ಆರ್ಯನ್ ಕಮಾಲ್!
ವಯಸ್ಸು ಫಿಫ್ಟಿ ಪ್ಲಸ್. ಯುವಕರನ್ನು ನಾಚಿಸುವಂಥ ಫಿಟ್‌ನೆಸ್. ಶಿವರಾಜ್ ಕುಮಾರ್ `ಆರ್ಯನ್’ ಚಿತ್ರದಲ್ಲಿ ಕಾಣಿಸಿಕೊಂಡಿರುವ ಪರಿವೆ ಹೇಗಿದೆ ಅಂದರೆ, ಆತ ಒಬ್ಬ ಕ್ರೀಡಾಪಟುವೇನೋ ಎನ್ನುವಂತೆ ಭಾಸವಾಗುತ್ತದೆ. `ಆರ್ಯನ್’ ಚಿತ್ರದಲ್ಲಿ ಅವರು `ಕೋಚ್’ ಪಾತ್ರ ನಿರ್ವಹಿಸಿದ್ದಾರೆ. ಸ್ಲಿಮ್ ಅಂಡ್ ಫಿಟ್ ಆಗಿರುವ ಶಿವರಾಜ್ ಅವರ ಪರ್ಸನಾಲಿಟಿ ಕುರಿತು ಇಂಟ್ರೆಸ್ಟಿಂಗ್ ಪ್ರಸಂಗವೊಂದು `ಆರ್ಯನ್’ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ನಡೆಯಿತು. ಚಿತ್ರರಂಗದ ಗಣ್ಯರ ಜೊತೆ ಸಮಾರಂಭದಲ್ಲಿ ಕ್ರಿಕೆಟ್‌ನ ವಿಜಯ ಭಾರದ್ವಾಜ್ ಕೂಡಾ ಅತಿಥಿಗಳಾಗಿದ್ದರು. ಅವರು ಶಿವಣ್ಣನವರತ್ತ ನೋಡುತ್ತಾ, ಕ್ರೀಡಾಪಟುವಾಗಿ ನಾವು ಫಿಟ್ನೆಸ್ ಬಗ್ಗೆ ಯೋಚಿಸಲಿಲ್ಲ. ಅದನ್ನು ಕಾಯ್ದುಕೊಳ್ಳಲಿಲ್ಲ. ಆದರೆ ಸಿನಿಮಾರಂಗದಲ್ಲಿದ್ದು ಒಬ್ಬ ಕ್ರೀಡಾಪಟುವೆತೆ ಫಿಟ್‌ನೆಸ್‌ಕಾಪಾಡಿಕೊಂಡು ಇಷ್ಟು ಯಂಗ್ ಆಗಿರಲು ಹೇಗೆ ಸಾಧ್ಯ? ಅದರ ರಹಸ್ಯವೇನು ಎಂದು ಕೇಳಿದರು. ಶಿವಣ್ಣ ನಗುತ್ತಲೇ ಅಲ್ಲೇ ಕುಳಿತಿದ್ದ ಗೀತಾ ಅವರತ್ತ ಬೆರಳು ಮಾಡಿ ತೋರಿಸಿದರು. ನನ್ನ ಗೀತಾ ನನ್ನ ಊಟದ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ಳುತ್ತಾರೆ. ನಾನಿವತ್ತು ಈ ರೀತಿ ಫಿಟ್ ಆಗಿರಲು ಗೀತಾನೇ ಕಾರಣ ಎಂದರು.
ಅಭಿನೇತ್ರಿ ಅತ್ತಳು
`ಅಭಿನೇತ್ರಿ’ ಪೂಜಾಗಾಂಧಿಯ ಬಹು ನಿರೀಕ್ಷಿತ ಚಿತ್ರ. ಕಳೆದ ಕೆಲವು ತಿಂಗಳುಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದ್ದ ಈ ಚಿತ್ರ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಅದಕ್ಕೆ ಅಡ್ಡಿ ಆತಂಕ ಶುರುವಾಗಿದೆ. ನಟಿ ಪೂಜಾಗಾಂಧಿ ಕಥೆ ಕಳ್ಳಿ ಎಂಬ ಆರೋಪ ಎದುರಿಸುತ್ತಿದ್ದಾಳೆ. ಹಾಗಾಗಿ ಚಿತ್ರದ ಬಿಡುಗಡೆಗೆ ಅಡ್ಡಿಯಾಗಿದೆ. ನ್ಯಾಯಾಲಯ ತಡೆಯಾಜ್ಞೆ ನೀಡಿದ ಕಾರಣ ಮಳೆ ಗುಡುಗಿ ಪೂಜಾಗಾಂಧಿ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ. ಭಾಗ್ಯ ಕೃಷ್ಣಮೂರ್ತಿ ಎನ್ನುವ ಬರಹಗಾರ್ತಿ ತಮ್ಮ ಕಾದಂಬರಿಯನ್ನು ಕದಿಯಲಾಗಿದೆ ಎಂದು ಆರೋಪ ಮಾಡಿ ಕೋರ್ಟಿನ ಮೆಟ್ಟಿಲು ಹತ್ತಿದ್ದರು. ಅವರ ಕಾದಂಬರಿಗೂ ನನ್ನ ಚಿತ್ರಕಥೆಗೂ ಯಾವುದೇ ಸಂಬಂಧವಿಲ್ಲ ಎಂದು ಪೂಜಾ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗುತ್ತೇನೆ ಎಂದಿದ್ದರು. ಈಗ ಚಿತ್ರೀಕರಣವನ್ನು ಪೂರೈಸಲು ಅನುಮತಿ ನೀಡಿದ್ದು, ಮೊದಲ ಕಾಪಿಯನ್ನು ನೋಡಿದ ನಂತರ ಉಳಿದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬ ಸುದ್ದಿ ಹೊರಬಿದ್ದಿದೆ. ನನ್ನ ಮೊದಲ ನಿರ್ಮಾಣದ ಚಿತ್ರಕ್ಕೆ ಇಂಥವೊಂದು ಆರೋಪ ಬಂದಿತ್ತಲ್ಲ ಎಂದು ಮನನೊಂದ ಪೂಜಾ ಕೋರ್ಟ್ ಆರಣದಲ್ಲೇ ಥೇಟ್ ಕಲ್ಪನಾ ತರಹ ಕಣ್ಣೀರಿನ ಮಳೆ ಸುರಿಸಿದಳಂತೆ.
ದೃಶ್ಯಾಕರ್ಷಣೆ
ಈ ವರ್ಷ ರವಿಚಂದ್ರನ್ ಅವರಿಗೆ ಹರುಷದ ವರ್ಷವಾಗಿದೆ. `ಮಾಣಿಕ್ಯ’ ಸೂಪರ್ ಹಿಟ್ ಆಯಿತು. ಅದರ ಬೆನ್ನಲ್ಲೇ ಬಿಡುಗಡೆಯಾದ `ದೃಶ್ಯ’ ಚಿತ್ರವನ್ನು ಮಾಸ್ಕ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರು ಮೆಚ್ಚಿಕೊಂಡರು. ಫಾದರ್ ಫಿಗರ್ ಆಗಿರುವ ರವಿಚಂದ್ರನ್ ಪಾಲಿಗೆ ಈ ಹೊಸ ಇಮೇಜ್ ಹೆಚ್ಚು ಅದೃಷ್ಟ ತಂದಂತಿದೆ. ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿ `ದೃಶ್ಯ’ ಚಿತ್ರದಲ್ಲಿ ಕಾಣಿಸಿಕೊಂಡಿರುವ ತಮ್ಮ ಎಲ್ಲ ಕ್ರೇಜಿ ಇಮೇಜನ್ನು ಪಕ್ಕಕ್ಕಿಟ್ಟು ಸೀದಾ ಸಾದಾ ಅಪ್ಪನಾಗಿ ಉತ್ತಮ ಅಭಿನಯ ನೀಡಿದ್ದಾರೆ. `ದೃಶ್ಯ’ ಕೂಡಾ ಯಶಸ್ಸು ಕಂಡಿದೆ. ಆದರೆ ಈ ಇಮೇಜ್ ಪರ್ಮನೆಂಟ್ ಅಲ್ಲ ಎಂದು ರವಿ ಹೇಳುತ್ತಾರೆ. ನಾನು ಎಲ್ಲ ಚಿತ್ರದಲ್ಲೂ ಅಪ್ಪನ ಪಾತ್ರ ವಹಿಸುವುದಿಲ್ಲ. ಈ ಚಿತ್ರಗಳಲ್ಲಿ ಆ ಪಾತ್ರಗಳಿಗೊಂದು ಅರ್ಥವಿತ್ತು. ನನ್ನನ್ನು ಬಿಟ್ಟರೆ ಬೇರೆ ಯಾರೇ ಮಾಡಿದರೂ ಒಪ್ಪುವುದಿಲ್ಲ ಅಂತ ನಿರ್ದೇಶಕರು ನಂಬಿ ನನ್ನನ್ನು ಆಯ್ಕೆ ಮಾಡಿದ್ದರಿಂದ ಒಪ್ಪಿಕೊಂಡಿದ್ದೆ. ಈಗ ನನ್ನ ಪುತ್ರನ ಚಿತ್ರದಲ್ಲೂ ಸಹಾ ಅಪ್ಪನ ಪಾತ್ರ ವಹಿಸಬೇಕಿದೆ. ಅದು ಬಿಟ್ಟರೆ ಬೇರೆ ಯಾವ ಚಿತ್ರದಲ್ಲೂ ನಾನು ಫಾದರ್ ಪಾತ್ರ ಮಾಡುತ್ತಿಲ್ಲ ಎನ್ನುತ್ತಾರೆ.
ಉಪ್ಪಿ-2
ಉಪೇಂದ್ರ ಏನೇ ಮಾಡಿದರೂ ಅದು ದೊಡ್ಡ ಸುದ್ದಿಯಾಗುತ್ತೆ. ಅವರು ತಮ್ಮ ಚಿತ್ರ `ಉಪ್ಪಿ-2’ಗಾಗಿ ಸಿದ್ಧಪಡಿಸಿದ ಆಹ್ವಾನಪತ್ರಿಕೆ ಕೂಡಾ ಎಲ್ಲರನ್ನೂ ಆಕರ್ಷಿಸಿತ್ತು. ಈಗ ಯಾವುದೇ ಸುದ್ದಿಯನ್ನು ಹೊರಹಾಕದೇ ರೆಡಿಯಾಗುತ್ತಿರುವ ಉಪ್ಪಿಯ ಮತ್ತೊಂದು ಚಿತ್ರ `ಬಸವಣ್ಣ’ (ಟೈಟಲ್ ಇನ್ನು ವಿವಾದದಲ್ಲಿದೆ) ಆರಂಭವಾಗುವ ಮೊದಲೇ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. `ದಂಡುಪಾಳ್ಯ’ ಖ್ಯಾತಿಯ ನಿರ್ದೇಶಕ ಶ್ರೀನಿವಾಸರಾಜು ಈ ಚಿತ್ರದ ನಿರ್ದೇಶಕ. ಈ ಚಿತ್ರದ ಪೋಸ್ಟರ್ ಎಲ್ಲರನ್ನು ಆಕರ್ಷಿಸುವುದರ ಜೊತೆಗೆ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಉಪೇಂದ್ರರ ಸಿನಿಮಾ ಎಂದ ಮೇಲೆ ವಿಭಿನ್ನವಾದ ಸಬ್ಜೆಕ್ಟ್. ಚಿತ್ರದ ಟೈಟಲ್ ಎಲ್ಲ ಮಾಮೂಲು. `ಶ್’ ನಿಂದಲೇ ಶುರುವಾದ ಈ ಟ್ರೆಂಡ್ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಆದರೆ `ಬಸವಣ್ಣ’ ಚಿತ್ರದ ವಿಷಯದಲ್ಲಿ ಶೀರ್ಷಿಕೆ ಹಾಗೂ ಜಾಹೀರಾತುಗಳು ಕಾಣಿಸಿಕೊಂಡು ಇಕ್ಕಟ್ಟಿಗೆ ಸಿಕ್ಕಿಬಿದ್ದಿದೆ. ಸಾಕಷ್ಟು ವಿರೋಧ ವ್ಯಕ್ತಪಡಿಸಲಾಗಿದೆ. ಆದರೆ ಶ್ರೀನಿವಾಸರಾಜು ಅವರು ಮಾತ್ರ ತಲೆಕೆಡಿಸಿಕೊಳ್ಳದೇ, ಟೈಟಲ್ ಇಲ್ಲದೇ ಬರೀ ಚಿಹ್ನೆ ಬಳಸಿ ಚಿತ್ರ ಬಿಡುಗಡೆ ಮಾಡ್ತೀನಿ ಎಂದಿದ್ದಾರೆ. ಇದೆಲ್ಲದರ ನಡುವೆ ಉಪೇಂದ್ರ ಅವರ ಹೋಮ್ ಪ್ರೊಡಕ್ಷನ್ `ಉಪ್ಪಿ-2′ ಚಿತ್ರೀಕರಣ ಶುರುವಾಗಿದೆ.
ಹರಿಪ್ರಿಯಾಳ ಪೆಟ್ಸ್
`ಉಗ್ರಂ’ ಯಶಸ್ಸಿನ ನಂಟರ ನಟಿ ಹರಿಪ್ರಿಯಾಳಿಗೆ ಕಾನ್‌ಫಿಡೆನ್ಸ್ ಹೆಚ್ಚಾಗಿದೆ. ಸಾಕಷ್ಟು ಅವಕಾಶಗಳು ಬರುತ್ತಿದ್ದರೂ ಒಳ್ಳೆ ಪಾತ್ರವಿದ್ದರೆ ಮಾತ್ರ ನಟಿಸುವೆ ಎಂದು ಹೇಳುತ್ತಾಳೆ. ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟಿಯಾಗಿ ಬೆಳೆದಿರುವ ಹರಿಪ್ರಿಯಾಳಿಗೆ ನಾಯಿಮರಿಗಳೆಂದರೆ ಪ್ರಾಣ. ಅವುಗಳೊಂದಿಗೆ ಕಾಲ ಕಳೆಯುವುದೆಂದರೆ ತುಂಬಾ ಇಷ್ಟವಂತೆ. ನಾಯಿಮರಿಗಳನ್ನು ಮುದ್ದಾಡುತ್ತಾ ತನ್ನ ಸ್ವಂತ ಮಕ್ಕಳೇನೋ ಎಂಬಂತೆ ನೋಡಿಕೊಳ್ಳುವ ಹರಿಪ್ರಿಯಾ ಪ್ರಾಣಿಪ್ರಿಯೆ. ತನ್ನ ಮೆಚ್ಚಿನ ನಾಯಿಮರಿಯನ್ನು ಟ್ರೇನಿಂಗ್‌ಗಾಗಿ ಸ್ಕೂಲಿಗೆ ಕಳುಹಿಸಿಕೊಡುತ್ತಿದ್ದಾಳೆ. ಮೊದಲ ದಿನ ತನ್ನ ಮುದ್ದಿನ ನಾಯಿ ಸ್ಕೂಲಿಗೆ ಹೊರಡಲು ತಯಾರಾದಾಗ ಹರಿಪ್ರಿಯಾ ಅದನ್ನು ಮುದ್ದಾಡುತ್ತಾ, ಮರಿ ಸ್ಕೂಲಿಗೆ ಹೋಗಿ ಬಾ, ಎಂದು ಭಾವುಕಳಾಗಿ ಅಳುತ್ತಿದ್ದಳಂತೆ. ಟ್ವಿಟರ್‌ನಲ್ಲಿ ಫೋಟೋ ಸಮೇತ ಹಾಕಿಕೊಂಡು ತನ್ನ ಅಭಿಮಾನಿಗಳೊಂದಿಗೆ ಈ ವಿಷಯವನ್ನು ಹಂಚಿಕೊಂಡಿರುವ ಹರಿಪ್ರಿಯಾಳನ್ನು ಅನೇಕರು ತುಂಬಾನೆ ಮೆಚ್ಚಿಕೊಂಡಿದ್ದಾರೆ.
ಪವರ್‌ಫುಲ್ ಬಹುಪರಾಕ್
ಶ್ರೀನಗರ ಕಿಟ್ಟಿಯ ಇಪ್ಪತ್ತನೇ ಚಿತ್ರ ಸುನೀ ನಿರ್ದೇಶನದ `ಬಹುಪರಾಕ್’ ಆಗಲಿದೆ. ನಾಯಕಿ ಮೇಘನಾ ರಾಜ್. `ಅಬ್ ಕಿ ಬಾರ್ ಬಹುಪರಾಕ್ ದರ್ಬಾರ್’ ಎಂಬ ಟ್ಯಾಗ್ ಲೈನಿನೊಂದಿಗೆ ಮೋಡಿ ಮಾಡುವಂಥ ಹಾಡುಗಳನ್ನು ಸುನೀ ತಮ್ಮ ಚಿತ್ರಕ್ಕಾಗಿ ಬಳಸಿಕೊಂಡಿದ್ದಾರೆ. `ಬಹು ಪರಾಕ್’ ಚಿತ್ರದ ಹಾಡುಗಳು ಸದಾ ನೆನಪಿನಲ್ಲುಳಿಯುವಂಥದ್ದು ಎಂದು ಆಡಿಯೋ ಬಿಡುಗಡೆ ಮಾಡಲು ಬಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ `ಬಹುಪರಾಕ್’ ಆಲ್ಬಮ್ ನಲ್ಲಿರುವ `ಉಸಿರಾಗುವೆ….’ ಹಾಡು ತುಂಬಾ ಇಷ್ಟವಾಗಿದೆಯಂತೆ. ಸಂಗೀತ ನಿರ್ದೇಶಕ ಭರತ್ ಅವರು ಹೇಳುವಂತೆ ಈ ಚಿತ್ರದ ಹಾಡುಗಳಲ್ಲಿ ವೆರೈಟಿ ಇದ್ದು ಎಲ್ಲ ರೀತಿಯ ಹಾಡುಗಳಿವೆ ಎಂದರು. ಪಿ. ಲಂಕೇಶ್‌ರ `ಗೆದ್ದೇ ಗೆಲ್ತಾನಂತೆ….’ `ಶಿಶುನಾಳ ಶರೀಫ್‌ರ `ನಾನಾರೆಂಬುದು ನಾನಲ್ಲ….’ ಇರುವುದು ವಿಶೇಷ. ಉಳಿದ ಗೀತೆಗಳನ್ನು ನಿರ್ದೇಶಕ ಸುನೀ ಅವರೇ ರಚಿಸಿದ್ದಾರೆ. `ಸಿಂಪಲ್ ಪ್ರೀತಿ’ ಎಂಬ ಹಾಡನ್ನು ಮೇಘನಾ ರಾಜ್ ಹಾಡಿರೋದು ವಿಶೇಷ. ನಾಯಕ ಕಿಟ್ಟಿಗೆ ವಿಭಿನ್ನವಾದ ಪಾತ್ರವಿದ್ದು ಮೂರು ಶೇಡ್ಸ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಡುಗಳು ಈಗಾಗಲೇ ಜನಪ್ರಿಯಗೊಂಡಿವೆ. ಸಿನಿಮಾ ಕೂಡಾ ಹಾಗೆಯೇ ಆಗಲಿ ಎನ್ನುವುದು ಚಿತ್ರತಂಡದ ಆಶಯ.
ಸಾಧಕರಿಗೆ ಪ್ರಶಸ್ತಿ
ಕನ್ನಡ ಚಿತ್ರರಂಗದ ಮೊದಲ ಸಿನಿಮಾ ಪ್ರಚಾರಕರ್ತರಾಗಿ ವೃತ್ತಿ ಜೀವನ ಆರಂಭಿಸಿ ಸಾವಿರಾರು ಕನ್ನಡ ಚಿತ್ರಗಳಿಗೆ ಪಿ.ಆರ್.ಓ. ಆಗಿ ಕೆಲಸ ಮಾಡಿ ಕನ್ನಡ ಸಿನಿಮಾರಂಗದಲ್ಲಿ ಪಿ.ಆರ್.ಓ. ಸಂಸ್ಕೃತಿಯನ್ನು ಬೆಳೆಸಿದ ಸುಧೀಂದ್ರ ಅವರು ಬದುಕಿದ್ದಾಗ ಮಾಧ್ಯಮ ಮತ್ತು ಸಿನಿಮಾರಂಗದ ನಡುವೆ ಸೇತುವೆಯಾಗಿದ್ದರು. ಅವರು ತಮ್ಮ ರಾಘವೇಂದ್ರ ಚಿತ್ರಾಣಿ ಮೂಲಕ ಚಿತ್ರರಂಗದವರಿಗೆ ಪ್ರತಿ ವರ್ಷ ಸನ್ಮಾನ ಮಾಡುವ ಯೋಜನೆ ಹಾಕಿಕೊಂಡಿದ್ದರು. ಅದರಂತೆ ಪ್ರತಿವರ್ಷ ನಡೆಸಿಕೊಂಡೇ ಬರುತ್ತಿದ್ದರು. ಅವರೀಗ ನಮ್ಮೊಂದಿಗಿಲ್ಲದಿದ್ದರೂ ಅವರ ಮಕ್ಕಳಾದ ಸುಧೀಂದ್ರ, ವೆಂಕಟೇಶ್, ಸುನೀಲ್, ವಾಸು ಮೂರೂ ಪ್ರತಿವರ್ಷ ಅಚ್ಚುಕಟ್ಟಾದ ಪ್ರಶಸ್ತಿ ಸಮಾರಂಭ ನಡೆಸಿಕೊಂಡು ಬರುತ್ತಿದ್ದಾರೆ. ಇವರಿಗೆ ಮಾರ್ಗದರ್ಶಕರಾಗಿ ಸುಧೀಂದ್ರರ ಪತ್ನಿ ಪದ್ಮಾ ಅವರು ನಿಂತಿದ್ದಾರೆ. ಈ ವರ್ಷ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಈ ಸಮಾರಂಭ ನಡೆಯಿತು. ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ. ಗಂಗರಾಜು, ಡಾ. ವಿಜಯಾ, ಹಿರೀನಟ ಶಿವರಾಮಣ್ಣ ಹಾಗೂ ವಿಶೇಷವಾಗಿ ಪ್ರಕಾಶ್ ರೈ ಉಪಸ್ಥಿತರಿದ್ದರು. ಕನ್ನಡ ಸಿನಿಮಾರಂಗದಲ್ಲಿ ತೆರೆಯ ಹಿಂದೆ ದುಡಿದಂಥ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಎಲ್ಲರಿಗಿಂತ ಡಿಫರೆಂಟು
`ಒಗ್ಗರಣೆ’ ಚಿತ್ರದ ನಂತರ ನಟಿ ಸಂಯುಕ್ತಾ ಹೊರ್ನಾಡ್ ಸಾಕಷ್ಟು ಸುದ್ದಿಯಾಗುತ್ತಿದ್ದಾಳೆ. ಕನ್ನಡದಲ್ಲೇ ಈ ಮೊದಲು ಸಾಕಷ್ಟು ನಾಯಕಿಯರ ನಡುವೆ ಪೈಪೋಟಿ ನಡೆದಿರುವಾಗ ಸಂಯುಕ್ತಾ ಉಳಿದೆಲ್ಲರಿಗಿಂತ ಹೇಗೆ ವಿಭಿನ್ನ ಎಂದು ಕೇಳಿದಾಗ, ಸಂಯುಕ್ತಾ ಈ ರೀತಿ ಉತ್ತರಿಸುತ್ತಾಳೆ. “ನಾನು ಕಂಡಂತೆ, ಸುಮಾರು ನಾಯಕಿಯರು ಒಂದಷ್ಟು ಚಿತ್ರ ಮಾಡಿ ಲೈಫ್‌ನಲ್ಲಿ ಸೆಟಲ್ ಆಗಿಬಿಡುತ್ತಾರೆ. ಆದರೆ ನಾನು ಇದೇ ರಂಗದಲ್ಲಿ ಕಡೆಯತನಕ ಇರಬೇಕೆಂದು ಡಿಸೈಡ್ ಮಾಡಿದ್ದೀನಿ. ಹಾಗಂತ ಸುಮ್ಮನೆ ಬಂದು ಹೋಗೋ ಪಾತ್ರ ಖಂಡಿತಾ ಮಾಡೋದಿಲ್ಲ. ಕ್ವಾಂಟಿಟಿಗಿಂತ ನನಗೆ ಕ್ವಾಲಿಟಿ ಮುಖ್ಯ. ಇನ್ನು ಉಳಿದ ನಾಯಕಿಯರಿಗೆ ಹೋಲಿಸಿ ನನ್ನ ಲುಕ್ಸ್ ಬಗ್ಗೆ ಹೇಳುವುದಾದರೆ ನನಗೆ ಅಭಿನಯ ಗೊತ್ತಿದೆ. ಅಷ್ಟೇ ಗ್ಲಾಮರ್ ಆಗಿ ಕಾಣಬಲ್ಲೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರೋದ್ರಿಂದ ಎಂಥದ್ದೇ ಪಾತ್ರ ಕೊಡಲಿ, ಅದಕ್ಕೆ ನ್ಯಾಯ ಸಲ್ಲಿಸಬಲ್ಲೆ. ಆರ್ಟ್, ಕಮರ್ಷಿಯಲ್ ಯಾವುದೇ ಇರಲಿ ಪಾತ್ರದಲ್ಲಿ ಸತ್ವವಿರಬೇಕಷ್ಟೆ,” ಎನ್ನುತ್ತಾಳೆ ಸಂಯುಕ್ತಾ.