ಶೋಕಿಯೋ, ಅನಿವಾರ್ಯವೋ ಈಗ ವಿವಾಹಿತ ಮಕ್ಕಳು ತಂದೆ ತಾಯಿಯರಿಂದ ಬೇರೆಯಾಗಿ ತಮ್ಮದೇ ಬೇರೆ ಮನೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಒಮ್ಮೆ ಅತ್ತೆ ಸೊಸೆಯ ಮನೆಗೆ ಬಂದರೆ, ಇನ್ನೊಮ್ಮೆ ಸೊಸೆ ಅತ್ತೆಯ ಮನೆಗೆ ಹೋಗುತ್ತಾಳೆ. ಹೊಸ ಸೊಸೆಯ ಹೊಸ ಸಂಸಾರದಲ್ಲಿ ಅತ್ತೆ ಮೊದಲ ಸಲ ಬರುವುದು ತಿಳಿದೋ ತಿಳಿಯದೆಯೋ ಮುಂದೆ ಪರಸ್ಪರ ಸಂಬಂಧ ಚೆನ್ನಾಗಿರುವುದಕ್ಕೆ ಅಥವಾ ಹಾಳಾಗುವುದಕ್ಕೆ ಅಡಿಪಾಯವಾಗುತ್ತದೆ. ಈ ನಾಜೂಕು ಸಂಬಂಧದ ಅಡಿಪಾಯ ಬಲಗೊಳಿಸುವುದರಲ್ಲಿ ಅತ್ತೆ ಸೊಸೆ ಇಬ್ಬರ ಪಾತ್ರ ಮುಖ್ಯವಾಗಿದೆ.

ತಿಳಿವಳಿಕೆ ಇಲ್ಲದ ಮತ್ತು ಕಡಿಮೆ ತಿಳಿವಳಿಕೆಯ ಅತ್ತೆ ಮತ್ತು ಸೊಸೆಯ ಸಂಬಂಧದಲ್ಲಿ ಒಂದು ಅದೃಶ್ಯ ಅಂತರ ಇರುತ್ತದೆ. ಎರಡು ಕಡೆಯಿಂದ ಹೃದಯದ ಸಂಬಂಧ ಪೂರ್ಣ ತೆರೆದರೆ, ಔಪಚಾರಿಕತೆಯ ಸ್ಥಳದಲ್ಲಿ ಆತ್ಮೀಯತೆಯ ತಂತಿಯನ್ನು ಜೋಡಿಸಿದರೆ, ಈ ಸಂಬಂಧ ಅತ್ತೆ ಸೊಸೆಯ ಮಟ್ಟದಿಂದ ಇಳಿದು ತಾಯಿ ಮಗಳ ಸಂಬಂಧವಾಗಬಹುದು. ಹಾಗೊಂದು ವೇಳೆ ಒಂದು ಕಡೆಯ ಬಾಗಿಲು ಮುಚ್ಚಿದ್ದರೂ ಇನ್ನೊಂದು ಕಡೆಯವರು ನಿರಾಶರಾಗಿ ಹಿಂದೆ ಸರಿಯುವಂತೆ ಮಾಡುತ್ತದೆ.

ಹೃದಯದ ಬಾಗಿಲನ್ನು ತೆರೆಯುವ ಕೆಲಸ ಮೊದಲ ಸಲ ಬಂದಾಗಲೇ ಆರಂಭವಾದರೆ ವೈಮನಸ್ಸಿಗೆ ಯಾವುದೇ ಕಾರಣ ಇರುವುದಿಲ್ಲ. ಅತ್ತೆ ಸೊಸೆಯರು ತಂತಮ್ಮ ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ತಂತಮ್ಮ ಪಾತ್ರಕ್ಕೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಬೇಕು. ಸೊಸೆಯ ಮನೆಗೆ ಅತ್ತೆ ಮೊದಲ ಸಲ ಪ್ರವೇಶ ಮಾಡಿದಾಗ, ಅತ್ತೆ ಸೊಸೆ ಇಬ್ಬರೂ ಯಾವ ಯಾವ ಸಂಗತಿಗಳ ಬಗ್ಗೆ ಗಮನ ಕೊಡಬೇಕು ಎಂದು ತಿಳಿದುಕೊಳ್ಳೋಣ :

ಸೊಸೆ

ಅತ್ತೆಯ ಆಗಮನನ್ನು ಹೊರೆ ಎಂದು ಭಾವಿಸಿದಿರಿ. ಹುಬ್ಬುಗಂಟಿಕ್ಕಬೇಡಿ. ನಿಮ್ಮ ತಾಯಿ ಬಂದಾಗ ಹೇಗೆ ಸ್ವಾಗತಿಸುತ್ತೀರೋ, ಅದೇ ರೀತಿ ಅತ್ತೆಯನ್ನು ಪ್ರೀತಿ, ಆದರ ಮತ್ತು ಆತ್ಮೀಯತೆಯಿಂದ ಸ್ವಾಗತಿಸಿ.

ಅತ್ತೆಯ ಕೋಣೆ ಮತ್ತು ಬೀರುಗಳನ್ನು ಚೆನ್ನಾಗಿ ಇಡಿ. ನಿಮ್ಮ ಮನೆಗೆ ಮಹಡಿಯೂ ಇದ್ದರೆ ಅತ್ತೆಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಅವರಿಗೆ ನೆಲ ಅಂತಸ್ತಿನಲ್ಲೇ ಕೋಣೆ ಕೊಡಿ.

ಅತ್ತೆಯ ಅನುಕೂಲಕ್ಕೆ ಬೇಕಾದ ಅವಶ್ಯಕ ವಸ್ತುಗಳನ್ನು ಇಟ್ಟಿರಿ. ಅಂದರೆ ಅವರು ಸಕ್ಕರೆ ಬಳಸುವುದಿಲ್ಲವಾದರೆ ಶುಗರ್‌ಫ್ರೀ ತಂದಿಡಿ. ಸಿನಿಮಾಗಳಲ್ಲಿ ಆಸಕ್ತಿ ಇದ್ದರೆ ಕೆಲವು ಸಿನಿಮಾಗಳ ಸಿಡಿಗಳನ್ನು ತನ್ನಿ. ಅಲ್ಲದೆ, ಅವರಿಗೆ ಬೇಕಾದ ಎಣ್ಣೆ, ಸಾಬೂನು, ಟೂಥ್‌ ಪೇಸ್ಟ್ ಇತ್ಯಾದಿ ಬಳಕೆಯ ವಸ್ತುಗಳನ್ನು ತಂದಿಡಿ. ಅವರ ಸ್ವಭಾವ ಮತ್ತು ದಿನಚರಿಯ ಬಗ್ಗೆ ನಿಮ್ಮ ಪತಿಯನ್ನು ಕೇಳಿ ತಿಳಿದುಕೊಳ್ಳಿ. ಇದರಿಂದ ಅವರಿಗೆ ಬೇಕಾದ್ದನ್ನು ತಂದಿಡಲು ಏರ್ಪಾಡು ಮಾಡಬಹುದು.

ಅತ್ತೆ ಬರುವ ಮೊದಲೇ ಅವರಿಗಿಷ್ವವಾದ ಅಡುಗೆಯನ್ನು ಮಾಡಿಡಿ. ಅವರು ಪಥ್ಯದ ಊಟ ಮಾಡುವವರಾದರೆ ಅದನ್ನು ಗಮನದಲ್ಲಿಟ್ಟುಕೊಂಡು ಅಡುಗೆ ಮಾಡಿ.

ಅವರು ನಿಮ್ಮ ಮನೆಯಲ್ಲಿರುವುದರಿಂದ ನಿಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಬಂದಿದೆ ಎಂಬ ಭಾವನೆ ಅವರಿಗೆ ಬರುವ ಹಾಗೆ ನಡೆದುಕೊಳ್ಳಬೇಡಿ.

ಅವರು ಬರುತ್ತಲೇ ಮನೆಯ ಪೂರ್ಣ ಜವಾಬ್ದಾರಿಯನ್ನು ಅವರ ಮೇಲೆ ಹಾಕಿ ನೀವು ಜವಾಬ್ದಾರಿಯಿಂದ ಮುಕ್ತರಾಗಬೇಡಿ. ಮನೆಯ ಕೆಲಸಗಳಿಂದ ಅವರನ್ನು ಬಹಳ ದೂರ ಇಟ್ಟು, ಅವರಿಗೆ ನೀವು ಪರಕೀಯರು ಅನ್ನಿಸುವಂತೆ ಮಾಡಬೇಡಿ. ಎರಡಲ್ಲೂ ಸಮತೋಲನ ಸಾಧಿಸುತ್ತಾ ಮಧ್ಯದ ಹಾದಿಯನ್ನು ಅನುಸರಿಸಿದರೆ ಅತ್ತೆಗೆ ಆತ್ಮೀಯ ಭಾವನೆ ಬರುತ್ತದೆ, ನಿಮಗೂ ಸಹಾಯ ಸಿಗುತ್ತದೆ.

ನೀವು ನೌಕರಿಗೆ ಹೋಗುತ್ತಿರುವಿರಾದರೆ ಅತ್ತೆ ಇರುವತನಕ ಅಲ್ಲದಿದ್ದರೂ 1-2 ದಿನ ರಜಾ ತೆಗೆದುಕೊಂಡರೆ ಒಳ್ಳೆಯದು.

ಅತ್ತೆಯ ಸ್ವಭಾವ ಮತ್ತು ಆಸೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ ಮತ್ತು ಅವರ ಆಸೆಗಳನ್ನು ಪೂರೈಸಲು ಆದಷ್ಟು ಪ್ರಯತ್ನಪಡಿ.

ಅತ್ತೆಯ ಜೊತೆ ವಿಚಾರಗಳು, ಜೀವನಶೈಲಿ, ಇಷ್ಟಗಳು ಇವುಗಳ ಬಗ್ಗೆ ಭಿನ್ನಾಭಿಪ್ರಾಯವಾದರೆ ಅದನ್ನು ಮನಸ್ಸಿನ ಭೇದ ಎಂದು ತಿಳಿಯಬೇಡಿ. ಮೀನಾಮೇಷ ಎಣಿಸುವುದು ಅಥವಾ ಮುನಿಸಿಕೊಳ್ಳುವುದರ ಬದಲು ಬಿಚ್ಚು ಮನಸ್ಸಿನಿಂದ ಚರ್ಚೆ ಮಾಡಿ. ಅವರ ಕೆಲವು ಮಾತು ಕೇಳಿ ಮತ್ತು ಒಪ್ಪಿಕೊಳ್ಳಿ, ಕೆಲವು ನಿಮ್ಮದನ್ನು ಹೇಳಿ. ತಿಳಿವಳಿಕೆಯಿಂದ ನಿಮಗಾಗಿ ಸ್ಪೇಸನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಮತ್ತು ಅವರಿಗೂ ಅವರ ಸ್ಪೇಸನ್ನು ಕೊಡಿ.

ಪ್ರತಿ ಹೆಜ್ಜೆಗೂ ಇದು ಅವರ ಮನೆಯಲ್ಲ, ನಿಮ್ಮ  ಮನೆ ಎಂಬ ಅನುಭವ ಅವರಿಗೆ ಆಗದಂತೆ ನೋಡಿಕೊಳ್ಳಿ.

ಅತ್ತೆ ತಮ್ಮ ಹಿರಿತನ ಮತ್ತು ಅನುಭವದ ಆಧಾರದಿಂದ ನಿಮಗೆ ಕೆಲವು ಸಲಹೆಗಳನ್ನು ಕೊಟ್ಟರೆ ನೀವು ಅದನ್ನು ಪಾಲಿಸದೇ ಇದ್ದರೂ ಪರವಾಗಿಲ್ಲ, ಅವುಗಳ ಬಗ್ಗೆ ವಿಚಾರ ಮಾಡಿ.

ನಿಮ್ಮ ಮನೆಯಲ್ಲಿರುವಾಗ ಅವರಿಗೆ ಬೋರ್‌ ಆಗಬಾರದು.

ಬಿಡುವು ಸಿಕ್ಕಾಗ ಅತ್ತೆಯನ್ನು ಅವರ ಮನೆಯವರ ಸ್ವಭಾವ, ಇಷ್ಟಗಳು, ವಿಚಾರಗಳು, ದಿನಚರಿ ಇತ್ಯಾದಿಗಳ ಬಗ್ಗೆ ಕೇಳಿ ತಿಳಿದುಕೊಳ್ಳಿ. ಅದರಲ್ಲೂ ವಿಶೇಷವಾಗಿ ನಿಮ್ಮ ಪತಿಯ ಬಾಲ್ಯ, ಶಾಲೆ, ಕಾಲೇಜು, ಸ್ನೇಹಿತರು, ಹವ್ಯಾಸಗಳ ಬಗ್ಗೆ ಚರ್ಚಿಸಿ. ಅವರಿಗೂ ಖುಷಿಯಾಗುತ್ತದೆ.

ಸಮಯ ಇದ್ದರೆ ನಿಮ್ಮ ಮನೆಯ ಹತ್ತಿರ ಇರುವ ಪ್ರೇಕ್ಷಣೀಯ ಸ್ಥಳಗಳಿಗೆ ಅವರನ್ನು ಕರೆದುಕೊಂಡು ಹೋಗಿ.

ನಿಮ್ಮ  ನೆರೆಹೊರೆ, ಸ್ನೇಹಿತರಿಗೆ ನಿಮ್ಮ ಅತ್ತೆಯ ಪರಿಚಯ ಮಾಡಿಸಿ.

ಅತ್ತೆ ಹೊರಡುವಾಗ `ಸಧ್ಯ ಹೋಗ್ತಾರಲ್ಲ’ ಎಂಬ ಸಂತೋಷ ತೋರಿಸಬೇಡಿ. ಅವರಿಗೆ ಏನಾದರೂ ಉಡುಗೊರೆ ಕೊಡಿ.

ಅವರು ಹೋಗುವಾಗ ನಿಮ್ಮ ನಡವಳಿಕೆ ಮತ್ತು ಸ್ವಭಾವಕ್ಕೆ ಸಂಬಂಧಿಸಿದಂತೆ ಒಳ್ಳೊಳ್ಳೆಯ ನೆನಪುಗಳನ್ನು ಕೊಂಡೊಯ್ಯುವ ಹಾಗೆ ನಡೆದುಕೊಳ್ಳಿ.

ಅತ್ತೆ

ಮೊದಲ ಸಲ ಹೊಸದಾಗಿ ಬಂದಿರುವ ಸೊಸೆಯ ಮನೆಗೆ ಹೋಗುತ್ತಿರುವಿರಿ. ಆದ್ದರಿಂದ ಸೊಸೆಗೆ ಏನಾದರೂ ಉಡುಗೊರೆ ತೆಗೆದುಕೊಂಡು ಹೋಗಿ.

ಸೊಸೆಯ ಮನೆಗೆ ಪರೀಕ್ಷಕಳೆಂಬಂತೆ ಹೋಗಬೇಡಿ, ತಾಯಿಯಾಗಿ ಹೋಗಿ.

ನಿಮ್ಮಲ್ಲಿ ಪೂರ್ವಾಗ್ರಹಗಳಿದ್ದರೆ ಅವನ್ನು ತ್ಯಜಿಸಿ ಸೊಸೆಯ ಮನೆಗೆ ಹೋಗಿ.

ಮನೆಗೆ ಹೋಗುತ್ತಿದ್ದಂತೆ ಯಜಮಾನಿಯ ಹಾಗೆ ಹಕ್ಕು ಚಲಾಯಿಸಲು ಹೋಗಬೇಡಿ.

ಅದು ಸೊಸೆಯ ಮನೆ ಎಂದು ನೆನಪಿಟ್ಟುಕೊಳ್ಳಿ, ನೀವು ಅಲ್ಲಿ ಮರ್ಯಾದೆ ಪಡೆಯುತ್ತೀರಿ. ನಿಮ್ಮ ಮಿತಿಗಳನ್ನು ಗಮನದಲ್ಲಿಟ್ಟುಕೊಳ್ಳಿ. ಬದಲಾಯಿಸಲು ನೋಡಬೇಡಿ. ಅವಳಿಗೆ ತನ್ನ ವ್ಯಕ್ತಿತ್ವ ಉಳಿಸಿಕೊಳ್ಳಲು ಬಿಡಿ.

ನೆರೆಹೊರೆ ಮತ್ತು ಸ್ನೇಹಿತರು ಇರುವಾಗ ಸೊಸೆಯ ಮರ್ಯಾದೆಯ ಬಗ್ಗೆ ಗಮನಕೊಡಿ.

ಮಗ ಸೊಸೆಯ ದಿನಚರಿಯಲ್ಲಿ ಅಡ್ಡಿಯಾಗಬೇಡಿ, ಸಹಕರಿಸಿ.

ಮಗ ಸೊಸೆಯರ ಜೊತೆ ರಾಜಕೀಯ ಮಾಡಬೇಡಿ.

ಸೊಸೆಯ ಎದುರು ಅವಳ ತವರುಮನೆಯವರ ಬಗ್ಗೆ ಆಡಿಕೊಳ್ಳಬೇಡಿ.

ಸೊಸೆಯ ವಿಚಾರಗಳು ಮತ್ತು ಸ್ವಭಾವವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಿ.

ಕೇವಲ ನಿಮ್ಮ ಮಗನ ಖುಷಿ ಮತ್ತು ತೃಪ್ತಿಯ ಬಗ್ಗೆ ಮಾತ್ರ ಗಮನ ಕೊಡದೆ, ಸೊಸೆಯ ಖುಷಿ ಮತ್ತು ತೃಪ್ತಿಯ ಬಗೆಗೂ ಗಮನಕೊಡಿ.

ಮಗನ ಜೊತೆ ಸೊಸೆಗೂ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಆತ್ಮೀಯತೆ ತೋರಿ. ಆಗ ಅವಳಲ್ಲಿ `ಅತ್ತೆ ಅಂದರೆ ಭಯಪಡಿಸುವ ವ್ಯಕ್ತಿ’ ಎಂಬ ಭಾವನೆ ಪೂರ್ಣವಾಗಿ ಹೊರಟುಹೋಗುತ್ತದೆ.

ನೀವು ಆತ್ಮೀಯತೆ ಮತ್ತು ತಿಳಿವಳಿಕೆಯಿಂದ ನಡೆದುಕೊಂಡು, ನೀವು ಮತ್ತೆ ಬರಲಿ ಎಂದು ಸೊಸೆ ಮನಃಪೂರ್ವಕವಾಗಿ ಹಾರೈಸುವ ಹಾಗೆ ಮಾಡಿ.

ಹೊರಡುವಾಗ ಆಶೀರ್ವಾದಗಳ ಜೊತೆ ಮಧುರ ನೆನಪುಗಳ ಖಜಾನೆಯನ್ನು ಬಿಟ್ಟುಹೋಗಿ.

ಅತ್ತೆ ಮತ್ತು ಸೊಸೆ ಇಬ್ಬರೂ ಎಚ್ಚರಿಕೆ ವಹಿಸಿದರೆ, ಸೊಸೆಯ ಮನೆಯಲ್ಲಿ ಅತ್ತೆಯ ಪ್ರಥಮ ಭೇಟಿ ಅವರ ಸುಂದರ ಸಂಬಂಧದ ಶಕ್ತಿಶಾಲಿ ಅಡಿಪಾಯವಾಗಬಹುದು. ಇಬ್ಬರೂ ಎಲ್ಲಾ ವ್ಯವಹಾರಗಳ ಬಗ್ಗೆ ಗಮನಕೊಡವುದು ಮಹತ್ವಪೂರ್ಣವಾದದ್ದಾಗಿದೆ.

ಆದರೆ ಪರಸ್ಪರರಿಗೆ ಇಬ್ಬರೂ ನೀಡುವ ಆತ್ಮೀಯತೆ ಇನ್ನೂ ಮುಖ್ಯ. ಆತ್ಮೀಯತೆಗೆ ತನ್ನದೇ ಭಾಷೆಯಿದೆ. ಅದು ಬೆಲೆ ಬಾಳುವ

ಉಡುಗೊರೆಗಳನ್ನು ಮೀರಿಸಿದ್ದಾಗಿದೆ. ಇದು ಒಂದು ರೀತಿಯಲ್ಲಿ ತನ್ನರ ಬಗ್ಗೆ ಮನಸ್ಸಿನಲ್ಲಿ ಉಂಟಾಗುವ ಸ್ನೇಹ. ಈ ಸ್ನೇಹದ ಕೊಡು ಕೊಳ್ಳುವಿಕೆ ಮೊದಲ ದಿನದಿಂದಲೇ ಶುರುವಾದರೆ ಸಮಯ ಸರಿದಂತೆ ಇದು ಮತ್ತೂ ಭದ್ರವಾಗುತ್ತದೆ ಮತ್ತು ನಿಧಾನವಾಗಿ ಅತ್ತೆ ಸೊಸೆಯರದು ಮಾತ್ರವಲ್ಲ, ಕುಟುಂಬದವರೆಲ್ಲರಲ್ಲಿ ಸಂತೋಷದ ಸಂಚಾರವಾಗುತ್ತದೆ.

– ಸುಪ್ರೀತಾ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ