ನನ್ನ ತುಟಿಯಲ್ಲಿ ಸಾಧಾರಣ ನಗುವಿತ್ತು. ಆದರೆ ಹೆಂಡತಿಯ ಮುಖದಲ್ಲಿ ಆಶ್ಚರ್ಯದ ಭಾವ ಎದ್ದು ಕಾಣುತ್ತಿತ್ತು. ಅದಕ್ಕೆ ಕಾರಣ ನನ್ನ ಮಿತ್ರನ ಹೇಳಿಕೆ. ರಾತ್ರಿ 1 ಗಂಟೆಯ ಹೊತ್ತಿಗೆ ಬರುವ ಟ್ಯಾಕ್ಸಿ ಡ್ರೈವರ್ ಒಬ್ಬ ಮಹಿಳೆಯಾಗಿರುತ್ತಾಳೆ ಎಂದು ಗೆಳೆಯ ಹೇಳಿದ್ದ.
ಆಕೆ ಬಂದಾಗ ಸಾಧಾರಣ ಮಹಿಳೆಯಂತೆಯೇ ಕಾಣುತ್ತಿದ್ದಳು. ಆಕೆಗೂ ಎರಡೇ ಕೈಗಳಿದ್ದವು. ಆ ಕೈಗಳಲ್ಲಿ ಯಾವುದೇ ಅಸ್ತ್ರಶಸ್ತ್ರಗಳು ಇರಲಿಲ್ಲ. ಏರ್‌ಕಂಡೀಶನ್ಡ್ ಟ್ಯಾಕ್ಸಿಯ ಸ್ಟೇರಿಂಗ್ ಮೇಲೆ ಆಕೆಯ ಕೈಗಳು ನಾನು ಚಾಲನೆ ಮಾಡಲು ಸಿದ್ಧ ಎಂದು ಹೇಳುತ್ತಲಿದ್ದವು.
ಆಕೆಯ ಕೈಗಳ ಹಿಡಿತವನ್ನು ನಾನು ಗಮನಕೊಟ್ಟು ನೋಡುತ್ತಲಿದ್ದೆ. ಆದರೆ ಆ ಕೈಗಳಲ್ಲಿ ಆತ್ಮವಿಶ್ವಾಸದ ಕೊರತೆಯಾಗಲಿ, ಗಾಬರಿಯಾಗಲೀ ಕಂಡುಬರುತ್ತಿರಲಿಲ್ಲ. ಅವಳ ಮಾತುಗಳಲ್ಲಿ ಕೂಡ ಆತಂಕದ ಯಾವ ಲಕ್ಷಣ ಗೋಚರಿಸಲಿಲ್ಲ. ಆದರೆ ಆಕೆ ಅತಿಯಾಗಿ ಮಾತನಾಡುವವಳೂ ಆಗಿರಲಿಲ್ಲ. ಆತ್ಮವಿಶ್ವಾಸ ವಿನಯವನ್ನು ಆವರಿಸಿಕೊಂಡಿರಲಿಲ್ಲ. ಆಕೆ ಪ್ರಯಾಣಿಕರೊಂದಿಗೆ ಮಾತನಾಡುತ್ತ ಸಾಧಾರಣ ಗೃಹಿಣಿಯಂತೆಯೇ ವರ್ತಿಸುತ್ತಿದ್ದಳು. ಆದರೆ ನಾನಿನಲ್ಲಿ ತಪ್ಪು ಮಾಡುತ್ತಿದ್ದೇನೆ. ಅನಿಸುತ್ತೆ. ಏಕೆಂದರೆ ಯಾವುದೇ ಮಹಿಳೆ ರಾತ್ರಿ 2 ಗಂಟೆಗೆ ಮುಂಬೈ ಮಹಾನಗರದ ರಸ್ತೆಯ ಮೇಲೆ ಅಪರಿಚಿತರ ಜೊತೆ ಮಾತನಾಡುತ್ತ ಇಷ್ಟೊಂದು ಸಹಜವಾಗಿ ಇರಲು ಸಾಧ್ಯವೇ ಇಲ್ಲ.
ಅವಳ ಮಾತುಗಳಲ್ಲಿ ಸ್ತ್ರೀ ಸಹಜ ಮೃದುತ್ವವಿತ್ತು. ಮಾತುಗಳಲ್ಲಿ `ಅಹಂ’ ಇಣುಕುತ್ತಲೇ ಇರಲಿಲ್ಲ. ತಾನು ಅಸಾಧಾರಣ ಕೆಲಸ ಮಾಡುತ್ತಿದ್ದೇನೆ ಎಂದು ಆಕೆಯ ಮಾತುಗಳಲ್ಲಿ ಪ್ರಕಟವಾಗುತ್ತಿರಲಿಲ್ಲ. ಟ್ಯಾಕ್ಸಿ ಚಾಲನೆ ಮಾಡುವ ಅವಳ ಕೌಶಲ್ಯ ಪುರುಷರಿಗಿಂತ ಕಡಿಮೆ ಏನಿರಲಿಲ್ಲ.
ಕೆಲವು ದಿನ ಮಗ ಸೊಸೆಯ ಜೊತೆ ಕಾಲ ಕಳೆಯಲು ನಾನು ಮೈಸೂರಿನಿಂದ ಮುಂಬೈಗೆ ಬಂದಿದ್ದೆ. ಮುಂಬೈಗೆ ಬರುತ್ತಿದ್ದಂತೆ ಒಂದು ದಿನ ಸಂಜೆ ನಮ್ಮ ಮನೆಗೂ ಬರಬೇಕೆಂದು ನನ್ನ ಹಳೆಯ ಮಿತ್ರರೊಬ್ಬರು ಆಗ್ರಹ ಮಾಡಿದ್ದರು. 23 ದಶಕಗಳ ಹಿಂದೆ ನಾನು ವಾಯುಸೇನೆಯಲ್ಲಿ ಕೆಲಸ ಮಾಡಿದ್ದೆ. ನನ್ನ ಹೆಂಡತಿ ಹಾಗೂ ಮಿತ್ರನ ಹೆಂಡತಿ ತುಂಬಾ ಆತ್ಮೀಯ ಗೆಳತಿಯರೇ ಆಗಿಬಿಟ್ಟಿದ್ದರು. ಹೀಗಾಗಿ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾ ಹರಟೆ ಹೊಡೆಯುತ್ತ ಯಾವಾಗ ರಾತ್ರಿ 1 ಗಂಟೆಯಾಯಿತೊ ತಿಳಿಯಲಿಲ್ಲ. ಅಂದಹಾಗೆ ಮಗ ವಾಸಿಸುತ್ತಿದ್ದ ಕೊಲಾಬಾದಿಂದ ನನ್ನ ಮಿತ್ರನ ಮನೆ ಪಯಿಯ ಹರಾನಂದಾನಿ ಕಾಂಪ್ಲೆಕ್ಸ್ ಗೆ ಬರಲು ಬಹಳ ತಡವಾಗಿತ್ತು. ರಾತ್ರಿ 8 ಗಂಟೆಯ ಹೊತ್ತಿಗೆ ನಾವು ಅಲ್ಲಿ ತಲುಪುತ್ತಿದ್ದಂತೆ ಊಟ, ಹರಟೆ ಮುಗಿಯಲು ರಾತ್ರಿಯ 1 ಗಂಟೆಯೇ ಆಗಿಬಿಟ್ಟಿತು. ಸ್ನೇಹಿತ ನಮ್ಮನ್ನು ಮಾತಿನಲ್ಲಿ ತೊಡಗಿಸಿ ಅಷ್ಟೊಂದು ವಿಳಂಬ ಮಾಡಿಬಿಟ್ಟಿದ್ದ. ರಾತ್ರಿ ಎಷ್ಟೊತ್ತಾದರೂ ಟ್ಯಾಕ್ಸಿಗಳು ಲಭ್ಯವಾಗುತ್ತವೆ ಎಂದೂ ಆತ ನಮಗೆ ಭರವಸೆ ಕೊಟ್ಟಿದ್ದ.
ಆದರೆ ನಮಗೆ ಅವರು ಟ್ಯಾಕ್ಸಿ ಕರೆಸಲು ಫೋನ್ ಮಾಡುವಾಗ, ನನ್ನ ಪತ್ನಿಯನ್ನುದ್ದೇಶಿಸಿ, “ಇಂದು ನೀವು ನನ್ನ ಗೆಳೆಯನ ಜೊತೆಗೆ ಇರುವಿರಿ. ಹೀಗಾಗಿ ನಾನು ಮಹಿಳಾ ಡ್ರೈವರ್ ಇರುವ ಟ್ಯಾಕ್ಸಿಯನ್ನೇ ಕರಿಸ್ತೀನಿ,” ಎಂದು ಹೇಳಿದ. ನನ್ನ ಮುಖದಲ್ಲಿ ಕೇವಲ ಆಶ್ಚರ್ಯದ ಭಾವನೆಯಷ್ಟೇ ಇತ್ತು. ಆದರೆ ನನ್ನ ಪತ್ನಿಯ ಮುಖದಲ್ಲಿ ಆಶ್ಚರ್ಯದ ಜೊತೆಗೆ ಗಾಬರಿಯೂ ಇತ್ತು.
“ಲೇಡಿ ಟ್ಯಾಕ್ಸಿ ಡ್ರೈವರ್? ಇಷ್ಟು ತಡ ರಾತ್ರಿಯಲ್ಲಿ? ಆಕೆಗೆ ಗಾಬರಿಯಾಗುವುದಿಲ್ಲವೆ? ಅವಳೊಂದಿಗೆ ಗಾರ್ಡ್ ಸಹ ಇರುತ್ತಾನೆಯೇ?” ಈ ಎಲ್ಲ ಪ್ರಶ್ನೆಗಳು ಆಕೆಯ ಬಾಯಿಂದ ಒಮ್ಮೆಲೆ ಹೊರಹೊಮ್ಮಿದವು. ಅವಳ ಆ ಪ್ರಶ್ನೆಗಳಿಂದ ಆಕೆಗೆ ಅಚ್ಚರಿಗಿಂತ ಹೆಚ್ಚಾಗಿ ಗಾಬರಿಯೇ ಆಗಿದೆ ಎನ್ನುವುದು ಸ್ಪಷ್ಟವಾಗುತಿತ್ತು.
ನನ್ನ ಆ ಸ್ನೇಹಿತ ನಗುತ್ತಲೇ, “ಇನ್ನೇನು ಆ ಲೇಡಿ ಟ್ಯಾಕ್ಸಿ ಡ್ರೈವರ್ ಬಂದುಬಿಡುತ್ತಾಳೆ. ಅವಳಿಗೆ ಈ ಎಲ್ಲ ಪ್ರಶ್ನೆಗಳನ್ನು ಕೇಳಿ,” ಎಂದು ಹೇಳಿದ.
ಮಹಿಳಾ ಟ್ಯಾಕ್ಸಿ ಡ್ರೈವರ್ ಬಗ್ಗೆ ಪ್ರಸ್ತಾಪಿಸುವ ಮುಂಚೆ ನಾವು ನಾಲ್ವರು ಅದೆಷ್ಟು ಹೊತ್ತು ಹಳೆಯ ದಿನಗಳನ್ನು ನೆನಪಿಸಿಕೊಂಡೆವೋ ಗೊತ್ತೇ ಆಗಲಿಲ್ಲ. ಆದರೆ ವರ್ತಮಾನಕ್ಕೆ ಬರುತ್ತಿದ್ದಂತೆ ದೆಹಲಿಯ ನಿರ್ಭಯಾಳ ಅತ್ಯಾಚಾರದ ಘಟನೆ ನೆನಪಾಗಿ ಮೈಮೇಲಿನ ರೋಮಗಳು ಒಮ್ಮೆಲೆ ಎದ್ದು ನಿಂತವು. ಆ ಘಟನೆಯಿಂದ ಇಡೀ ದೆಹಲಿ ವಾಸಿಗಳು ತಲೆ ತಗ್ಗಿಸುವಂತಾಗಿತ್ತು.
ನಾವು ಮಾತುಕತೆ ನಡೆಸುವ ಹೊತ್ತಿಗೆ ಮುಂಬೈನ ಶಕ್ತಿ ಮಿಲ್ ಅತ್ಯಾಚಾರ ಪ್ರಕರಣ ನಡೆದಿರಲಿಲ್ಲ. ಹೀಗಾಗಿ ನನ್ನ ಮಿತ್ರ ದೆಹಲಿಗಿಂತ ಮುಂಬೈ ಮಹಿಳೆಯರಿಗೆ ಹೆಚ್ಚು ಸುರಕ್ಷಿತ ಎಂದು ಹೇಳಿದ್ದ. ಅಂದಹಾಗೆ, ಇಷ್ಟೊತ್ತಿನ ತನಕ ಮಹಿಳೆಯರ ಸುರಕ್ಷತೆಯ ಬಗ್ಗೆ ನಡೆದ ಚರ್ಚೆಯ ಕಾರಣದಿಂದ ಆ ಮಹಿಳಾ ಚಾಲಕಿಯ ಕಾರು ಬರುತ್ತಿದ್ದಂತೆ ನಾವು ಅದರಲ್ಲಿ ಹತ್ತಿ ಕುಳಿತೆವು. ಅಲ್ಲಿಯವರೆಗೆ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳ ಬೆಟ್ಟವೇ ಎದ್ದು ನಿಂತಿತ್ತು.
ಟ್ಯಾಕ್ಸಿ ಆಗಷ್ಟೇ ಕಾಂಪ್ಲೆಕ್ಸ್ ನಿಂದ ಹೊರಗೆ ಬಂದಿತ್ತು. ಅಷ್ಟರಲ್ಲಿಯೇ ನನ್ನ ಪತ್ನಿ ಆಕೆಗೆ ಮೊದಲ ಪ್ರಶ್ನೆಯನ್ನು ತೂರಿಬಿಟ್ಟಳು. “ಕೊಲಾಬಾ ಇಲ್ಲಿಂದ ಬಹಳ ದೂರ. ಅಷ್ಟೊಂದು ದೂರ ಹೋಗಲು ನಿನಗೆ ಯಾವುದೇ ತೊಂದರೆ ಆಗುವುದಿಲ್ಲವೇ?”
ಆಗ ಆಕೆ ಸಹಜ ಮುಗುಳ್ನಗೆಯಿಂದ, “ಇಲ್ಲ ಇಲ್ಲ. ನನಗೆ ಎಷ್ಟು ದೂರ ದೂರದ ಪ್ಯಾಸೆಂಜರ್ ಸಿಗುತ್ತಾರೊ ಅಷ್ಟೂ ಒಳ್ಳೆಯದು. ಇಂತಹ ನಡುರಾತ್ರಿಯಲ್ಲಿ ಯಾರಾದರೂ ಕೇವಲ 23 ಕಿಮೀ ಅಂತರದಲ್ಲಿ ಹೋಗಲು ಕೇಳಿದರೆ ಆಗ ನನಗೆ ಸ್ವಲ್ಪ ತೊಂದರೆಯೆನಿಸುತ್ತೆ.”
ಆ ಚಾಲಕಿಯ ಹಿಂದಿ ಮಾತನಾಡುವ ಶೈಲಿ ಬೇರೆ ಚಾಲಕರು ಮಾತನಾಡುವುದಕ್ಕಿಂತ ಹೆಚ್ಚು ಸ್ಪಷ್ಟವಾಗಿತ್ತು. ಆಕೆ ಉಳಿದವರ ಹಾಗೆ `ಭಯ್ಯಾ’ಗಳು ಅಂದರೆ ಬಿಹಾರಿಗಳು ಅಥವಾ ಉತ್ತರ ಪ್ರದೇಶದರ ಗುಂಪಿಗೆ ಸೇರಿದವಳಾಗಿರಲಿಲ್ಲ.
ನನ್ನ ಹೆಂಡತಿಗೆ ಹಿಂದಿ ಭಾಷೆ ಸ್ಪಷ್ಟವಾಗಿಯೇ ಬರುತ್ತಿತ್ತು. ಚಾಲಕಿಯ ಜೊತೆಗೆ ಆಕೆಯ ಸಂಭಾಷಣೆ ಮುಂದುವರಿದಿತ್ತು, “ಹಿಂದಿ ನಿಮ್ಮ ಮಾತೃಭಾಷೆ ಅಲ್ಲ ಅನಿಸುತ್ತೆ ಅಲ್ವಾ?”
“ಹೌದು ಮೇಡಂ. ನಾನು ಉತ್ತರ ಭಾರತದವಳಲ್ಲ. ಆಂಧ್ರ ಕಡೆಯವಳು. ನಾನು ಬಾಲ್ಯದಿಂದಲೇ ಇಲ್ಲಿ ಇದ್ದೇನೆ. ಹಾಗಾಗಿ ಹಿಂದಿ, ಮರಾಠಿ ಚೆನ್ನಾಗಿ ಮಾತನಾಡುತ್ತೇನೆ. ಕನ್ನಡ ಅಷ್ಟಿಷ್ಟು ಅರ್ಥವಾಗುತ್ತದೆ. ಗುಜರಾತಿ ಕೂಡ ಮ್ಯಾನೇಜ್ ಮಾಡುತ್ತೇನೆ.”
“ಈ ಮ್ಯಾನೇಜ್ ಶಬ್ದವನ್ನು ನೋಡಿದರೆ ನೀನು ಇಂಗ್ಲಿಷನ್ನು ಚೆನ್ನಾಗಿ ಮ್ಯಾನೇಜ್ ಮಾಡ್ತೀಯಾ ಅನಿಸುತ್ತೆ,” ನಾನು ಮಧ್ಯೆ ಪ್ರವೇಶಿಸುತ್ತ ಹೇಳಿದೆ.
ಅವಳು ಖುಷಿಗೊಂಡು ಹೇಳಿದಳು, “ಹೌದು ಸರ್, ಸಾಮಾನ್ಯವಾಗಿ ಏರ್‌ಪೋರ್ಟ್‌ನಲ್ಲಿ ವಿದೇಶಿಗರು ಸಿಗ್ತಾರೆ. ಅವರೊಂದಿಗೆ ಮಾತುಕತೆ ನಡೆಸಲು ಇಂಗ್ಲಿಷ್ ತಿಳಿದಿರುವುದು ಅತ್ಯವಶ್ಯಕ.”
“ಏರ್‌ಪೋರ್ಟ್‌ನಲ್ಲಿ ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿಯೇ ವಿಮಾನಗಳು ಬರುತ್ತವೆ. ನೀನು ಯಾವಾಗಲೂ ರಾತ್ರಿ ಸಮಯದಲ್ಲಿಯೇ ಗಾಡಿ ಓಡಿಸ್ತೀಯಾ…. ಹೇಗೆ?”
“ಇಲ್ಲ. ಆರಂಭದಲ್ಲಿ ನಾನು ರಾತ್ರಿ ಕಾರು ಓಡಿಸುತ್ತಿರಲಿಲ್ಲ. ಆಗ ನನಗೆ ಮುಂಬೈ ರಸ್ತೆಗಳ ಬಗ್ಗೆ ಅಷ್ಟೊಂದು ಪರಿಚಯವಿರಲಿಲ್ಲ. ಈಗ ಮುಂಬೈ ರಸ್ತೆಗಳು ಚಿರಪರಿಚಿತಾಗಿವೆ. ಅದರಲ್ಲೂ ರಾತ್ರಿ ಹೊತ್ತು ಹೆಚ್ಚು ಹಣ…..”
ನನ್ನ ಪತ್ನಿ ಆಕೆಯ ಮಾತುಗಳನ್ನು ಅರ್ಧದಲ್ಲಿಯೇ ತುಂಡರಿಸುತ್ತ ಕೇಳಿದಳು, “ರಾತ್ರಿ ಹೊತ್ತು ಟ್ಯಾಕ್ಸಿ ಓಡಿಸಲು ನಿನಗೆ ಭಯ ಅನಿಸುದಿಲ್ಲವೇ?”
ಆಕೆ ನಿಟ್ಟುಸಿರು ಬಿಡುತ್ತ ಹೇಳಿದಳು, “ಮೇಡಂ ಗೂಂಡಾಗಳು, ತಲೆಹಿಡುಕರು ರಾತ್ರಿ ಏಕೆ ಹಗಲು ಹೊತ್ತಿನಲ್ಲಿಯೇ ಸಿಕ್ಕುಬಿಟ್ರೆ ಆಗ ಎಲ್ಲ ಅಯೋಮಯ. ಹಗಲು ಹೊತ್ತಿನಲ್ಲಿ ನಗರದಿಂದ ಹೊರಗೆ ಬನ್ನಿ ಎಂದು ಕರೆದರೆ ಅದನ್ನು ನಾವು ತಿರಸ್ಕರಿಸಲು ಆಗದು. ನಾನು ಗಾಡಿ ಓಡಿಸಲು ಶುರು ಮಾಡಿ ಬಹಳ ದಿನಗಳೇ ಆದವು. ಒಂದೆರಡು ಸಲ ಮಾತ್ರ ಕೆಲವು ಪ್ರಯಾಣಿಕರಿಂದ ನಾನು ಭಯಪಟ್ಟಿದ್ದು ಇದೆ.”
“ನೀನು ಜೊತೆಗೆ ಯಾವುದಾದರೂ ಶಸ್ತ್ರಾಸ್ತ್ರ ಇಟ್ಕೋತೀಯಾ?” ಎಂದು ನನ್ನ ಹೆಂಡತಿ ಕೇಳಿದಾಗ ಆಕೆ ನಕ್ಕುಬಿಟ್ಟಳು.
“ನನಗೆ ಪಿಸ್ತೂಲ್, ರಿವಾಲ್ವರ್ ಯಾರು ತಾನೆ ಕೊಂಡುಕೊಡುತ್ತಾರೆ? ಹಾಗೊಂದು ವೇಳೆ ಯಾರಾದರೂ ಕೊಟ್ಟರೆ ಅದಕ್ಕೆ ಲೈಸೆನ್ಸ್ ದೊರಕಿಸಿಕೊಳ್ಳುವುದು ಕಡಿಮೆ ತೊಂದರೆಯದ್ದೇ?”
ಆದರೆ ನನ್ನ ಪತ್ನಿಗೆ ಸಂತೃಪ್ತಿ ಇರಲಿಲ್ಲ. ಆಕೆ ಮಾತು ಮುಂದುವರಿಸಲು ಕೇಳಿದಳು, “ಆಮೇಲೆ?”
ನಾವು ಬಹುಶಃ ಮಾತಿನಲ್ಲೇ ಮುಳುಗಿರುತ್ತಿದ್ದೆವೋ ಏನೊ? ಅಷ್ಟರಲ್ಲಿಯೇ ಕೆಲವು ನಿಮಿಷಗಳ ಹಿಂದಷ್ಟೇ ದಾಟಿ ಬಂದ ರಸ್ತೆಯಲ್ಲಿಯೇ ಮತ್ತೆ ಬಂದಂತೆ ಭಾಸವಾತ್ತು. ನಾನು ಆಕೆಗೆ ಈ ಬಗ್ಗೆ ಹೇಳಿದೆ. ಆಕೆ ನನ್ನತ್ತ ಒಮ್ಮೆ ತಿರುಗಿ, “ಹೌದು ಸರ್, ನನಗೂ ಹಾಗೆಯೇ ಅನಿಸ್ತಿದೆ. ನಾನು ಒಂದೇ ಒಂದು ಸಲ ಕೊಲಾಬಾಕ್ಕೆ ಬಂದಿದ್ದೆ. ರಸ್ತೆ ಸ್ವಲ್ಪ ಕನ್‌ಫ್ಯೂಸ್ ಆಗ್ತಿದೆ.”
ತಕ್ಷಣ ಅವಳು ಮೊಬೈಲ್ ಕೈಗೆತ್ತಿಕೊಂಡು ಯಾರಿಗೋ ಫೋನ್ ಮಾಡಿದಳು. ಅದು ಬಹುಶಃ ಅವಳ ಟ್ಯಾಕ್ಸಿ ಸ್ಟ್ಯಾಂಡ್‌ನದಾಗಿತ್ತು. ಅವಳು ರಸ್ತೆಯ ಬಗೆಗೆ ತನ್ನ ಸಂದೇಹ ವಿವರಿಸಿ ಅವಶ್ಯಕ ನಿರ್ದೇಶನಗಳನ್ನು ಪಡೆದಳು. ನಂತರ ನಮ್ಮ ಕಡೆ ಮುಖ ಮಾಡಿ, “ಸಾರಿ ಸರ್, ಸಾರಿ ಮೇಡಂ, ಬಹುಶಃ ನಾನು ತಪ್ಪು ಮಾಡಿದ್ದೆ ಅನಿಸುತ್ತೆ. ಈಗ ತಪ್ಪು ಸರಿ ಮಾಡ್ತೀನಿ,” ಎಂದು ಹೇಳಿ ಆಕೆ ಟ್ಯಾಕ್ಸಿಯನ್ನು `ಯು’ ಟರ್ನ್ ಮಾಡಿದಳು.
ಒಂದು ಸರ್ಕಲ್ ನಲ್ಲಿ ಸಚಿವಾಲಯದ ಕಡೆ ಬಾಣದ ಗುರುತನ್ನು ತೋರಿಸುತ್ತ ಕ್ಷಮೆ ಯಾಚನೆ ಮಾಡುತ್ತಾ ಹೇಳಿದಳು, “ನಾನು ನಿಮ್ಮನ್ನು ತಪ್ಪು ದಾರಿಯಲ್ಲಿ ಕರೆದುಕೊಂಡು ಹೋಗಿ ಸುಮಾರು 10 ಕಿ.ಮೀ. ಹೆಚ್ಚುವರಿಯಾಗಿ ಸುತ್ತಾಡಿಸಿದೆ. ನೀವು ಚಾರ್ಜ್ ನೋಡಿ 10 ಕಿ.ಮೀ.ನಷ್ಟು ಹಣವನ್ನು ಕಟ್ ಮಾಡಿ ಕೊಡಿ.”
ನಮಗಿದು ಒಂದು ವಿಶಿಷ್ಟ ಅನುಭವವೇ ಆಗಿತ್ತು. ನಡುರಾತ್ರಿ 1.30-2.00 ಗಂಟೆ ಸುಮಾರಿಗೆ ಯುವತಿಯೊಬ್ಬಳು ಪಯಿಯಿಂದ ಕೊಲಾಬಾದ ದೂರ ಪ್ರಯಾಣಕ್ಕೆ ಬಂದದ್ದೇ ಒಂದು ಆಶ್ಚರ್ಯ. ಅಂತಹದರಲ್ಲಿ ಅವಳ ಈ ಮಾತುಗಳು ನಮ್ಮನ್ನು ಮತ್ತಷ್ಟು ಮೂಕವಿಸ್ಮಿತರನ್ನಾಗಿ ಮಾಡಿದ್ದ. ನಾನು ಅವಳಿಗೆ ಧನ್ಯವಾದ ಹೇಳಿ ಅವಳ ಪ್ರಾಮಾಣಿಕತೆಯನ್ನು ಪ್ರಶಂಸಿಸಿದೆ. ಅದನ್ನು ಕೇಳಿ ಅವಳ ನಾರಿ ಸಹಜ ನಗು ಒಮ್ಮೆವೆ ತೇಲಿಬಂತು. ಪುರುಷರಿಂದ ವಶಪಡಿಸಿಕೊಂಡ ಕೆಲಸದಲ್ಲಿದ್ದರೂ ಆಕೆ ತನ್ನ ನಗುವನ್ನು ಕಳೆದುಕೊಂಡಿರಲಿಲ್ಲ. ಕೊಲಾಬಾ ಇನ್ನೇನು ಸಮೀಪದಲ್ಲೇ ಇತ್ತು. ಆದರೂ ಅರ್ಧ ಗಂಟೆ ಬೇಕೇಬೇಕಿತ್ತು. ಅಷ್ಟರಲ್ಲಿಯೇ ಅವಳಿಗೊಂದು ಫೋನ್ ಬಂತು. ಅವಳು ಅದನ್ನು ಕಿವಿಗೆ ಇಟ್ಟುಕೊಂಡು 2-3 ಸಲ, “ಎಸ್ ಮೇಡಂ, ಎಸ್ ಮೇಡಂ…. ನಾನು 10 ನಿಮಿಷದಲ್ಲಿಯೇ ಅಲ್ಲಿರ್ತೀನಿ,” ಎಂದು ಹೇಳಿದಳು.
ನನಗೆ ಆಶ್ಚರ್ಯವಾಯಿತು. ಕೊಲಾಬಾ ತಲುಪಲು ಇನ್ನೂ 15-20 ನಿಮಿಷ ಬೇಕಿತ್ತು. ಇವಳು 10 ನಿಮಿಷದಲ್ಲಿ ಅಲ್ಲಿ ಹೇಗೆ ತಲುಪುತ್ತಾಳೆ? ಹೀಗಾಗಿ ನನಗೆ ಸುಮ್ಮನಿರಲು ಆಗಲಿಲ್ಲ. ನನ್ನ ಸಂದೇಹ ನಿವಾರಿಸಲು ಆಕೆಗೆ ಕೇಳಿದೆ.“ಸರ್, ನಾನು ನಿಮಗೂ ಸಹ 10 ನಿಮಿಷದಲ್ಲಿಯೇ ಬರ್ತೀನಿ ಎಂದು ಹೇಳಿದ್ದೆ. ಅರ್ಧ ಗಂಟೆ ಆಯ್ತು ತಾನೆ? ಆ ಮೇಡಂ ರಾತ್ರಿ ಹೊತ್ತಿನಲ್ಲಿ ಲೇಡಿ ಡ್ರೈವರ್‌ಗಾಗಿ ಶೋಧಿಸುತ್ತಿದ್ದಾರೆ. ಅಷ್ಟು ಸುಲಭವಾಗಿ ಲೇಡಿ ಡ್ರೈವರ್‌ಗಳು ಸಿಕ್ಕಿಬಿಡುತ್ತಾರೆಯೇ? ಈ ಉದ್ಯೋಗದಲ್ಲಿ ಅಷ್ಟಿಷ್ಟು ಸುಳ್ಳಂತೂ ಹೇಳಲೇಬೇಕಾಗುತ್ತದೆ.”
ನಾನು ಹಾಗೂ ನನ್ನ ಹೆಂಡತಿ ಇಬ್ಬರೂ ಒಮ್ಮೆಲೆ ನಕ್ಕೆವು. ಅವಳು ಕೇವಲ ಚಾಲಕಳಷ್ಟೇ ಅಲ್ಲ, ಚಾಲಾಕಿ ಕೂಡ ಎಂದು ಖಾತ್ರಿಯಾಯಿತು. ನನ್ನ ಮನಸ್ಸು ಅವಳ ಎರಡೂ ರೂಪಗಳಿಗೆ ಸಲಾಮು ಎಂದು ಹೇಳುತ್ತಲಿತ್ತು.