ಸಾಮಾನ್ಯವಾಗಿ ಮನುಷ್ಯನ ಸ್ವಭಾವ ಬದಲಾಗುವುದಿಲ್ಲ. ಆದರೆ ವ್ಯಕ್ತಿಯೊಬ್ಬ ಮದುವೆಯಾಗುತ್ತಿದ್ದಂತೆ, ಆತ/ಆಕೆ ತನ್ನ ಸಂಗಾತಿಯ ಸ್ವಭಾವಕ್ಕೆ ತಕ್ಕಂತೆ ಬದಲಾಗಬೇಕು. ಆಗಲೇ ದಾಂಪತ್ಯದಲ್ಲಿ ಮಾಧುರ್ಯ ಇರುತ್ತದೆ. ಇಲ್ಲದಿದ್ದರೆ ತಮ್ಮ ಸ್ವಭಾವ, ಅಭ್ಯಾಸಗಳು ಮತ್ತು ವರ್ತನೆಯ ಬಗ್ಗೆ ಹಠಮಾರಿತನದ ಧೋರಣೆ ಹೊಂದಿರುವುದರಿಂದ ದಾಂಪತ್ಯದಲ್ಲಿ ಮನಸ್ತಾಪದ ಸ್ಥಿತಿ ಉಂಟಾಗುತ್ತದೆ.
ನಿಮಗೂ ಈ ಸ್ಥಿತಿ ಬರಬಾರದು ಎಂದರೆ ಅದಕ್ಕಾಗಿ ಈ ಅಭ್ಯಾಸಗಳನ್ನು ತೊರೆಯಿರಿ :
ಮದುವೆಗೂ ಮುಂಚೆ ನೀವು ಯಾವಾಗ ಬೇಕೊ ಆಗ ಮಲಗುವುದು, ಏಳುವುದು ಮಾಡುತ್ತಿದ್ದರೆ, ಮದುವೆಯ ಬಳಿಕ ಸಂಗಾತಿಯ ಮಲಗುವ, ಏಳುವ ಸಮಯಕ್ಕೆ ಬದ್ಧರಾಗಬೇಕಾಗುತ್ತದೆ. ತಡ ರಾತ್ರಿ ಮಲಗುವ ಹಾಗೂ ಬೆಳಗ್ಗೆ ತಡವಾಗಿ ಏಳುವ ಅಭ್ಯಾಸ ಬದಲಿಸಿಕೊಳ್ಳಬೇಕು. ಗಂಡ ಹೆಂಡತಿ ಏಕಕಾಲಕ್ಕೆ ಮಲಗಿದರೆ, ಬೆಳಗ್ಗೆ ಏಕಕಾಲಕ್ಕೆ ಏಳಬಹುದು.? ಮದುವೆಗೂ ಮುನ್ನ ನೀವೆಷ್ಟೇ ಕೋಪಿಷ್ಟ ಅಥವಾ ಹಠಮಾರಿತನದ ಸ್ವಭಾವದವರಾಗಿದ್ದರೂ ಮದುವೆಯ ಬಳಿಕ ಸಂಗಾತಿಯ ಖುಷಿಗಾಗಿ ನಿಮ್ಮ ಸ್ವಭಾವವನ್ನು ಶಾಂತಗೊಳಿಸಬೇಕು. ಹಠಕ್ಕೆ ಕಟ್ಟುಬೀಳುವ ಪ್ರವೃತ್ತಿಯನ್ನು ಬಿಟ್ಟುಬಿಡಬೇಕು. ಸಂಗಾತಿಯ ಇಚ್ಛೆಯನ್ನು ಗೌರವಿಸಬೇಕು. ನೀವು ನಿಮ್ಮ ಹಠದ ಮೇಲೆ ನಿಯಂತ್ರಣ ಹೊಂದಲು ಸಾಧ್ಯವಾಗದಿದ್ದರೆ ದಾಂಪತ್ಯದಲ್ಲಿ ಮಾಧುರ್ಯ ಉಳಿಯುವುದಿಲ್ಲ.
ಮದುವೆಗೂ ಮುನ್ನ ನೀವು ಆಹಾರಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಅಭ್ಯಾಸಗಳನ್ನು ಹೊಂದಿರಬಹುದು. ಮದುವೆಯ ಬಳಿಕ ಸಂಗಾತಿಯ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರಲ್ಲಿಯೇ ಹಿತವಿದೆ. ಆಹಾರದ ಕುರಿತಂತೆ ನಿಮ್ಮದೇ ಆದ ಇಷ್ಟ ಕಷ್ಟಗಳು ಇರಬಹುದು. ಸಂಗಾತಿಗಾಗಿ ನಿಮಗೆ ಅದರಲ್ಲಿ ಬದಲಾವಣೆ ತಂದುಕೊಳ್ಳಬೇಕು.
ಮದುವೆಗೂ ಮುನ್ನ ನೀವು ಯಾವುದೇ ಕೆಲಸ ಮಾಡದೇ ಇದ್ದಿರಬಹುದು ಅಥವಾ ಮಾಡುವ ಅವಶ್ಯಕತೆ ಇಲ್ಲದಿರಬಹುದು. ಆದರೆ ಮದುವೆಯ ಬಳಿಕ ಇಬ್ಬರೂ ಮನೆಗೆಲಸಗಳಲ್ಲಿ ಪರಸ್ಪರ ಕೈ ಜೋಡಿಸಬೇಕು. ಗಂಡ ತಾನು ಪುರುಷ ಎನ್ನುವ ಅಹಂನ್ನು ತೊರೆಯಬೇಕಾಗುತ್ತದೆ. ಮನೆಯ ಯಾವುದೇ ಕೆಲಸ ಕೇಳಲ್ಲ, ಅದನ್ನು ಮಾಡಲು ಸಂಕೋಚ ಅನಿಸಬಾರದು.
ಮದುವೆಗೂ ಮುನ್ನ ನೀವು ನಿಮ್ಮಿಚ್ಛೆಗೆ ತಕ್ಕಂತೆ ಶಾಪಿಂಗ್ ಮಾಡುತ್ತಿದ್ದಿರಬಹುದು. ಆದರೆ ಮದುವೆಯ ಬಳಿಕ ಸಂಗಾತಿಯ ಅಭಿರುಚಿ ಆಸಕ್ತಿಗಳನ್ನು ಗಮನಿಸಬೇಕು. ಇದರಿಂದ ಪರಸ್ಪರ ಪ್ರೀತಿ ಹೆಚ್ಚುತ್ತದೆ.
ಮದುವೆಗೆ ಮುನ್ನ ನೀವೆಷ್ಟೇ ಸ್ವಾರ್ಥಿ ಆಗಿರಬಹುದು. ಆದರೆ ಮದುವೆಯ ಬಳಿಕ ನೀವು ಆ ಸ್ವಭಾವ ಬಿಟ್ಟು, ಸಂಗಾತಿಯ ಬಗ್ಗೆ ಯೋಚಿಸಬೇಕು. ಅವರ ಭಾವನೆಗಳನ್ನು ಗೌರವಿಸಬೇಕು. ನನ್ನದೇ ಎಲ್ಲಕ್ಕೂ ಉತ್ತಮ ಎನ್ನುವ ಪ್ರವೃತ್ತಿಯನ್ನು ಬಿಟ್ಟುಬಿಡಬೇಕು. ಸಂಗಾತಿ ನನಗಿಂತ ಕಡಿಮೆ ಎಂದು ಎಂದೂ ಭಾವಿಸಬೇಡಿ.
ಮದುವೆಗೂ ಮುನ್ನ ನೀವು ನಿಮ್ಮ ಫ್ರೆಂಡ್ಸ್ ಜೊತೆಗೆ ಎಷ್ಟೇ ಮೋಜು ಮಜಾ ಮಾಡಿರಬಹುದು. ಆದರೆ ಮದುವೆಯ ನಂತರ ನಿಮ್ಮ ಈ ಸ್ವಭಾವಕ್ಕೆ ಕಡಿವಾಣ ಹಾಕಬೇಕು. ಏಕೆಂದರೆ ನೀವೀಗ ಏಕಾಂಗಿ ಅಲ್ಲ, ನಿಮಗೊಬ್ಬ ಸಂಗಾತಿ ಇದ್ದಾರೆ ಅವರ ಖುಷಿಗೆ ಖುಷಿ ಸೇರಿಸಬೇಕು. ಅವರೊಂದಿಗೆ ಸಮಯ ಕಳೆಯುವುದರಲ್ಲಿಯೇ ನಿಮ್ಮ ಖುಷಿ ಅಡಗಿದೆ.
ಮದುವೆಗೂ ಮುನ್ನ ನೀವು ಅದೆಷ್ಟೋ ಸಲ ಧೂಮಪಾನ ಅಥವಾ ಮದ್ಯಪಾನ ಮಾಡಿರಬಹುದು. ಮದುವೆಯ ಬಳಿಕ ಸಂಗಾತಿಗೆ ನಿಮ್ಮ ಆ ಅಭ್ಯಾಸ ಇಷ್ಟವಾಗದಿದ್ದರೆ ನೀವು ಅದನ್ನು ಬಿಟ್ಟುಬಿಡಲೇ ಬೇಕಾಗುತ್ತದೆ. ಅದರಲ್ಲಿಯೇ ದಾಂಪತ್ಯದ ಖುಷಿ ಅಡಗಿದೆ. ಧೂಮಪಾನ ಮದ್ಯಪಾನ ಅಥವಾ ಯಾವುದೇ ದುಶ್ಚಟ ತೊರೆದು ನೋಡಿ, ಜೀವನ ಅದೆಷ್ಟೋ ಸುಂದರ ಎನ್ನುವುದರ ಅರಿವು ನಿಮಗಾಗುತ್ತದೆ.
ಮದುವೆಗೂ ಮೊದಲು ನಿಮಗೆ ಬಾಯ್ ಫ್ರೆಂಡ್ ಅಥವಾ ಗರ್ಲ್ ಫ್ರೆಂಡ್ ಇದ್ದಿರಬಹುದು. ಮದುವೆಯ ಬಳಿಕ ನೀವು ಅವರಿಂದ ದೂರ ಇರಲೇಬೇಕು. ಇಲ್ಲದಿದ್ದರೆ ದಾಂಪತ್ಯ ಮಾಧುರ್ಯಹೀನ ಎನಿಸುತ್ತದೆ. ಸಂಗಾತಿಯ ಬಗ್ಗೆ ಸದಾ ನಿಷ್ಠೆಯಿಂದಿರಿ.
ಮದುವೆಗೂ ಮುನ್ನ ನೀವು ಅದೆಷ್ಟೋ ವಾದ ಮಾಡಿರಬಹುದು. ಆದರೆ ಮದುವೆ ನಂತರ ಆ ಸ್ವಭಾವ ಬದಲಿಸಿಕೊಳ್ಳಬೇಕು. ಕಡ್ಡಿಯನ್ನು ಗುಡ್ಡ ಮಾಡುವುದರಲ್ಲಿ ಯಾವುದೇ ಲಾಭವಿಲ್ಲ. ಅದು ವಿವಾದಕ್ಕೆ ಜನ್ಮ ನೀಡುತ್ತದೆ. ಕೆಲವೊಮ್ಮೆ ಮೌನವೇ ಉತ್ತಮ ಎನಿಸುತ್ತದೆ. ಸಂದರ್ಭ ಬಂದಾಗ ನಿಮ್ಮ ಮನದ ಮಾತನ್ನು ಸಂಗಾತಿಯ ಮುಂದೆ ಹೇಳಿಕೊಳ್ಳಬಹುದು.
ಕೆಲವರು ಬೇರೆಯವರನ್ನು ಅವಶ್ಯಕವಾಗಿ ಟೀಕಿಸುತ್ತಾರೆ ಹಾಗೂ ಬೇಕಿಲ್ಲದೆಯೇ ಸಲಹೆ ಕೊಡುತ್ತಾರೆ. ಇದೇ ಅವರ ಸ್ವಭಾವದ ಭಾಗವಾಗಿ ಬಿಡುತ್ತದೆ. ಆದರೆ ಮದುವೆಯ ಬಳಿಕ ಸಂಗಾತಿಯನ್ನು ಟೀಕಿಸುವುದನ್ನು ಮಾಡಬೇಡಿ. ಆತ/ಆಕೆ ಸಹ ತಿಳಿವಳಿಕೆಯುಳ್ಳವನು/ಳು. ಅದರ ಬಗ್ಗೆ ಪ್ರಶ್ನೆ ಮಾಡಬೇಡಿ.
ನೀವು ಮದುವೆಗೂ ಮುನ್ನ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದಿದವರಾಗಿದ್ದರೆ, ನಿಮಗೆ ನಿಮ್ಮ ಕೋಣೆಯನ್ನು ವ್ಯವಸ್ಥಿತವಾಗಿಡುವ ಅಭ್ಯಾಸ ಇರುವುದಿಲ್ಲ. ಬಟ್ಟೆಗಳು ಹಾಗೂ ಪುಸ್ತಕಗಳು ಎಲ್ಲೆದರಲ್ಲಿ ಬಿದ್ದಿರುತ್ತವೆ. ಓದು ಮುಗಿದ ಬಳಿಕ ನಿಮ್ಮ ಈ ಸ್ವಭಾವ/ಹವ್ಯಾಸ ಬದಲಾಗಿರುವುದಿಲ್ಲ. ಆದರೆ ಈ ಪ್ರವೃತ್ತಿ ತಪ್ಪು. ಹೀಗಾಗಿ ನಿಮ್ಮ ಕೋಣೆಯನ್ನು ವ್ಯವಸ್ಥಿತವಾಗಿಡುವ ಅಭ್ಯಾಸ ರೂಢಿಸಿಕೊಳ್ಳಿ. ಇಲ್ಲದಿದ್ದರೆ ಅನಾವಶ್ಯಕವಾಗಿ ಜಗಳಗಳಾಗುವ ಸಾಧ್ಯತೆ ಇರುತ್ತದೆ.
ನೀವು ಯಾವುದೊ ಉನ್ನತ ಹುದ್ದೆಯಲ್ಲಿರಬಹುದು, ನಿಮ್ಮ ಅಧೀನಸ್ಥರಿಗೆ ಆದೇಶಾತ್ಮಕ ಸ್ವರದಲ್ಲಿ ಹೇಳುತ್ತಿರಬಹುದು. ಮನೆಯಲ್ಲೂ ಅದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ಏಕೆಂದರೆ ನಿಮ್ಮ ಹೆಂಡತಿ/ಗಂಡ ನಿಮ್ಮ ಅಧೀನ ಸಿಬ್ಬಂದಿ ಅಲ್ಲ ಎನ್ನುವುದು ನೆನಪಿನಲ್ಲಿರಲಿ. ಮನೆಯಲ್ಲಿ ಇಬ್ಬರ ದರ್ಜೆ ಸಮಾನವಾಗಿರುತ್ತದೆ. ಹೀಗಾಗಿ ಅಧಿಕಾರಿಯ ದರ್ಪ ಸಂಗಾತಿಯ ಮೇಲೆ ತೋರಿಸಬೇಡಿ.
ಕೆಲವು ಜನರು ಪ್ರತಿಯೊಬ್ಬರ ಬಗ್ಗೆ ಟೀಕೆ ಮಾಡುತ್ತಾರೆ. ಅವರ ಕೆಲಸ ಕಾರ್ಯಗಳಲ್ಲಿ ಮೀನಾಮೇಷ ಎಣಿಸುತ್ತಾರೆ. ಆದರೆ ಮದುವೆಯಾದ ಬಳಿಕ ಅವರು ತಮ್ಮೊಳಗಿನ ಸ್ವಭಾವವನ್ನು ಬದಲಿಸಿಕೊಳ್ಳಬೇಕು. ನಕಾರಾತ್ಮಕ ಭಾವವನ್ನು ಬಿಟ್ಟುಕೊಡಬೇಕು. ಒಂದು ವೇಳೆ ದಂಪತಿಗಳು ಪರಸ್ಪರರ ಕೊರತೆಗಳನ್ನು ಎಣಿಸತೊಡಗಿದರೆ ಅವರ ಖುಷಿಗಳು ಹೇಗೆ ತಾನೇ ಉಳಿಯಬಲ್ಲವು?
ಹೀಗಾಗಿ ಪರಸ್ಪರರ ಒಳ್ಳೆಯ ಗುಣಗಳನ್ನು ಹೊಗಳಲು ಕಲಿತುಕೊಳ್ಳಿ.
ಕೆಲವರ ಸ್ವಭಾವವೇನೆಂದರೆ, ಅವರು ಯಾವಾಗಲೂ ತಮ್ಮದೇ ಸರಿ, ಬೇರೆಯವರದು ತಪ್ಪು ಎಂದು ತಿಳಿಯುತ್ತಾರೆ. ಆದರೆ ಮದುವೆಯಾದ ಬಳಿಕ ಈ ಸ್ವಭಾವವನ್ನು ಬದಲಿಸಬೇಕು. ನಿಮ್ಮದಷ್ಟೇ ಸರಿಯಲ್ಲ, ಸಂಗಾತಿಯದ್ದು ಸರಿಯಾಗಿರಬಹುದು ಎಂದು ಯೋಚಿಸಿ.
ಮದುವೆಯ ಮುನ್ನ ಕೆಲಸದ ಕಾರಣದಿಂದ ನೀವು ಎಷ್ಟೇ ಬಿಝಿಯಾಗಿದ್ದಿರಬಹುದು. ಆದರೆ ಮದುವೆಯ ಬಳಿಕ ನೀವು ನಿಮ್ಮ ಸಂಗಾತಿಗೆ ಸಾಕಷ್ಟು ಸಮಯ ಹೊಂದಿಸಲೇಬೇಕು. ಸಂಗಾತಿಯ ಆಸೆ ಆಕಾಂಕ್ಷೆಗಳನ್ನು ನಿರ್ಲಕ್ಷಿಸಬೇಡಿ.
ಕೆಲವು ಜನರ ಅಭ್ಯಾಸ ಏನಾಗಿರುತ್ತದೆಂದರೆ, ಅವರು ಎದುರಿಗಿನ ವ್ಯಕ್ತಿಯ ಮೇಲೆ ಆರಿಸಿಕೊಳ್ಳಲು ನೋಡುತ್ತಾರೆ. ಗಂಡ ಹೆಂಡತಿ ಒಬ್ಬರು ಇನ್ನೊಬ್ಬರ ಮೇಲೆ ಪ್ರಾಬಲ್ಯ ಸಾಧಿಸುವುದರ ಬಗ್ಗೆ ಯೋಚಿಸುತ್ತಾರೆ. ಇದು ಒಳ್ಳೆಯ ಪ್ರವೃತ್ತಿಯಲ್ಲ. ಅದು ಇಬ್ಬರಲ್ಲೂ ತಿರಸ್ಕಾರದ ಭಾವನೆ ಮೂಡಿಸುತ್ತದೆ.
ನೀವು ಸಿಡುಕು ಸ್ವಭಾವದವರಾಗಿದ್ದರೆ, ಮದುವೆಯ ಬಳಿಕ ನಿಮ್ಮ ಈ ಸ್ವಭಾವವನ್ನು ಬದಲಿಸಿಕೊಳ್ಳಬೇಕು. ಏಕೆಂದರೆ ಸಿಡುಕುತನ ನಿಮ್ಮಿಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಬಹುದು.
ನಿಮ್ಮಲ್ಲಿ ಧೈರ್ಯ ಇರದೇ, ನೀವು ಸದಾ ಅಧೈರ್ಯದಿಂದ ಇರುತ್ತಿದ್ದರೆ, ಮದುವೆಯ ನಂತರ ನಿಮ್ಮ ಈ ಸ್ವಭಾವವನ್ನು ಬದಲಿಸಿಕೊಳ್ಳಬೇಕು. ಸಂಗಾತಿಯ ಮಾತುಗಳನ್ನು ಗಮನವಿಟ್ಟು ಆಲಿಸಿ ಹಾಗೂ ಆ ಬಳಿಕವೇ ಪ್ರತಿಕ್ರಿಯೆ ಕೊಡಿ. ಕಾರಣವಿಲ್ಲದೆಯೇ ವಿರೋಧ ವ್ಯಕ್ತಪಡಿಸಬೇಡಿ.
ಬಹಳಷ್ಟು ಜನರು ಸಂದೇಹ ಸ್ವಭಾವದವರಾಗಿರುತ್ತಾರೆ. ಅವರು ಪ್ರತಿಯೊಂದು ವಿಷಯವನ್ನು, ಸಂಬಂಧವನ್ನು ಸಂದೇಹದ ದೃಷ್ಟಿಯಿಂದಲೇ ಕಾಣುತ್ತಾರೆ. ಮದುವೆಯ ಬಳಿಕ ಈ ಸ್ವಭಾವವನ್ನು ಬದಲಿಸಿಕೊಳ್ಳಿ. ಏಕೆಂದರೆ ಗಂಡ ಹೆಂಡತಿ ಒಬ್ಬರು ಇನ್ನೊಬ್ಬರ ಮೇಲೆ ಸಂದೇಹಪಡುತ್ತ ಹೋದರೆ ದಾಂಪತ್ಯದ ರೈಲು ಸುಗಮವಾಗಿ ಸಾಗುವುದಿಲ್ಲ. ದಾಂಪತ್ಯದ ಅಡಿಪಾಯ ವಿಶ್ವಾಸದ ಮೇಲೆ ನಿಂತಿರುತ್ತದೆ.
– ಕಿರಣ್ ಕುಮಾರ್