ್ರಿಗಳೇ?” ಮಹಾದೇವಿ ಕೇಳಿದಳು.
“ಆದರೆ ವೃಷಭೇಂದ್ರರವರು…….” ಶಾಸ್ತ್ರಿಗಳು ಏನೋ ಸ್ಪಷ್ಟನೆ ನೀಡೋಕೆ ಹೋದರು, ಅಷ್ಟರಲ್ಲಿ ಮಹಾದೇವಿ ಮಧ್ಯದಲ್ಲಿ ಬಾಯಿ ಹಾಕಿ, “ಈಗ್ತಾನೇ ಅಜಯ್ ನನಗೊಂದು ಕೆಟ್ಟ ಸುದ್ದಿ ಹೇಳಿದ. ಅಜಯ್ ಹಾಗೂ ಆವಂತಿಕಾ ಬಹಳ ಬೇಸರದಲ್ಲಿರುವುದನ್ನು ಕಂಡು ಕಾರಣ ಕೇಳಿದೆ. ಅವನು ಹೇಳಿದ ಸುದ್ದಿ ಕೇಳಿದರೆ ನಿಮಗೂ ಆಘಾತವಾಗುತ್ತದೆ.
“ಈ ಧೂರ್ತ ಶಾಸ್ತ್ರಿಗಳು ಜಾತಕವನ್ನು ಹೊಂದಿಸಲು ವೃಷಭೇಂದ್ರನಿಂದ ಹಣ ಪಡೆದಿದ್ದರು. ನಂತರ ಬೇಗನೇ ಮದುವೆ ಮಾಡಿಸಲು ವೃಷಭೇಂದ್ರ ಇನ್ನಷ್ಟು ಹಣ ಕೊಟ್ಟರು. ಅದನ್ನು ಶಾಸ್ತ್ರಿಗಳು ತಿಂದು ತೇಗಿದರು. ಜ್ಯೋತಿಷ್ಯದ ಹೆಸರಿನಲ್ಲಿ ಈ ಮನುಷ್ಯ ನಿಮ್ಮನ್ನು ಲೂಟಿ ಮಾಡುತ್ತಿದ್ದಾರೆ. ನೀವು ಸುಶಿಕ್ಷಿತರಾಗಿದ್ದೂ ಲೂಟಿಗೊಳಗಾಗುತ್ತಾ ಇದ್ದೀರಿ.
“ಹೋಮ ಮಾಡಿಸೋದ್ರಿಂದ ನಿಜವಾಗಿಯೂ ಆವಂತಿಕಾಳ ಜೀವನ ಸಂತೋಷದಿಂದ ಕಳೆಯುತ್ತಾ? ಶಾಸ್ತ್ರಿಗಳು ತಮ್ಮ ಪೂಜೆಯಿಂದ ಆವಂತಿಕಾಗೆ ಶಶಾಂಕನ ಪ್ರೀತಿಯನ್ನು ಕೊಡಿಸ್ತಾರಾ?”
ಮಹಾದೇವಿ ಮತ್ತು ಅಜಯ್‌ರ ಮಾತುಗಳನ್ನು ಕೇಳಿ ಸೀತಾಪತಿ ಸ್ತಂಭೀಭೂತರಾಗಿದ್ದರು. ಅವರು ಬಹಳ ವಿಚಲಿತರಾಗಿದ್ದರು. ಅವರು ಯಾವ ವ್ಯಕ್ತಿಯನ್ನು ಅಷ್ಟೊಂದು ನಂಬಿದ್ದರೋ ಆ ವ್ಯಕ್ತಿಯೇ ಅವರಿಗೆ ಮೋಸ ಮಾಡುತ್ತಿದ್ದ.
ಅಜಯ್ ಅಪ್ಪನ ಭುಜ ಅಲುಗಾಡಿಸುತ್ತಾ ಹೇಳಿದ, “ಅಪ್ಪಾ, ಶಾಸ್ತ್ರಿಗಳು ನಿಮಗೆ ಜಾತಕದ ಮೂಲಕ ಎಲ್ಲಾ ವಿಷಯ ಹೇಳ್ತಾರಲ್ವಾ? ಹಾಗಾದ್ರೆ ಶಶಾಂಕ್ ಎಚ್‌ಐವಿ ಪಾಸಿಟಿವ್ ಅಂತ ಅವರು ನಿಮಗೆ ಹೇಳಿದ್ರಾ? ಮದುವೆಗೆ ಮೊದಲೇ ನಮಗೆ ಇದೆಲ್ಲಾ ಗೊತ್ತಾಗಿದ್ದು ಒಳ್ಳೇದಾಯ್ತು. ಇಲ್ಲದಿದ್ದರೆ ಈ ಪೂಜೆ, ಹೋಮ, ಉಪವಾಸಗಳು ನಮ್ಮನ್ನು ಹಾಳು ಮಾಡಿಬಿಡ್ತಿದ್ದವು.”
ಎಚ್‌ಐವಿ ಹೆಸರು ಕೇಳಿದ್ದೇ ತಡ ಸೀತಾಪತಿ ತಲೆಯ ಮೇಲ ಕೈ ಹೊತ್ತು ಸೋಫಾದಲ್ಲಿ ಕುಸಿದುಬಿಟ್ಟರು. ಅವರಿಗೆ ಕಣ್ಣು ಕತ್ತಲೆ ಬಂತು.
“ಮದುವೆ ವಿಷಯಗಳಲ್ಲಿ ಜಾತಕ ನೋಡಿಸುವುದಕ್ಕಿಂತ ವಧೂವರರ ಆರೋಗ್ಯದ ಜಾತಕ ತಿಳಿದುಕೊಳ್ಳಬೇಕು,” ಮಹಾದೇವಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದಳು.
ತಂದೆ ಬೇಸರದಿಂದಿರುವುದನ್ನು ಕಂಡು ಆವಂತಿಕಾ ಅವರ ಬಳಿ ಹೋಗಿ, “ಅಪ್ಪಾ, ಆಗಿದ್ದಾಯ್ತು. ಯೋಚಿಸಬೇಡಿ, ನಾನು ನಿಮಗೆ ಮೊದಲೇ ಬಹಳಷ್ಟು ಸಾರಿ ಎಚ್ಚರಿಸಿದ್ದೆ. ಆದರೆ ನೀವು ಹಠದಿಂದ ಯಾರ ಮಾತನ್ನೂ ಕೇಳಲಿಲ್ಲ.
“ಅಪ್ಪಾ, ಜನ ಈಗ ಚಂದ್ರನ ಮೇಲೆ ವಾಸ ಮಾಡೋ ಬಗ್ಗೆ ಯೋಚಿಸ್ತಿದ್ದಾರೆ. ನೀವು ಮಾತ್ರ ಕೂಪ ಮಂಡೂಕದಂತೆ ಇದ್ದೀರಿ. ಇಂತಹ ಜ್ಯೋತಿಷಿಗಳ ಸಹವಾಸಕ್ಕೆ ಬಿದ್ದು ಮನುಷ್ಯ ಹಾಳಾಗೋದು ನಿಶ್ಚಿತ,” ಎಂದಳು.
ಆವಂತಿಕಾಳ ಮಾತುಗಳು ಸೀತಾಪತಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದವು. ಅವರು ಥಟ್ಟನೆ ಎದ್ದು ನಿಂತು ಶಾಸ್ತ್ರಿಗಳಿಗೆ ಕೂಡಲೇ ಮನೆಯಿಂದ ಆಚೆ ಹೋಗಲು ಹೇಳಿದರು.
“ಅಪ್ಪಾ, ಅವರಿಂದ ನಿಮ್ಮ ಹಣ ಆದ್ರೂ ವಾಪಸ್ ಪಡೆಯಿರಿ,” ಅಜಯ್ ಹೇಳಿದ.
“ಬೇಡ ಅಜಯ್, ಪೀಡೆ ಹೋಯ್ತು ಅಂದ್ಕೋತೀನಿ.” ಎಂದರು.
2 ದಿನಗಳ ಕಾಲ ಮನೆಯಲ್ಲಿ ಮೌನ ಆವರಿಸಿತ್ತು. ಸೀತಾಪತಿಯವರು ಬಾಯಿಗೆ ಬೀಗ ಹಾಕಿಕೊಂಡಂತೆ ಇದ್ದರು. ಅವರು ಯಾರೊಂದಿಗೂ ಮಾತಾಡುತ್ತಿರಲಿಲ್ಲ. ಮೂರನೆಯ ದಿನ ಅವರು ಮಗಳನ್ನು ತಮ್ಮ ಕೋಣೆಗೆ ಕರೆದು ಹೇಳಿದರು, “ಆವಂತಿಕಾ, ಜಾತಕದ ಹುಚ್ಚಿನಲ್ಲಿ ನಿನ್ನ ಮದುವೆಗೆ ಈಗಾಗಲೇ ತಡವಾಗಿದೆ. ಇನ್ನೂ ತಡವಾಗೋದು ಬೇಡ. ನಿನ್ನ ಮದುವೆ ನವೆಂಬರ್ 15 ರಂದು ನಡೆಯುತ್ತೆ.”
“ಆದರೆ ಅಪ್ಪಾ….” ಆವಂತಿಕಾ ಭಯದಿಂದ ಹೇಳಿದಳು.
“ಹೆದರ್ಕೋಬೇಡ. ನಿನ್ನ ಮದುವೆ ಶಶಾಂಕ್ ಜೊತೆಗಲ್ಲ. ರಾಜೀವ್ ಜೊತೆ,” ಸೀತಾಪತಿ ಅವಳ ತಲೆಯ ಮೇಲೆ ಕೈಯಿಟ್ಟು ಹೇಳಿದರು.
“ಅಪ್ಪಾ, ನಮ್ಮಿಬ್ಬರ ಜಾತಕ ಹೊಂದದಿದ್ರೆ….” ಆವಂತಿಕಾ ತುಂಟನಗೆ ಬೀರಿ ಕೇಳಿದಳು.
“ಹಾಗೆಲ್ಲಾ ಹೇಳಿ ನನ್ನನ್ನು ಇನ್ನೂ ಕುಗ್ಗಿಸಬೇಡ,” ಎಂದು ಸೀತಾಪತಿ ಮಗಳನ್ನು ಅಪ್ಪಿಕೊಂಡರು.
ಆವಂತಿಕಾಳ ಕೆನ್ನೆಗಳ ಮೇಲೆ ಸಂತಸದ ಕಣ್ಣೀರು ಹರಿಯಿತು.