ರಿಂಗ್ ರೋಡ್ ಶುಭ' ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ಮಾಧ್ಯಮದ ಮೂಲಕ ಎಲ್ಲರಿಗೂ ತಿಳಿದೇ ಇದೆ. ಇದೊಂದು ನೈಜ ಘಟನೆಯಾಧಾರಿತ ಚಿತ್ರ. ಹೆಣ್ಣುಮಕ್ಕಳೇ ಸೇರಿ ಮಾಡಿರುವ ಚಿತ್ರವಿದು. ಕ್ಯಾಮೆರಾ ಹಿಂದಿರುವ ಎಲ್ಲ ತಂತ್ರಜ್ಞರೂ ಹೆಣ್ಣುಮಕ್ಕಳೇ. ನಿರ್ಮಾಪಕಿ, ನಿರ್ದೇಶಕಿ, ಸಂಭಾಷಣೆ, ಸಂಗೀತ ಎಲ್ಲ ವಿಭಾಗಗಳಲ್ಲೂ ಹೆಣ್ಣುಮಕ್ಕಳನ್ನೇ ಕಾಣುವಂಥ ವಿಶೇಷ ಚಿತ್ರವಿದು.
ಬಹುಶಃ ಸಿನಿಮಾ ಇತಿಹಾಸದಲ್ಲೇ ಇಂಥ ಪ್ರಯತ್ನ ಮೊದಲು ಎನ್ನಬಹುದು. ನಿರ್ದೇಶಕಿಯರು, ನಟಿಯರು ಬಹಳ ಇದ್ದಾರೆ. ಆದರೆ ಬರೀ ಮಹಿಳೆಯರೇ ಸೇರಿ ಒಂದು ಚಿತ್ರ ಮಾಡುವುದಿದೆಯಲ್ಲ ಅದು ನಿಜಕ್ಕೂ ಹೆಮ್ಮೆ ತರುವಂಥ ವಿಷಯ. ಆದರೆ ಅರು ಯಾರು ಹಾಗೆಂದುಕೊಳ್ಳದೇ ನಾವೊಂದು ಸಿನಿಮಾ ಮಾಡಿದ್ದೇವೆ. ಹೆಣ್ಣುಮಕ್ಕಳು ಅಂತ ನಾವೇನು ಯಾವುದೇ ಮಡಿವಂತಿಕೆ ಇಟ್ಟುಕೊಳ್ಳದೇ ನೈಜ ಕಥೆಗೆ ಏನು ಬೇಕೊ ಎಲ್ಲವನ್ನೂ ಬಹಳ ಬೋಲ್ಡ್ ಆಗಿಯೇ ಕೊಟ್ಟಿದ್ದೇವೆ ಎನ್ನುತ್ತಾರೆ.
`ರಿಂಗ್ ರೋಡ್ ಶುಭ' ಚಿತ್ರದ ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ನಿಂದ ಬಂದರು. ಕನ್ನಡದಲ್ಲಿ `ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರದಲ್ಲಿ ಅಸೋಸಿಯೇಟಾಗಿ ಕೆಲಸ ಮಾಡಿದ್ದಿದೆ.
`ರಿಂಗ್ ರೋಡ್ ಶುಭ' ಚಿತ್ರಕ್ಕಾಗಿ ತಮ್ಮದೇ ಆದ ಪ್ರತಿಭಾವಂತ ತಂಡವನ್ನು ಕಟ್ಟಿಕೊಂಡು ಹೊಸ ಸಾಹಸ ಮಾಡಲು ಹೊರಟಾಗ ಎಲ್ಲರಿಂದಲೂ ಪ್ರೋತ್ಸಾಹ ಸಿಕ್ಕಿತು. ನಿರ್ಮಾಪಕಿ ರಜನಿ ರವೀಂದ್ರದಾಸ್ ಯಾವುದೇ ವಿಷಯಕ್ಕೂ ತಲೆ ಹಾಕದೇ ನೀವು ಮಾಡಿ ನಾನಿದ್ದೇನೆ ಎಂದು ಹಣ ಹಾಕಿದ್ದಾರೆ. `ರಿಂಗ್ ರೋಡ್ ಶುಭ' ಚಿತ್ರದ ಪ್ರೋಮೋ ಈಗಾಗಲೇ ಹೊರಬಿದ್ದಿದ್ದು ಸಾಕಷ್ಟು ಕುತೂಹಲ ಹುಟ್ಟಿಸುತ್ತಿದೆ. ರೇಖಾರಾಣಿಯರ ಪಂಚಿಂಗ್ ಡೈಲಾಗ್ಸ್ ಎಲ್ಲರನ್ನೂ ಆಕರ್ಷಿಸುತ್ತಿದೆ.
ವಾಣಿ ಹರಿಕೃಷ್ಣ ಸಂಗೀತ ನಿರ್ದೇಶಕಿಯಾಗಿ ಚಿತ್ರಕ್ಕೆ ಹಾಡುಗಳನ್ನು ಒದಗಿಸುವುದರ ಜೊತೆಗೆ ತಂಡದ ಜೊತೆಗೆ ಆಸಕ್ತಿಯಿಂದ ಎಲ್ಲ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. `ರಿಂಗ್ ರೋಡ್ ಶುಭ' ಚಿತ್ರದ ಆಡಿಯೋ ಬಿಡುಗಡೆ ಪಬ್‌ವೊಂದರಲ್ಲಿ ಮೇಳೈಸಿದಾಗ ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿತ್ತು. ಸಿನಿಮಾರಂಗದಲ್ಲಿ ದೊಡ್ಡ ಸಮಾರಂಭ ಮಾಡಿ ಜನರೆದುರು ಹಾಡುಗಳ ಸಿ.ಡಿ. ಬಿಡುಗಡೆ ಮಾಡೋದು ವಾಡಿಕೆ. ಆದರೆ ತಂಡದ ಮಹಿಳಾಮಣಿಗಳು ನಾವೇ ಬೇರೆ, ನಮ್ಮ ಸ್ಟೈಲೇ ಬೇರೇ ಎನ್ನುವಂತೆ ವಿಭಿನ್ನವಾಗಿ ಸಿ.ಡಿ. ಬಿಡುಗಡೆ ಮಾಡಿದರು. ಮಾಧ್ಯಮದವರು ಮೊದಲಿನಿಂದಲೂ ನಮ್ಮನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಈ ಸಂತಸವನ್ನು ಅವರೊಂದಿಗೆ ಹಂಚಿಕೊಳ್ಳಬೇಕಿತ್ತು. ಹಾಗೆಯೇ ಅವರ ಮೂಲಕ ಮನೆ ಮನೆ ಬಾಗಿಲಿಗೆ ಸುದ್ದಿ ತಲುಪುತ್ತೆ. ಅಷ್ಟೇ ಅಲ್ಲ, ಇಲ್ಲಿರುವ ಎಲ್ಲರೂ ನಮ್ಮ ಸ್ನೇಹಿತರೇ ಆಗಿರೋದ್ರಿಂದ ಇದೊಂದು ರೀತಿಯ ಗೆಟ್ ಟು ಗೆದರ್ ಅಂತ ಇಲ್ಲಿ ಮಾಡಲಾಯ್ತು ಎಂದು ಸಾಹಿತ್ಯ, ಸಂಭಾಷಣೆ ರಚಿಸಿರುವ ರೇಖಾರಾಣಿ ಪಂಚಿಂಗ್ ಮಾತನ್ನು ತೇಲಿಬಿಟ್ಟರು.
`ರಿಂಗ್ ರೋಡ್ ಶುಭ'ದಲ್ಲಿ ವಿಶೇಷವಾಗಿ ನಟಿಸಿರುವ ನಾಯಕ ದುನಿಯಾ ವಿಜಯ್ ಒಂದು ರೂಪಾಯಿ ಸಂಭಾವನೆ ಪಡೆದು ನಟಿಸಿರುವುದಷ್ಟೇ ಅಲ್ಲ, ಹೆಣ್ಣುಮಕ್ಕಳೇ ಸೇರಿ ಮಾಡಿರುವ ಈ ಚಿತ್ರದಲ್ಲಿ ನಟಿಸುವುದಕ್ಕೆ ಹೆಮ್ಮೆಯಾಗಿತ್ತು ಎನ್ನುತ್ತಾರೆ.
ನಿರ್ದೇಶಕಿ ಪ್ರಿಯಾ ಬೆಳ್ಳಿಯಪ್ಪ ಅವರನ್ನು ಹುಲಿಗೆ ಹೋಲಿಸುವ ವಿಜಯ್ ಜೋಡಿಯಾಗಿ ನಿಖಿತಾ ನಟಿಸಿದ್ದಾಳೆ.