ನಾನು ಗಡಿಯಾರ ನೋಡಿಕೊಂಡೆ. 5 ಗಂಟೆಗೆ ಇನ್ನೂ 5 ನಿಮಿಷ ಇತ್ತು. ಇಂದು ಆಫೀಸಿನಲ್ಲಿ ಬಹಳ ಕೆಲಸ ಇದ್ದು ತಲೆ ಎತ್ತಲೂ ಪುರಸತ್ತು ಸಿಗಲಿಲ್ಲ. ನಾನು ಬ್ಯಾಗನ್ನು ರೆಡಿ ಮಾಡಿಕೊಂಡೆ. ಅಷ್ಟರಲ್ಲಿ ಬಾಸ್‌ರಿಂದ ಕರೆ ಬಂತು. ಆ ಸಮಯದಲ್ಲಿ ಯಾರೂ ಬಾಸ್‌ಕರೆಯನ್ನು ಇಷ್ಟಪಡುವುದಿಲ್ಲ. ನಾನು ಬೇಸರಗೊಂಡು ಅವರ ಕ್ಯಾಬಿನ್‌ಗೆ ಹೋದಾಗ ಅವರ ಕಂಪ್ಯೂಟರ್‌ನ ಹಾರ್ಡ್‌ ಡಿಕ್ಸ್ ಕ್ರ್ಯಾಶ್‌ ಆಗಿದ್ದು ತಿಳಿಯಿತು. ಅವರಿಗೆ ಯಾವುದೋ ಫೈಲ್ ಬಹಳ ಅಗತ್ಯವಾಗಿ ಬೇಕಾಗಿತ್ತು. ನಾನು ಅವರಿಗೆ ಫೈಲ್ ‌ತೆಗೆದುಕೊಟ್ಟೆ. ನಂತರ ಅವರು ಕೆಲವು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಉತ್ತರಿಸಿ ಹೊರಬರುವಷ್ಟರಲ್ಲಿ 6 ಗಂಟೆಯಾಗಿತ್ತು.

5 ಗಂಟೆಯಾದ ಕೂಡಲೇ ನಾನೂ ಹಾಗೂ ದೀಪಾ ಓಡುತ್ತಿದ್ದೆವು. 5 ಗಂಟೆಗೆ ಬಿಟ್ಟರೆ ಐದೂವರೆ ಗಂಟೆಯ ಲೇಡೀಸ್‌ ಸ್ಪೆಷಲ್ ಟ್ರೇನ್‌ ಸಿಗುತ್ತದೆ. ಅದು ಆರೂವರೆ ಗಂಟೆಗೆ ಮಾಲಾಡ್‌ ಸ್ಪೇಷನ್‌ ತಲುಪುತ್ತದೆ. ಟ್ರೇನ್‌ನಿಂದ ಇಳಿದು ತರಕಾರಿ ಇತ್ಯಾದಿ ಖರೀದಿಸಿ ಭರತ್‌ನನ್ನು ಕರೆತರಲು ಬೇಬಿ ಕೇರ್‌ಗೆ ಹೋಗುತ್ತೇನೆ. ಅಲ್ಲಿ ಭರತ್‌ ಅಸಹನೆಯಿಂದ ಕಾಯುತ್ತಿರುತ್ತಾನೆ. 4 ವರ್ಷದ ಮಗುವಿಗೆ ಟೈಂ ನೋಡಲು ತಿಳಿಯುವುದಿಲ್ಲ. ಆದರೆ ಬೇಬಿ ಕೇರ್‌ನ ಆಂಟಿ, 6 ಗಂಟೆಗೆಲ್ಲಾ ಬಾಗಿಲ ಬಳಿ ಬಂದು ನಿಲ್ಲುತ್ತಾನೆ ಎನ್ನುತ್ತಾರೆ. ಅವನನ್ನು ಕರೆದುಕೊಂಡು ಮನೆಯತ್ತ ಹೊರಡುವಾಗ ಅಕ್ಕಪಕ್ಕದ ಮಹಿಳೆಯರು ಸಿಗುತ್ತಾರೆ. ಅವರೊಂದಿಗೆ ಅದೂ ಇದೂ ಮಾತಾಡಿ ಮನೆ ತಲುಪುವಷ್ಟರಲ್ಲಿ 7 ಗಂಟೆ ಆಗಿಯೇ ಬಿಡುತ್ತದೆ.

ಮನೆಯಲ್ಲಿ ನನ್ನ ದೊಡ್ಡ ಮಗ ರಾಜು ಕಾಯುತ್ತಿರುತ್ತಾನೆ. ಈಗ ರಾಜು ಬೇಬಿ ಕೇರ್‌ಗೆ ಹೋಗುವುದಿಲ್ಲ. ಅವನಿಗೆ 8 ವರ್ಷ. ಮನೆಯಲ್ಲಿ ಇರಲು ಇಚ್ಛಿಸುತ್ತಾನೆ. ಇಬ್ಬರು ಮಕ್ಕಳಿಗೂ ಹಾಲು ಕಾಯಿಸಿ ಕುಡಿಯಲು ಕೊಟ್ಟು ಟೀ ಮಾಡಿಕೊಂಡು ಕುಡಿಯುತ್ತೇನೆ. ನಂತರ ಸ್ವಲ್ಪ ವಿಶ್ರಾಂತಿ ಪಡೆದು ರಾತ್ರಿಯ ಅಡುಗೆ ಮಾಡುತ್ತೇನೆ. ಇದೇ ನನ್ನ ದಿನಚರಿ.

ಇಂದು ಲೇಡೀಸ್‌ ಸ್ಪೆಷಲ್ ಟ್ರೇನ್‌ ಮಿಸ್‌ ಆಯ್ತು. ನಂತರ ಬರುವ ಎಲ್ಲಾ ಟ್ರೇನುಗಳೂ ಭರ್ತಿಯಾಗಿರುತ್ತವೆ. ನನಗೆ ಆರೂವರೆ ಗಂಟೆಯ ಟ್ರೇನು ಸಿಕ್ಕಿತು. ಬಹಳ ಕಷ್ಟದಿಂದ ಹತ್ತಿದ್ದಾಯಿತು. ಭರತ್‌ ಬೇಬಿ ಕೇರ್‌ನ ಆಂಟಿಗೆ ಬಹಳ ತೊಂದರೆ ಕೊಟ್ಟಿದ್ದ. ಅವನನ್ನು ಕರೆದುಕೊಂಡು ಮನೆಗೆ ಬರುವಷ್ಟರಲ್ಲಿ ಏಳೂವರೆಯಾಗಿತ್ತು. ರಾಜು ಸಪ್ಪಗೆ ಕೂತಿದ್ದ.

“ಅಮ್ಮಾ, ಬಹಳ ಲೇಟ್‌ ಮಾಡಿಬಿಟ್ಟೆ ಬರೋಕೆ. ಈಗ ನಾನು ಆಟ ಆಡೋಕಾಗಲ್ಲ. ನನಗೆ ಹಾಲು ಬೇಡ,” ಎಂದು ಹೇಳಿ ರೂಮಿಗೆ ಓಡಿದ. ರಾಜೂನನ್ನು ಹೇಗೋ ಸಂತೈಸಿ ಹಾಲು ಕುಡಿಸಿದ್ದಾಯಿತು. ನಂತರ ನಾನು ಟೀ ಕುಡಿದೆ. ಕೆಲಸದವರು ಸಿಗೋದು ಬಹಳ ಕಷ್ಟ. ನಮ್ಮ ಕೆಲಸದವಳು ಒಂದು ಗಂಟೆಯೊಳಗೆ ಕೆಲಸ ಮುಗಿಸಿ ಹೊರಟುಬಿಡುತ್ತಾಳೆ.

ಇಡೀ ದಿನ ಆಫೀಸಿನಲ್ಲಿ ಕಳೆದ ನಂತರ ಟ್ರೇನ್‌ನಲ್ಲಿಯೂ ತಳ್ಳಾಡಿಸಿಕೊಂಡು ಬಹಳ ಸುಸ್ತಾಗಿತ್ತು. ಇಂದು ಅಡುಗೆ ಮಾಡಲು ನನಗೆ ಇಚ್ಛೆಯಾಗಲಿಲ್ಲ. ಅರ್ಧ ಗಂಟೆಯಲ್ಲಿ ರಾಜೇಶ್‌ ಮನೆಗೆ ಬರುತ್ತಾರೆ. ಆದರೆ ಗಂಡಸಲ್ಲವೇ? ಅಡುಗೆ ಮನೆಯಲ್ಲಿ ನನಗೆ ಸಹಾಯ ಮಾಡಲ್ಲ. ನಾನು ಎಂದಾದರೂ ಆ ಬಗ್ಗೆ ದೂರಿದಾಗ ಶ್ವೇತಾ ನೀನು ಕೆಲಸ ಬಿಟ್ಟುಬಿಡು. ಮನೇಲಿ ಆರಾಮವಾಗಿರು ಅಂತೀನಿ. ಆದರೆ ನಿನಗ ಕೆಲಸದ ಹುಚ್ಚು ಅಂತಾರೆ. ನನಗೆ ಅವರ ಜೊತೆ ಜಗಳ ಆಡೋಕೆ ಇಷ್ಟ ಇಲ್ಲ. ಇಷ್ಟು ಓದಿದ್ದು ಮನೇಲಿ ಕೂತ್ಕೋಳೋಕಾ? ನನ್ನ ಸಂಪಾದನೇಲಿ ಮನೆ ಖರ್ಚಿಗೂ ಕೊಡಲವಾ? ಸೋಫಾದಲ್ಲಿ ಮಲಗಿ ಯೋಚಿಸುತ್ತಿದ್ದಾಗ ಹಾಗೇ ನಿದ್ದೆ ಬಂತು. ಫೋನ್‌ ಶಬ್ಬ ಕೇಳಿ ನನಗೆ ಎಚ್ಚರಾಯಿತು. ರಿಸೀವರ್‌ ಎತ್ತಲು ಮನಸ್ಸಾಗಲಿಲ್ಲ. ಫೋನ್‌ ರಿಂಗ್‌ ಆಗಿ ಆಗಿ ನಿಂತುಹೋಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ರಿಂಗ್‌ ಆಗತೊಡಗಿತು. ರಾಜೇಶ್‌ ಬಂದು ಫೋನ್‌ ಯಾಕೆ ಎತ್ತೋದಿಲ್ಲ ಎಂದರು. ನಾನು ಮನಸ್ಸಿಲ್ಲದೆ ರಿಸೀವರ್‌ ಎತ್ತಿ ಸೋತ ಸ್ವರದಲ್ಲಿ  ಹಲೋ ಎಂದೆ.

ಅತ್ತಲಿಂದ “ಹಾಯ್‌ ಸಖಿ,” ಎಂಬ ಶಬ್ದ ಕೇಳಿ ನಾನು ಬೆಚ್ಚಿದೆ.

“ರಾಧಾ?” ನಾನು ಕೂಗಿದೆ. ರಾಧಾಗೆ ನನ್ನ ಮೇಲೆ ಪ್ರೀತಿ ಉಂಟಾದಾಗ ನನ್ನನ್ನು `ಸಖಿ’ ಎಂದು ಕರೆಯುತ್ತಿದ್ದಳು. ನಾವು ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಈಗಂತೂ ಅವಳನ್ನು ಭೇಟಿಯಾಗಿ 5-6 ವರ್ಷಗಳಾಯಿತು. ಶತಮಾನಗಳು ಕಳೆದಂತಾಗಿದೆ. ರಾಧಾಳ ಧ್ವನಿ ಕೇಳಿದ ಕೂಡಲೇ ನನ್ನಲ್ಲಿ ತಾಜಾತನ ಉಂಟಾಯಿತು. ನಾನು ಹೇಳಿದೆ, “ಬಹಳ ದಿನಗಳಾದ ಮೇಲೆ ಸಖಿ ಜ್ಞಾಪಕ ಬಂತಾ? ಒಂದು ಫೋನ್‌ ಇಲ್ಲ, ಇಮೇಲ್ ಇಲ್ಲ.”

“ಈಗ ಫೋನ್‌ ಮಾಡಿದ್ದು ನಾನು. ದೂರು ಹೇಳೋ ಹಕ್ಕು ಇರೋದು ನನಗೆ,” ರಾಧಾ ಹೇಳಿದಳು.

“ಹೌದು. ಹೌದು. ನಿನಗೂ ಹಕ್ಕಿದೆ,” ನಂತರ ನಾನು ದೀರ್ಘವಾಗಿ ಉಸಿರೆಳೆದುಕೊಂಡು ಹೇಳಿದೆ, “ರಾಧಾ, ಮನೆ ಆಫೀಸು ಮತ್ತು ಮಕ್ಕಳ ನಡುವೆ ಬದುಕು ಹೇಗಾಗಿದೆಯೆಂದರೆ ಕೆಲವು ದಿನಗಳಲ್ಲಿ ಕನ್ನಡೀಲಿ ನನ್ನ ಮುಖ ನೋಡಿಕೊಂಡರೂ ಗುರುತಿಸೋಕಾಗಲ್ಲ.”

“ನಂದೂ ಅದೇ ಸ್ಥಿತಿ ಕಣೆ. ಇಲ್ಲಿ ಕೇಳು, ಫೋನಿನಲ್ಲಿ  ಮಾತಾಡಿದ್ರೆ ನನಗೆ ತೃಪ್ತಿ ಆಗಲ್ಲ. ಅದಕ್ಕೆ ನಿನ್ನನ್ನು ಭೇಟಿಯಾಗೋಕೆ ಬರ್ತಿದ್ದೀನಿ,” ರಾಧಾ ಹೇಳಿದಳು.

“ಯಾವಾಗ?” ನಾನು ಖುಷಿಯಿಂದ ಎಗರಿ ಕೇಳಿದೆ.

“ನಾಳೆ ಬೆಳಗ್ಗೆ 10 ಗಂಟೆ ಫ್ಲೈಟ್‌ನಲ್ಲಿ ಬರ್ತಿದ್ದೀನಿ. ಸುಧೀರ್‌ ಮುಂಬೈಗೆ ಟೂರ್‌ ಹೋಗ್ತಿದ್ದೀನಿ ಅಂದ್ರು. ತಕ್ಷಣ ನಾನೂ ಆಫೀಸಿಗೆ ರಜೆ ಹಾಕಿ, ನಿನ್ನನ್ನು ಭೇಟಿ ಮಾಡೋಕೆ ಪ್ಲ್ಯಾನ್‌ ಮಾಡಿದೆ. ಈಗ ನೀನು ರಜೆ ತೆಗೆದುಕೊಳ್ಳೋಕೆ ಆಗಲ್ಲ ಅನ್ನಬಾರದು ಅಷ್ಟೆ.”

“ಅಯ್ಯೋ, ನಿನಗೋಸ್ಕರ ಪ್ರಾಣ ಬೇಕಾದ್ರೂ ಕೊಡ್ತೀನಿ. ಲೀವ್ ಯಾವ ಮಹಾ?” ನಾನು ಹೇಳಿದೆ.

“ಆಯ್ತು. ನಾಳೆ ಸಿಗೋಣ,” ಎಂದು ರಾಧಾ ಫೋನ್‌ ಕಟ್‌ ಮಾಡಿದಳು. ನಾನು ನನಗಾಗಿ ಯಾವತ್ತು ಲೀವ್ ‌ತೆಗೆದುಕೊಂಡೆ ಎಂದು ನೆನಪಿಲ್ಲ. ಆದರೆ ಭರತ್‌ ಹಾಗೂ ರಾಜೂರ ಅನಾರೋಗ್ಯ ಹಾಗೂ ಪರೀಕ್ಷೆಗಳ ಸಮಯದಲ್ಲಿ ರಜೆ ತೆಗೆದುಕೊಳ್ಳಬೇಕಾಗುತ್ತದೆ.

ರಾಧಾ ಬರುತ್ತಾಳೆನ್ನುವ ಸುದ್ದಿಯಿಂದ ನನಗೆ ಅದೆಲ್ಲಿಂದ ಶಕ್ತಿ ಬಂದಿತೋ ಗೊತ್ತಿಲ್ಲ. ರಾಜೇಶ್‌ ಬಟ್ಟೆ ಬದಲಿಸಿ ಕೈಕಾಲು, ಮುಖ ತೊಳೆದು ರೂಮಿಗೆ ಬಂದಿದ್ದರು. ಭರತ್‌ ಹಾಗೂ ರಾಜು ಆಟವಾಡಿ ವಾಪಸ್‌ ಬಂದಿದ್ದರು. ನಾನು ಇಷ್ಟು ಸಂತೋಷವಾಗಿರುವುದು ಅವರಿಗೆಲ್ಲಾ ಆಶ್ಚರ್ಯವಾಗಿತ್ತು.

“ಏನು ಶ್ವೇತಾ, ಬಹಳಾ ಖುಷಿಯಾಗಿದ್ದೀಯಾ?” ರಾಜೇಶ್‌ ಕೇಳಿದರು.

ನಾನು ಅವರಿಗೆ ರಾಧಾ ಬರುತ್ತಿರುವ ವಿಷಯ ಹೇಳಿದೆ. ಬೇಗ ಬೇಗನೆ ರಾತ್ರಿಯ ಅಡುಗೆ ಮಾಡಿದೆ. ಇದರ ಮಧ್ಯೆ ಅಪ್ಪ, ಮಕ್ಕಳು ಸೇರಿ ಮನೆಯನ್ನು ಹೊಳೆಯುವಂತೆ ಮಾಡಿದರು. ಬೇರೆ ದಿನಗಳಲ್ಲಿ ತಮ್ಮ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿರುತ್ತಿದ್ದರು. ನಾನೇ ಕಿರುಚಾಡಿ ಜೋಡಿಸಿಡಬೇಕಾಗಿತ್ತು. ಆದರೆ ಯಾರಾದರೂ ಮನೆಗೆ ಬರುತ್ತಾರೆಂದಾಗ ಇವರು ಹೀಗೆ ಒಟ್ಟಿಗೆ ಸೇರಿ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಬೆಳಗ್ಗೆ ಎಲ್ಲರಿಗೂ ಶಾಲೆ, ಕೆಲಸಕ್ಕೆ ಓಡುವ ಧಾವಂತ ಇರುತ್ತದೆ. ಅದಕ್ಕೆ ರಾತ್ರಿಯೇ ಮನೆಯನ್ನು ಸ್ವಚ್ಛಗೊಳಿಸಿದರು.

ನಾನು ಟೇಬಲ್ ಮೇಲೆ ಅಡುಗೆ ಇಟ್ಟಿದ್ದೆ. ಆಗಲೇ ರಾಜು ನನ್ನನ್ನು ಕರೆದ. ನಾನು ತಿರುಗಿ ನೋಡಿದಾಗ ಅವನು ಹೇಳಿದ, “ಅಮ್ಮಾ, ನೀವು ರಾಧಾ ಆಂಟೀನ ನಮ್ಮ ಮನೆಯಲ್ಲೇ ಇಟ್ಟುಕೊಳ್ಳಿ.”

ನಾನು ಪ್ರಶ್ನಾರ್ಥಕ ದೃಷ್ಟಿಯಿಂದ ಅವನತ್ತ ನೋಡಿದಾಗ ಅವನು ಹೇಳಿದ, “ಅಮ್ಮಾ, ಇವತ್ತು ನೀವು ಬಹಳ ಖುಷಿಯಾಗಿದ್ದೀರಿ. ನೀವು ಯಾರನ್ನೂ ಬೈಯಲಿಲ್ಲ. ಖುಷಿಯಿಂದ ಹಾಡು ಗುನುಗುಟ್ಟುತ್ತಿದ್ದೀರಿ. ನೋಡೋಕೆ ಬಹಳ ಚೆನ್ನಾಗಿದೆ ಅಮ್ಮ.”

ರಾಜು ಹೇಳಿದ್ದು ಚಿಕ್ಕ ಸಂಗತಿ. ಆದರೆ  ನನಗೆ ಬದುಕಿನ ಅಮೂಲ್ಯ ಪಾಠ ಹೇಳಿಕೊಟ್ಟಿದ್ದ, ನಿಜ. ದೊಡ್ಡ ಖುಷಿಗಳನ್ನು ಪಡೆಯುವ ನಿಟ್ಟಿನಲ್ಲಿ ನಾನು ಸಣ್ಣ ಸಣ್ಣ ಖುಷಿಗಳನ್ನು ಮರೆತುಬಿಟ್ಟಿದ್ದೆ. ದಿನನಿತ್ಯದ ಬದುಕಿನಲ್ಲಿ ನಾವು ನಗುವುದು, ಮಾತಾಡುವುದನ್ನೇ ಮರೆತುಹೋಗಿದ್ದೆವು. ಈ ಬಗ್ಗೆ ಗಂಭೀರವಾಗಿ ವಿಚಾರ ಮಾಡಬೇಕು ಎಂದು ನಿರ್ಧರಿಸಿದೆ. ರಾಜೂನನ್ನು ಪ್ರೀತಿಯಿಂದ ತಬ್ಬಿಕೊಂಡೆ.

ಸ್ವಲ್ಪ ಹೊತ್ತಿಗೆ ಎಲ್ಲರೂ ಮಲಗಿದೆವು. ಇಂದು ಸುಸ್ತಾಗಿದ್ದರೂ ನಿದ್ದೆ ಬರುತ್ತಿರಲಿಲ್ಲ. ಮನಸ್ಸು ಅತ್ಯಂತ ಪ್ರಫುಲ್ಲಿತವಾಗಿದ್ದಾಗ ಸುಸ್ತಾಗಿದ್ದರೂ ಸಹ ಶರೀರದಲ್ಲಿ ಉತ್ಸಾಹ, ಶಕ್ತಿಯ ಸಂಚಾರವಾಗುತ್ತದೆ. ನನ್ನ ಸಂತೋಷ ರಾಜೇಶ್‌ಗೆ ಕಾಣುತ್ತಿತ್ತು. ಅವರು ಕೇಳಿದರು, “ರಾಧಾ ನಿನ್ನ ಪ್ರೀತಿಯ ಸ್ನೇಹಿತೆ ಅಂತ ನನಗೆ ಗೊತ್ತು. ನೀವು ಚಿಕ್ಕಂದಿನಿಂದ ಸ್ನೇಹಿತರಾ?”

“ಹೌದು. ರಾಧಾ ಮತ್ತು ನಾನು ದೆಹಲಿಯಲ್ಲಿ ಲಾಜಪಥ್‌ ನಗರದಲ್ಲಿ ಇದ್ದೆವು. ಇಬ್ಬರೂ ಒಂದೇ ಶಾಲೆಯಲ್ಲಿದ್ದೆವು. ಒಟ್ಟಿಗೇ ಓಡಾಡುತ್ತಿದ್ದರಿಂದ ಇಬ್ಬರ ಅಭಿರುಚಿಗಳೂ ಒಂದೇ ರೀತಿಯಲ್ಲಿ ಇರುತ್ತಿತ್ತು.”

ರಾಜೇಶ್‌ ತಮಾಷೆ ಮಾಡಿದರು, “ಇಬ್ಬರೂ ಓದಿನಲ್ಲೂ ಮೊದಲು ಬರ್ತಿದ್ರಲ್ವಾ?”

“ಇಲ್ಲ. ಓದಿನಲ್ಲಿ ನಾವಿಬ್ಬರೂ ಸಾಧಾರಣ ದರ್ಜೆಯವರು. ಆದರೆ ಸ್ಪೋರ್ಟ್ಸ್ ನಲ್ಲಿ ವಿಶೇಷವಾಗಿ ರನ್ನಿಂಗ್‌ ರೇಸ್‌ನಲ್ಲಿ ಯಾರಿಗೂ ನಮ್ಮನ್ನು ಎದುರಿಸಲು ಆಗುತ್ತಿರಲಿಲ್ಲ. ರಾಧಾಳ ಮನೆ ನಮ್ಮ ಮನೆಯಿಂದ 10 ಹೆಜ್ಜೆ ದೂರವಿತ್ತು. ನಮ್ಮಿಂದಾಗಿ ಎರಡೂ ಮನೆಯವರಲ್ಲಿ ಗೆಳೆತನ ಇತ್ತು. ದಿನ ಸ್ಕೂಲಿಗೆ ಹೋಗುವಾಗ ಅವಳನ್ನು ಕೂಗುತ್ತಿದ್ದೆ. ಅವಳು ಸಿದ್ಧಳಾಗಿ ನನಗೆ ಕಾಯುತ್ತಾ ಕುಳಿತಿರುತ್ತಿದ್ದಳು. ಇಬ್ಬರೂ ಒಟ್ಟಿಗೇ ಹೋಗಿಬರುತ್ತಿದ್ದೆವು. ಒಮ್ಮೆ ಅಮ್ಮ ಕಾಯಿಲೆ ಬಿದ್ದಾಗ ಅವಳು ನನಗೆ ಬಹಳ ಸಹಾಯ ಮಾಡಿದ್ದಳು. ಮನೆಗೆಲಸದಲ್ಲಿ ಸಹಾಯದಿಂದ ಹಿಡಿದು ರಾತ್ರಿಯೂ ನನ್ನ ಜೊತೆ ಮಲಗುತ್ತಿದ್ದಳು. ಅಮ್ಮ ಆಸ್ಪತ್ರೆಯಿಂದ ಮನೆಗೆ ಬರುವವರೆಗೂ ನನ್ನೊಂದಿಗಿದ್ದಳು. ಸ್ಕೂಲಿನಲ್ಲಿ ಒಟ್ಟಿಗೆ ಕೂರುತ್ತಿದ್ದರಿಂದ ನಾವು ಬಹಳ ಮಾತಾಡುತ್ತಿದ್ದೆವು. ಆದ್ದರಿಂದ ನಮ್ಮನ್ನು ಬೇರೆ ಬೇರೆ ಕೂಡಿಸಲಾಯಿತು.”

ರಾಜೇಶ್‌ ನನ್ನ ಮಾತುಗಳನ್ನು ಗಮನವಿಟ್ಟು ಕೇಳುತ್ತಿದ್ದರು. ನಾನು ಮುಂದುವರಿಸಿದೆ, “ರಾಧಾಳ ಮನೆಯಲ್ಲಿ ರಾಧಾ, ಅವಳ ತಂಗಿ, ಅವಳ ತಂದೆ ತಾಯಿ ಅಲ್ಲದೆ ರಾಧಾಳ ದೊಡ್ಡಮ್ಮನ ಗಂಡು ಮಕ್ಕಳಿಬ್ಬರು ಇದ್ದರು. ರಾಧಾಳ ದೊಡ್ಡಮ್ಮ ಹಾಗೂ ದೊಡ್ಡಪ್ಪ ಇಬ್ಬರೂ ರೋಡ್‌ ಆ್ಯಕ್ಸಿಡೆಂಟ್‌ನಲ್ಲಿ ಸತ್ತು ಹೋದರು. ಹೀಗಾಗಿ ಅವಳ ದೊಡ್ಡಮ್ಮನ ಇಬ್ಬರು ಮಕ್ಕಳನ್ನೂ ಅವಳ ತಂದೆಯೇ ಪೋಷಿಸುತ್ತಿದ್ದರು. ದುಬಾರಿ ಕಾಲದಲ್ಲಿ 4 ಮಕ್ಕಳನ್ನು ಸಾಕುವುದು ಸುಲಭಾಗಿರಲಿಲ್ಲ.

“ರಾಧಾಗೆ ಒಂದು ಅಭ್ಯಾಸವಿತ್ತು. ಒಳ್ಳೇದಲ್ಲ, ಕೆಟ್ಟ ಅಭ್ಯಾಸ. ಅವಳು ಆಗಾಗ್ಗೆ ಅಪ್ಪನ ಜೇಬಿಂದ 8 ಆಣೆ, 1 ರೂ. ಕದಿಯುತ್ತಿದ್ದಳು. ಆಗ ನಾವು 3ನೇ ಕ್ಲಾಸ್‌ ಅಥವಾ 4ನೇ ಕ್ಲಾಸಿನಲ್ಲಿದ್ದೆವು. ಸ್ಕೂಲಿಂದ ಹಿಂತಿರುಗುವಾಗ ಚಾಕಲೇಟ್‌ ಅಥವಾ ಬೇರೆ ತಿಂಡಿ ಕೊಳ್ಳುತ್ತಿದ್ದಳು. ಅದರಲ್ಲಿ ಅರ್ಧ ಭಾಗ ನನಗೆ ಕೊಡುತ್ತಿದ್ದಳು. ನನಗೆ ರಾಧಾ ಹಣ ಕದಿಯುವುದು ಹಿಡಿಸುತ್ತಿರಲಿಲ್ಲ. ಆದರೂ ನಾನು ಅವಳು ಕೊಡಿಸುತ್ತಿದ್ದನ್ನು ತಿನ್ನುತ್ತಿದ್ದೆ.

“ಒಂದು ದಿನ ರಾಧಾ 10 ರೂ. ಕದ್ದಳು. ಅದಕ್ಕೆ ಚೇಪೆ ಹಣ್ಣುಗಳನ್ನು ತೆಗೆದುಕೊಂಡಳು. ದಾರಿಯುದ್ದಕ್ಕೂ ತಿಂದರೂ ಇನ್ನಷ್ಟು ಹಣ್ಣುಗಳು ಮಿಕ್ಕವು. ರಾಧಾ ಅವನ್ನು ನನಗೆ ಕೊಟ್ಟು, ನೀನೂ ನಿನ್ನ ತಮ್ಮ ತಿನ್ನಿ ಎಂದಳು.

Sneha-2

“ಮನೆಯಲ್ಲಿ ನಾವು ಹಣ್ಣು ತಿನ್ನುವುದನ್ನು ಕಂಡು ಅಮ್ಮ ಚೇಪೆ ಹಣ್ಣು ಎಲ್ಲಿಂದ ಬಂತು ಎಂದರು. ಆಗ ನಾನು ರಾಧಾ ಕೊಡಿಸಿದ್ದು ಎಂದೆ. ಅಮ್ಮನಿಗೆ ಅನುಮಾನ ಬಂತು. ರಾಧಾಳ ಅಮ್ಮ ಮಕ್ಕಳಿಗೆ ಹಣ ಕೊಡುತ್ತಿರಲಿಲ್ಲವೆಂದು ಅಮ್ಮನಿಗೆ ಗೊತ್ತಿತ್ತು. ಅವರು ಕೂಡಲೇ ರಾಧಾಳ ಮನೆಗೆ ಹೋಗಿ ಅವಳನ್ನು ವಿಚಾರಿಸಿದಾಗ ಅವಳು ನಾನು ಕೊಡಿಸಲಿಲ್ಲ, ಶ್ವೇತಾ ಕೊಡಿಸಿದ್ದು ಎಂದುಬಿಟ್ಟಳು. ಅಮ್ಮ ಮನೆಗೆ ಬಂದು ನನಗೆ ಚೆನ್ನಾಗಿ ಹೊಡೆದರು. ಅಷ್ಟು ಏಟುಗಳನ್ನು ತಿಂದರೂ ನಾನು ಅಮ್ಮನಿಗೆ ನಾನಲ್ಲ, ರಾಧಾಳೇ ಕೊಡಿಸಿದ್ದು ಎಂದೆ. ನಿಜ ತಿಳಿದುಕೊಳ್ಳಲು ಅಮ್ಮ ಮತ್ತೆ ರಾಧಾಳ ಮನೆಗೆ ಓಡಿದರು. ಆದರೆ ಎಷ್ಟು ಕೇಳಿದರೂ ತಾನು ಹಣ ಕದ್ದು ಚೇಪೆ ಹಣ್ಣು ಖರೀದಿಸಿದೆ ಎಂದು ರಾಧಾ ಒಪ್ಪಿಕೊಳ್ಳಲೇ ಇಲ್ಲ. ಅಮ್ಮ ಮನೆಗೆ ಬಂದು ಮತ್ತೆ ನನಗೆ ಹೊಡೆದರು. ನಂತರ ಪ್ರೀತಿಯಿಂದ ಬುದ್ಧಿ ಹೇಳಿದರು. ನಾನು ಮತ್ತೆ ಒಪ್ಪದಿದ್ದಾಗ ಅವರಿಗೆ ನಾನು ಮಾಡಿಲ್ಲವೆಂದು ನಂಬಿಕೆ ಬಂತು. ಆದರೂ ಸತ್ಯ ತಿಳಿಯಬೇಕೆಂದು ಅವರು ಸಂಕಲ್ಪಿಸಿದ್ದರು. ಅವರು ಮತ್ತೆ ರಾಧಾಳ ಮನೆಗೆ ಓಡಿದರು. ರಾಧಾಗೆ ದೇವರ ಮೇಲೆ ಬಹಳ ನಂಬಿಕೆ ಇದೆಯೆಂದು ಅಮ್ಮನಿಗೆ ಗೊತ್ತಿತ್ತು. ಅವಳನ್ನು ದೇವರ ಎದುರಿಗೆ ನಿಲ್ಲಿಸಿ ಸತ್ಯ ಹೇಳು ಎಂದಾಗ ಅವಳು ಸುಳ್ಳು ಹೇಳಲಾಗಲಿಲ್ಲ. ಅಂದು ಅಮ್ಮ ಬಹಳ ಹೊತ್ತು ಅತ್ತರು. ನನಗೆ ಮತ್ತು ರಾಧಾಗೆ ಬುದ್ಧಿ ಹೇಳಿದರು.

“ರಾಧಾಳ ತಪ್ಪನ್ನು ಮುಚ್ಚಿಟ್ಟು ದಿನ ಅವಳು ಕೊಟ್ಟ ಚಾಕಲೇಟ್‌ ಇತ್ಯಾದಿ ತಿಂದಿದ್ದೀಯ. ಅವಳ ಅಪರಾಧದಲ್ಲಿ ನಿನಗೂ ಸಮಪಾಲಿದೆ ಎಂದು ಅಮ್ಮ ಹೇಳಿದರು. ಅಂದಿನ ಪಾಠವನ್ನು ನಾವು ಇಡೀ ಜೀವನ ಮರೆಯಲು ಆಗುವುದಿಲ್ಲ,” ಎಂದು ನಾನು ರಾಜೇಶ್‌ರತ್ತ ನೋಡಿದಾಗ ಅವರಾಗಲೇ ನಿದ್ರೆಗೆ ಜಾರಿದ್ದರು. ನಂತರ ನಡೆದ ಘಟನೆಗಳು ನನ್ನ ಕಣ್ಣ ಮುಂದೆ ಬರತೊಡಗಿದವು.

ಅಮ್ಮ ಅಂದು ಸಾಮ, ದಾನ, ಭೇದ, ದಂಡಗಳನ್ನು ಉಪಯೋಗಿಸಿ ಸತ್ಯವನ್ನು ಕಂಡುಹಿಡಿದಿದ್ದರು. ಆದರೆ ಇಂದು ಮಕ್ಕಳ ಮೇಲೆ ಕೈಯೆತ್ತುವುದು ಅಪರಾಧವಾಗಿದೆ. ಅಮ್ಮ ನನಗೆ ಹೊಡೆದು ತಪ್ಪಂತೂ ಮಾಡಲಿಲ್ಲ. ಮರುದಿನ ನಾವಿಬ್ಬರೂ ಪರಸ್ಪರ ದೂರವಿದ್ದೆವು. ಆದರೆ ಸೋಮವಾರ ನಾನು ರಾಧಾಳ ಮನೆಗೆ ಹೋದಾಗ ಅವಳು ಸ್ಕೂಲಿಗೆ ಹೋಗಲು ರೆಡಿಯಾಗಿ ನಿಂತಿದ್ದಳು. ನಾವಿಬ್ಬರೂ ಏನೂ ನಡೆದೇ ಇಲ್ಲವೆಂಬಂತೆ ನಗುನಗುತ್ತಾ ಮಾತಾಡಿದೆವು. ಬಾಲ್ಯವೆಂದರೆ ಹಾಗೇನೇ. ನಾವು ಮಕ್ಕಳಿಂದ ಕಲಿಯಬೇಕು. `ಚೈಲ್ಡ್ ಈಸ್‌ ದ ಫಾದರ್‌ ಆಫ್‌ ಮ್ಯಾನ್‌,’ ಎಂದು ಯಾರೋ ಸರಿಯಾಗಿಯೇ ಹೇಳಿದ್ದಾರೆ. ನಾವಿಬ್ಬರೂ ಎಷ್ಟು ಆತ್ಮೀಯರಾಗಿದ್ದೆವೆಂದರೆ ಸ್ಕೂಲಿನಲ್ಲಿ ನಮ್ಮಿಬ್ಬರ ಸ್ನೇಹದ ಉದಾಹರಣೆಯನ್ನು ಕೊಡುತ್ತಿದ್ದರು.

ನಾವು ಮೊದಲನೇ ಪಿಯುಸಿ ಓದುತ್ತಿದ್ದಾಗ ನಮ್ಮ ಗೆಳೆತನ ಶತ್ರುತ್ವದಲ್ಲಿ ಬದಲಾಗುವಂತಹ ಘಟನೊಂದು ನಡೆಯಿತು. ಒಂದು ದಿನ ರಾಧಾಳ ಪಕ್ಕ ಕೂರುತ್ತಿದ್ದ ಪುಷ್ಪಾ ಗಡಿಯಾರ ತಂದಿದ್ದಳು. ಅದರಲ್ಲಿ ನಮ್ಮ ದೇಶದ್ದಲ್ಲದೆ ಯಾವ ದೇಶದ್ದಾದರೂ ಸಮಯ ನೋಡಬಹುದಿತ್ತು. ರಾಧಾ ಕುತೂಹಲದಿಂದ ಅದನ್ನು ತಿರುಗಿಸಿ ನೋಡುತ್ತಿದ್ದಳು. ನಂತರ ತನ್ನ ಕೈಯಲ್ಲಿ ಧರಿಸಿದಳು. ಪುಷ್ಪಾ ಕೇಳಿದಾಗ ರಾಧಾ, “ಸಂಜೆವರೆಗೂ ಕಟ್ಕೊಂಡು ವಾಪಸ್‌ ಕೊಡ್ತೀನಿ ಕಣೆ,” ಎಂದಳು.

ಪುಷ್ಪಾ ಒಪ್ಪಿಕೊಂಡಳು. ಅಂದು ಸಂಜೆ ಆಟದ ಮೈದಾನಕ್ಕೆ ಹೋದೆವು. ಅಲ್ಲಿ ಆಡುವಾಗ ರಾಧಾಳ ಕೈಯಿಂದ ಗಡಿಯಾರ ಜಾರಿ ಕೆಳಗೆ ಬಿದ್ದುಬಿಟ್ಟಿತು. ಅವಳಿಗೆ ಗೊತ್ತಾದಾಗ ನನಗೆ ಹೇಳಿದಳು. ಎಲ್ಲರೂ ಸೇರಿ ಬಹಳ ಹೊತ್ತು ಹುಡುಕಿದರೂ ಅದು ಸಿಗಲಿಲ್ಲ. ಅಷ್ಟರಲ್ಲಿ ಬೆಲ್ ಬಾರಿಸಿತು. ನಾವೆಲ್ಲರೂ ನಮ್ಮ ತರಗತಿಗೆ ಹೋದೆವು. ಪುಷ್ಪಾ ಮತ್ತು ರಾಧಾ ಇಬ್ಬರೂ ಬಹಳ ಚಿಂತೆಯಲ್ಲಿದ್ದರು. ನಾವು ಗುಸುಗುಸು ಮಾಡುತ್ತಿದ್ದುದನ್ನು ಕಂಡು ಟೀಚರ್‌ ಚೆನ್ನಾಗಿ ಬೈದರು. ಆಗ ಪುಷ್ಪಾ ನಡೆದಿದ್ದನ್ನು ಟೀಚರ್‌ಗೆ ಹೇಳಿದಳು. ಅವರು ನಮ್ಮೆಲ್ಲರನ್ನು ಹೆಡ್‌ ಮಿಸ್ಟ್ರೆಸ್‌ ಬಳಿಗೆ ಕರೆದೊಯ್ದರು.

ದಾರಿಯಲ್ಲಿ ರಾಧಾ ನನಗೆ ಹೇಳಿದಳು, “ಶ್ವೇತಾ, ನೀನೇ ಕಾಪಾಡಬೇಕು, ನಾನು ಗಡಿಯಾರಾನ ಅವಳಿಗೆ ವಾಪಸ್‌ಕೊಟ್ಟುಬಿಟ್ಟೇಂತ ಹೇಳು. ಆ ಗಡಿಯಾರದ ದುಡ್ಡನ್ನು ನಾನು ಕೊಡೋಕಾಗಲ್ಲ. ಅಪ್ಪನಿಗೆ ಬಹಳ ಕೋಪ ಬರುತ್ತೆ. ಪ್ಲೀಸ್‌ಶ್ವೇತಾ……”

ಹೆಡ್‌ ಮಿಸ್ಟ್ರೆಸ್‌ ಬಳಿ ಪುಷ್ಪಾ ಅಳುತ್ತಾ ಆ ಗಡಿಯಾರ ನಮ್ಮ ಅಂಕಲ್‌ದು. ಅವರು ನಿನ್ನೆ ತಾನೇ  ದುಬೈನಿಂದ ಬಂದಿದ್ದರು. ನಾನು ಫ್ರೆಂಡ್ಸ್ ಗೆ ತೋರಿಸೋಕೆ ಗಡಿಯಾರನ್ನು ಸ್ಕೂಲ್‌ಗೆ ತಂದೆ ಎಂದು ಹೇಳಿದಳು. ಹೆಡ್‌ ಮಿಸ್ಟ್ರೆಸ್‌ ನನ್ನನ್ನು ಕೇಳಿದಾಗ ನಾನು ಸುಳ್ಳು ಹೇಳಲಾಗಲಿಲ್ಲ. ನಾನು ಅವರಿಗೆ ನಡೆದದ್ದೆಲ್ಲನ್ನೂ ಹೇಳಿದೆ. ಏಕೆಂದರೆ ಅಮ್ಮನ ಮಾತು ನನಗೆ ನೆನಪಾಯಿತು.

ಒಂದು ವೇಳೆ ನಾನು ಒಬ್ಬ ಅಪರಾಧಿಗೆ ಸಹಾಯ ಮಾಡಿದರೆ ನಾನೂ ಆ ಅಪರಾಧದಲ್ಲಿ ಭಾಗಿಯಾದಂತೆ. ಹಾಗೆ ನೋಡಿದರೆ ರಾಧಾ ಅಂತಹುದೇನೂ ದೊಡ್ಡ ಅಪರಾಧ ಮಾಡಿರಲಿಲ್ಲ. ಅವಳು ಬೇಕೆಂದು ಆ ಗಡಿಯಾರನ್ನು ಕಳೆದಿರಲಿಲ್ಲ. ಆದರೆ ರಾಧಾಳನ್ನು ಉಳಿಸಲು ಹೋಗಿ ಸತ್ಯವನ್ನು ಮುಚ್ಚಿಟ್ಟಿದ್ದರೆ ನಾನು ಪುಷ್ಪಾಗೆ ಅನ್ಯಾಯ ಮಾಡಿದಂತಾಗುತ್ತಿತ್ತು. ನಾನು ಸತ್ಯ ಹೇಳಿದ್ದು ನನ್ನ ಕುತ್ತಿಗೆಗೆ ಬಂತು. ಇಬ್ಬರ ಪೋಷಕರನ್ನೂ ಕಾಲೇಜಿಗೆ ಕರೆಸಲಾಯಿತು. ನಂತರ ಶಿಕ್ಷೆ ವಿಧಿಸಿದರು. ಪುಷ್ಪಾ ಅಷ್ಟು ದುಬಾರಿ ಗಡಿಯಾರನ್ನು ಕಾಲೇಜಿಗೆ ತರಬಾರದಿತ್ತು. ರಾಧಾ ಕೂಡ ಗಡಿಯಾರನ್ನು ಕಳೆದುಹಾಕಿ ತನ್ನ ಬೇಜವಾಬ್ದಾರಿತನವನ್ನು ತೋರಿಸಿದಳು. ಹೀಗಾಗಿ ರಾಧಾ ಗಡಿಯಾರದ ಅರ್ಧ ಬೆಲೆಯನ್ನು ಕೊಡಬೇಕು. ಗಡಿಯಾರದ ಬೆಲೆ 4 ಸಾವಿರ ರೂ. ಆಗಿತ್ತು. 2 ಸಾವಿರ ರೂ. ಕೊಡುವುದು ರಾಧಾಳ ತಂದೆಗೆ ಸುಲಭವಾಗಿರಲಿಲ್ಲ. ಈ ಘಟನೆಯ ನಂತರ ರಾಧಾ ನನ್ನ ಮೇಲೆ ಕೋಪಗೊಂಡಳು.

ನಾನು ಎಷ್ಟು ಹೇಳಿದರೂ ಸಮಾಧಾನಗೊಳ್ಳಲಿಲ್ಲ. ಅವಳಿಗೆ ಹಣ ಕೊಡಲು ಬಯಸಿದೆ. ಆದರೆ ಅವಳು ಬಹಳ ಸ್ವಾಭಿಮಾನಿಯಾಗಿದ್ದಳು. “ನನ್ನದು ತಪ್ಪಾಗಿದೆ….. ಒಪ್ಕೋತೀನಿ. ಆದರೆ ನಾನು ಬೇಕೂಂತ ಮಾಡಲಿಲ್ಲ. ಅಪ್ಪನ ಪರಿಸ್ಥಿತಿ ನಿನಗೆ ಗೊತ್ತೇ ಇದೆ. ಆದರೂ ನೀನು ನನಗೆ ಸಹಾಯ ಮಾಡಲಿಲ್ಲ. ಇಂದಿನಿಂದ ನಮ್ಮಿಬ್ಬರ ಸ್ನೇಹ ಮುಗೀತು,” ಎಂದಳು.

ಮೊದಲು ನಮ್ಮಿಬ್ಬರ ಸ್ನೇಹದ ಉದಾಹರಣೆ ಕೊಡಲಾಗುತ್ತಿತ್ತು. ಈಗ ನಾವಿಬ್ಬರೂ ಶತ್ರುಗಳಾಗಿದ್ದೆವು. ತಕ್ಷಣವೇ ಎಲ್ಲವನ್ನೂ ಮರೆತು ಅಪ್ಪಿಕೊಳ್ಳಲು ನಾವೀಗ ಮಕ್ಕಳಲ್ಲ. ನನ್ನ ಮೇಲಿನ ಅವಳ ಕೋಪದ ಜೊತೆಗೆ ನನ್ನ ಅಹಂ ಕೂಡ ಸೇರಿ ಅವಳೊಂದಿಗೆ ಮಾತಾಡದಿರಲು ನಿರ್ಧರಿಸಿತು. ಒಬ್ಬರಾದರೂ ಮಾತು ಶುರು ಮಾಡೋಕೇ ಸಿದ್ಧರಿರಲಿಲ್ಲ.

ಈಗ ನಾವು ಎರಡನೇ ಪಿಯುಸಿಯಲ್ಲಿದ್ದೆವು. ಓದುವುದರಲ್ಲಂತೂ ಇಬ್ಬರೂ ಸಾಮಾನ್ಯ ದರ್ಜೆಯಲ್ಲಿದ್ದೆವು. ಅಂತರ ಕಾಲೇಜು ರನ್ನಿಂಗ್‌ ರೇಸ್‌ ಸ್ಪರ್ಧೆಯಲ್ಲಿ ನಾವಿಬ್ಬರೂ ನಮ್ಮ ಕಾಲೇಜನ್ನು ಪ್ರತಿನಿಧಿಸುತ್ತಿದ್ದೆವು. ಸ್ಪರ್ಧೆಯಲ್ಲಿ ಯಾವಾಗಲೂ ನಾನು ಮೊದಲ ಸ್ಥಾನ ಪಡೆದರೆ, ರಾಧಾ ಎರಡನೇ ಸ್ಥಾನ ಪಡೆಯುತ್ತಿದ್ದಳು. ನಮ್ಮಿಬ್ಬರ ವೇಗದಲ್ಲಿ ಬರೀ 5-6 ಸೆಕೆಂಡು ವ್ಯತ್ಯಾಸ ಇರುತ್ತಿತ್ತು. ಈ ಸ್ಪರ್ಧೆಗಳಲ್ಲಿ ಒಂದು ಸೆಕೆಂಡ್‌ನಷ್ಟು ವ್ಯತ್ಯಾಸವಾದರೂ ಯಾವುದೇ ಸ್ಪರ್ಧಿ ಸ್ಥಾನ ಕಳೆದುಕೊಳ್ಳುತ್ತಿದ್ದರು. ರಾಜ್ಯದ ಇತರ ಕಾಲೇಜುಗಳಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳ ಲಿಸ್ಟ್ ಬಂದಿತ್ತು. ಅವರೆಲ್ಲರಿಗೆ ಹೋಲಿಸಿದರೆ ನನ್ನ ಓಟದ ವೇಗ ಸಾಕಷ್ಟು ಹೆಚ್ಚಿತ್ತು. ರಾಧಾ ಎರಡನೇ  ಸ್ಥಾನದಲ್ಲಿದ್ದಳು.

ವಿಶ್ವವಿದ್ಯಾಲಯಗಳಲ್ಲಿ ಕ್ರೀಡೆಗಳ ಪ್ರತಿ ಕ್ಷೇತ್ರದಲ್ಲಿ ಮೊದಲ ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಅಡ್ಮಿಶನ್‌ ಉಚಿತವಾಗಿರುತ್ತದೆ. ರಾಧಾಳ ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹೀಗಾಗಿ ಅವಳ ಮುಂದಿನ ಓದಿಗೆ ಯಾವುದಾದರೂ ಕ್ರೀಡೆಯಲ್ಲಿ ಮೊದಲ ಸ್ಥಾನ ಗಳಿಸುವುದು ಅಗತ್ಯವಾಗಿತ್ತು. ನನ್ನ ತಂದೆ ನನ್ನನ್ನು ಓದಿಸಲು ಸಮರ್ಥರಾಗಿದ್ದರು. ಹೀಗಾಗಿ ನನಗೆ ಮೊದಲ ಸ್ಥಾನ ಗೆಲ್ಲಲೇಬೇಕಾದ ಅನಿವಾರ್ಯವಿರಲಿಲ್ಲ. ಆದರೆ ಹೆಸರು ಗಳಿಸುವುದು ಯಾರಿಗೆ ತಾನೇ ಇಷ್ಟವಿಲ್ಲ? ಇದೆಂಥ ವಿಡಂಬನೆ? ರಾಧಾಗೆ ಈ ಸ್ಪರ್ಧೆಯನ್ನು ಗೆಲ್ಲುವುದು ಅನಿವಾರ್ಯವಾಗಿತ್ತು. ಅವಳ ಸಮೀಪದ ಸ್ಪರ್ಧಿ ನಾನು. ನಮ್ಮ ಕಾಲೇಜಿಗೂ ನನ್ನ ಮೇಲೆ ಬಹಳ ಭರವಸೆಗಳಿದ್ದವು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನನಗೆ ಬಹಳ ಉತ್ಸಾಹವಿತ್ತು. ಆದರೆ ಸ್ಪರ್ಧೆ ಆರಂಭವಾಗುವ ಮೊದಲು ನನ್ನ ಮನಸ್ಸು ಬದಲಾಯಿತು. ನಾನೇನು ಮಾಡುತ್ತಿದ್ದೇನೆ? ರಾಧಾ ನನ್ನ ಅತ್ಯಂತ ಪ್ರೀತಿಯ ಗೆಳತಿ. ಅವಳು ಮೊದಲ ಸ್ಥಾನ ಗಳಿಸಲಿಲ್ಲವೆಂದರೆ ಅವಳ ವಿದ್ಯಾಭ್ಯಾಸ ನಿಂತುಹೋಗುತ್ತದೆ. ನನ್ನ ಗೆಳತಿಗಾಗಿ ಇಷ್ಟೂ ಮಾಡೋಕಾಗಲ್ವಾ? ಹೀಗೆಲ್ಲಾ ಯೋಚಿಸಿ ನನಗೆ ಆರೋಗ್ಯ ಸರಿಯಿಲ್ಲವೆಂದು ಹೇಳಿ ನಾನು ಸ್ಪರ್ಧಿಸದೆ ಮನೆಗೆ ಹೋದೆ. ರಾಧಾ ಸ್ಪರ್ಧೆಯಲ್ಲಿ ಗೆದ್ದಳು. ನಾನು ಕಾಯಿಲೆ ಬಿದ್ದಿದ್ದು ನಮ್ಮ ಕಾಲೇಜಿಗೆ ಬರೀ ಒಂದು ಘಟನೆ ಅಷ್ಟೇ. ಆದರೆ ರಾಧಾಗೆ ಎಲ್ಲ ಅರ್ಥವಾಯಿತು. ಫೀಲ್ಡ್ ನಿಂದ ನೇರವಾಗಿ ನಮ್ಮ ಮನೆಗೆ ಓಡಿಬಂದಳು. ನನ್ನನ್ನು ಅಪ್ಪಿಕೊಂಡಳು. ಒಬ್ಬರನ್ನೊಬ್ಬರು ಅಪ್ಪಿಕೊಂಡು ಬಹಳ ಹೊತ್ತು ಅಳುತ್ತಿದ್ದೆವು. ಕಣ್ಣೀರು ಹರಿದುಹೋದಾಗ ನಮ್ಮ ಮನಸ್ಸಿನ ಭಾರ ಹಗುರವಾಯಿತು. ಇಬ್ಬರೂ ಅಳುತ್ತಲೇ ಇನ್ನೆಂದೂ ದೂರವಾಗಬಾರದೆಂದು ಶಪಥ ಮಾಡಿಕೊಂಡೆವು. ಮುಂದೆಯೂ ಸಹ ನಾವು ಒಟ್ಟಿಗೆ ವಿದ್ಯಾಭ್ಯಾಸ ಮಾಡಿದೆವು. ನನ್ನ ಮದುವೆ ಮುಂಬೈನಲ್ಲಿ ನಡೆದದ್ದರಿಂದ ನಾನು ಇಲ್ಲಿಗೆ ಬಂದೆ. ಅವಳ ಮದುವೆ ದೆಹಲಿಯ ವರನೊಂದಿಗೆ ನಡೆಯಿತು. ಮದುವೆಯ ನಂತರ ನಾವು ಗಂಟೆಗಟ್ಟಲೆ ಫೋನ್‌ನಲ್ಲಿ ಮಾತಾಡುತ್ತಿದ್ದೆವು. ನಂತರ ಮಕ್ಕಳು ಹುಟ್ಟಿದ ಮೇಲೆ ಇದು ಕಡಿಮೆಯಾಯಿತು.

ಬದುಕಿನಲ್ಲಿ ಎಷ್ಟೇ ವ್ಯಸ್ತರಾಗಿರಲಿ, ನಮ್ಮವರಿಗಾಗಿ ಕೊಂಚ ಸಮಯ ಮೀಸಲಿಡಬೇಕು ಎಂದು ನನಗೀಗ ಅನ್ನಿಸುತ್ತಿದೆ. ಒಮ್ಮೆ ನಾನು ರಾಧಾಳ ಗೆಳೆತನನ್ನು ಬಹುತೇಕ ಕಳೆದುಕೊಂಡುಬಿಟ್ಟಿದ್ದೆ. ಆ ತಪ್ಪು ಮತ್ತೆ ಮಾಡುವುದಿಲ್ಲ. ದೆಹಲಿಗೆ ಟ್ರ್ಯಾನ್ಸ್ ಫರ್ ಮಾಡಿಸಿಕೊಳ್ಳಲು ರಾಜೇಶ್‌ಗೆ ಹೇಳುತ್ತೇನೆ. ಅದು ಸಾಧ್ಯವಾಗದಿದ್ದರೆ ವರ್ಷದಲ್ಲಿ ಒಮ್ಮೆಯಂತೂ ನಾವು ಭೇಟಿಯಾಗಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ