ನೂರು ಜನ್ಮಕು….. ನೂರಾರು ಜನ್ಮಕೂ’ `ಗರನೆ ಗರಗರನೆ…….’ `ಮಿಂಚಾಗಿ ನೀನು ಇರಲು…….’ ಮೇಲಿನ ಮಾಧುರ್ಯ ತುಂಬಿದ ಹಾಡುಗಳನ್ನು ನೀವು ಟಿ.ವಿಯಲ್ಲಿ ನೋಡುತ್ತಿದ್ದಾಗ, ಅದೆಷ್ಟು ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಯಾರಿರಬಹುದು ಆ ಕೊರಿೂಗ್ರಾಫರ್‌ ಎಂದು ನಿಮ್ಮ ಮನಸ್ಸಿನಲ್ಲಿ ಪ್ರಶ್ನೆ ಮೂಡದೇ ಇರದು.

ಇಂತಹ ಅದೆಷ್ಟೋ ಹಾಡುಗಳನ್ನು ನೃತ್ಯ ನಿರ್ದೇಶನ ಮಾಡಿದ ಕೀರ್ತಿ ಮದನ್‌ ಹರಿಣಿ ದಂಪತಿಗಳಿಗೆ ಸಲ್ಲುತ್ತದೆ.ಹರಿಣಿ ಹೆಜ್ಜೆ ಗುರುತು……

ಹರಿಣಿ ಮೂಲತಃ ಪುತ್ತೂರಿನವರು. ಬಾಲ್ಯದಿಂದಲೇ ಸಂಗೀತಾಸಕ್ತಿ. ಎರಡು ವರ್ಷದಲ್ಲಿಯೇ ಅವರಮ್ಮ ಸಂಗೀತದ ಮೇಷ್ಟ್ರು ಬಳಿ ಕರೆದುಕೊಂಡು ಹೋಗಿ, ನನ್ನ ಮಗಳಿಗೆ ಸಂಗೀತ ಕಲಿಸಿ ಎಂದಿದ್ದರಂತೆ. ಇಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಹೇಗೆ ಕಲಿಸುವುದು ಎಂದು ಸಂಗೀತ ಮೇಷ್ಟ್ರಿಗೆ ಗೊಂದಲವಾಗಿತ್ತಂತೆ. ಹೀಗೆ ಶುರುವಾದ ಸಂಗೀತದ ಕಲಿಕೆ ಕಾಲೇಜು ಕಟ್ಟೆ ಏರುವತನಕ ಮುಂದುವರಿಯಿತು. ಎರಡು ವರ್ಷ ಕಾಲೇಜು ಶಿಕ್ಷಣ ಮುಗಿಯುತ್ತಿದ್ದಂತೆ ನೃತ್ಯಪ್ರೇಮಿ ಮದನ್‌ ಜೊತೆ ಮದುವೆ. ಮದನ್‌ ಆ ಮುಂಚೆಯೇ ಮಲೆಯಾಳಂ ಚಿತ್ರರಂಗದಲ್ಲಿ ಕೊರಿಯೊಗ್ರಾಫರ್‌ ಆಗಿ ಛಾಪು ಮೂಡಿಸಿದ್ದರು.

20201202085652_0C0A1440 (1)

ಮದುವೆಯ ಬಳಿಕ ಮದನ್‌ ಹರಿಣಿ ಮದುವೆಯ ಬಳಿಕ ಬೆಂಗಳೂರಿಗೆ ಬರುತ್ತಾರೆ. ಆರೂರು ಪಟ್ಟಾಭಿಯವರ `ನಾದ ಸುರಭಿ’ ಚಿತ್ರದ ತ್ಯಾಗರಾಜರ ಕೀರ್ತನೆಯೊಂದಕ್ಕೆ ಈ ಜೋಡಿಗೆ ಕೊರಿಯೊಗ್ರಾಫ್‌ ಮಾಡುವ ಅವಕಾಶ ಸಿಕ್ಕಿತು. ಬಳಿಕ `ಏಳು ಕೋಟಿ ಮಾರ್ತಾಂಡ, ಗೆಜ್ಜೆನಾದ’ ಚಿತ್ರಗಳಿಗೆ ನೃತ್ಯ ನಿರ್ದೇಶನದ ಅವಕಾಶ ಸಿಕ್ಕಿತು.

ಮೊದಲ ಚಿತ್ರದಲ್ಲಿನ ನೃತ್ಯ ನಿರ್ದೇಶನದಿಂದ ಮದನ್‌ ಹರಿಣಿ ಜೋಡಿಗೆ ಸಾಕಷ್ಟು ಆತ್ಮವಿಶ್ವಾಸ ಮೂಡಿತು. ಅದಾದ ಬಳಿಕ ನಾಗತಿಹಳ್ಳಿಯವರ `ಅಮೆರಿಕ ಅಮೆರಿಕ’ ಚಿತ್ರದ `ನೂರು ಜನ್ಮಕು, ನೂರಾರು ಜನ್ಮಕೂ…’ ಹಾಡುವ ಅವರಿಗೆ ಹೊಸದೊಂದು ಛಾಪು ಮೂಡಿಸಿತು. ಅಲ್ಲಿಂದ ಮುಂದೆ ಅವರ ಸಿನಿಪಯಣ ಹೇಗೆ ಸಾಗಿತೆಂದರೆ, ಹಿಂದೆ ನೋಡದಂತೆ ಮಾಡಿತು. ಒಂದಾದ ನಂತರ ಒಂದು ಚಿತ್ರಗಳು ಸಿಗುತ್ತಾ ಹೋದವು.

ಕನ್ನಡಿಗರಿಗೆ ಆದ್ಯತೆ

ಮದನ್‌ ಹರಿಣಿ ಸಿನಿಮಾರಂಗದಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ಸಮೂಹ ನೃತ್ಯಗಳಿಗಾಗಿ ಹುಡುಗಿಯರನ್ನು ಚೆನ್ನೈನಿಂದ ಕರೆಸಲಾಗುತ್ತಿತ್ತು. ನಾವೇಕೆ ನಮ್ಮ ನೆಲದ ಹುಡುಗಿಯರಿಗೆ ಅವಕಾಶ ಕೊಡಬಾರದು ಎಂದು ದಂಪತಿಗಳು ಯೋಚಿಸುತ್ತಿದ್ದರು. ಆದರೆ ಆಗ ಸಿನಿಮಾ ಇಂಡಸ್ಟ್ರೀಗೆ ಹುಡುಗಿಯರು ಬರಲು ಹಿಂದೇಟು ಹಾಕುತ್ತಿದ್ದರು. ಅಂತಹ ಸಂದರ್ಭದಲ್ಲಿ ಹಾಸನ, ಅರಸೀಕೆರೆ ಮುಂತಾದ ಕಡೆ ದಂಪತಿಗಳು ಸುತ್ತಾಡಿ ಆರ್ಕೆಸ್ಟ್ರಾದಲ್ಲಿ ನೃತ್ಯ ಮಾಡುತ್ತಾ ಹಾಡುತ್ತಿದ್ದ ಹುಡುಗಿಯರಿಗೆ ತಮ್ಮ ತಂಡ ಸೇರಲು ವಿನಂತಿಸಿಕೊಂಡರು. “ನಾವು ಗಂಡ ಹೆಂಡತಿ ಎಂಬ ಕಾರಣಕ್ಕೆ ಬಹಳಷ್ಟು ಹುಡುಗಿಯರು ಬರಲು ಒಪ್ಪಿಕೊಂಡರು, ಎಂದು ಹರಿಣಿ ಹೇಳುತ್ತಾರೆ.

ಪತಿಯೇ ಗುರು ಮಾರ್ಗದರ್ಶಕ

ನಾನು ಸಿನಿಮಾ ಉದ್ಯಮಕ್ಕೆ ಬರಲು ಪತಿಯೇ ಮುಖ್ಯ ಪ್ರೇರಣೆ. ಅವರೇ ನನ್ನ ಗುರು, ಮಾರ್ಗದರ್ಶಕ ಎಲ್ಲ ಆಗಿದ್ದಾರೆ. ಅವರಿಂದಲೇ ನಾನು ನೃತ್ಯ ನಿರ್ದೇಶನದ ಎಲ್ಲ ಪಟ್ಟಗಳನ್ನು ಕಲಿತುಕೊಂಡೆ, ಈಗಲೂ ಕಲಿಯುತ್ತಿದ್ದೇನೆ. ನಮ್ಮದು ಒಟ್ಟಾರೆ ಟೀಮ್ ವರ್ಕ್‌. ಎಲ್ಲರೂ ಸೇರಿಸಿ ಒಂದು ಹಾಡಿಗೆ ಸುಂದರ ರೂಪ ಕೊಡಲು ಪ್ರಯತ್ನ ಮಾಡುತ್ತೇವೆ, ಎಂದು ಹರಿಣಿ ಹೇಳುತ್ತಾರೆ.

ಸತತ ಕಲಿಕೆ ನಿರಂತರ ಪರಿಶ್ರಮ

20201214022326_00003 (1)

ಮದನ್‌ ಹರಿಣಿ ಜೋಡಿ ಕನ್ನಡ ಸಿನಿ ಪ್ರಪಂಚದಲ್ಲಿ ಮೋಡಿ ಮಾಡಲು ಮುಖ್ಯ ಕಾರಣ ಅವರಿಬ್ಬರ ನಿರಂತರ ಪರಿಶ್ರಮ ಹಾಗೂ ಕಲಾವಿದರನ್ನು ಗೌರವಿಸುವ ರೀತಿ. 1988ರಿಂದ ಈವರೆಗಿನ ನಿರಂತರ ಪಯಣಕ್ಕೆ ನಿರ್ದೇಶಕರು ಅವರಿಗೆ ಮತ್ತೆ ಮತ್ತೆ ತಮ್ಮ ಚಿತ್ರಗಳ ಹಾಡುಗಳಿಗೆ ಪುನರ್‌ ಅವಕಾಶ ಕೊಡುತ್ತಿರುವುದು ಕಾರಣವಾಗಿದೆ. ಮದನ್‌ ಹರಿಣಿ ಜೋಡಿಯ ಹೆಸರು ಈಗ ರಾಜನ್ ನಾಗೇಂದ್ರ ಜೋಡಿಯ ಹಾಗೆ ಚಿತ್ರರಂಗದಲ್ಲಿ ಜನಜನಿತವಾಗಿದೆ.

10 ಭಾಷೆಗಳು 2000 ಹಾಡುಗಳು

ಮದನ್‌ ಹರಿಣಿ ಜೋಡಿ 32 ವರ್ಷಗಳ ಸಿನಿ ಪಯಣದಲ್ಲಿ 800ಕ್ಕೂ ಹೆಚ್ಚು ಸಿನಿಮಾಗಳ 2000ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿರುವುದು ಅವರ ಜನಪ್ರಿಯತೆಯ ಮಾನದಂಡಕ್ಕೆ ಸಾಕ್ಷಿ. ಕನ್ನಡ, ತುಳು, ಕೊಡವ, ಕೊಂಕಣಿ, ಹಿಂದಿ, ಬೆಂಗಾಲಿ ಸೇರಿದಂತೆ 10 ಭಾಷೆಗಳಲ್ಲಿ ಅವರು ತಮ್ಮ ನೃತ್ಯ ನಿರ್ದೇಶನದ ಕಂಪು ಬೀರಿದ್ದಾರೆ. ಇತ್ತೀಚೆಗಷ್ಟೇ ಅವರು ಲಂಬಾಣಿ ಭಾಷೆಯಲ್ಲೂ ಒಂದು ಹಾಡಿಗೆ ನೃತ್ಯ ನಿರ್ದೇಶನ ಮಾಡಿ 10ನೇ ಭಾಷೆಯ ಗರಿ ಮುಡಿಸಿಕೊಂಡರು.

ಸಿನಿಮಾ ಒಂದು ಹಬ್ಬ

ಸಿನಿಮಾ ಹಾಡುಗಳ ಶೂಟಿಂಗ್‌ಗಾಗಿ ಮದನ್‌ ಹರಿಣಿ ದಂಪತಿಗಳು ಸೂಟ್‌ ಕೇಸ್‌ ಹಿಡಿದು ಬೇರೆ ಬೇರೆ ಕಡೆ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಶೂಟಿಂಗ್‌ ಸಮಯದಲ್ಲಿಯೇ ಹಬ್ಬಗಳು ಬಂದರೆ, ಅಲ್ಲಿಯೇ ತಮ್ಮ ತಂಡದೊಂದಿಗೆ ಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಾರೆ. ಒಬ್ಬಟ್ಟಿನ ಸವಿ ಸವಿಯುತ್ತಾರೆ.  `ನಿಸರ್ಗ ಸಿರಿಯ ನಡುವೆ ಹಬ್ಬದ ಮೆರುಗು ಪಡೆದುಕೊಳ್ಳುವುದು ನಮಗೆ ಬಹಳ ಖುಷಿ ಕೊಡುತ್ತದೆ,’ ಎನ್ನುತ್ತಾರೆ ಹರಿಣಿ.

ಕೆಲಸಕ್ಕಾಗಿ ಜಗಳನಾ

20201214022326_00001 (1)

ದಂಪತಿಗಳಾಗಿ ಎಂದೂ ಜಗಳವಾಡುವುದಿಲ್ಲ. ಒಂದು ಹಾಡನ್ನು ಉತ್ತಮ ದೃಶ್ಯವಾಗಿಸಲು ನಾವು ಒಮ್ಮೊಮ್ಮೆ ಪರಸ್ಪರ ಜಗಳ ಆಡುತ್ತೇವೆ. ಆದರೆ ಅದನ್ನು ಮನೆಗೆ ಮಾತ್ರ ತೆಗೆದುಕೊಂಡು ಬರಬಾರದೆಂದು ಅದೆಷ್ಟೋ ವರ್ಷಗಳ ಹಿಂದೆ ಕರಾರು ಮಾಡಿಕೊಂಡಿದ್ದೇವೆ. ಅದಿನ್ನೂ ಮುಂದುವರಿದಿದೆ. ನಿರ್ದೇಶಕರು ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ, ಅವರಿಗೆ ಇಷ್ಟವಾಗುವ ರೀತಿಯಲ್ಲಿ ಪೂರೈಸಬೇಕೆನ್ನುವುದೇ ನಮ್ಮ ಯೋಚನೆ, ಎನ್ನುವುದು ಹರಿಣಿ ಅವರ ಅಭಿಪ್ರಾಯ.

ಹಾಡು ಒಂದು ಆಮಂತ್ರಣ

20201214022326_00004

ಸಿನಿಮಾದಲ್ಲಿ ಹಾಡೊಂದು ಸುಂದರ ಸಂಯೋಜನೆಯ ಮೂಲಕ ಜನಪ್ರಿಯವಾದರೆ ಚಿತ್ರ ಅರ್ಧ ಗೆದ್ದಂತೆ. ಆ ಹಾಡು ಟಿ.ವಿಯಲ್ಲಿ ರೇಡಿಯೊದಲ್ಲಿ ಪದೇ ಪದೇ ಬರುತ್ತಿದ್ದರೆ, ಪ್ರೇಕ್ಷಕರಿಗೆ ಚಿತ್ರಮಂದಿರಗಳಿಗೆ ಬರಲು ಅದು ಆಹ್ವಾನ ಕೊಟ್ಟ ಹಾಗೆ. ಆ ಒಂದು ಪ್ರಯತ್ನದಲ್ಲಿ ನಾವು ಸತತ ಟೀಮ್ ವರ್ಕ್‌ ರೂಪದಲ್ಲಿ ಕೆಲಸ ಮಾಡುತ್ತಲೇ ಇರುತ್ತೇವೆ, ಎನ್ನುತ್ತಾರೆ ಆ ದಂಪತಿಗಳು.

ಹರಿಣಿಯರು ಆರಂಭದಿಂದಲೇ ಕಥೆ ಕಾದಂಬರಿ ಓದುವ ಹವ್ಯಾಸವುಳ್ಳರಾಗಿದ್ದರು. ಒಂದು ಹಾಡಿನ ಭಾವನೆ ಏನು, ಅದು ಯಾವ ರೀತಿಯ ಹೆಜ್ಜೆ, ಸೆಟ್ ಬಯಸುತ್ತದೆ ಎನ್ನುವುದು ಅವರಿಗೆ ಚಕ್ಕನೇ ಹೊಳೆದುಬಿಡುತ್ತದೆ. ಅದನ್ನೇ ಅವರು ಹಾಡಿಗೆ ಸಂಯೋಜಿಸುತ್ತಾರೆ.

ಹಾರೈಕೆ ಆಶೀರ್ವಾದ ಲಂಬಾಣಿ ಸಿನಿಮಾದ ಹಾಡಿನ ಶೂಟಿಂಗ್‌ ಸಂದರ್ಭದಲ್ಲಿ ಮಧ್ಯ ವಯಸ್ಸಿನ ಮಹಿಳೆಯೊಬ್ಬರೇ ಕೈಯಲ್ಲಿ ಫೋಟೊವೊಂದನ್ನು ಹಿಡಿದುಕೊಂಡು ಬಂದಿದ್ದು, ಅದು ಈ ದಂಪತಿಗಳ ಕುರಿತು ಆ ಮಹಿಳೆ ಬರೆದ ಲೇಖನವೊಂದರ ಫೋಟೋ ಆಗಿತ್ತು, ನೀವಿಲ್ಲಿ ಬರುತ್ತಿರುವುದು ಗೊತ್ತಾಗಿ, ನಿಮ್ಮನ್ನು ಭೇಟಿಯಾಗಲೆಂದು ಬಂದೆ, ಎಂದು ಹೇಳಿದರು.

ಸಿನಿಮಾ ಶೂಟಿಂಗ್‌ಗೆ ಹಿರಿಯ ಕಲಾವಿದರು ಬಂದರೆ ಮದನ್‌ ಹರಿಣಿ ದಂಪತಿಗಳನ್ನು ಕಂಡು, ನೀವಿಬ್ಬರೂ ಆದೆಷ್ಟು ಕ್ರಿಯಾಶೀಲರಾಗಿದ್ದೀರಿ, ನಿಮ್ಮ ಈ ಚಟುವಟಿಕೆ ಹೀಗೆಯೇ ಮುಂದುವರಿಯುತ್ತಿರಲಿ ಎಂದು ಶುಭ ಹಾರೈಸಿ ಹೋಗುತ್ತಾರೆ.

ಮಗಳೇ ವಿಮರ್ಶಕಿ

ಮಗಳು ಹಿಮಾ `ಹೂ ಮಳೆ’ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿ ಪ್ರಶಸ್ತಿ ಪಡೆದಿದ್ದಳು. ಅವಳು ಅಪ್ಪ ಅಮ್ಮನ ನೃತ್ಯ ನಿರ್ದೇಶನದ ಹಾಡುಗಳ ಪ್ರಥಮ ಟೀಕಾಕಾರ್ತಿ. ಅದು ಹೀಗಿರಬೇಕು, ಹೀಗಿದ್ದರೆ ಚೆಂದ ಎಂದೆಲ್ಲ ಹೇಳುತ್ತಾಳೆ. ಎಂಎನ್‌ಸಿ ಕಂಪನಿಯೊಂದಕ್ಕೆ ಎಚ್‌.ಆರ್‌ ಆಗಿ ಕೆಲಸ ಮಾಡುವ ಆಕೆ, ಬಿಡುವಿದ್ದಾಗ, ಅಪ್ಪ ಅಮ್ಮನಿಗೆ ಸಹಾಯಕಳಾಗಿ ಹೋಗಿ ತನ್ನದೇ ಆದ ಐಡಿಯಾ ಕೊಡುತ್ತಾಳೆ.

ಲಾಕ್‌ ಡೌನ್‌ನಲ್ಲಿ ಮಗಳ ಜೊತೆ

20201214021507_00001 (1)

ಹಾಡುಗಳ ಶೂಟಿಂಗ್‌ಗಾಗಿ ಮದನ್‌ ಹರಿಣಿ ಆಗಾಗ ಊರೂರು ಸುತ್ತುತ್ತಿರುತ್ತಾರೆ. ಹೀಗಾಗಿ ಮಗಳ ಜೊತೆ ಹೆಚ್ಚು ಸಮಯ ಕಳೆಯಲು ಆಗುತ್ತಿರಲಿಲ್ಲ. ಆ ಒಂದು ಖೇದ ಅವರಿಗೆ ಇದ್ದೇ ಇತ್ತು. ಆದರೆ ಕೊರೋನಾ ಲಾಕ್‌ ಡೌನ್‌ ಸಮಯದಲ್ಲಿ ಅನಿವಾರ್ಯವಾಗಿ ಮನೆಯಲ್ಲಿ ಇರಬೇಕಾಗಿ ಬಂದುದು ಅವರಿಗೆ ಬಹಳ ಖುಷಿ ಕೊಟ್ಟಿತು. ಮಗಳಿಗೆ ಪರಿಪೂರ್ಣ ಸಮಯ ಕೊಡಲು ಸಾಧ್ಯವಾಯಿತು. ತಮಗಿಷ್ಟವಾದ ಆಹಾರಗಳನ್ನು ತಯಾರಿಸಿಕೊಂಡು ತಿನ್ನಲು ಅವಕಾಶ ಮಾಡಿಕೊಟ್ಟಿತು.

ನಿಮ್ಮದೇ ಚೌಕಟ್ಟು ಹಾಕಿಕೊಳ್ಳಿ

ಇಂದಿನ ಆಧುನಿಕ ಪೀಳಿಗೆಯ ಯುವತಿಯರಿಗೆ ನೀವು ಕೊಡು ಸಲಹೆ ಏನು? ಎಂದು ಕೇಳಿದಾಗ, ಇಂದಿನ ಯುವತಿಯರು ಯಾವುದೇ ಕ್ಷೇತ್ರಕ್ಕಾದರೂ ಬನ್ನಿ, ಬರುವಾಗ ಧೈರ್ಯದ ಮೂಟೆ ಹೊತ್ತುಕೊಂಡೇ ಬನ್ನಿ. ಅದರ ಜೊತೆಗೆ ನಿಮಗೆ ನೀವೇ ಬೇಲಿ ಹಾಕಿಕೊಳ್ಳಿ, ಚೌಕಟ್ಟು ಹಾಕಿಕೊಳ್ಳಿ. ಅದನ್ನು ದಾಟುವ ಧೈರ್ಯ ಬರಲಾರದು. ಕೇವಲ ನೃತ್ಯ ಬಂದರೆ ಸಾಲದು, ತಂತ್ರಜ್ಞಾನ ಗೊತ್ತಿರಬೇಕು. ಕ್ಯಾಮೆರಾ ಆ್ಯಂಗಲ್, ಎಡಿಟಿಂಗ್‌ ಎಲ್ಲ ತಿಳಿದಿರಬೇಕು, ಎಂಬುದು ಹರಿಣಿ ಕೊಡುವ ಸಲಹೆ.

– ಅಶೋಕ ಚಿಕ್ಕಪರಪ್ಪಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ