ಆ ಚಿಕ್ಕ ಹೋಟೆಲ್‌ನ ಮೇಜಿನ ಒಂದು ಬದಿಗೆ ಸೀಮಾ, ಮತ್ತೊಂದು ಬದಿಯಲ್ಲಿ ವಿನೋದ್ ಮತ್ತು ಅಜಯ್ ಕುಳಿತಿದ್ದರು. ಊಟಕ್ಕೆ ಆರ್ಡರ್ ಕೊಟ್ಟು ಅವರು ಲೋಕಾಭಿರಾಮವಾಗಿ ಮಾತಾಡತೊಡಗಿದರು. ಆದರೆ ಅವರ ಮಾತುಕತೆಯ ಒಂದು ತುಣುಕೂ ಸೀಮಾಳ ಕಿವಿಗೆ ಬೀಳಲಿಲ್ಲ. ಅವಳಿಗೆ ಕೇವಲ ಮಾತಾಡುವ ಶಬ್ದವಷ್ಟೇ ಕೇಳುತ್ತಿತ್ತು. ಅವಳು ಕಣ್ಣು ಮುಚ್ಚಿಕೊಂಡಿದ್ದಳು. ಆದರೆ ತಟ್ಟೆ, ಚಮಚಗಳ ಸದ್ದಿನಿಂದ ಅವಳಿಗೆ ಊಟ ತಂದಿರಿಸಲಾಗಿದೆ ಎಂದು ಅರಿವಾಯಿತು. ಅವಳು ಕಣ್ತೆರೆದು ವಿನೋದ್ ಮತ್ತು ಅಜಯ್‌ರನ್ನು ನೋಡುತ್ತಿದ್ದಂತೆ ಚಮಚವನ್ನು ಕೈಗೆತ್ತಿಕೊಂಡಳು. ಆದರೆ ಮೊದಲ ತುತ್ತನ್ನು ನುಂಗುವುದೂ ಅವಳಿಗೆ ಬಹಳ ಪ್ರಯಾಸವಾಯಿತು.
“ಏಕೆ? ನೀನು ಏನನ್ನೂ ಮುಟ್ಟುತ್ತಲೇ ಇಲ್ಲವಲ್ಲ?” ವಿನೋದ್ ಕೊಂಚ ಕಠಿಣವಾಗಿ ಪ್ರಶ್ನಿಸಿದ.
“ನನ್ನ ಕೈಲಿ ಊಟ ಮಾಡಕಾಗ್ತಾ ಇಲ್ಲಾರೀ, ಯಾಕೋ ಮೈ ಚೆನ್ನಾಗಿಲ್ಲ. ಕಾರಿನ ಕೀ ಕೊಡಿ. ನಾನು ಕಾರಲ್ಲಿ ಮಲಗಿಕೊಳ್ತೀನಿ. ನೀವು ಊಟ ಮಾಡ್ಕೊಂಡು ಬನ್ನಿ.”
“ನಿನ್ನದಂತೂ ಯಾವಾಗಲೂ ಇದೇ ಗೋಳಾಗಿಹೋಯಿತು,” ಎನ್ನುತ್ತಾ ವಿನೋದ್ ಅಜಯ್‌ನ ಕಡೆ ನೋಡಿದ. ಕಾರಿನ ಕೀ ಅಜಯ್ ಬಳಿ ಇತ್ತು.ಅಜಯ್ ಎದ್ದು, “ನಾನು ಬಿಟ್ಟು ಬರ್ತೀನಿ,” ಎನ್ನುತ್ತಾ ಸೀಮಾಳ ಜೊತೆ ಹೊರಟ. ಅಜಯ್ ಕಾರಿನ ಬಾಗಿಲು ತೆರೆದು ಹಿಂದಿನ ಸೀಟಿನ ಮೇಲಿದ್ದ ಕೆಲವು ಚಿಕ್ಕ ಪುಟ್ಟ ಸಾಮಾನುಗಳನ್ನು ಸರಿಸಿ, ಕುಶನ್ ಒಂದು ಕಡೆ ತೆಗೆದಿಟ್ಟ. ಸೀಟಿನ ಮೇಲೆ ಕುಳಿತುಕೊಂಡ ಸೀಮಾ ತನ್ನ ಪರ್ಸ್ ತೆರೆದು ಅದರಿಂದ 3 ಬಗೆಯ ಮಾತ್ರೆಗಳನ್ನು ಹೊರತೆಗೆದಳು. ಅಜಯ್ ಥರ್ಮಾಸಿನಿಂದ ನೀರು ಕೊಡುತ್ತಾ, “ಈಗೀಗ ಈ ಮಾತ್ರೆಗಳನ್ನೇ ಊಟ, ತಿಂಡಿಯ ಬದಲು ತೆಗೆದುಕೊಳ್ತಿದ್ದೀಯಾಂತ ಕಾಣುತ್ತೆ,” ಎಂದ.
ಅವನ ವ್ಯಂಗ್ಯದ ಮಾತಿಗೆ ಪ್ರತ್ಯುತ್ತರ ನೀಡದೆ ಸೀಮಾ ಕುಶನ್ ಮೇಲೆ ತಲೆ ಇರಿಸಿ ಮಲಗಿಬಿಟ್ಟಳು.
“ನಿನಗೆ ಈಗ ಹುಷಾರಿಲ್ಲ. ಇಲ್ಲವಾದರೆ ನನಗೆ ಬರ್ತಿರೋ ಸಿಟ್ಟಿನಲ್ಲಿ……”
ಆ ಬೇಗುದಿಯಲ್ಲೂ ಸೀಮಾ ನಸುನಗುತ್ತಾ, “ಹೋಗಿ ಊಟ ಮಾಡ್ಕೊಂಡು ಬನ್ನಿ. ವಿನೋದ್ ನಿಮಗಾಗಿ ಕಾಯ್ತಾ ಇದ್ದಾರೆ,” ಎಂದಳು.
“ಸರಿ, ನೀನು ನೆಮ್ಮದಿಯಿಂದ ಮಲಗು. ಸುಮ್ಮನೆ ಇಲ್ಲದ್ದನ್ನೆಲ್ಲ ಯೋಚಿಸಿ ತಲೆ ಕೆಡಿಸಿಕೊಳ್ಳಬೇಡ,” ಆದೇಶ ನೀಡುವಂತೆ ಹೇಳಿ ಅಜಯ್ ಹೊರಟುಹೋದ.
ಆದರೆ ಹೇಳುವಷ್ಟು ಸುಲಭವಾಗಿ ಯೋಚಿಸುವುದನ್ನು ನಿಯಂತ್ರಿಸಲು ಸಾಧ್ಯವೇ? ಅನಾರೋಗ್ಯದ ಕಾರಣ, ಸೀಮಾ ಆ ಕ್ಷಣ ಅಜಯನ ಪ್ರಶ್ನೆಗಳ ಸುರಿಮಳೆಯಿಂದ ಪಾರಾಗಿದ್ದಳು. ಆದರೆ ಇದು ಎಲ್ಲಿಯವರೆಗೆ ನಡೆದೀತು? ಅವಳು ತಾನಾಗಿ ಅಜಯನಿಗೆ ಎಲ್ಲವನ್ನು ತಿಳಿಸಬೇಕೆಂದಿದ್ದಳು. ಇಲ್ಲಿಯವರೆಗೆ ಅವಳು ಅಜಯ್‌ನಿಂದ ಏನನ್ನೂ ಮುಚ್ಚಿಟ್ಟಿರಲಿಲ್ಲ. ಬಾಲ್ಯದಲ್ಲಿ ತಾವಿಬ್ಬರೂ ಹೇಗೆ ಒಟ್ಟಿಗೆ ಆಡುತ್ತಿದ್ದೆ ಎಂದು ಸೀಮಾ ನೆನಪಿಸಿಕೊಂಡಳು. ಆದರೆ ಕಿಶೋರಾವಸ್ಥೆಯ ಹೊಸ್ತಿಲಿಗೆ ಬರುತ್ತಿದ್ದಂತೆಯೇ ಅವರು ಪರಸ್ಪರ ಅಗಲಬೇಕಾಯಿತು. ಅಜಯನ ತಂದೆ ಯಾವಾಗಲೂ ಕೆಲಸದ ಮೇಲೆ ಊರಿಂದೂರಿಗೆ ಹೋಗಬೇಕಾಗುತ್ತಿತ್ತು. ಇದರಿಂದ ಅಜಯನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಹುದೆಂದು ಅವರು ಅವನನ್ನು ಪಟ್ಟಣದ ಬೋರ್ಡಿಂಗ್ ಸ್ಕೂಲಿಗೆ ಸೇರಿಸಿದರು. ಅನಂತರ ಅವರಿಬ್ಬರೂ ಪರಸ್ಪರ ಭೇಟಿಯಾಗಲಿಲ್ಲ. ಆದರೆ ಇಬ್ಬರೂ ಪತ್ರ ವ್ಯವಹಾರ ಇರಿಸಿಕೊಂಡಿದ್ದರು. ತಮ್ಮ ಜೀವನದ ಅತ್ಯಂತ ಚಿಕ್ಕಪುಟ್ಟ ಘಟನೆಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು.
ವಿನೋದನೊಡನೆ ತನ್ನ ಮದುವೆ ನಿಶ್ಚಿತಾರ್ಥ ನಡೆದಾಗ ಸೀಮಾ ಅದನ್ನು ಅಜಯ್‌ಗೆ ಪತ್ರ ಬರೆದು ತಿಳಿಸಿದ್ದಳು. ಬಹಳ ದಿನಗಳ ನಂತರ ಅಜಯನ ಪತ್ರ ಬಂದಿತ್ತು. ಅದರಲ್ಲಿ ಅವನು ತನಗೆ ವಿನೋದನ ಬಗ್ಗೆ ಈರ್ಷ್ಯೆಯಾಗುತ್ತಿದೆ ಎಂದು ತಿಳಿಸಿದ್ದ. ವಿನೋದನನ್ನೂ ತನ್ನ ಮಿತ್ರನಂತೆ ಕಾಣುವುದಾಗಿ ತಿಳಿಸಿ ಪತ್ರದ ಕೊನೆಯಲ್ಲಿ, `ನಾನೇನಾದರೂ ನಿನ್ನ ಹತ್ತಿರ ಇದ್ದಿದ್ದರೆ ನೀನು ನನ್ನನ್ನು ಬಿಟ್ಟು ಬೇರೊಬ್ಬನೊಡನೆ ಹೇಗೆ ಮದುವೆಯಾಗುತ್ತಿ ಎಂದು ನೋಡಿಬಿಡುತ್ತಿದ್ದೆ,’ ಎಂದೂ ಸೇರಿಸಿದ್ದ. ಈ ಸವಾಲಿನ ಮುಂದೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ, `ತಮಾಷೆಗೆ ಬರೆದೆ, ತಪ್ಪು ತಿಳಿಯಬೇಡ,’ ಎಂದೂ ಬರೆದಿದ್ದ.
ಅಜಯನ ಈ ತಮಾಷೆಯಿಂದ ಸೀಮಾಳಿಗೆ ಸ್ವಲ್ಪ ನೋವಾಗಿತ್ತು. ಆದರೆ ಅವಳು ಅದನ್ನು ಬಹುಬೇಗ ಮರೆತಿದ್ದಳು. ಅವಳು ಅಜಯ್‌ನನ್ನು ತನ್ನ ಮದುವೆಗೆ ಆಮಂತ್ರಿಸಿದಳು. ಆದರೆ ಅವನು ತರಬೇತಿ ಶಿಬಿರದಲ್ಲಿದ್ದ. ಅವನಿಗೆ ರಜೆ ಸಿಗಲಿಲ್ಲ. ಈಗ ಸೀಮಾಳ ಮದುವೆಯಾಗಿ ಎರಡು ವರ್ಷಗಳಾಗಿವೆ. ತನ್ನ ತಾಯಿಯ ಪತ್ರಗಳಿಂದ ಅವಳಿಗೆ ಅಜಯ್‌ಗೆ ಆ ಊರಿನಲ್ಲಿಯೇ ಕೆಲಸ ದೊರೆತಿದೆ ಎಂದೂ, ಅವನು ತನ್ನ ಹಳೆಯ ಮನೆಯಲ್ಲೇ ವಾಸಿಸುತ್ತಿದ್ದಾನೆಂದೂ ತಿಳಿಯಿತು. ಮನೆಯ ಅರ್ಧ ಭಾಗವನ್ನು ಅವರು ಬಾಡಿಗೆಗೆ ಕೊಟ್ಟಿದ್ದರು. ಇನ್ನುಳಿದ ಅರ್ಧ ಭಾಗಕ್ಕೆ ಸುಣ್ಣ ಬಣ್ಣ ಮಾಡಿಸಿ ಅಜಯ್ ತನ್ನ ವಾಸಕ್ಕೆ ಸಜ್ಜುಗೊಳಿಸಿಕೊಂಡಿದ್ದ. ಅವನು ಸಾಮಾನ್ಯವಾಗಿ ಟೂರ್ ಮಾಡುತ್ತಲೇ ಇರುತ್ತಿದ್ದ. ಕಳೆದ ವಾರ ಅವಳ ತಾಯಿಯಿಂದ ಬಂದ ಪತ್ರದಲ್ಲಿ, “ಅಜಯ್ ಕೆಲಸದ ಮೇಲೆ ನಿನ್ನ ಊರಿಗೆ ಬರುತ್ತಿದ್ದಾನೆ. ಅವನ ಜೊತೆ ನೀನು ಮತ್ತು ವಿನೋದ್ ಇಬ್ಬರೂ ಕೆಲವು ದಿನಗಳ ಮಟ್ಟಿಗೆ ಊರಿಗೆ ಬನ್ನಿ,” ಎಂದಿತ್ತು.
ಹೆಜ್ಜೆ ಸಪ್ಪಳದಿಂದ ಸೀಮಾಳ ಏಕಾಗ್ರತೆಗೆ ಭಂಗವಾಯಿತು. ಅವರಿಬ್ಬರೂ ಬಂದಿರುವುದನ್ನು ತಿಳಿದೂ ಅವಳು ತನಗೆ ನಿದ್ರೆ ಬಂದಿರುವಂತೆ ಕಣ್ಣು ಮುಚ್ಚಿಕೊಂಡೇ ಇದ್ದಳು. ಕಳೆದ ಎರಡು ದಿನಗಳಿಂದ ಅಜಯ್ ಅವರೊಡನಯೇ ಇದ್ದ. ವಿನೋದ್‌ಸೀಮಾಳೊಡನೆ ಎತ್ತರದ ದನಿಯಲ್ಲಿ ಕೂಗಾಡುವುದು, ಮಾತು ಮಾತಿಗೂ ಅವಳ ಮೇಲೆ ರೇಗುವುದನ್ನು ಅಜಯ್ ನೋಡುತ್ತಿದ್ದ. ವಿನೋದ್ ಮೈಮರೆಯುವಂತೆ ಮದ್ಯಪಾನ ಮಾಡುವುದನ್ನೂ ಅವನು ನೋಡಿದ್ದ. ಇದನ್ನೆಲ್ಲ ನೋಡಿ ಅವನಿಗೆ ದುಃಖವಾಗಿದೆ ಎಂದು ಸೀಮಾಳಿಗೆ ಗೊತ್ತಿತ್ತು.
ಪ್ರಥಮ ಭೇಟಿಯಲ್ಲೇ ಅಜಯ್ ವಿನೋದನಿಗೆ ಈ ಬಗ್ಗೆ ಏನನ್ನೂ ಹೇಳಲಾರ ಎಂದು ಸೀಮಾ ತನ್ನಲ್ಲೇ ತರ್ಕಿಸಿದಳು. ಸೀಮಾಳನ್ನು ಅವನು ಹಲವಾರು ವರ್ಷಗಳ ನಂತರ ಭೇಟಿಯಾಗಿದ್ದ. ಆದರೆ ತನ್ನ ಮನದಲ್ಲೇಳುವ ಹಲವಾರು ಪ್ರಶ್ನೆಗಳಿಗೆ ಸೀಮಾಳಿಂದ ಉತ್ತರ ಕೇಳಿಯೇ ಕೇಳುತ್ತಾನೆ. ಅವನು ತನಗಾಗಿ ಪ್ರಶ್ನೆ ಪತ್ರಿಕೆಯನ್ನೇ ತಯಾರಿಸಿದ್ದಾನೆ ಎಂದು ಸೀಮಾಳಿಗೆ ಭಾಸವಾಯಿತು.
ಸ್ಟೇರಿಂಗ್ ಮೇಲೆ ಕೈಯಿಡುತ್ತಲೇ ಅಜಯ್‌ಸಿಗರೇಟು ಹೊತ್ತಿಸಿದ್ದಾನೆಂದು ಸೀಮಾಳಿಗೆ ವಾಸನೆಯಿಂದ ತಿಳಿದುಹೋಯಿತು. ಕಳೆದ ಎರಡು ದಿನಗಳಲ್ಲಿ ಸೀಮಾ ಅಜಯ್‌ನ ಈ ಸ್ವಭಾವವನ್ನು ಗಮನಿಸಿದ್ದಳು. `ಅವನಿಗೆ ಹೇಳೋರು ಕೇಳೋರು ಯಾರೂ ಇಲ್ಲವಲ್ಲ…..?’ ಎಂದುಕೊಂಡಾಗ ಅವಳ ತುಟಿಗಳ ಮೇಲೆ ಮಂದಹಾಸ ತೇಲಿತು.
“ಸಾಕೀಗ, ನೇರವಾಗಿ ಮನಗೇ ಹೋಗೋಣ,” ಅಜಯ್ ಹೇಳಿದಾಗ ಸೀಮಾಳಿಗೆ ಸುಮ್ಮನೆ ಇರಲಾಗಲಿಲ್ಲ.
“ಹೌದು ಹೌದು. ನಿಮ್ಮ ಸಿಗರೇಟ್ ಪ್ಯಾಕೆಟ್ ಅಷ್ಟರಲ್ಲಿ ಖಾಲಿಯಾಗದಿದ್ದರೆ….”
“ಓಹೋ…. ಇನ್ನೂ ಎದ್ದೇ ಇದೀಯಾ? ಹೇಗೂ ನೀನು ಊಟಾನೂ ಮಾಡಲಿಲ್ಲ. ಹೊಟ್ಟೆ ಹೇಗೂ ಖಾಲಿಯಾಗಿದೆ. ಅದಕ್ಕೆ ಹೊಗೆಯನ್ನಾದರೂ ಕುಡಿಸೋಣ ಎಂದುಕೊಂಡು,” ಎಂದು ಬಾಯಲ್ಲಿ ಹೇಳಿದರೂ ಅಜಯ್ ತನ್ನ ಕೈಲಿದ್ದ ಸಿಗರೇಟನ್ನು ನಂದಿಸಿ ಕಿಟಕಿಯಿಂದ ಹೊರಕ್ಕೆಸೆದು, “ಆಯ್ತಾ… ಈಗಲಾದರೂ ಸರಿ ತಾನೇ?” ಎಂದಾಗ, ಸೀಮಾಳಿಗೆ ಅಳು ಉಕ್ಕಿ ಬಂದಂತಾಯಿತು.
`ಅಜಯ್, ತನ್ನ ಬೇಕು ಬೇಡಗಳಿಗೆ ಎಷ್ಟೊಂದು ಗಮನಕೊಡುತ್ತಾನೆ,’ ಎಂದು ಅವಳಿಗನ್ನಿಸಿತು.
ವಿನೋದ್ ಅವಳ ತವರಿನಲ್ಲಿ ಮೂರು ದಿನ ಇದ್ದು ಹೊರಟುಬಿಟ್ಟ. ಸೀಮಾಳನ್ನು ಸ್ವಲ್ಪ ದಿನ ಬಿಟ್ಟುಹೋಗುವಂತೆ ಸೀಮಾಳ ತಾಯಿ ಹೇಗೋ ಅವನ ಮನವೊಲಿಸಿದ್ದರು. ಆದರೆ ಹೊರಡುವಾಗ ವಿನೋದ್ ಸೀಮಾಳ ಕಡೆ ಬೀರಿದ ದೃಷ್ಟಿಯಿಂದ ಈ ಪ್ರಸ್ತಾಪದಿಂದ ಅವನಿಗೆ ಸಂತೋಷವಾಗಿರಲಿಲ್ಲವೆಂದು ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು.
ಕೆಲವೊಂದು ಸಂಬಂಧಗಳು ಅತ್ಯಂತ ಪ್ರಿಯಕರ, ಆತ್ಮೀಯ ಆಗಿರುತ್ತವೆ. ನಾಲ್ಕು ಗೋಡೆಗಳ ನಡುವಿನ ಮನೆಯ ಬಗ್ಗೆಯೂ ಇಂತಹುದೇ ಘನಿಷ್ಠ ಸಂಬಂಧ ಇರುತ್ತದೆ. ಬರಿಯ ಗೋಡೆಗಳಿಂದ ಮನೆ ಆಗುವುದಿಲ್ಲ. ನಾವು ಸುರಕ್ಷಿತರು ಮತ್ತು ಸುಖೀ ಜನರು ಎಂಬ ಅನುಭೂತಿ ಮೂಡಿಸುವ ಮನೆಗೆ ಬೇರೇನೋ ಬೇಕಾಗುತ್ತದೆ. ನಮ್ಮ ಮನೆಯಲ್ಲಿ ಇಲ್ಲದ ಅಗಣಿತ ಸೌಲಭ್ಯಗಳು ಬೇರೊಬ್ಬರ ಮನೆಯಲ್ಲಿದ್ದರೂ, ಆ ಮನೆಯಲ್ಲಿ ನಾವು ಪರಕೀಯರಾಗಿಬಿಡುತ್ತೇವೆ. ವಿನೋದ್ ಮತ್ತು ಸೀಮಾರ ಸಂಬಂಧ ಕೊಂಚ ಮಟ್ಟಿಗೆ ಇದೇ ಮಾದರಿಯಾದಾಗಿತ್ತು. ಒಂದೇ ಮನೆಯಲ್ಲೇ ವಾಸಿಸುತ್ತಿದ್ದರೂ ಇಬ್ಬರ ನಡುವಿನ ಅಂತರ ದಿನೇ ದಿನೇ ಬೆಳೆದು ದಟ್ಟವಾಗುತ್ತಿತ್ತು. ಇದೇ ಕಾರಣದಿಂದಾಗಿ ಇಬ್ಬರಿಗೂ ಪರಸ್ಪರ ನಿಕಟರಾಗಿದ್ದೇವೆಂಬ ಅನುವೇ ಬರುತ್ತಿರಲಿಲ್ಲ.
ರಸ್ತೆ ಬದಿಯ ಪುಟ್ಟ ಸೇತುವೆಯೊಂದರ ಮೇಲೆ ಕುಳಿತು ದೂರದ ಹೊಲಗಳ ಆಚೆ ಕಾಣುತ್ತಿದ್ದ ಚಿಮಣಿಗಳಿಂದ ಬರುತ್ತಿದ್ದ ಹೊಗೆಯನ್ನೇ ದಿಟ್ಟಿಸುತ್ತ ಒಂದು ದಿನ ಸೀಮಾ ಅಜಯನೊಡನೆ ತನ್ನ ಕಥೆಯನ್ನು ಹೇಳಿಕೊಂಡಳು. ಅವಳು ಹೇಳದೇ ಬಿಟ್ಟ ಕಥೆಯನ್ನು ಅವಳ ಮಂಜು ಮುಸುಕಿದಂತಿದ್ದ ಕಣ್ಣುಗಳೇ ಹೇಳಿದವು. ಅಜಯನ ಬಲಿಷ್ಠ ಹಿಡಿತದಲ್ಲಿ ಬೆವರಿನಿಂದ ತೊಯ್ದ ಅವಳ ತಣ್ಣನೆಯ ಕೈ ಕೂಡಾ ತನ್ನದೇ ಕಥೆ ಹೇಳಿತ್ತು.
ಅವಳ ತಾಯಿಯ ತೀಕ್ಷ್ಣ ದೃಷ್ಟಿಯಿಂದಲೂ ಸೀಮಾಳ ಮನಃಕ್ಲೇಶ ಮರೆಯಾಗಲಿಲ್ಲ. ಅವರೂ ಅವಳನ್ನು ಈ ಬಗ್ಗೆ ಹಲವಾರು ಬಾರಿ ಪ್ರಶ್ನಿಸಿದರು. ಆದರೆ ಸೀಮಾ ಆಗೆಲ್ಲ ಬೇರೇನೋ ಮಾತು ತೆಗೆದು, ಮಾತು ಹಾರಿಸಿಬಿಟ್ಟಳು.
ಕೆಲವೊಮ್ಮೆ ಸೀಮಾಳಿಗೆ ವ್ಯರ್ಥವಾಗಿ ಕ್ಲೇಶಗೊಳ್ಳುತ್ತಿದ್ದೇನೆ ಎನಿಸುತ್ತಿತ್ತು. ವಿನೋದನೊಡನೆ ಇದ್ದಾಗ ಅವನ ಇಚ್ಛಾನುಸಾರವಾಗಿ ನಡೆಯಲು ಪ್ರಯತ್ನಿಸುತ್ತ, ಆ ಪ್ರಯತ್ನದಲ್ಲಿಯೇ ಬಸವಳಿದು ಹೋಗುತ್ತಿದ್ದಳು. ಅವನಿಂದ ದೂರವಾಗಿದ್ದಾಗ ಅವನೊಡನೆ ತನ್ನ ಸಂಬಂಧ ಎಷ್ಟೊಂದು ಸಹಜವಾಗಿದೆ ಎಂಬ ವಿಚಾರದ ಸುಳಿಯಲ್ಲಿ ಮುಳುಗಿ ಆಯಾಸಗೊಳ್ಳುತ್ತಿದ್ದಳು. ಇಕ್ಕೆಡೆಯಲ್ಲೂ ಉರಿಯುತ್ತಿರುವ ಮೊಂಬತ್ತಿಯಂತೆ ಅವಳು ಬದುಕುತ್ತಿದ್ದಳು. ಹೀಗಿರುವಾಗ ತೀವ್ರ ಬಿರುಗಾಳಿಯಂತೆ ಅಜಯ್ ಅವಳ ಜೀವನದಲ್ಲಿ ಪ್ರವೇಶಿಸಿದ್ದ. ಈ ಮೋಂಬತ್ತಿಯನ್ನು ಹೀಗೆ ವ್ಯರ್ಥವಾಗಿ ಕರಗಿ ಹೋಗುವುದರಿಂದ ಕಾಪಾಡಲು ಬಯಸಿದ್ದ. ಎರಡು ಮೂರು ದಿನಗಳಿಗೊಮ್ಮೆ ಅವನು ಸೀಮಾಳನ್ನು ಭೇಟಿಯಾಗಲು ಬರುತ್ತಿದ್ದ. ಅವರಿಬ್ಬರೂ ಬಹಳ ಹೊತ್ತು ಮಾತಾನಾಡುತ್ತಿದ್ದರು. ಬಾಲ್ಯದ ಘಟನೆಗಳನ್ನು ನೆನಪಿಸಿಕೊಂಡು ನಗುತ್ತಿದ್ದರು. ಸೀಮಾಳ ವೈವಾಹಿಕ ಜೀವನದ ಕಡೆ ಮಾತು ಹೊರಳಿದೊಡನೆ, ಅವಳ ಮುಖದ ಮೇಲೆ ನೋವಿನ ಚಿಹ್ನೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಅವಳು ಈ ಬಗ್ಗೆ ಮಾತು ಮುಂದುವರಿಯದಂತೆ ವಿಷಯ ಹಾರಿಸಿಬಿಡುತ್ತಿದ್ದಳು.
ಒಂದು ದಿನ ಈ ಬಗ್ಗೆ ಅಜಯ್ ಸಿಟ್ಟಿಗೆದ್ದ, “ಹೀಗೆ ಮಾತು ಹಾರಿಸುತ್ತಿದ್ದರೆ ಹೇಗೆ ಸೀಮಾ? ಕೊನೆಗೆ ಏನಾದರೂ ನಿರ್ಧಾರಕ್ಕೆ ಬರಲೇಬೇಕಲ್ಲ….. ಆ ನಿರ್ಧಾರ ನೀನೇ ತಾನೇ ತೆಗೆದುಕೊಳ್ಳಬೇಕು?”
“ಹೌದು, ನಾನೇ ತೆಗೆದುಕೊಳ್ಳುತ್ತೇನೆ…. ಆದರೆ ನೀವು ಇಷ್ಟೇಕೆ ವ್ಯಾಕುಲರಾಗಿದ್ದೀರಿ?”
“ನಿನ್ನ ಬಾಲ್ಯ ಸ್ನೇಹಿತ ನಾನು. ನಿನಗೆ ಏನೇ ಕಷ್ಟವಾದರೂ ಅದು ನನಗೆ ನೋವುಂಟು ಮಾಡುತ್ತದೆ. ನಿನ್ನ ಕಷ್ಟವನ್ನು ಹಂಚಿಕೊಳ್ಳುವುದು ನನ್ನ ಕರ್ತವ್ಯ. ಆ ಹಕ್ಕು ಅಧಿಕಾರ ನನಗಿದೆ.”
“ಚೆನ್ನಾಗಿ ಭಾಷಣ ಮಾಡ್ತಿರಪ್ಪಾ. ನಿಮ್ಮಂಥ ಗೆಳೆಯ ಇರುವ ನಾನೇ ಧನ್ಯೆ. ಆದರೆ ನನ್ನ ನೋವಿನ ಸುಖ ನನಗೇ ಇರಲಿ. ಅದನ್ನು ಬೇರೊಬ್ಬರೊಡನೆ ಹಂಚಿಕೊಳ್ಳುವುದು ನನಗೆ ಬೇಕಿಲ್ಲ.”
“ಹೆಂಗಸರಲ್ಲಿ ಇದೇ ದೊಡ್ಡ ತಪ್ಪು ನೋಡು. ನೋವಿನಲ್ಲೂ ಸುಖ ಹುಡುಕಿಕೊಳ್ಳುತ್ತೀರಿ.”
“ಹೌದು ಇದು ಗಂಡಸರಿಂದ ಸಾಧ್ಯವಿಲ್ಲ,” ಸೀಮಾ ಇಷ್ಟು ಹೇಳಿ ಎದ್ದುನಿಂತಳು. ಹೆಚ್ಚಿನ ವಾದ ಬೆಳೆಸುವುದು ಅವಳಿಗೆ ಬೇಕಿರಲಿಲ್ಲ. ಮಾತು ಮುಂದುವರಿದರೆ ಅಜಯನ ಎದುರು ತನ್ನ ಬಲಹೀನತೆ ಕಾಣಿಸಬಹುದೆಂಬ ಭಯ ಅವಳಿಗಿತ್ತು. ಅಂದೇ ರಾತ್ರಿ ಸೀಮಾ ಒಂದು ವಿಚಿತ್ರ ಕನಸು ಕಂಡಳು. ಅವಳು ಕೆಲವು ದಿನಗಳಿಂದ ಅಲ್ಲ, ಅನೇಕ ವರ್ಷಗಳಿಂದ ತನ್ನ ತಾಯಿಯ ಬಳಿಯೇ ಇರುತ್ತಿದ್ದಳು. ವಿನೋದ್ ಅವಳನ್ನು ಮತ್ತೆ ಮತ್ತೆ ಕರೆದರೂ ಅವಳು ಹೋಗಲಿಲ್ಲ. ಆದರೆ ಅವನು ಕರೆಯುವ ಧ್ವನಿ ಕೇಳಿಸದಾದಾಗ, ಅವನು ಮತ್ತೆ ಕರೆಯಲಾರ ಎಂದು ಸೀಮಾಳಿಗೆ ಭಾಸವಾಯಿತು. ಭಯಭೀತಳಾಗಿ ಅವಳು ತನ್ನ ಮನೆಗೆ ಧಾವಿಸಿ ಬಂದಳು. ಆದರೆ ಮನೆಯ ಬಹುಪಾಲು ಗೋಡೆಗಳೆಲ್ಲ ಬಿದ್ದುಹೋಗಿರುವುದನ್ನು ಕಂಡು ಅವಳು ಚಕಿತಳಾದಳು. ಅವಳು ಮನೆಯ ನಟ್ಟ ನಡುವೆ ನಿಂತು ಸುತ್ತಲೂ ನೋಟ ಹರಿಸಿದಳು. ಒಂದು ಭವ್ಯವಾದ ಕಟ್ಟಡದ ಭಗ್ನಾವಶೇಷವನ್ನು ನೋಡುತ್ತಿದ್ದಳು. ವಿನೋದ್ ಎಲ್ಲಿಯೂ ಕಾಣಿಸುತ್ತಿರಲಿಲ್ಲ. ಅವನನ್ನು ಅರಸುತ್ತಾ ಸೀಮಾ ನಾಲ್ಕೂ ಕಡೆ ಹುಡುಕಾಡಿದಳು. ಅದು ಡಾಂಬರು ಹಾಕಿದ ಸುದೀರ್ಘ ಮಾರ್ಗವಾಗಿ ಪರಿವರ್ತಿತವಾಯಿತು. ಆ ದಾರಿಯಲ್ಲಿ ನಡೆದೂ ನಡೆದೂ ಸೀಮಾ ಏದುಸಿರುಬಿಡತೊಡಗಿದಳು. ಕೊನೆಗೆ ರಸ್ತೆ ಕಾಣಿಸದಂತಾಯಿತು. ಅಲ್ಲಿ ದಟ್ಟ ಕಾಡಿನ ಹೊರತು ಬೇರೇನೂ ಇರಲಿಲ್ಲ. ಅವಳು ತನ್ನ ಶಕ್ತಿಯನ್ನೆಲ್ಲ ಬಿಟ್ಟು ವಿನೋದನನ್ನು ಕೂಗತೊಡಗಿದಳು. ಆದರೆ ಪ್ರತ್ಯುತ್ತರವಾಗಿ ಅವಳ ಧ್ವನಿಯ ಪ್ರತಿಧ್ವನಿಯೇ ಕೇಳಿಬರುತ್ತಿತ್ತು ಅಷ್ಟೆ.
ಅವಳ ತಾಯಿ ಅವಳ ಭುಜ ತಟ್ಟಿ ಎಬ್ಬಿಸಿದರು. ಕಣ್ಣು ತೆರೆದು ತಾಯಿಯನ್ನು ನೋಡಿದಾಗ ಸೀಮಾಳಿಗೆ ಸಮಾಧಾನವಾದಂತಾಯಿತು.
“ಸೀಮಾ? ಏನಾಯಿತು ನನ್ನಮ್ಮ? ಯಾಕಿಷ್ಟು ಬವೆತು ಹೋಗಿದ್ದೀಯಾ?”
“ಏನಿಲ್ಲಮ್ಮ, ಹೆದರಿಬಿಟ್ಟಿದ್ದೆ ಅಷ್ಟೆ.”
“ಇಷ್ಟು ದೊಡ್ಡವಳಾಗಿದೀಯ, ಈಗಲೂ ಕನಸು ಕಂಡು ಹೆದರುತ್ತೀಯಲ್ಲ….,” ಅವಳ ತಾಯಿ ಸ್ನೇಹದಿಂದ ಅವಳ ತಲೆಯ ಮೇಲೆ ಕೈಯಾಡಿಸಿದರು.
“ಎದ್ದೇಳು… ಕಾಫಿ ತಣ್ಣಗಾಗುತ್ತಿದೆ.”
ತಾಯಿಗೆ ತನ್ನ ಕನಸು ತಿಳಿಸಬೇಕೆಂದು ಸೀಮಾಳಿಗೆ ತೋರಿತು. ಆದರೆ ಅದು ಅವಳಿಗೆ ಅರ್ಥವಾಗುವುದೇ? ಮನೆ ಭಗ್ನಾವಶೇಷವಾಗಿ ಪರಿವರ್ತಿತಗೊಳ್ಳುವುದು, ಕಾಲಿನ ಕೆಳಗಿನ ಭೂಮಿ ಕಾಡಿಗೆ ಹೋಗುವ ಮಾರ್ಗವಾಗುವುದು ಹೆದರಿಕೆ ಹುಟ್ಟಿಸುವ ಸಂಗತಿಗಳೇ ತಾನೇ!
ಅಜಯನೂ ಮೂರ್ನಾಲ್ಕು ದಿನಗಳಿಗಾಗಿ ಟೂರ್ ಹೋಗಿದ್ದ. ಅವನೊಡನೆ ಹೇಳಿಕೊಂಡರೆ ಮನಸ್ಸಿನ ಭಾರ ಕಡಿಮೆಯಾಗಬಹುದೆಂದು ಸೀಮಾ ತರ್ಕಿಸಿದಳು. ಅವನು ಈಗ ಇಲ್ಲಿ ಇಲ್ಲದಿರುವುದೇ ಒಳ್ಳೆಯದಾಯಿತು. ಅವಳ ಕಾರಣದಿಂದಾಗಿ ಅಜಯ್ ಕಳೆದ ಕೆಲವು ದಿನಗಳಿಂದ ಬಹಳ ಚಿಂತಿತನಾಗಿದ್ದ.
ಎರಡು ದಿನಗಳ ನಂತರ ಅಜಯ್ ಹಿಂದಿರುಗಿ ಬಂದ. ಸೀಮಾ ಅಷ್ಟರಲ್ಲಿ ತನ್ನನ್ನು ಸಂಭಾಳಿಸಿಕೊಂಡಿದ್ದಳು. ಆದರೆ ಅಜಯ್ ಏನನ್ನೋ ಯೋಚಿಸಿಕೊಂಡೇ ಬಂದಂತಿತ್ತು. ಸಂಜೆ ಕಾಫಿ ಸೇವಿಸುವಾಗ ಇಬ್ಬರೂ ಮೌನವಾಗಿದ್ದರು. ಅಜಯ್ ಪದೇ ಪದೇ ಸೀಮಾಳ ಕಡೆ ತೀಕ್ಷ್ಣವಾಗಿ ನೋಡುತ್ತಿದ್ದ. ಏನನ್ನೋ ಹೇಳಬೇಕೆಂದು ಅವನ ತುಟಿಗಳು ಅಲುಗಾಡಿದವು. ಆದರೆ ಮತ್ತೆ ಒಂದಕ್ಕೊಂದು ಅಂಟಿಕೊಳ್ಳುತ್ತಿದ್ದ. ಅಜಯನ ಮನಸ್ಸಿನ ತುಮುಲ ಖಂಡಿತ ಶಬ್ದಗಳ ಮೂಲಕ ಹೊರಬೀಳುವುದೆಂದು ಅವಳಿಗೆ ಅರಿವಾಯಿತು. ಅವನೇ ಬಾಯ್ತೆರೆಯಲೆಂದು ಅವಳು ಮೌನವಹಿಸಿದಳು. ತಾನಾಗಿ ಮಾತನಾಡಿ ಮೌನ ಬೇಧಿಸಲು ಅವಳು ಮುಂದಾಗಲಿಲ್ಲ.
ಬಟ್ಟಲಿನ ಕಾಫಿ ಮುಗಿಯಿತು. ಈಗ ಸುಮ್ಮನೆ ಕುಳಿತಿರುವುದೂ ಕಷ್ಟವಾಗಿತ್ತು. ಗಾಳಿಯಲ್ಲಿ ತೇಲಾಡುತ್ತಾ ಅಜಯನ ಕಡೆಯಿಂದ ಶಬ್ದ ಕೇಳಿಸಿದಾಗ ಸೀಮಾಳ ಭಾವಸಮಾಧಿ ಭಂಗವಾಯಿತು, “ಸುತ್ತಾಡಿಕೊಂಡು ಬರೋಣವೇ?”
“ಇಲ್ಲೇ ಕುಳಿತುಕೊಳ್ಳೋಣ. ಇವತ್ತು ಯಾಕೋ ಸುತ್ತಾಡಿ ಬರುವ ಮನಸ್ಸಿಲ್ಲ.”
“ನಾನು ನಿನಗೆ ಏನನ್ನೋ ಹೇಳಬೇಕು.”
“ಹಾಗಾದರೆ ಹೇಳುವುದು ತಾನೇ….. ನಾನು ನಿಮ್ಮ ಎದುರೇ ಕುಳಿತಿದ್ದೇನಲ್ಲ,” ಸೀಮಾ ಲಘುವಾಗಿ ಹೇಳಿದಳು. ಆದರೆ ಅಜಯ್ ಗಂಭೀರವಾಗುತ್ತಾ ಹೇಳಿದ, “ನನ್ನನ್ನು ಕಂಡು ಹೆದರುತ್ತಿಯೇನು?”
“ಅರೆ, ನಾನೇಕೆ ಹೆದರಲಿ….? ಅದೂ ನಿಮ್ಮನ್ನು ಕಂಡು?” ಮನಸ್ಸಿನ ಭಯವನ್ನು ಹೋಗಲಾಡಿಸಲೋ ಎಂಬಂತೆ ತಲೆಯನ್ನು ಒಮ್ಮೆ ಕೊಡವಿ ಅವಳು ಮೇಲೆದ್ದು ನಿಂತಳು. ಹೀಗೆ ಹೇಳಿ ಅವಳು ಅಜಯನ ಆಹ್ವಾನವನ್ನು ಅಂಗೀಕರಿಸಿದಳು.
ಎಂದಿನಂತೆ ಅಜಯ್ ಟಾರು ರಸ್ತೆಯ ಕಡೆ ಹೋಗದೆ, ಹೊಲಗಳ ನಡುವಿನ ಕಾಲು ಹಾದಿಯಲ್ಲಿ ಕರೆದುಕೊಂಡು ಹೋದ.
“ಅಜಯ್, ಎಲ್ಲಿ ಕರೆದುಕೊಂಡು ಹೋಗ್ತಿದ್ದೀರಿ? ರಸ್ತೆಯೇ ಇದ್ದಂತಿಲ್ಲ, ಬರೀ ತಗ್ಗು ದಿಣ್ಣೆಗಳೇ ತುಂಬಿದಂತಿವೆ” ಸೀಮಾ ಚಿಂತೆಯಿಂದ ಹೇಳಿದಳು.
ಆದರೆ ಅಜಯ್ ತನಗೆ ಅವಳ ಮಾತು ಕೇಳಿಸಲೇ ಇಲ್ಲವೇನೋ ಎಂಬಂತೆ ಮುಂದೆ ಸಾಗುತ್ತಲೇ ಇದ್ದ. ಒಂದು ಪುರಾತನವಾದ ಹಾಳುಬಾವಿಯ ಬಳಿ ಅವನು ಹೋಗಿ ನಿಂತಾಗ ಸೀಮಾಳ ಮೈಯಲ್ಲಿ ಮುಳ್ಳೆದ್ದಂತೆ ಆಯಿತು.
ಆ ಪಾಳು ಬಾವಿಗೆ ತನ್ನದೇ ಆದ ಇತಿಹಾಸವಿತ್ತು. ಅವಳು ಮತ್ತು ಅಜಯ್ ಇಬ್ಬರೂ ಆಗ ಇನ್ನೂ ಚಿಕ್ಕವರಾಗಿದ್ದರು. ಹೊಲಗಳ ನಡುವಿನ ಪಾಳುಬಾವಿಯಲ್ಲಿ ಹೆಣ್ಣೊಬ್ಬಳ ಶವ ದೊರೆತಿದೆ ಎಂದು ಅವರು ಕೇಳಿಸಿಕೊಂಡಿದ್ದರು. ಬಾವಿಯ ಬಳಿ ಜನ ಜಾತ್ರೆ ಸೇರಿದ್ದರು. ಪೊಲೀಸಿನವರೂ ಬಂದಿದ್ದರು. ಇಬ್ಬರಿಗೂ ಅವರವರ ತಂದೆ ತಾಯಿ ಎಚ್ಚರಿಕೆ ಕೊಟ್ಟಿದ್ದರು.
“ಹುಷಾರ್, ಮತ್ತೆ ಎಂದಾದರೂ ಆ ಕಡೆಗೆ ಹೋದಿರೋ ಅಷ್ಟೇ….” ಆ ಘಟನೆಯ ನಂತರ ಯಾರೂ ಆ ಬಾವಿಯನ್ನು ಬಳಸುತ್ತಿರಲಿಲ್ಲ. ರಾತ್ರಿಯ ವೇಳೆಯಲ್ಲಿ ಜನ ಆ ಕಡೆ ಬರಲು ಹೆದರುತ್ತಿದ್ದರು.
“ಸುತ್ತಾಡಿಕೊಂಡು ಬರಲು ನಿಮಗೆ ಈ ಜಾಗವೇ ಬೇಕಿತ್ತೆ?” ಸೀಮಾ ಅಜಯನ ಮೇಲೆ ಕೂಗಾಡಿದಳು. ಆದರೆ ಮನೆಯಲ್ಲಿ ವಿಚಲಿತನಾಗಿದ್ದಂತೆ ಕಾಣುತ್ತಿದ್ದ ಅಜಯ್ ಇಲ್ಲಿ ಶಾಂತನಾಗಿ ಕಾಣುತ್ತಿದ್ದ. ಬಾವಿಯಿಂದ ತೆಗೆದ ದೊಡ್ಡ ದೊಡ್ಡ ಕಲ್ಲುಗಳು ಅಲ್ಲಲ್ಲಿ ಬಿದ್ದಿದ್ದ. ಒಂದು ಕಲ್ಲಿನ ಮೇಲೆ ಕುಳಿತುಕೊಂಡು ಅಜಯ್ ಕೈ ಚಾಚಿ ಹೇಳಿದ, “ಬಾ, ಕೂತ್ಕೋ ಸೀಮಾ.”
ಮನದಲ್ಲಿ ಆತಂಕ ತುಂಬಿಕೊಂಡಿದ್ದ ಅವಳು ಸನಿಹದ ಕಲ್ಲೊಂದರ ಮೇಲೆ ಕುಳಿತಳು. ಅವಳು ಅಜಯನ ಕಡೆ ನೋಡಿದಳು. ಆದರೆ ಅವನು ಮಾತ್ರ ದೂರದ ಹೊಲಗಳನ್ನು ದಿಟ್ಟಿಸುತ್ತಿದ್ದ.
“ನೀನು ವಿನೋದನನ್ನು ಏಕೆ ತೊರೆದು ಬರಬಾರದು?” ಯಾವುದೇ ಪೀಠಿಕೆ ಇಲ್ಲದೆ ಅಜಯ್ ಇದ್ದಕ್ಕಿದ್ದಂತೆ ಹೇಳಿಯೇಬಿಟ್ಟ.
“ಯಾಕೆ?” ಸೀಮಾ ಅಜಯ್‌ನನ್ನೇ ನೆಟ್ಟ ನೋಟದಿಂದ ನೋಡುತ್ತಾ ಕೇಳಿದಳು.
“ಏನಾದರೂ ನಿರ್ಧಾರಕ್ಕೆ ಬರಲೇಬೇಕಲ್ಲ…..”
“ಯಾರಿಗೆ? ನಿಮಗೋ, ನನಗೋ?” ಅವಳು ವ್ಯಂಗ್ಯವಾಗಿ ನಕ್ಕುಬಿಟ್ಟಳು.
“ನಾನೇನು ತಮಾಷೆ ಮಾಡುತ್ತಿದ್ದೇನೆ ಎಂದುಕೊಂಡೆಯಾ?” ಅವಳ ವ್ಯಂಗ್ಯ ಅವನಿಗೆ ಚುಚ್ಚಿದಂತೆ ಆಯಿತು, “ನಾನೇನಾದರೂ ನಿನ್ನ ಹತ್ತಿರ ಇದ್ದಿದ್ದರೆ ನೀನು ನನ್ನನ್ನು ಬಿಟ್ಟು ಬೇರೊಬ್ಬನೊಡನೆ ಹೇಗೆ ಮದುವೆಯಾಗುತ್ತೀ ಎಂದು ನೋಡಿಬಿಡುತ್ತಿದ್ದೆ ಎಂದು ನಾನು ನಿನಗೆ ಪತ್ರ ಬರೆದಾಗಲೂ ನಾನು ತಮಾಷೆ ಮಾಡಿರಲಿಲ್ಲ. ಆದರೆ ನಿನ್ನ ಮದುವೆ ಗೊತ್ತಾಗಿ ಹೋಗಿತ್ತು. ಹೀಗಾಗಿ ನನ್ನ ಮಾತಿಗೆ ಪರಿಹಾಸ್ಯದ ಸ್ವರೂಪ ಕೊಡಬೇಕಾಗಿ ಬಂತು. ಗೊತ್ತೇನು?”
“ಆದರೆ ನನ್ನ ಮದುವೆಯಾಗಿ ಈಗಾಗಲೇ ಎರಡು ವರ್ಷಗಳೇ ಕಳೆದವು ನಂತರ ಈಗ ಇದನ್ನು ಹೇಳುತ್ತಿದ್ದೀರಲ್ಲಾ?”
“ಹೌದು. ಆದರೆ ನಿನ್ನ ಇಂದಿನ ಪರಿಸ್ಥಿತಿ ನೋಡಿ, ಗತ್ಯಂತರವಿಲ್ಲದೆ ನಾನು ಇದನ್ನು ಹೇಳಬೇಕಾಗಿದೆ. ವಿನೋದನೊಡನೆ ಈ ಎರಡು ವರ್ಷಗಳಲ್ಲಿ ನೀನು ದುಃಖದ ಹೊರತು ಬೇರೇನು ಪಡೆದೆ? ನಾನು ಇಂದಿಗೂ ನಿನ್ನ ಎದುರು ಇದ್ದೇನೆ, ನಿನ್ನೊಡನೇ ಇದ್ದೇನೆ…. ನಿನಗಾಗಿ ಕಾಯುತ್ತಲೇ ಇದ್ದೇನೆ. ನಿನ್ನ ಸುಖ ಸಂತೋಷಕ್ಕಾಗಿ ನಾನು ಏನನ್ನೂ ಮಾಡಬಲ್ಲೇ ಎಂದು ನಿನಗೇ ಗೊತ್ತು,” ಅಜಯ್ ಆವೇಶದಿಂದ ಹೇಳಿ ಶತಪಥ ಹಾಕತೊಡಗಿದ. ಆದರೆ ಸೀಮಾ ಹಾಗೇ ಕುಳಿತಿದ್ದಳು. ತಾನು ಅಲ್ಲೇ ಕುಳಿತು ಕುಳಿತು ಜಡವಾಗಿ ಬಿಡುವೆ ಎಂದೆನಿಸಿತು ಅವಳಿಗೆ. ಅಜಯ್ ಗಗನಕುಸುಮಗಳನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದ್ದಾನೆ. ಆದರೆ ಮನುಷ್ಯ ಜೀವನವೆಲ್ಲ ಮುಷ್ಟಿ ಬಿಗಿಹಿಡಿದೇ ನಡೆಯಲು ಸಾಧ್ಯವಿಲ್ಲ. ಹಿಡಿತ ಕೊಂಚ ಸಡಿಲವಾದರೂ ಆ ಕುಸುಮಗಳು ಮತ್ತೆ ಗಗನಕ್ಕೇ ಹಾರಿಹೋದಾವು. ಅವಳು ಅಜಯನ ದಯಾಭಿಕ್ಷೆಯನ್ನಾಗಲೀ ಅಥವಾ ಬಲಿದಾನವನ್ನಾಗಲೀ ಏಕೆ ಸ್ವೀಕರಿಸಬೇಕು? ಈಗ ಇಂಥ ಮಾತುಗಳನ್ನಾಡುತ್ತಾ ತನ್ನನ್ನು ತಾನೇ ಒಬ್ಬ ಮಹಾಪುರುಷ ಎಂದುಕೊಂಡಿದ್ದಾನೆ. ಆದರೆ ಮಹಾನತೆಯ ಹೊದಿಕೆ ಹೊರೆ ಎನಿಸಿದಾಗ ಅವಳ ಗತಿ ಏನಾದೀತು?
ಜೀವನ ಈ ಹೊಲಗಳಂತೆಯೇ ವಿಸ್ತಾರವಾಗಿ ವ್ಯಾಪಿಸಿದೆ. ಆದರೆ ಈ ಹೊಲದಲ್ಲಿಯೇ ಈ ಪಾಳುಬಾವಿಯೂ ಇದೆ. ಅಜಯ್ ಅವಳನ್ನು ಸರಿಯಾದ ಜಾಗಕ್ಕೇ ಕರೆತಂದಿದ್ದಾನೆ. ಅವಳು ತನ್ನ ದೊಡ್ಡಸ್ತಿಕೆಯನ್ನು ಚೂರು ಚೂರು ಮಾಡಿ ಈ ಬಾವಿಗೆ ಎಸೆಯಬೇಕಾಗಿದೆ. ಅವಳು ಯಾವಾಗಲೂ ವಿನೋದನ ವಿರೋಧವಾಗಿಯೇ ಯಾಕೆ ನಡೆದುಕೊಳ್ಳಬೇಕು? ಅವನ ಪಕ್ಷದವಳಾಗಿ, ಅವನ ಪರವಾಗಿ ಏಕೆ ಜೀವನ ಸಂಘರ್ಷದಲ್ಲಿ ಸೆಣೆಸಬಾರದು?
ಅಜಯ್ ಇನ್ನೂ ಹಾಗೆಯೇ ಶತಪಥ ಹಾಕುತ್ತಿದ್ದ.“ಕುಳಿತುಕೊಳ್ಳಿ ಅಜಯ್, ಇಷ್ಟೇಕೆ ವಿಚಲಿರಾಗಿದ್ದೀರ?” ಸೀಮಾಳ ಮಾತು ಕೇಳಿ ಅಜಯ್ ಮತ್ತೆ ಅವಳ ಸನಿಹದಲ್ಲಿದ್ದ ಕಲ್ಲಿನ ಮೇಲೆ ಕುಳಿತಕೊಂಡ.
“ನಾನು ವಿನೋದನನ್ನು ತೊರೆದು ಬಂದರೆ ಸುಖಿಯಾಗಿರುತ್ತೇನೆಂದು ನೀವು ಹೇಗೆ ಭಾವಿಸಿದಿರಿ?” ಸೀಮಾಳ ಮನಸ್ಸಿನೊಳಗಿನ ಅಂಧಕಾರ ದೂರವಾಗತೊಡಗಿತ್ತು.
“ನಿನಗೆ ಅವನನ್ನು ಕಂಡರೆ ಪ್ರೀತಿ ಇದೆಯೆಂದು ನನಗೆ ತಿಳಿಸುವ ಇರಾದೆಯೇ?”
“ಕಟಕಿ ಏಕೆ ಅಜಯ್? ವಿನೋದ್‌ರನ್ನು ನಾನು ಪ್ರೇಮಿಸುವುದಿಲ್ಲವೆಂದು ನೀವು ಹೇಗೆ ಹೇಳುವಿರಿ? ನಮ್ಮಲ್ಲಿ ವಿವಾಹಗಳು ನಡೆಯುವುದೇ ಹೀಗೆ. ಇಬ್ಬರು ಅಪರಿಚಿತರು ವಿವಾಹದಿಂದ ಆಜೀವಪರ್ಯಂತ ಬೆಸೆಯಲ್ಪಡುತ್ತಾರೆ. ಈ ಸಂಬಂಧದಲ್ಲಿ ಪ್ರೀತಿ, ಕಲಹ ಎರಡೂ ಇರುತ್ತದೆ. ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಕೊಂಚ ಸಮಯ ಬೇಕೇಬೇಕು. ಆದರೆ ಇದು ಬಹಳ ದೀರ್ಘವಾದಾಗ, ಅವರಲ್ಲಿ ಭಯ ತಲೆದೋರುತ್ತದೆ. ಇದೇ ಭಯ ನನ್ನೊಳಗ ಇದೆ. ಆದರೆ ಪರಿಸ್ಥಿತಿಗಳಿಗೆ ಹೆದರಿ ಪಲಾಯನ ಮಾಡುವುದೇ ಜೀವನವಲ್ಲ. ಜೀವನ ಒಂದು ಸಂಘರ್ಷ. ನಮ್ಮ ಪಾಲಿನ ಅವಿರತ ಹೋರಾಟವನ್ನು ಸ್ವಯಂ ನಾವೇ ಮಾಡಬೇಕು.”
ಅಜಯ್‌ಗೆ ಇದನ್ನೆಲ್ಲ ಹೇಳುತ್ತಿದ್ದಾಗ ಸೀಮಾಳಿಗೆ ತನ್ನಲ್ಲಿ ಹೊಸದೊಂದು ಆತ್ಮವಿಶ್ವಾಸ ಮೂಡಿದಂತೆನಿಸಿತು. ಹೇಡಿಗಳಂತೆ ಸಮಸ್ಯೆಗಳನ್ನು ಕಂಡು ಓಡುವುದು ಜೀವನವಲ್ಲ.
ನಕ್ಷತ್ರಗಳು ತುಂಬಿದ್ದ ಆಕಾಶ ಮಾರ್ಗವನ್ನು ಬಿಟ್ಟು ಅವಳು ಕಲ್ಲು ಮುಳ್ಳು ತುಂಬಿದ್ದ ರಸ್ತೆಯನ್ನು ತನಗಾಗಿ ಆರಿಸಿಕೊಂಡಿದ್ದಳು. ಆದರೆ ವಿನೋದನ ಕೈಹಿಡಿದು ತಾನು ಈ ಮಾರ್ಗದಲ್ಲಿ ನಡೆದರೆ, ಈ ಮಾರ್ಗ ಅರಣ್ಯದಲ್ಲಿ ಮರೆಯಲಾಗುವುದಿಲ್ಲ ಎಂಬ ವಿಶ್ವಾಸ ಅವಳಿಗಿತ್ತು.
“ಸರಿ ಹಾಗಾದರೆ….. ನಾನು ಇನ್ನೇನನ್ನೂ ಹೇಳಲಾರೆ. ಭವಿಷ್ಯ ನಿನ್ನ ಪಾಲಿಗೆ ಸುಖಮಯವಾಗಿರಲಿ ಎಂದಷ್ಟೇ ಹಾರೈಸುತ್ತೇನೆ,” ಅಜಯನ ಮಾತು ಕೇಳಿ ಸೀಮಾ ಮೇಲೆದ್ದು, “ಈಗ ಮನೆಗೆ ಹೊರಡೋಣ, ಕತ್ತಲಾಗ್ತಾ ಇದೆ. ಅಮ್ಮ ದಾರಿ ಕಾಯುತ್ತಿರುತ್ತಾರೆ.”
ಆ ರಾತ್ರಿ ಸೀಮಾ ವಿನೋದ್‌ಗೆ ಒಂದು ಸುದೀರ್ಘ ಪತ್ರ ಬರೆದಳು. ಕೊನೆಯಲ್ಲಿ ತಾನು ಯಾವಾಗ ಊರಿಗೆ ಹಿಂದಿರುಗುತ್ತಿದ್ದೇನೆ ಎಂಬುದನ್ನೂ ತಿಳಿಸಿದ್ದಳು.