ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ, ಅಸಿಸ್ಟೆಂಟ್‌ ರೀಪ್ರೊಡಕ್ಷನ್‌ ಕ್ಷೇತ್ರ ಸೇರಿದಂತೆ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿ, ಪದ್ಮಶ್ರೀ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿರುವ ಕನ್ನಡದ ಹೆಮ್ಮೆಯ ಮಹಿಳೆ ಡಾ. ಕಾಮಿನಿ ಎ. ರಾವ್‌. ವೈದ್ಯ ವೃತ್ತಿಯಲ್ಲಿ ಅಪಾರ ಸಾಧನೆ ಮಾಡಿದ್ದರೂ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿರುವ ಕಾಮಿನಿ ರಾವ್ ‌ಈಗ ತಮ್ಮ ಕಾರ್ಯವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದ್ದಾರೆ, ಅವರು ಸ್ಯಾಂಡಲ್ ವುಡ್‌ನಲ್ಲಿ.

ವೈದ್ಯಕೀಯ ಮತ್ತು ಸಮಾಜ ಸೇವೆಯ ಜೊತೆಗೆ ಮನರಂಜನಾ ಕ್ಷೇತ್ರಕ್ಕೂ ಕಾಲಿಡುತ್ತಿದ್ದಾರೆ. ಪೂರ್ವಿ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿದ್ದಾರೆ. ಅಧಿಕೃತವಾಗಿ ಈ ಸಂಸ್ಥೆ ಇನ್ನೇನು ಕಾರ್ಯಾರಂಭ ಮಾಡಲಿದೆ. ಇದರ ಪೂರ್ವಭಾವಿಯಾಗಿ ಮತ್ತು ಪೂರ್ವಿ ಪ್ರೊಡಕ್ಷನ್ಸ್ ಕುರಿತು ಒಂದಿಷ್ಟು ಮಾಹಿತಿ ನೀಡಲು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು.

ಮನರಂಜನಾ ಕ್ಷೇತ್ರದ ಮೂಲಕ ಸಾಮಾಜಿಕ ಬದಲಾವಣೆ ತರುವ ನಿಟ್ಟಿನಲ್ಲಿ ಡಾ. ಕಾಮಿನಿ ಎ. ರಾವ್ ‌ಅವರ ಸೊಸೆ ಪೂಜಾ ಸಿದ್ಧಾರ್ಥ್‌ ರಾವ್ ರವರು ನೀಡಿದ ಐಡಿಯಾ ಮೇರೆಗೆ ಈ ಸಾಹಸಕ್ಕೆ ಸಿದ್ಧರಾಗಿದ್ದಾರೆ. ಇದಕ್ಕೆ ಡಾ. ಕಾಮಿನಿ ಎ. ರಾವ್ ರವರ ಪತಿ ಡಾ. ಎ.ಎಸ್‌. ಅರವಿಂದ್‌ ಸಹ ಸಹಕಾರ ನೀಡುತ್ತಿದ್ದಾರೆ. ಸಿನಿಮಾ ಅನ್ನೋ ವೇದಿಕೆ ಮೂಲಕ ಸಾಮಾನ್ಯ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಒಂದಷ್ಟು ಪ್ರಯೋಗಗಳನ್ನು ಈ ಸಂಸ್ಥೆ ಮೂಲಕ ಮಾಡಲಿದ್ದಾರೆ.

ಸಾಮಾಜಿಕ ಬದಲಾವಣೆಯನ್ನೇ ಮೂಲ ಧ್ಯೇಯವಾಗಿಸಿಕೊಂಡು ಸಾಮಾನ್ಯ ಜನರ ಮೈಂಡ್‌ ಸೆಟ್‌ನ್ನು ಪೂರ್ವಿ ಪ್ರೊಡಕ್ಷನ್ಸ್ ಮೂಲಕ ಧನಾತ್ಮಕ ಕೊಡುಗೆ ನೀಡುವುದು ನಮ್ಮ ಮುಖ್ಯ ಉದ್ದೇಶ. ಈ ಮೂಲಕ ಉಜ್ವಲ ರಾಷ್ಟ್ರ ನಿರ್ಮಾಣಕ್ಕೂ ಇದರಿಂದ ಅನುಕೂಲವಾಗಲಿದೆ.

ಡಾ. ಕಾಮಿನಿ ಎ. ರಾವ್ಸ್ ಮಾಸ್ಟರ್‌ ಕ್ಲಾಸ್‌

1 (3)

ಡಾ. ಕಾಮಿನಿ ರಾವ್ಸ್ ಮಾಸ್ಟರ್‌ ಕ್ಲಾಸ್‌ ಕೇಲ ಸಾಮಾನ್ಯ ಸಂಗತಿಗಳಿಂದ ಕೂಡಿರದೇ, ಸ್ಛೂರ್ತಿದಾಯಕ ಅಂಶಗಳ ಜೊತೆಗೆ, ಯಶಸ್ಸಿನ ಏಣಿ ಏರುವುದಕ್ಕೂ ಇದು ರಹದಾರಿಯಾಗಿದೆ. ಸಾಮಾನ್ಯನಿಂದ ಅಸಾಮಾನ್ಯನೆಡೆಗೆ ಡಾ. ಕಾಮಿನಿ ರಾವ್ಸ್ ಮಾಸ್ಟರ್‌ಕ್ಲಾಸ್‌ನಲ್ಲಿ ಮಾಹಿತಿ ನೀಡಲಾಗುತ್ತದೆ.

ಇದರ ಜೊತೆಗೆ ಪೂರ್ವಿ ರಾಗ ಹರಟೆ ಎಂಬ ಸ್ಛೂರ್ತಿದಾಯಕ ಕಾರ್ಯಕ್ರಮನ್ನೂ ಆಯೋಜಿಸುತ್ತಿದ್ದು, ಒಂದಿಷ್ಟು ಗಾಯಕರು ಮತ್ತು ಸಂಗೀತಗಾರರನ್ನು ಆಯ್ದುಕೊಂಡು ಅವರಿಂದ ವೇದಿಕೆ ಕಾರ್ಯಕ್ರಮವನ್ನೂ ಮಾಡಲಿದ್ದಾರೆ. ಹಾಸ್ಯದ ಜೊತೆಗೆ ಹಾಡು ಹರಟೆಯೂ ಇಲ್ಲಿ ಪ್ರಧಾನವಾಗಿರಲಿದೆ.

ಪೂರ್ವಿ ಪ್ರೊಡಕ್ಷನ್ಸ್ ಸಾಮಾಜಿಕ ಕಳಕಳಿಯುಳ್ಳ ಮತ್ತು ಜನಸಾಮಾನ್ಯರಿಗೂ ಹತ್ತಿರವೆನಿಸುವ ಸಿನಿಮಾಗಳನ್ನು ನಿರ್ಮಾಣ ಮಾಡಿ ಸಮಾಜಕ್ಕೆ ನೀಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಧನಾತ್ಮಕ ಅಂಶಗಳಿರುವ ಮತ್ತು ಎಲ್ಲರಿಗೂ ಅನ್ವಯವಾಗುವಂತಹ ಸಿನಿಮಾಗಳನ್ನು ನಿರ್ಮಿಸುವುದು ಸಂಸ್ಥೆಯ ಗುರಿ.

ಆನ್‌ ಲೈನ್‌ನಲ್ಲೇ ಸರ್ಟಿಫಿಕೆಟ್‌ ಕೋರ್ಸ್‌

ಡಾ. ಕಾಮಿನಿ ಎ. ರಾವ್ ವೈದ್ಯಕೀಯ ಕ್ಷೇತ್ರದಲ್ಲಿರುವುದರಿಂದ ಇತರರಿಗೂ ಅನುಕೂಲ ಆಗಲಿ ಎಂಬ ಕಾರಣಕ್ಕೆ, ಆನ್‌ ಲೈನ್ ತರಗತಿಗಳನ್ನೂ ಆಯೋಜಿಸುತ್ತಿದ್ದಾರೆ. ರೀಪ್ರೊಡಕ್ಟಿವ್ ‌ಮೆಡಿಸಿನ್‌, ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಕುರಿತ ತರಗತಿಗಳನ್ನು ಹಮ್ಮಿಕೊಂಡಿದ್ದಾರೆ. ಸಾಕಷ್ಟು ನುರಿತ ವೈದ್ಯರುಗಳು ಈ ಬಗ್ಗೆ ಆನ್‌ ಲೈನ್‌ನಲ್ಲಿಯೇ ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಅಷ್ಟೇ ಅಲ್ಲ ಹಾಗೇ ಕಲಿತ ಕೋರ್ಸ್‌ಗಳ ಸರ್ಟಿಫಿಕೇಟ್‌ ಸಹ ನೀಡಲಿದೆ ಸಂಸ್ಥೆ. ಗ್ರಾಮೀಣ ಮತ್ತು ನಗರ ಪ್ರದೇಶದವರ ಜೊತೆಗೆ ವಿಶ್ವದಾದ್ಯಂತ ಎಲ್ಲೇ ಇದ್ದರೂ ಈ ಕೋರ್ಸ್‌ ಮಾಡಬಹುದು.

ನಮ್ಮ ಉದ್ದೇಶ ಈ ಪೂರ್ವಿ ಪ್ರೊಡಕ್ಷನ್ಸ್ ಸಂಸ್ಥೆಯನ್ನು ತೆರೆಯುತ್ತಿರುವ ಮುಖ್ಯ ಉದ್ದೇಶ, ಸಿನಿಮಾ ನಿರ್ಮಾಣ, ಡಾಕ್ಯುಮೆಂಟರಿಗಳು, ಹರಟೆ ರೀತಿಯ ಕಾರ್ಯಕ್ರಮಗಳನ್ನು ಮತ್ತು ಎಜುಕೇಶನ್‌ ಸಿನಿಮಾಗಳನ್ನು ನಿರ್ಮಾಣ ಮಾಡಲು. ಈ ಒಂದು ಉದ್ದೇಶವನ್ನು ನೀವೆಲ್ಲರೂ ಈಡೇರಿಸಲು ಸಹಕರಿಸುತ್ತೀರಿ ಎಂದು ಭಾವಿಸಿದ್ದೇನೆ, ಎನ್ನುತ್ತಾರೆ ಡಾ. ಕಾಮಿನಿ ಎ. ರಾವ್.

`ಕಾಮಿನಿ ಎ. ರಾವ್ ‌ನನ್ನ ಅತ್ತೆ. ನಾನು ಮದುವೆಯಾಗಿ ಈ ಮನೆಗೆ ಬಂದು ಹತ್ತು ವರ್ಷಗಳಾದವು. ಇಷ್ಟು ದಿನದಲ್ಲಿ ನನ್ನ ಅತ್ತೆ ಸುಮ್ಮನೇ ಕುಳಿತಿದ್ದು ಯಾವತ್ತೂ ನೋಡಿಲ್ಲ. ಹೀಗಿರುವಾಗ ಕೊರೋನಾ ಕಾರಣಕ್ಕಾಗಿ ನಿರ್ಮಾಣಗೊಂಡ ಪರಿಸ್ಥಿತಿ ಎಂಥವರನ್ನೂ ಮನೆಯಲ್ಲಿ ಬಂಧಿಸಿತು. ಆನ್‌ ಲೈನ್‌, ಓಟಿಟಿಗಳನ್ನು ನೋಡಿ ಸಾಕಾಗಿತ್ತು.

AG7I0083-(1)

ಅದೊಂದು ದಿನ `ಅಮ್ಮಾ , ಸುಮ್ಮನೆ ಕೂತು ಬೇಸರವಾಗುತ್ತಿದೆ’ ಎಂದೆ. ಆ ದಿನ ಹತ್ತಾರು ನಿಮಿಷಗಳ ಕಾಲ ಅತ್ತೆ ಬದುಕಿನ ಬಗ್ಗೆ ಮಾತಾಡಿದರು. ಅವರ ಮಾತುಗಳು ತುಂಬಾ ಅಮೂಲ್ಯವೆನಿಸಿತು. ಅವರ ಈ ಹಿತ ನುಡಿಗಳು, ಮಾರ್ಗದರ್ಶನದ ಮಾತುಗಳು ತುಂಬಾ ಅಮೂಲ್ಯವೆನಿಸಿತು. ಅವರ ಈ ಹಿತ ನುಡಿಗಳು, ಮಾರ್ಗದರ್ಶನದ ಮಾತುಗಳು ನನಗಷ್ಟೇ ದಕ್ಕಿದರೆ ಹೇಗೆ ಜಗತ್ತಿಗೆ ಯಾಕೆ ಪರಿಚಯಿಸಬಾರದು ಎಂಬ ಐಡಿಯಾ ಬಂದು ಈ ಕಾರಣಕ್ಕೆ ಶುರುವಾದ ಹೊಸ ಕಲ್ಪನೆ ಪೂರ್ವಿ ಪ್ರೊಡಕ್ಷನ್ಸ್ ಎನ್ನುತ್ತಾರೆ ಪೂಜಾ ಸಿದ್ಧಾರ್ಥ್‌ ರಾವ್‌. ನಾನು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಸಿನಿಮಾ ರಂಗ ನನಗೆ ತೀರಾ ಹತ್ತಿರ. ನಾನು ಬಸವನಗುಡಿ ನ್ಯಾಷನಲ್ ಹೈಸ್ಕೂಲ್‌, ಕಾಲೇಜಿನಲ್ಲಿ ಓದಿದನು. ಆಗಿನಿಂದಲೂ ಡಾ. ವಿಷ್ಣುವರ್ಧನ್‌ನನಗೆ ಆಪ್ತರಾಗಿದ್ದರು. ಆ ನಂತರ ಅಂಬರೀಶ್‌, ಡಾ. ರಾಜ್‌ ಕುಮಾರ್‌ ಕುಟುಂಬ ಸೇರಿದಂತೆ ಸಾಕಷ್ಟು ಜನರ ಒಡನಾಟ ಹೊಂದಿದ್ದೇನೆ. ನಮ್ಮ ಮನೆಯಲ್ಲಿ ಎಲ್ಲರೂ ಸಿನಿಮಾ ಪ್ರಿಯರು. ಈಗ ನೇರವಾಗಿ ಚಿತ್ರರಂಗದ ಜೊತೆಗೆ ಕೈ ಜೋಡಿಸಿದ್ದೇವೆ, ಎನ್ನುತ್ತಾರೆ ಡಾ. ಎ.ಎಸ್‌. ಅರವಿಂದ್‌.

ಈ ಲಾಕ್‌ ಡೌನ್‌ ಸಮಯದಲ್ಲಿ ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಆತಂಕ, ನಾಳೆ ಏನಾಗುತ್ತದೋ ಎನ್ನುವ ಭಯ ಕೆಲವರಿಗಾದರೆ ಇನ್ನೂ ಕೆಲವರು ಏನಾದರೂ ಉಪಯುಕ್ತವಾಗುವಂತೆ ಕೆಲಸ ಮಾಡೋಣ, ನಾಲ್ಕು ಜನರಿಗೆ ಸಹಾಯ ಮಾಡೋಣ ಎಂದು ಯೋಚಿಸುತ್ತಾರೆ. ಈ ಎರಡನೇ ಗುಂಪಿಗೆ ಸೇರುವವರು ಡಾ. ಕಾಮಿನಿ ರಾವ್ ‌ಮತ್ತು ಅವರ ಸೊಸೆ ಪೂಜಾ ಸಿದ್ಧಾರ್ಥ್‌ ರಾವ್‌. ಡೈನಿಂಗ್‌ ಟೇಬಲ್ ಟಾಕ್‌ನಿಂದ ಶುರುವಾಯಿತು. ಡಿಜಿಟಲ್ ಮೀಡಿಯಾ ಎಷ್ಟೊಂದು ಪ್ರಭಾವ ಬೀರುತ್ತದೆ, ಅದನ್ನು ಬಳಸಿ ನಾವು ಒಂದಷ್ಟು ಒಳ್ಳೆಯ ಕೆಲಸ ಮಾಡಿದರೆ ಹೇಗಿರುತ್ತದೆ ಎಂದು ಪೂಜಾ ಪ್ರಸ್ತಾವನೆ ಇಟ್ಟಾಗ ಖಂಡಿತಾ ಮಾಡು ಎಂದು ಪ್ರೋತ್ಸಾಹ ಕೊಟ್ಟರು ಕಾಮಿನಿ ರಾವ್‌. ನಿಮ್ಮಿಂದಲೇ ಶುರುವಾಗಲಿ ಅಂತ ಪೂಜಾ ವೈದ್ಯಕೀಯ ವೃತ್ತಿ ಜೊತೆ ಬೇರೆ ಪ್ರತಿಭೆಗಳಲ್ಲೂ ಪ್ರವೀಣೆಯಾಗಿರುವ ಅತ್ತೆ ಕಾಮಿನಿ ರಾವ್ ‌ಅವರನ್ನೇ ತೆರೆ ಮೇಲೆ ತರಬೇಕೆಂದು ಡಿಸೈಡ್‌ಮಾಡಿಬಿಟ್ಟರಂತೆ.

`ಹೌದು ನಮ್ಮ ಅತ್ತೆ ವೈದ್ಯಕೀಯ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರಲ್ಲಿ ಲಕ್ಷ್ಮಿ. ಸರಸ್ವತಿ ಇಬ್ಬರೂ ಅಡಗಿದ್ದಾರೆ. ಚೆನ್ನಾಗಿ ಮಾತನಾಡಬಲ್ಲರು. ಸಾಮಾನ್ಯರಲ್ಲಿ ಅಸಾಮಾನ್ಯ ಅಡಗಿರುತ್ತಾನೆ ಎಂದು ಗಾಢವಾಗಿ ನಂಬಿದ್ದಾರೆ. ನನ್ನಲ್ಲಿದ್ದ ಕೋಪವನ್ನು ಹೋಗಲಾಡಿಸಿ ತಿದ್ದಿ ತೀಡಿ ಹೊಸ ಮನುಷ್ಯಳನ್ನಾಗಿ ಮಾಡಿದ್ದು ನನ್ನ ಅತ್ತೆ, ಎಂದು ಪೂಜಾ ಹೇಳುತ್ತಾರೆ.

ನಿಮ್ಮ ಮುಂದಿನ ಹೆಜ್ಜೆ?

ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸೋದು, ಅವರಿಗೆ ಉದ್ಯೋಗ ಕಲ್ಪಿಸುವುದು. ನಮ್ಮ ಚಾರಿಟಿ ಸಂಸ್ಥೆ ತೊಂಬತ್ತು ವಿದ್ಯಾರ್ಥಿನಿಯರಿಂದ ಶುರುವಾಯಿತು. ಇಂದು ಮುನ್ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳು ವಿದ್ಯಾವಂತರಾಗಿ ಮನೆ ಬೆಳಗುತ್ತಿದ್ದಾರೆ. ಮನರಂಜನೆ ಕ್ಷೇತ್ರ ಪ್ರವೇಶದ ಬಗ್ಗೆ ಹೇಳಿ ಮಾಸ್ಟರ್‌ ಕ್ಲಾಸ್‌ ಎನ್ನುವ ಸಂದರ್ಶನ ಡಿಜಿಟಲ್ ಮೀಡಿಯಾದಲ್ಲಿ ಈಗಾಗಲೇ ಸಾಕಷ್ಟು ಸಂಚಲನ ಮೂಡಿಸಿದೆ. ಸಾಧಕರ ಸಂದರ್ಶನ ಅನೇಕರಲ್ಲಿ ಪ್ರೋತ್ಸಾಹ ಮೂಡಿಸಿದೆ. ಕಿರಣ್ ಮುಜುಂದಾರ್‌ರವರು ಈ ಮಟ್ಟಕ್ಕೆ ಬೆಳೆಯಲು ಅವರ ಪರಿಶ್ರಮ, ಧೈರ್ಯ, ನಿಶ್ಚಲತೆ ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ ಡಾ. ಕಾಮಿನಿ ರಾವ್ ‌ಸಂದರ್ಶನ ಮಾಡಿದ್ದಾರೆ. ಜನರಲ್ಲಿ ಸ್ಛೂರ್ತಿ ತುಂಬುವಂತಿದೆ. ಮುಂದಿನ ದಿನಗಳಲ್ಲಿ ಎಲೆಮರೆಯ ಕಾಯಿಯಂತೆ ಅಡಗಿರುವ ಪ್ರತಿಭೆಗಳನ್ನು ಹುಡುಕಿ ಹೊರತರುತ್ತೇವೆ. ಅಂತಹವರನ್ನೂ ಪರಿಚಯ ಮಾಡಿಸುತ್ತೇವೆ. ಇದೆಲ್ಲದರ ಜೊತೆ ಒಂದಷ್ಟು ಹರಟೆ, ಹಾಡು, ಮಾತುಗಳು ಸಿನಿಮಾ ರಂಗದಲ್ಲೂ ತೊಡಗಿಸಿಕೊಳ್ಳಲಿದ್ದೇವೆ. ಕೇವಲ ಬಿಸ್‌ನೆಸ್‌ ದೃಷ್ಟಿಯಿಂದ ಮಾಡುತ್ತಿಲ್ಲ. ಸಿನಿಮಾ ಮೂಲಕ ಜನರಿಗೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಪ್ರಯತ್ನಪಡುತ್ತೇವೆ. ಸ್ಟಾರ್‌ ಸಿನಿಮಾ ಬದಲು ಟ್ಯಾಲೆಂಟ್‌ ಇರುವ ಯುವಕ ಯುವತಿಯನ್ನು ಪ್ರೋತ್ಸಾಹಿಸುತ್ತೇವೆ. ಹೊಸಬರನ್ನು ಹಾಕಿ ಸಿನಿಮಾ ಮಾಡುತ್ತೇವೆ. ಮನೆ ಮಂದಿಯೆಲ್ಲ ಸೇರಿ ನೋಡುವಂತಹ ಚಿತ್ರ ಕೊಡುತ್ತೇವೆ ಎನ್ನುವ ಪೂಜಾ ಈಗಾಗಲೇ ಅದರ ಹುಡುಕಾಟದಲ್ಲಿ ತೊಡಗಿದ್ದಾರೆ.

– ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ