ಅತ್ತೆ ಸೊಸೆಯರಲ್ಲಿ ಹೊಂದಾಣಿಕೆ ಚೆನ್ನಾಗಿದ್ದರೆ ಅವರ ಸಂಬಂಧ ಬಹಳ ಮಧುರವಾಗಿರುತ್ತದೆ. ಅವರ ಬದುಕಿನಲ್ಲಿ ಸರಸ ಸುಖ ಇರುತ್ತದೆ. ಯಾವುದೇ ಪೈಪೋಟಿ ಇರುವುದಿಲ್ಲ. ಕೊಡುವ ಸಂತಸ ಇದ್ದರೆ, ಸ್ವೀಕರಿಸುವ ಅವಕಾಶ ಇರುತ್ತದೆ. ಅಲ್ಲಿ ಭಾವ, ಮೈದುನ, ನಾದಿನಿ, ಅತ್ತಿಗೆಯರು, ಸೋದರಳಿಯ ಸೊಸೆಯರು ಎಂದಿಗೂ ಉಪೇಕ್ಷಿತರಲ್ಲ. ಕುಟುಂಬದಲ್ಲಿ ಗೌರವಾನ್ವಿತರಾಗಿರುತ್ತಾರೆ. ಇಂತಹ ಸಂಬಂಧಗಳಿಂದಲೇ ಮಹಿಳೆಗೆ ಮದುವೆಯ ಸುಖ ಹಾಗೂ ಘನತೆಯ ಅನುಭವವಾಗುತ್ತದೆ. ಮದುವೆ ಅವಳಿಗೆ ತಾಯಿ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅತ್ತಿಗೆ, ಸೊಸೆ ಇತ್ಯಾದಿ ಬಹಳಷ್ಟು ಸಂಬಂಧಗಳನ್ನು ಕೊಟ್ಟಿದೆ. ಆದರೆ ಅತ್ತೆ ಸೊಸೆಯ ಸಂಬಂಧದ ಬಗ್ಗೆ ಜನ ಸಾಮಾನ್ಯವಾಗಿ ಅದನ್ನು ಹುಟ್ಟಿನಿಂದ 36ರ ಸಂಖ್ಯೆಯಂತೆಯೇ ನೋಡುತ್ತಾರೆ.
ಚಿಕ್ಕಂದಿನಿಂದಲೇ ಹುಡುಗಿಯರಿಗೆ ಮನೆಗೆಲಸ ಮಾಡಲು, ತಗ್ಗಿ ಬಗ್ಗಿ ನಡೆಯಲು, ವಾದ ಮಾಡದಿರಲು ಮನಸೋ ಇಚ್ಛೆ ವರ್ತಿಸದಿರಲು ಉಪದೇಶ ನೀಡುತ್ತಾರೆ. ಇಂತಹ ಉಪದೇಶ, ವಾತಾವರಣದಿಂದ ಮೊದಲಿನಿಂದಲೇ ಮನದಲ್ಲಿ ಅತ್ತೆ ಸೊಸೆ ಸಂಬಂಧದಲ್ಲಿ ಭಯ ಹಾಗೂ ಅಂತರ ಬೆಳೆಯುತ್ತದೆ.
ಹೊಂದಾಣಿಕೆ ಅಗತ್ಯ
ಅತ್ತೆಯದೂ ಇದೇ ಪರಿಸ್ಥಿತಿ. ಅವರಿಗೆ ಮಗ ಮದುವೆ ವಯಸ್ಸಿಗೆ ಬಂದಕೂಡಲೇ ಸಾಮಾನ್ಯವಾಗಿ ಇಂತಹ ಮಾತುಗಳನ್ನು ಕೇಳಬೇಕಾಗಿ ಬರುತ್ತದೆ. ಸೊಸೆಯ ಎದುರಿಗೆ ಹೆಚ್ಚು ಮನಬಿಚ್ಚಿ ಮಾತಾಡ ಬೇಡ. ಅವಳು ಮನಸ್ಸು ಮಾಡಿದ್ರೆ ಇಡೀ ಮನೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾಳೆ. ಮಗ ನಿನ್ನ ಕೈ ಬಿಟ್ಟುಹೋಗ್ತಾನೆ. ನೀನು ಮೊಮ್ಮಕ್ಕಳನ್ನು ನೋಡಿಕೊಂಡಿರು.
ಮನೇಲಿ ಕೆಲಸದವಳ ತರಹ ಇರಬೇಕಾಗುತ್ತದೆ. ಸೊಸೆ ಯಾವಾಗ ಏನು ಆರೋಪ ಹೊರಿಸಿ ಒಳಗೆ ಹಾಕಿಸ್ತಾಳೋ ಗೊತ್ತಿಲ್ಲ ಎಂದೆಲ್ಲಾ ನೆಂಟರಿಷ್ಟರು, ಮಿತ್ರರು ಭಯಹುಟ್ಟಿಸುತ್ತಾರೆ. ಲಲಿತಮ್ಮ ಹಾಗೂ ವನಿತಾ 20 ವರ್ಷಗಳಿಂದ ಅತ್ತೆ ಸೊಸೆಯರು. ವನಿತಾಗೆ ಕಿವಿ ಕೇಳಲ್ಲ. ಲಲಿತಮ್ಮನ ಮಗ ಮೂರ್ತಿಗೂ ಕಿವುಡು. ಸೊಸೆಗೆ ಕಿವಿ ಕೇಳದ್ದರಿಂದ ನಿಮ್ಮಿಬ್ಬರಲ್ಲಿ ಜಗಳ ಕಡಿಮೆ ಎಂದಾಗ, ಅವರು ಜೋರಾಗಿ ನಕ್ಕು ಹಾಗೇನಿಲ್ಲ. ನಾವಿಬ್ಬರೂ ಜಗಳ ಆಡುತ್ತೇವೆ. ವಾದ ಮಾಡುತ್ತೇವೆ. ನನ್ನ ಮಗ ರಾಜೀವ್ ಗೂ ಕಿವಿ ಕೇಳದ್ದರಿಂದ ಅವರ ಭಾಷೆ ನನಗೆ ಗೊತ್ತು. ಆದರೆ ನಾವು ದ್ವೇಷ ಸಾಧಿಸಲ್ಲ ಎಂದರು. ನನ್ನ ಮಾತು ಅವಳಿಗೆ ಅಥವಾ ಅವಳ ಮಾತು ನನಗೆ ಇಷ್ಟವಾಗದಿದ್ದರೆ ನಾವಿಬ್ಬರೂ ಯಾಕೆ ಹಾಗೆ ಮಾಡಿದೆವು? ಹೇಗೆ ಮಾಡಿದ್ರೆ ಚೆನ್ನಾಗಿರುತ್ತೆ ಎಂದು ಚರ್ಚೆ ಮಾಡುತ್ತೇವೆ. ನಾವಿಬ್ಬರೂ ಪರಸ್ಪರರ ಬಗ್ಗೆ ಕೆಟ್ಟದ್ದಂತೂ ಯೋಚಿಸುವುದಿಲ್ಲ. ವನಿತಾ ಬಹಳ ವಾಚಾಳಿ. ಲಿಪ್ ಮೂವ್ಮೆಂಟ್ನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾಳೆ.
ಅತ್ತೆಯ ಬಗ್ಗೆ ಏನು ಹೇಳುತ್ತೀರಿ ಎಂದಾಗ ಅಮ್ಮ ಅಂದರೆ ನಮ್ಮ ಅತ್ತೆ ಎಕ್ಸಿಂಟ್. ನಾನು ಮದುವೆಗೆ ಮುಂಚೆ 9ನೇ ತರಗತಿಯವರೆಗೆ ಮಾತ್ರ ಓದಿದ್ದೆ. ಅದೂ ಕನ್ನಡ ಮೀಡಿಯಂನಲ್ಲಿ ಎಂದು ಕೊಂಚ ಮಾತು ಹಾಗೂ ಕೊಂಚ ಸನ್ನೆಗಳ ಮೂಲಕ ಹೇಳುತ್ತಾ ಅವರು ಮುಂದುವರಿಸಿದರು. ಅಮ್ಮ ನನ್ನನ್ನು ಮುಂದೆ ಇಂಗ್ಲಿಷ್ ಮೀಡಿಯಂನಲ್ಲಿ ಓದಿಸಿದ್ರು, ಡಿಗ್ರಿ ಮುಗಿಸಿದೆ. ಅವರು ಅತ್ತೆಗಿಂತ ಹೆಚ್ಚಾಗಿ ನನಗೆ ಟೀಚರ್ ಆಗಿದ್ದಾರೆ. ಅಮ್ಮ ಬಿಎಸ್ಸಿ ಮತ್ತು ಇಂಟೀರಿಯರ್ ಡಿಸೈನಿಂಗ್ ಕೋರ್ಸ್ ಮಾಡಿದ್ದಾರೆ ಅವರಿಗೆ 65 ವರ್ಷವಾಗಿರುವುದರಿಂದ ಅವರು ಈಗ ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಮಾವನವರೊಂದಿಗೆ ಫರ್ನೀಚರ್ಬಿಸ್ನೆಸ್ ಸಂಭಾಳಿಸುತ್ತಾರೆ. ಮೊಮ್ಮಕ್ಕಳಿಗೆ ಪಾಠವನ್ನೂ ಹೇಳಿಕೊಡುತ್ತಾರೆ ಎಂದು ವನಿತಾ ಹೇಳಿದರು.
ಸಾಮಂಜಸ್ಯ ಅಗತ್ಯ
ನಿಮ್ಮ ಆರ್ಥಿಕ ಸ್ಥಿತಿ ಹಾಗೂ ಅಂತಸ್ತು ಜೋರಾಗಿದೆ. ನಿಮಗೆ ಇನ್ನೂ ಒಳ್ಳೆಯ ಹುಡುಗಿ ಅಂದರೆ ಚೆನ್ನಾಗಿ ಕಿವಿ ಕೇಳುವವಳು ಸಿಗಬಹುದಿತ್ತು ಎಂದು ಲಲಿತಮ್ಮನವರನ್ನು ಕೇಳಿದಾಗ ಅವರು ಹೀಗೆ ಹೇಳಿದರು. ನಾನು ನನ್ನ ಮಗನ ಬಯಕೆಯನ್ನು ಈಡೇರಿಸಿದೆ. ನನ್ನ ಮಗ ರಾಜೇಶ್ ಒಂದು ದೊಡ್ಡ ಕಂಪನಿಯಲ್ಲಿ ಸೂಪರ್ ವೈಸರ್ ಆಗಿದ್ದಾನೆ. ಶ್ರವಣ ಸಮಸ್ಯೆ ಇದ್ದರೂ ಟೀಮ್ ಲೀಡರ್ ಆಗಿದ್ದಾನೆ. ಅವನೆಂದರೆ ಎಲ್ಲರಿಗೂ ಬಹಳ ಇಷ್ಟ. ನನಗೆ ನನ್ನ ತರಹವೇ ಹುಡುಗಿ ಬೇಕು. ಆಗ ನಮ್ಮಿಬ್ಬರಲ್ಲಿ ಒಳ್ಳೆಯ ಹೊಂದಾಣಿಕೆ ಇರುತ್ತದೆ ಎಂದು ನನ್ನ ಮಗ ಹೇಳಿದ.
ವನಿತಾ ನಿಮಗೆ ಒಬ್ಬಳೇ ಸೊಸೇನಾ ಎಂದು ಕೇಳಿದಾಗ ಲಲಿತಮ್ಮ, “ಇಲ್ಲ, ನನ್ನ ಇನ್ನೊಬ್ಬ ಮಗ ಅಮೆರಿಕಾದಲ್ಲಿ ಐ.ಟಿ. ಕಂಪನಿಯಲ್ಲಿದ್ದಾನೆ. ಅವನ ಹೆಂಡತಿ ಅಮೆರಿಕನ್. ಅವಳು ಡಾಕ್ಟರ್ ಆಗಿದ್ದಾಳೆ,” ಎಂದರು.
ವನಿತಾ ಒಳ್ಳೆಯ ಪೇಂಟರ್ ಕೂಡ. ಅವರು ಸಂದರವಾದ ಪೇಂಟಿಂಗ್ಸ್ ಮಾಡುತ್ತಾರೆ. ನನ್ನ ಅವರ ಭೇಟಿ ಒಂದು ಪೇಂಟಿಂಗ್ ಎಕ್ಸಿಬಿಶನ್ನಲ್ಲಿ ಆಯಿತು. ವನಿತಾಳ ಅತ್ತೆ ಸೊಸೆಯ ಕ್ರಿಯೇಟಿವ್ ಅವಕಾಶ ಹುಡುಕುತ್ತಿರುತ್ತಾರೆ ಹಾಗೂ ಅವರೊಂದಿಗೆ ಜೊತೆ ನೀಡುತ್ತಾರೆ. ಅವರಿಬ್ಬರೂ ಪರಸ್ಪರರ ಕಂಪನಿಯನ್ನು ಚೆನ್ನಾಗಿ ಎಂಜಾಯ್ ಮಾಡುತ್ತಾರೆ.
ರಮಾ ಮತ್ತು ಪೂರ್ಣಿಮಾ
ರಮಾ ಲಂಡನ್ನಲ್ಲಿ ನರ್ಸರಿ ಟೀಚರ್. ಈಗ ರಿಟೈರ್ಮೆಂಟ್ ತೆಗೆದುಕೊಂಡಿದ್ದಾರೆ. ಪೂರ್ಣಿಮಾ ಡಾಕ್ಟರ್. ಅವರು ಭಾರತದಿಂದ ಲಂಡನ್ಗೆ ಹೋದರು. ರಮಾ ಮತ್ತು ಪೂರ್ಣಿಮಾರ ಸ್ವಭಾವದಲ್ಲಿ ವ್ಯತ್ಯಾಸವಿದ್ದರೂ ಒಳ್ಳೆಯ ಹೊಂದಾಣಿಕೆ ಇದೆ. ಅತ್ತೆ ರಮಾಗೆ ಬ್ಯೂಟಿಪಾರ್ಲರ್ಗೆ ಹೋಗುವುದು, ಶಾಪಿಂಗ್ ಮಾಡುವುದು ಇತ್ಯಾದಿ ಅಭ್ಯಾಸವಿದೆ. ಆದರೆ ಪೂರ್ಣಿಮಾ ಅಂತರ್ಮುಖಿ. ಆದರೂ ಅತ್ತೆಯ ಹಾಬಿಗೆ ಅವರು ಬೆಂಬಲ ನೀಡುತ್ತಿದ್ದಾರೆ.
ರಮಾ ಕೂಡ ತನ್ನ ಸೊಸೆಯ ಇಷ್ಟಾನಿಷ್ಟಗಳನ್ನು ಗಮನದಲ್ಲಿಟ್ಟುಕೊಂಡಿದ್ದಾರೆ. ಲಂಡನ್ನಲ್ಲಿರುವ ಪೂರ್ಣಿಮಾರ ಮನೆಯಲ್ಲಿ ಅತ್ತೆಗೂ ಒಂದು ಕೋಣೆ ಇದೆ. ಮೊದಲು ಅವರು ಲಂಡನ್ನಲ್ಲಿ ಅವಿಭಕ್ತ ಕುಟುಂಬದಲ್ಲಿದ್ದರು. ಅತ್ತಿಗೆ, ಮೈದುನ, ಅತ್ತೆ, ಮಾವ ಎಲ್ಲ ಒಟ್ಟಿಗೇ ಇರುತ್ತಿದ್ದರು. ನಂತರ ಕುಟುಂಬ ದೊಡ್ಡದಾಗುತ್ತಿದ್ದಂತೆ ಅಗತ್ಯಗಳಿಗೆ ತಕ್ಕಂತೆ ಬೇರೆಯಾಗಿದ್ದಾರೆ. ಆದರೂ, “ಅವಕಾಶ ಸಿಕ್ಕಾಗೆಲ್ಲಾ ನಾವೆಲ್ಲರೂ ಒಟ್ಟಿಗಿರುತ್ತೇವೆ,” ಎನ್ನುತ್ತಾರೆ.
ಪೂರ್ಣಿಮಾ ಹೇಳುತ್ತಾರೆ, “ಅಪ್ಪ, ಅಮ್ಮ ಕೊಟ್ಟ ಸಂಸ್ಕಾರ, ಗಂಡ ರಾಜೇಶ್ರ ಕುಟುಂಬದವರೊಂದಿಗೆ ಹೊಂದಾಣಿಕೆ ಮತ್ತು ಅತ್ತೆ ಮಾವನ ಪ್ರೀತಿ ಪಡೆದ ನನಗೆ ಹೊರಗಿನವಳು ಎಂದು ಅನ್ನಿಸಿಲ್ಲ. ಪ್ರತಿಯೊಬ್ಬರ ವಿಚಾರ, ಘನತೆ, ಅಸ್ತಿತ್ವಗಳಿಗೆ ಮಹತ್ವ ಕೊಟ್ಟರೆ ಒಳ್ಳೆಯದು. ಇದೇ ಅತ್ತೆ ಸೊಸೆಯರ ಸಂಬಂಧಗಳ ಸಾರ.
`ನಾನು’ ಹಾಗೂ `ನನ್ನದು’ ಎಂಬ ವಿಚಾರ ಯಾವುದೇ ಸಂಬಂಧಗಳಿಗೆ ಗೆದ್ದಲಿನಂತಿರುತ್ತದೆ.”
ಜ್ಯೋತಿ ಮತ್ತು ಗೀತಾ
ಜ್ಯೋತಿಗೆ ನಾಲ್ವರು ಮಕ್ಕಳು ಹಾಗೂ ಸೊಸೆಯರು. ಆದರೂ ಎಲ್ಲರೂ ಗೀತಾಳೇ ಅವರ ಸೊಸೆ ಎನ್ನುತ್ತಾರೆ. ಅವರು ಇಡೀ ದಿನ ಗೀತಾ ಗೀತಾ ಎನ್ನುತ್ತಿರುತ್ತಾರೆ. ಗೀತಾಳ ಗಂಡ ಬೆಂಗಳೂರಿನಲ್ಲಿ ಫ್ಯಾಷನ್ ಡಿಸೈನಿಂಗ್ ಕೆಲಸ ಮಾಡುತ್ತಾರೆ. ಗೀತಾ ಅತ್ತೆ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿದ್ದಾರೆ. ಮೊದಲು ಅವರೂ ಬೆಂಗಳೂರಿನಲ್ಲಿದ್ದರು. ಈಗ ಅತ್ತೆ ಸೊಸೆ ಪರಸ್ಪರ ಅವಲಂಬಿತರಾಗಿದ್ದಾರೆ. ಇಬ್ಬರ ಪ್ರೀತಿ ಮೊದಲಿನಂತೆ ಇದೆ. ಅತ್ತೆಯ ಕಣ್ಣುಗಳಿಗೆ ಐ ಡ್ರಾಪ್ಸ್ ಹಾಕುವುದಾಗಲೀ ಅಥವಾ ಬೇರೆ ಕೆಲಸವಾಗಲೀ ಮಾವ ಇದ್ದರೂ ಗೀತಾಳೇ ಮಾಡುತ್ತಾಳೆ. ಅತ್ತೆ ಕೂಡ ಗೀತಾಳ ಊಟವಾಯಿತೇ ಇಲ್ಲವೇ ಎಂಬುದನ್ನೂ ಗಮನಿಸುತ್ತಾರೆ. ಅತ್ತೆಯ ಮನೆಯವರು ಗೀತಾಗೆ ಒಂದು ಡೇರಿ ಫಾರ್ಮ್ ಹಾಕಿಸಿಕೊಟ್ಟಿದ್ದಾರೆ. ಗೀತಾಳ ದೊಡ್ಡ ನಾದಿನಿ ಕಲಾ ಹೀಗೆ ಹೇಳುತ್ತಾರೆ, “ಮೊದಲು ಈ ಅತ್ತೆ ಸೊಸೆಯರ ಸಾಮರಸ್ಯ ಕಂಡು ನಮಗೆಲ್ಲಾ ಅಸೂಯೆಯಾಗುತ್ತಿತ್ತು. ಆದರೆ ಈಗ ಅನುಕರಣೀಯವಾಗಿದೆ. ಅತ್ತೆ ಸೊಸೆ ಪರಸ್ಪರ ಎಮೋಶನ್ ಕೇರ್ ತೆಗೆದುಕೊಳ್ಳುತ್ತಾರೆ. ಅವರಲ್ಲಿ ತಾಯಿ ಮಗಳ ಪ್ರೀತಿಯಿದೆ. ಸ್ನೇಹಿತೆಯರಂತೆ ಶೇರಿಂಗ್ ಇದೆ.”
ನೈಸರ್ಗಿಕ ಅವಶ್ಯಕತೆ
ಅತ್ತೆ ಸೊಸೆಯಲ್ಲಿ ಸಾಮರಸ್ಯ ಎಂಬುದು ಸಂಬಂಧದಲ್ಲಿ ಸಹಜ ಅವಶ್ಯಕತೆಯಾಗಿದೆ. ಅದಿಲ್ಲದಿದ್ದರೆ ಸಂಸಾರದಲ್ಲಿ ಹಾಗೂ ಮುಂದಿನ ಪೀಳಿಗೆಯಲ್ಲಿ ಸಾಮರಸ್ಯ ಮೂಡುವುದು ಬಹಳ ಕಷ್ಟ. ಹಕ್ಕು, ಅಧಿಕಾರ, ಕರ್ತವ್ಯ, ಕೊಡುವುದು, ತೆಗೆದುಕೊಳ್ಳುವುದು, ನನ್ನದು ನಿನ್ನದು ಇಂತಹ ಪರಿಸ್ಥಿತಿಗಳನ್ನು ಸರಿಯಾದ ರೀತಿಯಲ್ಲಿ ತಿಳಿದುಕೊಂಡರೆ ಎಲ್ಲ ಸಂಬಂಧಗಳಲ್ಲಿ ಸರಿಯಾದ ಸಾಮರಸ್ಯ ಉಂಟಾಗುತ್ತದೆ. ಆದ್ದರಿಂದ ಇಂದಿನ ಸುಶಿಕ್ಷಿತ ಸೊಸೆ ಕಡಿಮೆ ಓದಿದ ಅತ್ತೆಯನ್ನು ತನಗಿಂತ ಹೆಚ್ಚು ಅನುಭವ ಇರುವವರು ಎಂದು ತಿಳಿಯಬೇಕು. ಅತ್ತೆಯೂ ಸೊಸೆಯ ಶಿಕ್ಷಣ ಮತ್ತು ಇತರ ಕೆಲಸಗಳಿಗೆ ಮಹತ್ವ ಕೊಡಬೇಕು. ಆಗ ಇಬ್ಬರ ಮಧ್ಯೆ ಯಾವ ರೀತಿಯ ಅಂತರ ಇರುವುದಿಲ್ಲ. ವಯಸ್ಸಿನ ಹಾಗೂ ಆರ್ಥಿಕ ಸಾಮಾಜಿಕ ಅಂತರಗಳನ್ನು ಗಮನಿಸದೆ ಧೂರ್ತತೆ, ಚಾಲಾಕಿತನಗಳಿಂದ ದೂರವಿದ್ದರೆ ಅತ್ತೆ ಸೊಸೆಯ ಸಂಬಂಧಗಳಲ್ಲಿ ಒಳ್ಳೆಯ ಹೊಂದಾಣಿಕೆಯನ್ನು ಕಾಣಬಹುದು.
– ಮೃದುಲಾ ಪ್ರಸಾದ್.
ಸರಿಯಾದ ಹೊಂದಾಣಿಕೆ ಹೇಗೆ?
ಉದಾರ ದೃಷ್ಟಿಕೋನ ಹಾಗೂ ಮುಕ್ತತೆ ಇರಲಿ.
ಸಂಬಂಧಗಳ ಎಲ್ಲೆ, ಗೌರವ, ಮರ್ಯಾದೆ ಮತ್ತು ಅಂತರ ತಿಳಿದುಕೊಳ್ಳಿ.
ಮೋಸ, ಕಪಟ ಹಾಗೂ ಆಡಂಬರ ಬೇಡ.
ಚಾಡಿ ಹೇಳುವುದು, ಅತಿಯಾದ ಮಾತು, ಸಿಡುಕುಗಳಿಂದ ದೂರವಿರಿ.
ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡಿ.
ಪರಸ್ಪರರ ಬಗ್ಗೆ ಗೌರವದ ಭಾವನೆ ಇರಲಿ.
ಲೆಕ್ಕಾಚಾರ ಸರಿಯಾಗಿರಲಿ.
ಪ್ರತಿಷ್ಠೆಯ ಬಗ್ಗೆ ಪರಸ್ಪರರ ಮೇಲೆ ಹೇರಬಾರದು.
ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಾರದು.
ಪರಂಪರೆ ಹಾಗೂ ಆಧುನಿಕತೆಯಲ್ಲಿ ಹೊಂದಾಣಿಕೆ ಇರಲಿ.
ಅತಿಯಾದ ವಾದ ವಿವಾದ ಬೇಡ