ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ, ಅಸಿಸ್ಟೆಂಟ್ ರೀಪ್ರೊಡಕ್ಷನ್ ಕ್ಷೇತ್ರ ಸೇರಿದಂತೆ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿ, ಪದ್ಮಶ್ರೀ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿರುವ ಕನ್ನಡದ ಹೆಮ್ಮೆಯ ಮಹಿಳೆ ಡಾ. ಕಾಮಿನಿ ಎ. ರಾವ್. ವೈದ್ಯ ವೃತ್ತಿಯಲ್ಲಿ ಅಪಾರ ಸಾಧನೆ ಮಾಡಿದ್ದರೂ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ಕಾಮಿನಿ ರಾವ್ ಈಗ ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದ್ದಾರೆ, ಅವರು ಸ್ಯಾಂಡಲ್ ವುಡ್‌ನಲ್ಲಿ.
ವೈದ್ಯಕೀಯ ಮತ್ತು ಸಮಾಜ ಸೇವೆಯ ಜೊತೆಗೆ ಮನರಂಜನಾ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿದ್ದಾರೆ. ಅಧಿಕೃತವಾಗಿ ಈ ಸಂಸ್ಥೆ ಇನ್ನೇನು ಕಾರ್ಯಾರಂಭ ಮಾಡಲಿದೆ. ಇದರ ಪೂರ್ವಭಾವಿಯಾಗಿ ಮತ್ತು ಪೂರ್ವಿ ಪ್ರೊಡಕ್ಷನ್ಸ್ ಕುರಿತು ಒಂದಿಷ್ಟು ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಮನರಂಜನಾ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಡಾ. ಕಾಮಿನಿ ಎ. ರಾವ್ ಅವರ ಸೊಸೆ ಪೂಜಾ ಸಿದ್ಧಾರ್ಥ್ ರಾವ್ ರವರು ನೀಡಿದ ಐಡಿಯಾ ಮೇರೆಗೆ ಈ ಸಾಹಸಕ್ಕೆ ಸಿದ್ಧರಾಗಿದ್ದಾರೆ. ಇದಕ್ಕೆ ಡಾ. ಕಾಮಿನಿ ಎ. ರಾವ್ ರವರ ಪತಿ ಡಾ. ಎ.ಎಸ್. ಅರವಿಂದ್ ಸಹ ಸಹಕಾರ ನೀಡುತ್ತಿದ್ದಾರೆ. ಸಿನಿಮಾ ಅನ್ನೋ ವೇದಿಕೆ ಮೂಲಕ ಸಾಮಾನ್ಯ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಒಂದಷ್ಟು ಪ್ರಯೋಗಗಳನ್ನು ಈ ಸಂಸ್ಥೆ ಮೂಲಕ ಮಾಡಲಿದ್ದಾರೆ.
ಸಾಮಾಜಿಕ ಬದಲಾವಣೆಯನ್ನೇ ಮೂಲ ಧ್ಯೇಯವಾಗಿಸಿಕೊಂಡು ಸಾಮಾನ್ಯ ಜನರ ಮೈಂಡ್ ಸೆಟ್‌ನ್ನು ಪೂರ್ವಿ ಪ್ರೊಡಕ್ಷನ್ಸ್ ಮೂಲಕ ಧನಾತ್ಮಕ ಕೊಡುಗೆ ನೀಡುವುದು ನಮ್ಮ ಮುಖ್ಯ ಉದ್ದೇಶ. ಈ ಮೂಲಕ ಉಜ್ವಲ ರಾಷ್ಟ್ರ ನಿರ್ಮಾಣಕ್ಕೂ ಇದರಿಂದ ಅನುಕೂಲವಾಗಲಿದೆ.
ಡಾ. ಕಾಮಿನಿ ಎ. ರಾವ್ಸ್ ಮಾಸ್ಟರ್ ಕ್ಲಾಸ್
ಡಾ. ಕಾಮಿನಿ ರಾವ್ಸ್ ಮಾಸ್ಟರ್ ಕ್ಲಾಸ್ ಕೇಲ ಸಾಮಾನ್ಯ ಸಂಗತಿಗಳಿಂದ ಕೂಡಿರದೇ, ಸ್ಛೂರ್ತಿದಾಯಕ ಅಂಶಗಳ ಜೊತೆಗೆ, ಯಶಸ್ಸಿನ ಏಣಿ ಏರುವುದಕ್ಕೂ ಇದು ರಹದಾರಿಯಾಗಿದೆ. ಸಾಮಾನ್ಯನಿಂದ ಅಸಾಮಾನ್ಯನೆಡೆಗೆ ಡಾ. ಕಾಮಿನಿ ರಾವ್ಸ್ ಮಾಸ್ಟರ್‌ಕ್ಲಾಸ್‌ನಲ್ಲಿ ಮಾಹಿತಿ ನೀಡಲಾಗುತ್ತದೆ.
ಇದರ ಜೊತೆಗೆ ಪೂರ್ವಿ ರಾಗ ಹರಟೆ ಎಂಬ ಸ್ಛೂರ್ತಿದಾಯಕ ಕಾರ್ಯಕ್ರಮನ್ನೂ ಆಯೋಜಿಸುತ್ತಿದ್ದು, ಒಂದಿಷ್ಟು ಗಾಯಕರು ಮತ್ತು ಸಂಗೀತಗಾರರನ್ನು ಆಯ್ದುಕೊಂಡು ಅವರಿಂದ ವೇದಿಕೆ ಕಾರ್ಯಕ್ರಮವನ್ನೂ ಮಾಡಲಿದ್ದಾರೆ. ಹಾಸ್ಯದ ಜೊತೆಗೆ ಹಾಡು ಹರಟೆಯೂ ಇಲ್ಲಿ ಪ್ರಧಾನವಾಗಿರಲಿದೆ.
ಪೂರ್ವಿ ಪ್ರೊಡಕ್ಷನ್ಸ್ ಸಾಮಾಜಿಕ ಕಳಕಳಿಯುಳ್ಳ ಮತ್ತು ಜನಸಾಮಾನ್ಯರಿಗೂ ಹತ್ತಿರವೆನಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಧನಾತ್ಮಕ ಅಂಶಗಳಿರುವ ಮತ್ತು ಎಲ್ಲರಿಗೂ ಅನ್ವಯವಾಗುವಂತಹ ಸಿನಿಮಾಗಳನ್ನು ನಿರ್ಮಿಸುವುದು ಸಂಸ್ಥೆಯ ಗುರಿ.
ಆನ್ ಲೈನ್‌ನಲ್ಲೇ ಸರ್ಟಿಫಿಕೆಟ್ ಕೋರ್ಸ್
ಡಾ. ಕಾಮಿನಿ ಎ. ರಾವ್ ವೈದ್ಯಕೀಯ ಕ್ಷೇತ್ರದಲ್ಲಿರುವುದರಿಂದ ಇತರರಿಗೂ ಅನುಕೂಲ ಆಗಲಿ ಎಂಬ ಕಾರಣಕ್ಕೆ, ಆನ್ ಲೈನ್ ತರಗತಿಗಳನ್ನೂ ಆಯೋಜಿಸುತ್ತಿದ್ದಾರೆ. ರೀಪ್ರೊಡಕ್ಟಿವ್ ಮೆಡಿಸಿನ್, ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಕುರಿತ ತರಗತಿಗಳನ್ನು ಹಮ್ಮಿಕೊಂಡಿದ್ದಾರೆ. ಸಾಕಷ್ಟು ನುರಿತ ವೈದ್ಯರುಗಳು ಈ ಬಗ್ಗೆ ಆನ್ ಲೈನ್‌ನಲ್ಲಿಯೇ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಹಾಗೇ ಕಲಿತ ಕೋರ್ಸ್‌ಗಳ ಸರ್ಟಿಫಿಕೇಟ್ ಸಹ ನೀಡಲಿದೆ ಸಂಸ್ಥೆ. ಗ್ರಾಮೀಣ ಮತ್ತು ನಗರ ಪ್ರದೇಶದವರ ಜೊತೆಗೆ ವಿಶ್ವದಾದ್ಯಂತ ಎಲ್ಲೇ ಇದ್ದರೂ ಈ ಕೋರ್ಸ್ ಮಾಡಬಹುದು.