ಋತು ಅಂದು ಮಧ್ಯಾಹ್ನ ಅರುಣನಿಗೆ ಫೋನ್ ಮಾಡಿ ಸಂಜೆ ತನ್ನನ್ನು ಖಂಡಿತಾ ಬಂದು ಭೇಟಿಯಾಗಬೇಕೆಂದು ಒತ್ತಾಯಿಸಿದ್ದಳು.
“ಅರುಣ್, ಯಾಕೋ ನನ್ನ ಮನಸ್ಸು ಬಹಳ ಉದ್ವಿಗ್ನಗೊಂಡಿದೆ. ನೀನು ಆಫೀಸಿನಿಂದ ಹೊರಟು ಸೀದಾ ನನ್ನ ಫ್ಲಾಟ್‌ಗೆ ಬಂದುಬಿಡು. ನಾವಿಬ್ಬರೂ ಏಕಾಂತದಲ್ಲಿ ಹರಟೆ ಹೊಡೆದು ಬಹಳ ದಿನ ಆಗಿಹೋಯಿತು,” ಫೋನಿನಲ್ಲಿ ಋತುವಿನ ದನಿ ಕೇಳಿ ಅವಳು ತುಸು ಚಿಂತೆಗೊಳಗಾಗಿರುವುದನ್ನು ಅರುಣ್ ಗ್ರಹಿಸಿದ.
“ನೀನೇಕೆ ವೈಭವನನ್ನು ಕರೆಸಿಕೊಳ್ಳಬಾರದು? ಆಫ್ಟ್ರಾಲ್ ಹೀ ಈಸ್ ಆಲ್ ಸೋ ಯುವರ್ ಬೆಸ್ಟ್ ಫ್ರೆಂಡ್….. ನೀನು ಕರೆದರೆ ಒಂದೇ ಓಟದಲ್ಲಿ ಓಡಿ ಬಂದುಬಿಡುತ್ತಾನೆ…..” ಎಂದು ಬೇಕೆಂದೇ ಅರುಣ್ ವೈಭವ್ ನ ಹೆಸರನ್ನು ಒತ್ತಿ ಹೇಳಿದ.
“ಅಯ್ಯೋ ಬಿಡು…. ಈಗ ನನಗೆ ಯಾವ ಹೊಸ ಫ್ರೆಂಡೂ ಬೇಡ….. ಬದಲಿಗೆ ಮಾಜಿ ಪ್ರೇಮಿಯ ಜೊತೆ ಟೈಂಪಾಸ್‌ಮಾಡಬೇಕಿದೆ,” ಎಂದು ನಸುನಗುತ್ತಾ ಉತ್ತರ ನೀಡಿದಳು ಋತು.
“ಸೀಮಾ ಸಹ ನಿನ್ನನ್ನು ಭೇಟಿಯಾಗಬೇಕು ಅಂತ ಹೇಳ್ತಿದ್ದಳು. ಅವಳನ್ನೂ ನನ್ನ ಜೊತೆ ಕರೆದುಕೊಂಡು ಬರಲೇ?” ಅರುಣ್‌ಕೇಳಿದ.
“ಅಂದ್ರೆ…. ನಿನಗೆ ಒಬ್ಬನೇ ಬರಲು ಏನಾದರೂ ತೊಂದರೆಯೇ?” ಅವಳಿಗೆ ಕೆಟ್ಟ ಕೋಪ ಬಂದಿತ್ತು.
“ನನಗೆ ಯಾಕೆ ತೊಂದರೆ ಆಗಬೇಕು…..?” ಅರುಣ್ ನಗುತ್ತಾ ಕೆಣಕುವಂತೆ ಕೇಳಿದ.
“ಓ ಸಾಕು ಸಾಕು…. ತುಂಬಾ ಟಾಪ್‌ಗೆ ಹೋಗಬೇಡ. ಸಾಯಂಕಾಲ ನಿನಗಾಗಿ ಕಾಯ್ತಿರ್ತೀನಿ…. ಆದಷ್ಟು ಬೇಗ ಬಂದುಬಿಡು,” ಎನ್ನುತ್ತಾ ಅವಳು ಕಾಲ್ ಕಟ್ ಮಾಡಿದಳು.
ಋತು ಬೆಂಗಳೂರಿನ ಕೋರಮಂಗಲದ ತನ್ನ ಫ್ಲಾಟ್‌ನಲ್ಲಿ ಒಬ್ಬಳೇ ವಾಸಿಸುತ್ತಿದ್ದಳು. ಸಂಜೆ ಅವಳನ್ನು ಭೇಟಿಯಾಗುವ ಆಸೆ ಅವನನ್ನು ಮನದಲ್ಲೇ ಮಂಡಿಗೆ ಮೆಲ್ಲುವಂತೆ ಮಾಡಿತು. ಕಾಫಿ ಬ್ರೇಕ್ ಆದ್ದರಿಂದ ಅವನು ಕ್ಯಾಂಟೀನ್‌ಗೆ ಹೋಗಿ, ಅಲ್ಲಿ ಕಾಫಿಗೆ ಆರ್ಡರ್ ನೀಡಿ ಸಿಗರೇಟ್ ಸೇದುತ್ತಾ ಕಳೆದ ಕೆಲವು ತಿಂಗಳ ಘಟನೆಗಳ ಬಗ್ಗೆ ಯೋಚಿಸತೊಡಗಿದ…..ಸೀಮಾ ಜೊತೆ ಅರುಣನ ಮದುವೆಯಾಗಿ 8 ವರ್ಷ ಕಳೆದ ನಂತರ, ಒಂದು ದಿನ ಆಕಸ್ಮಿಕವಾಗಿ ಋತು ತನ್ನ ಮನೆಗೆ ಹುಡುಕಿಕೊಂಡು ಬಂದಾಗ, ಅರುಣನಿಗೆ ಶಾಕ್ ಹೊಡೆದಂತಾಗಿತ್ತು! ಒಳಗೊಳಗೇ ಖುಷಿಯೂ ಆಗಿತ್ತು.
ಈ ವಯಸ್ಸಿನಲ್ಲೂ ಇನ್ನೂ ಮಾಡೆಲ್ ತರಹ ಮೆರೆಯುತ್ತಿದ್ದ ಋತು ಅರುಣನ ಸಹಪಾಠಿ ಆಗಿದ್ದಳು. ಅವಳಿಗೆ ಮುಂಬೈನಲ್ಲಿ ಖ್ಯಾತ ಬಹುರಾಷ್ಟ್ರೀಯ ಕಂಪನಿಯೊದರಲ್ಲಿ ಉನ್ನತ ಹುದ್ದೆ ದೊರಕಿದ್ದರಿಂದ, ತಮ್ಮ ಮದುವೆಗೆ ಮುಂಚೆಯೇ ಮುಂಬೈಗೆ ಹೋಗಿ ಸೆಟ್ ಆಗಿದ್ದಳು ಎಂದು ಅರುಣ್ ಪತ್ನಿ ಸೀಮಾಳಿಗೆ ಅವಳನ್ನು ಪರಿಚಯಿಸಿದ. ತಮ್ಮಿಬ್ಬರ ಪ್ರೇಮದ ವಿಷಯವನ್ನು ಮರೆಮಾಚಿ ಪತ್ನಿ ಮುಂದೆ ಆದರ್ಶ ಪತಿ ಎನಿಸಿದ್ದ.
ಇವರ 5 ವರ್ಷದ ಮಗ ರೋಹಿತ್‌ಗಾಗಿ ಋತು ಬೇಕಾದಷ್ಟು ಚಾಕಲೇಟ್, ಟಾಫಿ, ರಿಮೋಟ್ ಕಂಟ್ರೋಲ್ ಟಾಯ್ಸ್ ತಂದಿದ್ದಳು. ರೋಹಿತ್‌ಗಂತೂ ಹೊಸ ಆಂಟಿಯ ಆಗಮನ ಬಹಳ ಸಂತಸ ತಂದಿತ್ತು. ಮಗನನ್ನು ಅಷ್ಟು ಹಚ್ಚಿಕೊಂಡು ಅಷ್ಟೆಲ್ಲ ಗಿಫ್ಟ್ ತಂದಿದ್ದ ಪತಿಯ ಹಳೆಯ ಸಹಪಾಠಿಯ ಅಭಿಮಾನ ಕಂಡು ಮುಗ್ಧೆ ಸೀಮಾ, ಸಹಜವಾಗಿ ಅತಿಥಿಯನ್ನು ಆದರಾತಿಥ್ಯಗಳಿಂದ ಸತ್ಕರಿಸಿದಳು. ಬಂದ ದಿನವೇ ಋತು, ಸೀಮಾ ಮತ್ತು ಅವಳ ಮಗನ ಮೆಚ್ಚಿನ ಅತಿಥಿಯಾದಳು. ಇವಳ ಬಣ್ಣದ ಮಾತುಗಳ ಮಾಯಾಜಾಲಕ್ಕೆ ಮರುಳಾದಳು.
“ಅದೆಲ್ಲ ಸರಿ, ನಿನ್ನ ಜೀವನದಲ್ಲಿ ಏನು ನಡೆಯುತ್ತಿದೆ? ಮಯಾಂಕ್ ಹೇಗಿದ್ದಾನೆ?” ಅರುಣನ ಈ ಪ್ರಶ್ನೆಗಳಿಗೆ ಋತುವಿನ ಅಟ್ಟಹಾಸದ ನಗುವೇ ಉತ್ತರವಾದಾಗ ಸೀಮಾ ಜೊತೆ ಅರುಣನೂ ಅವಾಕ್ಕಾದ.
ತನ್ನ ನಗು ನಿಂತ ನಂತರ ರಹಸ್ಯಮಯ ಮಂದಹಾಸ ತೇಲಿಬಿಟ್ಟ ಋತು, “ನನ್ನ ಜೀವನದಲ್ಲಿ ಎಲ್ಲ ಚೆನ್ನಾಗಿಯೇ ನಡೆಯುತ್ತಿದೆ ಬಿಡಿ…. ನನ್ನ ಕೆಲಸ ಭದ್ರವಾಗಿದೆ….. ಬೆಂಗಳೂರಿನಲ್ಲೂ ಬ್ರ್ಯಾಂಚ್ ಓಪನ್ ಮಾಡಿದ್ದಾರೆ, ಅದರ ಸಲುವಾಗಿಯೇ ಬಂದಿದ್ದೀನಿ. ಹ್ಞೂಂ, ಮಯಾಂಕ್ ಸಹ ಮಜವಾಗಿದ್ದಾನೆ. ಅವನು ಮುದ್ದಾದ ಇಬ್ಬರು ಹೆಣ್ಣು ಮಕ್ಕಳ ತಂದೆ ಆಗಿದ್ದಾನೆ!”
“ಆಹಾ, ನಿನ್ನ ನೋಡಿದರೆ ನೀನು 2 ಮಕ್ಕಳ ತಾಯಿ ಅಂತ ಯಾರೂ ಹೇಳೋಕ್ಕಾಗಲ್ಲ ಬಿಡು…..” ಅವಳನ್ನು ಹೊಗಳುತ್ತಾ ಅರುಣ್ ಹೇಳಿದ.
ಅದನ್ನು ಕೇಳಿ ಋತು ಮತ್ತೆ ಗಹಗಹಿಸಿ ನಕ್ಕಳು. ಅವಳು ಹಾಗೇಕೆ ಕಾರಣವಿಲ್ಲದೆ ನಗುತ್ತಿದ್ದಳೋ ಅರಿಯದೆ ಅರುಣ್ ಸೀಮಾ ಕಕ್ಕಾಬಿಕ್ಕಿಯಾದರು.
“ಮೈ ಡಿಯರ್ ಅರುಣ್, ನೀನು ಹೀಗೇ ತಪ್ಪಾಗಿ ಅರ್ಥ ಮಾಡ್ಕೊಳ್ತೀಯಾ ಅಂತಾನೇ ಅಂದುಕೊಂಡೆ, ಅದು ಹಾಗೇ ಆಯ್ತು. ಏ…. ನಾನು ಹೇಳಿದ್ದು ಮಯಾಂಕ್ ಬೇರೆ ಮದುವೆ ಆದ, ಅವನಿಗೆ ಇಬ್ಬರು ಮಕ್ಕಳು ಅಂತ…. ನಮ್ಮ ಲಿವ ಇನ್ ರಿಲೇಶನ್‌ಮುಗಿದು ಅವನು ಬೇರಾರೋ ಸಿರಿವಂತೆ ಸಿಕ್ಕಿದಳೆಂದು ನನಗೆ ಬೈ ಹೇಳಿದ….. ನಾನು ಅವನ ಹೆಂಡತಿಯಲ್ಲ!”
“ಓ…. ಮುಂದೆ ನೀನು ಮದುವೆ ಆಗಲಿಲ್ಲವೇ?”
“ಆ ಬ್ರೇಕ್ ಆದ ಮೇಲೆ ಅನೇನೋ ಹಣಕಾಸಿನವಳನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದಾನೆ….. ನಾನಂತೂ ಹಾಗೇ ಕುಮಾರಿಯಾಗೇ ಉಳಿದುಬಿಟ್ಟೆ, ಮತ್ತೆ ಮದುವೆ ಆಗಬೇಕು ಅಂತ ಅನ್ನಿಸಲೇ ಇಲ್ಲ…… ಐ ಆ್ಯಮ್ ಎ ಫ್ರೀ ಬರ್ಡ್! ವಿಧವೆ ಅಥವಾ ವಿಚ್ಛೇದಿತೆ ಆಗುವುದಕ್ಕಿಂತ ಇದು ಬೆಟರ್ ಅಲ್ಲವೇ….. ಅಪ್ಪಿತಪ್ಪಿ ನಿಮಗೇನಾದರೂ ನನಗೆ ಲಾಯಕ್ಕಾದ ವರ ಸಿಕ್ಕಿದರೆ ಡೀಟೈಲ್ಸ್ ಕೊಡಿ…. ಟ್ರೈ ಮಾಡಿ ನೋಡ್ತೀನಿ,” ಅವಳ ದನಿಯಲ್ಲಿ ಉಡಾಫೆ ತುಂಬಿತ್ತು.
“ತಮಾಷೆ ಬಿಡು ಋತು….. ಇದುವರೆಗೂ ನೀನು ಯಾಕೆ ಮದುವೆ ಆಗಲಿಲ್ಲ ಅಂತ ಸೀರಿಯಸ್ ಆಗಿ ಹೇಳು,” ಅರುಣ್‌ಕೇಳಿದ.
“ಹಿಂದೆ ನನಗೊಂದು ಅವಕಾಶ ಇದ್ದಾಗ ಉತ್ತಮ ವ್ಯಕ್ತಿಯ ಕೈಹಿಡಿದು ಜೀವನವಿಡೀ ಸುಖವಾಗಿರಬಹುದಿತ್ತು… ನನ್ನ ಅತಿ ಆಸೆಯಿಂದ ಅದನ್ನು ಕೈಯಾರೆ ಕಳೆದುಕೊಂಡೆ. ಇರಲಿ, ಈ ಮಯಾಂಕನ ಹಗರಣ ಇನ್ನೊಮ್ಮೆ ಹೇಳ್ತೀನಿ. ಈಗಂತೂ ನಾನು ಯಾವ ಸಾಂಸಾರಿಕ ಗೊಡವೆಯೂ ಇಲ್ಲದೆ ಹಾಯಾಗಿ ಒಬ್ಬಳೇ ಫ್ರೀ ಬರ್ಡ್ ಆಗಿ ಎಂಜಾಯ್ ಮಾಡ್ತಿದ್ದೀನಿ……? ಈ ಮದುವೆ… ಬಂಧನ…. ಸಂಸಾರ…. ಮಕ್ಕಳು…… ಬೇಡಪ್ಪಾ ಬೇಡ!”
33 ದಾಟಿದ ಋತು ಹಾಯಾಗಿ ಡೈಲಾಗ್ ಹೊಡೆಯುತ್ತಿದ್ದರೆ, ಇವರಿಬ್ಬರೂ ಕಣ್ಕಣ್ಣು ಬಿಟ್ಟುಕೊಂಡು ಕೇಳಿಸಿಕೊಳ್ಳುತ್ತಿದ್ದರು. ತನ್ನದು ಅಸಹಾಯಕ ಸ್ಥಿತಿ ಎಂಬುದು ಅವಳ ಮಾತುಗಳಲ್ಲಿ ಎಳ್ಳಷ್ಟೂ ಇರಲಿಲ್ಲ, ಬದಲಿಗೆ ಮಜವಾಗಿದ್ದಾಳೆ ಎಂಬುದು ಸ್ಪಷ್ಟ ಗೊತ್ತಾಗುತ್ತಿತ್ತು….ಆದರೆ ಅವಳು ಮದುವೆ ಆಗದಿರುವುದು ಸರಿಯಲ್ಲ ಎಂಬಂತೆ ಸೀಮಾ ತಕ್ಷಣ ಆಗಲೇ ತನ್ನ ಅಭಿಪ್ರಾಯ ತಿಳಿಸಿದಳು, “ಮದುವೆ ಆಗದಿದ್ದರೆ ನಿಮ್ಮ ಹೆಚ್ಚುತ್ತಿರುವ ವಯಸ್ಸು ನಿಮಗೆ ಏಕಾಂಗಿತನದ ನಿರಾಶೆಯ ಭಾವವನ್ನೇ ಹೆಚ್ಚು ಮಾಡುತ್ತದೆ. ಈಗಲೂ ಕಾಲವೇನೂ ಮಿಂಚಿಲ್ಲ, 35 ಮುಟ್ಟುವ ಮೊದಲೇ ಬೇಗ ಮದುವೆ ಆಗಿಬಿಡಿ ಋತು,” ಎಂದಳು.
“ಸೀಮಾ, ನಾವು ಈಗಾಗಲೇ ಇಷ್ಟು ಕ್ಲೋಸ್ ಆಗಿದ್ದೇವೆ. ಇನ್ನೂ ಯಾಕೆ ಔಪಚಾರಿಕತೆಗಾಗಿ ನೀವು ತಾವು ಅಂತ ಮಾತನಾಡಬೇಕು, ನನಗೇನೋ ನೀನು ತಾನು ಅನ್ನೋದೇ ಸರಿ…. ಏನಂತೀಯಾ ಅರುಣ್?”
“ಹ್ಞಾಂ….. ಹ್ಞಾಂ….. ಅದೇನೋ ಸರಿ!”
“ಹಾಗಿದ್ದರೆ ನೋಡು ಸೀಮಾ, ನನಗೆ ಒಪ್ಪುವಂಥ ವರ ನೀನೇ ಆರಿಸಬೇಕು. ನೀನು ಹೇಳಿದ ಮೇಲೆ ಮುಗಿಯಿತು, ಕೊರಳೊಡ್ಡಿ ತಾಳಿ ಕಟ್ಟಿಸಿಕೊಳ್ಳುವೆ,” ಎಂದು ಋತು ಸೀಮಾಳ ಹತ್ತಿರ ಬಂದು ಅವಳ ಕೈಗಳನ್ನು ಹಿಡಿದುಕೊಳ್ಳುತ್ತಾ ಅತಿಯಾದ ಆತ್ಮೀಯತೆ ತೋರಿದಳು. ಸೀಮಾ ಆ ಕ್ಷಣವೇ ಋತುವನ್ನು ತನ್ನ ಪ್ರಾಣಸ್ನೇಹಿತೆ ಎಂದು ಸ್ವೀಕರಿಸಿದಳು.
ಅವರಿಬ್ಬರ ಮಾತುಕಥೆ ಮುಂದುವರಿದಂತೆ ಅರುಣ್ ತಮ್ಮ ಕಾಲೇಜಿನ ದಿನಗಳ ನೆನಪಲ್ಲಿ ಕಳೆದುಹೋದ….. ಕಲಿಯುವಾಗ ಇವರಿಬ್ಬರೂ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಕೈ ಕೈ ಹಿಡಿದು ಸುತ್ತಾಡುತ್ತಾ ಅಮರ ಪ್ರೇಮಿಗಳಂತೆ ವಿಹರಿಸುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಇಬ್ಬರೂ ಓದು ಮುಗಿಸಿ, ಕೆಲಸ ಹಿಡಿದು, ಮದುವೆ ಆಗುವ ಕನಸು ಕಾಣುತ್ತಿದ್ದರು. ಇವರಿಬ್ಬರ ಪ್ರೇಮಾಲಾಪ 2 ವರ್ಷ ನಡೆಯಿತು. ಆದರೆ ಯಾವಾಗ ಅಲ್ಲಿಗೆ ಶ್ರೀಮಂತ ಮಯಾಂಕ್ ಕಾಲಿಟ್ಟನೋ ಋತು ಕ್ರಮೇಣ ಅವನತ್ತ ವಾಲತೊಡಗಿದಳು.
ಹಾಗೆ ನೋಡಿದರೆ ಮಯಾಂಕ್ ಋತುವಿನ ಗೆಳತಿ ನಿಶಾಳ ಬಾಯ್ ಫ್ರೆಂಡ್. ಜೊತೆಗೆ ಋತು ಕಾಲೇಜಿಗೆ ಹತ್ತಿರವೆಂದು ಯಾವ ಕಾಲೋನಿಯಲ್ಲಿ ವಾಸಿಸುತ್ತಿದ್ದಳೋ ಮಯಾಂಕ್ ಸಹ ಅಲ್ಲಿಯೇ ನೆಲೆಸಿದ್ದ. ಹೀಗಾಗಿ ನಿಶಾ ಬಂದು ತನ್ನ ಬಾಯ್ ಫ್ರೆಂಡ್‌ನ್ನು ಇವಳಿಗೆ ಪರಿಚಯಿಸಿದ ನಂತರ, ಮಯಾಂಕ್ ಋತು ಪರಸ್ಪರ ತೀರಾ ನಿಕಟವಾದರು. ಅದರಿಂದಾಗಿ ಅರುಣ್ ನಿಶಾ ಇಬ್ಬರಿಗೂ ದುಃಖ ಹೆಚ್ಚತೊಡಗಿತು. 2 ತಿಂಗಳು ಕಳೆಯುವಷ್ಟರಲ್ಲಿ ಋತು ಮಯಾಂಕ್ ಇಬ್ಬರೂ ಅರುಣ್ ನಿಶಾರಿಗೆ ಟಾಟಾ ಬೈ ಬೈ ಹೇಳಿದ್ದರು.
“ಋತು ಪ್ಲೀಸ್….. ನೀನಿಲ್ಲದ ಜೀವನವನ್ನು ನಾನು ಕಲ್ಪಿಸಿಕೊಳ್ಳಲಾರೆ. ದಯವಿಟ್ಟು ನನ್ನನ್ನು ಬಿಟ್ಟು ಹೋಗಬೇಡ,” ಎಂದು ಅರುಣ್ ಅವಳನ್ನು ಪರಿಪರಿಯಾಗಿ ಬೇಡಿಕೊಂಡಿದ್ದ. ಆದರೆ ಅವಳು ಮಾತ್ರ ತನ್ನ ಹಠ ಬಿಡಲಿಲ್ಲ.
“ಐ ಆ್ಯಮ್ ಸಾರಿ….. ನಾನು ಮಯಾಂಕ್ ಜೊತೆ ಮಾತ್ರ ಹೆಚ್ಚು ಖುಷಿಯಾಗಿರಬಲ್ಲೆ ಎಂಬುದು ಖಚಿತವಾಗಿದೆ. ಮಧ್ಯಮ ವರ್ಗದ ನಿನ್ನ ಕೈ ಹಿಡಿದು ನಾನೇನು ಮಾಡಲಿ? ಬಿಸ್‌ನೆಸ್ ಮ್ಯಾಗ್ನೆಟ್ ಮಗನಾದ ಅವನು ನನಗೆ ಸುಂದರ ಭವಿಷ್ಯ ನೀಡಬಲ್ಲ…. ನೀನು ನನ್ನನ್ನು ಮರೆತುಬಿಡು, ನಿನಗೆ ತಕ್ಕಂಥ ನನಗಿಂತ ಯೋಗ್ಯಳಾದ ಒಳ್ಳೆಯ ಹುಡುಗಿ ಸಿಗ್ತಾಳೆ ಬಿಡು,” ಎಂದು ಇವನ ಕೆನ್ನೆ ತಟ್ಟಿ ಅವನಿಂದ ದೂರ ಹೊರಟುಹೋದಳು. ನಿಶಾಳಿಗಿಂತ ಹೆಚ್ಚು ಗ್ಲಾಮರಸ್ ಆಗಿದ್ದ ಋತುವಿಗೆ ಮರುಳಾಗಿದ್ದ ಮಯಾಂಕ್ ಸಾಧಾರಣ ರೂಪಿನ, ಮಧ್ಯಮ ವರ್ಗದ ನಿಶಾಳಿಂದ ಸಹಜವಾಗಿಯೇ ದೂರಾದ. ಅವಳ ಅಳು, ಬೇಡಿಕೆಗಳಿಗೆ ಬೆಲೆ ಇಲ್ಲವಾಯಿತು. ಅವಳಂತೂ ಒಂದು ಹೆಜ್ಜೆ ಮುಂದೆ ಹೋಗಿ, ನಿದ್ದೆ ಮಾತ್ರೆ ನುಂಗಿ ಆತ್ಮಹತ್ಯೆಗೂ ಯತ್ನಿಸಿದ್ದಳು, ಹೇಗೋ ಬಚಾವಾಗಿ ತನ್ನ ಊರಿಗೆ ಹೊರಟುಹೋದಳು. ನಂತರ ಅರುಣ್ ಋತುವಿನ ದಾರಿ ಶಾಶ್ವತವಾಗಿ ಕವಲಾಯಿತು. ಮುಂಬೈನಲ್ಲಿ ಒಳ್ಳೆ ಕೆಲಸ ದೊರೆತು ಅವಳು ಹೊರಟಾಗ, ಮುಂಬೈನವನೇ ಆಗಿದ್ದ ಮಯಾಂಕ್‌ಗೆ ಇನ್ನೂ ಹತ್ತಿರವಾದಳು. ಎಲ್ಲಾದರೂ ಚೆನ್ನಾಗಿರಲಿ, ಎಂದು ಅವಳ ಚಿಂತೆ ಮರೆತು ತನ್ನ ಕೆಲಸದ ಹುಡುಕಾಟದಲ್ಲಿ ಬಿಝಿಯಾದ ಅರುಣ್. ಬಹುಶಃ ಅವರು ಮದುವೆ ಆಗಿರಬೇಕು ಎಂದೇ ಭಾವಿಸಿದ್ದ. ಅದೀಗ ಸುಳ್ಳು ಎಂದು ಗೊತ್ತಾಯಿತು.
ಬಿರುಗಾಳಿಯಂತೆ ಒಮ್ಮೆಲೇ ತನ್ನ ವಿಳಾಸ ಹುಡುಕಿ ಹೇಗೋ ಮನೆ ಹುಡುಕಿಕೊಂಡು ಬಂದು ಹೋದ ಋತು ಕುರಿತು ಯೋಚಿಸಿದಷ್ಟೂ ಅರುಣನಿಗೆ ಹಳೆಯದೆಲ್ಲ ಮತ್ತೆ ಮತ್ತೆ ನೆನಪಾಯಿತು. ಋತುವನ್ನು ಮರೆತಿದ್ದೇನೆ ಎಂದು ವಿವೇಕ ಎಚ್ಚರಿಸಿದರೂ, ಹೃದಯ ಅವಳಿಗಾಗಿ ಇನ್ನೂ ಮಿಡಿಯುತ್ತಿತ್ತು. ಮಾಜಿ ಪ್ರೇಯಸಿ ತಾನಾಗಿ ಮನೆ ಹುಡುಕಿಕೊಂಡು ಬಂದು ಸಲುಗೆ ತೋರಿಸಿ, ಇನ್ನೂ ಒಂಟಿಯಾಗಿಯೇ ಇದ್ದೇನೆ ಎಂದಾಗ ಯಾವ ಎಂಟೆದೆ ಭಂಟ ತಾನೇ ಅವಳ ಪ್ರೀತಿ ಬೇಡವೆಂದಾನು?
ಆ ದಿನ ಹೊಸ ಅತಿಥಿಯಾಗಿ ಮನೆಗೆ ಬಂದ ಋತುವನ್ನು ಮನಸಾರೆ ಉಪಚರಿಸಿ ಕಳುಹಿಸಿದ ಸೀಮಾ, ಕೆಲವೇ ಗಂಟೆಗಳ ಸಂಭಾಷಣೆಯಿಂದ ಅವಳನ್ನು ತನ್ನ ಪ್ರಾಣಸ್ನೇಹಿತೆ ಆಗಿಸಿಕೊಂಡಿದ್ದಳು.
ಅಂದಿನಿಂದ ವಾರಕ್ಕೊಮ್ಮೆ ಏನೋ ನೆಪ ಮಾಡಿಕೊಂಡು, ಅರುಣನ ಮಗನಿಗೆ ಏನೋ ಒಂದು ಗಿಫ್ಟ್ ಹಿಡಿದು ಇವರ ಮನೆಗೆ ಬೆಳಗ್ಗೆ ಬಂದರೆ ಇಡೀ ದಿನ ಕಳೆದು, ಸಂಜೆಯೇ ಅವಳು ವಾಪಸ್ಸು ಹೊರಡುತ್ತಿದ್ದುದು. ಸೀಮಾಳ ಜೊತೆ ಅಡುಗೆಮನೆ ಸೇರಿಕೊಂಡು ಏನೋ ಸ್ಪೆಷಲ್ ತಯಾರಿಸಲು ನೆರವಾಗುತ್ತಾ, ಅತಿಥಿಯಾಗಿರದೇ ಆ ಮನೆಯವಳೇ ಆಗಿಬಿಡುತ್ತಿದ್ದಳು. ಪುಟ್ಟ ರೋಹಿತ್ ಈ ಆಂಟಿ ಯಾವಾಗ ಬರುತ್ತಾರೋ ಎಂದು ಕಾಯುತ್ತಿದ್ದ.
ಹೀಗೆ 2 ತಿಂಗಳು ಕಳೆದು, ರೋಹಿತನ ಹುಟ್ಟುಹಬ್ಬ ಬಂತು. ಆ ಪಾರ್ಟಿಗೆ ಬಂದಿದ್ದ ಸೀಮಾಳ ಗೆಳತಿ ವಂದನಾ ಹಾಗೂ ಅವಳ ಅಣ್ಣ ವೈಭವ್ ನನ್ನು ಸೀಮಾ ಋತುವಿಗೆ ಪರಿಚಯಿಸಿದಳು.
ಹೀಗೆ ವಿಚ್ಛೇದಿತ ವೈಭವ್ ನಿಧಾನವಾಗಿ ಋತುವಿಗೆ ಹತ್ತಿರವಾಗತೊಡಗಿದ. ಹೆಂಡತಿಯ ದಬ್ಬಾಳಿಕೆಯಿಂದ ಜೀವನದಲ್ಲಿ ನೊಂದುಹೋಗಿದ್ದ ವೈಭವ್, ಮರು ಮದುವೆ ಬಗ್ಗೆ ಎಂದೂ ಕನಸು ಕಂಡಿರಲಿಲ್ಲ. ಆದರೆ ಈಗ ಋತು ಪರಿಚಯವಾದ ಮೇಲೆ ಅವನ ಮನಸ್ಸು ಮತ್ತೆ ವೈವಾಹಿಕ ಜೀವನದತ್ತ ಒಲಿಯತೊಡಗಿತು.
ಹೀಗೆ ಕ್ರಮೇಣ ವೈಭವ್ ಅವಳ ಆರಾಧಕನಾದ. ಋತು ಸಹ ಸದಾ ಫ್ಲರ್ಟ್ ಮಾಡುವ ಮೂಡ್‌ನಲ್ಲಿ ಅವನ ಮನದಲ್ಲಿ ಆಸೆ ಚಿಗುರುವಂತೆ ನಡೆದುಕೊಂಡಳು. ಇವರಿಬ್ಬರ ನಡುವೆ ನಿಕಟತೆ ಹೆಚ್ಚುತ್ತಿರುವುದು ಸೀಮಾಳಿಗೆ ಸಂತಸ ಎನಿಸಿತು.
ಅದಾಗಿ 2 ದಿನಗಳ ನಂತರ ವೈಭವ್ ಋತು ಜೊತೆ ದುಬಾರಿ ಹೋಟೆಲ್ ನಲ್ಲಿ ಡಿನ್ನರ್ ಸವಿದ. ವಂದನಾ ನೀಡಿದ ಈ ಸುದ್ದಿಯಿಂದ ಸೀಮಾಳ ಸಂತೋಷಕ್ಕೆ ಪಾರವಿಲ್ಲದಾಯಿತು.
“ಅಂದಹಾಗೆ…. ನಿನ್ನ ಫ್ರೆಂಡ್ ಅಣ್ಣ ಪರವಾಗಿಲ್ಲ ಅನ್ಸುತ್ತೆ ಸೀಮಾ….. ನನ್ನ ಕನಸಿನ ರಾಜಕುಮಾರ ಅಲ್ಲದಿದ್ದರೂ ಒಂದು ವಿಧದಲ್ಲಿ ಓ.ಕೆ. ನೀನು ಸಜೆಸ್ಟ್ ಮಾಡಿದ್ದರಿಂದ ಅಂಗೀಕರಿಸುತ್ತೇನೆ,” ಎಂದು ದೊಡ್ಡ ಸಹಾಯ ಮಾಡುವವಳಂತೆ ಋತು ಸೀಮಾಳಿಗೆ ಹೇಳಿದಾಗ, ಪಾಪ ಆ ಮುಗ್ಧೆ ನಿಜವೆಂದೇ ನಂಬಿದಳು.
“ನಿನ್ನ ಕನಸಿನ ರಾಜಕುಮಾರ ಹೇಗಿರ್ತಾನೋ ನಮಗೂ ಹೇಳು ಋತು,” ಸೀಮಾ ಕೇಳಿದಾಗ ಅರುಣ್ ಸಹ ಮೈಯೆಲ್ಲಾ ಕಿವಿಯಾಗಿಸಿಕೊಂಡು ಋತುವಿನ ಉತ್ತರಕ್ಕಾಗಿ ಕಾದ. ಅದಕ್ಕೆ ಋತು ಒಮ್ಮೆ ಅರುಣನತ್ತ ತಿರುಗಿ ಅವನಿಗೆ ಕಣ್ಣು ಮಿಟುಕಿಸಿ ಹೇಳತೊಡಗಿದಳು, “ನಿನ್ನ ಸಂಗಾತಿ ಇರುವಂತೆಯೇ ನನ್ನ ಸಂಗಾತಿಯೂ ಸ್ಮಾರ್ಟ್ ಮತ್ತು ಹೃದಯವಂತನಾಗಿರಬೇಕು. ನನ್ನ ಖುಷಿ…. ನನ್ನ ಸುಖ ದುಃಖಗಳ ಬಗ್ಗೆ ಸದಾ ಗಮನ ಕೊಡುವವನಾಗಿರಬೇಕು. ಅಂಥ ಸೀದಾಸಾದಾ ಹಸನ್ಮುಖಿ ಆಗಿದ್ದಾನೆ ನೋಡು ನನ್ನ ರಾಜಕುಮಾರ!”
“ಅಂಥ ಸೀದಾಸಾದಾ ಅಮಾಯಕ ವ್ಯಕ್ತಿ ನಿನ್ನಂಥ ಓವರ್ ಸ್ಮಾರ್ಟ್, ಡ್ಯಾಶಿಂಗ್, ಗ್ಲಾಮರಸ್ ಹೆಣ್ಣಿನೊಡನೆ ಹೊಂದಿಕೊಳ್ಳಬಲ್ಲ ಅಂತೀಯಾ?” ಸೀಮಾ ನೇರವಾಗಿಯೇ ಕೇಳಿಬಿಟ್ಟಳು.
“ಸೀಮಾ, ಇಬ್ಬರು ವ್ಯಕ್ತಿಗಳ ನಡುವಿನ ಪರಸ್ಪರ ತಿಳಿವಳಿಕೆ, ಹೊಂದಾಣಿಕೆಗಳಿಂದ ಅವರಲ್ಲಿ ಗಾಢ ಪ್ರೇಮ ಬೆಳೆಯಲಾರದೇ? ಅದೇ ಬದುಕಿಗೆ ಆಧಾರ ಅಂತೀನಿ.”
“ಅದೇನೋ ನಿಜ ಬಿಡು. ವೈಭವ್ ನಿನಗೆ ಬಹಳ ಇಷ್ಟವಾಗಲಿಲ್ಲಾಂದ್ರೂ ಚಿಂತೆಯಿಲ್ಲ, ಅವನಿಗೆ ನೀನೆಂದರೆ ಈಗಾಗಲೇ ಆರಾಧನೆಯ ಭಾವನೆಯಿದೆ. ನಿಮ್ಮಿಬ್ಬರ ಮದುವೆ ಮಾಡಿಸುವುದೇ ಮುಂದಿನ ನನ್ನ ಗುರಿ. ಇವನಲ್ಲದಿದ್ದರೆ ಇವನಿಗಿಂತ ಮಿಗಿಲಾದ ನಿನ್ನ ಕನಸಿನ ರಾಜಕುಮಾರನನ್ನು ನಾನು ಹೇಗಾದರೂ ಹುಡುಕಿಸುತ್ತೇನೆ,” ಸೀಮಾ ಆತ್ಮವಿಶ್ವಾಸದಿಂದ ಹೇಳಿದಳು.
“ನನ್ನೆದುರಿಗೆ ಕುಳತಿರುವ ರಾಜಕುಮಾರನನ್ನು ಹುಡುಕಿ ತರ್ತೀನಿ ಅಂತಿದ್ದಾಳೆ ಈ ನನ್ನ ಮುಗ್ಧ ಗೆಳತಿ!” ಋತು ಅರುಣನ ಬಳಿ ಬಂದು ಪಿಸುಗುಟ್ಟಿದಾಗ, ಅವನ ಹೃದಯ ಡಡ ಎಂದು ಸಂತಸದಿಂದ ಹಿಗ್ಗಿಹೋಯಿತು. ಅರುಣನಿಗೆ ತನ್ನ ಅಂತರಂಗದ ತುಮುಲ ಗುರುತಿಸಲು ತಡವಾಗಲಿಲ್ಲ. ಈಗಲೂ ಅವನ ಒಳ ಮನಸ್ಸು ಋತುವಿಗಾಗಿ ತುಡಿಯುತ್ತಿತ್ತು. ಬೇಕೆಂದೇ ಅವನ ಬಳಿ ಬಂದ ಋತು, ಒಪ್ಪಾಗಿ ಬಾಚಿದ್ದ ಅವನ ತಲೆಗೂದಲನ್ನೆಲ್ಲ ಆತ್ಮೀಯತೆಯಿಂದ ಕೆದರಿ, ಅವನನ್ನು ಚುಂಬಿಸುವಂತೆ ಹತ್ತಿರ ಬಂದಳೇ, ಬೇಕೆಂದೇ ಅವನ ಕೈಗೆ ಸಿಗದೆ ತಪ್ಪಿಸಿಕೊಂಡು ಸೀಮಾಳ ಬಳಿಗೆ ಓಡಿದಳು ಋತು.
ಆ ದಿನ ತನ್ನಂತೆಯೇ ಅವಳ ಮನದಲ್ಲೂ ತನ್ನ ಬಗೆಗಿರುವ ಒಲವನ್ನು ಗುರುತಿಸಿದ ಅರುಣ್ ಅತ್ಯಂತ ರೋಮಾಂಚನಗೊಂಡ. ಮುಂದೆ ಅವನನ್ನು ಒಂಟಿಯಾಗಿ ಸಂಧಿಸುವಂತಾದಾಗೆಲ್ಲ, ಹೀಗೆ ಏನಾದರೊಂದು ತುಂಟತನ ಮಾಡಿ ಅವನ ಬಗ್ಗೆ ತನ್ನ ಮನದಲ್ಲಿ ತುಂಬಿದ್ದ ಪ್ರೇಮವನ್ನು ವ್ಯಕ್ತಪಡಿಸಲು ಋತು ಹಿಂಜರಿಯುತ್ತಿರಲಿಲ್ಲ. ಹೆಣ್ಣು ತಾನಾಗಿ ಹಾಗೆ ಒಲಿದು ಬಂದು ಕೆಣಕಿದರೆ, ಅದನ್ನು ಒಲ್ಲೆ ಎನ್ನಲು ಆ ಗಂಡಸು, ಸನ್ಯಾಸಿ ಅಂತೂ ಆಗಿರಲಿಲ್ಲ.
ಇದನ್ನೆಲ್ಲ ಮತ್ತೆ ಮತ್ತೆ ಮೆಲುಕು ಹಾಕುತ್ತಲೇ ಅರುಣ್ ಅಂತೂ ಆಫೀಸಿನಲ್ಲಿ ಅಂದು ಮಧ್ಯಾಹ್ನ ಅನ್ಯಮನಸ್ಕನಾಗಿ ಕೆಲಸ ಮುಗಿಸಿದ. ಸಂಜೆ ಅವಳಿಗಾಗಿ ಒಂದು ಅಂದದ ಗಿಫ್ಟ್, ಹೂವಿನ ಬೊಕೆ ಖರೀದಿಸಿ ಅರುಣ್, 2-3 ಸಲ ತನ್ನ ಹೇರ್ ಸ್ಟೈಲ್ ಸರಿಪಡಿಸಿಕೊಂಡು, ಆಫೀಸಿನಿಂದ ಹೊರಡುವಾಗ ತುಸು ಸೆಂಟು ಏರಿಸಿ, ಮುಖ ತೊಳೆದು ನೀಟಾಗಿ ಸಿದ್ಧಗೊಂಡು ಟೀನೇಜ್ ಲವರ್ ಬಾಯ್ ತರಹ ಕಾರು ಓಡಿಸತೊಡಗಿದ.
ಅವಳ ಫ್ಲಾಟ್ ಪ್ರವೇಶಿಸಿದ ತಕ್ಷಣವೇ ಮೋಹಕ ಮುಗುಳ್ನಗೆಯಿಂದ ಸ್ವಾಗತಿಸಿದ ಋತು, “ಓಹ್….. ಬಹಳ ಹೊತ್ತು ಕಾಯಿಸಿಬಿಟ್ಟೆ ಡಾರ್ಲಿಂಗ್….” ಎಂದಳು. ತಾನು ತಂದಿದ್ದ ಬೊಕೆ, ಗಿಫ್ಟ್ ನೀಡುತ್ತಾ ಅರಳಿ ಹಿಗ್ಗಿದ ಅವಳ ಕೆಂದಾವರೆಯಂಥ ಮುಖ ಕಂಡು ನಗುತ್ತಾ, ಅವನ್ನೆಲ್ಲ ಕೊಂಡದ್ದು ಸಾರ್ಥಕವಾಯಿತು ಎಂದುಕೊಂಡ ಅರುಣ್.
“ಇಲ್ಲ ಡಿಯರ್…. ಈಗಿನ್ನೂ 6 ಗಂಟೆ….. 5 ಗಂಟೆಗೇ ಆಫೀಸ್‌ನಿಂದ ಹೊರಟೆ…. ಈ ಶಾಪಿಂಗ್ ಮುಗಿಸಿ ಇಲ್ಲಿಗೆ ಬರುವಷ್ಟರಲ್ಲಿ 6 ಗಂಟೆ ಆಗಿದೆ ಅಷ್ಟೆ…..” ಎಂದು ಅರುಣ್ ಅವಳಿಗೆ ಸಮಾಧಾನ ಹೇಳಿದ.
“ಅದು ಸರಿ…. ಏನಿವತ್ತು ಮನೆಗೇ ಬರಲು ಹೇಳಿದ್ದು?”
“ಇವತ್ತು ನಿನ್ನೊಂದಿಗೆ ಬಹಳಷ್ಟು ಮನ ಬಿಚ್ಚಿ ಮಾತನಾಡಬೇಕಾಗಿದೆ,” ಎನ್ನುತ್ತಾ ಋತು ಅವನನ್ನು ಸೋಫಾದಲ್ಲಿ ಕೂರಿಸಿ, ತಾನೂ ಅವನ ಪಕ್ಕ ಕೂರುತ್ತಾ ಅವನ ಕೈ ಹಿಡಿದು ಹೇಳಿದಳು.
“ನೀನು ಆರಾಮವಾಗಿ ಹೇಳ್ತಿರುವ ಡಿಯರ್….. ಯಾವಾಗ ನಿನ್ನೊಂದಿಗೆ ಇಂಥ ಏಕಾಂತ ದೊರಕುತ್ತೋ ಅಂತ ನಾನೂ ಕಾಯ್ತಿದ್ದೆ!” ಉತ್ಸುಕನಾಗಿ ಹೇಳಿದ ಮರ್ಕಟ ಮನದ ಅರುಣ್.
“ಅರುಣ್ ಡಾರ್ಲಿಂಗ್….. ಕೆಲವು ದಿನಗಳಿಂದ ನಿನ್ನ ಪ್ರೇಮವನ್ನು ಬಹಳ ಮಿಸ್ ಮಾಡ್ತಿದ್ದೀನಿ…..” ಎಂದು ಪಲುಕಿದಳು.
“ನನ್ನ ಬದುಕಿನಲ್ಲಿ ಅನೇಕ ಗಂಡಸರು ಬಂದು ಹೋದರು…. ಆದರೆ ನನ್ನ ಹೃದಯ ನಿನ್ನನ್ನು ಬಿಟ್ಟರೆ ಬೇರಾರನ್ನೂ ಅಲ್ಲಿ ಪ್ರತಿಷ್ಠಾಪಿಸಿಕೊಳ್ಳಲು ಬಯಸುತ್ತಿಲ್ಲ, ನಿನ್ನನ್ನು ಅಂದು ಕಡೆಗಣಿಸಿ ನಾನು ಜೀವನದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ ಅರುಣ್,” ಕೃತಕವಾಗಿ ಬಿಕ್ಕಳಿಸುತ್ತಾ ಅವನ ಎದೆಗೊರಗಿದಳು.
“ಹಳೆಯದನ್ನು ನೆನೆಸಿಕೊಂಡು ಈಗ್ಯಾಕೆ ದುಃಖ ಪಡ್ತೀಯಾ? ನೀನಿಲ್ಲದೆ ಇಷ್ಟು ದಿನ ನಾನೆಷ್ಟು ಕೊರಗಿದೆ ಗೊತ್ತಾ…..?”
“ನನ್ನ ಜೀವನದಲ್ಲಿ ಸುಖ ಅಂತ ಕಂಡಿದ್ದರೆ ಅದು ಕೇವಲ ನಿನ್ನಿಂದ ಮಾತ್ರ ಅರುಣ್….. ನಿನ್ನ ಪ್ರೇಮಕ್ಕಾಗಿ ಚಾತಕಪಕ್ಷಿಯಂತೆ ಚಡಪಡಿಸುತ್ತಿದ್ದೇನೆ, ಇನ್ನು ನನಗೆಂದೂ ನಿರಾಸೆ ಮಾಡದಿರುವ ಅರುಣ್….. ಪ್ಲೀಸ್,” ಎನ್ನುತ್ತಾ ಅವನ ಕೊರಳಿಗೆ ಜೋತುಬಿದ್ದಳು.
“ಆದರೆ…. ನಾನೀಗ ವಿವಾಹಿತ ಋತು, ನಿನಗೆ ನಾನು ಕೊಡಲಾರದ್ದನ್ನು ಮಾತ್ರ ದಯವಿಟ್ಟು ಕೇಳಿ ಬಿಡಬೇಡ,” ಅವಳಿಗೆ ಕೃತಕ ಸಮಾಧಾನ ಹೇಳಿದ ಅರುಣ್.
“ನಾನೆಂದೂ ಸೀಮಾಳ ಹಕ್ಕು ಕಸಿಯುವ ಮಾತನಾಡುವುದಿಲ್ಲ ಅರುಣ್, ಕೇವಲ ನಿನ್ನ ಪ್ರೇಮಭಿಕ್ಷೆ ಬೇಡುತ್ತಿದ್ದೇನೆ ಅಷ್ಟೆ, ಆಗಾಗ ಇಲ್ಲಿಗೆ ಬಂದು….. ಇದನ್ನೆಲ್ಲ ಅವಳಿಗೆ ತಿಳಿಸುವುದೇ ಬೇಡ, ನೀನಾಗಿ ಹೇಳದೆ ತಿಳಿಯುವುದೂ ಇಲ್ಲ,” ಅವನ ಹಣೆ ಚುಂಬಿಸುತ್ತಾ ಹೇಳಿದಳು.
ಕೆಲವು ಕ್ಷಣ ಅವಳನ್ನೇ ದಿಟ್ಟಿಸುತ್ತಿದ್ದ ಅರುಣ್ ನಿಧಾನವಾಗಿ ಹೇಳಿದ, “ದಿಢೀರ್ ಎಂದು ನಮ್ಮ ಮನೆಗೆ ಬಂದದ್ದು, ನನ್ನ ಹೆಂಡತಿಗೆ ಹತ್ತಿರವಾದದ್ದು, ಮಗನನ್ನು ಮೆರೆಸಿದ್ದು…. ಬದಲಾಗುತ್ತಿರುವ ನಿನ್ನ ಹಾವಭಾವ…. ಇವೆಲ್ಲದರಿಂದ ನಿನ್ನ ಉದ್ದೇಶ ಗೊತ್ತಾಯ್ತು ಬಿಡು. ಆದ್ದರಿಂದ ಈಗ ನಾನು ಹೇಳುವುದನ್ನು ಗಮನವಿಟ್ಟು ಕೇಳು….
“ನಮ್ಮಿಬ್ಬರ ಪ್ರೇಮ ಸಂಬಂಧ ನೀನು ನನ್ನನ್ನು ತೊರೆದು ಮಯಾಂಕ್ ಜೊತೆ ಹೊರಟು ಹೋದಂದೇ ಮುಗಿದು ಹೋದ ಕಥೆ! ಆ ದಿನಗಳ ನೆನಪಷ್ಟೇ ಈಗ ನಮಗೆ ಉಳಿದಿರುವುದು. ಆದರೆ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಇದೀಗ ಹೊಸ ಪ್ರೇಮ ಮುಂದುವರಿಸೋಣ ಅಂತ ನೀನು ಅಂದುಕೊಂಡಿದ್ದರೆ ಅದು ಖಂಡಿತಾ ನಡೆಯುವ ಮಾತಲ್ಲ….
“ಇಂಥ ಕಳ್ಳಾಟಗಳನ್ನು ಅಡಗಿಸಿಡುವುದು ಖಂಡಿತಾ ಸುಲಭವಲ್ಲ, ಕೆಮ್ಮು ಹಾದರ ಎಂದೂ ಮುಚ್ಚಿಡಲಾಗದಂತೆ! ಋತು, ಇಂದೂ ಸಹ ನನಗೆ ಆ ನಿಶಾಳ ನೆನಪಿದೆ, ಪಾಪದವಳು…. ತನ್ನ ಜೀವ ಕೊನೆಗಾಣಿಸಲು ಹೊರಟಿದ್ದಳು ಗೊತ್ತಾ? ಅವಳು ಬದುಕಿದ್ದೇ ಹೆಚ್ಚು. ನಾನು ಚಿಕ್ಕ ಮಗುವಿನಂತೆ ಅತ್ತು ಗೋಗರೆದಿದ್ದರೂ ನಿನ್ನ ಮನಸ್ಸು ಕರಗಿರಲಿಲ್ಲ…. ಅಂದು ನನಗೆ ನೀನು ಮಾಡಿದ ವಿಶ್ವಾಸದ್ರೋಹವನ್ನು ಇಂದು ನಾನು ನನ್ನ ಹೆಂಡತಿಗೆ ಬಗೆಯಲಾರೆ! ಪ್ರೀತಿ ಪಾತ್ರರನ್ನು ಕಳೆದುಕೊಂಡರೆ ಆಗುವ ದುಃಖ ಏನೆಂದು ನನಗೆ ಗೊತ್ತು, ಆ ಸ್ಥಿತಿ ನನ್ನ ಸೀಮಾಗೆ ಬರುವುದು ಬೇಡ.
“ನಿನ್ನ ಸ್ವಾರ್ಥವೇ ಮೇಲಾಗಿ, ನನಗಿಂತ ಶ್ರೀಮಂತ ಸಿಕ್ಕಿದಾಗ ನನ್ನನ್ನು ಕಾಲ ಕಸದಂತೆ ಕಡೆಗಣಿಸಿ, ಮಧ್ಯಮ ವರ್ಗದವನೆಂದು ಹಣೆಪಟ್ಟಿ ಅಂಟಿಸಿ ಹೊರಟಹೋದೆ. ಇಂದು ಸುಖಿ ಗೃಹಸ್ಥನಾಗಿರುವ ನಾನು, ನನ್ನ ಸಂಸಾರಕ್ಕೆ ಕೊಳ್ಳಿಯಿಟ್ಟು ನಿನ್ನೊಂದಿಗೆ ಕಳ್ಳ ಸಂಬಂಧ ಹೊಂದಿರಬೇಕೆಂದು ಏಕೆ ಒತ್ತಾಯಿಸುತ್ತಿರುವೆ? ನೀನು ನನಗೆ ಮಾಡಿದ ಅದೇ ದ್ರೋಹವನ್ನು ಆ ಮಯಾಂಕ್ ನಿನಗೆ ಮಾಡಿ ತನ್ನ ಕೈ ತೊಳೆದುಕೊಂಡಿದ್ದಾನೆ, ಇಷ್ಟು ವರ್ಷ ನೆನಪಿಗೆ ಬಾರದ ನಾನು, ಈಗ ನೀನು ಒಂಟಿಯಾಗಿ ಜೀವನ ಎದುರಿಸಲಾರೆ ಎಂದಾಗ ನನ್ನ ಪ್ರೀತಿ ನೆನೆಸಿಕೊಂಡೆಯಾ? ನನ್ನ ಸಂಸಾರದ ನೆಮ್ಮದಿಯನ್ನು ಎಂದೂ ಕೆಡಿಸಲು ಯತ್ನಿಸಬೇಡ!
“ನೋಡು, ನೀನೀಗ ಸೀಮಾಳ ಉತ್ತಮ ಗೆಳತಿ. ನೀನು ಯಾವಾಗ ಬೇಕಾದರೂ ನಮ್ಮ ಮನೆಗೆ ಅತಿಥಿಯಾಗಿ ಬಂದು ಹೋಗಬಹುದು. ಹಿಂದೆ ನಾವು ಫ್ರೆಂಡ್ಸ್ ಆಗಿದ್ದಂತೆ ನಾನು ಎಂದೆಂದೂ ನಿನ್ನ ಹಿತೈಷಿ ಆಗಿಯೇ ಉಳಿಯುತ್ತೇನೆ. ಇಂಥ ಉತ್ತಮ ಗೆಳೆತನಕ್ಕೆ ಮಸಿ ಹಚ್ಚಲು ಎಂದೂ ಯತ್ನಿಸಬೇಡ!”
“ಇದೆಲ್ಲ ಒಣ ವೇದಾಂತದ ಮಾತು, ಬೇಡ….. ನೀನೇಕೆ ಇಷ್ಟು ಹೆದರಬೇಕು ಸ್ವೀಟ್ ಹಾರ್ಟ್?” ಅರುಣನ ಉಪದೇಶದ ಮಾತುಗಳು ಅವಳಿಗೆ ಹಿಡಿಸಲಿಲ್ಲ. ಅವಳು ಮತ್ತೆ ಅವನನ್ನು ಬಳಸಿ ಹಿಡಿಯಲು ಯತ್ನಿಸಿದಳು.
ಅಷ್ಟರಲ್ಲಿ ಯಾಕೋ ಕರೆಗಂಟೆ ಒತ್ತಿದಾಗ, ರಸಾಭಾಸವಾದುದಕ್ಕೆ ಸಿಡುಕುತ್ತಾ ಅವಳು ಬಾಗಿಲು ತೆರೆಯಲು ಹೋದಳು.
“ಬಹುಶಃ ಸೀಮಾ ಇರಬೇಕು…..” ಅರುಣನ ಮಾತು ಕೇಳಿ ತಕ್ಷಣ ತಿರುಗಿ ನೋಡಿದ ಅವಳು ಕಣ್ಣಲ್ಲೇ ಕಿಡಿ ಕಾರತೊಡಗಿದಳು.
“ಓಹೋ…..ನೀನೇ ಕರೆಸಿದ್ದೆಯಾ ಅವಳನ್ನು ಇಲ್ಲಿಗೆ?” ಅವಳು ಹಲ್ಲು ಮಸೆಯುತ್ತಾ ಕೇಳಿದಳು.
“ಹ್ಞೂಂ….”
“ಯಾಕೇಂತ….?”
“ನಾನು ಒಬ್ಬನೇ ಇಲ್ಲಿಗೆ ಬರಲು ಇಷ್ಟವಿರಲಿಲ್ಲ.”
“ಹಾಗಾದರೆ ಈಗ ಬಂದವಳಿಗೆ ಏನು ಹೇಳಲಿ?”
“ನೀನು ಅವಳಿಗೆ ಸತಿ ಆಗಬಯಸಿದೆ ಅಂತ ಹೇಳಿಬಿಡು!”
“ಶಟಪ್ ಅರುಣ್…. ನಮ್ಮ ಮಧ್ಯೆ ನಡೆದ ಮಾತುಕಥೆ ಅವಳಿಗೆ ತಿಳಿಸಿದರೆ, ನಿನ್ನ ಇಲ್ಲೇ ಈಗಲೇ ಕೊಂದುಬಿಡ್ತೀನಿ!” ಈಗ ಅವಳು ಸಿಕ್ಕಿಬಿದ್ದ ಕಳ್ಳಿ ಆಗಿದ್ದಳು.
“ಈಗ ನಿನಗೆ ಭಯ ಆಗ್ತಿದೆಯಾ?” ಅರುಣ್ ಅವಳ ಬಳಿ ಮೆಲ್ಲಗೆ ಪ್ರಶ್ನಿಸಿದ.
“ನಿ….ನ್ನ…. ನಿನ್ನ…. ಸೀಮಾಳ ದೃಷ್ಟಿಯಲ್ಲಿ ನನ್ನ ಇಮೇಜ್ ಕೆಡಿಸಲು ಯತ್ನಿಸಬೇಡ!”
“ನನ್ನಾಸೆ ಕೂಡ ಅದೇ….. ಮೈ ಡಿಯರ್ ಗುಡ್ ಫ್ರೆಂಡ್ ಋತು!”
“ಈಗ ಅವಳಿಗೆ ಏನು ಅಂತ ಸಮಜಾಯಿಷಿ ಕೊಡುವುದು?”
“ಈಗ ನಿನಗೆ ವೈಭವ್ ಹೇಗೆ ಅನಿಸುತ್ತಾನೆ?”
“ಅದು ಸರಿ ಅನಿಸುತ್ತೆ…..”
“ಸರಿ ಅಂತ ಅನ್ನಬೇಡ, ನಿನ್ನ ಅಪೂರ್ಣ ಜೀವನಕ್ಕೆ ಅವನೇ ಬೆಸ್ಟ್! ನಿನ್ನ ಸಪೋರ್ಟ್‌ಗೆ ನಾವಿದ್ದೇವೆ. ನನ್ನ ಮಾತು ಕೇಳು, ಸೀಮಾ ಹೇಳಿದ ಈ ಸಂಬಂಧ ಎಲ್ಲ ವಿಧದಲ್ಲೂ ನಿನಗೆ ಸರಿಯಾಗಿದೆ. ನೀನೂ ಸಂಸಾರಸ್ಥಳಾಗಿ ಬೇರೆಯವರನ್ನೂ ನೆಮ್ಮದಿಯಾಗಿರಲು ಬಿಡು.”
“ಏನು ನಿನ್ನ ಮಾತಿನ ಅರ್ಥ?”
“ಅರ್ಥ ಅಂದ್ರೆ……? ಈಗ ಬರಲಿರುವ ಸೀಮಾಗೆ ನಿನ್ನ ಮದುವೆ ಸಲುವಾಗಿ ಡಿಸ್ಕಸ್ ಮಾಡಲು ಕರೆದಿದ್ದು ಅಂತ ಹೇಳೋಣ. ನಾನು ಬಂದು ವಿವರಿಸಿದ ಮೇಲೆ ನೀನು ಈ ಸಂಬಂಧಕ್ಕೆ ಒಪ್ಪಿದೆ. ನಿಮ್ಮಿಬ್ಬರ ಮದುವೆಗೆ ಶುಭಾಶಯ ಕೋರಲೆಂದೇ ನಾನು ಈ ಬೊಕೆ, ಗಿಫ್ಟ್ ತಂದಿದ್ದು…. ಸೀಮಾಗೂ ಅದನ್ನೇ ಹೇಳ್ತೀನಿ,” ಎಂದ ಅರುಣ್.
“ಸರಿ, ಹಾಗೇ ಆಗಲಿ,” ಎನ್ನುತ್ತಾ ಋತು ಬಾಗಿಲು ತೆರೆಯಲು ಮುಂದಾದಳು. ಒಳಗೆ ಬಂದ ಸೀಮಾ ನಸುನಗುತ್ತಾ, ಹಾರ್ದಿಕವಾಗಿ ಋತುವನ್ನು ಅಪ್ಪಿ “ಕಂಗ್ರಾಟ್ಸ್ ಋತು!” ಎಂದಳು.
“ಇನ್ನೂ ನಾನೇನೂ ಹೇಳಲಿಲ್ಲ…… ಆಗಲೇ ಕಂಗ್ರಾಟ್ಸ್ ಅಂತಿದ್ದೀಯಾ?” ಋತು ಅರ್ಥವಾಗದೆ ಅವಳನ್ನು ಪ್ರಶ್ನಿಸಿದಳು.
“ಇವರು ಆಫೀಸಿನಿಂದ ಹೊರಡುವಾಗಲೇ ನನಗೆ ವಿಷಯ ತಿಳಿಸಿ ಹೇಗಾದರೂ ನಿನ್ನನ್ನು ವೈಭವ್ ಜೊತೆ ಮದುವೆಗೆ ಒಪ್ಪಿಸುವುದಾಗಿ ಹೇಳಿದ್ದರು, ‘ಮಿಷನ್ ಸಕ್ಸಸ್’ ಅಂತ ಈಗ ಮೆಸೇಜ್ ಕಳಿಸಿದರು. ಆಗಲೇ ಅರ್ಧ ದಾರಿ ನಾನು ಹೊರಟು ಬಂದಿದ್ದೆ.”
“ನಿಮ್ಮಿಬ್ಬರಿಗೂ ನಾನು ಚಿರಋಣಿ ಸೀಮಾ….. ನಾನು ದಾರಿ ತಪ್ಪಿ ಮರುಭೂಮಿಯಲ್ಲಿ ನೀರು ಅರಸುತ್ತಾ ಹೊರಟಿದ್ದೆ….. ನನಗೆ ಅರುಣ್ ಮುಂದಿನ ದಾರಿ ತೋರಿಸಿದ,” ಎಂದವಳಿಗೆ ಇಬ್ಬರೂ ಶುಭ ಹಾರೈಸಿದರು.