ರಶ್ಮಿ ತನ್ನ ಸ್ಕೂಟಿಯನ್ನು ಪಾರ್ಕಿಂಗ್ ಜಾಗದಿಂದ ತೆಗೆದು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಹಿಂದಿನಿಂದ ಜೋರಾಗಿ ಕಾರ್ ಹಾರ್ನ್ ಕೇಳಿಸಿತು.
`ಅಬ್ಬಾ, ಈ ಬೆಂಗಳೂರಿನಲ್ಲಿ ಜನರಿಗೆ ಒಂದು ನಿಮಿಷಾನೂ ಕಾಯೋ ಪೇಷನ್ಸ್ ಇಲ್ಲ,' ಎಂದು ಗೊಣಗಿಕೊಂಡು ರಶ್ಮಿ ತನ್ನ ಸ್ಕೂಟಿಯನ್ನು ಪಕ್ಕಕ್ಕೆ ತಂದುಕೊಂಡು ಕಾರಿಗೆ ಜಾಗ ಮಾಡಿಕೊಟ್ಟಳು. ವೇಗವಾಗಿ ಮುಂದೆ ಹೋದ ಕಾರು ಮತ್ತದೇ ವೇಗದಲ್ಲಿ ಹಿಂದೆ ಬಂದು ರಶ್ಮಿ ಪಕ್ಕದಲ್ಲಿ ನಿಂತಿತು.
ಇದೇನಪ್ಪಾ ಅಂದುಕೊಂಡಳು ರಶ್ಮಿ. ಕಾರ್ ಡ್ರೈವ್ ಮಾಡುತ್ತಿದ್ದ ವ್ಯಕ್ತಿ ತನ್ನನ್ನು ಉದ್ದೇಶಿಸಿ ಏನೋ ಮಾತನಾಡಲು ಯತ್ನಿಸಿದಂತೆ ಅನಿಸಿತವಳಿಗೆ. ಕಾರ್ ಎಂಜಿನ್ ಆಫ್ ಮಾಡಿದ ವ್ಯಕ್ತಿ ತನ್ನೆದುರು ನಿಂತಾಗ ರಶ್ಮಿ ಆತನನ್ನೇ ದೀರ್ಘವಾಗಿ ದಿಟ್ಟಿಸಿದಳು. ಹಾಕಿರುವ ಬ್ಲ್ಯಾಕ್ ಪ್ಯಾಂಟ್, ಅದರ ಮೇಲೆ ಹಸಿರು ಉದ್ದ ತೋಳಿನ ಶರ್ಟ್, ಅಲೆ ಅಲೆಯಂತಿರುವ ಕಪ್ಪು ಗುಂಗುರು ಕೂದಲು. ಕಣ್ಣಿಗೆ ಸನ್ ಗ್ಲಾಸ್ ಧರಿಸಿ ತುಂಬಾ ಸ್ಮಾರ್ಟ್ ಆಗಿದ್ದ ಎತ್ತರದ ಹುಡುಗ.
``ಹೇಯ್, ನೀನು ರಶ್ಮಿ ಅಲ್ವಾ?'' ಅಪರಿಚಿತನ ಬಾಯಲ್ಲಿ ತನ್ನ ಹೆಸರು ಕೇಳಿ ರಶ್ಮಿಗೆ ಆಶ್ಚರ್ಯವಾಯಿತು.
``ಹೌದು.... ನೀವು...?'' ರಶ್ಮಿ ಅನುಮಾನಿಸಿದಾಗ ಆತ ತನ್ನ ಸನ್ ಗ್ಲಾಸ್ ತೆಗೆಯುತ್ತಾ, ``ನಾನು ಅಭಿರಾಮ್,'' ಎಂದ.
``ಅರೆ! ನೀನಾ? ಮೈಗಾಡ್ ಅನ್ ಬಿಲಿವೇಬಲ್!'' ಕಾಲೇಜಿನಲ್ಲಿ ತನ್ನ ಜೊತೆಯಲ್ಲೇ ಎಂಜಿನಿಯರಿಂಗ್ ಓದಿದ ಅಭಿರಾಮ್ ನೆನಪು ಅವಳ ಮನದಲ್ಲಿ ಮೂಡಿತು. ಎತ್ತರ, ಸಪೂರ ದೇಹ, ಯಾವಾಗಲೂ ಚಿಂತಾಕ್ರಾಂತಾಗಿರುತ್ತಿದ್ದ ಮುಖ ಈಗ ಸಂಪೂರ್ಣ ಬದಲಾಗಿದೆ.
``ಹೇ ರಶ್ಮಿ, ಎಲ್ಲಿ ಕಳೆದುಹೋದೆ?'' ಅಭಿರಾಮನ ಕೂಗಿಗೆ ಎಚ್ಚೆತ್ತ ರಶ್ಮಿ, ``ನನಗೆ ನಂಬೋಕೇ ಆಗ್ತಿಲ್ಲ... ಎಷ್ಟೊಂದು ಬದಲಾಗಿದ್ದೀಯಾ? ಎಲ್ಲಿದ್ದೀಯಾ? ಏನ್ಮಾಡ್ತಿದ್ದೀಯಾ....?'' ಪ್ರಶ್ನೆಗಳ ಸುರಿಮಳೆಯನ್ನೇ ಹಾಕಿದಳು ರಶ್ಮಿ.
``ನಾನು ಎಂ.ಎನ್.ಸಿ.ಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಇಷ್ಟು ಸಮಯ ಯುಎಸ್‌ನಲ್ಲಿದ್ದು ಇದೀಗ ಬೆಂಗಳೂರಿಗೆ ಬಂದು ಎರಡು ತಿಂಗಳಾಯಿತು. ನಿಂದೇನು ಕಥೆ? ರಿಸಲ್ಟ್ ಬರೋ ಮುಂಚೆಯೇ ಮದುವೆ ಮಾಡಿಕೊಂಡು ತುಮಕೂರು ಸೇರ್ಕೊಂಡಳು ಮತ್ತೆ ಇಲ್ಹೇಗೆ?''
``ನಾನೂ ಇಲ್ಲೇ ಕೆಲಸ ಮಾಡುತ್ತಿದ್ದೇನೆ,'' ರಶ್ಮಿ ಇನ್ನೂ ಏನೋ ಹೇಳುವಷ್ಟರಲ್ಲಿ ಹಿಂದಿನಿಂದ ಬೇರೆ ವಾಹನಗಳು ದಾರಿಗಾಗಿ ಹಾರ್ನ್ ಮಾಡತೊಡಗಿದವು.
``ಅಭೀ, ತಗೋ ಇದು ನನ್ನ ವಿಸಿಟಿಂಗ್ ಕಾರ್ಡ್. ನನ್ನ ಮನೇ ವಿಳಾಸಾನೂ ಇದೆ. ಬರೋ ಶನಿವಾರ ಖಂಡಿತಾ ಮನೆಗೆ ಬಾ,'' ಎಂದವಳೇ ಸ್ಕೂಟಿ ಹತ್ತಿ ಹೋದಳು. ಅಭಿರಾಮ್ ಕಾರು ಹತ್ತಿ ತನ್ನ ಮನೆಯ ಕಡೆಗೆ ಹೋದನು.
ರಶ್ಮಿಯ ಕುತ್ತಿಗೆಯಲ್ಲಿ ಮಾಂಗಲ್ಯ ಹಾಕಿರಲಿಲ್ಲ ಎಂದುಕೊಂಡ ಅಭಿ. ಅಷ್ಟರಲ್ಲಿ ತನ್ನ ಯೋಚನೆ ಬಗ್ಗೆ ತನಗೇ ನಗು ಬಂತು. ಈಗಿನ ಕಾಲದಲ್ಲಿ ಎಷ್ಟು ಜನ ಇದನ್ನೆಲ್ಲಾ ಅನುಸರಿಸುತ್ತಾರೆ ಎಂದುಕೊಂಡ. ತನ್ನ ಕಾಲೇಜು ದಿನಗಳ ನೆನಪಾಯಿತು. ಅಭೀ, ರಶ್ಮಿ, ಚೈತ್ರಾ, ಸುಧೀರ್ ಮತ್ತು ಸುಜಯ್ ಒಂದು ಗ್ಯಾಂಗ್. ಅವರಲ್ಲಿ ಅಭಿಯೇ ಸ್ಟಡೀಸ್‌ನಲ್ಲಿ ಎಲ್ಲರಿಗಿಂತ ಮುಂದೆ. ಆದರೆ ಆರ್ಥಿಕವಾಗಿ ಹಿಂದುಳಿದ ಮನೆಯಿಂದ ಬಂದಿದ್ದ. ಒಂದೊಂದ್ಸಲ ಫೀಸ್ ಕಟ್ಟುವುದು ತಡವಾಗಿ ಆಫೀಸ್‌ನಿಂದ ಛೀಮಾರಿ ಕೂಡ ಹಾಕಿಸಿಕೊಳ್ಳುತ್ತಿದ್ದ. ತುಂಬಾ ಸಲ ರಶ್ಮಿಯೇ ಅವನ ಫೀಸ್ ಕಟ್ಟಲು ಸಹಾಯ ಮಾಡುತ್ತಿದ್ದಳು. ಹೋಟೆಲ್‌ಗೆ ಹೋದಾಗಲೂ ಅಭೀ ಪಾಲಿನ ಬಿಲ್ಲನ್ನು ಅವಳೇ ಭರಿಸುತ್ತಿದ್ದಳು.