ಅಂದು ವಂದನಾ ಜಿಮ್ ಗೆ ಹೋಗಿ ಟ್ರೆಡ್‌ ಮಿಲ್‌ನಲ್ಲಿ ವರ್ಕ್‌ಔಟ್‌ ಮಾಡುವಾಗ ಎಂದಿನಂತೆ ಸ್ಪೀಡ್‌ ಹೆಚ್ಚಿಸಿಕೊಳ್ಳಲು ಆಗಲಿಲ್ಲ. ಯಾಕೋ ಸುಸ್ತು ಹೆಚ್ಚಾಗಿ ಏದುಸಿರು ಬರುತ್ತಿತ್ತು. ಪ್ರತಿ ದಿನದ ಜೋಶ್‌ ಅಂದು ಸಂಪೂರ್ಣ ಮರೆಯಾಗಿತ್ತು. ಸರಿಯಾಗಿ ವಾರ್ಮ್ ಅಪ್‌ ಸಹ ಮಾಡಲಾಗಲಿಲ್ಲ. ರಾತ್ರಿಯಿಡೀ ನಿದ್ದೆ ಇಲ್ಲದ ಕಾರಣ ಬೆಳಗ್ಗೆಯಿಂದಲೇ ತಲೆ ಸಿಡಿತ, ಬೇಸರ ಮಡುಗಟ್ಟಿತ್ತು. ಯಾವ ವ್ಯಾಯಾಮ ಅಂದು ಸರಿಹೋಗಲಿಲ್ಲ, ಹೀಗೆ ಎಂದೂ ಅವಳಿಗೆ ಆದದ್ದೇ ಇಲ್ಲ.

ಅವಳ ಫಿಟ್ನೆಸ್‌ ಇಡೀ ಅಪಾರ್ಟ್‌ಮೆಂಟ್‌ನ ಎಲ್ಲಾ ಹೆಂಗಸರಿಗೂ ಆದರ್ಶಪ್ರಾಯ. ಬಲು ಸ್ಮಾರ್ಟ್‌, ಸುಂದರ, ಸ್ಲಿಮ್ ಆಗಿದ್ದ ವಂದನಾ ತನ್ನ ಸದಾ ಹಸನ್ಮುಖಿ, ಬೋಲ್ಡ್ ಸ್ವಭಾವದ ಕಾರಣ ಆ ಏರಿಯಾ ಪೂರ್ತಿ ಫೇಮಸ್‌ ಆಗಿದ್ದಳು. ಅಂದು ಜಿಮ್ ನಲ್ಲಿ ಅವಳ ಗೆಳತಿಯರ ನೋಟವೆಲ್ಲ ಅವಳಲ್ಲೇ ನೆಟ್ಟಿತ್ತು. ಎಲ್ಲರಿಗೂ ಅವಳ ಮನಸ್ಥಿತಿಯ ಅರಿವಿತ್ತು. ಅವಳು ಬೇಸರಗೊಂಡಿರುವುದನ್ನು ನೋಡಿ ಗೆಳತಿಯರಿಗೂ ಬೇಜಾರಾಯಿತು.

ವಂದನಾ ಒಂದು ಬ್ರೇಕ್‌ ಪಡೆದು ತನ್ನ ಬಾಟಲಿಯಿಂದ ನೀರು ತೆಗೆದು ಕುಡಿದಳು. ನಂತರ ಅವಳು ಟ್ರೇನರ್‌ ಅನು ಕಡೆ ತಿರುಗಿ, “ಯಾಕೋ ಇವತ್ತು ಕಾನ್‌ಸಂಟ್ರೇಟ್‌ ಮಾಡಕ್ಕೆ ಆಗ್ತಾ ಇಲ್ಲ…… ನಾನು ಮನೆಗೆ ಹೋಗ್ತೀನಿ,” ಎಂದು ಹೊರಟಳು.

ಪಕ್ಕದಲ್ಲೇ ಸೈಕ್ಲಿಂಗ್‌ ಹೊಡೆಯುತ್ತಿದ್ದ ಶೀಲಾ ಹೇಳಿದಳು, “ಸದ್ಯ, ಇವತ್ತು ನೀನು ಬಂದೆಯಲ್ಲ….. ಅದೇ ನನಗೆ ಖುಷಿ! ನಾವೆಲ್ಲ ನಿನ್ನ ಪರವಾಗಿ ಇದ್ದೇವೆ, ಡೋಂಟ್‌ವರಿ….”

ಅದಾದ ಮೇಲೆ ಅನು, ಶೀಲಾ, ಸೀಮಾ ಸಹ ಬೋರ್‌ ಎಂದು ಅಲ್ಲಿಂದ ಹೊರಟುಬಿಟ್ಟರು. ಮೂವರೂ ಜಿಮ್ ನಿಂದ ಹೊರಟು ಪಕ್ಕದಲ್ಲಿದ್ದ ಸ್ವಿಮಿಂಗ್‌ ಪೂಲ್‌ನ ಬಳಿಯ ಚೇರ್‌ನಲ್ಲಿ ಕುಳಿತರು. ಆಗ ಬೆಳಗಿನ 11 ಗಂಟೆ. ಆ ತೆಳುವಾದ ಹೂಬಿಸಿಲು ಹಿತಕರವಾಗಿತ್ತು. ಅಲ್ಲಿಗೇ ಅವಳ ಕಂಗಳು ತುಂಬಿ ಬಂದಿದ್ದವು. ಶೀಲಾ ಮಾತು ಶುರು ಮಾಡಿದಳು, “ವಂದನಾ, ನಿನ್ನೆ ರಾತ್ರಿಯೆ ನಿನ್ನ ಮೆಸೇಜ್‌ ನೋಡಿದ್ದೆ. ಮತ್ತೆ ಈಗ ಹೇಳು…… ನಿನ್ನೆ ರಾತ್ರಿ ಕಿರಣ್‌ ಆ ಮೋನಿಕಾ ಜೊತೆ ನ್ಯೂ ಇಯರ್‌ ಪ್ಲಾನ್‌ ಡಿಸ್ಕಸ್ ಮಾಡುತ್ತಿದ್ದರೆ, ಆಗಲೇ ಅವರನ್ನು ತರಾಟೆಗೆ ತಗೋಬಾರದಿತ್ತೆ?”

ವಂದನಾ ಗಂಭೀರವಾಗಿ ಉತ್ತರಿಸಿದಳು, “ನಾನು ಅವನನ್ನು ಕೇಳಿದೆ, ಯಾರ ಜೊತೆ ನ್ಯೂ ಇಯರ್‌ ಸೆಲೆಬ್ರೇಟ್‌ ಮಾಡಲು ಪಾರ್ಟಿಗೆ ಹೊರಡುತ್ತಿರುವುದು….. ಯಾವ ಹೋಟೆಲ್‌…. ಅಂತ? ಆಗ ಅನು ನಾಚಿಕೆಯಿಲ್ಲದೆ, `ಖಂಡಿತಾ ನಿನ್ನ ಜೊತೆ ಅಂತೂ ಅಲ್ಲ! ಅಷ್ಟು ಮಾತ್ರ ತಿಳಿದುಕೋ ಸಾಕು…’ ಅಂದ.

`ಯಾರ ಜೊತೆ ಹೋಗ್ತಾ ಇದ್ದಿ?’ ಅಂತ ಹಠದಿಂದ ಕೇಳಿದೆ.

`ಯಾಕೆ ನನ್ನ ಬೆನ್ನ ಹಿಂದೆ ಬಿದ್ದಿರುವೆ? ಈಗಲೇ ಹೇಳಿಬಿಡೀ ಅಥವಾ ನೀನೆ ಅರ್ಥ ಮಾಡಿಕೊಳ್ತೀಯಾ?’

“ಇಂಥ ನಿರ್ಲಜ್ಜ, ನೀಚ ವ್ಯಕ್ತಿಯ ಬಳಿ ವಯಸ್ಕ ಮಕ್ಕಳೆದುರು ಅದಕ್ಕಿಂತ ಹೆಚ್ಚಿಗೆ ಏನು ಹೇಳುವುದು? ಮಕ್ಕಳು ಬೇರೆ ಕೋಣೆಯಲ್ಲಿದ್ದ ಮಾತ್ರಕ್ಕೆ ಅವರಿಗೆ ಇದೆಲ್ಲ ಅರ್ಥ ಆಗುವುದಿಲ್ಲವೇನು? ಅವನಂತೂ ಮೆಲ್ಲಗೆ ಮಾತನಾಡುವ ಮನುಷ್ಯನಲ್ಲ. ಎಲ್ಲಿಂದ ಗಂಟುಬಿದ್ದಳೋ ಆ ಪಾತರಗಿತ್ತಿ…. ಕಿರಣ್‌ಗಂತೂ ಈಗ ನಾವು ಯಾರೂ ಬೇಕಾಗಿಲ್ಲ…..”

ಆಗ ಅನು ಹೇಳಿದಳು, “ನನಗಂತೂ ಆ ಕಿರಣ್‌ನ ಕಾಲರ್‌ಪಟ್ಟಿ ಹಿಡಿದು ಬಾರಿಸಲೇ ಅನಿಸುತ್ತೆ….. ಆ ಹಾಳು ಮೋನಿಕಾ ಸಿಕ್ಕರೆ ನಾಲ್ಕು ಗೂಸಾ ಬಾರಿಸದೆ ಬಿಡಲಾರೆ. ಬೇರೆಯವರ ಸಂಸಾರ ಹಾಳು ಮಾಡಲು ಅವಳಿಗೇನು ಹಕ್ಕಿದೆ? ಅದೂ ಅವಳಿಗೂ ಮದುವೆ ಆಗಿ ಮಗು ಇದೆ, ಕಿರಣ್‌ಗಿಂತ 10 ವರ್ಷ ಚಿಕ್ಕವಳು, ಇಂಥದ್ದರಲ್ಲಿ ಇದೇನು ಸುಡುಗಾಡು ಅಫೇರ್‌ ಇವರದು?”

ಶೀಲಾ ಅಂತೂ ಕೋಪದಿಂದ ಬಸುಗುಡುತ್ತಾ, “ಅವಳೊಬ್ಬಳದೇ ಅಲ್ಲ…. ಇಬ್ಬರದೂ ತಪ್ಪಿದೆ! ಇವರಿಬ್ಬರಿಗೂ ತಕ್ಕ ಶಾಸ್ತಿ ಕಲಿಸದೆ ಬಿಡಬಾರದು, ಏನು ಮಾಡೋದೂ ಅಂತ?” ಹೀಗೆ ಚರ್ಚಿಸುತ್ತಾ ಎಲ್ಲರೂ 1 ಗಂಟೆ ಕಾಲ ಅಲ್ಲೇ ಕುಳಿತಿದ್ದರು. ತಕ್ಷಣವೇ ಯಾವ ಉಪಾಯ ಹೊಳೆಯಲಿಲ್ಲ. ಇರಲಿ ಯೋಚಿಸೋಣ ಎಂದುಕೊಳ್ಳುತ್ತಾ ಎಲ್ಲರೂ ತಂತಮ್ಮ ಮನೆಗೆ ಹೊರಟರು.

ವಂದನಾ ಸಹ ಮನೆಗೆ ಬಂದು ಮೊದಲು ಶವರ್‌ ಕೆಳಗೆ ನಿಂತಳು. ಶವರ್‌ ನೀರಿನೊಂದಿಗೆ ಅವಳ ಕಣ್ಣೀರೂ ಬೆರೆಯಿತು. ತನ್ನನ್ನು ತಾನು ಪರ್ಫೆಕ್ಟ್ ವೈಫ್‌ ಎಂದೇ ಭಾವಿಸಿದ್ದ ವಂದನಾಳಿಗೆ ಇಂದಿನ ತನ್ನ ಸ್ಥಿತಿ ನೆನೆದು ದುಃಖ ಮತ್ತಷ್ಟು ಹೆಚ್ಚಾಗತೊಡಗಿತು. ಕಿರಣ್‌ ತನಗೆ ಹೀಗೆ ಮೋಸ ಮಾಡಬಹುದು ಎಂದು, ಅವಳು ಎಂದೂ ಭಾವಿಸಿರಲಿಲ್ಲ.

ಕಿರಣ್‌ ಅಂದು ಆಫೀಸ್‌ ವತಿಯಿಂದ ಟೂರ್‌ಎಂದು ಮುಂಬೈಗೆ ಹೊರಟಿದ್ದ. ಮಕ್ಕಳಿಬ್ಬರೂ ತಂತಮ್ಮ ಓದಿನಲ್ಲಿ ಮಗ್ನರಾಗಿದ್ದರು. ಸ್ನಾನ ಮುಗಿಸಿ, ತಲೆನೋವೆಂದು 1 ಕಪ್‌ ಕಾಫಿ ಕುಡಿದು ಅವಳು ಹಾಗೇ ಮಲಗಿಬಿಟ್ಟಳು ಇದಕ್ಕೆ ಯಾವ ಪರಿಹಾರ ಹೊಳೆಯಲಿಲ್ಲ. 15 ವರ್ಷಗಳ ದಾಂಪತ್ಯ ಕಣ್ಮುಂದೆ ತೇಲಿ ಬಂದಂತಾಯಿತು. ತುಸು ಫ್ಲರ್ಟಿಂಗ್‌ ಸ್ವಭಾವದ ಕಿರಣ್‌ ಮೊದಲಿನಿಂದಲೂ ಬೇರೆ ಹೆಂಗಸರ ವಿಷಯದಲ್ಲಿ ಮೂಗು ತೂರಿಸುವುದು ಹೆಚ್ಚು.ಎಷ್ಟೋ ಸಲ ಅವಳು ಅದನ್ನು ನಿರ್ಲಕ್ಷಿಸಿದಳು, ಪ್ರೀತಿಯಿಂದ ತಿಳಿ ಹೇಳುವಳು, ಬೈದಾಡಿ ರೇಗಾಡಿದ್ದೂ ಉಂಟು….. ಹಾಗೆಲ್ಲ ಮಾಡಿ ಅವನನ್ನು ಸರಿದಾರಿಗೆ ತರುತ್ತಿದ್ದಳು, ಆದರೆ ಈಗ ಆಗಿರುವ ಸ್ಥಿತಿಯಂತೂ ಬಹಳ ನೀಚ ಮಟ್ಟದ್ದಾಗಿತ್ತು.

2 ವರ್ಷಗಳ ಹಿಂದೆ ಇವರ ಅಪಾರ್ಟ್‌ಮೆಂಟ್‌ನಲ್ಲಿ ಖಾಲಿ ಇದ್ದ ಒಂದು ಫ್ಲಾಟ್‌ಗೆ ಮೋನಿಕಾ ತನ್ನ ಪತಿ ವಿನಯ್‌ ಹಾಗೂ ಮಗು ಕಿಟ್ಟು ಜೊತೆ ಬಾಡಿಗೆಗೆ ಬಂದಿದ್ದಳು. ಆ ಅಪಾರ್ಟ್‌ಮೆಂಟ್‌ನಲ್ಲಿ ಅದೂ ಇದೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇದ್ದವು. ಆ ಮೂಲಕ ವಂದನಾ ಮೋನಿಕಾ ಉತ್ತಮ ಗೆಳತಿಯರಾದರು. ಎರಡೂ ಕುಟುಂಬಗಳು ವಾರಾಂತ್ಯದಲ್ಲಿ ಪರಸ್ಪರರ ಮನೆಗೆ ಬಂದು ಆರಾಮವಾಗಿ ಚಿತ್ರ ನೋಡಿ, ಡಿನ್ನರ್‌ ಮುಗಿಸಿ ಹರಟುತ್ತಿದ್ದರು.

ಈ ಮಧ್ಯೆ ವಂದನಾಳ ಕಣ್ತಪ್ಪಿಸಿ ಯಾವಾಗ ಕಿರಣ್‌ ಮೋನಿಕಾ ನಿಕಟರಾದರೋ ಅವಳ ಅರಿವಿಗೆ ಬರಲೇ ಇಲ್ಲ. ಇವಳಿಗೆ ಗೊತ್ತಾಗುವಷ್ಟರಲ್ಲಿ ತನ್ನ ಕುಟುಂಬದ ಅಸ್ತಿವಾರವೇ ಅಲುಗುವ ಸ್ಥಿತಿಗೆ ಬರುತ್ತದೆ ಎಂದು ತಿಳಿಯಲಿಲ್ಲ, ಕಂಗಾಲಾದಳು.

ವಿನಯ್‌ ತನ್ನ ಬಿಸ್‌ನೆಸ್‌ ಪೂರ್ತಿ ಲಾಸ್‌ ಮಾಡಿಕೊಂಡು ಜೂಜು, ಹೆಂಡ, ದುರ್ವ್ಯವಯಹಾರಗಳಲ್ಲಿ ಮುಳುಗಿರುತ್ತಿದ್ದ. ಎಷ್ಟೋ ದಿನ ಮನೆಗೆ ಬಾರದೆ ಹೊರಗೆ ಉಳಿಯುತ್ತಿದ್ದ. ಆಕಸ್ಮಿಕವಾಗಿ ಒಂದು ದಿನ ಕಿರಣ್‌ ಸ್ನಾನಕ್ಕೆ ಹೋಗಿದ್ದಾಗ, ಅವನಿಗೆ ಯಾವುದೋ ಕಾಲ್ ‌ಬಂತೆಂದು ಅದಕ್ಕೆ ಉತ್ತರಿಸಲು ಬಂದ ವಂದನಾ, ಕಿರಣನ ಜಾತಕವನ್ನು ಅವನ ವಾಟ್ಸ್ ಆ್ಯಪ್‌ ಮೆಸೇಜ್‌ ಮುಖಾಂತರ ತಿಳಿಯಬೇಕಾಯಿತು.

ಅವರಿಬ್ಬರ ಕಿಡಿಗೇಡಿ ಚ್ಯಾಟ್‌ ತಿಳಿದುಕೊಂಡವಳ ಕಾಲಡಿಯ ನೆಲ ಕುಸಿದಂತಾಯಿತು. ಅದರಲ್ಲಿ ಎಲ್ಲ ಕ್ಲಿಯರ್‌ ಆಗಿತ್ತು. ಇಬ್ಬರೂ ಎಂದೋ ನೈತಿಕತೆಯ ಗಡಿ ದಾಟಿ ಬಲು ದೂರ ಹೋಗಿಬಿಟ್ಟಿದ್ದರು. ಪತಿ, ಮಗ ಇಲ್ಲದ ಸಮಯ ನೋಡಿ ಮೋನಿಕಾ ಕಿರಣ್‌ನ ಜೊತೆ ಊರೆಲ್ಲ ಸುತ್ತಾಡಿ, ಬೇಡದ ಫೋಟೋಗಳನ್ನು ತೆಗೆಸಿಕೊಂಡಿದ್ದು ಅಲ್ಲಿ ಸ್ಪಷ್ಟ ಕಂಡು ಬಂತು. ಇದಕ್ಕಾಗಿ ಕಿರಣ್‌ಮೋನಿಕಾಳಿಗೆ ಮನ ಬಂದಂತೆ  ಖರ್ಚು ಮಾಡುತ್ತಿದ್ದ. ಅವರಿಬ್ಬರ ಆ ಕಳ್ಳಾಟ ಈಗ ಸಾಕ್ಷಿ ಸಮೇತ ಸಿಕ್ಕಿಬಿದ್ದಿತ್ತು.

ಅನು ಸ್ನಾನ ಮುಗಿಸಿ ಬಂದಾಗ ಮೊಬೈಲ್‌ನಲ್ಲಿದ್ದ ಫೋಟೋ ಚಾಟ್‌ ತೋರಿಸುತ್ತಾ ವಂದನಾ ನೇರವಾಗಿ ಕೇಳಿದಳು, “ಇದೇನು ನಡೆಯುತ್ತಿದೆ ಕಿರಣ್‌….?” ಅದನ್ನು ಕಂಡು ಕಿರಣ್‌ಗೆ ಒಂದು ಕ್ಷಣ ಶಾಕ್‌ ಆಯಿತು. ಇನ್ನೇನು ವಿಷಯ ತಿಳಿದುಹೋಯಿತಲ್ಲ ಎಂದು ನಿರಾಳವಾಯಿತು. ಕ್ಷಣ ಮಾತ್ರದಲ್ಲಿ ಆ ಪರಿಸ್ಥಿತಿ ಎದುರಿಸಲು ಸಿದ್ಧನಾಗಿ ನಾಚಿಕೆ ಇಲ್ಲದೆ ನುಡಿದ, “ಹೌದು, ಅವಳು ನನ್ನ ಪ್ರೇಯಸಿ. ಈಗ ನೀನು ಇಲ್ಲದ ಸೀನ್‌ ಕ್ರಿಯೇಟ್‌ ಮಾಡಬೇಡ. ಎಂದಿನಂತೆ ತಂದೆಯಾಗಿ ಮಾಮೂಲಿನಂತೆ ಇದ್ದುಬಿಡುತ್ತೇವೆ. ಬೇಕಾದಾಗ ಅವಳ ಜೊತೆ ಊರೆಲ್ಲ ಸುತ್ತಾಡುತ್ತೇನೆ. ಒಂದು ನೆನಪಿಡಿ, ನಾನಂತೂ ಅವಳನ್ನು ಎಂದೂ ಬಿಟ್ಟುಕೊಡೋಲ್ಲ. ಏನೂ ಗಮನಿಸದವಳಂತೆ ನಿನ್ನ ಪಾಡಿಗೆ ನೀನು ಇದ್ದುಬಿಡು!”

“ನಮಗೆ ಇಷ್ಟು ದೊಡ್ಡ ಮಕ್ಕಳಿದ್ದಾರೆ…. ಮದುವೆಯಾಗಿ 15 ವರ್ಷದ ಮೇಲಾಯ್ತು….. ನಾನು ನಿನ್ನ ಹಲವಾರು ತಪ್ಪುಗಳನ್ನು ಸಹಿಸಿದ್ದೇನೆ, ಬಿಟ್ಟುಬಿಟ್ಟಿದ್ದೇನೆ. ಆದರೆ ಈ ಕೇಸನ್ನೂ ಹೋದರೆ ಹೋಗಲಿ ಅಂತ ಬಿಡೋಳಲ್ಲ! ಇದೆಲ್ಲ ತೀರಾ ಅತಿ ಆಯ್ತು ಅಂತ ನಿಂಗೆ ಅನ್ನಿಸ್ತಿಲ್ಲಾ?”

“ಜಾಸ್ತೀನೋ ಕಡಿಮೇನೋ…. ನಂಗೆ ಈಗ ಇದೇ ಇಷ್ಟ! ನಿನಗೆ ಬೇಕಾದರೆ ಸುಮ್ಮನೆ ಸಂಸಾರ ಮಾಡಿಕೊಂಡಿರು, ಬೇಡವಾದರೆ ನಿನ್ನ ದಾರಿ ನೋಡಿಕೊಂಡು ಹೋಗ್ತಾ ಇರು.”

ಕೇಳುತ್ತಿದ್ದಂತೆ ವಂದನಾ ಬಿಕ್ಕಳಿಸ ತೊಡಗಿದಳು, “ನೀನು ಈ ಮಟ್ಟಕ್ಕೆ ಇಳಿಯಬಾರದಿತ್ತು ಕಿರಣ್‌…..”

“ಹೇಳಿದ್ನಲ್ಲ….. ಐ ಡೋಂಟ್‌ ಕೇರ್‌! ನಿನ್ನ ಕೈಲಿ ಏನಾಗುತ್ತೋ ಅದನ್ನು ಮಾಡಿಕೋ!”

ಏನೂ ನಡೆದೇ ಇಲ್ಲವೆಂಬಂತೆ ಕಿರಣ್‌ ಬಟ್ಟೆ ಧರಿಸಿ, ಸ್ಟೈಲಾಗಿ ಕೈಲಿ ಫೋನ್‌ ತಿರುಗಿಸುತ್ತಾ ಹೊರಗೆ ಹೊರಟೇಹೋದ. ಆ ದಿನದಿಂದ ಈ ದಿನದವರೆಗೆ, ಕೆಲಸದಲ್ಲಿ ಇಲ್ಲದ ವಂದನಾ, ಆರ್ಥಿಕವಾಗಿ ಅವನನ್ನೇ ಆಶ್ರಯಿಸಿದ್ದ ಕಾರಣಕ್ಕಾಗಿ ಮುಂದೇನು ಮಾಡಬೇಕೋ ತಿಳಿಯದೆ ಬೆಂಕಿ ಬಲೆಯಲ್ಲಿ ಬೇಯುತ್ತಿದ್ದಳು.

ಮೋನಿಕಾಳ ಫ್ಲಾಟ್‌ ಇವರ ಮನೆಯಿಂದ 50-60 ಮೀಟರ್‌ ಅಂತರದಲ್ಲಿತ್ತು. ಆ ಅಪಾರ್ಟ್‌ಮೆಂಟ್‌ನಲ್ಲಿ ವಂದನಾಳ ಹಲವು ಗೆಳತಿಯರು ವಾಸವಾಗಿದ್ದರು. ಅವರೆಲ್ಲ ಮೋನಿಕಾಳ ಮನೆಗೆ ಕಿರಣ್‌ ಬಂದು ಹೋಗುವುದನ್ನು ಗಮನಿಸಿ, ಆಗಾಗ ವಂದನಾಳಿಗೆ ತಿಳಿಸುತ್ತಿದ್ದರು.

ಅವರುಗಳು ಆಗಾಗ ದೂರುತ್ತಿದ್ದಂತೆ ವಂದನಾ ಮತ್ತೆ ಅವನ ಜೊತೆ ಗುದ್ದಾಡುವಳು, “ಯಾಕೆ ನಮ್ಮೆಲ್ಲರ ಮಾನ ಹೀಗೆ ಹರಾಜು ಹಾಕ್ತೀಯಾ? ಮಕ್ಕಳು ಬೆಳೆದಿದ್ದಾರೆ…. ಎಲ್ಲಾ ತಿಳಿಯುತ್ತೆ ಅನ್ನೋ ಜ್ಞಾನ ಇಟ್ಟುಕೋ…”

“ಐ ಡೋಂಟ್‌ ಕೇರ್‌! ನೀನು ಬೇಕಾದ್ದು ಮಾಡಿಕೋ…..ನಾನು ಇರೋದೇ ಹೀಗೆ……”

ಈಗ ವಂದನಾಳಿಗೆ ಪೂರ್ತಿ ತಲೆ ಕೆಟ್ಟು ಹೋಯ್ತು. ಈಗ ಇದು ಅವಳ ಕೈ ಮೀರಿದ ವಿಷಯವಾಗಿತ್ತು. ಕಿರಣ್‌ ಮನೆಯಲ್ಲಿ ಮಕ್ಕಳ ಮೇಲೂ ಅನಗತ್ಯವಾಗಿ ರೇಗಾಡುತ್ತಿದ್ದ. ವಂದನಾಳನ್ನು ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಿದ್ದ. ಊಟಕ್ಕೆ ಬಡಿಸಿದರೆ, ತಟ್ಟೆ ತಳ್ಳಿ ಹೊರಗೆ ಹೋಗುತ್ತಿದ್ದ. ಶಿವಮೊಗ್ಗದಲ್ಲಿದ್ದ ತನ್ನ ತಾಯಿ, ಅಣ್ಣನಿಗೆ ಕಿರಣನ ಕುಕೃತ್ಯಗಳ ಬಗ್ಗೆ ಹೇಳಿದಾಗ, ಮಕ್ಕಳನ್ನು ಕರೆದುಕೊಂಡು ತಕ್ಷಣ ಹೊರಟು ಬಾ, ಅವನ ಸಹವಾಸವೇ ಬೇಡ ಎಂದು ಸಲಹೆ ನೀಡಿದರು. ಅವರಿಗಂತೂ ಅಳಿಯನ ಮೇಲೆ ಕೆಟ್ಟ ಕೋಪ ಬಂದಿತ್ತು. ಅವರು ತಾವಾಗಿ ಕಿರಣನಿಗೆ ಫೋನ್‌ ಮಾಡಿ, ಸಂಸಾರ ಸರಿಪಡಿಸಿಕೊಳ್ಳಲು ಹೇಳಿದರು. ಅವರನ್ನು ಹೀನಾಮಾನ ಬೈದು ಲೈನ್‌ ಕಟ್‌ ಮಾಡುತ್ತಿದ್ದ. ಮಕ್ಕಳಿಗಂತೂ ಅಪ್ಪನ ಮುಖ ನೋಡಲಿಕ್ಕೂ ಇಷ್ಟವಿರಲಿಲ್ಲ. ಅವನೊಂದಿಗೆ ಮಾತನಾಡುವುದನ್ನೇ ಬಿಟ್ಟರು.

ಮತ್ತೊಮ್ಮೆ ಒಬ್ಬಳೇ ಕುಳಿತು ವಂದನಾ ಮನಸ್ಸನ್ನು ನಿಯಂತ್ರಿಸಿಕೊಳ್ಳುತ್ತಾ ಎಲ್ಲವನ್ನೂ ಮತ್ತೊಮ್ಮೆ ವಿಶ್ಲೇಷಿಸಿದಳು. ಒಂದೊಂದಾಗಿ ಎಲ್ಲವನ್ನೂ ತಾಳೆ ಹಾಕಿದಳು. ಗಂಡನನ್ನು ಬಿಟ್ಟು ತವರಿಗೆ ಹೋಗುವುದರಿಂದ ಲಾಭ ಇಲ್ಲ ಎಂದು ಅರಿತಳು. ತಾನು ಗಳಿಸುತ್ತಿಲ್ಲವಾದ್ದರಿಂದ ಊರಿಗೆ ಹೋಗಿ ಅಣ್ಣನಿಗೆ ಹೊರೆಯಾಗಿರಲು ಬಯಸಲಿಲ್ಲ. ಮಕ್ಕಳ ಓದು, ಭವಿಷ್ಯ ನೋಡಬೇಕಲ್ಲವೇ? ಅವರ ಖರ್ಚು ವೆಚ್ಚ ಕಡಿಮೆ ಅಲ್ಲ. ತವರಿನಲ್ಲಿ ಮೊದಲು ಸಿಗುವ ಆದರಣೆ, ನಿರಂತರ ಇರಲು ಸಾಧ್ಯವೇ? ಖಂಡಿತಾ ಇಲ್ಲ ಅನಿಸಿತು.

ಕಿರಣ್‌ ಅವ್ಯವಹಾರ ಮಾಡಿ ರಾಜಾರೋಷವಾಗಿರುವಾಗ ತಾನೇಕೆ ತಪ್ಪಿತಸ್ಥಳಂತೆ ಅಳುತ್ತಾ ಕೂರಬೇಕು? ಅವನ ಪಾಪಕ್ಕೆ ತಾನೇಕೆ ಕೊರಗಬೇಕು ಎಂದು ಮನಸ್ಸು ದೃಢ ಪಡಿಸಿಕೊಂಡಳು.

ಅವಳು ಬಿ.ಎಸ್ಸಿ ಪದವೀಧರೆ. ಹೀಗಾಗಿ ಆ ಅಪಾರ್ಟ್‌ಮೆಂಟ್‌ನ 10ನೇ, 12ನೇ ತರಗತಿಯ ಮಕ್ಕಳಿಗೆ ಸುಲಭವಾಗಿ ಗಣಿತ, ವಿಜ್ಞಾನ ಕಲಿಸುವಳು. ಈ ರೀತಿ ಬಿಡುವಿನಲ್ಲಿ ಟ್ಯೂಷನ್‌ ಕಲಿಸುತ್ತಿದ್ದಳು, ಈಗ ಅದನ್ನು ಪೂರ್ಣ ಪ್ರಮಾಣದಲ್ಲಿ ಸಂಪಾದನೆಯ ಮಾರ್ಗ ಮಾಡಿಕೊಂಡಳು. ತನ್ನ, ಮಕ್ಕಳ ವೈಯಕ್ತಿಕ ಖರ್ಚಿಗಾಗಿ ಅದನ್ನು ಬಳಸುವಳು. ಯಾರು ತಪ್ಪು ಮಾಡಿದ್ದಾರೋ ಅವರೇ ಪಶ್ಚಾತ್ತಾಪಪಡಲಿ ಎಂದು ನಿರ್ಧರಿಸಿದಳು. ಇನ್ನೂ ಅವಳು, ನಿಸ್ಸಾಹಯಕತೆ ಸಾಕು ಎಂದು ಕೊಡವಿಕೊಂಡು ಹೊಸ ಹುರುಪು ಹೆಚ್ಚಿಸಿಕೊಂಡಳು.

ಅಪಾರ್ಟ್‌ಮೆಂಟ್‌ನಲ್ಲೇ ಇದ್ದ ಜಿಮ್ ಗೆ ಅವಳು 6 ಗಂಟೆಗೆ ಹೋಗಿ 7 ಗಂಟೆಗೆ ಮರಳಿದಳು. ಶೀಲಾ ಸಹ ಅವಳಿದ್ದ ಬಿಲ್ಡಿಂಗ್‌ನಲ್ಲೇ ಇದ್ದಳು. ಮಾರನೇ ದಿನ ಇವಳ ಮೂಡ್‌ ಸರಿಹೋಗಿರುವುದನ್ನು ಗಮನಿಸಿ ಶೀಲಾ ಆಶ್ಚರ್ಯದಿಂದ, “ಆಹಾ, ಖುಷಿಯಾಗಿ ಕಾಣ್ತಿದ್ದೀಯಲ್ಲ….. ಕಿರಣ್‌ ನಿನ್ನ ದಾರಿಗೆ ಬಂದನೇ?” ಎಂದು ಕೇಳಿದಳು.

ಅದಕ್ಕೆ ವಂದನಾ ನಸುನಗುತ್ತಾ, “ನಾಯಿ ಬಾಲ ನೆಟ್ಟಗಾಗೋದು ಉಂಟೇ? ಆಫೀಸ್‌ ಕೆಲಸದ ಮೇವೆ ಅವನು ಮುಂಬೈಗೆ ಹೋಗಿದ್ದಾನೆ,” ಎಂದಳು.

“ಮತ್ತೆ…. ನಿನ್ನ ಸರಿಹೋದ ಮೂಡ್‌ ಕಂಡು ಕೇಳಿದೆ.”

“ಇರಲಿ, ಎಲ್ಲರೂ ಬಂದ ಮೇಲೆ ಹೇಳ್ತೀನಿ,” ಎಂದಳು.

ಮಕ್ಕಳು ಕಾಲೇಜಿಗೆ ಹೊರಡಲು ಸಿದ್ಧರಾಗುತ್ತಿದ್ದರು.“ಅಮ್ಮ, ಅಪ್ಪ ಹೀಗೆ ಆಗಾಗ ಟೂರ್‌ಗೆ ಹೋಗುತ್ತಿದ್ದರೆ ಮನೆ ಪ್ರಶಾಂತವಾಗಿರುತ್ತೆ,” ಎಂದಳು ಮಗಳು.

ವಂದನಾ ನಗುತ್ತಾ, “ಅದೇನೋ ನಿಜ,” ಎಂದಳು.

“ನನಗಂತೂ ಆ ಮನುಷ್ಯನ, ಮುಖ ನೋಡಿದ್ರೆ ಮಾತನಾಡಿಸಬೇಕು ಅಂತಾನೇ ಅನ್ಸಲ್ಲ! ನೀನು ಇದನ್ನೆಲ್ಲ ಹೇಗಮ್ಮ ಸಹಿಸಿಕೊಂಡಿದ್ದಿ?” ಮಗರಾಯನ ಸಿಟ್ಟು ಕೆರಳಿತ್ತು.

“ಇರಲಿ ಬಿಡಿ ಮಕ್ಕಳೆ, ಆ ವ್ಯರ್ಥ ವಿಷಯವಾಗಿ ಈಗ ಚರ್ಚೆ ಬೇಡ. ಮುಂದೆ ಹೇಗೆ ಬಾಳಬೇಕೂಂತ ನಾನು ನಿರ್ಧರಿಸಿದ್ದೀನಿ. ನನ್ನ ಮಾನಸಿಕ ನೆಮ್ಮದಿ ಕೆಡಿಸಿಕೊಳ್ಳುವುದಿಲ್ಲ. ನಾನು ತಪ್ಪು ಮಾಡಿಲ್ಲ…… ಹೀಗಿರುವಾಗ ನಾನೇಕೆ ದುಃಖಿಸಲಿ?” ಎಂದು ಮಕ್ಕಳಿಗೆ ಸಮಾಧಾನ ಹೇಳಿದಳು.

“ನಮ್ಮ ಹೆಮ್ಮೆಯ ಅಮ್ಮ ನೀನು!” ಎಂದು ಅವಳನ್ನು ಅಪ್ಪಿ, ಬೈ ಹೇಳಿ ಅವರು ಹೊರಟರು.

ಗೆಳತಿಯರ ಜಿಮ್ ಮುಗಿದ ಮೇಲೆ ಎಲ್ಲರೂ ಒಟ್ಟಿಗೆ ಹೋಗಿ ಕ್ಲಬ್‌ ಹೌಸ್‌ನಲ್ಲಿ ಕುಳಿತರು. ಈಗ ಅನು ಅವಳನ್ನು ನೋಡಿ ಕೇಳಿದಳು, “ವಂದನಾ, ಈಗ ನೀನು ಬೆಟರ್‌ ಆಗಿ ಕಾಣಿಸುತ್ತಿರುವೆ!”

“ಹೌದು, ಇನ್ನು ಮುಂದೆ ನಾನು ಕಿರಣ್‌ಗಾಗಿ ಸದಾ ಚಿಂತಿಸುತ್ತಾ ಕೂರುವುದಿಲ್ಲ…… ನನ್ನ ಜೀವನದಲ್ಲಿ ಎಂಜಾಯ್‌ ಮಾಡುವಂಥದ್ದು ಇನ್ನೂ ಬೇಕಾದಷ್ಟಿದೆ…. ಆದ್ದರಿಂದ ಅಂಥ ಒಬ್ಬ ವಿಶ್ವಾಸದ್ರೋಹಿಗಾಗಿ ಕಣ್ಣೀರು ಮಿಡಿಯುವ ಅಗತ್ಯವಿಲ್ಲ. ಎಷ್ಟು ಬೇಕಾಗಿತ್ತೋ ಅದೆಲ್ಲ ಅತ್ತು ಮುಗಿಸಿದ್ದಾಯಿತು, ಇನ್ನು ಅಳಲಾರೆ. ನನ್ನ ಅಳು ಅವನ ಮೇಲೆ ಯಾವ ಪರಿಣಾಮ ಬೀರಿಲ್ಲ, ಬೀರಲಾರದು. ಬದಲಿಗೆ ಆ ಮೋಸಗಾರ ನನ್ನ ಅಳು ಕಂಡು ನನ್ನನ್ನು ಇನ್ನಷ್ಟು ಹೀನಾಯವಾಗಿ ಕಾಡುತ್ತಾನೆ.”

ಆಗ ಅನು ಹೇಳಿದಳು, “ನಿಜಕ್ಕೂ ನೀನು ನಮ್ಮ ಹೆಮ್ಮೆಯ ಗೆಳತಿ ವಂದನಾ! ಇವತ್ತು ಆ ಮಾಯಾಂಗನೆ ಮೋನಿಕಾಳ ಮನೆಯ ಮಾಲೀಕರಾದ ಮಾಧವರಾಯರು ಬಂದಿದ್ದರು. ಅವರು ತುಂಬಾ ಕೋಪದಲ್ಲಿ ಅವಳನ್ನು ಏನೇನೋ ಬೈಯುತ್ತಿದ್ದರು. ಜೋರು ಜೋರಾಗಿ ಮಾತು ಕೇಳಿಸುತ್ತಿತ್ತು,” ಅನು ಮೋನಿಕಾಳ ಮನೆಯ ಮುಂದಿನ ಫ್ಲಾಟ್‌ನಲ್ಲೇ ವಾಸವಿದ್ದಳು.

ಶೀಲಾ ಕೇಳಿದಳು, “ಓ…… ಹೌದೇನು?”

“ಹ್ಞಾಂ…… ಹ್ಞಾಂ…… ಸಮಯಕ್ಕೆ ಸರಿಯಾಗಿ ಬಾಡಿಗೆ ಕೊಟ್ಟಿಲ್ಲ ಅಂತ ಚೆನ್ನಾಗಿ ದಬಾಯಿಸುತ್ತಿದ್ದರು.”

ಆಗ ಶೀಲಾ ಹೇಳಿದಳು, “ಈ ಪಾಪಿ ಮೋನಿಕಾ ನಮ್ಮ ಅಪಾರ್ಟ್‌ಮೆಂಟ್‌ ಬಿಟ್ಟು ತೊಲಗಿದರೆ ಎಷ್ಟೋ ಚೆನ್ನಾಗಿರುತ್ತದಲ್ಲವೇ? ಏನಾದರೂ ಮಾಡಿ ಇವಳನ್ನು ಇಲ್ಲಿಂದ ಓಡಿಸಬೇಕು. ಅನು, ನಿನಗೆ ಆ ಮಾಧವರಾಯರು ಗೊತ್ತಿರಬೇಕಲ್ಲವೇ?”

“ಹೌದು, ಹಲವು ವರ್ಷಗಳಿಂದ ಆ ಮನೆಗೆ ಅವರು ಬಾಡಿಗೆದಾರರು ಬಿಟ್ಟು ಹೋಗುವಾಗ ಪೇಂಟ್‌ ಮಾಡಿಸಲಿಕ್ಕೆಂದು ಬಂದಾಗೆಲ್ಲ ಮಾತನಾಡಿಸಿದ್ದೇನೆ. ನನ್ನ ಪತಿ ಸುಧೀರ್‌ಗೂ ಅವರು ಚೆನ್ನಾಗಿ ಗೊತ್ತು, ಒಳ್ಳೆ ಮನುಷ್ಯ.”

“ಅವರ ಫೋನ್‌ ನಂಬರ್‌ ಇದೆ ಏನು?”

“ಹೌದು, ಸುಧೀರ್‌ ಬಳಿ ಇದೆ. ಫೋನ್‌ ಮಾಡಬೇಕೇನು?”

ನಂತರ ನಾಲ್ವರೂ ಬಹಳ ಹೊತ್ತು ಮುಂದೇನು ಮಾಡಬೇಕೆಂದು ಚರ್ಚಿಸಿದರು. ನಂತರ ನಗುತ್ತಾ ಮನೆಗೆ ಹೊರಟರು.

ಆ ರಾತ್ರಿ ಇವರ ಯೋಜನೆಯಂತೆ ಅನು ಗಂಡ ಸುಧೀರ್‌ ಮೋನಿಕಾಳ ಮನೆಯ ಮಾಲೀಕರಾದ ಮಾಧವರಾಯರಿಗೆ ಫೋನ್ ಮಾಡಿದ. ಅವರ ಯೋಗಕ್ಷೇಮ ವಿಚಾರಿಸಿ ನಂತರ ಮೂಲ ವಿಷಯಕ್ಕೆ ಬಂದ, “ಇಡೀ ಅಪಾರ್ಟ್‌ಮೆಂಟ್‌ನಲ್ಲಿ ನಿಮ್ಮ ಫ್ಲಾಟ್‌ಟಾಕ್‌ ಆಫ್‌ ದಿ ಟೌನ್‌ ಆಗಿದೆ!”

“ಅದು ಹೇಗೆ…..? ಏನು ವಿಷಯ?” ಆತಂಕದಿಂದ ಅವರು ಕೇಳಿದರು.

ಆಗ ಸುಧೀರ್‌ ಅವರಿಗೆ ಮೋನಿಕಾಳ ಸಂಪೂರ್ಣ ವಿಷಯ ತಿಳಿಸಿದ. ಅವಳಿಂದಾಗಿ ಇಡೀ ಅಪಾರ್ಟ್‌ಮೆಂಟ್‌ನವರು ತಲೆ ತಗ್ಗಿಸಬೇಕಾದ ವಿಷಯವಾಗಿದೆ ಎಂದು ವಿವರಿಸಿದ.

ಮಾಧವರಾಯರಿಗೆ ಸಿಕ್ಕಾಪಟ್ಟೆ ರೇಗಿಹೋಯಿತು. ಮೊದಲೇ ಮೋನಿಕಾ ಮನೆಯವರು 6 ತಿಂಗಳ ಬಾಡಿಗೆ ಬಾಕಿ, ಅವಳ ಗಂಡನಿಗೆ ಫೋನ್‌ ಮಾಡಿದರೆ ಆಸಾಮಿ ಫೋನೇ ತೆಗೆಯೋಲ್ಲ. ಈ ರಗಳೆ, ಅಪಖ್ಯಾತಿ ಕೇಳಿದ ಮೇಲೆ ಅವರನ್ನು ಅಲ್ಲಿಂದ ಓಡಿಸಬೇಕು ಎಂದು ನಿರ್ಧರಿಸಿದರು. ಮೋನಿಕಾ ಗಂಡ ವಿನಯ್‌ ಕೆಲಸ ಕಾರ್ಯವಿಲ್ಲದೆ ಸದಾ ಕುಡಿದು ತೂರಾಡುತ್ತಿರುತ್ತಾನೆ, ಅವನಿಗೆ ಯಾರೂ ಮರ್ಯಾದೆ ಕೊಡುವುದಿಲ್ಲ ಎಂದೂ ಸೇರಿಸಿದ. ಅಡ್ವಾನ್ಸ್ ನಲ್ಲಿ ಅವರ ಹಣ ಮುರಿದುಕೊಂಡು ಉಳಿದದ್ದನ್ನು ಸೆಟಲ್ ‌ಮಾಡಲು ನಿರ್ಧರಿಸಿದರು.

ಮಾರನೇ ಬೆಳಗ್ಗೆ ಮನೆ ಮಾಲೀಕ ಮನೆ ಬಾಗಿಲಿಗೆ ಬಂದಾಗ ಮೋನಿಕಾ ದಂಪತಿಗೆ ಕೈಕಾಲು ನಡುಗಿತು. “ಒಂದು ವಾರ ಟೈಂ ಕೊಡ್ತೀನಿ, 6 ತಿಂಗಳ ಬಾಡಿಗೆ ಚುಕ್ತಾ ಮಾಡಿ, ಇಲ್ಲ ಮನೆ ಖಾಲಿ ಮಾಡಿ!” ಎಂದು ಒಂದೇ ಮಾತಿನಲ್ಲಿ ಖಡಕ್‌ ಆಗಿ ತಿಳಿಸಿದರು.

“ಇದೆಂಥ ಸೂಚನೆ ನಿಮ್ಮದು? ಈ ರೀತಿ ಎಲ್ಲೂ ರೂಲ್ಸ್ ‌ಇಲ್ಲ! ನೀವು 1 ತಿಂಗಳ ಟೈಮ್ ಕೊಡಲೇಬೇಕು,” ಎಂದರು.

“ರೂಲ್ಸ್ ‌ಬಗ್ಗೆ ಮಾತನಾಡಲು ನಿಮಗೇನು ನೈತಿಕತೆ ಇದೆ? ಗಂಡ ಸದಾ ಕುಡಿದು ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲರ ಹತ್ತಿರ ಛೀ ಥೂ ಅನ್ನಿಸಿಕೊಂಡರೆ, ಹೆಂಡ್ತಿ ಗರತಿಯೇ ಅಲ್ಲ ಎಂಬಂತೆ ಊರು ಸುತ್ತುತ್ತಾ ಅಪಖ್ಯಾತಿ ಪಡೆದಿರುವುದು ನನಗೆ ಗೊತ್ತಿಲ್ಲವೇ? ನಿಮ್ಮಂಥ ಮಾನಗೆಟ್ಟವರಿಗೆ ಇಲ್ಲಿ ಇಷ್ಟು ದಿನ ಇರಲು ಅವಕಾಶ ಕೊಟ್ಟಿದ್ದೇ ಹೆಚ್ಚು! ಮುಂದಿನ ಭಾನುವಾರ ಬೆಳಗ್ಗೆ ಇದೇ ಹೊತ್ತಿಗೆ ಬರ್ತೀನಿ ಮನೆ ಕೀಲಿ ಕೈ ಕೊಡಲಿಲ್ಲವೇ, ಒಳಗಿನ ಸಾಮಾನು ಸರಂಜಾಮು ಹೊರಗೆ ಎಸೆಯಬೇಕಾಗುತ್ತೆ… ನೆನಪಿರಲಿ!”

ಅವರೂ ಬಾಯಿಗೆ ಬಂದಂತೆ ವಾದ ಮಾಡಿದರು. ಮಾಧವರಾಯರು ಚೆನ್ನಾಗಿ ಉಗಿದು, ಸಾಮಾನು ಎಸೆಯುವುದಾಗಿ ಖಾತ್ರಿಪಡಿಸಿಯೇ ಅಲ್ಲಿಂದ ಹೊರಟರು. ಮಗನನ್ನು ಶಾಲೆಗೆ ಕಳುಹಿಸಲು ಬಾಲ್ಕನಿಗೆ ಬಂದು ಕೈ ಬೀಸುತ್ತಿದ್ದ ಅನು, ಇವರ ವಾಗ್ವಾದ ಪೂರ್ತಿ ಕೇಳಿಸಿಕೊಳ್ಳುವಂತಾಯಿತು.

ಸಂಭ್ರಮದಿಂದ ಅವಳು ವಂದನಾಳಿಗೆ ಫೋನ್‌ ಮಾಡಿ ವಿಷಯ ತಿಳಿಸಿದಳು, “ಒಂದಂತೂ ಗ್ಯಾರಂಟಿ…. ಈ ಪೀಡೆಗಳು ಒಂದು ವಾರದಲ್ಲಿ ಇಲ್ಲಿಂದ ತೊಲಗುತ್ತವೆ. ಒಂದು ವಿಷಯ ನಿರಾಳವಾಯಿತು.”

“ಈ ವಿಷಯವನ್ನು ನೀವೆಲ್ಲ ಸರಿಯಾಗಿ ನಿಭಾಯಿಸಿದಿರಿ, ಅವಳು ಬೇರೆ ಕಡೆ ಹೋದ ಮಾತ್ರಕ್ಕೆ ಈ ಕಿರಣ್‌ ಜೊತೆ ಸೇರದೆ ಇರುತ್ತಾಳೆಯೇ? ಈ ಮನುಷ್ಯನ ಮೇಲೆ ನನಗಂತೂ ಎಂದೂ ನಂಬಿಕೆ ಬರೋದಿಲ್ಲ ಬಿಡು. ಇರಲಿ…. ಅದನ್ನು ನಾನೇ ಸರಿ ಮಾಡ್ತೀನಿ, ಥ್ಯಾಂಕ್ಸ್” ಎಂದಳು.

ಮತ್ತೆ ಈ ಗೆಳತಿಯರು ಕ್ಲಬ್‌ ಹೌಸ್‌ನಲ್ಲಿ ಭೇಟಿಯಾದಾಗ ಹಿಂದಿನ ಬೇಸರ ಓಡಿಹೋಗಿತ್ತು. “ಅಂತೂ ಕೊನೆಗೆ ಅನು, ಮೋನಿಕಾಳನ್ನು ಅಲ್ಲಿಂದ ಓಡಿಸಿದಳು!”  ಎಲ್ಲರೂ ನಕ್ಕರು.

“ವಂದನಾ…. ನೀನು ಪಾರ್ಟಿ ಕೊಡಬೇಕು,” ಶೀಲಾ ಹೇಳಿದಳು.

“ಇಂಥ ವಿಷಯಕ್ಕೆ ಯಾರಾದರೂ ಪಾರ್ಟಿ ಕೇಳ್ತಾರಾ? ಸ್ವಲ್ಪವಾದ್ರೂ ಸಂಕೋಚ ಬೇಡವೇ…..” ಎಂದು ಛೇಡಿಸಿದಳು.

“ಅರೇ…. ನಾವು ಈ ಕಾಲದ ಮಾಡರ್ನ್‌ ಫ್ರೆಂಟ್ಸ್, ಇಂಥದ್ದಕ್ಕೆ ಸಂಕೋಚ ಮಾಡಲಾದೀತೇ?”

“ಸರಿ, ಹಾಗಾದರೆ ಕಿರಣ್‌ಬರಲಿ ಅವನನ್ನು ದಾರಿಗೆ ತಂದು ಆಮೇಲೆ ಪಾರ್ಟಿ ಮಾಡೋಣ,” ಎಂದು ವಂದನಾ ಹೇಳಿದಾಗ ಎಲ್ಲರೂ ತಲೆದೂಗಿದರು.

ಅಂತೂ ಕಿರಣ್‌ 1 ವಾರದ ನಂತರ ಮುಂಬೈ ಟೂರ್‌ನಿಂದ ಮರಳಿದ. ಈ ಬಾರಿ ಅವನ ಮೂಡ್‌ ಪೂರ್ತಿ ಕೆಟ್ಟಿತ್ತು. ಮೋನಿಕಾ ತಮ್ಮ ಅಪಾರ್ಟ್‌ಮೆಂಟ್‌ ಬಿಟ್ಟು ಹೊರಡುತ್ತಿದ್ದಾಳೆ ಎಂಬ ಟೆನ್ಶನ್‌ನಲ್ಲಿದ್ದಾನೆ ಎಂದು ವಂದನಾ ಅರಿತುಕೊಂಡಳು. ಅದಾಗಿ 2 ದಿನ ಅವನು ಆಫೀಸಿಗೆ ಹೋಗಲೇ ಇಲ್ಲ. ಸದಾ ಮಲಗಿರುತ್ತಿದ್ದ ಅಥವಾ ಟೆರೇಸ್‌ನಲ್ಲಿ ಸಿಗರೇಟ್‌ ಸೇದುತ್ತಾ ಇದ್ದುಬಿಡುತ್ತಿದ್ದ.

ಸದಾ ಮೋನಿಕಾ ಜೊತೆ ಚ್ಯಾಟಿಂಗ್‌, ಮೆಲು ಮಾತು ನಡೆದೇ ಇತ್ತು. ವಂದನಾ ತನ್ನ ಕೆಲಸಗಳಲ್ಲಿ ಬಿಝಿ ಆಗಿದ್ದಳು. ಅವಳು ಮನೆಯಲ್ಲೇ ಟ್ಯೂಷನ್‌ ನಡೆಸುತ್ತಿದ್ದರೂ ಗಮನವೆಲ್ಲ ಗಂಡನ ಕಡೆಯೇ ಇರುತ್ತಿತ್ತು. ಅವನಿಂದ ಎಷ್ಟೇ ಕಿರುಕುಳ ಹೆಚ್ಚಿದರೂ, ವಂದನಾ ಶಾಂತವಾಗಿರುತ್ತಿದ್ದಳು.

2 ವಾರಗಳಲ್ಲಿ ಮೋನಿಕಾ ಮನೆ ಖಾಲಿ ಮಾಡಿಕೊಂಡು ಹೊರಟಳು. ಅಲ್ಲಿಂದ ಅವರು ಬೆಂಗಳೂರಿನ ಹೊರಲಯದ ದೂರದ ಏರಿಯಾದಲ್ಲಿ 1 ಕೋಣೆಯ ವಠಾರದ ಮನೆಗೆ ಬಾಡಿಗೆಗೆ ಬಂದಿದ್ದರು. ಕಿರಣ್‌ ಮತ್ತಷ್ಟು ತಣ್ಣಗಾದ. ವಂದನಾ ಅವನನ್ನು ಏನೂ ವಿಚಾರಿಸಲಿಲ್ಲ.

ನಾಲ್ವರು ಗೆಳತಿಯರೂ ಮತ್ತೆ ಭೇಟಿಯಾದಾಗ, ವಂದನಾ ತಾನೇ ಹೇಳಿದಳು, “ನಿಮ್ಮೆಲ್ಲರಿಗೂ ಥ್ಯಾಂಕ್ಸ್ ಹೇಳಲೇಬೇಕು.”

“ಅದಕ್ಕೆ ಕಣಮ್ಮ ಪಾರ್ಟಿ ಕೇಳಿದ್ದು…..” ಯಾರೋ ಹೇಳಿದರು.

“ನಡೆಯಿರಿ, ನಾವೀಗ ಎಲ್ಲರೂ ಕೂಡಿ ಈ ನ್ಯೂ ಇಯರ್‌ ಸಂಭ್ರಮಾಚರಣೆಗಾಗಿ ಮ್ಯಾರಥಾನ್‌ ವಾಕ್‌ ಮಾಡೋಣ. ಎಲ್ಲರೂ ಬಂದುಹೋಗುವುದು, ಹೋಟೆಲ್‌, ಊಟ ತಿಂಡಿ ಖರ್ಚೆಲ್ಲ ನನ್ನ ಕಡೆಯಿಂದ. ನ್ಯೂ ಇಯರ್‌ ಪಾರ್ಟಿ ಅಲ್ಲೇ ಮುಗಿಸೋಣ. ಈ ರೀತಿ ನನಗಾಗಿ ನಾನೊಂದು ಬದಲಾವಣೆ ಮಾಡಿಕೊಳ್ಳಬೇಕಿದೆ,” ಎಂದಳು ವಂದನಾ.

ಎಲ್ಲರಿಗೂ ಆಶ್ಚರ್ಯವಾಯಿತು, “ಹೌದೇ?”

“ಹೌದು, ಹಾಗೆಯೇ ನಿಮ್ಮ ನಿಮ್ಮ ಮನೆಯವರಿಗೆ ತಿಳಿಸಿ ನ್ಯೂ ಇಯರ್‌ ಈವ್ ದಿನ ನಿಮ್ಮನ್ನು ದಿಸ್ಟರ್ಬ್‌ ಮಾಡಬಾರದು ಅಂತ,” ವಂದನಾ ಹೇಳಿದಳು.

“ಹೌದು, ಮಕ್ಕಳೀಗ ದೊಡ್ಡವರಾಗಿದ್ದಾರೆ, ಚಿಂತೆ ಇಲ್ಲ. ನಮ್ಮ ಮನೆಯವರಿಗೂ ನಾವು ಯಾಕಾಗಿ ಈ ಪಾರ್ಟಿಗೆ ಹೊರಟಿದ್ದೇವೆ ಎನ್ನುವುದು ಚೆನ್ನಾಗಿ ಗೊತ್ತು. ನಿನ್ನೊಂದಿಗೆ ನಾವು ನ್ಯೂ ಇಯರ್‌ ಪಾರ್ಟಿ ಮಾಡಿದರೆ ಯಾರೂ ಅಡ್ಡಿಪಡಿಸೋಲ್ಲ. ಆದರೆ ಕಿರಣ್‌ಏನಂತಾನೋ?” ಶೀಲಾ ಕೇಳಿದಳು.

“ತನ್ನ ಪ್ರೇಯಸಿ ದೂರವಾದಳು ಅವನು ಶೋಕಾಚರಣೆಯಲ್ಲಿದ್ದಾನೆ, ಇರಲಿ ಬಿಡು. ಮಕ್ಕಳು ಸಹ ತಮ್ಮ ಸಹಪಾಠಿಗಳೊಂದಿಗೆ ಮೈಸೂರಿಗೆ ಹೊರಟಿದ್ದಾರೆ. ಫ್ರೆಂಡ್ಸ್ ಜೊತೆ ನಾನು ನ್ಯೂ ಇಯರ್‌ ಸೆಲೆಬ್ರೇಟ್‌ ಮಾಡಬೇಕೆಂಬುದು ಅವರದೇ ಐಡಿಯಾ! ನಾನು ಈ ಪಾರ್ಟಿ ಅರೇಂಜ್‌ ಮಾಡಲು ಪಿಗ್ಗಿ ಬ್ಯಾಂಕ್‌ನಿಂದ ಅವರೇ ದುಡ್ಡು ಕೊಟ್ಟರು, ನಾನೇ ಬೇಡವೆಂದು ನನ್ನ ಹಣ ಬಳಸಿದೆ.”

“ವಾಹ್‌…… ವೆರಿ ಗುಡ್‌ ಐಡಿಯಾ! ಮಕ್ಕಳೆಂದರೆ ಹೀಗಿರಬೇಕು. ಆ ಕಿರಣ್‌ ಮಹಾಶಯ ಒಬ್ಬನೇ ಕುಳಿತು ರೋಧಿಸಲಿ, ನಾವೆಲ್ಲ ಎಂಜಾಯ್‌ ಮಾಡೋಣ.”

ವಂದನಾ ಮಕ್ಕಳ ಜೊತೆ ಮಾತಾಡುತ್ತಾ, ಖುಷಿಯಾದ ಮೂಡ್‌ನಲ್ಲಿದ್ದರೆ, ಕಿರಣ್‌ ಮುಖ ಊದಿಸಿಕೊಂಡು ಒಂದೆಡೆ ಕುಳಿತಿರುತ್ತಿದ್ದ. ಬ್ರೇಕ್‌ ಫಾಸ್ಟ್, ಊಟ, ತಿಂಡಿ ಎಲ್ಲಾ ರೆಡಿ ಮಾಡಿ ವಂದನಾ ಮಕ್ಕಳ ಜೊತೆ ನಗುನಗುತ್ತಾ ಅದನ್ನು ಮುಗಿಸಿ ಉಳಿದಿದ್ದನ್ನು ಡೈನಿಂಗ್‌ ಟೇಬಲ್ ಮೇಲಿರಿಸಿ ಮೌನವಾಗಿ ತನ್ನ ಕೋಣೆಗೆ ಹೋದರೆ, ಯಾವಾಗಲೋ ಬಂದು ಕಿರಣ್‌ತಿಂದು ಹೊರಡುತ್ತಿದ್ದ. ಈಗ ಮನೆಯಲ್ಲಿ ಅವನೊಬ್ಬನೇ ಆಗಿಹೋದ. ರಾತ್ರಿ ಮತ್ತೆ ಅದೇ ರಿಪೀಟ್‌ ಆಗುತ್ತಿತ್ತು. ಅವನು ಟಿವಿ ನೋಡಲು ಹಾಲ್‌ಗೆ ಬಂದರೆ, ಇವರೆಲ್ಲರೂ ಟಿವಿ ಆಫ್‌ ಮಾಡಿ ಅಲ್ಲಿಂದ ಎದ್ದು ಕೋಣೆಗೆ ಹೋಗಿಬಿಡುತ್ತಿದ್ದರು.

ಒಮ್ಮೊಮ್ಮೆ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದ. ಅವಳು ಅವನನ್ನು ಏನೂ ಕೇಳುತ್ತಿರಲಿಲ್ಲ. ಹಿಂದಿನ ತರಹ ಜಾಲಿ ಮೂಡ್‌ನಲ್ಲಿರದೆ ಅವನು ಸದಾ ಸಪ್ಪೆಮೋರೆ ಹಾಕಿಕೊಂಡು ಬರುತ್ತಿದ್ದ. ಈಗ ಮೋನಿಕಾ ಹೋಗಿದ್ದ ವಠಾರ ಸದಾ ಗಿಜಿಗಿಜಿ ಎನ್ನುತ್ತಿದ್ದುದರಿಂದ ಇಲ್ಲಿನಂತೆ ಅಲ್ಲಿ ಈ ಪಾಪಿಗಳಿಗೆ ಪ್ರೈವೆಸಿ ಸಿಗುತ್ತಿರಲಿಲ್ಲ. ಮೋನಿಕಾ ಸಹ ಈಗ ಬಹಳ ಸಿಡುಕುತ್ತಿದ್ದಳು. ಕಿರಣ್‌ ತಾನೇ ತಮ್ಮ ಮನೆಯ 6 ತಿಂಗಳ ಬಾಡಿಗೆ ಕಟ್ಟಿದ್ದಿದ್ದರೆ, ಈ ವಠಾರಕ್ಕೆ ಬರಬೇಕಾದ ಗತಿ ಬರುತ್ತಿರಲಿಲ್ಲ ಎಂದು ಗೊಣಗುತ್ತಿದ್ದಳು. ಒಟ್ಟಿಗೆ ಒಂದೂವರೆ ಲಕ್ಷ ಕಟ್ಟುವುದು ಕಿರಣನಿಗೂ ಅಸಾಧ್ಯವಾಗಿತ್ತು.

ಅವಳು ಆ ವಠಾರಕ್ಕೆ ಬಂದ ಮೇಲೆ ಇವನಿಂದ ವಿಮುಖಳಾದಳು. ತಮ್ಮಿಬ್ಬರ ಅಫೇರ್‌ ಈ ರೀತಿ ನಿಂತುಹೋದದ್ದು ಅವನಿಗೆ ಬಹಳ ಖೇದವೆನಿಸಿತು. ಇತ್ತ ಹೆಂಡತಿ ವಂದನಾ ಒಂದಿಷ್ಟೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಅವನಿಗೆ ಉರಿ ಉರಿ ಎನಿಸಿತು. 31ನೇ ಡಿಸೆಂಬರ್‌ ಸಾಯಂಕಾಲ ತನ್ನ ಬ್ರೀಫ್‌ ಕೇಸ್‌ ಪ್ಯಾಕ್‌ ಮಾಡುತ್ತಾ ವಂದನಾ ಹೊರಟಾಗ ಅವನು ತಡೆಯಲಾರದೆ, “ಎಲ್ಲಿಗೆ ಹೊರಟೆ?” ಎಂದು ಕೇಳಿದ.

“ಫ್ರೆಂಡ್ಸ್ ಜೊತೆ ಮ್ಯಾರಥಾನ್‌!”

“ಯಾಕೆ? ಏನು? ಯಾರ ಜೊತೆ ಇದೆಲ್ಲ?’

‘“ಯಾರ  ಜೊತೆಗಾದರೂ ಇರಲಿ, ನಿನಗೇಕೆ ಕಣ್ಣುರಿ? ನೀನು ಯಾರ ಜೊತೆ ಎಲ್ಲಿಗೆ ಬೇಕೋ ಅಲ್ಲಿಗೆ ಹೊರಡು….. ನಾನು ಡಿಸ್ಟರ್ಬ್‌ ಮಾಡುವುದೂ ಇಲ್ಲ, ಎಲ್ಲಿಗೆ ಎಂದು ಕೇಳುವುದೂ ಇಲ್ಲ. ನಾನಂತೂ ಹಾಯಾಗಿ ನನ್ನ ಫ್ರೆಂಡ್ಸ್ ಜೊತೆ ಎಂಜಾಯ್ ಮಾಡ್ತಿದ್ದೀನಿ!”

ಕಿರಣನ ಮುಖ ಕಪ್ಪಿಟ್ಟು ಹೋಯಿತು. ಏನೂ ಹೇಳಲು ಆಗಲಿಲ್ಲ. ಅಷ್ಟರಲ್ಲಿ ಮಕ್ಕಳು ಸಹ ತಂತಮ್ಮ ಬ್ಯಾಗ್‌ ಹಿಡಿದು ಬಂದರು.

“ಅಮ್ಮ ಚೆನ್ನಾಗಿ ಎಂಜಾಯ್‌ ಮಾಡಿ ಬಾ. ಯಾರಿಗೋಸ್ಕರಾನೂ ಬೇಜಾರು ಮಾಡಿಕೊಂಡು ಅಳುತ್ತಾ ಇರಬೇಡ. ಇನ್ನು ಮುಂದೆ ನಮ್ಮ ಜೀವನ ನಮಗೆ!” ಎಂದು ತಾವೆಲ್ಲ ಒಂದೇ ಎಂಬಂತೆ ಒಟ್ಟಿಗೆ ಹೊರ ನಡೆದರು. ಮನೆಯ ಡೂಪ್ಲಿಕೇಟ್‌ ಕೀ ಎಲ್ಲರ ಬಳಿ ಇತ್ತು. ಕಿರಣ್‌ನನ್ನು ಕ್ಯಾರೇ ಎನ್ನುವವರೇ ಇಲ್ಲದೆ ಅವನಿಗೆ ಬಹಳ ಅವಮಾನವಾಯಿತು. ಈ ಗೆಳತಿಯರಿಗಾಗಿ ಈಗಾಗಲೇ ರೂಂ ಬುಕ್‌ ಆಗಿತ್ತು. ನ್ಯೂ ಇಯರ್‌ ಪಾರ್ಟಿಯಲ್ಲಿ ಈ ನಾಲ್ವರೂ ಚೆನ್ನಾಗಿ ಎಂಜಾಯ್‌ ಮಾಡಿದರು. ಹೋಟೆಲ್‌ನ ಓಪನ್ ಗಾರ್ಡನ್‌ನಲ್ಲಿ ಮ್ಯೂಸಿಕ್‌, ಡ್ಯಾನ್ಸ್, ಡಿನ್ನರ್‌ ಎಲ್ಲ ಅರೇಂಜ್‌ ಆಗಿತ್ತು. ಎಲ್ಲರೂ ಚೆನ್ನಾಗಿ ಮಸ್ತಿ ಮಾಡುತ್ತಾ, ಹಾಯಾಗಿ ಊಟ ಮಾಡಿದರು. ಕಿರಣ್‌ನ 2 ಮಿಸ್‌ ಕಾಲ್ಸ್ ನೋಡಿ ಎಲ್ಲರೂ ಜೋರಾಗಿ ನಕ್ಕರು.

ಇವರೆಲ್ಲ ಹೊಸ ವರ್ಷದ ಪಾರ್ಟಿ ಮುಗಿಸಿ, ಮಾರನೇ ದಿನ 12 ಗಂಟೆ ಹೊತ್ತಿಗೆ ಮನೆಗೆ ಹಿಂದಿರುಗಿದಾಗ, ಕಿರಣ್‌ ಅನಾಥನಂತೆ ಒಬ್ಬನೇ ಕುಳಿತು ಟಿವಿ ನೋಡುತ್ತಿದ್ದ. ಈ ಮೂವರೂ ಅವಳ ಕೋಣೆಯಲ್ಲಿ ಕುಳಿತು ತಂತಮ್ಮ ಸಂತೋಷದ ಕ್ಷಣಗಳ ಕುರಿತು ಹಂಚಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದರೆ, ಆ ನಗು, ಕೇಕೆ, ಉಲ್ಲಾಸ ಕಿರಣನಿಂದ ಸಹಿಸಲಾಗಲಿಲ್ಲ. ತಾನೇ ಎದ್ದು ಬಂದು ಅವರು ಕುಳಿತಿದ್ದ ಕೋಣೆಯ ಬಾಗಿಲನ್ನು ದಢಾರೆಂದು ಹಾಕಿಕೊಂಡು ಹೋದ.

ಈ ರೀತಿ ಯಾವುದೋ ಹೋಟೆಲ್‌ನಲ್ಲಿ ಡ್ಯಾನ್ಸ್ ಆಡುತ್ತಾ ಮೋನಿಕಾ ಜೊತೆ ಸಂಭ್ರಮಿಸಬೇಕಿದ್ದ ಅವನು ನಿರಾಶನಾಗಿ ಇಂದು ಮನೆಯಲ್ಲೇ ಕುಡಿಯುತ್ತ ಕುಳಿತಿದ್ದ. ಮೋನಿಕಾ ಎರಡೇ ವಾರಗಳ ಒಳಗೆ ಹೊಸ ಗೆಳೆಯನನ್ನು ಕಂಡುಕೊಂಡಿದ್ದಳು. ಅದನ್ನು ಕಂಡ ಕಿರಣ್‌ ಹತಾಶನಾಗಿ ಮನೆಗೆ ಮರಳಿದ್ದ. ಅತ್ತ ವಂದನಾ ಹೊಸ ವರ್ಷದಲ್ಲಿ ಹೊಸ ಹೆಜ್ಜೆ ಇಡಲು ಸಿದ್ಧಳಾಗುತ್ತಿದ್ದರೆ, ಇತ್ತ ಕಿರಣ್‌ ನಿರಾಶನಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ