ಶಾಹೀ ಟಿಕ್ಕಿ

ಸಾಮಗ್ರಿ : 250 ಗ್ರಾಂ ಛೇನಾ (ಹಾಲು ಒಡೆದು ಬೇರ್ಪಡಿಸಿದ ಗಟ್ಟಿ ಅಂಶ), 4 ಚಮಚ ರವೆ, 150 ಗ್ರಾಂ ಪುಡಿಸಕ್ಕರೆ, ಕರಿಯಲು ರೀಫೈಂಡ್‌ ಎಣ್ಣೆ, ಒಂದಿಷ್ಟು ನೈಲಾನ್‌ ಎಳ್ಳು.

ವಿಧಾನ : ಚೆನ್ನಾಗಿ ಮಸೆದ ಛೇನಾಗೆ ಹುರಿದ ರವೆ, ಮೈದಾ ಸೇರಿಸಿ. ಇದನ್ನು ಇನ್ನಷ್ಟು ಮಸೆಯುತ್ತಾ, ಸಕ್ಕರೆ ಹಾಕಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದರಿಂದ ಸಣ್ಣ ಉಂಡೆಗಳನ್ನು ಮಾಡಿ. ವಿಳ್ಳೇದೆಲೆ ಮೇಲೆ ತುಪ್ಪ ಸವರಿಕೊಂಡು, ಅದರ ಮೇಲೆ  ಉಂಡೆ ಇರಿಸಿ ವಡೆ ತರಹ ತಟ್ಟಿಕೊಂಡು, ಎಳ್ಳಿನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಆರಿದ ನಂತರ ಏರ್‌ ಟೈಟ್‌ ಡಬ್ಬದಲ್ಲಿ ತುಂಬಿಸಿಟ್ಟು, ಬೇಕಾದಾಗ ಸವಿಯಿರಿ.

cookry-2

ಸೋಯಾ ಮಸಾಲೆ ವಡೆ

ಸಾಮಗ್ರಿ : 1 ಕಪ್‌ ಸೋಯಾಬೀಜ, ಬೇಯಿಸಿ ಮಸೆದ 4 ಆಲೂ, ಅರ್ಧ ಕಪ್‌ ರವೆ, ಒಂದಿಷ್ಟು ತೆಂಗಿನ ತುರಿ, ಹೆಚ್ಚಿದ ಹಸಿಮೆಣಸಿನಕಾಯಿ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಖಾರ ಗರಂಮಸಾಲ, ಚಾಟ್‌ ಮಸಾಲ, ಇಂಗು, ಕರಿಯಲು ಎಣ್ಣೆ.

ವಿಧಾನ : ಸೋಯಾಬೀಜವನ್ನು 2 ತಾಸು ನೀರಲ್ಲಿ ನೆನೆಹಾಕಿ. ನಂತರ ಮಿಕ್ಸಿಗೆ ನೆನೆದ ಸೋಯಾ ಮೆಣಸಿನಕಾಯಿ, ಉಪ್ಪು ಖಾರ, ಮಸಾಲೆ, ಇಂಗು ಸೇರಿಸಿ (ಕನಿಷ್ಠ ನೀರು ಬಳಸಿ) ತರಿತರಿಯಾಗಿ ರುಬ್ಬಿಕೊಳ್ಳಿ. ಒಂದು ಬೇಸನ್ನಿಗೆ ಈ ರುಬ್ಬಿದ ಮಿಶ್ರಣ, ಮಸೆದ ಆಲೂಗಡ್ಡೆ, ಹುರಿದ ರವೆ, ತೆಂಗಿನ ತುರಿ, ಕೊ.ಸೊಪ್ಪು ಇತ್ಯಾದಿ ಎಲ್ಲಾ ಬೆರೆಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಇದರಿಂದ ವಡೆ ತರಹ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿ ಕಾಫಿ ಚಹಾ ಜೊತೆ ಸವಿಯಲು ಕೊಡಿ.

ಕಾರ್ನ್‌ ರೋಲ್ಸ್

cookry-4

ಸಾಮಗ್ರಿ : 1 ಕಪ್‌ ಮೃದು ಅನ್ನ, 1 ಕಪ್‌ ಬೆಂದ ಕಾರ್ನ್‌, 1 ಕಪ್‌ ಹೆಚ್ಚಿ ಬೇಯಿಸಿದ ಪಾಲಕ್‌ ಸೊಪ್ಪು, 3-4 ಚಮಚ ಮೈದಾ, ಹೆಚ್ಚಿದ 5-6 ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ಶುಂಠಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಅಮ್ಚೂರ್‌ಪುಡಿ, ಗರಂಮಸಾಲ, ಕರಿಯಲು ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗಳನ್ನೂ ನೀರು ಚಿಮುಕಿಸಿ ಒಟ್ಟಾಗಿ ಕಲಸಿಕೊಳ್ಳಬೇಕು ಇದು ಪಕೋಡ ಹಿಟ್ಟಿನ ಹದಕ್ಕಿರಲಿ. ಮೈದಾಗೆ ಚಿಟಕಿ ಉಪ್ಪು, ನೀರು, ಖಾರ ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಈ ಮಿಶ್ರಣದಿಂದ ಚಿತ್ರದಲ್ಲಿರುವಂತೆ ಉದ್ದುದ್ದಕ್ಕೆ ಉಂಡೆ ಹಿಡಿದು, ಮೈದಾ ಮಿಶ್ರಣದಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಬೇಕು. ಬಿಸಿ ಇರುವಾಗಲೇ ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.

ಕಡಲೆಹಿಟ್ಟಿನ ಕಡುಬು

cookry-3

ಸಾಮಗ್ರಿ : 200 ಗ್ರಾಂ ಕಡಲೆಹಿಟ್ಟು, 500 ಗ್ರಾಂ ಮೈದಾ, 250 ಗ್ರಾಂ ಪುಡಿಸಕ್ಕರೆ, 2-3 ಚಮಚ ಗಸಗಸೆ, 1 ಗಿಟಕು ಕೊಬ್ಬರಿ ತುರಿ, ತುಸು ಹಾಲು, ಏಲಕ್ಕಿಪುಡಿ, ಪಚ್ಚ ಕರ್ಪೂರ, ಕರಿಯಲು ಎಣ್ಣೆ. ಒಂದಿಷ್ಟು ಗೋಡಂಬಿ, ದ್ರಾಕ್ಷಿ, ತುಪ್ಪ.

ವಿಧಾನ : ಮೊದಲು ಮೈದಾಗೆ ಚಿಟಕಿ ಉಪ್ಪು, ಅರಿಶಿನ ಹಾಕಿ ತುಸು ನೀರು ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಆಮೇಲೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆಯಿರಿ. ನಂತರ ಇನ್ನಷ್ಟು ತುಪ್ಪ ಬಿಸಿ ಮಾಡಿ ಅದರಲ್ಲಿ ಮಂದ ಉರಿಯಲ್ಲಿ ಕಡಲೆಹಿಟ್ಟು ಹುರಿಯಬೇಕು.

ಕೆಳಗಿಳಿಸಿ ತುಸು ಆರಿದ ನಂತರ ಇದಕ್ಕೆ ಪುಡಿಸಕ್ಕರೆ, ಗಸಗಸೆ, ಕೊಬ್ಬರಿ ಹಾಗೂ ಉಳಿದ ಸಾಮಗ್ರಿ ಬೆರೆಸಿ. ಇದಕ್ಕೆ ಕಾದಾರಿದ ಹಾಲು ಬೆರೆಸಿ ಹೂರಣ ಸಿದ್ಧಪಡಿಸಿ. ಅನಂತರ ಕಣಕದಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ, ಅದನ್ನು ಕಡುಬಿನ ಅಚ್ಚಿನಲ್ಲಿರಿಸಿ, 2-3 ಚಮಚ ಹೂರಣ ತುಂಬಿಸಿ, ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಿ. ಬಾಣಲೆಯಲ್ಲಿ ಎಣ್ಣೆ ಕಾದ ನಂತರ ಇವನ್ನು ಅದರಲ್ಲಿ ಹೊಂಬಣ್ಣ ಬರುವಂತೆ ಕರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಕ್ಯಾರೆಟ್‌ ರೋಲ್ಸ್

cookry-5

ಸಾಮಗ್ರಿ : 400 ಗ್ರಾಂ ತುರಿದ ಕ್ಯಾರೆಟ್‌, 2 ಕಪ್‌ ಕಡಲೆಹಿಟ್ಟು, ಬೇಯಿಸಿ ಮಸೆದ 2 ಆಲೂಗಡ್ಡೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಇಂಗು, ಅರ್ಧ ಚಮಚ ಓಮ, 2-2 ಚಿಟಕಿ ಅಡುಗೆ ಸೋಡ, ಅರಿಶಿನ, ಕರಿಯಲು ಎಣ್ಣೆ, ಒಗ್ಗರಣೆ ಸಾಮಗ್ರಿ.

ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಕರಿಬೇವಿನ ಜೊತೆ ಒಗ್ಗರಣೆ ಕೊಡಿ. ಇದಕ್ಕೆ ಕ್ಯಾರೆಟ್‌ ತುರಿ ಹಾಕಿ ಬಾಡಿಸಬೇಕು. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೆದಕಿ ಕೆಳಗಿಳಿಸಿ. ಇದಕ್ಕೆ ಮಸೆದ ಆಲೂ ಬೆರೆಸಿ ಚೆನ್ನಾಗಿ ಮಿಶ್ರಗೊಳಿಸಿ. ಅನಂತರ ಕಡಲೆಹಿಟ್ಟು, ತುಸು ನೀರು ಬೆರೆಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಎಣ್ಣೆ ಕಾದ ಮೇಲೆ ಇದರಿಂದ ಪಕೋಡ ಕರಿದು, ಬಿಸಿ ಇರುವಾಗಲೇ ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಶ್ಯಾವಿಗೆ ಕಡುಬು

cookry-6 (1)

ಸಾಮಗ್ರಿ : 1 ಕಪ್‌ ತುಂಡರಿಸಿದ ಶ್ಯಾವಿಗೆ, 2 ಕಪ್‌ ಪುಡಿಸಕ್ಕರೆ, 500 ಗ್ರಾಂ ಮೈದಾ, ಒಂದಿಷ್ಟು ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ  ಚೂರು, ತುಸು ಏಲಕ್ಕಿಪುಡಿ, ಪಚ್ಚ ಕರ್ಪೂರ, ಅಗತ್ಯವಿದ್ದಷ್ಟು ರೀಫೈಂಡ್‌ ಎಣ್ಣೆ, ತುಪ್ಪ, ಕೊಬ್ಬರಿ ತುರಿ.

ವಿಧಾನ : ಮೊದಲು ಮೈದಾಗೆ ಚಿಟಕಿ ಉಪ್ಪು, ಅರಿಶಿನ ಹಾಕಿ, ನೀರು ಬೆರೆಸಿ ಮೃದು ಹಿಟ್ಟು ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಹುರಿದು ತೆಗೆಯಿರಿ. ಅದಕ್ಕೆ ಇನ್ನಷ್ಟು ತುಪ್ಪ ಹಾಕಿ ಅದರಲ್ಲಿ ಶ್ಯಾವಿಗೆ ಹುರಿಯಿರಿ. ಇದಕ್ಕೆ ಪುಡಿಸಕ್ಕರೆ ಬೆರೆಸಿ ಮಂದ ಉರಿಯಲ್ಲಿ ಬೇಗ ಬೇಗ ಕೈಯಾಡಿಸಿ.

ಕೊನೆಯಲ್ಲಿ ಕೊಬ್ಬರಿ ತುರಿ ಸೇರಿಸಿ ಕೆದಕಿ ಕೆಳಗಿಳಿಸಿ. ಇಳಿಸಿದ ನಂತರ ಇದಕ್ಕೆ ಏಲಕ್ಕಿ, ಪಚ್ಚ ಕರ್ಪೂರ ಸೇರಿಸಿ. ಇದೀಗ ಹೂರಣ ರೆಡಿ. ಎಂದಿನಂತೆ ನಾದಿದ ಕಣಕ ಲಟ್ಟಿಸಿ, ಕಡುಬು ಅಚ್ಚಿನ ಮೇಲೆ ಹರಡಿ, 2-3 ಚಮಚ ಹೂರಣ ತುಂಬಿಸಿ, ಎಲ್ಲಾ ಕಡುಬುಗಳನ್ನೂ ಸಿದ್ಧಪಡಿಸಿಕೊಳ್ಳಿ. ಎಣ್ಣೆ ಕಾದ ನಂತರ ಅದರಲ್ಲಿ ಇವನ್ನು ಹೊಂಬಣ್ಣ ಬರುವಂತೆ ಕರಿದು, ಅಲಂಕರಿಸಿ, ಅತಿಥಿಗಳಿಗೆ ಸವಿಯಲು ಕೊಡಿ.

ಗರಿಮುರಿ ಸುರುಳಿ

cookry-7 (1)

ಸಾಮಗ್ರಿ : 2 ಕಪ್‌ ಮೈದಾ, 1 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ರವೆ, ಒಂದಿಷ್ಟು ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಗರಂಮಸಾಲ, ಎಳ್ಳು, ಕರಿಯಲು ಎಣ್ಣೆ.

ವಿಧಾನ : ಮೊದಲು ಮಿಕ್ಸಿಯಲ್ಲಿ ಶುಂಠಿ, ಬೆಳ್ಳುಳ್ಳಿ ರುಬ್ಬಿಕೊಂಡು ಒಂದು ಬೇಸನ್ನಿಗೆ ಹಾಕಿಡಿ. ಅದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ, ಮೃದು ಹಿಟ್ಟು ಕಲಸಿಡಿ. ತುಪ್ಪ ಬೆರೆಸಿ ನಾದಿಕೊಂಡು 1-2 ತಾಸು ನೆನೆಯಲು ಬಿಡಿ. ನಂತರ ಸಣ್ಣ ಉಂಡೆಗಳಾಗಿಸಿ, ದಪ್ಪ ಚಪಾತಿಗಳಾಗಿ ಲಟ್ಟಿಸಿ. ಉದ್ದಕ್ಕೆ ಪಟ್ಟಿಗಳನ್ನು ಕತ್ತರಿಸಿ, ಅದರ ಮೇಲೆ ಪೋರ್ಕ್‌ನ್ನು ಒತ್ತಿ. ನಂತರ ಪಟ್ಟಿಗಳಿಂದ ಸುರುಳಿ ತಯಾರಿಸಿ, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ.

ಕಾರ್ನ್‌ ಮೀಲ್ ‌ಓಟ್ಸ್ ಇಡ್ಲಿ

cookry-8

ಸಾಮಗ್ರಿ : 1-1 ಕಪ್‌ ಓಟ್ಸ್ ಕಾರ್ನ್‌ ಮೀಲ್ ‌(ರೆಡಿಮೇಡ್‌ ಲಭ್ಯ), 1-1 ಕ್ಯಾಪ್ಸಿಕಂ, ಕ್ಯಾರೆಟ್‌, ಈರುಳ್ಳಿ, ಟೊಮೇಟೊ, ಅಗತ್ಯವಿದ್ದಷ್ಟು ಎಣ್ಣೆ, ಒಗ್ಗರಣೆ ಸಾಮಗ್ರಿ, ಕರಿಬೇವು, ಒಂದಿಷ್ಟು ಹೆಚ್ಚಿದ ಶುಂಠಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಮೊಸರು, 2 ಚಿಟಕಿ ಅರಿಶಿನ.

ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಹಸಿಮೆಣಸು, ಶುಂಠಿ ಹಾಕಿ ಕೆದಕಬೇಕು. ಆಮೇಲೆ ಒಂದೊಂದಾಗಿ ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್‌, ಟೊಮೇಟೊ ಹಾಕಿ ಬಾಡಿಸಿ. ಇದಕ್ಕೆ ಉಪ್ಪು, ಖಾರ, ಅರಿಶಿನ ಹಾಕಿದ ನಂತರ ಓಟ್ಸ್ ಕಾರ್ನ್‌ ಮೀಲ್ ಅರ್ಧ ಲೋಟ ನೀರು ಬೆರೆಸಿ ಚೆನ್ನಾಗಿ ಬೇಯಿಸಿ ಕೆಳಗಿಳಿಸಿ. ಆರಿದ ನಂತರ ಇದಕ್ಕೆ ಮೊಸರು ಬೆರೆಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಡಿ. 1 ತಾಸಿನ ನಂತರ ಇದರಿಂದ ಬಿಸಿ ಬಿಸಿ ಇಡ್ಲಿ ತಯಾರಿಸಿ, ಕಾಯಿ ಚಟ್ನಿ ಜೊತೆ ಸವಿಯಲು ಕೊಡಿ. ಓಟ್ಸ್ ಕಾರ್ನ್‌ ಮೀಲ್ ‌ಬೆರೆತ ಈ ಪೌಷ್ಟಿಕ ಇಡ್ಲಿ ಬೆಳೆಯುವ ಮಕ್ಕಳಿಗೆ ಹೆಚ್ಚು ಲಾಭಕಾರಿ.

ಹೆಸರುಬೇಳೆ ಬಾದೂಷಾ

cookry-9

ಸಾಮಗ್ರಿ : 250 ಗ್ರಾಂ ಹೆಸರು ಬೇಳೆ, 500 ಗ್ರಾಂ ಸಕ್ಕರೆ, ತುಸು ಏಲಕ್ಕಿಪುಡಿ, ಗುಲಾಬಿಜಲ, ಅಗತ್ಯವಿದ್ದಷ್ಟು ಕೊಬ್ಬರಿ ತುರಿ, ತುಪ್ಪ, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : 4-5 ತಾಸು ನೆನೆಸಿದ ಹೆಸರುಬೇಳೆಯನ್ನು ನುಣ್ಣಗೆ ತಿರುವಿಕೊಳ್ಳಿ. ಕೊನೆ ಸುತ್ತಿಗೆ ಏಲಕ್ಕಿಪುಡಿ, ಗುಲಾಬಿಜಲ ಸಹ ಬೆರೆಸಿರಬೇಕು, ನೀರು ಕನಿಷ್ಠ ಪ್ರಮಾಣದಲ್ಲಿರಲಿ. ಇದಕ್ಕೆ ಅರ್ಧ ಕಪ್‌ ಕೊಬ್ಬರಿ ತುರಿ ಸೇರಿಸಿ. ಸಕ್ಕರೆಯಿಂದ ಒಂದೆಳೆಯ ಗಟ್ಟಿ ಪಾಕ ತಯಾರಿಸಿ, ಅದಕ್ಕೂ ಏಲಕ್ಕಿ, ಗುಲಾಬಿ ಜಲ ಬೆರೆಸಿರಬೇಕು. ನಂತರ ಒಲೆ ಮೇಲೆ ತುಪ್ಪ ಬೆರೆತ ರೀಫೈಂಡ್‌ ಎಣ್ಣೆ ಬಿಸಿ ಮಾಡಿ. ಇದರಲ್ಲಿ ಹೆಸರುಬೇಳೆ ಮಿಶ್ರಣವನ್ನು ಚಪ್ಪಟೆಯಾಗಿ ಬಾದೂಷಾ ತರಹ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಹೊರತೆಗೆದು ಬಟರ್‌ ಪೇಪರ್‌ ಮೇಲೆ ಹರಡಿಕೊಂಡು, ಆರಿದ ನಂತರ ಪಾಕಕ್ಕೆ ಹಾಕಿಡಿ. ಹೀಗೆ ಇಡೀ ರಾತ್ರಿ ನೆನೆಯಲಿ. ಮಾರನೇ ಬೆಳಗ್ಗೆ ಇವನ್ನು ಬಟ್ಟಲುಗಳಿಗೆ ತುಂಬಿಸಿ, ಮೇಲೆ ಕೊಬ್ಬರಿ ಉದುರಿಸಿ ಸವಿಯಲು ಕೊಡಿ.

ಸ್ವಾದಿಷ್ಟ ಆಪ್ಪಂ

cookry-10

 

ಸಾಮಗ್ರಿ : 2 ಕಪ್‌ ಅಕ್ಕಿ, 3 ಕಪ್‌ ಪುಡಿ ಮಾಡಿದ ಉಂಡೆ ಬೆಲ್ಲ, 100 ಗ್ರಾಂ ಮಸೆದ ಖೋವಾ, ತುಸು ಏಲಕ್ಕಿ ಪುಡಿ, ಬಿಳಿ ಎಳ್ಳು, 1 ಗಿಟುಕು ತೆಂಗಿನ ತುರಿ, ಕರಿಯಲು ಎಣ್ಣೆ, ತುಪ್ಪದಲ್ಲಿ ಹುರಿದ ತುಸು ಗೋಡಂಬಿ, ದ್ರಾಕ್ಷಿ.

ವಿಧಾನ : 3-4 ತಾಸು ನೆನೆಹಾಕಿದ ಅಕ್ಕಿಯನ್ನು ಕಾಯಿತುರಿ, ಬೆಲ್ಲ, ಏಲಕ್ಕಿ ಜೊತೆ ನುಣ್ಣಗೆ ರುಬ್ಬಿಕೊಳ್ಳಿ. ಕನಿಷ್ಠ ನೀರು ಬಳಸಿರಬೇಕು. ಇದಕ್ಕೆ ಮಸೆದ ಸಿಹಿ ಖೋವಾ ಬೆರೆಸಿ. ಇದರಿಂದ ಸಣ್ಣ ಉಂಡೆಗಳನ್ನು ಮಾಡಿ, ಗುಂಡಗೆ ಅಥವಾ ಉದ್ದಕ್ಕೆ ಆಕಾರ ಕೊಡಿ. ಇದರ ಮಧ್ಯೆ 1-1 ಗೋಡಂಬಿ, ದ್ರಾಕ್ಷಿ ಸಿಗಿಸಿಡಿ. ಈ ಆಪ್ಪಂಗಳನ್ನು ಎಳ್ಳಿನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಇರುವಾಗ ಸವಿದರೆ ಚೆಂದ.

ಸ್ಪೆಷಲ್ ಸ್ಯಾಂಡ್‌ವಿಚ್‌

cookry-11

ಸಾಮಗ್ರಿ : ಅರ್ಧ ಪೌಂಡ್‌ ಸ್ಪೆಷಲ್ ಸಿಹಿ ಬ್ರೆಡ್‌, 1 ಕಪ್‌ ಗಟ್ಟಿ ಮೊಸರು, ಒಂದಿಷ್ಟು ತೆಂಗಿನ ತುರಿ, 2 ಚಿಟಕಿ ಉಪ್ಪು, ಮೆಣಸು, ತುಸು ತುಪ್ಪ.

ವಿಧಾನ : ಚೆನ್ನಾಗಿ ಕಡೆದ ಮೊಸರಿಗೆ ಉಪ್ಪು, ಮೆಣಸು, ತೆಂಗಿನ ತುರಿ ಬೆರೆಸಿ ಗೊಟಾಯಿಸಿ. ಇದು ಆದಷ್ಟೂ ಗಟ್ಟಿಯಾಗಿರಬೇಕು, ನೀರಾಗಬಾರದು. ಬ್ರೆಡ್‌ ತುಂಡುಗಳನ್ನು ಬೆಣ್ಣೆಯಿಂದ ಸವರಿಕೊಂಡು, ಅದರ ಮೇಲೆ ಈ ಮಿಶ್ರಣ ಹರಡಿರಿ ಒಲೆಯ ಮೇಲೆ ಕಾವಲಿ ಕಾಯಿಸಿ, ತುಪ್ಪ ಸರಬೇಕು. ಖಾಲಿ ಇರುವ ಬ್ರೆಡ್‌ ಬದಿಯಿಂದ ಅವನ್ನು ಬಿಸಿ ಮಾಡಿ. ನಂತರ ಮೊಸರು ಬಳಿದ ಭಾಗದ ಮೇಲೆ ಇನ್ನೊಂದು ಇರಿಸಿ, ಸ್ಯಾಂಡ್‌ವಿಚ್‌ ಮಾಡಿ, ಮತ್ತೆ ಬಿಸಿ ಮಾಡಿ ತೆಗೆಯಿರಿ. ಅದರ ಮೇಲೆ ಚಿತ್ರದಲ್ಲಿರುವಂತೆ ಮೊಸರು, ಕೊ.ಸೊಪ್ಪಿನ ಚಟ್ನಿಯಿಂದ ಅಲಂಕರಿಸಿ ಸವಿಯಲು ಕೊಡಿ.

ಡ್ರೈಫ್ರೂಟ್‌ ಶ್ರೀಖಂಡ

cookry-12

ಸಾಮಗ್ರಿ : 1 ಲೀ.ಗಟ್ಟಿ ಸಿಹಿ ಮೊಸರು, 750 ಗ್ರಾಂ ಪುಡಿಸಕ್ಕರೆ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ 1 ಕಪ್‌), ಒಂದಿಷ್ಟು ಹಾಲಲ್ಲಿ ನೆನೆದ ಕೇಸರಿ, ಏಲಕ್ಕಿಪುಡಿ.

ವಿಧಾನ : ಮೊಸರನ್ನು ಮಲ್ ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿಟ್ಟು, ಇಡೀ ರಾತ್ರಿ ಒಂದು ಎತ್ತರದ ಸ್ಥಾನದಲ್ಲಿ ನೇತುಹಾಕಿ. ಮಾರನೇ ಬೆಳಗ್ಗೆ ಅದರ ತೇವಾಂಶವೆಲ್ಲ ಸೋರಿಹೋಗುವಂತೆ ಮಾಡಿ, ಗಟ್ಟಿ ಅಂಶವನ್ನು ಬೇರೆಯಾಗಿ ತೆಗೆದಿಡಿ. ಇದಕ್ಕೆ ಪುಡಿಸಕ್ಕರೆ ಬೆರೆಸಿ ಚೆನ್ನಾಗಿ ಗೊಟಾಯಿಸಿ 1-2 ತಾಸು ಹಾಗೇ ಬಿಡಿ. ಈಗ ಇದು ಗಟ್ಟಿ ಜಿಡ್ಡು ಪದಾರ್ಥ ಆಗಿರುತ್ತದೆ. ಆಮೇಲೆ ಇದಕ್ಕೆ ಏಲಕ್ಕಿಪುಡಿ, ಕೇಸರಿ, ದ್ರಾಕ್ಷಿ, ಗೋಡಂಬಿ ಇತ್ಯಾದಿ ಬೆರೆಸಿಕೊಳ್ಳಿ. 1-2 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ