ಬೀಟ್ ರೂಟ್ ಡ್ರೈ ಫ್ರೂಟ್ಸ್ ಕಟ್ ಲೆಟ್
ಮೂಲ ಸಾಮಗ್ರಿ : ಮಧ್ಯಮ ಗಾತ್ರದ 2 ಬೀಟ್‌ರೂಟ್, 200 ಗ್ರಾಂ ಬೇಯಿಸಿ ಮಸೆದ ಆಲೂ, 3-4 ಬ್ರೆಡ್ ಪೀಸ್, 4 ಚಮಚ ಆರಾರೂಟ್ ಪೌಡರ್, 4-5 ಚಮಚ ಕಡಲೆಹಿಟ್ಟು, ಚಿಟಕಿ ಉಪ್ಪು, ಕರಿಯಲು ರೀಫೈಂಡ್ ಎಣ್ಣೆ.
ಹೂರಣದ ಸಾಮಗ್ರಿ : 10-12 ಇಡಿಯಾದ ಗೋಡಂಬಿ, 5-6 ಚಮಚ ನೈಲಾನ್ ಎಳ್ಳು, 3-4 ಚಮಚ ತುಂಡರಿಸಿದ ಬಾದಾಮಿ, ಪಿಸ್ತಾ, ದ್ರಾಕ್ಷಿ, ಖರ್ಜೂರ, 4 ಚಮಚ ತುಪ್ಪದಲ್ಲಿ ಹುರಿದು ಪುಡಿ ಮಾಡಿದ ಗೋಡಂಬಿ, ಅರ್ಧ ಸಣ್ಣ ಚಮಚ ಪುಡಿಮೆಣಸು, 200 ಗ್ರಾಂ ತುರಿದ ಪನೀರ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಸಿಪ್ಪೆ ಹೆರೆದ ಬೀಟ್‌ರೂಟ್‌ನ್ನು ಇಡಿಯಾಗಿ ಬೇಯಿಸಿ. ಆರಿದ ನಂತರ ತುರಿದಿಡಿ. ಇದಕ್ಕೆ ಮ್ಯಾಶ್ ಮಾಡಿದ ಆಲೂ, ಹಾಲಲ್ಲಿ ನೆನೆಸಿ ಕಿವುಚಿದ ಬ್ರೆಡ್ ಸೇರಿಸಿ. ನಂತರ ಆರಾರೂಟ್ ಪೌಡರ್, ಕಡಲೆಹಿಟ್ಟು, ಉಪ್ಪು ಹಾಕಿ. ಈಗ ಹೂರಣದ ಸಾಮಗ್ರಿಗಾಗಿ ತುಂಡರಿಸಿದ ಇಡಿ ಗೋಡಂಬಿ ಹಾಗೂ ಎಳ್ಳು ಬಿಟ್ಟು ಪನೀರ್‌ಗೆ ಬಾಕಿ ಸಾಮಗ್ರಿ ಬೆರೆಸಿಡಿ. ಬೀಟ್‌ರೂಟ್ ಮಿಶ್ರಣದಿಂದ ಉಂಡೆ ಮಾಡಿ, ಮಧ್ಯದಲ್ಲಿ ಪನೀರ್ ಹೂರಣದ ಮಿಶ್ರಣ ಇರಿಸಿ ಕ್ಲೋಸ್ ಮಾಡಿ ಕಟ್‌ಲೆಟ್ ಆಕಾರ ಕೊಡಿ. ಇದನ್ನು ಹುರಿದ ಎಳ್ಳಲ್ಲಿ ಹೊರಳಿಸಿ, ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ನಡುನಡುವೆ ಸಿಗಿಸಿ, ಅಲಂಕರಿಸಿ ಸವಿಯಲು ಕೊಡಿ.
ಡ್ರೈ ಫ್ರೂಟ್ ಆಲೂ ಟಿಕ್ಕಿ
ಮೂಲ ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 4-5 ಚಮಚ ಆರಾರೂಟ್ ಪೌಡರ್, 2 ಚಮಚ ಅಕ್ಕಿಹಿಟ್ಟು, 1 ಕಪ್ ಬ್ರೆಡ್ ಕ್ರಂಬ್ಸ್, 2 ಚಿಟಕಿ ಉಪ್ಪು, ಕರಿಯಲು ರೀಫೈಂಡ್ ಎಣ್ಣೆ.
ಹೂರಣದ ಸಾಮಗ್ರಿ : ಅರ್ಧ ಕಪ್ ಹೆಸರುಬೇಳೆ, 3 ಚಮಚ ಬೆಂದ ಹಸಿ ಬಟಾಣಿ, 2-3 ಚಮಚ ತುಂಡರಿಸಿ ತುಪ್ಪುದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಹೆಚ್ಚಿದ ಶುಂಠಿ, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ಧನಿಯಾಖಾರದ ಪುಡಿ, ಚಾಟ್ ಮಸಾಲ, 2 ಚಮಚ ಕಡಲೆಹಿಟ್ಟು, 2 ಚಮಚ ಹೆಚ್ಚಿದ ಕೊ.ಸೊಪ್ಪು.
ವಿಧಾನ : ಮೊದಲು ಹೆಸರುಬೇಳೆ ಬೇಯಿಸಿಕೊಳ್ಳಿ. ಆರಿದ ನಂತರ ನೀರಿನಿಂದ ಸೋಸಿ ಬೇರ್ಪಡಿಸಿ. ಒಂದು ನಾನ್ ಸ್ಟಿಕ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಹಿಟ್ಟು ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಬೇಳೆ ಹಾಕಿ, ತುಪ್ಪ ಬೆರೆಸಿ ಕೈಯಾಡಿಸಿ. ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೆದಕಬೇಕು. ಆಮೇಲೆ ಬೆಂದ ಬಟಾಣಿ, ಡ್ರೈ ಫ್ರೂಟ್ಸ್ ಇತ್ಯಾದಿ ಬೆರೆಸಿ ಕೆಳಗಿಳಿಸಿ. ಮಸೆದ ಆಲೂಗೆ ಆರಾರೂಟ್ ಪೌಡರ್, ಅಕ್ಕಿ ಹಿಟ್ಟು, ಉಪ್ಪು ಸೇರಿಸಿ. ಇದರಿಂದ 1-1 ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಇದರ ಮಧ್ಯೆ 2 ಚಮಚ ಹೂರಣ ತುಂಬಿಸಿ ಕ್ಲೋಸ್ ಮಾಡಿ, ಟಿಕ್ಕಿ ಆಕಾರದಲ್ಲಿ ತಟ್ಟಿಕೊಳ್ಳಿ (ಚಿತ್ರ ನೋಡಿ). ಪ್ರತಿ ಟಿಕ್ಕಿಯನ್ನು ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಸರ್ವಿಂಗ್ ಪ್ಲೇಟಿಗೆ ಹಾಕಿ ಮೇಲೆ ಚಟ್ನಿ, ಮೊಸರು, ಮಿಕ್ಸ್ ಚರ್ ಇತ್ಯಾದಿ ಉದುರಿಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.