ಶೋಕಿಯೋ, ಅನಿವಾರ್ಯವೋ ಈಗ ವಿವಾಹಿತ ಮಕ್ಕಳು ತಂದೆ ತಾಯಿಯರಿಂದ ಬೇರೆಯಾಗಿ ತಮ್ಮದೇ ಬೇರೆ ಮನೆ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದರಿಂದ ಒಮ್ಮೆ ಅತ್ತೆ ಸೊಸೆಯ ಮನೆಗೆ ಬಂದರೆ, ಇನ್ನೊಮ್ಮೆ ಸೊಸೆ ಅತ್ತೆಯ ಮನೆಗೆ ಹೋಗುತ್ತಾಳೆ. ಹೊಸ ಸೊಸೆಯ ಹೊಸ ಸಂಸಾರದಲ್ಲಿ ಅತ್ತೆ ಮೊದಲ ಸಲ ಬರುವುದು ತಿಳಿದೋ ತಿಳಿಯದೆಯೋ ಮುಂದೆ ಪರಸ್ಪರ ಸಂಬಂಧ ಚೆನ್ನಾಗಿರುವುದಕ್ಕೆ ಅಥವಾ ಹಾಳಾಗುವುದಕ್ಕೆ ಅಡಿಪಾಯವಾಗುತ್ತದೆ. ಈ ನಾಜೂಕು ಸಂಬಂಧದ ಅಡಿಪಾಯ ಬಲಗೊಳಿಸುವುದರಲ್ಲಿ ಅತ್ತೆ ಸೊಸೆ ಇಬ್ಬರ ಪಾತ್ರ ಮುಖ್ಯವಾಗಿದೆ.
ತಿಳಿವಳಿಕೆ ಇಲ್ಲದ ಮತ್ತು ಕಡಿಮೆ ತಿಳಿವಳಿಕೆಯ ಅತ್ತೆ ಮತ್ತು ಸೊಸೆಯ ಸಂಬಂಧದಲ್ಲಿ ಒಂದು ಅದೃಶ್ಯ ಅಂತರ ಇರುತ್ತದೆ. ಎರಡು ಕಡೆಯಿಂದ ಹೃದಯದ ಸಂಬಂಧ ಪೂರ್ಣ ತೆರೆದರೆ, ಔಪಚಾರಿಕತೆಯ ಸ್ಥಳದಲ್ಲಿ ಆತ್ಮೀಯತೆಯ ತಂತಿಯನ್ನು ಜೋಡಿಸಿದರೆ, ಈ ಸಂಬಂಧ ಅತ್ತೆ ಸೊಸೆಯ ಮಟ್ಟದಿಂದ ಇಳಿದು ತಾಯಿ ಮಗಳ ಸಂಬಂಧವಾಗಬಹುದು. ಹಾಗೊಂದು ವೇಳೆ ಒಂದು ಕಡೆಯ ಬಾಗಿಲು ಮುಚ್ಚಿದ್ದರೂ ಇನ್ನೊಂದು ಕಡೆಯವರು ನಿರಾಶರಾಗಿ ಹಿಂದೆ ಸರಿಯುವಂತೆ ಮಾಡುತ್ತದೆ.
ಹೃದಯದ ಬಾಗಿಲನ್ನು ತೆರೆಯುವ ಕೆಲಸ ಮೊದಲ ಸಲ ಬಂದಾಗಲೇ ಆರಂಭವಾದರೆ ವೈಮನಸ್ಸಿಗೆ ಯಾವುದೇ ಕಾರಣ ಇರುವುದಿಲ್ಲ. ಅತ್ತೆ ಸೊಸೆಯರು ತಂತಮ್ಮ ಕರ್ತವ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ತಂತಮ್ಮ ಪಾತ್ರಕ್ಕೆ ಸರಿಯಾದ ರೀತಿಯಲ್ಲಿ ನ್ಯಾಯ ಒದಗಿಸಬೇಕು. ಸೊಸೆಯ ಮನೆಗೆ ಅತ್ತೆ ಮೊದಲ ಸಲ ಪ್ರವೇಶ ಮಾಡಿದಾಗ, ಅತ್ತೆ ಸೊಸೆ ಇಬ್ಬರೂ ಯಾವ ಯಾವ ಸಂಗತಿಗಳ ಬಗ್ಗೆ ಗಮನ ಕೊಡಬೇಕು ಎಂದು ತಿಳಿದುಕೊಳ್ಳೋಣ :
ಸೊಸೆ
ಅತ್ತೆಯ ಆಗಮನನ್ನು ಹೊರೆ ಎಂದು ಭಾವಿಸಿದಿರಿ. ಹುಬ್ಬುಗಂಟಿಕ್ಕಬೇಡಿ. ನಿಮ್ಮ ತಾಯಿ ಬಂದಾಗ ಹೇಗೆ ಸ್ವಾಗತಿಸುತ್ತೀರೋ, ಅದೇ ರೀತಿ ಅತ್ತೆಯನ್ನು ಪ್ರೀತಿ, ಆದರ ಮತ್ತು ಆತ್ಮೀಯತೆಯಿಂದ ಸ್ವಾಗತಿಸಿ.
ಅತ್ತೆಯ ಕೋಣೆ ಮತ್ತು ಬೀರುಗಳನ್ನು ಚೆನ್ನಾಗಿ ಇಡಿ. ನಿಮ್ಮ ಮನೆಗೆ ಮಹಡಿಯೂ ಇದ್ದರೆ ಅತ್ತೆಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಸಾಧ್ಯವಾದಷ್ಟು ಅವರಿಗೆ ನೆಲ ಅಂತಸ್ತಿನಲ್ಲೇ ಕೋಣೆ ಕೊಡಿ.
ಅತ್ತೆಯ ಅನುಕೂಲಕ್ಕೆ ಬೇಕಾದ ಅವಶ್ಯಕ ವಸ್ತುಗಳನ್ನು ಇಟ್ಟಿರಿ. ಅಂದರೆ ಅವರು ಸಕ್ಕರೆ ಬಳಸುವುದಿಲ್ಲವಾದರೆ ಶುಗರ್‌ಫ್ರೀ ತಂದಿಡಿ. ಸಿನಿಮಾಗಳಲ್ಲಿ ಆಸಕ್ತಿ ಇದ್ದರೆ ಕೆಲವು ಸಿನಿಮಾಗಳ ಸಿಡಿಗಳನ್ನು ತನ್ನಿ. ಅಲ್ಲದೆ, ಅವರಿಗೆ ಬೇಕಾದ ಎಣ್ಣೆ, ಸಾಬೂನು, ಟೂಥ್ ಪೇಸ್ಟ್ ಇತ್ಯಾದಿ ಬಳಕೆಯ ವಸ್ತುಗಳನ್ನು ತಂದಿಡಿ. ಅವರ ಸ್ವಭಾವ ಮತ್ತು ದಿನಚರಿಯ ಬಗ್ಗೆ ನಿಮ್ಮ ಪತಿಯನ್ನು ಕೇಳಿ ತಿಳಿದುಕೊಳ್ಳಿ. ಇದರಿಂದ ಅವರಿಗೆ ಬೇಕಾದ್ದನ್ನು ತಂದಿಡಲು ಏರ್ಪಾಡು ಮಾಡಬಹುದು.
ಅತ್ತೆ ಬರುವ ಮೊದಲೇ ಅವರಿಗಿಷ್ವವಾದ ಅಡುಗೆಯನ್ನು ಮಾಡಿಡಿ. ಅವರು ಪಥ್ಯದ ಊಟ ಮಾಡುವವರಾದರೆ ಅದನ್ನು ಗಮನದಲ್ಲಿಟ್ಟುಕೊಂಡು ಅಡುಗೆ ಮಾಡಿ.
ಅವರು ನಿಮ್ಮ ಮನೆಯಲ್ಲಿರುವುದರಿಂದ ನಿಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿ ಬಂದಿದೆ ಎಂಬ ಭಾವನೆ ಅವರಿಗೆ ಬರುವ ಹಾಗೆ ನಡೆದುಕೊಳ್ಳಬೇಡಿ.
ಅವರು ಬರುತ್ತಲೇ ಮನೆಯ ಪೂರ್ಣ ಜವಾಬ್ದಾರಿಯನ್ನು ಅವರ ಮೇಲೆ ಹಾಕಿ ನೀವು ಜವಾಬ್ದಾರಿಯಿಂದ ಮುಕ್ತರಾಗಬೇಡಿ. ಮನೆಯ ಕೆಲಸಗಳಿಂದ ಅವರನ್ನು ಬಹಳ ದೂರ ಇಟ್ಟು, ಅವರಿಗೆ ನೀವು ಪರಕೀಯರು ಅನ್ನಿಸುವಂತೆ ಮಾಡಬೇಡಿ. ಎರಡಲ್ಲೂ ಸಮತೋಲನ ಸಾಧಿಸುತ್ತಾ ಮಧ್ಯದ ಹಾದಿಯನ್ನು ಅನುಸರಿಸಿದರೆ ಅತ್ತೆಗೆ ಆತ್ಮೀಯ ಭಾವನೆ ಬರುತ್ತದೆ, ನಿಮಗೂ ಸಹಾಯ ಸಿಗುತ್ತದೆ.