ಮೋಹನ್‌ ಪಾರ್ಟಿ ಮುಗಿಸಿಕೊಂಡು ತಡವಾಗಿ ಮನೆ ತಲುಪಿದ. ಮಾರನೇ ದಿನ ಅವನ ಸಹೋದ್ಯೋಗಿ ರಾಬರ್ಟ್‌ ಅದೇ ವಿಚಾರವಾಗಿ ಅವನನ್ನು ಪ್ರಶ್ನಿಸಿದ. ಅದಕ್ಕೆ ಉತ್ತರಿಸಿದ ಮೋಹನ್‌, “ಇಲ್ಲ…ಇಲ್ಲ…. ಅಂಥ ವಿಶೇಷ ಏನಿಲ್ಲ. ಮೇಲಿನ 2 ಹಲ್ಲು ಮೊನ್ನೇನೇ ಗಾಡಿಯಿಂದ ಬಿದ್ದಾಗ ಬಿದ್ದುಬಿಟ್ಟಿತ್ತು ಬಿಡು,” ಎನ್ನುವುದೇ?

ಪ್ರಕಾಶ್‌ ಒಂದು ಹೊಸ ಕಾರ್‌ ಖರೀದಿಸಿದ. ಹೆಂಡತಿಗೆ ಆ ವಿಚಾರವನ್ನು ಒಂದು ಸರ್‌ಪ್ರೈಸ್‌ ಆಗಿ ಹೇಳೋಣ ಎಂದು ನಿರ್ಧರಿಸಿದ. ಹೀಗಾಗಿ ಮನೆಗೆ ಬಂದೊಡನೆ ಹೆಂಡತಿಗೆ ಕೂಗಿ ಹೇಳಿದ, “ಡಾರ್ಲಿಂಗ್‌, ನಿನ್ನ ಹಲವು ವರ್ಷಗಳ ಕನಸು ನನಸಾಗಿದೆ… ಬೇಗ ಬಂದು ನೋಡು…..”

ಅಡುಗೆಮನೆಯಿಂದ ಓಡಿಬಂದ ಅವನ ಹೆಂಡತಿ ಸೆರಗಿಗೆ ಕೈ ಒರೆಸಿಕೊಳ್ಳುತ್ತಾ ಹಾಗೇ ಕೇಳಿದಳು, “ಅಯ್ಯೋ ಪಾಪ…. ಏನ್ರಿ ಆಯ್ತು ನಿಮ್ಮಮ್ಮನಿಗೆ…?”

ಪುಢಾರಿ ಪುಟ್ಟಸ್ವಾಮಿಯ ಹೆಂಡತಿ ಕೈಗೆ ಹೊಸ ಕ್ಯಾಮೆರಾ ಬಂದೊಡನೆ ಗಂಡನ ಫೋಟೋ ತೆಗೆದದ್ದೂ ತೆಗೆದದ್ದೇ!

“ಇದೇನೇ ನಿನ್ನ ಹೊಸ ಅವತಾರ?” ಎಂದು ಅವನು ವಿಚಾರಿಸಿದ.

“ಏನಿಲ್ಲ ರೀ, ಇವತ್ತು `ಅನಿಮಲ್ ಪ್ಲ್ಯಾನೆಟ್‌’ ಚಾನೆಲ್‌ನಲ್ಲಿ ವೈಲ್ಡ್ ಲೈಫ್‌ ಫೋಟೋಗ್ರಫಿಗಾಗಿ ಸ್ಪರ್ಧೆ ಏರ್ಪಡಿಸಿದ್ದಾರೆ. ನಿಮ್ಮದೂ ಒಂದಿಷ್ಟು ಫೋಟೋ ಕಳುಹಿಸೋಣ ಅಂತ….” ಎಂದು ಆಕೆ ಹೇಳುವುದೇ?

ಪತಿ : ನಮಗೆ ಮದುವೆಯಾಗಿ 2 ವರ್ಷಗಳಾಯ್ತು. ಆದರೂ ಗಾಯದ ಮೇಲೆ ಉಪ್ಪೆರಚುವ ನಿಮ್ಮಪ್ಪನ ಸ್ವಭಾವ ಇನ್ನೂ ಬದಲಾಗಿಲ್ಲ ನೋಡು.

ಪತ್ನಿ : ಅದ್ಯಾಕ್ರೀ? ಅವರೇನು ಹೇಳಿದರು?

ಪತಿ : `ಅಳಿಯಂದ್ರೆ, ನನ್ನ ಮಗಳ ಜೊತೆ ನಿಮ್ಮ ಜೀವನ ಸುಖವಾಗಿ ನಡೆಯುತ್ತಿದೆ ತಾನೇ,’ ಅನ್ನುವುದೇ?

ಹೊಸದಾಗಿ ಮದುವೆಯಾದ ರಾಜು-ಗೀತಾ ತಮ್ಮ ಏರಿಯಾಗೆ ಹೊಸದಾಗಿ ಬಂದಿದ್ದ ಒಂದು ಪಾಶ್‌ ಹೋಟೆಲ್‌ಗೆ ಹೋದರು. ಇವರ ಆರ್ಡರ್‌ ಪ್ರಕಾರ ಮಾಣಿ ಊಟ ತಂದಿಟ್ಟ.

ರಾಜು : ಊಟದ ಒಂದೊಂದು ಐಟಂ ಕೂಡ ಬಲು ಬೊಂಬಾಟಾಗಿ ಇರುವಂತಿದೆ. ನೋಡಿದರೇನೇ ಹಸಿವು ಜಾಸ್ತಿ ಆಗ್ತಿದೆ. ಬೇಗ ಬೇಗ ಊಟ ಶುರು ಮಾಡೋಣ….

ಗೀತಾ : ಅದಿರಲಿ, ಮನೆಯಲ್ಲಿ ಊಟ ಶುರು ಮಾಡುವ ಮೊದಲು ಪ್ರಾರ್ಥನೆ ಮಾಡ್ತಿದ್ರಲ್ಲ, ಇಲ್ಲೇಕೆ ಹಾಗೇ ಶುರು ಮಾಡಿಬಿಟ್ರಿ?

ರಾಜು : ಮನೆಯಲ್ಲಿ ನಿನ್ನ ಕೈ ನಳಪಾಕ… ಇಲ್ಲಾದರೆ ನುರಿತ ಶೆಫ್‌ಗಳ ಕೈಚಳಕ ಅಲ್ಲವೇ?

ಪತಿ : ನಮ್ಮ ಮದುವೆಯ 10ನೇ ವಾರ್ಷಿಕೋತ್ಸವಕ್ಕೆ ನಾನು ನಿನ್ನನ್ನು ಅಂಡಮಾನ್‌ ನಿಕೋಬಾರ್‌ ದ್ವೀಪಕ್ಕೆ ಕರೆದೊಯ್ಯುತ್ತೀನಿ.

ಪತ್ನಿ : ಹೌದೇ? ಹೌ ನೈಸ್‌! ಮತ್ತೆ 25ನೇ ವಾರ್ಷಿಕೋತ್ಸವಕ್ಕೆ?

ಪತಿ : ಅಲ್ಲಿಗೆ ಬಂದು ವಾಪಸ್‌ ಕರೆದುಕೊಂಡು ಬರ್ತೀನಿ.

ಗಂಡ : ನಾನು ಹೊಸ ಬಟ್ಟೆ ಹಾಕಿಕೊಂಡು ಸಂತೆಗೆ ಹೋದಾಗೆಲ್ಲ ಬೇಕೆಂದೇ ತರಕಾರಿ ಬೆಲೆ ದುಬಾರಿ ಹೇಳುತ್ತಾರೆ. ಅದೇ ಹಳೇ ಬಟ್ಟೆ ಹಾಕಿಕೊಂಡು ಹೋದಾಗ ತರಕಾರಿ ಅಗ್ಗವಾಗಿ ಸಿಗುತ್ತದೆ. ಹೀಗೇಕೆ?

ಹೆಂಡತಿ : ಒಂದು ಕೆಲಸ ಮಾಡಿ, ಮುಂದಿನ ಸಲ ಚಿಂದಿಬಟ್ಟೆ ಹಾಕಿಕೊಂಡು ಕೈಯಲ್ಲಿ ಒಂದು ಅಲ್ಯುಮಿನಿಯಂ ತಟ್ಟೆ ಹಿಡಿದುಕೊಂಡು ಹೋಗಿ, ತರಕಾರಿ ಫ್ರೀಯಾಗಿ ಸಿಗಬಹುದು.

ಟೋನಿ : ಒಂದು ಪ್ರಶ್ನೆಗೆ ಉತ್ತರ ಹೇಳು ನೋಡೋಣ. ಮನೆಯಲ್ಲಿನ ಹೆಂಡತಿಗೂ ಆಕಾಶದ ಸೂರ್ಯನಿಗೂ ಏನಿದೆ ಸಾಮ್ಯತೆ?

ಮೋನಿ : ಇದೆಂಥ ಪ್ರಶ್ನೆ…. ಅಕಾಶದಲ್ಲಿ ಇರುವುದಕ್ಕೂ ಭೂಮಿಯಲ್ಲಿರುವವರಿಗೂ ಹೋಲಿಸಿ ಹೇಳಲಾದೀತೇ?

ಟೋನಿ : ಹೌದು, ಬೇಗ ಯೋಚಿಸಿ ಹೇಳು.

ಮೋನಿ : ಏನೂ ಹೊಳೆಯುತ್ತಿಲ್ಲ, ನೀನೇ ಹೇಳಿಬಿಡು.

ಟೋನಿ : ಇಬ್ಬರನ್ನು ನೇರವಾಗಿ ದಿಟ್ಟಿಸಿ ನೋಡಲಾಗದು!

ಹೆಂಡತಿ : ನೋಡ್ರಿ, ನೀವು ನನ್ನೊಂದಿಗೆ ಶಾಪಿಂಗ್‌ಗೆ ಹೊರಡದಿದ್ದರೆ ನಾನು ಖಂಡಿತಾ ಎಲ್ಲಿಗೂ ಆಚೆ ಹೋಗೋದೇ ಇಲ್ಲ.

ಗಂಡ : ಅಂದ್ರೆ ನನ್ನೊಂದಿಗೆ ಹೊರಗಿನ ಶಾಪಿಂಗ್‌ಗೆ ಹೊರಡುವುದೆಂದರೆ ನಿನಗೆ ಅಷ್ಟು ಇಷ್ಟ. ನಾನಿಲ್ಲದೆ ಎಲ್ಲೂ ಹೋಗೋದೇ ಬೇಡ ಅನ್ಸುತ್ತೆ ಅಲ್ವಾ?

ಹೆಂಡತಿ : ಅಯ್ಯೋ…. ಅದೇನಿಲ್ಲ ಬಿಡಿ. ಶಾಪಿಂಗ್‌ ಮುಗಿದ ಮೇಲೆ ಬಿಲ್ ‌ಚುಕ್ತಾ ಮಾಡಿ, ಅದನ್ನೆಲ್ಲ ಹೊತ್ತುಕೊಂಡು ಬರಲು ಜೊತೆಗೊಬ್ಬರು ಬೇಕು ತಾನೇ?

ಪತಿ : ಒಂದು ನೆನಪಿಟ್ಕೊ… ಅಕಸ್ಮಾತ್‌ ನಾನೇನಾದ್ರೂ ಸತ್ತುಹೋದರೆ ನನ್ನಂಥ ಗಂಡ ನಿನಗೆ ಮತ್ತೆ ಖಂಡಿತಾ ಸಿಗೋದಿಲ್ಲ.

ಪತ್ನಿ : ಮತ್ತೆ ನಾನು ನಿಮ್ಮಂಥವನನ್ನೇ ಹುಡುಕಿ ಕೊಳ್ತೀನಿ ಅಂತ ನಿಮಗ್ಯಾರು ಹೇಳಿದರು?

ಗಂಡ : ಇದೇನು…. ಒಂದೇ ಸಮನೆ ಎಲೆ ಅಡಕೆ ಹಾಕಿಕೊಂಡು ಜಗಿಯುತ್ತಿದ್ದಿ…?

ಹೆಂಡತಿ : ನಿಮ್ಮ ಕಡೆ ನೆಂಟರು ಬರ್ತಾರಂತೆ… ಏನಾದರೂ ಕ್ಯಾತೆ ತೆಗೆದರೆ ಸಹಾಯಕ್ಕಿರಲಿ ಅಂತ.

ಗಂಡ : ಆಹಾ…. ನಾನು ಸಂಜೆ ಮನೆಗೆ ಬರುವ ಈ ಸಮಯದಲ್ಲಿ ಅದು ಹೇಗೆ ಮನೆ ಇಷ್ಟು ಶುಭ್ರವಾಗಿದೆ? ಬಹುಶಃ ವಾಟ್ಸ್ಅಪ್‌ನ ಸರ್ವರ್ ಡೌನ್‌ ಆಗಿರಬೇಕಲ್ಲವೇ?

ಹೆಂಡತಿ : ಹಾಗೇನಿಲ್ಲ ಬಿಡಿ.

ಗಂಡ : ಮತ್ತೆ……

ಹೆಂಡತಿ : ನನ್ನ ಮೊಬೈಲ್ ಫೋನ್‌ನಲ್ಲಿ ಪೂರ್ತಿ ಚಾರ್ಜ್‌ ಹೋಗಿಬಿಟ್ಟಿದೆ. ಮತ್ತೆ ಮನೆಯಲ್ಲಿ ಎಲ್ಲಿ ಹುಡುಕಿದರೂ ಚಾರ್ಜರ್ ಸಿಗುತ್ತಿಲ್ಲ. ಹೀಗಾಗಿ ಎಳೆದಾಡಿದ ಎಲ್ಲಾ ವಸ್ತುಗಳನ್ನೂ ಆಯಾ ಜಾಗದಲ್ಲಿ ಸರಿಯಾಗಿ ಜೋಡಿಸಿದ್ದಾಯ್ತು.

ಸುರೇಶ್‌ : ಇತ್ತೀಚೆಗೆ ನನ್ನ ಹೆಂಡತಿ ತನ್ನ ಮೊಬೈಲ್‌ನಿಂದ ನನ್ನ ಫೋಟೋ ಕ್ಲಿಕ್‌ ಮಾಡಿದಾಗೆಲ್ಲ ನನಗೆ ಬಹಳ ಭಯ ಆಗುತ್ತೆ.

ಮಹೇಶ್‌ : ಅದೇಕೆ…. ಏನು ವಿಷಯ?

ಸುರೇಶ್‌ : ನಿನಗೆ ಗೊತ್ತಿಲ್ಲವೇ….? ಇತ್ತೀಚೆಗೆ ಓಎಲ್ಎಕ್ಸ್ ಮತ್ತು ಕ್ವಿಕರ್‌ ಜಾಹೀರಾತು ಭರ್ಜರಿಯಾಗಿ ಬರ್ತಿವೆ…

ಜಯಾ : ನನ್ನ ಗಂಡ ಪಾರ್ಟಿ ನೆಪದಲ್ಲಿ ತಡವಾಗಿ ಮನೆಗೆ ಬಂದಾಗೆಲ್ಲ, ಅವರ ಶರ್ಟ್‌ ಮೇಲೆ ಅಲ್ಲಲ್ಲಿ ಕೆಂಪು ಕಲೆಗಳಾಗಿರುತ್ತವೆ. ಅದರ ಬಗ್ಗೆ ವಿಚಾರಿಸಿದರೆ ಏನೋ ಟೊಮೇಟೊ ಕಲೆ ಬಿಡು ಅಂತಾರೆ, ಏನು ಮಾಡಲಿ?

ವಿಜಯಾ : ಹೇಗಾದರೂ ಆ ಟೊಮೇಟೊ ಹುಡುಕಿ ಅದನ್ನು ಚಟ್ನಿ ಮಾಡಿಬಿಡು!

ಅರುಣ್‌ : ನಿನ್ನ ಬಳಿ ಮೊಬೈಲ್ ‌ಇರುವಾಗ ಎಸ್ಎಂಎಸ್ ಕಳುಹಿಸುವುದು ಬಿಟ್ಟು ಲೆಟರ್‌ ಯಾಕೆ ಕಳುಹಿಸಿದೆ?

ಕಿರಣ್‌ : ನಾನು ನಿನಗೆ ಫೋನ್‌ ಮಾಡಿದ್ದೆ. ಆದರೆ ಅದರಲ್ಲಿ `ಪ್ಲೀಸ್‌ ಟ್ರೈ ಲೇಟರ್‌’ ಅಂತ ಉತ್ತರ ಬರುತ್ತಲೇ ಇತ್ತು. ಅದಕ್ಕೆ ಲೆಟರ್‌ ಕೇಳ್ತಿದ್ದೀಯಾ ಅಂತ ಕಳಿಸಿಬಿಟ್ಟೆ.

ಏರ್‌ಹೋಸ್ಟೆಸ್‌ : ಸರ್‌, ನೀವೇನು ತೆಗೆದುಕೊಳ್ತೀರಿ?

ಪ್ಯಾಸೆಂಜರ್‌ : ಮಣ್ಣಿನ ಸಾಸರ್‌ನಲ್ಲಿ ಬಿಸಿ ಚಹಾ.

ಏರ್‌ಹೋಸ್ಟೆಸ್‌ : ಇದು ವಿಮಾನವೇ ಹೊರತು ಭಜನಾಮಂಡಳಿ ಅಲ್ಲ!

ಗಿರೀಶ್‌ : ಬಹಳ ವಾಚಾಳಿಯಾಗಿದ್ದ ನಿನ್ನ ಹೆಂಡತಿ ಇದ್ದಕ್ಕಿದ್ದಂತೆ ಅದು ಹೇಗೆ ಅಷ್ಟು ಮೌನವಾದಳು?

ಮಹೇಶ : ಕಳೆದ ವಾರ ನಾವು ಫೋಟೋ ತೆಗೆಸಲೆಂದು ಸ್ಟುಡಿಯೋಗೆ ಹೋದೆವು. ಅಲ್ಲಿ ಫೋಟೋಗ್ರಾಫರ್‌ನನ್ನು ಸಹ ಬಾಯಿಗೆ ಬಂದಂತೆ ದಬಾಯಿಸಿದಳು. ಆಗವನು, `ಮೇಡಂ ನೀವು ಮೌನವಾಗಿ ಪೋಸ್‌ ನೀಡಿದರೆ ರಾಧಿಕಾ, ರಮ್ಯಾರಿಗಿಂತ ಚೆನ್ನಾಗಿ ಕಾಣಿಸ್ತೀರ,’ ಎಂದ ಆಗಿನಿಂದ ಹೀಗೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ