ರಾತ್ರಿ ಮೇಘನಾ ಮನೆಗೆ ಬರುತ್ತಿದ್ದಂತೆಯೇ ರಾಜೇಶ್‌ ಅವಳ ಬಳಿ ಸಿಟ್ಟಿನ ಮುಖದಲ್ಲಿಯೇ ಬಂದು ನಿಂತ. ಆಕೆ ಡ್ರೈವರ್‌ಗೆ ನಾಳೆ ಮುಂಜಾನೆ ಸರಿಯಾದ ಸಮಯಕ್ಕೆ ಬರಬೇಕೆಂದು ಸೂಚನೆ ಕೊಡುವಲ್ಲಿ ಮಗ್ನಳಾಗಿದ್ದಳು. ಅಷ್ಟು ಹೊತ್ತೂ ರಾಜೇಶ್‌ ಅವಳನ್ನು ನುಂಗಿಬಿಡುವಂತೆ ನೋಡುತ್ತಿದ್ದ.

ಡ್ರೈವರ್‌ ಹೋದ ಬಳಿಕ ಮೇಘನಾ ರಾಜೇಶ್‌ ಕಡೆ ಗಮನ ಕೊಡದೆಯೇ ತನ್ನ ರೂಮಿಗೆ ಹೊರಟುಹೋದಳು. ಅವಳಿಗೂ ಸಾಕಷ್ಟು ಕೋಪ ಬರುತ್ತಿತ್ತು. ಆದರೂ ಅವಳು ಮೌನವಾದಳು. ಮತ್ತೊಂದು ಸಂಗತಿಯೆಂದರೆ, ಅವಳು ಸಾಕಷ್ಟು ದಣಿದಿದ್ದಳು. ಮೂವರು ದಿನಗಳ ಬಳಿಕ ಒಂದು ಕಾನ್‌ಫರೆನ್ಸ್ ಗೆಂದು ಅವಳು ಸಿಂಗಾಪುರಕ್ಕೆ ಹೋಗಬೇಕಿತ್ತು. ಅದಕ್ಕೂ ಮುಂಚೆ ಅವಳು ಅಲ್ಲಿ ಪ್ರೆಸೆಂಟ್ ಮಾಡಲು ಪೇಪರ್ಸ್‌ ಸಿದ್ಧ ಮಾಡಿಕೊಳ್ಳಬೇಕಿತ್ತು. ಇದರ ಹೊರತಾಗಿ ಬೇರೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಹೀಗಾಗಿ ಅವಳು ರಾಜೇಶ್‌ ಜೊತೆ ಮಾತಿಗೆ ಮಾತು ಬೆರೆಸುವ ಮೂಡ್‌ನಲ್ಲಿರಲಿಲ್ಲ. ಇತ್ತೀಚೆಗೆ ರಾಜೇಶನ ಈ ತೆರನಾದ ವರ್ತನೆ ಸಾಮಾನ್ಯ ಎಂಬಂತಾಗಿಬಿಟ್ಟಿತ್ತು. ಅವಳು ಯಾವಾಗ ಅವನಿಗಿಂತ ಉನ್ನತ ಹುದ್ದೆಗೇರಿದ್ದಳೋ ಆಗಿನಿಂದ ಅವನು ಅವಳ ಬಗ್ಗೆ ಸದಾ ತುಚ್ಛವಾಗಿ ಮಾತನಾಡುತ್ತಿದ್ದ.

ದುರ್ವರ್ತನೆ

“ನಿನ್ನನ್ನು ನೀನು ಏನೆಂದು ತಿಳಿದುಕೊಂಡಿರುವೆ? ನೌಕರಿ ಮಾಡುವವಳು ನೀನೊಬ್ಬಳೇನಾ ಅಥವಾ ನಿನ್ನ ಅಹಂ ಪ್ರಮಾಣ ಮಿತಿ ಮೀರುತ್ತಿದೆಯಾ?” ಎಂದು ಹೇಳುತ್ತಲೇ ರಾಜೇಶ್‌ ಒಳಗೆ ಬಂದ. ಆದರೂ ಮೇಘನಾ ಸುಮ್ಮನೇ ಇದ್ದಳು. ಅವಳು ಏನಾದರೂ ಹೇಳಿದ್ದರೂ ಏನಾಗುತಿತ್ತು? ಮಾತು ಇನ್ನಷ್ಟು ಮುಂದುವರಿಯುತ್ತಿತ್ತು.

“ನಾನು ನಿನ್ನೊಂದಿಗೇ ಮಾತಾಡ್ತಿರೋದು. ನನಗೆ ಉತ್ತರ ಕೊಡು, ಇಂದು ಏಕೆ ಇಷ್ಟೊಂದು ತಡ ಆಯ್ತು?”

ರಾಜೇಶನ ಮಾತುಗಳನ್ನು ಕೇಳಿಯೂ ಕೇಳದವಳಂತೆ ಟವೆಲ್ ‌ಎತ್ತಿಕೊಂಡು ಆಕೆ ಬಾಥ್‌ ರೂಮ್ ಕಡೆ ನಡೆದಳು. ರಾಜೇಶ್‌ ಬಹಳ ಹೊತ್ತಿನ ತನಕ ಬಡಬಡಿಸುತ್ತ ಅಲ್ಲಿಯೇ ನಿಂತಿದ್ದ. ನಂತರ ದಿಂಬು ಎತ್ತಿಕೊಂಡು ಬೇರೆ ರೂಮಿಗೆ ಮಲಗಲು ಹೋದ. ಮರುದಿನ ಮೇಘನಾ ಈ ಸಂಗತಿಯನ್ನು ತನ್ನ ಅಕ್ಕನಿಗೆ ಹೇಳಿದಾಗ ಆಕೆ, “ನೀನು ಅವನಿಗೆ ಆ ತಕ್ಷಣವೇ ಸ್ಪಷ್ಟ ಉತ್ತರ ಕೊಡಬೇಕಿತ್ತು. ಅವನು ತನ್ನನ್ನು ತಾನು ಏನೆಂದು ತಿಳಿದುಕೊಂಡಿದ್ದಾನೆ? ಯಾವಾಗ ಬೇಕೆಂದಾಗ ನಿನ್ನ ಮೇಲೆ ಹಕ್ಕು ಚಲಾಯಿಸಲು ನೀನೇನು ಅವನ ಗುಲಾಮಳಲ್ಲ, ಈಗಂತೂ ಅವನ ವರ್ತನೆ ಬಹಳ ಕಠೋರವಾಗುತ್ತ ಹೊರಟಿದೆ,” ಎಂದು ಸ್ವಲ್ಪ ಕೋಪದಿಂದ ಹೇಳಿದಳು.

“ಅಕ್ಕಾ, ಅವರಿಗೆ ಉತ್ತರ ಕೊಟ್ಟು ಏನು ಪ್ರಯೋಜನ? ಅದರಿಂದ ವಾದ ವಿವಾದ ಬೆಳೆಯುತ್ತದೆಯೇ ವಿನಾ ಮತ್ತೇನೂ ಆಗದು. ನನಗನಿಸುತ್ತೆ ಅವರು ಯಾವಾಗ್ಯಾವಾಗ ಕೂಗಾಡುತ್ತಾರೋ, ಆಗ ಅವರನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದು. ನಮ್ಮ ಸಮಾಜದಲ್ಲಿ ಗಂಡಿನ ಯಶಸ್ಸಿನ ಬಗ್ಗೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಲಾಗುತ್ತದೆ. ಆದರೆ ಹೆಂಡತಿಯ ಯಶಸ್ಸು ಗಂಡನಿಗೆ ಕಣ್ಣಲ್ಲಿ ಚುಚ್ಚಲಾರಂಭಿಸುತ್ತದೆ. ಆಕೆ ಗಳಿಸುವ ಹಣ ಮನೆಗೆ ಬರುವುದು ಮಾತ್ರ ಅವರಿಗೆ ಖೇದ ಎನಿಸುವುದಿಲ್ಲ,” ಮೇಘನಾ ದುಃಖದಿಂದಲೇ ಹೇಳಿದಳು.

ರಾಜೇಶನ ವರ್ತನೆ ವ್ಯವಹಾರದಿಂದ ಆಕೆ ತೀರಾ ನೊಂದಿದ್ದಳು. ರಾಜೇಶ್‌ ಅವಳನ್ನು ಯಾವಾಗಲೂ ಕೆಣಕುವುದು, ಟೀಕಿಸುವುದು ಮಾಡುತ್ತಲೇ ಇದ್ದರೂ ಆಕೆ ಮಾತ್ರ ಅದನ್ನು ನಿರ್ಲಕ್ಷಿಸುವುದೇ ಉತ್ತಮ ಎಂದು ಭಾವಿಸುತ್ತಿದ್ದಳು. ತಾನೂ ಕೂಡ ವಾದಕ್ಕೆ ಪ್ರತಿವಾದ ಮಾಡುತ್ತಿದ್ದರೆ, ಮನೆ ರಣರಂಗವಾಗಿ ಬಿಡುತ್ತಿತ್ತು. ಹಾಗಾಗುವುದು ಆಕೆಗೆ ಬೇಕಿರಲಿಲ್ಲ.

ಯಶಸ್ಸಿನ ಬಗ್ಗೆ ಅಸೂಯೆ

ಇದು ಲೀಲಾ ಅವರ ಕಥೆ. ಅವರು ಒಂದು ಕಂಪನಿಯಲ್ಲಿ ಸಿಇಓ ಆಗಿದ್ದಾರೆ. ಅವರ ಪತಿ ಬ್ಯಾಂಕ್‌ನಲ್ಲಿ ಮ್ಯಾನೇಜರ್‌ಹುದ್ದೆಯಲ್ಲಿದ್ದಾರೆ. ಹೆಂಡತಿಗಿಂತ ಅವರೇನೂ ಕಡಿಮೆ ಹುದ್ದೆಯಲ್ಲಿಲ್ಲ. ಆದರೂ ಹೆಂಡತಿಯ ಯಶಸ್ಸಿನ ಬಗ್ಗೆ ಅವರಿಗೆ ಅಸೂಯೆ ಇದೆ. ಇದು ಅವರ ಮಾತಿನಿಂದ ಆಗಾಗ ಗೊತ್ತಾಗುತ್ತಲೇ ಇರುತ್ತದೆ. ಆದರೆ ಮೇಲ್ನೋಟಕ್ಕೆ ತಾನು ಖುಷಿಯಾಗಿದ್ದೇನೆ ಎಂಬುದನ್ನು ತೋರಿಸಿಕೊಳ್ಳುತ್ತಿರುತ್ತಾರೆ. ಒಮ್ಮೊಮ್ಮೆ ಅದೆಷ್ಟು ಕಟುವಾಗಿ ವರ್ತಿಸುತ್ತಾರೆಂದು ಲೀಲಾ ದಂಗಾಗಿ ಹೋಗುತ್ತಾಳೆ.

ಮನಸ್ಸಿನ ಆಕ್ರೋಶ

ಆದರೆ ಲೀಲಾ ಪತಿಯ ಮಾತುಗಳನ್ನು ಕೇಳುತ್ತಾ ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ಅವರು ತಕ್ಷಣವೇ ಉತ್ತರ ಕೊಟ್ಟುಬಿಡುತ್ತಾರೆ, “ನನಗೆ ಪ್ರಮೋಷನ್‌ ಆಗಿದೆ, ಇದರಲ್ಲಿ ನನ್ನದೇನು ತಪ್ಪಿದೆ? ಅದರ ಲಾಭ ನಮ್ಮ ಮನೆಗೆ ತಾನೇ ದೊರೆಯುತ್ತಿರುವುದು? ನಮ್ಮ ಜೀವನ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಸಾಧ್ಯವಾಗಿದೆ. ಆದರೂ ನಿಮಗೆ ನನ್ನ ಬಗ್ಗೆ ಇಷ್ಟೊಂದು ಅಸಹನೆ, ಕೋಪ ಏಕೆ ಎನ್ನುವುದು ನನಗಂತೂ ಅರ್ಥ ಆಗ್ತಿಲ್ಲ.

“ಮನೆಯ ಸಮಸ್ತ ಜವಾಬ್ದಾರಿಗಳನ್ನು ನಾನೇ ನಿಭಾಯಿಸುತ್ತಿದ್ದೇನೆ. ಇಡೀ ದಿನ ಹೆಣಗಾಡುತ್ತಿರುತ್ತೇನೆ. ಆದರೂ ನಿಮಗೆ ನನ್ನ ಬಗ್ಗೆ ನೆಮ್ಮದಿ ಇಲ್ಲ. ನನ್ನ ಬಗ್ಗೆ ಎರಡು ಒಳ್ಳೆಯ ಮಾತುಗಳನ್ನಾಡುವುದಿರಲಿ, ನನ್ನ ಬಗ್ಗೆ ಸದಾ ಗೊಣಗ್ತಾನೇ ಇರ್ತೀರಲ್ಲ,” ಎಂದು ಹೇಳುತ್ತ ಹೇಳುತ್ತ ಲೀಲಾ ಅವರ ಕಣ್ಣಲ್ಲಿ ನೀರು ತೊಟ್ಟಿಕ್ಕತೊಡಗಿತು.

ಆ ಸಮಯದಲ್ಲಿ ಅವರ ಪತಿ ಏನೂ ಮಾತನಾಡಲು ಹೋಗುವುದಿಲ್ಲ. ತನ್ನ ಅಂತರಂಗದಲ್ಲಿನ ಆಕ್ರೋಶ ಹೊರಹಾಕಿದ ಲೀಲಾಗೆ ಸ್ವಲ್ಪ ನೆಮ್ಮದಿಯೆನಿಸುತ್ತದೆ.

“ಏನಿದು ನಿನ್ನ ರೌದ್ರಾವತಾರ? ನಾನೇನಾದರೂ ಹೇಳುತ್ತಿದ್ದಂತೆ ನೀನು ಒಮ್ಮೆಲೆ ಮನಸ್ಸಿನ ಆಕ್ರೋಶವನ್ನೆಲ್ಲ ಹೊರಹಾಕಿ ಬಿಡ್ತೀಯಾ?” ಆ ಮಾತಿಗೆ ಲೀಲಾ ನಗುತ್ತಲೇ ಹೇಳಿದರು,

“ಮನಸ್ಸಿನಲ್ಲಿಯೇ ಕೊರಗುತ್ತ ಇದ್ದರೆ ಕೆಲಸ ಆಗುವುದಿಲ್ಲ. ಹೀಗಾಗಿ ಮನಸ್ಸಿನಲ್ಲಿರೋದನ್ನು ಹೊರ ಹಾಕ್ತೀನಿ. ನನಗೂಂತೂ ಇದೇ ಸರಿ ಅನಿಸುತ್ತೆ.”

“ಬೇರೆಯವರು ನನ್ನನ್ನುದ್ದೇಶಿಸಿ, `ನಿಮ್ಮ ಹೆಂಡ್ತಿನೇ ಈಗ ಹೆಚ್ಚು ಸಂಬಳ ತೆಗೆದುಕೊಳ್ತಾರೆ,’ ಎಂದು ನನ್ನನ್ನು ತಮಾಷೆ ಮಾಡ್ತಾರೆ. ಹಾಗಾಗಿ ನಾನು ನಿನಗೆ ಹೀಗೆಲ್ಲ ಹೇಳ್ತೀನಿ. ನೀನು ಅದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳದೆ ನನಗೇ ಒಂದಿಷ್ಟು ಬುದ್ಧಿವಾದ ಹೇಳಿ ನಿನ್ನ ಮನಸ್ಸನ್ನು ಹಗುರ ಮಾಡಿಕೊಳ್ತೀಯಾ.” ಸುಮ್ಮನಿರುವುದು ಅಪಾಯಕಾರಿ ಪತಿಯ ಮಾತನ್ನು ಕೇಳಿ ಲೀಲಾ ಮುಗುಳ್ನಗದೇ ಇರಲು ಆಗಲಿಲ್ಲ. ಆದಾಗ್ಯೂ ತನ್ನ ಯಶಸ್ಸಿನ ಬಗ್ಗೆ ಪತಿಗೆ ಅಷ್ಟಿಷ್ಟು ಅಸೂಯೆ ಇದೆ ಎನ್ನುವುದು ಲೀಲಾಗೂ ಗೊತ್ತು. ಬೇರೆ ಪತಿಯಂದಿರ ಹಾಗೆ ತನ್ನ ಪತಿ ತನ್ನ ಮೇಲೆ ನಿರ್ಬಂಧ ಹೇರಲು ಸಾಧ್ಯವಿಲ್ಲ ಎನ್ನುವುದು ಆಕೆಗೆ ಈಗ ಮನದಟ್ಟಾಗಿದೆ.

ಒಂದು ವೇಳೆ ಏನೂ ಮಾತನಾಡದೆ ಸುಮ್ಮನಿದ್ದರೆ, ಒಂದು ದಿನ ಬೇರೆ ರೀತಿಯಲ್ಲಿ ಅದು ಜ್ವಾಲಾಮುಖಿಯಂತೆ ಸ್ಛೋಟಗೊಳ್ಳಬಹುದು. ಹೀಗಾಗಿ ಆಕೆಗೆ ತಕ್ಕ ಉತ್ತರ ಕೊಡುವುದೇ ಸೂಕ್ತ ಎನಿಸುತ್ತದೆ. ಇದರಿಂದ ಇಬ್ಬರೂ ಸಮತೋಲನದಿಂದ ಇರಬಹುದು ಮತ್ತು ಮನೆಯ ಶಾಂತಿಯೂ ಹಾಗೆಯೇ ಉಳಿಯುತ್ತದೆ.

ಕಾರಣವಿಲ್ಲದೆ ಆಪಾದನೆ

ಬಹಳಷ್ಟು ಕಡಿಮೆ ಪತಿಯಂದಿರಿಗೆ ಮಾತ್ರ ತಮ್ಮ ಹೆಂಡತಿಯರ ಯಶಸ್ಸು ಅಸೂಯೆಯನ್ನುಂಟು ಮಾಡುದಿಲ್ಲವೇನೋ? ಎದುರಿಗೆ ಅವರು ಹಾಗೆ ತೋರಿಸಿಕೊಳ್ಳುವುದಿಲ್ಲ. ಆದರೆ ಒಳಗೊಳಗೆ ನಿನ್ನ ಹೆಂಡತಿ ಮುಂದೆ ಹೋದಳು, ನೀನು ಹಿಂದೆ ಉಳಿದೆ ಎಂದು ಅಹಂ ಅವರನ್ನು ಧಿಕ್ಕರಿಸುತ್ತಿರುತ್ತದೆ.

ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮಹಿಳೆಯರಿಗೆ ಕೆಲಸ ಮಾಡುವುದು ಅನಿವಾರ್ಯ. ಅಷ್ಟೇ ಅಲ್ಲ, ಯುವಕರೂ ಕೂಡ ಉದ್ಯೋಗಸ್ಥ ಯುವತಿಯರನ್ನೇ ಮದುವೆಯಾಗಲು ಇಷ್ಟಪಡುತ್ತಿದ್ದಾರೆ. ಕಾಲದ ಓಟದ ಜೊತೆಗೆ ಪುರುಷರಿಗಿಂತ ಹೆಂಗಸರೇ ಹೆಚ್ಚು ಯಶಸ್ವಿಯಾದರೆ ಅದರಲ್ಲಿ ಅವರ ತಪ್ಪೇನು? ಒಂದು ವೇಳೆ ಒಬ್ಬ ಯುವತಿಯ ಯಶಸ್ಸಿನ ಕಾರಣದಿಂದಾಗಿಯೇ ಆಕೆಯ ಪತಿ ಆಕೆಗೆ ತೊಂದರೆ ಕೊಡುತ್ತಿದ್ದರೆ, ಆಕೆ ಅದಕ್ಕೆ ಸೂಕ್ತ ಉತ್ತರ ಕೊಡಲೇಬೇಕಾಗುತ್ತದೆ.

ಮನೋತಜ್ಞರು ಏನು ಹೇಳುತ್ತಾರೆ?

ಆದರೆ ಮನೋತಜ್ಞರು ಇದರ ಮತ್ತೊಂದು ಮುಖದ ಬಗ್ಗೆಯೂ ಗಮನ ಸೆಳೆಯುತ್ತಾರೆ. ಮನೋತಜ್ಞ ರಮೇಶ್‌ ಅವರ ಪ್ರಕಾರ, “ಗಂಡ ಒಂದು ವೇಳೆ ನಿಮ್ಮ ಯಶಸ್ಸಿನ ಬಗ್ಗೆ ಸಿಡಿಮಿಡಿಕೊಳ್ಳುತ್ತಿದ್ದರೆ, ಆಗ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವುದು ಕಠಿಣವೇ ಹೌದು. ಏಕೆಂದರೆ ಮೊದಲನೆಯದು, ನೀವು ಗಳಿಸುತ್ತಿದ್ದೀರಿ. ಎರಡನೆಯದು ಅವರಿಗಿಂತ ಹೆಚ್ಚು ಗಳಿಸುತ್ತಿದ್ದೀರಿ.

“ನಿಮಗೆ ನಿಮ್ಮದೇ ಆದ ಒಂದು ಅಸ್ತಿತ್ವ ಇದೆ. ನೀವು ನಿಮ್ಮದೇ ಆದ ರೀತಿಯಲ್ಲಿ ಜೀವಿಸಲು ಇಚ್ಛಿಸುತ್ತಿರುವಿರಿ. ಅಂದಹಾಗೆ ಬಹಳಷ್ಟು ಮಹಿಳೆಯರು ಹೊಂದಾಣಿಕೆಯ ಮನೋಭಾವದಿಂದ ತಮ್ಮ ಜವಾಬ್ದಾರಿ ನಿಭಾಯಿಸಲು ಪ್ರಯತ್ನಿಸುತ್ತಾರೆ. ಒಂದು ವೇಳೆ ಅವರಿಗೆ ಪತಿಯ ಸಹಕಾರ ಸಿಗದೇ ಹೋದಲ್ಲಿ ಅವರು ಈ ರೀತಿಯ ಪ್ರತಿಕ್ರಿಯೆ ತೋರಿಸಬಹುದು.”

ಇಂತಹ ಸ್ಥಿತಿಯಲ್ಲಿ ಆ ಸಂಗತಿಯ ಬಗ್ಗೆ ನಿರ್ಲಕ್ಷ್ಯ ತೋರಬೇಕೊ ಅಥವಾ ತಕ್ಕ ಉತ್ತರ ಕೊಡಬೇಕೊ ಎಂಬುದು ಆಗಿನ ಪರಿಸ್ಥಿತಿ ಎಂಥದು ಎಂಬುದನ್ನು ಅವಲಂಬಿಸಿರುತ್ತದೆ. ಪತಿಯ ನೋವನ್ನು ಅರಿತುಕೊಳ್ಳಿ.

ಒಂದು ವೇಳೆ ಪತಿಯ ಮಾತಿಗೆ ಏನಾದರೂ ಮಾತನಾಡಲೇಬೇಕೆಂದಿದ್ದರೆ, ನೀವು ಆಗ ಮಾತನಾಡಿ. ಆದರೆ ಆ ಸಮಯದಲ್ಲಿ ಮೌನವಾಗಿರುವುದೇ ಸೂಕ್ತ ಎನಿಸಿದರೆ ಅದನ್ನು ನಿರ್ಲಕ್ಷಿಸಿ ಬಿಡಿ. ಈ ಎರಡೂ ಪರಿಸ್ಥಿತಿಗಳಲ್ಲಿ ಪತಿಗೆ ತನ್ನ ತಪ್ಪಿನ ಅರಿವಾಗುತ್ತದೆ.

ಯಾವ ಮಹಿಳೆಯರು ತಮ್ಮನ್ನು ತಾವು ಶ್ರೇಷ್ಠ ಎಂದು ಭಾವಿಸುತ್ತಾರೊ, ಗಂಡನನ್ನು ತನಗಿಂತ ಕಡಿಮೆ ಎಂದು ತಿಳಿಯುತ್ತಾರೊ ಆಗ ಗಂಡನಾದವನು ಹೆಚ್ಚು ಸಿಡಿಮಿಡಿಕೊಳ್ಳುತ್ತಾನೆ. ಗಂಡ ಹೀಗೇಕೆ ಮಾಡುತ್ತಿದ್ದಾನೆಂದು ಹೆಂಡತಿಯಾದವಳು ಗಮನಹರಿಸಿದರೆ ಆಗ ಪರಿಸ್ಥಿತಿ ಜಗಳದ ತನಕ ತಲುಪುದೇ ಇಲ್ಲ.

ಮೊದಲಿನ ಯೋಚನೆ

ನಮ್ಮ ಸಾಮಾಜಿಕ ವ್ಯವಸ್ಥೆ ಮುಂಚೆಯಿಂದಲೂ ಹೇಗಿತ್ತೆಂದರೆ, ಆಗ ಪುರುಷ ಗಳಿಸುತ್ತಿದ್ದ ಮತ್ತು ಹೆಂಡತಿ ಮನೆ ನಡೆಸುತ್ತಿದ್ದಳು. ಈಗಿನ ಸಾಮಾಜಿಕ ಸ್ಥಿತಿಯೇ ಬದಲಾಗಿದೆ. ಆದರೆ ಯೋಚನೆ ಮಾತ್ರ ಮೊದಲಿನಂತೆಯೇ ಇದೆ. ಹೀಗಾಗಿ ಗಂಡನಿಗೆ ತನ್ನ ಹೆಂಡತಿಯ ಯಶಸ್ಸನ್ನು ಸುಲಭವಾಗಿ ಸಹಿಸಿಕೊಳ್ಳುವುದು ಕಷ್ಟ.

ಈ ಯೋಚನೆಯನ್ನು ಬದಲಿಸುವುದೂ ಕಷ್ಟ, ಅದರ ಜೊತೆ ಜೊತೆಗೆ ನಿಮ್ಮ ಬೆಳವಣಿಗೆಯನ್ನು ತಡೆಯುವುದೂ ಕಷ್ಟ. ಹೀಗಾಗಿ ಗಂಡನ ಯೋಚನೆಯ ಬಗ್ಗೆ ಸಿಡಿಮಿಡಿಗೊಳ್ಳದೆ ನಿರ್ಲಕ್ಷ್ಯ ಮಾಡಿಬಿಡಿ. ಒಮ್ಮೊಮ್ಮೆ ತಕ್ಷಣವೇ ಉತ್ತರ ನೀಡಿ ನಿಮ್ಮ ಮನಸ್ಸಿನ ಭಾರನ್ನು ಹಗುರ ಮಾಡಿಕೊಂಡು ಬಿಡಿ. ಪರಸ್ಪರ ಮಾತುಕತೆಯಿಂದ ಹಳೆಯ ಓ

ಯೋಚನೆ ಹೊರಟು ಹೋಗಿ ನಿಮ್ಮ ಪತಿಯೇ ನಿಮ್ಮನ್ನು ಒಂದು ಸಲ ಪ್ರಶಂಸಿಸದಿದ್ದರೆ ಕೇಳಿ.

– ಪಿ. ಪರಿಮಳಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ