ರೂಪಾ ಮತ್ತು ಜಗದೀಶ್ ತಮ್ಮ ಕೋಣೆಯೊಳಗಿದ್ದರು. ಇದ್ದಕ್ಕಿದ್ದಂತೆ ಕೋಣೆಯಿಂದ ಜೋರು ಜೋರಾದ ಧ್ವನಿಗಳು ಬರತೊಡಗಿದವು. ಮಕ್ಕಳು ಭಯದಿಂದ ಒಂದು ಮೂಲೆಯಲ್ಲಿ ಮುದುರಿಕೊಂಡಿದ್ದರು. ಧ್ವನಿಗಳು ಇನ್ನೂ ಜೋರಾದಾಗ ಜಗದೀಶನ ತಾಯಿ ಬಂದು ಮೊಮ್ಮಕ್ಕಳನ್ನು ಅಡುಗೆಮನೆಗೆ ಕರೆದೊಯ್ದು ತಿಂಡಿ, ಹಾಲು ಕೊಟ್ಟು ಸಂತೈಸಿದರು. ವಿಷಯ ಸಣ್ಣದಿತ್ತು. ಆದರೆ ವಾಗ್ವಾದ ಬಿಸಿಯಾಗಿತ್ತು. ಹೊರಗೆ ಬಂದಾಗ ರೂಪಾಗೆ ಮಕ್ಕಳೆದುರಿಗೆ ಅಪರಾಧಿ ಮನೋಭಾವ ಉಂಟಾಯಿತು. ಹೀಗೆಯೇ ಬಹಳಷ್ಟು ಜನರಿಗೆ ಆಗುತ್ತದೆ. ಸಣ್ಣ ವಿಷಯ ಬೆಳೆದು ದೊಡ್ಡ ಜಗಳವಾಗಿ ಪರಿಣಮಿಸುತ್ತದೆ. ಬದಲಾಗುತ್ತಿರುವ ಯುಗದಲ್ಲಿ ಪತಿಪತ್ನಿ ಇಬ್ಬರೂ ಸಮಾನವಾಗಿ ಮನೆಯನ್ನು ನಡೆಸುತ್ತಾರೆ. ಆಗ ಅಹಂ ಉಂಟಾಗುವುದು ಸಾಮಾನ್ಯ. ಪತಿ ಪತ್ನಿಯರ ಪ್ರತಿ ಜಗಳದಲ್ಲೂ ಒಬ್ಬರದು ತಪ್ಪಿರುತ್ತದೆ, ಒಬ್ಬರದು ಸರಿ ಇರುತ್ತದೆ. ತಪ್ಪು ಮಾಡಿದವರು ತಮ್ಮ ತಪ್ಪನ್ನು ಒಪ್ಪಿಕೊಂಡರೆ ಕಾದಾಟವೇ ಇರುವುದಿಲ್ಲ. ಆದರೆ ಹಲವಾರು ಕಾರಣಗಳಿಂದ ತಪ್ಪು ಮಾಡಿದವರು ತಾವೇ ಸರಿ ಎಂದು ಸಾಧಿಸಲು ಹೊರಟಾಗ ಜಗಳ ಶುರುವಾಗುತ್ತದೆ. ಆಗ ದಂಪತಿಗಳು ಬಿರುನುಡಿಗಳನ್ನಾಡುತ್ತಾರೆ. ಅದರಿಂದಾಗಿ ಅವರ ಸಂಬಂಧದಲ್ಲಿ ಬಿರುಕುಂಟಾಗುತ್ತದೆ.
ಮಾತಿನ ಬಾಣದಿಂದ ಘಾತಕ ಪ್ರಹಾರ
ತಮ್ಮನ್ನು ಸಿಟ್ಟಿನಿಂದ ನಿಯಂತ್ರಿಸಲಾಗದೆ ಅನಾವಶ್ಯಕವಾಗಿ ದೊಡ್ಡ ಜಗಳ ಆರಂಭವಾಗುತ್ತದೆ. ನಂತರ ಪತಿ ಪತ್ನಿ ಪರಸ್ಪರರನ್ನು ತುಚ್ಛವಾಗಿ ಕಾಣಲು ಪ್ರಯತ್ನಿಸತೊಡಗುತ್ತಾರೆ. ಮನೆಗಳಲ್ಲಿ ಪದೇ ಪದೇ ಜಗಳಗಳಾಗುತ್ತಿದ್ದರೆ ಅಲ್ಲಿನ ವಾತಾವರಣದಲ್ಲಿ ಮಕ್ಕಳ ಅಭಿವೃದ್ಧಿ ಸರಿಯಾಗಿರುವುದಿಲ್ಲ ಮತ್ತು ಪತಿ ಪತ್ನಿಯರ ಆರೋಗ್ಯ ಚೆನ್ನಾಗಿರುವುದಿಲ್ಲ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.
ಡಾಮಿನೇಟ್ ಮಾಡುವ ಅಭ್ಯಾಸ ಜಗಳಕ್ಕೆ ಮೂಲ ಕಾರಣ ಎಂದು ಸಮಾಜಶಾಸ್ತ್ರಜ್ಞರು ಹೇಳುತ್ತಾರೆ, “ಗಂಡ ಅಥವಾ ಹೆಂಡತಿಗೆ ಘಟನೆಯ ನಂತರ ತಮ್ಮ ತಪ್ಪು ತಿಳಿಯಬಹುದು. ಆದರೆ ವಾದ ಮಾಡಿದ ನಂತರ ಅವರಿಬ್ಬರಲ್ಲಿ ಒಂದು ರೀತಿಯ ಹಿಂಜರಿಕೆ ಉಂಟಾಗ ಬೇಕೆಂದರೂ ರಾಜಿ ಮಾಡಿಕೊಳ್ಳಲು ಸಿದ್ಧರಾಗುವುದಿಲ್ಲ.”
ಪತಿ ಪತ್ನಿಯರ ಸಂಬಂಧ ಬಹಳ ಸೂಕ್ಷ್ಮವಾಗಿರುತ್ತದೆ. ಯಾರಾದರೂ ಒಬ್ಬರ ಒಂದು ಬಿರುನುಡಿ ಇಡೀ ಜೀವನದಲ್ಲಿ ಅಪಸ್ವರ ಉಂಟುಮಾಡುತ್ತದೆ. ಒಮ್ಮೊಮ್ಮೆ ಮಾತಿನ ಬಾಣ ಘಾತಕ ಪರಿಣಾಮ ಉಂಟು ಮಾಡುತ್ತದೆ. ಬಾಗುವುದರಿಂದ ಅಥವಾ ಬಿಟ್ಟುಕೊಡುವುದರಿಂದ ತಮ್ಮ ಮಹತ್ವ ಇಲ್ಲವಾಗುತ್ತದೆ ಎಂದು ಅನೇಕ ಪತಿಪತ್ನಿಯರು ತಿಳಿದುಕೊಂಡಿದ್ದಾರೆ.
ಅಶಾಂತ ವಾತಾರಣ
ಅನೇಕ ದಂಪತಿಗಳು ಕೂಗಿ ಕಿರುಚಾಡುವುದರಲ್ಲಿ ಎತ್ತಿದ ಕೈ. ಕೆಲವರು ಶಾರ್ಟ್ ಟೆಂಪರ್ಡ್ ಆಗಿರುವುದರಿಂದ ವಾದ ವಿವಾದ ಮಾಡುತ್ತಿರುತ್ತಾರೆ. ದಾಂಪತ್ಯದಲ್ಲಿ ಒಮ್ಮೆ ಜಗಳ ಆರಂಭವಾದರೆ ಸಂಬಂಧಗಳಲ್ಲಿ ಬಿರುಕುಂಟಾಗುವುದು ಸಹಜ. ಬಹಳಷ್ಟು ವಿಚ್ಛೇದನಗಳಿಗೆ ಈ ಜಗಳಗಳೇ ಮುಖ್ಯ ಕಾರಣ. ಫಿಸಿಷಿಯನ್‌ಗಳ ಪ್ರಕಾರ ಈ ಜಗಳಗಳಿಂದಾಗಿ ಒತ್ತಡ ಉಂಟಾಗುತ್ತದೆ. ಒತ್ತಡದಿಂದಾಗಿ ತಲೆನೋವು, ಸುಸ್ತು, ಅನಿದ್ರೆ, ಮೈ ಕೈ ನೋವು ಇತ್ಯಾದಿ ಅನೇಕ ಕಾಯಿಲೆಗಳು ಉತ್ಪನ್ನವಾಗುತ್ತವೆ. ಒತ್ತಡ ಒಂದು ಹಂತ ಮೀರಿದಾಗ ಉದಾಸತನ ಉಂಟಾಗುತ್ತದೆ. ಉದಾಸತನ ಹೈರಪ್ ಟೆನ್ಷನ್, ಹೃದಯದ ಕಾಯಿಲೆ, ಇತರ ರೋಗಗಳನ್ನು ಹೊತ್ತು ತರುತ್ತದೆ. ಜಗಳಗಳಿಂದ ಮನೆಯ ವಾತಾವರಣ ಹದೆಗಡುತ್ತದೆ, ಪತಿ ಪತ್ನಿಯರ ಸಂಬಂಧ ಕೊನೆಗಾಣುತ್ತದೆ. ಇದರ ನೇರ ಪರಿಣಾಮ ಮಕ್ಕಳ ಮೇಲೆ ಉಂಟಾಗುತ್ತದೆ.
ಕೌಟುಂಬಿಕ ಸಲಹೆಗಾರರು ವಾದ ವಿವಾದಗಳಿಗೆ ಒಂದೇ ಪರಿಹಾರ ಸೂಚಿಸುತ್ತಾರೆ. ಅದೆಂದರೆ ಧೈರ್ಯ ಮತ್ತು ಜಾಗೃತರಾಗಿರುವಿಕೆ. ದಾಂಪತ್ಯದಲ್ಲಿ ವಿಷ ಉಣಿಸುವ ಜಗಳಗಳಿಂದ ಪಾರಾಗುವ ಒಂದು ವಿಧಾನವೆಂದರೆ ಆ ಘಳಿಗೆ ಮೌನವಾಗಿದ್ದು ಬಿಡುವುದು. ಆ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಿ ಅಥವಾ ಮಾತುಕಥೆಯ ವಿಷಯವನ್ನು ಬದಲಿಸಿ ಜಗಳ ಬಹಳ ಹೊತ್ತು ಎಳೆದಾಡಬೇಡಿ.
ಒಂದು ಕಡೆಯವರ ಕೋಪ ಮುಗಿದ ನಂತರ ಅವರು ತಮ್ಮಷ್ಟಕ್ಕೆ ತಾವು ಶಾಂತರಾಗುತ್ತಾರೆ. ನಂತರ ಅದೇ ವಿಷಯವನ್ನು ಧೈರ್ಯವಾಗಿ ಶಾಂತಿಯಿಂದ ತಿಳಿಹೇಳಿದರೆ ಇನ್ನೊಂದು ಪಕ್ಷದವರಿಗೆ ತಮ್ಮ ತಪ್ಪು ಅರ್ಥವಾಗುತ್ತದೆ.
ಬೆಳಗ್ಗೆ ಶುರುವಾದ ಜಗಳ ಸಂಜೆಯೊಳಗೇ ಕೊನೆಗೊಳ್ಳುವಂತಾಗಲು ಪ್ರಯತ್ನಿಸಿ. ಅದನ್ನು ಎಳೆದಾಡಬೇಡಿ. ಕೋಪಿಸಿಕೊಳ್ಳುವುದು ಮತ್ತು ಸಂತೈಸುವುದು ಪ್ರೀತಿಯೇ ಸರಿ. ಆದರೆ ವಾದಗಳಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ.
ಅನೇಕ ಯಶಸ್ವಿ ದಂಪತಿಗಳ ಸುಖ ಜೀವನದ ಸೂತ್ರವೇನೆಂದರೆ ಒಬ್ಬರಿಗೆ ಕೋಪ ಬಂದರೆ ಇನ್ನೊಬ್ಬರು ತೆಪ್ಪಗಾಗುತ್ತಾರೆ. ಪ್ರೀತಿ ಮತ್ತು ಸೌಹಾರ್ದತೆ ಇರುವ ಸ್ಥಳಗಳಲ್ಲಿ ಮರಗಿಡಗಳೂ ಬಹಳ ವೇಗವಾಗಿ ಬೆಳೆಯುತ್ತವೆಂದು ಮನೋವಿಜ್ಞಾನಿಗಳು ಹೇಳುತ್ತಾರೆ. ಪತಿ ಪತ್ನಿಯರಲ್ಲಿ ಯಾರಿಗಾದರೂ ತಮ್ಮ ಸಂಗಾತಿಯ ಬಗ್ಗ ದೂರುಗಳಿದ್ದರೆ ಎಷ್ಟೇ ತಿಳಿಹೇಳಿದರೂ ಪ್ರಯೋಜನವಾಗುವುದಿಲ್ಲ.
ಅನೇಕ ದಂಪತಿಗಳು ಜಗಳಾಡುವುದನ್ನು ಟೈಂಪಾಸ್ ಎಂದುಕೊಳ್ಳುತ್ತಾರೆ. ಕೆಲವು ಸುಶಿಕ್ಷಿತ ದಂಪತಿಗಳು ಅದನ್ನು ತಮ್ಮ ಅಸ್ತಿತ್ವದ ಹೋರಾಟ ಎಂದುಕೊಳ್ಳುತ್ತಾರೆ. ಆದರೆ ಗಮನವಿರಲಿ, ಇಬ್ಬರಿಗೂ ನಷ್ಟ ನಿಶ್ಚಿತವಾಗಿರುತ್ತದೆ. ಒಂದು ಮೌನದಿಂದ ನೂರು ಲಾಭವಿದೆ. ಅನೇಕ ಬಾರಿ ನಮ್ಮ ಮೌನದಿಂದ ಸಾಧಿಸುವುದನ್ನು ನಾವು ಎಷ್ಟೇ ಮಾತಾಡಿದರೂ ಸಾಧಿಸಲಾಗುವುದಿಲ್ಲ.
ಒಂದು ಪಕ್ಷದವರು ತಮ್ಮ ತಪ್ಪನ್ನು ಒಪ್ಪಿಕೊಂಡಲ್ಲಿ ಸ್ವಲ್ಪ ಸಮಯದ ನಂತರ ತಾವೇ ಮುಂದೆ ಬಂದು ರಾಜಿಯಾಗುತ್ತಾರೆ. ಒಂದು ವೇಳೆ ಒಪ್ಪಿಗೆಯಾಗದಿದ್ದಲ್ಲಿ ಆ ವಿಷಯದ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು. ಸಂಸಾರದಲ್ಲಿ ಅನೇಕ ರೀತಿಯ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸಂಬಂಧಗಳಲ್ಲಿ ಸವಿ ಉಳಿಸಿಕೊಳ್ಳಲು ಎಲ್ಲ ಸಂಗಾತಿಗಳೂ, ಏನೇ ಆಗಲಿ…. ಜಗಳ ಆಡುದಿಲ್ಲವೆಂದು ಸಂಕಲ್ಪ ಮಾಡಬೇಕು.
– ಎಸ್. ರೇವತಿ