ಟಿ.ವಿ.ಯಲ್ಲಿ ಟೋನಿ ಮಹಿಲಾಲ್‌ರ ಅಡುಗೆ ಕಾರ್ಯಕ್ರಮ ಬರುತ್ತಿತ್ತು. ಅವರ ಫುಡ್ ಪ್ರೋಗ್ರಾಮ್ ಬಹಳ ಪ್ರಸಿದ್ಧವಾಗಿತ್ತು. ಅವರ ಪ್ರೋಗ್ರಾಂ ಶುರುವಾಗುವ ಸಮಯ ಮತ್ತು ನಾನು ಊಟ ಮಾಡುವ ಸಮಯ ಒಂದೇ ಆಗಿರುತ್ತಿದ್ದು ಟೋನಿಯವರು ಸ್ವಾದಿಷ್ಟ ಪರೋಟಾಗಳನ್ನು ಮಾಡುತ್ತಿದ್ದರೆ ಅದು ನಮ್ಮ ತ್ರೀಡಿ ಟಿ.ವಿ.ಯಿಂದ ಸೀದಾ ನನ್ನ ತಟ್ಟೆಯಲ್ಲಿ ಬಂದು ಬೀಳುವಂತೆ ಆಗುತ್ತಿತ್ತು. ನನ್ನ ಬೋರಿಂಗ್ ಸಾಂಸಾರಿಕ ಜೀವನದಲ್ಲಿ ಈ ಮಧ್ಯಾಹ್ನದ ಸಮಯ ಆಕರ್ಷಕಾವಾಗಿರುತ್ತಿತ್ತು. ಆ ಸಮಯ ನನಗಾಗಿಯೇ ಮೀಸಲು. ಗಂಡ ಹಾಗೂ ಮಕ್ಕಳಿಗೆ ಬೆಳಗಿನ ಟಿಫಿನ್, ಕಾಫಿ ಇತ್ಯಾದಿ ಕೊಟ್ಟು ಡಿಸ್ ಪ್ಯಾಚ್ ಮಾಡಿಬಿಟ್ಟರೆ ಇತರೆ ಸಣ್ಣಪುಟ್ಟ ಕೆಲಸಗಳನ್ನು ಬೇಗ ಮುಗಿಸುವ ಅಗತ್ಯವಿರಲಿಲ್ಲ. ಮನೆಯಲ್ಲಿನ ವೃದ್ಧರು ಮಂಚದಲ್ಲಿ ಗೊರಕೆ ಹೊಡೆಯುತ್ತಿರುತ್ತಿದ್ದರು. ಆ ಒಂದು ಗಂಟೆ ಸಮಯ ನನಗೆ ಅಮೂಲ್ಯವಾಗಿ ಇರುತ್ತಿತ್ತು. ಊಟದ ಸ್ವಾದ ಸವಿಯುತ್ತಲೇ ನಾನು ಟೋನಿಯವರೊಂದಿಗೆ ಇರುತ್ತೇನೆ.
ಈಗ ನಿಮಗೆ ಅರ್ಥವಾಗಿರಬಹುದು ನಾನೊಬ್ಬ ಸಾಮಾನ್ಯ ಹೌಸ್ ವೈಫ್ ಎಂದು. ಕನ್ನಡದಲ್ಲಿ ಬರೆಯುವಾಗ ಇವಳೆಷ್ಟು ಇಂಗ್ಲಿಷ್ ಪದಗಳನ್ನು ಉಪಯೋಗಿಸುತ್ತಾಳೆ ಎಂದುಕೊಳ್ಳುತ್ತೀರಿ. ಅದು ನಿಜ. ಆದರೆ ಕೊಂಚ ಯೋಚಿಸಿ. ಒಂದು ವೇಳೆ ನಾನು ಹೌಸ್ ವೈಫ್ ಬದಲು `ಗೃಹಿಣಿ’ ಎಂದು ಹೇಳಿದರೆ ನೀವು ಅಷ್ಟೇ ಆದರದಿಂದ ನನ್ನತ್ತ ನೋಡುತ್ತೀರಾ? ಇಲ್ಲ ತಾನೇ? ಇನ್ನೊಂದು ಉತ್ತಮ ಪದ `ಗೃಹಲಕ್ಷ್ಮಿ’ ನನಗೆ ಹೊಳೆಯುತ್ತಿದೆ. ನಿಮಗೆ ಅದು ಇಷ್ಟವಿದೆಯೇ? ಆದರೆ ನನಗಂತೂ ಈ ಶಬ್ದ ಮಹಿಳೆಯರನ್ನು ಮೂರ್ಖರನ್ನಾಗಿಸುವ ಪುರುಷರ ಒಳಸಂಚೆಂದು ಅನ್ನಿಸುತ್ತದೆ. ಯಾವ ಗೃಹಿಣಿಯರತ್ತ ಒಮ್ಮೆಯಾದರೂ ಲಕ್ಷ್ಮಿ ತಿರುಗಿ ನೋಡುವುದಿಲ್ಲವೋ ಅಂತಹವರನ್ನು `ಗೃಹಲಕ್ಷ್ಮಿ’ ಎಂದು ಹೇಗೆ ಕರೆಯುವುದು?
ಇಂತಹುದೇ ಡೋಂಗಿ ವಾಸನೆ ಕೊಡುವ ಹಲವು ಶಬ್ದಗಳಿವೆ. ಉದಾ: ಗೃಹ ಸ್ವಾಮಿನಿ. ತನ್ನ ದಿನನಿತ್ಯದ ಗೃಹಕೃತ್ಯಗಳ ಖರ್ಚಿಗೆ ತನ್ನ ಒಡೆಯನ ಜೇಬನ್ನೇ ಕತ್ತರಿಸುವಂತಹವಳು `ಗೃಹ ಸ್ವಾಮಿನಿ’ ಹೇಗಾದಾಳು? ಹೌಸ್ ವೈಫ್ ಪದದಲ್ಲಿಯೇ `ಧಮ್’ ಇದೆ. ಆದರೆ ಮಧ್ಯಾಹ್ನ 2 ಗಂಟೆಗೆ ಸರಿಯಾಗಿ ನಮ್ಮ ಆದರಣೀಯರಾದ ಹೌಸ್ ವೈಫ್‌ಗಳ ಸೈನ್ಯ ತಂತಮ್ಮ ಟಿವಿಗಳ ಎದುರು ಕುಳಿತುಬಿಡುತ್ತಿದ್ದರು. ಕೈಯಲ್ಲಿ ರೈಟಿಂಗ್ ಪ್ಯಾಡ್ ಮತ್ತು ಪೆನ್ ಹಿಡಿದು ನಾನೂ ಸಹ ಸೋಫಾ ಮೇಲೆ ಕಾಲು ಮಡಿಚಿಕೊಂಡು ಬಹಳ ಅಕ್ಕರೆಯಿಂದ ಅಡುಗೆ ಮಾಡುವ ವಿಧಾನ ಬರೆದುಕೊಳ್ಳುತ್ತೇನೆ.
ಟೋನಿ ಹೇಳುತ್ತಾರೆ, “ಇಂದು ನಾನು ನಿಮಗೆ ಟಿಂಬಕ್ಟೂನ ಜನಪ್ರಿಯ ಗ್ಲೋಬಲ್ ಸಲಾಡ್ ತಯಾರಿಸುವ ವಿಧಾನ ಹೇಳುತ್ತೇನೆ. ಈ ಸಲಾಡ್ ಬಹಳ ಪೌಷ್ಟಿಕಾಂಶಗಳಿಂದ ಕೂಡಿದೆ. ಮಕ್ಕಳು ಇದನ್ನು ಬಹಳ ಇಷ್ಟಪಡುತ್ತಾರೆ.”
ನನ್ನ ದೃಷ್ಟಿ ಟೋನಿಯವರ ನೇಲ್ ಪಾಲಿಶ್ ಮೇಲಿದೆ. ಅವರು ಪ್ರೋಗ್ರಾಮ್ ಗೆ ಮುಂಚೆ ಖಂಡಿತಾ ಯಾವುದಾದರೂ ನೇಲ್ ಆರ್ಟ್ ಪಾರ್ಲರ್‌ಗೆ ಹೋಗಿರಬೇಕು.
ಇಂದು ಅವರು ನೀಲಿ ಬಣ್ಣದ ನೇಲ್ ಪಾಲಿಶ್ ಮತ್ತು ಕಪ್ಪು ಬಣ್ಣದ ಲಿಪ್‌ಸ್ಟಿಕ್ ಹಾಕಿದ್ದರು. ನನ್ನ ಮೆದುಳಿನ `ಗ್ರೇ ಸೆಲ್ಸ್’ನಿಂದಾಗಿ ಅಥವಾ ನನ್ನ ಹಳೆಯ ದೃಷ್ಟಿಕೋನದಿಂದಾಗಿ ಟೋನಿಯವರ ಅಸಾಧಾರಣ, ಆಧುನಿಕ ಸೌಂದರ್ಯ ವರ್ಣಿಸಲಾಗುತ್ತಿಲ್ಲ. ಹಿಂದಿನ ಕಾಲದ ಕವಿಗಳು ಗುಲಾಬಿ ದಳಗಳಂತಹ ತುಟಿಗಳಿಗೆ ಹುಚ್ಚರಾಗುತ್ತಿದ್ದರು. ಎದುರಿಗಿರುವ ಸುಂದರಿಯ ನೀಲಿ ಉಗುರುಗಳು ಹಾಗೂ ಕಪ್ಪು ತುಟಿಗಳನ್ನು ಕಂಡು ಅವರೇನು ಹೇಳುತ್ತಿದ್ದರೋ?
ಆದರೆ ಯುವ ಪೀಳಿಗೆಯವರು ಟೋನಿಯವರ ಅಡುಗೆ ಹಾಗೂ ಅವರ ಮೇಕಪ್ ಮತ್ತು ಉಡುಗೆಗೂ ಆಕರ್ಷಿತರಾಗಿದ್ದಾರೆ ಎಂಬುದು ಅವರ ಪ್ರೋಗ್ರಾಮ್ ನಡುವೆ ಬರುವ ಫೋನ್ ಕರೆಗಳಿಂದ ತಿಳಿಯುತ್ತಿತ್ತು. ಸೌಂದರ್ಯ ನೋಡುವವರ ಕಣ್ಣಲ್ಲಿರುತ್ತದೆ. ಇಂಗ್ಲಿಷರು ಹಾಗೆ ಹೇಳಿರುವುದರಿಂದ ಅದು ಸತ್ಯವಿರಲೇಬೇಕು.
ಟೋನಿಯರು ಹಾಗೂ ಅತ್ತೆ ಸೊಸೆ ಸೀರಿಯಲ್‌ನ ಮಹಿಳೆಯರು ನಮ್ಮಂತಹ ಮಧ್ಯಮ ವರ್ಗದ ಗೃಹಿಣಿಯರ ಸ್ಥಾನಮಾನವನ್ನು ಹೆಚ್ಚಿಸಿದ್ದಾರೆ. ನಾನು ಅವರನ್ನು ನೋಡಿದಾಗ ನಾನೂ ಅವರಂತೆಯೇ ಸುಂದರ ಸೀರೆ, ಸುಂದರ ಹೇರ್ ಸ್ಟೈಲ್, ಮ್ಯಾಚಿಂಗ್‌ಜ್ಯೂವೆಲರಿ ಧರಿಸಿ ಕೆಂಪು ಗಿಣಿಯ ಕೊಕ್ಕಿನಂತಹ ಲಿಪ್‌ಸ್ಟಿಕ್ ಹಾಕಿ ಹಾವಿನ ಆಕಾರದ ಬಿಂದಿಯನ್ನು ಹಣೆಗಿಟ್ಟು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಅಡುಗೆ ಮಾಡಬೇಕು ಅನ್ನಿಸುತ್ತದೆ. ಇವರೆಲ್ಲರನ್ನು ಕಂಡು ನನಗೆ `ಫೀಲ್ ಗುಡ್’ ಫ್ಯಾಕ್ಟರ್‌ಅನುಭವವಾಗುತ್ತದೆ.
ಟೋನಿಯವರು ಮುಂದಿನ ವಿಧಾನ ಹೇಳುತ್ತಿದ್ದರು, “ಒಂದು ಒಳ್ಳೆಯ, ದೊಡ್ಡ ಕುಂಬಳಕಾಯಿ ತೆಗೆದುಕೊಳ್ಳಿ. ಅದರ ಸಿಪ್ಪೆ ಕತ್ತರಿಸಿಕೊಂಡು ಉಳಿದ ಕುಂಬಳಕಾಯಿ ಎಸೆದುಬಿಡಿ. ಸಿಪ್ಪೆಯನ್ನು ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಿ ಅದಕ್ಕೆ ಕಡೆದ ಚೀಸ್, ಫ್ರೆಶ್ ಕ್ರೀಂ, ತೆಳುವಾದ ಕಿತ್ತಳೆ ಸಿಪ್ಪೆ, ಬಾದಾಮಿ, ಗೋಡಂಬಿ ಚೂರುಗಳನ್ನು ಬೆರೆಸಿ. ಇದಕ್ಕೆ ಚಾಟ್ ಮಸಾಲೆ ಹಾಕಿ ಚೆನ್ನಾಗಿ ಗಾರ್ನಿಶ್ ಮಾಡಿ. ಇನ್ನು ಬೆಳ್ಳಿಯ ಬಟ್ಟಲಿನಲ್ಲಿ ಹಾಕಿ ತಣ್ಣಗೆ ಮಾಡಲು ಫ್ರಿಜ್‌ನಲ್ಲಿಡಿ. ರುಚಿ ರುಚಿಯಾದ ಸಲಾಡ್ ಚಿಟಿಕೆ ಹೊಡೆಯುವಷ್ಟರಲ್ಲಿ ತಯಾರು.”
ನಾನಂತೂ ಆ `ಚಮತ್ಕಾರಿಕ,’ `ಉತ್ತಮ’ ಸಲಾಡ್ ಕಂಡು ನಿಬ್ಬೆರಗಾದೆ. ಇಷ್ಟು ವರ್ಷ ನಾನು ವ್ಯರ್ಥವಾಗಿ ಬರೀ ಹಪ್ಪಳಗಳನ್ನು ಲಟ್ಟಿಸಿಕೊಂಡೇ ಇದ್ದೆ. ಇಷ್ಟು `ಸರಳ’ವಾದ, `ಅಗ್ಗ’ವಾದ ಸಲಾಡ್ ತಯಾರಿಸುವ `ಬುದ್ಧಿ’ ಬರಲೇ ಇಲ್ಲ. ಈಗ ನಾನು ನನ್ನ ಯಜಮಾನ್ರು ಬರುವುದನ್ನೇ ಕಾಯತೊಡಗಿದೆ. ನನ್ನ `ಫೀಲ್ ಗುಡ್’ ಫ್ಯಾಕ್ಟರ್ ಇನ್ನಷ್ಟು ಸದೃಢವಾಗುತ್ತಿತ್ತು.
ನನ್ನವರು ಮನೆಗೆ ಬಂದಕೂಡಲೇ ನಾನು ಪ್ರೀತಿಯಿಂದ ಹೇಳಿದೆ, “ರೀ, ನಿಮಗೆ ದಿನ ದಾಲ್, ರೊಟ್ಟಿ ತಿಂದೂ ತಿಂದೂ ಬೇಸರ ಆಗಿರಬೇಕಲ್ವಾ? ನಾನು ನಿಮಗೆ ಹಾಗೂ ಮಕ್ಕಳಿಗೆ ಸರ್‌ಪ್ರೈಸ್ ಡಿಶ್ ತಯಾರಿಸೋಣಾಂತಿದ್ದೀನಿ.”
ನನ್ನವರು 2 ನಿಮಿಷ ರೆಪ್ಪೆ ಮಿಟುಕಿಸದೇ ನನ್ನನ್ನೇ ನೋಡುತ್ತಾ ನಿಂತರು. ಮನಸ್ಸಿನಲ್ಲಿ ಏನೋ ಅನುಮಾನ ಮೂಡಿತ್ತು. ನಂತರ ಅವರು ಸಾಮಾನ್ಯ ಸ್ಥಿತಿಗೆ ಬಂದರು.
ನಾವು ಮುಗ್ಧ ಗೃಹಿಣಿಯರು ಪತಿಗೆ ನೇರವಾದ ಸರಳ ಪ್ರಶ್ನೆಗಳನ್ನು ಕೇಳಿದರೆ ಅವರು ಇನ್‌ಕಂ ಟ್ಯಾಕ್ಸ್ ಆಫೀಸರ್ ಎದುರಿಗೆ ಕೂತಿದ್ದಂತೆ ಮನೋವೈಜ್ಞಾನಿಕ ಒತ್ತಡಕ್ಕೆ ಸಿಲುಕಿಬಿಡುತ್ತಾರೇಕೋ? ನಾನಂತೂ ಅವರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇನೆ. ನಾನು ಹೇಳಿದೆ, “ಇಲ್ಲಿ ಕೇಳ್ರೀ, ನನ್ನ ಹತ್ತಿರ `ಟಿಂಬಕ್ಟೂ ಗ್ಲೋಬಲ್ ಸಲಾಡ್’ ಮಾಡೋಕೆ ಕುಂಬಳಕಾಯಿ ಸಿಪ್ಪೆ ಇತ್ಯಾದಿ ಸಾಮಗ್ರಿಗಳಿವೆ. ನೀವು ಬರೀ ಒಂದು ಬೆಳ್ಳಿಯ ಬೌಲ್, ಕ್ರೀಂ, ಚೀಸ್, ಡ್ರೈಫ್ರೂಟ್ಸ್ ಇತ್ಯಾದಿ ಸಣ್ಣಪುಟ್ಟ ಸಾಮಾನು ತಂದುಕೊಡಿ ಸಾಕು. ಹೆಚ್ಚೇನಿಲ್ಲ. 3-4 ಸಾವಿರ ರೂಪಾಯಿ ಆಗಬಹುದು ಅಷ್ಟೇ.”
ಹೆಂಡತಿಗೆ ಕೋಪ ತರಿಸಿದರೆ ತಮಗೇ ಆಪತ್ತು ಎಂದರಿತ ಯಜಮಾನ್ರು ಧೈರ್ಯ ತಾಳಿ, “ಆಯ್ತು, ಖಂಡಿತಾ ತರ್ತೀನಿ. ಹೊಸ ಹೊಸ ಅಡುಗೆಗಳನ್ನು ಮಾಡಲೇಬೇಕು. ನಾನು ಒಂದು ಕೆಲಸ ಮಾಡ್ತೀನಿ. ನೀನು ಮಾಡೋ ಸಲಾಡ್‌ಗೆ ನಾನು ನಮ್ಮ ಆಫೀಸ್‌ನಲ್ಲಿ ಲೋನ್‌ಗೆ ಅಪ್ಲಿಕೇಶನ್ ಹಾಕ್ತೀನಿ. ಲೋನ್ ಸ್ಯಾಂಕ್ಷನ್ ಆದ ಕೂಡಲೇ ನೀನು `ಒಳ್ಳೆಯ,’ `ದುಬಾರಿಯಾದ’ ಸೀರೆ ಉಟ್ಟು ಬಹಳ `ಉತ್ತಮ’ವಾದ, `ಗ್ಲೋಬಲ್’ ಆದ ಸಲಾಡ್ ಮಾಡಿಕೊಡು. ಆಯ್ತಾ?” ಎಂದರು.