ಅಂದು ಲಲಿತಾಳಿಗೆ ಪಾರ್ಲರ್‌ನಲ್ಲಿ ಅಪಾಯಿಂಟ್‌ಮೆಂಟ್ ಇತ್ತು. ಮದುವೆಯಾದ ಹೊಸತರಲ್ಲಿ ಅವಳಿಗೆ ಎಲ್ಲವೂ ಬಲು ರೋಮಾಂಚಕಾರಿಯಾಗಿತ್ತು. ಆದರೆ ಈಗ ಇದೆಲ್ಲ ಅವಳಿಗೆ ಒಂದು ವಿಧದ ಶಿಕ್ಷೆ ಎನಿಸತೊಡಗಿತು. ಕಾರಣ, ಹಿಂದೆಲ್ಲ ಇಂಥದ್ದು ಬೇಕೆಂದು ಅವಳು ಬಯಸುತ್ತಿದ್ದುದುಂಟು. ಆದರೆ ಈಗ ಅವಳ ತನುಮನಗಳೆರಡೂ ಇದರಿಂದ ರೋಸಿಹೋಗಿತ್ತು.
ಮದುವೆಯಾದಾಗ ಲಲಿತಾಳಿಗೆ 27 ವರ್ಷ. ಬಟ್ಟಲು ಕಂಗಳ ಚೆಲುವೆ, ತುಸು ಎತ್ತರದ ಮೂಗು, ಗುಲಾಬಿಯಂಥ ತುಟಿಗಳು, ಎದ್ದು ಕಾಣುವಂತೆ ಮಾಡಿದ್ದ. ಅಂದದ ಮೈಕಟ್ಟು, ತೇಲಿದ ಬಣ್ಣ, ಮಧ್ಯಮ ಎತ್ತರ ಕೂಡಿ ಒಟ್ಟಾರೆ ಅವಳನ್ನು ವಿಶಿಷ್ಟ ವ್ಯಕ್ತಿಯಾಗಿಸಿತ್ತು. ಅವಳ ಈ ಅಪೂರ್ವ ಚೆಲುವು ಪ್ರಸಾದ್‌ನನ್ನು ಆಕರ್ಷಿಸಿತ್ತು. ಲಲಿತಾ ಮಧ್ಯಮ ವರ್ಗದ ಪರಿವಾರದ ನಡುವಿನವಳು.
ಅವಳ ಅಕ್ಕತಂಗಿ ಗೌರವರ್ಣದಿಂದ ಬೀಗುತ್ತಿದ್ದರು. ಇವಳ ಶ್ಯಾಮಲ ಸೌಂದರ್ಯ ಅವರಿಂದ ಭಿನ್ನವಾಗಿದ್ದ ಕಾರಣ, ತುಸು ಹಿಂಜರಿಕೆಯ ಸ್ವಭಾವ ಮೈಗೂಡಿಸಿಕೊಂಡಿದ್ದಳು. ಮುಖ್ಯವಾಗಿ ಅವಳ ಬಟ್ಟಲು ಕಂಗಳ ಕಾಂತಿ, ವಧು ಪರೀಕ್ಷೆಯಲ್ಲಿ ಪ್ರಸಾದ್‌ನನ್ನು ಕಟ್ಟಿ ಹಾಕಿತೆಂದೇ ಹೇಳಬೇಕು. ಆದರೆ ಪ್ರಸಾದ್‌ನ ತಾಯಿ ತಂದೆಗೆ ಮಗ ಮೆಚ್ಚಿದ ಈ ಸಂಬಂಧದಿಂದ ಸಂತೋಷವಾಯಿತೋ, ದುಃಖವಾಯಿತೋ ಮದುವೆಯ 5 ವರ್ಷಗಳ ನಂತರ ಲಲಿತಾಳಿಗೆ ಅರ್ಥವಾಗಿಲ್ಲ. ಪ್ರಸಾದ್ ಸಹ ಮದುವೆಯ ನಂತರ ಅದೇ ಖುಷಿ ಉಳಿಸಿಕೊಂಡಿದ್ದಾನೋ ಇಲ್ಲವೋ ಒಂದೂ ತಿಳಿಯಲಿಲ್ಲ.
ಪಾರ್ಲರ್‌ನವಳ ಕೈ ಇವಳ ಮುಖದ ಮೇಲೆ ಓಡಾಡುತ್ತಿದ್ದಂತೆ ಕಂಗಳನ್ನು ಮುಚ್ಚಿ ಅವಳು ಗತಕಾಲಕ್ಕೆ ಜಾರಿದಳು..... ಪ್ರಸಾದ್‌ನೊಂದಿಗೆ ಯಾವುದೋ ಮದುವೆ ಮನೆಯಲ್ಲಿ ಭೇಟಿ, ಪರಿಚಯ, ಸ್ನೇಹ..... ಮುಂದೆ ಅವನೊಂದಿಗೆ ಮದುವೆ ನಡೆದ ಬಗೆ ಎಲ್ಲವೂ ಒಂದು ಕನಸಿನಂತೆ ಆಗಿಹೋಗಿತ್ತು. ಅವಳ ಅಕ್ಕ ತಂಗಿ, ಗೆಳತಿಯರೆಲ್ಲ ಅಂಥ ಶ್ರೀಮಂತ ವರ ಯಾವ ವರದಕ್ಷಿಣೆ, ವರೋಪಚಾರ ಇಲ್ಲದೆ ಇವರ ಮನೆಯವರು ಮಾಡಿಕೊಟ್ಟ ಸರಳ ಮದುವೆಗೆ ಒಪ್ಪಿದ್ದು ಕಂಡು ಅಸೂಯೆಯಿಂದ ಕುದ್ದುಹೋಗಿದ್ದರು.
ಮದುವೆ ಮನೆಯಲ್ಲಿ ಗಂಡಿನ ಕಡೆಯವರು ಅವಳಿಗೆ ನೀಡಿದ ಒಡವೆ, ವಸ್ತ್ರ, ಬಳುವಳಿ, ಶ್ರೀಮಂತ ಬಂಗಲೆಯ ವಾಸ, ಕಾರು, ಆಳು ಕಾಳು..... ಅವರೆಲ್ಲ ಅಂಥದ್ದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ಮದುವೆಯಲ್ಲಿ ಘಳಿಗೆಗೊಮ್ಮೆ ಅವಳು ಬದಲಾಯಿಸುತ್ತಿದ್ದ ರೇಷ್ಮೆ ಸೀರೆಗಳು, ಆರತಕ್ಷತೆಯ ವೈಭವ ಎಲ್ಲರನ್ನೂ ದಂಗಾಗಿಸಿತ್ತು.
ವಜ್ರಾಭರಣಗಳನ್ನು ಧರಿಸಿ ವರನ ಕೈ ಹಿಡಿದು ಅವಳು ಸಂಜೆ ಆರತಕ್ಷತೆಯ ವೇದಿಕೆ ಏರಿದಾಗ, ಅವಳ ತವರಿನವರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ. ಇವರಿಗೆ ನಯಾ ಪೈಸೆ ಖರ್ಚಿಲ್ಲದಂತೆ ಪ್ರಸಾದ್ ಎಲ್ಲಾ ನಿಭಾಯಿಸಿದ್ದ. ಮಗನ ಆಯ್ಕೆಗೆ ಅವನ ಕಡೆಯ ಹಿರಿಯರೆಲ್ಲ ತಲೆದೂಗಿದ್ದರು. ಇಡೀ ಬಿಸ್‌ನೆಸ್ ಈಗ ಅವನೊಬ್ಬನೇ ಸಂಭಾಳಿಸುತ್ತಿದ್ದುದರಿಂದ ರಾಯರು ಯಾವುದಕ್ಕೂ ಕಡಿಮೆ ಮಾಡದಂತೆ, ಒಬ್ಬನೇ ಮಗನ ಮದುವೆಗೆ ಧಾರಾಳ ಖರ್ಚು ಮಾಡಿದ್ದರು.
ತವರಿನಿಂದ ಬೀಳ್ಗೊಂಡು ಅವಳು ಗಂಡನ ಮನೆಗೆ ಅತಿ ಭವ್ಯವಾದ ಬಂಗಲೆಗೆ ಪ್ರವೇಶಿಸಿದಾಗ ಅವಳ ಹೃದಯ ಡವಡವ ಎಂದು ಹೊಡೆದುಕೊಳ್ಳುತ್ತಿತ್ತು. ಎಲ್ಲಾ ಶಾಸ್ತ್ರಗಳೂ ಸಾಂಗೋಪಾಂಗವಾಗಿ ಮುಗಿದು, ಎಲ್ಲರೂ ತುಸು ವಿಶ್ರಾಂತಿ ಪಡೆದರು. ನಂತರ ಅವಳ ಕೋಣೆಗೆ ಬಂದ ಅವಳ ಅತ್ತೆ, ಒಂದು ದುಬಾರಿ ಪಾರದರ್ಶಕ ನೈಟಿ ನೀಡುತ್ತಾ, ``ಇಂದು ನಿಮ್ಮಿಬ್ಬರ ಮೊದಲ ರಾತ್ರಿ..... ಸುಖವಾಗಿ ಕಳೆಯಿಂದು ಹಾರೈಸುತ್ತೇನೆ,'' ಎಂದು ಅವಳ ಹಣೆ ಚುಂಬಿಸಿದರು. ಅವರ ಕಾಲಿಗೆರಗಿ ಅದನ್ನು ಸ್ವೀಕರಿಸಿದ ಲಲಿತಾ, ಸಂಕೋಚದಿಂದ ಭೂಮಿಗಿಳಿದು ಹೋದಳು.