ಕೈಲಾಶ್ ಸತ್ಯಾರ್ಥಿಯವರ `ಬಾಲ್ಯ ಉಳಿಸಿ ಆಂದೋಲನ’ದ ಕುರಿತಂತೆ ಒಂದಿಷ್ಟು ವಿವರ….`
ಬಚ್‌ಪನ್ ಬಚಾವೋ ಆಂದೋಲನ’ದ (ಬಾಲ್ಯ ಉಳಿಸಿ ಆಂದೋಲನ) ಮೂಲಕ ಚಿರಪರಿಚಿತರಾದ ಕೈಲಾಶ್ ಸತ್ಯಾರ್ಥಿ ಅವರಿಗೆ ನೊಬೆಲ್ ಪುರಸ್ಕಾರ ಹುಡುಕಿಕೊಂಡು ಬಂದಿರುವುದು ಈಗ ಅವರು ಈ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ಅಗತ್ಯವಿದೆ.
ಕೇವಲ ಕೆಲವು ಉದ್ಯಮಗಳಿಂದ ಬಾಲಕಾರ್ಮಿಕರನ್ನು ನಿವಾರಿಸಿದರೆ ಸಾಲದು, ಸಮಾಜದ ಪ್ರತಿಯೊಂದು ನಿಟ್ಟಿನಲ್ಲೂ ಈ ಸಮಸ್ಯೆ ಇದೆ. ಅದನ್ನು ನಿವಾರಿಸಲು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ.
ಕೆಲವು ಉದ್ಯಮಗಳಲ್ಲಿ ಬಾಲಕಾರ್ಮಿಕರನ್ನು ಅತಿ ಹೆಚ್ಚು ಬಳಸಿಕೊಳ್ಳಲಾಗುತ್ತಿತ್ತು. `ಬಾಲ್ಯ ಉಳಿಸಿ’ ಆಂದೋಲನದಿಂದಾಗಿ ಈ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ ಎಂಬುದು ಸತ್ಯ ಸಂಗತಿ.
ಬಾಲಕಾರ್ಮಿಕ ಪದ್ಧತಿಯನ್ನು ಸಮಾಜದಿಂದ ತೊಲಗಿಸಬೇಕೆಂದರೆ, ಇಡೀ ಸಮಾಜದ ವಿಕಾಸದ ಬಗ್ಗೆ ಗಮನ ಕೊಡಬೇಕು.
ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರಲು ಒಮ್ಮೊಮ್ಮೆ ಕುಟುಂಬದ ಅವಶ್ಯಕತೆಯೂ ಕಾರಣವಾಗುತ್ತದೆ. ತಂದೆ ತಾಯಿ ಮಕ್ಕಳನ್ನು ಶಾಲೆಗೆ ಕಳಿಸುವ ಬದಲು ಕೆಲಸಕ್ಕೆ ಕಳಿಸಲು ಇಷ್ಟಪಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಬಡತನ ಹಾಗೂ ಅಜ್ಞಾನ.
ನೊಬೆಲ್ ಪುರಸ್ಕಾರ ದೊರೆತಿರುವುದರಿಂದ `ಬಚ್‌ಪನ್ ಬಚಾವೋ’ ಆಂದೋಲನಕ್ಕೆ ವಿಶ್ವಮಟ್ಟದ ಮಾನ್ಯತೆ ದೊರಕಿದೆ. ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲಗೊಳಿಸಲು ಸರ್ಕಾರ ಹಾಗೂ ಸಮಾಜದ ಜೊತೆ ಜೊತೆಗೆ ಮಕ್ಕಳ ತಂದೆತಾಯಿಗಳು ಕೂಡ ಕಾರ್ಯಪ್ರವೃತ್ತರಾಗಬೇಕು.
ಬಾಲಕಾರ್ಮಿಕ ಪದ್ಧತಿ ಒಂದು ರೀತಿಯ ಸಾಮಾಜಿಕ ಅನಿಷ್ಟ. ಇದರಿಂದ ಕೇವಲ ಮಗುವಿಗಷ್ಟೇ ಅಲ್ಲ, ದೇಶದ ವಿಕಾಸದ ಮೇಲೂ ಗಂಭೀರ ಪರಿಣಾಮ ಉಂಟಾಗುತ್ತದೆ.
ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾವು ಧಾರ್ಮಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವ ಮಕ್ಕಳ ಬಗ್ಗೆ ಗಮನವನ್ನೇ ಕೊಡುವುದಿಲ್ಲ. ಅಲ್ಲಿ ಕೆಲವೊಮ್ಮೆ ಮಕ್ಕಳು ವಿವಿಧ ವೇಷಧಾರಣೆ ಮಾಡಿ ದೇವಿದೇವತೆಯರಂತೆ ಕಾಣುವ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಾರೆ.
ಬಾಲಕಾರ್ಮಿಕ ಪದ್ಧತಿಯನ್ನು ನಿವಾರಣೆ ಮಾಡುವ ನೆಪದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಕಾರ್ಖಾನೆ ಹಾಗೂ ಇತರೆ ಕೆಲವು ಘಟಕಗಳಲ್ಲಿನ ಮಾಲೀಕರಿಂದ ಸಾಕಷ್ಟು ಹಣ ಸುಲಿಗೆ ಮಾಡುತ್ತಾರೆ. ಭಿಕ್ಷೆ ಬೇಡುವ ಮಕ್ಕಳನ್ನು ಸರಿದಾರಿಯಲ್ಲಿ ತರುವ ಪ್ರಯತ್ನವನ್ನು ಅಧಿಕಾರಿಗಳು ಮಾಡುವುದೇ ಇಲ್ಲ. ಬಾಲಕಾರ್ಮಿಕರು ಹಾಗೂ ಜೀತ ಪದ್ಧತಿಯನ್ನು ನಿವಾರಿಸಲು ಪ್ರಯತ್ನಶೀಲರಾಗಿರುವ ಕೈಲಾಶ್ ಸತ್ಯಾರ್ಥಿ ಅವರಿಗೆ ನೊಬೆಲ್ ಪುರಸ್ಕಾರ ದೊರೆತ ಬಳಿಕ ಈ ಸಮಸ್ಯೆಯನ್ನು ನಿವಾರಿಸುವ ಸವಲು ಇಮ್ಮಡಿಗೊಂಡಿದೆ.
ಆಂದೋಲನದ ಆರಂಭ
ಕೈಲಾಶ್ ಸತ್ಯಾರ್ಥಿ ಮಧ್ಯಪ್ರದೇಶದ ವಿದಿಶಾದವರು. ಪ್ರಸ್ತುತ ಅವರ ವಾಸ ದೆಹಲಿಯಲ್ಲಿ. ಅವರ ಕುಟುಂಬದ ಇತರೆ ಸದಸ್ಯರು ಈಗಲೂ ವಿದಿಶಾದಲ್ಲೇ ವಾಸಿಸುತ್ತಿದ್ದಾರೆ.
ವಿದಿಶಾದಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿದ ಅವರು, ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
ಸತ್ಯಾರ್ಥಿ ಅವರು ಶಾಲಾ ದಿನಗಳಲ್ಲಿಯೇ ಬಾಲಕಾರ್ಮಿಕ ಪದ್ಧತಿಯನ್ನು ಅತ್ಯಂತ ಹತ್ತಿರದಿಂದ ಕಂಡಿದ್ದರು. ಶಾಲೆಯಲ್ಲಿ ಓದುತ್ತಿದ್ದಾಗ ಒಂದು ಸಲ ಒಬ್ಬ ಪುಟ್ಟ ಹುಡುಗ ಬೂಟ್ ಪಾಲಿಶ್ ಮಾಡುವುದನ್ನು ಕಂಡಿದ್ದರು. ಈ ಕುರಿತಂತೆ. ಅವರು ತಮ್ಮ ಕ್ಲಾಸ್ ಟೀಚರ್ ಜೊತೆ ಚರ್ಚಿಸಿದ್ದರು. ಅದು ಅವರ ಕೆಲಸ ಎಂದು ಶಿಕ್ಷಕರು ಅಸಡ್ಡೆಯಿಂದ ಉತ್ತರ ನೀಡಿದ್ದರು. ಬಳಿಕ ಆ ಹುಡುಗನನ್ನು ಮಾತನಾಡಿಸಿದಾಗ ಅವನೂ ಕೂಡ ಶಿಕ್ಷಕರು ಹೇಳಿದಂತೆ ಉತ್ತರ ಕೊಟ್ಟ. ಆಗಿನಿಂದಲೇ ಕೈಲಾಶ್ ಅವರು ಮಕ್ಕಳನ್ನು ಓದಿನತ್ತ ಗಮನಹರಿಸುವ ಆಂದೋಲನಕ್ಕೆ ನಾಂದಿ ಹಾಡಿದರು. ಪುಸ್ತಕಗಳನ್ನು ಸಂಗ್ರಹಿಸಿ ಬಡ ಮಕ್ಕಳಿಗೆ ವಿತರಿಸುತ್ತಿದ್ದರು.
ಒಂದು ಸಲ ಕಾಲೇಜಿನಲ್ಲಿ ನೌಕರಿ ಮಾಡುತ್ತಿದ್ದಾಗ, ಅಲ್ಲಿನ ಆಡಳಿತ ಮಂಡಳಿ ಜೊತೆ ಜಗಳವಾಗಿ ಅವರು ಆ ಕಾಲೇಜು ಬಿಟ್ಟು ದೆಹಲಿಗೆ ಹೊರಟು ಹೋದರು. ಅಲ್ಲಿ ಅವರು ಆರ್ಯ ಸಮಾಜದ ವಿಚಾರಧಾರೆಯ ಪತ್ರಿಕೆಯಲ್ಲಿ ಕೆಲಸ ಮಾಡತೊಡಗಿದರು. ಅಲ್ಲಿಯೇ ಅವರಿಗೆ ಆರ್ಯ ಸಮಾಜದ ಮುಖಂಡ ಸ್ವಾಮಿ ಅಗ್ನಿವೇಶ್ ಅವರ ಭೇಟಿಯಾಯಿತು. ಅವರೊಂದಿಗೆ ಸೇರಿ ಜೀತ ಮುಕ್ತಿ ಆಂದೋಲನದಲ್ಲಿ ಪಾಲ್ಗೊಂಡರು.ಕೈಲಾಶ್ ಅವರು ಕೇವಲ ಜೀತ ಮುಕ್ತಿ ಆಂದೋಲನದಲ್ಲಷ್ಟೇ ಅಲ್ಲ ಕೋಮುವಾದ, ಜಾತಿವಾದ, ಸತಿಪದ್ಧತಿ, ಬಾಲ್ಯ ವಿವಾಹದ ವಿರುದ್ಧ ಅನೇಕ ಹೋರಾಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
1994ರಲ್ಲಿ ಸ್ವಾಮಿ ಅಗ್ನಿವೇಶ್‌ರಿಂದ ಪ್ರತ್ಯೇಕಗೊಂಡ ಬಳಿಕ ಅವರು ಬಾಲಕಾರ್ಮಿಕರ ಸಮಸ್ಯೆಯನ್ನೇ ಪ್ರಮುಖವಾಗಿಟ್ಟುಕೊಂಡು `ಬಚ್‌ಪನ್ ಬಚಾವೋ’ ಆಂದೋಲನ ಆರಂಭ ಮಾಡಿದರು.
ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಉದ್ಯೋಗಗಳಲ್ಲಿ ಬಾಲಕಾರ್ಮಿಕರನ್ನು ತೊಡಗಿಸಿಕೊಳ್ಳುವುದು ನಿರಂತರವಾಗಿ ನಡೆದೇ ಇತ್ತು. ಅದರಲ್ಲೂ ವಿಶೇಷವಾಗಿ ಹೋಟೆಲ್, ಗ್ಯಾರೇಜ್, ಕಾರ್ಪೆಟ್ ಉದ್ಯಮ, ಬ್ಯಾಗ್ ನಿರ್ಮಾಣ ಘಟಕಗಳು, ಗಾಜು ಉದ್ಯಮ, ಪಟಾಕಿ ನಿರ್ಮಾಣ ಘಟಕಗಳು, ಇಟ್ಟಿಗೆ, ಕಡ್ಲೆ ಪುರಿ ಭಟ್ಟಿ, ಸರ್ಕಸ್‌ಗಳಲ್ಲಿ ಕೆಲಸ ಮಾಡುತ್ತಿದ್ದರು.
ಇಂತಹ ಉದ್ಯಮ ಘಟಕಗಳಿಂದ ಮಕ್ಕಳನ್ನು ಸ್ವತಂತ್ರಗೊಳಿಸಲು ಅವರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಆದರೆ ಅವುಗಳಿಗೆ ಜಗ್ಗದೆ ಕೈಲಾಶ್ ಅವರು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದರು. ಈವರೆಗೆ ಅವರು ಬಾಲಕಾರ್ಮಿಕ ಹಾಗೂ ಜೀತ ಪದ್ಧತಿಯಿಂದ 80,000ಕ್ಕೂ ಹೆಚ್ಚು ಮಕ್ಕಳನ್ನು ಮುಕ್ತಗೊಳಿಸಿದ್ದಾರೆ. ಮಕ್ಕಳನ್ನು ಮಾನವ ಕಳ್ಳ ಸಾಗಾಣಿಕೆದಾರರಿಂದ ರಕ್ಷಿಸಲು ನೇಪಾಳಕ್ಕೆ ಹತ್ತಿರದ ಗ್ರಾಮಗಳನ್ನು ಕೈಲಾಶ್ ಅವರು `ಬಾಲಮಿತ್ರ ಗ್ರಾಮ’ಗಳಾಗಿ ರೂಪಿಸಿದರು. ನೇಪಾಳ ಸೀಮೆಗೆ ಅಂಟಿಕೊಂಡು ಗ್ರಾಮಗಳಲ್ಲಿ ಅತಿ ಹೆಚ್ಚು ಮಕ್ಕಳು ಕಳ್ಳಸಾಗಾಣಿಕೆದಾರರ ಬಲೆಗೆ ಸಿಲುಕುತಿದ್ದರು. ಅವರನ್ನು ಕೂಲಿಕಾರರನ್ನಾಗಿ ಅಷ್ಟೇ ಅಲ್ಲ, ಲೈಂಗಿಕ ತೃಷೆ ತೀರಿಸಿಕೊಳ್ಳಲು ಕೂಡ ಬಳಸಿಕೊಳ್ಳಲಾಗುತ್ತಿತ್ತು. `ಬಾಲಮಿತ್ರ’ ಗ್ರಾಮಗಳನ್ನು ರೂಪಿಸಿದ್ದರಿಂದಾಗಿ ಇಂತಹ ಕೃತ್ಯಗಳನ್ನು ನಿಲ್ಲಿಸಲು ಸಾಕಷ್ಟು ಸಹಾಯವಾಯಿತು.
`ಬಾಲ್ಯ ಉಳಿಸಿ’ ಆಂದೋಲನದ ಮುಖಾಂತರ ತಾವು ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟಿದೆ ಎಂದು ಕೈಲಾಶ್ ಸತ್ಯಾರ್ಥಿ ಹೇಳುತ್ತಾರೆ. ನೊಬೆಲ್ ಪುರಸ್ಕಾರ ದೊರೆತಿರುವುದರಿಂದ ಜಗತ್ತಿನಾದ್ಯಂತದ ಸುಮಾರು 17 ಕೋಟಿ ಮಕ್ಕಳ ಮುಕ್ತಿಗಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ಹೇಳುತ್ತಾರೆ.
ಅತ್ಯಂತ ಕಿರಿಯ ವಯಸ್ಸಿನ ನೊಬೆಲ್ ವಿಜೇತೆ ಮಾಲಾಲ ಭಾರತದ ಕೈಲಾಶ್ ಸತ್ಯಾರ್ಥಿ ಅವರ ಜೊತೆಗೆ ಪಾಕಿಸ್ತಾನದ ಮಾಲಾಲ ಯೂಸುಫ್ ಝೈ ಅವರಿಗೂ ನೊಬೆಲ್ ಶಾಂತಿ ಪುರಸ್ಕಾರ ಬಂದಿದೆ.
ಜುಲೈ 12, 1997ರಲ್ಲಿ ಪಾಕಿಸ್ತಾನದ ಸ್ವಾತ್ ಕಣಿವೆಯ ಮಿಂಗೋರಾದಲ್ಲಿ ಜನಿಸಿದ ಮಾಲಾಲ, 11ನೇ ವಯಸ್ಸಿನಿಂದಲೇ ಬಿಬಿಸಿ ಉರ್ದು ಸೇವೆಗಾಗಿ ಡೈರಿ ಬರೆಯಲು ಆರಂಭಿಸಿದ್ದರು.
ಕಲಿಕೆ ಹಾಗೂ ಜಾಗರೂಕತೆಯ ವಿರೋಧದಲ್ಲಿ ಅಕ್ಟೋಬರ್ 9, 2012ರಂದು ಉಗ್ರರು ಮಾಲಾಲ ಮೇಲೆ ಗುಂಡು ಹಾರಿಸಿದರು. ಚಿಕಿತ್ಸೆಗಾಗಿ ಆಕೆಯನ್ನು ಲಂಡನ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಆಕೆಯ ಜೀವರಕ್ಷಣೆ ಮಾಡಲಾಯಿತು.
ಆ ಬಳಿಕ ಆಕೆ ಉಗ್ರರ ವಿರುದ್ಧ ತನ್ನ ಹೋರಾಟ ಮುಂದುವರಿಸಿದಳು. ಅಕ್ಟೋಬರ್ 9, 2013ರಂದು ಆಕೆಯ ಪುಸ್ತಕ `ಐ ಆ್ಯಮ್ ಮಲಾಲ’ ಹೊರಬಂತು. ಅದು ಹಲವು ಭಾಷೆಗಳಲ್ಲಿ ಭಾಷಾಂತರಗೊಂಡಿತು. ಮಲಾಲ ಜನ್ಮದಿನ ಜುಲೈ 12ನ್ನು ವಿಶ್ವಸಂಸ್ಥೆ `ಮಲಾಲ ಡೇ’ ಎಂದು ಆಚರಿಸಲು ಕರೆ ನೀಡಿತು.
ಬರ್ಮಿಂಗ್ ಹ್ಯಾಮ್ ನ ಎಜ್‌ಬೆಟನ್ ಹೈಸ್ಕೂಲಿನಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಮಲಾಲ 4 ದಶಕೋಟಿ ಡಾಲರ್‌ಗಳಷ್ಟು ನಿಧಿ ಸಂಗ್ರಹಿಸಿ ಬಾಲಕಿಯರಿಗೆ ಶಿಕ್ಷಣ ನೀಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಮಲಾಲಗೆ ಈವರೆಗೆ ಅನೇಕ ಪ್ರಶಸ್ತಿಗಳು ಬಂದಿವೆ. ನೊಬೆಲ್ ಶಾಂತಿ ಪಾರಿತೋಷಕ ಬಂದ ನಂತರ ಅವರಿಗೆ ಹೊಸ ಹೆಗ್ಗುರುತು ದೊರೆತಿದೆ. ವಿಶ್ವಮಟ್ಟದಲ್ಲಿ ಮಲಾಲ ಹೆಸರನ್ನು ಭಯೋತ್ಪಾದನೆ ಹಾಗೂ ಧರ್ಮಾಂಧರ ವಿರುದ್ಧ ಹೋರಾಡುವ ಹುಡುಗಿ ಎಂಬ ಹೆಸರಿನಲ್ಲಿ ಪ್ರಸ್ತಾಪಿಸಲಾಗುತ್ತದೆ.
ಮಲಾಲ ತನ್ನ ಹೆಸರಿನ ಅರ್ಥದ ವಿರುದ್ಧ ಇದ್ದಂತಿದ್ದಾರೆ. ಮಲಾಲ ಎಂದರೆ ಸದಾ ಶೋಕದಲ್ಲಿ ಮುಳುಗಿರುವವಳು ಎಂದರ್ಥ. ಈಗ ಅವರು ಜಗತ್ತಿನಲ್ಲೆಲ್ಲ ಚಿರಪರಿಚಿತ ವ್ಯಕ್ತಿಯಾಗಿಬಿಟ್ಟಿದ್ದಾರೆ. ಮಲಾಲಾಗೆ ನೊಬೆಲ್ ಶಾಂತಿ ಪುರಸ್ಕಾರ ಬಂದಿರುವುದರಿಂದ ತಾಲಿಬಾನಿಗಳಿಗೆ ಮತ್ತಷ್ಟು ರೋಷ ಉಂಟಾಗಿದೆ. ಅದು ತಮ್ಮ ಸೋಲು ಎಂಬಂತೆ ಅವರಿಗೆ ಅನಿಸತೊಡಗಿದೆ.
ಸತ್ಯಾರ್ಥಿ ಅವರಿಗಿಂತ ಮುಂಚೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು ನೊಬೆಲ್ ಪಾರಿತೋಷಕ ಪಡೆದವರಲ್ಲಿ ಕೈಲಾಶ್‌ಸತ್ಯಾರ್ಥಿ 9ನೇಯವರು. ಈ ಮುಂಚೆ ಸಾಹಿತ್ಯದ ನೊಬೆಲ್ ರವೀಂದ್ರನಾಥ್ ಟ್ಯಾಗೋರ್ ಮತ್ತು ವಿಎಸ್ ನೈಪಾಲ್ ಅವರಿಗೆ, ವೈದ್ಯಕೀಯ ನೊಬೆಲ್ ಹರಗೋವಿಂದ ಖುರಾನಾ, ನೊಬೆಲ್ ಶಾಂತಿ ಪುರಸ್ಕಾರ ಮದರ್ ತೆರೇಸಾ ಅವರಿಗೆ, ಭೌತಶಾಸ್ತ್ರದ ನೊಬೆಲ್ ಸಿ.ವಿ. ರಾಮನ್ ಹಾಗೂ ಎಸ್. ಚಂದ್ರಶೇಖರ್, ರಸಾಯನ ಶಾಸ್ತ್ರದ ನೊಬೆಲ್ ವೆಂಕಟರಾಮನ್ ರಾಮಕೃಷ್ಣನ್ ಮತ್ತು ಅರ್ಥಶಾಸ್ತ್ರದ ನೊಬೆಲ್ ಪುರಸ್ಕಾರ ಅಮಾರ್ಥ್ಯ ಸೇನ್ ಅವರಿಗೆ ದೊರೆತಿದೆ. ಆರ್.ಕೆ. ಪಚೌರಿ ಅಧ್ಯಕ್ಷತೆಯ ಜಲವಾಯು ಪರಿರ್ತನೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಐಪಿಸಿಸಿಗೆ 2007ರ ಶಾಂತಿ ನೊಬೆಲ್ ಪ್ರಶಸ್ತಿ ಬಂದಿದೆ.
ರವೀಂದ್ರ ನಾಥ್ ಟ್ಯಾಗೋರ್ (1913) ಸಿ.ವಿ. ರಾಮನ್ (1930) ಹರಗೋವಿಂದ್ ಖುರಾನಾ (1968) ಮದರ್ ತೆರೇಸಾ (1979) ಸುಬ್ರಹ್ಮಣ್ಯಂ ಚಂದ್ರಶೇಖರ್ (1983) ಅಮಾರ್ಥ್ಯ ಸೇನ್ (1998) ರಾಜೇಂದ್ರ ಪಚೌರಿ (2007) ವೆಂಕಟರಾಮನ್ ರಾಮಕೃಷ್ಣನ್ (2009)