ಬೇಕ್ಡ್ ನೂಡಲ್ಸ್
ಸಾಮಗ್ರಿ : 2-3 ಮೊಟ್ಟೆ, 1 ಕಪ್ ಬೆಂದ ನೂಡಲ್ಸ್, ಅರ್ಧರ್ಧ ಕಪ್ ಬೆಂದ ಹಸಿ ಬಟಾಣಿ, ಬೀನ್ಸ್, ಹೆಚ್ಚಿದ ಹೂಕೋಸು, ಎಲೆಕೋಸು, ತುರಿದ ಕ್ಯಾರೆಟ್, ಚೀಸ್, 2-2 ಈರುಳ್ಳಿ, ಟೊಮೇಟೊ, 3-4 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಅರ್ಧ ಸೌಟು ಎಣ್ಣೆ, ಒಗ್ಗರಣೆ ಸಾಮಗ್ರಿ.
ವಿಧಾನ : ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಕರಿಬೇವು ಹಾಕಿದ ನಂತರ ಹೆಚ್ಚಿದ ಈರುಳ್ಳಿ, ಆಮೇಲೆ ಹಸಿಮೆಣಸು ಹಾಕಿ ಬಾಡಿಸಿ. ನಂತರ ಸಣ್ಣಗೆ ಹೆಚ್ಚಿದ ಎಲೆಕೋಸು, ಹೂಕೋಸು, ಕ್ಯಾರೆಟ್ ಇತ್ಯಾದಿಗಳನ್ನು ಒಂದೊಂದಾಗಿ ಸೇರಿಸುತ್ತಾ ಬಾಡಿಸಿ. ಆಮೇಲೆ ಟೊಮೇಟೊ ಸೇರಿಸಿ ಬಾಡಿಸಬೇಕು. ಅಷ್ಟರಲ್ಲಿ ಪಕ್ಕದ ಒಲೆಯಲ್ಲಿ ಸಣ್ಣ ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ಒಡೆದು ಗೊಟಾಯಿಸಿದ ಮೊಟ್ಟೆ ಹಾಕಿ ಬೇಗ ಬೇಗ ಕೈಯಾಡಿಸುತ್ತಾ ಭುರ್ಜಿ ತಯಾರಿಸಿ. ಇದನ್ನು ಪಕ್ಕದ ಬಾಣಲೆಗೆ ಹಾಕಿ, ಬೆಂದ ಬೀನ್ಸ್, ಬಟಾಣಿ ಸಹ ಸೇರಿಸಿ. ಕೊನೆಯಲ್ಲಿ ಉಪ್ಪು, ಮೆಣಸು, ಬೆಂದ ನೂಡಲ್ಸ್ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಂಡು, ಮೇಲೆ ಚೀಸ್ ತುರಿದು ಹಾಕಿ. ಓವನ್ ಪ್ರೂಫ್ ಡಿಶ್‌ನಲ್ಲಿ ಇದನ್ನಿರಿಸಿ, ಚೀಸ್ ಕರಗುವಂತೆ ಬೇಕ್ ಮಾಡಿ ಸವಿಯಲು ಕೊಡಿ.
ಕ್ರೀಮೀ ಎಗ್ ಡಿಲೈಟ್
ಸಾಮಗ್ರಿ : 1 ಕಪ್ ಕ್ರೀಂ, 4 ಚಮಚ ಚೀಸ್, ಒಂದಿಷ್ಟು ಹೆಚ್ಚಿದ ಎಲೆಕೋಸು, ಕ್ಯಾರೆಟ್, ಕ್ಯಾಪ್ಸಿಕಂ, ಈರುಳ್ಳಿ, ಟೊಮೇಟೊ, 2 ಬೆಂದ ಮೊಟ್ಟೆ, 1-2 ಬ್ರೆಡ್ ಸ್ಲೈಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.
ವಿಧಾನ : ತುರಿದ ಚೀಸ್‌ಗೆ ಕ್ರೀಂ ಬೆರೆಸಿ ಗೊಟಾಯಿಸಿ. ಈ ಮಿಶ್ರಣದ ಬಟ್ಟಲಿಗೆ ಹೆಚ್ಚಿದ ಎಲ್ಲಾ ತರಕಾರಿ, ಉಪ್ಪು, ಮೆಣಸು ಸೇರಿಸಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಒಂದೆರಡು ಬಟ್ಟಲಿಗೆ ಇದನ್ನು ಹಾಕಿರಿಸಿ, ಮೇಲೆ ತುಂಡರಿಸಿದ ಬೆಂದ ಮೊಟ್ಟೆ ಇರಿಸಬೇಕು. ಬಟ್ಟಲಿನ ಬದಿಯಲ್ಲಿ ಬ್ರೆಡ್ ಸ್ಲೈಸ್ ಇರಿಸಬೇಕು. ಪೋರ್ಕ್ ಜೊತೆ ಸವಿಯಲು ಕೊಡಿ.
ಸೆಮೋಲೀನಾ ಫ್ರೂಟ್ ಕೇಕ್
ಸಾಮಗ್ರಿ : 1-1 ಕಪ್ ಮೈದಾ, ಸಣ್ಣ ರವೆ, ಬೆಣ್ಣೆ, ಗೋಡಂಬಿ, ಪಿಸ್ತಾ, ಬಾದಾಮಿ, ದ್ರಾಕ್ಷಿ, ಏಪ್ರಿಕಾಟ್ ಚೂರು (ಒಟ್ಟಾಗಿ), 3 ಮೊಟ್ಟೆ, 2 ಕಪ್ ಸಕ್ಕರೆ, ಅರ್ಧ ಸಣ್ಣ ಚಮಚ ವೆನಿಲಾ ಎಸೆನ್ಸ್, 2 ಚಮಚ ಕೋಕೋ ಪೌಡರ್, 1 ಸಣ್ಣ ಚಮಚ ಬೇಕಿಂಗ್ ಪೌಡರ್.
ವಿಧಾನ : ಸಕ್ಕರೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಬೆಣ್ಣೆ ಬೆರೆಸಿ ಚೆನ್ನಾಗಿ ಬೀಟ್ ಮಾಡಿ. ನಂತರ ಚೆನ್ನಾಗಿ ಗೊಟಾಯಿಸಿದ ಮೊಟ್ಟೆ ವೆನಿಲಾ ಎಸೆನ್ಸ್ ನ್ನು ಇದಕ್ಕೆ ಬೆರೆಸಿರಿ. ಆಮೇಲೆ ಒಟ್ಟಿಗೆ ಜರಡಿಯಾಡಿದ ರವೆ, ಮೈದಾ, ಬೇಕಿಂಗ್/ಕೋಕೋ ಪೌಡರ್‌ನ್ನು ಇದಕ್ಕೆ ಬೆರೆಸಿಕೊಳ್ಳಿ. ಆಮೇಲೆ ಗೋಡಂಬಿ, ದ್ರಾಕ್ಷಿಯ ಚೂರು ಸೇರಿಸಿ ಮೃದು ಮಿಶ್ರಣ ಕಲಸಿಡಿ. ಇದನ್ನು ಜಿಡ್ಡು ಸವರಿದ ಓವನ್ ಡಿಶ್ಶಿಗೆ ರವಾನಿಸಿ, ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿಯಲ್ಲಿ 25-30 ನಿಮಿಷ ಬೇಕ್ ಮಾಡಿ.
ಎಗ್ ಕರೀ
ಸಾಮಗ್ರಿ : 2-3 ಈರುಳ್ಳಿ, 10-12 ಎಸಳು ಬೆಳ್ಳುಳ್ಳಿ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಅಮ್ಚೂರ್ ಪುಡಿ, ಧನಿಯಾಪುಡಿ, ಜೀರಿಗೆ ಪುಡಿ, 1 ಚಮಚ ಶುಂಠಿ ಪೇಸ್ಟ್, 3-4 ಬೆಂದ ಮೊಟ್ಟೆ, 2 ಟೊಮೇಟೊ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : 1 ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಟೊಮೇಟೊ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬೆಂದ ಮೊಟ್ಟೆಯನ್ನು ಉದ್ದಕ್ಕೆ ಹೆಚ್ಚಿ, ಪೋರ್ಕ್‌ನಿಂದ ನಡುನಡುವೆ ಚುಚ್ಚಿ ರಂಧ್ರ ಮಾಡಿ. ಇದನ್ನು ಕಾದ ಎಣ್ಣೆಯಲ್ಲಿ ಕರಿದಿಡಿ. ಅದರಲ್ಲಿ ಸ್ವಲ್ಪ ಎಣ್ಣೆಗೆ ಒಗ್ಗರಣೆ ಕೊಟ್ಟು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಅದಕ್ಕೆ ರುಬ್ಬಿದ ಮಿಶ್ರಣ ಹಾಕಿ ಬಾಡಿಸಿ. ನಂತರ ಉಪ್ಪು, ಅರಿಶಿನ, ಎಲ್ಲಾ ಮಸಾಲೆ ಸೇರಿಸಿ ಕೆದಕಬೇಕು. ತುಸು ನೀರು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಕುದಿಸಿ. ಇದಕ್ಕೆ ಕರಿದ ಮೊಟ್ಟೆ ತೇಲಿಬಿಟ್ಟು. ಮತ್ತೆ 2 ನಿಮಿಷ ಕುದಿಸಿ ಕೆಳಗಿರಿಸಿ. ಕೊ.ಸೊಪ್ಪು ಉದುರಿಸಿ, ಬಿಸಿಯಾಗಿ ರೊಟ್ಟಿ, ಚಪಾತಿ ಜೊತೆ ಸವಿಯಲು ಕೊಡಿ.
ಗ್ರಿಲ್ಡ್ ಎಗ್
ಸಾಮಗ್ರಿ : 2-3 ಮೊಟ್ಟೆ, 1-2 ಈರುಳ್ಳಿ, 1 ದೊಡ್ಡ ಹುಳಿ ಟೊಮೇಟೊ, 1-2 ಹಸಿ ಮೆಣಸಿನಕಾಯಿ, 2 ಚಮಚ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.
ವಿಧಾನ : ಮೊಟ್ಟೆ ಬೇಯಿಸಿ, ಸಿಪ್ಪೆ ಸುಲಿದು, ಉದ್ದಕ್ಕೆ ಹೆಚ್ಚಿಡಿ. ಮಿಕ್ಸಿಗೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸು, ಟೊಮೇಟೊ ಹಾಗೂ ಉಳಿದ ಪದಾರ್ಥ ಹಾಕಿ ನುಣ್ಣಗೆ ತಿರುವಿಕೊಳ್ಳಿ. ಇದಕ್ಕೆ ಮೊಟ್ಟೆಯ ಹಳದಿ ಭಾಗ ಸೇರಿಸಿ. ಇದನ್ನು ಮೊಟ್ಟೆಯ ಟೊಳ್ಳಾದ ಬಿಳಿ ಭಾಗಕ್ಕೆ ತುಂಬಿಸಿ, ಓವನ್ನಿನಲ್ಲಿ 8-10 ನಿಮಿಷ ಗ್ರಿಲ್ ಮಾಡಿ, ನಂತರ ಚಿತ್ರದಲ್ಲಿರುವಂತೆ ಸಲಾಡ್ ಜೊತೆ ಸವಿಯಲು ಕೊಡಿ.
ಕಾರ್ನ್ ಎಗ್ ಡಿಲೈಟ್
ಸಾಮಗ್ರಿ : 1 ಕಪ್ ಜೋಳದ ಹಿಟ್ಟು, 1-1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 2 ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಪೇಸ್ಟ್, 5-6 ಚಮಚ ಹಾಲು, ಅರ್ಧ ಕಪ್ ಸಣ್ಣ ರವೆ, ಒಗ್ಗರಣೆಗೆ ಎಣ್ಣೆ ಸಾಮಗ್ರಿ, ಒಂದಿಷ್ಟು ತೆಂಗಿನ ತುರಿ.
ವಿಧಾನ : ಜೋಳದ ಹಿಟ್ಟಿಗೆ ಹಾಲು, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಉಪ್ಪು, ಹುರಿದ ರವೆ, ಒಡೆದು ಗೊಟಾಯಿಸಿದ ಮೊಟ್ಟೆ ಬೆರೆಸಿ ಗಟ್ಟಿಯಾಗಿ ಕಲಸಿಡಿ. ಈ ಮಿಶ್ರಣವನ್ನು ಜಿಡ್ಡು ಸವರಿದ ಓವನ್ ಡಿಶ್ಶಿಗೆ ಹಾಕಿಟ್ಟು, ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 15-20 ನಿಮಿಷ ಬೇಕ್ ಮಾಡಿ. ಹೊರ ತೆಗೆದ ನಂತರ ಚೌಕಗಳಾಗಿ ಕತ್ತರಿಸಿ, ಮೇಲೆ ಒಗ್ಗರಣೆ ಹಾಕಿ, ತೆಂಗಿನ ತುರಿ ಉದುರಿಸಿ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಮೊಟ್ಟೆಯ ಸಮೋಸಾ
ಸಾಮಗ್ರಿ : 2 ಕಪ್ ಮೈದಾ, 2-3 ಬೆಂದ ಮೊಟ್ಟೆ, ಕರಿಯಲು ಎಣ್ಣೆ, 2 ಈರುಳ್ಳಿ, 2 ಟೊಮೇಟೊ, 1 ಕ್ಯಾಪ್ಸಿಕಂ, 2-3 ಹಸಿ ಮೆಣಸಿನಕಾಯಿ, ಅರ್ಧ ಕಪ್ ಬೆಂದ ಬಟಾಣಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ.
ವಿಧಾನ : ಮೈದಾಗೆ 2 ಚಿಟಕಿ ಉಪ್ಪು, ಅರಿಶಿನ ಹಾಕಿ ನೀರು ಚಿಮುಕಿಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿ 2 ತಾಸು ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಹಾಕಿ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಕ್ಯಾಪ್ಸಿಕಂ, ಟೊಮೇಟೊ ಸೇರಿಸಿ ಬಾಡಿಸಿ. ಆಮೇಲೆ ಬೆಂದ ಬಟಾಣಿ, ಉಪ್ಪು, ಮೆಣಸು, ತುಂಡರಿಸಿದ ಬೆಂದ ಮೊಟ್ಟೆ ಹಾಕಿ ಕೆದಕಿ ಕೆಳಗಿಳಿಸಿ. ಇದಕ್ಕೆ ನಿಂಬೆರಸ ಹಿಂಡಿಕೊಂಡು ಮಿಶ್ರಣ ಆರಲು ಬಿಡಿ. ಮೈದಾ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಲಟ್ಟಿಸಿಕೊಂಡು, ಅರ್ಧ ಚಂದ್ರಾಕಾರವಾಗಿ ಕತ್ತರಿಸಿ, ಶಂಖುವಿನ ಆಕಾರ ಕೊಟ್ಟು, 2-3 ಚಮಚ ಮೊಟ್ಟೆ ಮಿಶ್ರಣ ತುಂಬಿಸಿ. ಅಂಚು ಬಿಡದಂತೆ ಮಡಿಚಿ, ಕಾದ ಎಣ್ಣೆಯಲ್ಲಿ ಕರಿದು, ಬಿಸಿ ಬಿಸಿಯಾಗಿ ಸಾಸ್ ಜೊತೆ ಸವಿಯಲು ಕೊಡಿ.
ಎಗ್ ಬಾಲ್ಸ್ ಇನ್ ಗ್ರೇವಿ
ಸಾಮಗ್ರಿ : 2 ಮೊಟ್ಟೆ, 2 ಈರುಳ್ಳಿ, 2 ಟೊಮೇಟೊ, 4 ಚಮಚ ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲಾ, ಧನಿಯಾ ಪುಡಿ, 1-2 ಹಸಿ ಮೆಣಸು, 8-10 ಎಸಳು ಬೆಳ್ಳುಳ್ಳಿ, 1 ತುಂಡು ಶುಂಠಿ, ತುಸು ಎಣ್ಣೆ.
ವಿಧಾನ : ಮಿಕ್ಸಿಗೆ 1 ಈರುಳ್ಳಿ, ಬೆಳ್ಳುಳ್ಳಿ, 1 ಟೊಮೇಟೊ, ಶುಂಠಿ, ಹಸಿಮೆಣಸು ಸೇರಿಸಿ ನುಣ್ಣಗೆ ತಿರುವಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ನಂತರ ಇದಕ್ಕೆ ಉಳಿದ ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಕಿ ಬಾಡಿಸಿ. ನಂತರ ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ಕೆದಕಬೇಕು. ನಂತರ ಮಸಾಲೆ ಪದಾರ್ಥ, ಉಪ್ಪು, ಅರಿಶಿನ ಹಾಕಿ ಕೈಯಾಡಿಸಿ. ಒಂದು ಬಟ್ಟಲಲ್ಲಿ ಮೊಟ್ಟೆ ಒಡೆದು ಹಾಕಿಕೊಂಡು, ಅದಕ್ಕೆ ಉಪ್ಪು, ಮೆಣಸು ಸೇರಿಸಿ ಚೆನ್ನಾಗಿ ಗೊಟಾಯಿಸಿ. ಇದರಿಂದ ಒಂದೊಂದೇ ಚಮಚದಷ್ಟು ಗ್ರೇವಿಗೆ ಹಾಕುತ್ತಾ ಕೆದುಕುತ್ತಿರಬೇಕು. 5 ನಿಮಿಷ ಬಿಟ್ಟು ಕೆಳಗಿಳಿಸಿ. ಹೆಚ್ಚಿದ ಕೊ.ಸೊಪ್ಪು, ಪುದೀನಾದಿಂದ ಅಲಂಕರಿಸಿ ಬಿಸಿ ಅನ್ನ ಅಥವಾ ಚಪಾತಿ ಜೊತೆ ಸವಿಯಲು ಕೊಡಿ.
ಎಗ್ ಬ್ಯಾಸ್ಕೆಟ್
ಸಾಮಗ್ರಿ : 2 ಮೊಟ್ಟೆ, 1-1 ಈರುಳ್ಳಿ, ಟೊಮೇಟೊ, 1 ಕಪ್ ಮೈದಾ, 2 ಚಮಚ ಎಣ್ಣೆ, 2 ಹಸಿಮೆಣಸು, 2 ಚಮಚ ತುರಿದ ಚೀಸ್, 2-3 ಚಮಚ ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೈದಾಗೆ ಉಪ್ಪು, ತುಸು ನೀರು, ಎಣ್ಣೆ ಬೆರೆಸಿ ಪೂರಿ ಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿಡಿ. ಇದರಿಂದ ಸಣ್ಣ ಉಂಡೆಗಳನ್ನು ಮಾಡಿ, ತೆಳುವಾಗಿ ಲಟ್ಟಿಸಿ 3 ಇಂಚಿನ ಚೌಕದ ತುಂಡುಗಳಾಗಿಸಿ. ಇದೇ ತರಹ 1 ಬ್ಯಾಸ್ಕೆಟ್‌ಗಾಗಿ 3 ಪದರ ಲಟ್ಟಿಸಿ. ಎಲ್ಲಾ ಪದರಗಳನ್ನೂ ಲಟ್ಟಿಸಿ ಟಾರ್ಟ್ ಮೌಲ್ಡ್ ಮೇಲೆ ಒಂದರ ಮೇಲೊಂದು ಪದರ ಹಾಕಿ, ಬೆಣ್ಣೆಯಿಂದ ಗ್ರೀಸ್ ಮಾಡಿ. ಮೊದಲೇ ಬಿಸಿಯಾದ ಓವನ್ನಿನಲ್ಲಿ 180 ಡಿಗ್ರಿ ಶಾಖದಲ್ಲಿ 8-10 ನಿಮಿಷ ಬೇಕ್ ಮಾಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಹೆಚ್ಚಿದ ಈರುಳ್ಳಿ, ಟೊಮೇಟೊ, ಹಸಿ ಮೆಣಸು ಹಾಕಿ ಬಾಡಿಸಿ. ಆಮೇಲೆ ಉಪ್ಪು, ಮೆಣಸು, ಒಡೆದು ಗೊಟಾಯಿಸಿದ ಮೊಟ್ಟೆ ಹಾಕಿ ಬೇಗ ಬೇಗ ಕೈಯಾಡಿಸಿ. ಕೆಳಗಿಳಿಸಿ, ಕೊ.ಸೊಪ್ಪು ಸೇರಿಸಿ. ಈ ಮೊಟ್ಟೆ ಭುರ್ಜಿಯನ್ನು ತಯಾರಾದ ಮೈದಾ ಬ್ಯಾಸ್ಕೆಟ್‌ಗೆ ತುಂಬಿಸಿ ಸವಿಯಲು ಕೊಡಿ.