ಕಾರ್ನ್‌ ಪಾಪ್ಸ್

ಸಾಮಗ್ರಿ : 1 ಕಪ್‌ ಎಳೆ ಜೋಳದ ಕಾಳು, ಅರ್ಧ ಕಪ್‌ ತುರಿದ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಹಸಿ ಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 4 ಚಮಚ ಕಾರ್ನ್‌ ಪೌಡರ್‌, 2 ಬೆಂದ ಆಲೂಗಡ್ಡೆ, ಕರಿಯಲು ಎಣ್ಣೆ.

ವಿಧಾನ : ಹಿಂದಿನ ರಾತ್ರಿ ಜೋಳ ನೆನೆಸಿ ಮಾರನೇ ಬೆಳಗ್ಗೆ ಹಸಿಮೆಣಸಿನ ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ. (ಕನಿಷ್ಠ ನೀರು ಇರಲಿ) ಇದಕ್ಕೆ ಮಸೆದ ಆಲೂಗಡ್ಡೆ, ತುರಿದ ಚೀಸ್‌, ಕಾರ್ನ್‌ ಪೌಡರ್‌ ಸೇರಿಸಿ ಪಕೋಡ ಹದಕ್ಕೆ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿಯಾಗಿ ಇದನ್ನು ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಎನ್ವಲಪ್‌ ಸಮೋಸಾ

page-07

ಸಾಮಗ್ರಿ : 1 ಕಪ್‌ ಮೈದಾ, 1 ಕಪ್‌ ತುರಿದ ಪನೀರ್‌, ಅರ್ಧ ಕಪ್‌ ಚಾಕಲೇಟ್‌, 4 ಚಮಚ ಪುಡಿಸಕ್ಕರೆ, 8-10 ಗೋಡಂಬಿ, 10-15 ದ್ರಾಕ್ಷಿ, 4 ಚಮಚ ತುಪ್ಪ, ಕರಿಯಲು ಎಣ್ಣೆ.

ವಿಧಾನ : ಮೈದಾ ಜರಡಿಯಾಡಿಕೊಂಡು ಚಿಟಕಿ ಉಪ್ಪು, ತುಸು ನೀರು, ಅರಿಶಿನ ಬೆರೆಸಿ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 1 ತಾಸು ನೆನೆಯಲು ಬಿಡಿ. ಬಾಣಲೆ ಬಿಸಿ ಮಾಡಿ, ಅದರಲ್ಲಿ ಚಾಕಲೇಟ್‌ ಹಾಕಿ ಕರಗಿಸಿ. ಇದಕ್ಕೆ ಪುಡಿಸಕ್ಕರೆ, ಪನೀರ್‌ ಸೇರಿಸಿ ಚೆನ್ನಾಗಿ ಬೆರೆಸಿಕೊಳ್ಳಿ. 2-3 ನಿಮಿಷ ಹೀಗೆ ಕೈಯಾಡಿಸಿದ ನಂತರ ಒಲೆ ಆರಿಸಿಬಿಡಿ. ಆಮೇಲೆ ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿ ಸೇರಿಸಿ ಕೆದಕಿ ಕೆಳಗಿಳಿಸಿ, ಚೆನ್ನಾಗಿ ಆರಲು ಬಿಡಿ. ನೆನೆದ ಮೈದಾ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆ ಮಾಡಿ ಚೌಕಾಕಾರದ ದಪ್ಪ ಪದರದ ಚಪಾತಿ ಲಟ್ಟಿಸಿ. ಇದಕ್ಕೆ ಚೆನ್ನಾಗಿ ಕೂಲಾದ 3-4 ಚಮಚ ಪನೀರ್‌ ಮಿಶ್ರಣ ತುಂಬಿಸಿ, ಲಕೋಟೆ ತರಹ ನೀಟಾಗಿ ಮಡಿಚಿ, ಅಂಚು ಬಿಟ್ಟುಕೊಳ್ಳದಂತೆ ಮೈದಾ ಪೇಸ್ಟ್ ನಿಂದ ಅಂಟಿಸಿಬಿಡಿ. ಈ ರೀತಿ ಎಲ್ಲಾ ಎನ್ವಲಪ್ಸ್ ರೆಡಿ ಮಾಡಿಕೊಂಡು, ಕಾದ ಎಣ್ಣೆಯಲ್ಲಿ  ಹೊಂಬಣ್ಣ ಬರುವಂತೆ ಕರಿದು, ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಚಾಕಲೇಟ್‌ ಲಾಗ್‌

page-02

ಸಾಮಗ್ರಿ : 1 ಪ್ಯಾಕೆಟ್‌ ಸಿಹಿ ಬಿಸ್ಕತ್ತು, ಅರ್ಧ ಕಪ್‌ ಕ್ರೀಂ, 4 ಚಮಚ ಕೋಕೋ ಪೌಡರ್‌, 1 ಗಿಟುಕು ಕೊಬ್ಬರಿ ತುರಿ, ಅರ್ಧ ಕಪ್ ತುರಿದ ಚಾಕಲೇಟ್‌, 1 ಕಪ್‌ ಸಕ್ಕರೆ, ಅರ್ಧ ಕಪ್‌ ಹಾಲು.

ವಿಧಾನ : ಬಿಸ್ಕತ್ತನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ಇದಕ್ಕೆ ಕೋಕೋ ಪೌಡರ್‌, ಕೊಬ್ಬರಿ ತುರಿ, ತುರಿದ ಚಾಕಲೇಟ್‌, ಪುಡಿ ಸಕ್ಕರೆ, ಕಾದಾರಿದ ಹಾಲು ಬೆರೆಸಿ ಮೃದು ಮಿಶ್ರಣ ಕಲಸಿಡಿ. ಇದನ್ನು ಒಂದು ದೊಡ್ಡ ರೋಲ್ ತರಹ ಮಾಡಿಕೊಂಡು, ಚಿತ್ರದಲ್ಲಿರುವಂತೆ ಚಾಕಲೇಟ್‌ ಕ್ರೀಮಿನಿಂದ ಅಲಂಕರಿಸಿ, ತುಂಡರಿಸಿ ಸವಿಯಲು ಕೊಡಿ.

ಇನ್‌ಸ್ಟೆಂಟ್‌ ರಸಮಲಾಯಿ

 

ಸಾಮಗ್ರಿ : 7-8 ಬ್ರೆಡ್‌ ಸ್ಲೈಸ್‌, ಅರ್ಧ ಲೀ. ಹಾಲು, 1 ಕಪ್‌ ಕಂಡೆನ್ಸ್ಡ್ ಮಿಲ್ಕ್, ಅರ್ಧ ಕಪ್‌ ಸಕ್ಕರೆ, ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, 4-5 ಹನಿ ಗುಲಾಬಿ ಜಲ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾಗಿ ಅರ್ಧ ಕಪ್‌).

ವಿಧಾನ : ಹಾಲು ಬಿಸಿ ಮಾಡಿ. ಇದಕ್ಕೆ ಕಂಡೆನ್ಸ್ಡ್ ಮಿಲ್ಕ್ ಬೆರೆಸಿ ಮತ್ತಷ್ಟು ಗಟ್ಟಿಗೊಳಿಸಿ. ಇದಕ್ಕೆ ಸಕ್ಕರೆ, ಏಲಕ್ಕಿಪುಡಿ ಬೆರೆಸಿ 1-2 ಕುದಿ ಬಂದ ಮೇಲೆ ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ಇದಕ್ಕೆ ಅರ್ಧ ಭಾಗ ಗೋಡಂಬಿ, ದ್ರಾಕ್ಷಿ ಸೇರಿಸಿ. ಬ್ರೆಡ್‌ನ್ನು ಗುಂಡಗಿನ ತುಂಡಾಗಿಸಿ ಇದಕ್ಕೆ ಬೆರೆಸಿ, ಮೇಲೆ ಉಳಿದ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿ ಸವಿಯಲು ಕೊಡಿ.

ಫ್ರೂಟ್‌ ಫ್ರೀಟರ್ಸ್

page-09

ಸಾಮಗ್ರಿ : ಸಣ್ಣ ರವೆ, ಮೈದಾ, ಹಾಲು, ಸಕ್ಕರೆ (ಅರ್ಧರ್ಧ ಕಪ್‌), ತುಸು ಏಲಕ್ಕಿ ಪುಡಿ, 1 ಮಾಗಿದ ಸೇಬು, 2 ಬಾಳೆಹಣ್ಣು, ಕಿತ್ತಳೆ ಹಣ್ಣಿನ 2-3 ತೊಳೆ, ಕರಿಯಲು ರೀಫೈಂಡ್‌ ಎಣ್ಣೆ.

ವಿಧಾನ : ಜರಡಿಯಾಡಿಕೊಂಡ ಮೈದಾ ರವೆಗೆ ಸಕ್ಕರೆ, ಏಲಕ್ಕಿಪುಡಿ ಮತ್ತು ಹಾಲು ಬೆರೆಸಿ ಬೋಂಡ ಮಿಶ್ರಣದಂತೆ ಕಲಸಿಡಿ. ನಂತರ ಸೇಬು, ಬಾಳೇಹಣ್ಣನ್ನು ಗುಂಡಗೆ  ಕತ್ತರಿಸಿ, ಶುಚಿಗೊಳಿಸಿದ ಕಿತ್ತಳೆ ತೊಳೆಗಳನ್ನು ಒಂದೊಂದಾಗಿ ಈ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ರವೆ ಪೂರಿ ಸ್ಪೆಷಲ್ ತೊವ್ವೆ

page-01 (1)

ಸಾಮಗ್ರಿ : ಅರ್ಧರ್ಧ ಕಪ್‌ ತೊಗರಿಬೇಳೆ, ಕಡಲೆಬೇಳೆ, ಹೆಸರುಬೇಳೆ, 1 ಕಪ್‌ ಹುಳಿ ಟೊಮೇಟೊ ಪೇಸ್ಟ್, 2-3 ಈರುಳ್ಳಿ, 1-1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 4-5 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪಖಾರ, ಗರಂಮಸಾಲ, ನಿಂಬೆರಸ, ಒಗ್ಗರಣೆ ಸಾಮಗ್ರಿ ಹಾಗೂ ತುಪ್ಪ, ಅರ್ಧರ್ಧ ಕಪ್‌ ಸಣ್ಣ ರವೆ, ಮೈದಾ, ಗೋದಿಹಿಟ್ಟು, ಅರ್ಧ ಚಮಚ ಓಮ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು 3 ಬಗೆಯ ಬೇಳೆಗೆ 2-2 ಚಿಟಕಿ ಅರಿಶಿನ, ಉಪ್ಪು, 2 ಚಮಚ ಎಣ್ಣೆ, ಅಗತ್ಯವಿದ್ದಷ್ಟು ನೀರು ಬೆರೆಸಿ 3 ಸೀಟಿ ಬರುವಂತೆ ಬೇಯಿಸಿ. ಒಂದು ಬಾಣಲೆಯಲ್ಲಿ ಅರ್ಧ ಸೌಟು ತುಪ್ಪ ಬಿಸಿ ಮಾಡಿ, ಒಗ್ಗರಣೆ ಕೊಡಿ. 2-3 ಎಸಳು ಕರಿಬೇವು ಹಾಕಿ ಚಟಪಟಾಯಿಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಹಸಿ ಮೆಣಸು, ಈರುಳ್ಳಿ ಹಾಕಿ ಬಾಡಿಸಿ, ಆಮೇಲೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ನಂತರ ಟೊಮೇಟೊ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಉಪ್ಪು, ಖಾರ, ಗರಂಮಸಾಲ, ಅರಿಶಿನ ಹಾಕಿ ಕೈಯಾಡಿಸಿ. ಆಮೇಲೆ ಬೆಂದ ಬೇಳೆ ಬೆರೆಸಿ 5 ನಿಮಿಷ ಕುದಿಸಿ ಕೆಳಗಿಳಿಸಿ, ಹೆಚ್ಚಿದ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಳ್ಳಿ.

ಗೋದಿಹಿಟ್ಟಿಗೆ ಮೈದಾ, ಸಣ್ಣ ರವೆ, ಓಮ, ಉಪ್ಪು ಸೇರಿಸಿ, ನೀರು ಬೆರೆಸಿ ಮೃದು ಹಿಟ್ಟು ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. 1 ತಾಸಿನ ನಂತರ ಸಣ್ಣ ಉಂಡೆಗಳಾಗಿಸಿ, ಲಟ್ಟಿಸಿ, ಕಾದ ಎಣ್ಣೆಯಲ್ಲಿ ಪೂರಿ ಕರಿಯಿರಿ. ಬಿಸಿಬಿಸಿ ಸ್ಪೆಷಲ್ ತೊವ್ವೆ ಜೊತೆ ಸವಿಯಲು ಕೊಡಿ.

ಪ್ಯಾನ್‌ ಕೇಕ್‌ ಪಿಜ್ಜಾ

page-04

ಸಾಮಗ್ರಿ : 1 ಕಪ್‌ ಸಣ್ಣ ರವೆ, ಅರ್ಧ ಕಪ್‌ ಮೈದಾ, 2 ಈರುಳ್ಳಿ, 3 ಟೊಮೇಟೊ, 4 ಚಮಚ ಟೊಮೇಟೊ ಸಾಸ್‌, 1 ಕ್ಯಾಪ್ಸಿಕಂ, ಅರ್ಧ ಸೌಟು ರೀಫೈಂಡ್‌ ಎಣ್ಣೆ, 4-5 ಚಮಚ ತುರಿದ ಚೀಸ್‌, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.

ವಿಧಾನ : ಲಘುವಾಗಿ ಹುರಿದ ಸಣ್ಣ ರವೆಗೆ ಮೈದಾ, ಚಿಟಕಿ ಉಪ್ಪು ಬೆರೆಸಿ ಪೇಸ್ಟ್ ತರಹ ಮಾಡಿ ಅರ್ಧ ಗಂಟೆ ಹಾಗೇ ಬಿಡಿ. ಒಲೆಯ ಮೇಲೆ ನಾನ್‌ಸ್ಟಿಕ್‌ ತವಾ ಬಿಸಿ ಮಾಡಿ, ತುಸು ಎಣ್ಣೆ ಸವರಿ, ದಪ್ಪ ದೋಸೆಯಾಗಿ ಹಿಟ್ಟನ್ನು ಹರಡಬೇಕು. ಈ ರೀತಿ 2-3 ದೋಸೆ ತಯಾರಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಅದರಲ್ಲಿ ಹೆಚ್ಚಿದ ಈರುಳ್ಳಿ ಬಾಡಿಸಿ. ನಂತರ ಹೆಚ್ಚಿದ ಕ್ಯಾಪ್ಸಿಕಂ, ಟೊಮೇಟೊ ಹಾಕಿ ಬಾಡಿಸಬೇಕು. ನಂತರ ಉಪ್ಪು, ಮೆಣಸು ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ತುರಿದ ಚೀಸ್ ಹಾಕಿ ಬೆರೆಸಿ ಕೆಳಗಿಳಿಸಿ. ಒಂದು ಬೇಕಿಂಗ್‌ ಡಿಶ್‌ನಲ್ಲಿ ಒಂದು ದೋಸೆ ಹರಡಿರಿ. ಇದರ ಮೇಲೆ ಇನ್ನಷ್ಟು ಚೀಸ್‌ ತುರಿದು ಹಾಕಿ, ಮೇಲೆ ಸಾಸ್‌ ಸಿಂಪಡಿಸಿ. ಆಮೇಲೆ ಚೀಸ್‌ ಕರಗುವವರೆಗೂ ಬೇಕ್‌ ಮಾಡಿ. ಈ ರೀತಿ ಎಲ್ಲಾ ಪ್ಯಾನ್‌ ಕೇಕ್‌ ಪಿಜ್ಜಾಗಳನ್ನೂ ಸಿದ್ಧಪಡಿಸಿ ಬಿಸಿಯಾಗಿ ಸವಿಯಿರಿ.

ಪನೀರ್‌ ಕೇಕ್‌

page-05

ಸಾಮಗ್ರಿ : 100 ಗ್ರಾಂ ಪನೀರ್‌, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ ಅರ್ಧ ಕಪ್‌, ಸಣ್ಣಗೆ ಹೆಚ್ಚಿ ಬೇಯಿಸಿದ ಪಾಲಕ್‌ ಸೊಪ್ಪು ಅರ್ಧ ಕಪ್‌, 2-3 ಹಸಿ ಮೆಣಸಿನಕಾಯಿ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ.

ವಿಧಾನ : ಪನೀರನ್ನು ಗುಂಡಗಿನ ತುಂಡುಗಳಾಗಿಸಿ. ಬಾಡಿಸಿದ ಹಸಿಮೆಣಸಿಗೆ ಬೆಂದ ಸೊಪ್ಪು, ದ್ರಾಕ್ಷಿ, ಗೋಡಂಬಿ, ತುಸು ತುಪ್ಪ, ಉಪ್ಪು, ನಿಂಬೆರಸ ಬೆರೆಸಿ ನುಣ್ಣಗೆ ತಿರುವಿಕೊಳ್ಳಿ. ಪನೀರ್‌ ತುಂಡುಗಳನ್ನು ಇದರಲ್ಲಿ ಹೊರಳಿಸಿ 10-12 ನಿಮಿಷ ನೆನೆಯಲು ಬಿಡಿ. ಅಳ್ಳಕವಾದ (ಫ್ಲಾಟ್‌ ಆಗಿರಬಾರದು) ತವಾ ಮೇಲೆ ಎಣ್ಣೆ ಬಿಟ್ಟು, ಈ ತುಂಡುಗಳನ್ನು ಒಂದೊಂದಾಗಿ ತಿರುವಿಹಾಕುತ್ತಾ ಶ್ಯಾಲೋ ಫ್ರೈ ಮಾಡಿ. ಬಿಸಿ ಬಿಸಿಯಾಗಿ ಇವನ್ನು ಕಾಫಿ ಟೀ ಜೊತೆ, ಬಟರ್‌ ಟೋಸ್ಟ್ ನಡುವೆ ಇರಿಸಿ ಸವಿಯಲು ಕೊಡಿ.

ಅನಾನಸ್‌ ಸಜ್ಜಿಗೆ

ಸಾಮಗ್ರಿ : 1-1 ಕಪ್‌ ಸಣ್ಣ ರವೆ, ಸಕ್ಕರೆ, ಅರ್ಧರ್ಧ ಕಪ್‌ ಸಣ್ಣಗೆ ಹೆಚ್ಚಿದ ಅನಾನಸ್‌, ತುಪ್ಪ, ತುಸು ಹಾಲು, ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿ ಹುರಿದು ಬೇರೆಯಾಗಿಡಿ. ಇದರಲ್ಲಿ ರವೆ ಹುರಿದು ಬೇರೆ ಇಡಿ. ಅದಕ್ಕೆ ಇನ್ನಷ್ಟು ತುಪ್ಪ ಸೇರಿಸಿ, ಸಣ್ಣಗೆ ಹೆಚ್ಚಿದ ಅನಾನಸ್‌ ಬೆರೆಸಿ ಬಾಡಿಸಿ. ಆಮೇಲೆ ಇದಕ್ಕೆ ತುಸು ಹಾಲು, ನೀರು ಬೆರೆಸಿ, ಸಕ್ಕರೆ ಹಾಕಿ ಕೆದಕಬೇಕು. ಅದು ಕುದಿಯತೊಡಗಿದಂತೆ ಏಲಕ್ಕಿ, ಆಮೇಲೆ ರವೆ ಬೆರೆಸುತ್ತಾ ಕೈಯಾಡಿಸಿ. ಮಧ್ಯೆ ಮಧ್ಯೆ ತುಪ್ಪ ಬೆರೆಸುತ್ತಾ ಕೆದಕಬೇಕು. ಕೊನೆಯಲ್ಲಿ ಗೋಡಂಬಿ, ದ್ರಾಕ್ಷಿ ಸೇರಿಸಿ, ಕೆದಕಿ ಕೆಳಗಿಳಿಸಿ. ಬಿಸಿ ಇರುವಾಗಲೇ ಸಮೋಸಾ ಜೊತೆ ಸವಿಯಲು ಕೊಡಿ.

ಸ್ಪೆಷಲ್ ಸಮೋಸಾ

page-06

ಸಾಮಗ್ರಿ : 1 ಕಪ್‌ ಹೆಚ್ಚಿದ ಪಾಲಕ್‌ ಸೊಪ್ಪು, 1-1 ಹಳದಿ, ಕೆಂಪು, ಹಸಿರು ಕ್ಯಾಪ್ಸಿಕಂ, ಅರ್ಧ ಝುಕೀನಿ, 1 ಆಲೂ, 1 ಸಿಹಿ ಗೆಣಸು, 5-6 ಹಸಿ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಶುಂಠಿ, 2 ಚಮಚ ಬೆಣ್ಣೆ, 2 ಕಪ್‌ ಮೈದಾ, 1 ಚಿಟಕಿ ಓಮ, ಅರಿಶಿನ, 1 ಕಪ್‌ ವೈಟ್‌ ಸಾಸ್‌ (ರೆಡಿಮೇಡ್‌ ಲಭ್ಯ), ಕರಿಯಲು ಎಣ್ಣೆ.

ವಿಧಾನ : ಮೊದಲು ಮೈದಾಗೆ ಚಿಟಕಿ ಓಮ, ಉಪ್ಪು, ಅರಿಶಿನ, ನೀರು ಬೆರೆಸಿ ಪೂರಿಹಿಟ್ಟಿನ ಹದಕ್ಕೆ ಮೃದುವಾಗಿ ಕಲಸಿ, ಬೆಣ್ಣೆಯಿಂದ ಚೆನ್ನಾಗಿ ನಾದಿ ನೆನೆಯಲು ಬಿಡಿ. ಆಲೂ ಸಿಹಿಗೆಣಸು ಬೇಯಿಸಿ ಮಸೆದಿಡಿ. ಪಾಲಕ್‌ ಸೊಪ್ಪನ್ನು ಬೇರೆಯಾಗಿ ಬೇಯಿಸಿ ಪೇಸ್ಟ್ ಮಾಡಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಸಣ್ಣಗೆ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ಝುಕೀನಿ ಹಸಿಮೆಣಸು, ಶುಂಠಿ ಸೇರಿಸಿ ಬಾಡಿಸಿ. ಆಮೇಲೆ ಪಾಲಕ್‌ ಪೇಸ್ಟ್ ಹಾಕಿ ಕೆದಕಬೇಕು. ನಂತರ ಮಸೆದ ಗೆಣಸು ಆಲೂ ಸೇರಿಸಿ. ಕೊನೆಯಲ್ಲಿ ಉಪ್ಪು, ಮೆಣಸು, ವೈಟ್‌ ಸಾಸ್‌ ಎಲ್ಲಾ ಬೆರೆಸಿ ಕೆದಕಿ ಕೆಳಗಿಳಿಸಿ. ಈ ಮಿಶ್ರಣವನ್ನು ಚೆನ್ನಾಗಿ ಆರಲು ಬಿಡಿ. ನೆನೆದ ಹಿಟ್ಟಿನಿಂದ ಸಣ್ಣ ಉಂಡೆ ಮಾಡಿ ಲಟ್ಟಿಸಿ. ಅರ್ಧ ಚಂದ್ರಾಕಾರವಾಗಿ ಕತ್ತರಿಸಿ, ಶಂಖುವಿನಂತೆ ಮಾಡಿಕೊಂಡು, ಅದಕ್ಕೆ 3-4 ಚಮಚ ಪಾಲಕ್‌ ಮಿಶ್ರಣ ತುಂಬಿಸಿ ಅಂಚು ಬಿಡದಂತೆ ಅಂಟಿಸಿಬಿಡಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆದಿಯಿರಿ. ಬಿಸಿ ಬಿಸಿಯಾಗಿ ಸಾಸ್‌ ಜೊತೆ ಸವಿಯಲು ಕೊಡಿ.

ಸ್ಯಾಂಡ್‌ವಿಚ್‌ ಕಬಾಬ್‌

ಸಾಮಗ್ರಿ : 3-4 ಬ್ರೆಡ್‌ ಸ್ಲೈಸ್‌, 2 ಸಿಹಿಗೆಣಸು, 2 ಆಲೂಗಡ್ಡೆ, 1-1 ಕೆಂಪು, ಹಸಿರು, ಹಳದಿ ಕ್ಯಾಪ್ಸಿಕಂ, ಅರ್ಧದಷ್ಟು ಝುಕೀನಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಚಾಟ್‌ ಮಸಾಲ, 4-4 ಚಮಚ ಕಾರ್ನ್‌ಫ್ಲೋರ್‌, ಬೆಣ್ಣೆ, ಕರಿಯಲು ಎಣ್ಣೆ.

ವಿಧಾನ : ಮೊದಲು ಆಲೂ, ಸಿಹಿಗೆಣಸನ್ನು ಬೇಯಿಸಿ ಗುಂಡಗಿನ ಬಿಲ್ಲೆಗಾಗಿ ಕತ್ತರಿಸಿ. ಬ್ರೆಡ್‌ ಸ್ಲೈಸ್‌ನ್ನು ಗುಂಡಗೆ ಕತ್ತರಿಸಿ. ಕಾರ್ನ್ ಫ್ಲೋರ್ ಗೆ ತುಸು ಉಪ್ಪು, ನೀರು ಬೆರೆಸಿ ಪೇಸ್ಟ್ ತರಹ ಮಾಡಿಕೊಂಡು, ಅದರಲ್ಲಿ ಬ್ರೆಡ್‌ ಸ್ಲೈಸ್‌ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. 3 ಬಗೆಯ ಕ್ಯಾಪ್ಸಿಕಂ, ಝುಕೀನಿ ಗುಂಡಗೆ ಕತ್ತರಿಸಿ. ಇವನ್ನು ಬಾಣಲೆಯಲ್ಲಿ ಬೆಣ್ಣೆ ಜೊತೆ ಬಾಡಿಸಿ. ಇದಕ್ಕೆ ತುಸು ಉಪ್ಪು, ಮೆಣಸು ಸೇರಿಸಿ ಕೆದಕಿ ಹೊರತೆಗೆಯಿರಿ.

ನಂತರ ಉದ್ದದ ಚೂಪಾದ ಕಡ್ಡಿಗಳಿಗೆ 3 ಬಗೆಯ ಕ್ಯಾಪ್ಸಿಕಂ ತುಂಡುಗಳು, 1-1 ಆಲೂ, ಗೆಣಸಿನ ತುಂಡು, ಬ್ರೆಡ್‌ ತುಂಡು, ಝುಕೀನಿ ತುಂಡು ಇತ್ಯಾದಿಗಳನ್ನು ಚಿತ್ರದಲ್ಲಿರುವಂತೆ ಸಿಗಿಸಿ, ಮೇಲೆ ತುಸು ಉಪ್ಪು, ಮೆಣಸು, ಚಾಟ್‌ ಮಸಾಲ ಉದುರಿಸಿ ತಕ್ಷಣ ಸವಿಯಲು ಕೊಡಿ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ