ಬೀಟ್‌ ರೂಟ್‌ ಡ್ರೈ ಫ್ರೂಟ್ಸ್ ಕಟ್‌ ಲೆಟ್‌

ಮೂಲ ಸಾಮಗ್ರಿ : ಮಧ್ಯಮ ಗಾತ್ರದ 2 ಬೀಟ್‌ರೂಟ್‌, 200 ಗ್ರಾಂ ಬೇಯಿಸಿ ಮಸೆದ ಆಲೂ, 3-4 ಬ್ರೆಡ್‌ ಪೀಸ್‌, 4 ಚಮಚ ಆರಾರೂಟ್‌ ಪೌಡರ್‌, 4-5 ಚಮಚ ಕಡಲೆಹಿಟ್ಟು, ಚಿಟಕಿ ಉಪ್ಪು, ಕರಿಯಲು ರೀಫೈಂಡ್‌ ಎಣ್ಣೆ.

ಹೂರಣದ ಸಾಮಗ್ರಿ : 10-12 ಇಡಿಯಾದ ಗೋಡಂಬಿ, 5-6 ಚಮಚ ನೈಲಾನ್‌ ಎಳ್ಳು, 3-4 ಚಮಚ ತುಂಡರಿಸಿದ ಬಾದಾಮಿ, ಪಿಸ್ತಾ, ದ್ರಾಕ್ಷಿ, ಖರ್ಜೂರ, 4 ಚಮಚ ತುಪ್ಪದಲ್ಲಿ ಹುರಿದು ಪುಡಿ ಮಾಡಿದ ಗೋಡಂಬಿ, ಅರ್ಧ ಸಣ್ಣ ಚಮಚ ಪುಡಿಮೆಣಸು, 200 ಗ್ರಾಂ ತುರಿದ ಪನೀರ್‌, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಸಿಪ್ಪೆ ಹೆರೆದ ಬೀಟ್‌ರೂಟ್‌ನ್ನು ಇಡಿಯಾಗಿ ಬೇಯಿಸಿ. ಆರಿದ ನಂತರ ತುರಿದಿಡಿ. ಇದಕ್ಕೆ ಮ್ಯಾಶ್‌ ಮಾಡಿದ ಆಲೂ, ಹಾಲಲ್ಲಿ ನೆನೆಸಿ ಕಿವುಚಿದ ಬ್ರೆಡ್‌ ಸೇರಿಸಿ. ನಂತರ ಆರಾರೂಟ್‌ ಪೌಡರ್‌, ಕಡಲೆಹಿಟ್ಟು, ಉಪ್ಪು ಹಾಕಿ. ಈಗ ಹೂರಣದ ಸಾಮಗ್ರಿಗಾಗಿ ತುಂಡರಿಸಿದ ಇಡಿ ಗೋಡಂಬಿ ಹಾಗೂ ಎಳ್ಳು ಬಿಟ್ಟು ಪನೀರ್‌ಗೆ ಬಾಕಿ ಸಾಮಗ್ರಿ ಬೆರೆಸಿಡಿ. ಬೀಟ್‌ರೂಟ್ ಮಿಶ್ರಣದಿಂದ ಉಂಡೆ ಮಾಡಿ, ಮಧ್ಯದಲ್ಲಿ ಪನೀರ್‌ ಹೂರಣದ ಮಿಶ್ರಣ ಇರಿಸಿ ಕ್ಲೋಸ್‌ ಮಾಡಿ ಕಟ್‌ಲೆಟ್‌ ಆಕಾರ ಕೊಡಿ. ಇದನ್ನು ಹುರಿದ ಎಳ್ಳಲ್ಲಿ ಹೊರಳಿಸಿ, ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ನಡುನಡುವೆ ಸಿಗಿಸಿ, ಅಲಂಕರಿಸಿ ಸವಿಯಲು ಕೊಡಿ.

ಡ್ರೈ ಫ್ರೂಟ್‌ ಆಲೂ ಟಿಕ್ಕಿ

AA-DRYFRUIT-ALOO-TIKKI-(7)

ಮೂಲ ಸಾಮಗ್ರಿ : 250 ಗ್ರಾಂ ಬೇಯಿಸಿ ಮಸೆದ ಆಲೂ, 4-5 ಚಮಚ ಆರಾರೂಟ್‌ ಪೌಡರ್‌, 2 ಚಮಚ ಅಕ್ಕಿಹಿಟ್ಟು, 1 ಕಪ್‌ ಬ್ರೆಡ್ ಕ್ರಂಬ್ಸ್, 2 ಚಿಟಕಿ ಉಪ್ಪು, ಕರಿಯಲು ರೀಫೈಂಡ್‌ ಎಣ್ಣೆ.

ಹೂರಣದ ಸಾಮಗ್ರಿ : ಅರ್ಧ ಕಪ್‌ ಹೆಸರುಬೇಳೆ, 3 ಚಮಚ ಬೆಂದ ಹಸಿ ಬಟಾಣಿ, 2-3 ಚಮಚ ತುಂಡರಿಸಿ ತುಪ್ಪುದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, ಹೆಚ್ಚಿದ ಶುಂಠಿ, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ಧನಿಯಾಖಾರದ ಪುಡಿ, ಚಾಟ್‌ ಮಸಾಲ, 2 ಚಮಚ ಕಡಲೆಹಿಟ್ಟು, 2 ಚಮಚ ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಹೆಸರುಬೇಳೆ ಬೇಯಿಸಿಕೊಳ್ಳಿ. ಆರಿದ ನಂತರ ನೀರಿನಿಂದ ಸೋಸಿ ಬೇರ್ಪಡಿಸಿ. ಒಂದು ನಾನ್‌ ಸ್ಟಿಕ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆಹಿಟ್ಟು ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಬೇಳೆ ಹಾಕಿ, ತುಪ್ಪ ಬೆರೆಸಿ ಕೈಯಾಡಿಸಿ. ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೆದಕಬೇಕು. ಆಮೇಲೆ ಬೆಂದ ಬಟಾಣಿ, ಡ್ರೈ ಫ್ರೂಟ್ಸ್ ಇತ್ಯಾದಿ ಬೆರೆಸಿ ಕೆಳಗಿಳಿಸಿ. ಮಸೆದ ಆಲೂಗೆ ಆರಾರೂಟ್‌ ಪೌಡರ್‌, ಅಕ್ಕಿ ಹಿಟ್ಟು, ಉಪ್ಪು ಸೇರಿಸಿ. ಇದರಿಂದ 1-1 ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಇದರ ಮಧ್ಯೆ 2 ಚಮಚ  ಹೂರಣ ತುಂಬಿಸಿ ಕ್ಲೋಸ್‌ ಮಾಡಿ, ಟಿಕ್ಕಿ ಆಕಾರದಲ್ಲಿ ತಟ್ಟಿಕೊಳ್ಳಿ (ಚಿತ್ರ ನೋಡಿ). ಪ್ರತಿ ಟಿಕ್ಕಿಯನ್ನು ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಇದನ್ನು ಸರ್ವಿಂಗ್‌ ಪ್ಲೇಟಿಗೆ ಹಾಕಿ ಮೇಲೆ ಚಟ್ನಿ, ಮೊಸರು, ಮಿಕ್ಸ್ ಚರ್‌ ಇತ್ಯಾದಿ ಉದುರಿಸಿ ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.

ಡ್ರೈ ಫ್ರೂಟ್ಸ್ ಬರ್ಫಿ

AA-MEWA-KATLI-(2)

ಸಾಮಗ್ರಿ : 150 ಗ್ರಾಂ ಅಖರೋಟ್‌, ಅರ್ಧ ಕಪ್‌ ಸಕ್ಕರೆ, ತುಂಡರಿಸಿ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು, ಹಾಲಲ್ಲಿ ನೆನೆಸಿದ 10-12 ಎಸಳು ಕೇಸರಿ, ಅರ್ಧ ಕಪ್‌ ಹಾಲು, ಅದರಲ್ಲಿ ಅರ್ಧ ಗೋಡಂಬಿ ಪುಡಿ, ಕಡಲೆಹಿಟ್ಟು, ಅರ್ಧ ಕಪ್‌ ತುಪ್ಪ, 2 ಚಿಟಕಿ ಏಲಕ್ಕಿ ಪುಡಿ.

ವಿಧಾನ : ಒಂದು ದೊಡ್ಡ ಬಟ್ಟಲಲ್ಲಿ 2 ಕಪ್‌ ನೀರು ಬಿಸಿ ಮಾಡಿ. ಅದು ಕುದಿಯ ತೊಡಗಿದಂತೆ (ತುಸು ಉಳಿಸಿಕೊಂಡು) ಅಖರೋಟ್‌, ಡ್ರೈ ಫ್ರೂಟ್ಸ್ ಹಾಕಿ ಕೆದಕುತ್ತಾ ಲಘು ಬೇಯಿಸಿ. ಕೆಳಗಿಳಿಸಿ ಅರ್ಧ ಗಂಟೆ ಕಾಲ ಮುಚ್ಚಿಡಿ. ನಂತರ ಅದರ ಸಿಪ್ಪೆ ತೆಗೆದುಬಿಡಿ. ಮಿಕ್ಸಿಗೆ ಹಾಲಲ್ಲಿ ನೆನೆದ ಕೇಸರಿ, ನೆನೆದ ಡ್ರೈ ಫ್ರೂಟ್ಸ್ ಹಾಕಿ ಪೇಸ್ಟ್ ಮಾಡಿ. ಒಂದು ನಾನ್‌ ಸ್ಟಿಕ್‌ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಉಳಿದೆಲ್ಲ ಡ್ರೈ ಫ್ರೂಟ್ಸ್ ಹಾಕಿ ಹುರಿದು ಕೆಳಗಿಳಿಸಿ. ನಂತರ ಮತ್ತೆ ರುಬ್ಬಿದ ಮಿಶ್ರಣ ಹಾಕಿ ಕೆದಕಿ, ಮಂದ ಉರಿಯಲ್ಲಿ ಸಕ್ಕರೆ ಸೇರಿಸಿ ಕೆದಕಬೇಕು. ಈ ಮಿಶ್ರಣ ಕ್ರಮೇಣ ಗಟ್ಟಿಯಾದಂತೆ ಮಿಲ್ಕ್ ಪೌಡರ್‌, ಕಡಲೆಹಿಟ್ಟು ಹಾಕಿ ಕೈಯಾಡಿಸಿ. ನಡುನಡುವೆ ತುಪ್ಪ ಬೆರೆಸುತ್ತಾ ಮೈಸೂರುಪಾಕಿನ ಹದಕ್ಕೆ ಬರಿಸಿ. ಒಂದು ದೊಡ್ಡ ಟ್ರೇಗೆ ತುಪ್ಪ ಸವರಿ, ಈ ಮಿಶ್ರಣವನ್ನು ಅದರಲ್ಲಿ ಸಮನವಾಗಿ ಹರಡಿರಿ. ಇದರ ಮೇಲೆ ರೋಸ್ಟೆಡ್‌ ಬಾದಾಮಿ, ಅಖರೋಟ್‌ ಉದುರಿಸಿ. ಆರಿದ ನಂತರ ಬರ್ಫಿ ಆಕಾರದಲ್ಲಿ ಕತ್ತರಿಸಿ ಸವಿಯಲು ಕೊಡಿ.

ಮಟರ್‌ ಮಖಾನಾ ಗ್ರೇವಿ

AA-MATTAR-MAKHANA-SABJI-(1)

ಸಾಮಗ್ರಿ : 2 ಕಪ್‌ ಮಖಾನಾ (ತಾವರೆ ಬೀಜ ರೆಡಿಮೇಡ್‌ ಸಿಗುತ್ತೆ), ಅರ್ಧ ಕಪ್‌ ಹಸಿ ಬಟಾಣಿ, 100 ಗ್ರಾಂ ಪನೀರ್‌, 2 ಈರುಳ್ಳಿ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ, ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಚಾಟ್‌ ಮಸಾಲ, ಏಲಕ್ಕಿ, ಲವಂಗ, ಚಕ್ಕೆ, ಮೊಗ್ಗು, ಧನಿಯಾಪುಡಿ, ಕಾಶ್ಮೀರಿ ಮಿರ್ಚ್‌ ಮಸಾಲ, ಮೊಸರು, 4-5 ಹುಳಿ ಟೊಮೇಟೊ ಪೇಸ್ಟ್, ಅರ್ಧ ಸೌಟು ಬೆಣ್ಣೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, 5-6 ಚಮಚ ರೀಫೈಂಡ್‌ ಎಣ್ಣೆ, ತುಸು ಫ್ರೆಶ್‌ ಕ್ರೀಂ.

ವಿಧಾನ : ಮೊದಲು ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಅದರಲ್ಲಿ ತಾವರೆ ಬೀಜ ಹಾಕಿ ಹುರಿದು ಕೆಳಗಿಳಿಸಿ. ನಂತರ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ, ಕರಿಬೇವು ಹಾಕಿ 3-4 ಚಮಚ ಎಣ್ಣೆಯಲ್ಲಿ ಬಾಡಿಸಿ. ಇದನ್ನು ಕೆಳಗಿಳಿಸಿ ಆರಿದ ಮೇಲೆ ಮಿಕ್ಸಿಗೆ ಹಾಕಿ. ಜೊತೆಗೆ ಮೊಸರು, ಗೋಡಂಬಿ ಬೆರೆಸಿ ಪೇಸ್ಟ್ ಮಾಡಿಡಿ. ಬಾಣಲೆಯಲ್ಲಿ ಮತ್ತೆ ಎಣ್ಣೆ ಬಿಸಿ ಮಾಡಿ ಬೆಣ್ಣೆ ಹಾಕಿ. ನಂತರ ಇದಕ್ಕೆ ಏಲಕ್ಕಿ, ಲವಂಗಗಳನ್ನು ಹಾಕಿ ಕೆದಕಬೇಕು. ನಂತರ ಮಖಾನಾ, ಬಟಾಣಿ, ಪನೀರ್‌ ಹಾಕಿ ಕೈಯಾಡಿಸುತ್ತಾ ಅರ್ಧ ಲೋಟ ನೀರು ಬೆರೆಸಿ, ಮಂದ ಉರಿಯಲ್ಲಿ ಗ್ರೇವಿ ಗಟ್ಟಿಯಾಗುವಂತೆ ಮಾಡಿ. ಕೆಳಗಿಳಿಸಿದ ಮೇಲೆ ಕೊ.ಸೊಪ್ಪು ಉದುರಿಸಿ, ಬಿಸಿಯಾಗಿ ಪೂರಿ, ಚಪಾತಿ ಜೊತೆ ಸವಿಯಲು ಕೊಡಿ.

ಸ್ಪೈಸಿ ಡ್ರೈ ಫ್ರೂಟ್ಸ್ ಮಿಕ್ಸ್ ಚರ್

AA-SPICY-MIXTURE-(6)

ಸಾಮಗ್ರಿ : 3 ಕಪ್‌ ಕಾರ್ನ್‌ ಫ್ಲೇಕ್ಸ್, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಕರ್ಬೂಜ/ಕುಂಬಳ ಬೀಜ, ಕಡಲೆಬೀಜ (ತಲಾ ಅರ್ಧ ಕಪ್‌), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಚಾಟ್‌ ಮಸಾಲ, ಅಮ್ಚೂರ್‌ ಪುಡಿ, ಕರಿಬೇವು, ಅರಿಶಿನ, ಕೊಬ್ಬರಿ ತುರಿ, ತುಸು ಎಣ್ಣೆ.

ವಿಧಾನ : ಒಂದು ನಾನ್‌ ಸ್ಟಿಕ್‌ ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದರಲ್ಲಿ ಎಲ್ಲಾ ಡ್ರೈ ಫ್ರೂಟ್ಸ್, ಕಡಲೆಬೀಜ ಹಾಕಿ ಹುರಿದು ತೆಗೆಯಿರಿ. ನಂತರ ತುಸು ಎಣ್ಣೆ ಬಿಸಿ ಮಾಡಿ ಎಂದಿನ ಒಗ್ಗರಣೆ ಕೊಡಿ. ನಂತರ ಉಳಿದ ಮಸಾಲೆ, ಕಾರ್ನ್‌ ಫ್ಲೇಕ್ಸ್ ಹಾಕಿ ಹುರಿದು ಕೊನೆಯಲ್ಲಿ ಉಪ್ಪು, ಕೊಬ್ಬರಿ, ಡ್ರೈ ಫ್ರೂಟ್ಸ್ ಹಾಕಿ ಕೆದಕಿ ಕೆಳಗಿಳಿಸಿ. ಇದೀಗ ಮಿಕ್ಸ್ ಚರ್‌ ರೆಡಿ!

ಫ್ರೂಟ್‌ ಕಸ್ಟರ್ಡ್‌

AA-FRUIT-CUSTURD-(2)

ಸಾಮಗ್ರಿ : 1 ಲೀ. ಕೆನೆಭರಿತ ಗಟ್ಟಿ ಹಾಲು, ಅರ್ಧರ್ಧ ಕಪ್‌ ಕಸ್ಟರ್ಡ್‌ ಪೌಡರ್‌, ಸಕ್ಕರೆ, ಗೋಡಂಬಿ ಪುಡಿ, ದ್ರಾಕ್ಷಿ, ಬಾದಾಮಿ, ಪಿಸ್ತಾ ಚೂರು (ಒಟ್ಟಾರೆ 1 ಕಪ್‌), 2 ಕಪ್‌ ಬಗೆ ಬಗೆಯ ಹಣ್ಣಿನ ಹೋಳು.

ವಿಧಾನ : ಮೊದಲು ಹಾಲು ಕಾಯಲಿ. ಅದರಿಂದ ಅರ್ಧ ಕಪ್‌ ಹಾಲು ಬೇರೆಯಾಗಿರಿಸಿ ಚೆನ್ನಾಗಿ ಮರಳಿಸಿ ಮುಕ್ಕಾಲು ಭಾಗ ಹಿಂಗುವಂತೆ ಮಾಡಿ. ಅರ್ಧ ಕಪ್‌ ಹಾಲಿಗೆ ಸಕ್ಕರೆ, ಕಸ್ಟರ್ಡ್‌ ಪೌಡರ್‌, ಗೋಡಂಬಿ ಪುಡಿ ಹಾಕಿ ಚೆನ್ನಾಗಿ ಗೊಟಾಯಿಸಿ ಕುದಿ ಹಾಲಿಗೆ ಹಾಕಿ ಮಂದ ಉರಿಯಲ್ಲಿ 2 ನಿಮಿಷ ಕೈಯಾಡಿಸಿ. ಕೆಳಗಿಳಿಸಿ ಚೆನ್ನಾಗಿ ಆರಿದ ಮೇಲೆ, ಅರ್ಧ ಗಂಟೆ ಫ್ರಿಜ್‌ನಲ್ಲಿರಿಸಿ ಮತ್ತೆ ಬೀಟ್‌ ಮಾಡಿ. ಅಗತ್ಯವೆನಿಸಿದರೆ ಹ್ಯಾಂಡ್‌ ಬ್ಲೆಂಡರ್‌ ಸಹ ಬಳಸಿಕೊಳ್ಳಿ. ನಂತರ 3-4 ಗಾಜಿನ ಕಪ್‌ಗಳಿಗೆ ಒಂದು ಪದರ ಬರುವಂತೆ ಇದನ್ನು ಹಾಕಬೇಕು. ಮೇಲೆ ಹಣ್ಣಿನ ಹೋಳು, ಮತ್ತೆ ಕಸ್ಟರ್ಡ್‌, ಮತ್ತೆ ಹಣ್ಣು…. ಹೀಗೆ ಭರ್ತಿ ಮಾಡಿ. ಮೇಲೆ ಒಂದಿಷ್ಟು ಡ್ರೈ ಫ್ರೂಟ್ಸ್, ದಾಳಿಂಬೆ ಉದುರಿಸಿ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.

ಇನ್‌ಸ್ಟೆಂಟ್‌ ಸ್ಪೆಷಲ್ ಬರ್ಫಿ

AA-iNSTANT-DODA-BURFI-(1)

ಸಾಮಗ್ರಿ : 250 ಮಿ.ಲೀ. ಕೆನೆಭರಿತ ಗಟ್ಟಿ ಹಾಲು, 200 ಗ್ರಾಂ ತುರಿದ ಪನೀರ್‌, ಅರ್ಧ ಕಪ್‌ ಮಿಲ್ಕ್ ಪೌಡರ್‌, 4-4 ಚಮಚ ಕೋಕೋ ಪುಡಿ, ಬ್ರೌನ್‌ ಶುಗರ್‌, 5-6 ಚಮಚ ತುಪ್ಪ, ಗೋಡಂಬಿ, ದ್ರಾಕ್ಷಿ, ಅಖರೋಟ್‌, ಬಾದಾಮಿ, ಪಿಸ್ತಾ, ಹಸಿ ಖರ್ಜೂರ (ಒಟ್ಟಾರೆ 2 ಕಪ್‌), ತುಸು ಏಲಕ್ಕಿ ಪುಡಿ, ಬೇಕಿಂಗ್‌ ಪೌಡರ್‌.

ವಿಧಾನ : ಒಂದು ನಾನ್‌ ಸ್ಟಿಕ್‌ ಬಾಣಲೆಯಲ್ಲಿ 2 ಚಮಚ ತುಪ್ಪ ಬಿಸಿ ಮಾಡಿ. ಇದಕ್ಕೆ ಹಾಲು ಬೆರೆಸಿ ಕಾಯಿಸಿ, ಮಂದ ಉರಿಯಲ್ಲಿ ಕುದಿಸುತ್ತಾ ಅರ್ಧ ಹಿಂಗುವಂತೆ ಮಾಡಿ. ಆಮೇಲೆ ಇದಕ್ಕೆ ಪನೀರ್‌, ಬ್ರೌನ್‌ ಶುಗರ್‌, ಕೋಕೋ, ಏಲಕ್ಕಿ ಹಾಕಿ ಕೆದಕಬೇಕು. 5 ನಿಮಿಷ ಬಿಟ್ಟು ಹಾಲಿನ ಪುಡಿ, ಬೇಕಿಂಗ್‌ ಪೌಡರ್‌ ಹಾಕಿ ಕೆದಕಬೇಕು. ಪಕ್ಕದ ಒಲೆಯಲ್ಲಿ ತುಪ್ಪ ಬಿಸಿ ಮಾಡಿ ಡ್ರೈ ಫ್ರೂಟ್ಸ್ ಹುರಿದು ಇದಕ್ಕೆ ಹಾಕಿ. ನಡುನಡುವೆ ತುಪ್ಪ ಬೆರೆಸುತ್ತಾ ಸತತ ಕೆದಕಿ ಮೈಸೂರು ಪಾಕ್‌ ಹದ ಬಂದಾಗ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಯಲ್ಲಿ ಇದನ್ನು ಹರಡಿ, ಮೇಲೆ ಇನ್ನಷ್ಟು ಡ್ರೈ ಫ್ರೂಟ್ಸ್ ಹರಡಿ, ಆರಿದ ನಂತರ ವಜ್ರಾಕೃತಿಯಲ್ಲಿ ಬರ್ಫಿ ಕತ್ತರಿಸಿ ಸವಿಯಲು ಕೊಡಿ.

ಗೋಡಂಬಿ ಸ್ಟಾರ್ಸ್

Cookry--1

ಸಾಮಗ್ರಿ :  200 ಗ್ರಾಂ ಖೋವಾ, 100 ಗ್ರಾಂ ಸಕ್ಕರೆ, ಅರ್ಧ ಕಪ್‌ ತರಿಯಾದ ಗೋಡಂಬಿ ಪುಡಿ, ಚಿಟಕಿ ಅರಿಶಿನ, 8-10 ಎಸಳು ಕೇಸರಿ, ಒಂದಿಷ್ಟು ಪಿಸ್ತಾ, ಬಾದಾಮಿ ಚೂರು.

ವಿಧಾನ : ಖೋವಾ ಮಸೆದು ಬಾಣಲೆಯಲ್ಲಿ ತುಪ್ಪ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಇದನ್ನು ಕೆಳಗಿಳಿಸಿ, ಅದೇ ಬಾಣಲೆಗೆ ಸಕ್ಕರೆ, ನೀರು ಬೆರೆಸಿ ಎಳೆ ಪಾಕ ತಯಾರಿಸಿ. ಇದಕ್ಕೆ ಅರಿಶಿನ, ಹಾಲಲ್ಲಿ ನೆನೆದ ಕೇಸರಿ ಹಾಕಿ ಕೈಯಾಡಿಸಿ. ಮಂದ ಉರಿ ಮಾಡಿ ಇದಕ್ಕೆ ಮೊದಲು ಗೋಡಂಬಿ ತರಿ, ಆಮೇಲೆ ಖೋವಾ ಹಾಕಿ ನಡುನಡುವೆ ತುಪ್ಪ ಬೆರೆಸುತ್ತಾ ಕೆದಕಬೇಕು. ಹೀಗೆ ಇದು ಮೈಸೂರುಪಾಕ್‌ ಹದಕ್ಕೆ ಬರುವವರೆಗೆ ಕೆದಕಿ ಕೆಳಗಿಳಿಸಿ. ತುಪ್ಪ ಸವರಿದ ತಟ್ಟೆಗೆ ಇದನ್ನು ಹರಡಿ ಆರಲು ಬಿಡಿ. ನಕ್ಷತ್ರದಾಕಾರದಲ್ಲಿ ಕತ್ತರಿಸಿ, ಪ್ರತಿ ಸ್ಟಾರ್‌ ಮೇಲೆ 1-1 ಪಿಸ್ತಾ, ಬಾದಾಮಿ ಸಿಗಿಸಿ ಸವಿಯಲು ಕೊಡಿ.

ಟೇಸ್ಟಿ ರೋಲ್ಸ್

Cookry-2

ಸಾಮಗ್ರಿ :  250 ಗ್ರಾಂ ಖೋವಾ, 100 ಗ್ರಾಂ ಪುಡಿ ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ, ಅಖರೋಟಿನ ಚೂರು (ಒಟ್ಟಾರೆ 2 ಕಪ್‌), ತುಸು ಕೊಬ್ಬರಿ ತುರಿ, ಏಲಕ್ಕಿ ಪುಡಿ, ಹಸಿ ಖರ್ಜೂರ.

ವಿಧಾನ : ಮೊದಲು ಹಸಿ ಖರ್ಜೂರವನ್ನು ಹಾಲು ಬೆರೆಸಿ ನುಣ್ಣಗೆ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಮಂದ ಉರಿಯಲ್ಲಿ ಮಸೆದ ಖೋವಾ ಹಾಕಿ ಕೆದಕಬೇಕು. ನಂತರ ಇದಕ್ಕೆ ಅಖರೋಟ್‌, ಖರ್ಜೂರದ ಪೇಸ್ಟ್ ಹಾಕಿ ಕೈಯಾಡಿಸಿ, ನಡುನಡುವೆ ತುಪ್ಪ ಬೆರೆಸುತ್ತಿರಿ. 2 ನಿಮಿಷ ಬಿಟ್ಟು ಕೆಳಗಿಳಿಸಿ, ತುಸು ಆರಿದ ನಂತರ ಸಕ್ಕರೆ ಬೆರೆಸಿರಿ. ಜೊತೆಗೆ ದ್ರಾಕ್ಷಿ, ಗೋಡಂಬಿ, ಏಲಕ್ಕಿ ಪುಡಿ ಇತ್ಯಾದಿ ಬೆರೆಸಿರಿ. ಇದರಿಂದ ಸಣ್ಣ ಉಂಡೆ ಮಾಡಿ ರೋಲ್ಸ್ ಆಗಿ ಸುರುಳಿ ಸುತ್ತಿಕೊಳ್ಳಿ. ಇದನ್ನು ಕೊಬ್ಬರಿ ತುರಿಯಲ್ಲಿ ಹೊರಳಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಅತಿಥಿಗಳಿಗೆ ಸವಿಯಲು ಕೊಡಿ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ