ರಸಗುಲ್ಲ
ಸಾಮಗ್ರಿ : ಅರ್ಧ ಲೀ. ಹಾಲು, 2 ದೊಡ್ಡ ಚಮಚ ನಿಂಬೆರಸ, 1 ಕಪ್ ನೀರು, 5-6 ಐಸ್ ಕ್ಯೂಬ್ಸ್, 3 ಕಪ್ ಸಕ್ಕರೆ, 2 ಚಿಟಕಿ ಏಲಕ್ಕಿಪುಡಿ, 3-4 ಪಿಸ್ತಾ ಚೂರು.
ವಿಧಾನ : ಹಾಲು ಕಾಯಿಸಿ. ಮಂದ ಉರಿ ಮಾಡಿ ಇದಕ್ಕೆ ನಿಂಬೆಹಣ್ಣು ಹಿಂಡಬೇಕು. ಹಾಲು ಒಡೆದಾಗ, ಅದನ್ನು ಸೋಸಿಕೊಂಡು, ಗಟ್ಟಿ ಪದಾರ್ಥ ಬೇರೆ ಮಾಡಿ. ಆಮೇಲೆ ಅದಕ್ಕೆ ಐಸ್ ಕ್ಯೂಬ್ಸ್ ಹಾಕಿರಿಸಿ, ಚೆನ್ನಾಗಿ ತಣ್ಣಗಾದ ಮೇಲೆ ಮತ್ತೆ ಸೋಸಬೇಕು. ಈ ಗಟ್ಟಿ ಪದಾರ್ಥವನ್ನು ತಣ್ಣೀರಲ್ಲಿ ತೊಳೆದು, ಅರ್ಧ ಗಂಟೆ ಹಾಗೆ ಬಿಡಿ. ಆಮೇಲೆ ಅದನ್ನು ಚೆನ್ನಾಗಿ ಮಸೆದು, ಪೂರಿ ಹಿಟ್ಟಿನ ತರಹ ನಾದಿಕೊಳ್ಳಿ. ಆಮೇಲೆ ಇದನ್ನು ಸಣ್ಣ ಬಾಲ್ಸ್ ಮಾಡಿಕೊಂಡು ಬೇರೆಯಾಗಿಡಿ.
ನಂತರ ಒಂದು ಪಾತ್ರೆಗೆ ನೀರು, ಸಕ್ಕರೆ, ಏಲಕ್ಕಿಪುಡಿ ಸೇರಿಸಿ ಒಲೆಯ ಮೇಲಿರಿಸಿ ಪಾಕ ತಯಾರಿಸಿ. ಈ ಪಾಕಕ್ಕೆ ಎಲ್ಲಾ ಬಾಲ್ಸ್ ತೇಲಿಬಿಟ್ಟು, ಅದನ್ನು ಒಲೆಯ ಮೇಲಿರಿಸಿ, ಮುಚ್ಚಳ ಮುಚ್ಚಿರಿಸಿ ಮಂದ ಉರಿಯಲ್ಲಿ 10-12 ನಿಮಿಷ ಚೆನ್ನಾಗಿ ಬೇಯಲು ಬಿಡಿ. ಇವು ಚೆನ್ನಾಗಿ ಉಬ್ಬಿದೆಯೇ ಎಂದು ಖಾತ್ರಿಪಡಿಸಿಕೊಂಡು ಕೆಳಗಿಳಿಸಿ, ಆರಲು ಬಿಡಿ. 1 ಗಂಟೆ ಕಾಲದ ನಂತರ ಇದರ ಮೇಲೆ ಪಿಸ್ತಾ ಉದುರಿಸಿ, ಸವಿಯಲು ಕೊಡಿ.
ಸೋರೆಯ ಹಲ್ವಾ
ಸಾಮಗ್ರಿ : 1 ದೊಡ್ಡ ಸೋರೆಕಾಯಿ, 250 ಗ್ರಾಂ ಖೋವಾ, ತುಸು ಏಲಕ್ಕಿಪುಡಿ, ಒಂದಿಷ್ಟು ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು, 400-500 ಗ್ರಾಂ ತುಪ್ಪ ಸಕ್ಕರೆ.
ವಿಧಾನ : ಮೊದಲು ಸೋರೆಕಾಯಿಯ ಸಿಪ್ಪೆ ಹೆರೆದು ನೀಟಾಗಿ ತುರಿದಿಡಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಮೊದಲು ದ್ರಾಕ್ಷಿ, ಗೋಡಂಬಿಗಳನ್ನು ಹುರಿದು ತೆಗಿದಿಡಿ. ನಂತರ ಸೋರೆ ತುರಿ, ಏಲಕ್ಕಿ ಹಾಕಿ ಮಂದ ಉರಿಯಲ್ಲಿ ಚೆನ್ನಾಗಿ ಹುರಿಯಬೇಕು. ಆಮೇಲೆ ಸಕ್ಕರೆ ಹಾಕಿ ಕೆದಕಬೇಕು. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ತಳ ಹಿಡಿಯದಂತೆ ನೋಡಿಕೊಳ್ಳಿ. ಆಮೇಲೆ ಇದಕ್ಕೆ ಮಸೆದ ಖೋವಾ ಬೆರೆಸಿ ಕೈಯಾಡಿಸಿ. ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿಗಳನ್ನು ಸೇರಿಸಿ, ಎಲ್ಲವೂ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ. ಬಿಸಿ ಇರುವಾಗಲೇ ತುಪ್ಪ ಬೆರೆಸಿ ಸವಿಯಲು ಕೊಡಿ.
ಗೋಡಂಬಿ ಬರ್ಫಿ
ಸಾಮಗ್ರಿ : 500 ಗ್ರಾಂ ಗೋಡಂಬಿ, 2 ಕಪ್ ಸಕ್ಕರೆ, ಅಗತ್ಯವಿದ್ದಷ್ಟು ಹಾಲು ನೀರು ತುಪ್ಪ, ತುಸು ಏಲಕ್ಕಿಪುಡಿ ಬೆಳ್ಳಿ ರೇಕು.
ವಿಧಾನ : ಹಿಂದಿನ ರಾತ್ರಿ ಇಡಿಯಾದ ಗೋಡಂಬಿ (ಗೋವಾ ಮೂಲದ್ದಾದರೆ ಉತ್ತಮ)ಗಳನ್ನು ಉಗುರು ಬೆಚ್ಚಗಿನ ಹಾಲಲ್ಲಿ ನೆನೆಹಾಕಿ ಮಾರನೇ ದಿನ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಈ ಪೇಸ್ಟ್ ಹಾಕಿ ನಿಧಾನವಾಗಿ ಕೆದಕಬೇಕು. ಆಮೇಲೆ ಸಕ್ಕರೆ ಬೆರೆಸಿ ಕೈಯಾಡಿಸಿ. ಏಲಕ್ಕಿಪುಡಿ, ತುಪ್ಪ ಬೆರೆಸುತ್ತಾ ಘಂ ಎನ್ನುವಂತೆ ಹದನಾಗಿ ಬಾಡಿಸಿ. 5-6 ನಿಮಿಷಗಳ ನಂತರ, ತುಪ್ಪ ಸವರಿದ ಅಗಲ ತಟ್ಟೆಗೆ ಇದನ್ನು ಹರಡಿ, ಬೆಳ್ಳಿ ರೇಕು ಅಂಟಿಸಿ. ಆಮೇಲೆ ಚೆನ್ನಾಗಿ ಆರಿದ ನಂತರ ಚಿತ್ರದಲ್ಲಿರುವಂತೆ ಕತ್ತರಿಸಿ ಸವಿಯಲು ಕೊಡಿ.