ದೀಪಾವಳಿ ದಿನ ಬೆಳಗ್ಗೆಯೇ ಕಮಲಮ್ಮ ತಿಂಡಿ ಕೊಡುವಾಗ ತಮ್ಮ ಸೊಸೆಗೆ ದೀಪಾವಳಿಯ ವಿಶೇಷ ಉಡುಗೊರೆ ಕೊಡುವುದಾಗಿ ಹೇಳಿದಾಗ ಮಗ ಸೊಸೆ ಇಬ್ಬರಿಗೂ ಆಶ್ಚರ್ಯವಾಯಿತು. ಸೊಸೆ ವೀಣಾ ಸಂಕೋಚಪಡುತ್ತಾ, “ಬೇಡಮ್ಮಾ, ಗಿಫ್ಟ್ ಅಗತ್ಯ ಏನಿದೆ?” ಎಂದಳು.

“ಅಗತ್ಯ ಇದೆ ವೀಣಾ. ನಮ್ಮ ಕುಟುಂಬ ಹಾಗೂ ನಿನ್ನ ಖುಷಿಗಾಗಿ ನಾನೊಂದು ತೀರ್ಮಾನ ತೆಗೆದುಕೊಂಡಿದ್ದೇನೆ. ಇದನ್ನು ನೀನು ದೀಪಾವಳಿ ಗಿಫ್ಟ್ ಎಂದುಕೊಳ್ಳಬೇಕು. ಅಂದಹಾಗೆ, ನಿನಗೆ ಜಾಬ್‌ಗೆ ಹೋಗಲು ಪರ್ಮೀಶನ್‌ ಕೊಡುತ್ತಿದ್ದೇನೆ. ನೀನು ಕಳೆದ 2-3 ವರ್ಷಗಳಿಂದ ಹಲವು ಬಾರಿ ಕೇಳಿದ್ದೆ. ಹೋದ ತಿಂಗಳೂ ಕೇಳಿದ್ದೆ.

“ಆದರೆ ನಾನು ಹಳೆಯ ಆಲೋಚನೆಗಳ ಪ್ರಭಾವದಿಂದ ಹೊರಬಂದಿರಲಿಲ್ಲ. ಆದರೆ 7-8 ದಿನಗಳ ಹಿಂದೆ ಲಕ್ಷ್ಮೀ ಅಕ್ಕ ನನ್ನ ಕಣ್ಣು ತೆರೆಸಿದರು. ತಮ್ಮ ಸೊಸೆ ನೌಕರಿ ಜೊತೆ ಮನೆಯನ್ನೂ ಬಹಳ ಚೆನ್ನಾಗಿ ಸಂಭಾಳಿಸುತ್ತಿದ್ದಾಳೆ ಎಂದಳು. ಹೀಗಾಗಿ ನಿನ್ನ ಪಾಲಿನ ಸಂತೋಷ ನಿನಗೆ ಸಿಗಬೇಕು. ಈ ಸಂತೋಷದ ಸುದ್ದಿಯನ್ನು ದೀಪಾವಳಿಯಂದೇ ಕೊಡಬೇಕು ಎಂದು ನಿರ್ಧರಿಸಿದೆ,” ಎಂದರು.

ಇದನ್ನು ಕೇಳುತ್ತಲೇ ಸಂತೋಷದಿಂದ ಹಾಗೂ ಅತ್ತೆಯ ಬಗ್ಗೆ ಗೌರವದಿಂದ ವೀಣಾಳ ಮುಖ ಅರಳಿತು. ಅವಳು ಅತ್ತೆಯ ಕಾಲು ಮುಟ್ಟಿ ನಮಸ್ಕರಿಸಿದಳು. ಇದು ಅತ್ತೆ ಸೊಸೆಗೆ ಕೊಟ್ಟ ವಿಭಿನ್ನ ರೀತಿಯ ದೀಪಾವಳಿ ಗಿಫ್ಟ್. ಅವರು ತಮ್ಮ ಸಂಬಂಧಗಳನ್ನು ಪ್ರೀತಿ ಮತ್ತು ಆತ್ಮೀಯತೆಗಳಿಂದ ಹೆಚ್ಚು ಶೋಭಿಸುವಂತೆ ಮಾಡಿದರು. ನೀವು ದೀಪಾವಳಿಯಂದು ಎಂದೂ ಮಾಡಿರದಿದ್ದ ಕೆಲಸ ಮಾಡಿ. ನಿಮ್ಮವರಿಗೆ ಆ ಸಂತಸಗಳನ್ನು ನೀಡಿ. ಅವನ್ನು ಅವರೆಂದೂ ನಿರೀಕ್ಷಿಸಿರಬಾರದು. ನಂತರ ಅವರ ದೃಷ್ಟಿ ಹೇಗೆ ಬದಲಾಗುತ್ತದೆಂದು ನೋಡಿ.

ಸೊಸೆಗೆ ಮಮತೆಯ ನೆರಳು ನೀಡಿ

ದೀಪಾವಳಿಯಂದು ಸೊಸೆಯ ಮನೆಯವರಿಗೆ ಉಡುಗೊರೆ ಕಳಿಸಿ. ಮಾನಸಿಕವಾಗಿ ನಿಮ್ಮ ಸೊಸೆಯನ್ನು ಮಗಳೆಂದು ತಿಳಿಯಿರಿ. ಅವಳು ಎಷ್ಟು ಪರಿಶ್ರಮದಿಂದ ಮನೆಯ ಸ್ವಚ್ಛತೆ, ಅಲಂಕಾರಗಳಿಂದ ಹಿಡಿದು ಸಿಹಿ ತಿಂಡಿ ತಯಾರಿಸುವವರೆಗೆ ಕೆಲಸ ನಿಭಾಯಿಸುತ್ತಿದ್ದಾಳೆಂದು ಒಬ್ಬ ತಾಯಿಯ ದೃಷ್ಟಿಯಿಂದ ನೋಡಿ. ಮನಬಿಚ್ಚಿ ಅವಳನ್ನು ಹೊಗಳಿದರೆ ಅವಳೂ ನಿಮ್ಮನ್ನು ತಾಯಿಯಂತೆ ಕಾಣುತ್ತಾಳೆ. ಹೀಗೆ ದೀಪಾವಳಿಯಂದು ನಿಮ್ಮಿಬ್ಬರ ಮಧ್ಯೆ ಪ್ರೀತಿಯ ಸಂಬಂಧ ಶುರುವಾಗುತ್ತದೆ.

ಸೊಸೆಗೆ ದೀಪಾಳಿಯಂದು ಗಿಫ್ಟ್ ಕೊಡಲು ಮರೆಯಬೇಡಿ. ನೀವು ಅವಳಿಗೆ ಆಕರ್ಷಕ ಜ್ಯೂವೆಲರಿ, ಡ್ರೆಸ್‌ ಆ್ಯಕ್ಸೆಸರೀಸ್‌, ಪರ್ಸ್‌, ಮೊಬೈಲ್ ಇತ್ಯಾದಿ ಕೊಡಬಹುದು.

ಅಂದು ಸೊಸೆಗೆ ಇಷ್ಟವಾದ ಡ್ರೆಸ್‌ ಕೊಡಿ ಅಥವಾ ಅವಳು ತಂದುಕೊಟ್ಟ ಯಾವುದಾದರೂ ವಸ್ತ್ರವನ್ನು ಧರಿಸಿ. ತಾನು ತಂದುಕೊಟ್ಟ ವಸ್ತುವಿಗೆ ಅತ್ತೆ ಎಷ್ಟು ಮಹತ್ವ ಕೊಡುತ್ತಾರೆಂದು ಅವಳಿಗೂ ತಿಳಿಯುತ್ತದೆ.

ಸೊಸೆಯನ್ನು ಅವಳ ಮಕ್ಕಳ ಕೆಲಸಗಳಿಂದ ಮುಕ್ತಗೊಳಿಸಬಹುದು. ಅವಳಿಗೆ ನೂರಾರು ಕೆಲಸಗಳಿರುತ್ತವೆ. ದೀಪಾವಳಿಯ ಮರುದಿನ ಬೆಳಗ್ಗೆಯಿಂದಲೇ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಿ. ಅವಳಿಗೆ ಬೇರೆ ಕೆಲಸ ಮಾಡಿಕೊಳ್ಳಲು ಅವಕಾಶ ಕೊಡಿ. ಅದರಿಂದ ಅವಳಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ.

ಅಮ್ಮನಿಗೆ ಕೊಟ್ಟಂತೆ ಅತ್ತೆಗೂ ಪ್ರೀತಿ ಕೊಡಿ

ದೀಪಾವಳಿಯಂದು ಅತ್ತೆಯ ಜೊತೆ ವಿನಯದಿಂದ ನಡೆದುಕೊಳ್ಳಿ. ಅತ್ತೆ ಮಾಡಿದ ಅಡುಗೆ ಮತ್ತು ಇತರ ಕೆಲಸಗಳನ್ನು ಮನಸಾರೆ ಹೊಗಳಿ. ಇಬ್ಬರೂ ಸೇರಿ ಯಾವುದಾದರೂ ಕೆಲಸ ಮಾಡಿದರೆ ಪ್ರೀತಿಯೂ ಹೆಚ್ಚುತ್ತದೆ. ಮಾಡಿದ ಕೆಲಸ ಚೆನ್ನಾಗಿ ಆಗುತ್ತದೆ.

ಅತ್ತೆಗೆ ದೀಪಾವಳಿ ಗಿಫ್ಟ್ ಕೊಡಿ. ಸೀರೆ, ಜ್ಯೂವೆಲರಿ, ಶಾಲು, ಒಳ್ಳೆಯ ಪುಸ್ತಕ, ಹೊಸ ಫ್ರೇಮಿನ ಕನ್ನಡಕ, ಪೆನ್‌ ಅಥವಾ ಅವರಿಗಿಷ್ಟವಾದ ಯಾವುದಾದರೂ ಗಿಫ್ಟ್ ಕೊಡಬಹುದು. ಅಂದು ಅವರಿಗಿಷ್ಟವಾದ ತಿಂಡಿ ಮಾಡಿ ಕೊಡಿ.

ಅಂದು ಅತ್ತೆಗೆ ಖುಷಿಯಾಗುವಂತೆ ಮನೆಯ ಅಲಂಕಾರ ಮಾಡಿ. ಮನೆಯ ಮೂಲೆ ಮೂಲೆಯನ್ನೂ ಸ್ವಚ್ಛಗೊಳಿಸಿ. ಅವರ ಇಚ್ಛೆಯಂತೆ ಟ್ರೆಡಿಶನಲ್ ಲುಕ್‌ ಇರುವ ವಸ್ತುಗಳಿಂದ ಮನೆಯನ್ನು ಡೆಕೋರೇಟ್‌ ಮಾಡಿ.

ದೀಪಾವಳಿಯಂದು ಮನೆಯ ಅಲಂಕಾರವಾಗಲೀ, ಅಡುಗೆ ಮಾಡುವುದಾಗಲೀ ಶಾಪಿಂಗ್‌ ಬಗ್ಗೆಯಾಗಲೀ ಎಲ್ಲ ವಿಷಯದಲ್ಲೂ ಅತ್ತೆಯ ಬಳಿ ಕೊಂಚ ಸಲಹೆ ಅಗತ್ಯವಾಗಿ ಪಡೆಯಿರಿ. ನಂತರ ಅದರ ಪರಿಣಾಮ ನೋಡಿ.

ಅಂದು ಅತ್ತೆಯನ್ನು ಒತ್ತಾಯಿಸಿ ನಿಮ್ಮೊಂದಿಗೆ ಬ್ಯೂಟಿ ಪಾರ್ಲರ್‌ಗೆ ಕರೆದೊಯ್ಯಿರಿ ಮತ್ತು ಅವರಿಗೆ ಸಂಪೂರ್ಣ ಬ್ಯೂಟಿ ಟ್ರೀಟ್‌ಮೆಂಟ್ಸ್ ಕೊಡಿಸಿ. ಮುಖಕ್ಕೆ ಮಸಾಜ್‌ ಮಾಡಿಸಿ. ಲೇಟೆಸ್ಟ್ ಸ್ಟೈಲ್‌ನ ಇಯರ್‌ ರಿಂಗ್ಸ್, ಚೈನ್‌, ಬ್ಯಾಂಗಲ್ಸ್, ಸೀರೆ ಇತ್ಯಾದಿ ಕೊಡಿಸಿ.  ಅತ್ತೆ ನಿಮ್ಮ ಬಗ್ಗೆ  ಪ್ರೀತಿ ವ್ಯಕ್ತಪಡಿಸುತ್ತಾರೆ.

ಪತ್ನಿಗೆ ಪ್ರೀತಿಯ ಕಾಣಿಗೆ ನೀಡಿ

rishton-ko-karain-roshan

ದೀಪಾವಳಿಯಂದು ಬೆಳಗ್ಗೆಯೇ ಹೆಂಡತಿಗೆ `ಹ್ಯಾಪಿ ದೀಪಾವಳಿ’ ಎಂದು ಹೇಳಿ ಒಂದು ಸಿಹಿ ಮುತ್ತು ಪಡೆಯಲು ಮರೆಯದಿರಿ.

ಹೆಂಡತಿಗೆ ಸೀರೆ, ಪರ್ಫ್ಯೂಮ್, ಜ್ಯೂವೆಲರಿ, ಮ್ಯೂಸಿಕ್‌ ಸಿಸ್ಟಂ, ಮೊಬೈಲ್ ಅಥವಾ ಅವರಿಗಿಷ್ಟವಾದ ಯಾವುದಾದರೂ ಗಿಫ್ಟ್ ಕೊಟ್ಟು ನಿಮ್ಮ ಪ್ರೀತಿ ವ್ಯಕ್ತಪಡಿಸಿ. ಅಡುಗೆಮನೆಯಲ್ಲಿ ಉಪಯೋಗವಾಗುವಂತಹ ವಸ್ತುವನ್ನೂ ಉಡುಗೊರೆಯಾಗಿ ಕೊಡಬಹುದು. ಅಂದು ಮನೆಯ ಸ್ವಚ್ಛತೆಯ ಜೊತೆ ನಿಮ್ಮ ಸ್ವಚ್ಛತೆಯ ಬಗ್ಗೆಯೂ ಗಮನಿಸಿ. ಕಿವಿ, ಕಂಕುಳು, ಮೂಗು ಇತ್ಯಾದಿಗಳ ಕೂದಲನ್ನು ಸ್ವಚ್ಛಗೊಳಿಸಿ. ಶೇವ್ ‌ಮಾಡಿಕೊಂಡು ಒಳ್ಳೆಯ ಡಿಯೋ ಹಚ್ಚಿಕೊಂಡು ನಿಮ್ಮನ್ನು ತಾಜಾ ಮಾಡಿಕೊಳ್ಳಿ.

ಹೆಂಡತಿಯ ಮನೆಯವರಿಗೆ ಫೋನ್‌ ಮಾಡಿ ಹಬ್ಬಕ್ಕೆ ಶುಭಾಶಯ ಕೋರಿ.

ದೀಪಾವಳಿಯ ಅಡುಗೆ ತಯಾರಿಸಲು ಹೆಂಡತಿಗೆ ಸಹಾಯ ಮಾಡಿ. ಅತಿಥಿಗಳು ಹೊರಟ ನಂತರ ತಟ್ಟೆ ಲೋಟಾಗಳನ್ನು ಸಿಂಕ್‌ನಲ್ಲಿ ಇಡಿ. ಮನೆಯ ಸ್ವಟ್ಠತೆಯಲ್ಲಿ ಹೆಂಡತಿಗೆ ಸಹಾಯ ಮಾಡಿ.

ಮನೆಗೆ ಓವನ್‌, ಫ್ರಿಜ್‌, ಮಿಕ್ಸಿ, ಬೆಡ್‌, ಲ್ಯಾಪ್‌ ಟಾಪ್‌, ಟಿವಿ, ಅಲ್ಮೇರಾ ಇತ್ಯಾದಿ ಹೊಸ ವಸ್ತ್ರಗಳನ್ನು ತರುವುದಿದ್ದರೆ ದೀಪಾವಳಿಯಂದೇ ತನ್ನಿ. ಆ ದೀಪಾವಳಿ ಸ್ಪೆಷಲ್ ಆಗಿರುತ್ತದೆ.

ಗಂಡನಿಗೆ ಸರ್‌ಪ್ರೈಜ್‌ ಕೊಡಿ

ಬೆಳಗ್ಗೆ ಬೇಗನೇ ಸ್ನಾನ ಮಾಡಿ ಗಂಡನಿಗೆ ಇಷ್ಟವಾದ ಸೀರೆ ಧರಿಸಿ ಕೂದಲಿಗೆ ವಿಶೇಷ ಸ್ಟೈಲ್ ಕೊಡಿ. ಮೊದಲಿಗಿಂತ ನಿಮ್ಮಲ್ಲಿ ಸಾಫ್ಟ್ ನೆಸ್‌ ತಂದುಕೊಳ್ಳಿ. ಇಡೀ ದಿನ ಪ್ರೀತಿಯ ಬೆಳಕು ತುಂಬಿರುತ್ತದೆ. ಒಂದು ವೇಳೆ ನೀವು ಅತ್ತೆಯ ಮನೆಯಿಂದ ದೂರವಿದ್ದು, ಪತಿಯ ಜೊತೆಗಿದ್ದರೆ ಅತ್ತೆಯ ಮನೆಯವರಿಗೆ ಹಬ್ಬಕ್ಕೆ ಬರಲು ಆಹ್ವಾನಿಸಿ. ಅವರಿಗೆ ಫೋನ್‌ ಮಾಡಿ ದೀಪಾವಳಿಯ ಶುಭಕಾಮನೆಗಳನ್ನು ನೀಡಿ.

ಅಂದು ಪತಿಯ ಡ್ರೆಸ್‌ ಸೆನ್ಸ್. ಸ್ಮಾರ್ಟ್‌ನೆಸ್‌, ಕೇರಿಂಗ್‌ ನೇಚರ್‌ಇತ್ಯಾದಿಗಳನ್ನು ಮನಬಿಚ್ಚಿ ಹೊಗಳಿ.

ನಿಮ್ಮ ಕೋಣೆಯನ್ನು ಬಣ್ಣಬಣ್ಣದ ಸುಗಂಧಿತ ಕ್ಯಾಂಡಲ್ ಗಳಿಂದ ಅಲಂಕರಿಸಿ. ಕೋಣೆಯ ಜೊತೆ ಜೊತೆಗೆ ನಿಮ್ಮಿಬ್ಬರ ಮನದಲ್ಲಿ ಬೆಳಕು ಹಾಗೂ ಸುವಾಸನೆ ಹರಡುತ್ತದೆ.

ಗಂಡನಿಗೆ ಶರ್ಟ್‌, ಪೆನ್‌, ಗಡಿಯಾರ, ಮೊಬೈಲ್‌, ರಿಂಗ್‌, ಚೈನ್‌, ಡಿಯೋ ಇತ್ಯಾದಿ ಯಾವುದಾದರೂ ಗಿಫ್ಟ್ ಕೊಡಿ.

ಮನೆಯಲ್ಲಿ ದೀಪಾವಳಿ ಪಾರ್ಟಿ ಕೊಡಿ. ನಿಮ್ಮ ಮನೆಯವರೊಂದಿಗೆ ಗಂಡನ ಮನೆಯವರು ಮತ್ತು ಸ್ನೇಹಿತರನ್ನೂ ಕರೆಯಿರಿ. ಅವರು ಮುಕ್ತವಾಗಿ ಎಂಜಾಯ್‌ ಮಾಡುವಂತಿರಬೇಕು. ಸಂಜೆಗೆ ಬಿಡುವು ಮಾಡಿಕೊಂಡು ಗಂಡನೊಂದಿಗೆ ಸುತ್ತಾಡಲು ಹೋಗಿ.           – ಸುಧಾ ಪ್ರಮೋದ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ