ಶಾಲಿನಿ ಟೈಂ ಗಮನಿಸಿದಳು, ಅದಾಗಲೇ ಮಧ್ಯಾಹ್ನ 12 ದಾಟಿತ್ತು. ಶಾಲೆ ತಲುಪಲು ಇನ್ನೂ ಅರ್ಧ ದಾರಿಯೂ ಕ್ರಮಿಸಿರಲಿಲ್ಲ.

“ರಾಮು, ನಾವು 1 ಗಂಟೆ ಹೊತ್ತಿಗೆ ಮಕ್ಕಳ ಶಾಲೆ ತಲುಪುತ್ತೇವೆ ತಾನೇ?” ತನ್ನ ಕಾರಿನ ಡ್ರೈವರ್‌ನ್ನು ಅಧೀರಳಾಗಿ ಪ್ರಶ್ನಿಸಿದಳು ಶಾಲಿನಿ.

“ಖಂಡಿತಾ ತಲುಪುತ್ತೇವೆ ಮೇಡಂ. ಅದಕ್ಕೆ ನಾನು ಈ ಇಕ್ಕಟ್ಟಾದ ರಸ್ತೆ ಆರಿಸಿದ್ದು. ಮೇನ್‌ರೋಡ್‌ ಅಂತೂ ಬಹಳ ಟ್ರಾಫಿಕ್ ಅಂತ ನಿಮಗೇ ಗೊತ್ತು….. ಇಲ್ಲಿ ತೊಂದರೆ ಇಲ್ಲ ಬಿಡಿ,” ರಾಮು ಅವಳಿಗೆ ಭರವಸೆ ನೀಡಿದ.

“ಟ್ರಾಫಿಕ್‌ ಅಂತೂ ಈಗ ಎಲ್ಲೂ ಕಡಿಮೆ ಇರೋಲ್ಲ ಬಿಡು,” ಶಾಲಿನಿ ಬಳಿ ಕುಳಿತಿದ್ದ ಅವಳ ಗೆಳತಿ ಬೀನಾ ಹೇಳಿದಳು.

ಶಾಲಿನಿಯ ಮಕ್ಕಳಾದ ಅನೂಷಾ ಮಾಧವ್ ಓದುತ್ತಿದ್ದ ಅದೇ ಶಾಲೆಯಲ್ಲಿ ಬೀನಾಳ ಮಗ ಚಿನ್ಮಯ್‌ ಸಹ ಓದುತ್ತಿದ್ದ. ಶಾಲಿನಿ ಬೀನಾ ಬಾಲ್ಯ ಗೆಳತಿಯರು, ಮೊದಲಿನಿಂದ ಅಪಾರ ಪ್ರೀತಿವಾತ್ಸಲ್ಯ ಹೊಂದಿದ್ದರು. ಜೊತೆ ಜೊತೆಯಲ್ಲೇ ಆಟಪಾಠಗಳಲ್ಲಿ ಇಬ್ಬರೂ ಬೆಳೆದಿದ್ದರು. ಶಾಲಿನಿಯ ಪತಿ ಅಮರ್‌ ಕುಮಾರ್‌ ಖ್ಯಾತ ಟಿವಿ ತಾರೆ ಆಗಿದ್ದ, ಬೀನಾಳ ಪತಿ ಶಶಿಧರ್‌ ಒಬ್ಬ ವ್ಯಾಪಾರಿ ಆಗಿದ್ದ. ಇಬ್ಬರದೂ ಅತಿ ಬಿಝಿ ಶೆಡ್ಯೂಲ್ ‌ಆಗಿರುತ್ತಿತ್ತು.

ಅಮರ್‌ನ ವ್ಯಸ್ತತೆ ಅತ್ಯಧಿಕ ಎಂದೇ ಹೇಳಬೇಕು. ಧಾರಾವಾಹಿಗಳ ಮೇಲೆ ಧಾರಾವಾಹಿಗಳ ಆಫರ್ಸ್‌ ಸತತವಾಗಿ ಸಿಗುತ್ತಿತ್ತು. ನಡುನಡುವೆ ಕೆಲವು ಚಿತ್ರಗಳಲ್ಲೂ ನಟಿಸುತ್ತಿದ್ದ. ಕಳೆದ 7 ವರ್ಷಗಳಲ್ಲಿ ಆತ ಹಿರಿಕಿರಿ ಪರದೆಗಳಲ್ಲಿ ಬಹಳವೇ ಮಿಂಚುತ್ತಿದ್ದ. ಅವನ ಯಶಸ್ವೀ ಚಿತ್ರಗಳ ಪಟ್ಟಿ ಶಾಲಿನಿಗೆ ಈಗ ನೆನಪಿಲ್ಲವೆಂದೇ ಹೇಳಬೇಕು. ಚಿತ್ರಗಳಿಗಿಂತ ಟಿವಿ ಧಾರಾವಾಹಿ ಇನ್ನೂ ಒಂದು ಕೈ ಹೆಚ್ಚೆಂದೇ ಹೇಳಬೇಕು.

ಗ್ಲಾಮರ್‌ ಪ್ರಪಂಚದಲ್ಲಿ ಇಷ್ಟೆಲ್ಲ ಯಶಸ್ಸು ಸಿಗಬಹುದೆಂದು ಈ ದಂಪತಿ ಎಂದೂ ಎಣಿಸಿರಲೇ ಇಲ್ಲ. ಮೀಡಿಯಾದಲ್ಲಿ ಎಲ್ಲೆಲ್ಲೂ ಮಿಂಚುತ್ತಿದ್ದ ಪತಿ ಕುರಿತು ಶಾಲಿನಿಗೆ ಬಹಳ ಹೆಮ್ಮೆ ಇತ್ತು. ಅದೇ ತರಹ ಮಕ್ಕಳಿಗೂ ತಂದೆ ಕುರಿತು ಹೆಚ್ಚಿನ ಅಭಿಮಾನವಿತ್ತು.  ತಂದೆಯ ಕಾರಣ ಶಾಲೆಯಲ್ಲಿ ಅವರು ವಿಐಪಿ ಆಗಿದ್ದರು.

ಇಂದು ಅನೂಷಾ ಮಾಧವರು, ಚಿನ್ಮಯ್‌ ಮತ್ತು ಇವರ ಸಹಪಾಠಿಗಳೊಂದಿಗೆ ಅಪ್ಪನ ಹೊಚ್ಚ ಹೊಸ ಕಾರಿನಲ್ಲಿ ಲೋಕಲ್ ಸೈಟ್ ಸೀಯಿಂಗ್‌ ಪ್ರೋಗ್ರಾಂ ಪ್ಲಾನ್‌ಮಾಡಿದ್ದರು. ಶಾಲೆಯಿಂದ ಅವರು ಬೇಗ ಹೊರಡುವವರಿದ್ದರು. ಮಕ್ಕಳಿಗಂತೂ ಅಪ್ಪನ ಈ ಹೊಸ ಕಾರಿನ ಬಗ್ಗೆ ಹೆಮ್ಮೆ, ಜಂಭ ಎರಡೂ ಕೂಡಿತ್ತು. ಅವರ ಪರಿಚಿತರ ಲಯದಲ್ಲಿ ಇಂಥ ಉತ್ತಮ ಗಾಡಿ ಬೇರೆ ಯಾವುದೂ ಇರಲಿಲ್ಲ. ಬಹಳ ಉತ್ಸಾಹದಿಂದ ಇಬ್ಬರೂ ಇಂದಿನ ದಿನಕ್ಕಾಗಿ ಎದುರು ನೋಡುತ್ತಿದ್ದರು. ಅಂದು ಬೇಗ ಮನೆಗೆ ಹೊರಡುತ್ತೇವೆ ಎಂದು ಟೀಚರ್‌ಬಳಿ ಅನುಮತಿ ಪಡೆದಿದ್ದರು.

ಶಾಲಿನಿಯ ಕಾರು ಸಿಗ್ನಲ್ ಬಳಿ ನಿಂತಿತು. ಇನ್ನೂ ತಡವಾಗುತ್ತಿದೆಯಲ್ಲ ಎಂದು ಶಾಲಿನಿ ಚಿಂತೆಗೊಳಗಾದಳು. ಅವಳು ತನ್ನ ವಾಚಿನತ್ತ ಕಣ್ಣಾಡಿಸುತ್ತಿದ್ದ ಹಾಗೆ ಮೊಬೈಲ್ ಮೊಳಗಿತು.

“ಹಲೋ” ಶಾಲಿನಿ ನಿಧಾನವಾಗಿ ಹೇಳಿದಳು.

“ಮೇಡಂ, ಒಂದು ಅವಾಂತರ ಆಗಿದೆ! ನೀವೀಗ ಎಲ್ಲಿದ್ದೀರಿ……?” ಆ ಕಡೆಯಿಂದ ಬರುತ್ತಿದ್ದ ಧ್ವನಿ ಅಮರನ ಸೆಕ್ರೆಟರಿ ಸ್ಮಿತಾಳದಾಗಿತ್ತು.

“ಏನಾಯ್ತು ಸ್ಮಿತಾ? ನಾವೀಗ ಶಾಲೆ ಕಡೆ ಹೊರಟಿದ್ದೇವೆ.”

“ಮೇಡಂ, ಹೊಸ ಚಿತ್ರ `ಪ್ರೇಮ ಸಾಗರ’ದ ಡೈರೆಕ್ಟರ್‌ ಚಂದ್ರಕಾಂತ್‌ ಇದುವರೆಗೂ ಸೆಟ್‌ಗೆ ಬಂದೇ ಇಲ್ಲ. ಇಲ್ಲಿ ಸೆಟ್‌ಗಾಗಿ ನಾವು ಬಹಳ ಖರ್ಚು ಮಾಡಿ ಬಹಳ ಹೊತ್ತಿನಿಂದ ಕಾಯುತ್ತಿದ್ದೇವೆ. ಪ್ಲೀಸ್‌ ನೀವು…..”

“ಹ್ಞಾಂ….. ಹೇಳು ಸ್ಮಿತಾ, ಏನು ಮಾಡಬೇಕು?”

“ನೀವು ಆ ಹೊಸ ಕಾರನ್ನು ತಕ್ಷಣ ಚಂದ್ರಕಾಂತ್‌ರ ಮನೆಗೆ ಕಳುಹಿಸಿಕೊಡಿ. ಆ ಹೊಸ ಗಾಡಿ ಅವರನ್ನು ಪಿಕ್‌ಅಪ್‌ ಮಾಡಲು ಬರುವವರೆಗೂ ಅವರು ಖಂಡಿತಾ ಸೆಟ್‌ಗೆ ಬರೋಲ್ಲ. ನಿಮಗೆ ಗೊತ್ತೇ ಇದೆ ಮೇಡಂ, ಅವರು ಬರುವವರೆಗೂ ಇಲ್ಲಿ ಯಾವ ಕೆಲಸ…..”

“ನಡೆಯೋದಿಲ್ಲ! ಅದನ್ನೇ ತಾನೇ ಹೇಳ್ತಿದ್ದೀಯಾ?” ಶಾಲಿನಿಗೆ ಕೆಟ್ಟ ಕೋಪ ಬಂದಿತ್ತು.

“ಹೌದು ಮೇಡಂ, ನೀವು ತಕ್ಷಣ ರಾಮುವನ್ನು ಅವರ ಮನೆ ಬಳಿ ಕಳಿಸಿಕೊಡಿ. ನಿಮಗಾಗಿ ಬೇರೆ ಕಾರು ಅರೇಂಜ್‌ ಮಾಡ್ತೀನಿ.”

ಶಾಲಿನಿ ಆ ಕಾಲ್ ‌ಕಟ್‌ ಮಾಡುವಷ್ಟರಲ್ಲಿ ಮತ್ತೊಂದು ಕಾಲ್ ಬಂದೇಬಿಟ್ಟಿತು. ಈ ಬಾರಿ ಅದು ಅಮರನ ಕರೆ.

“ಏನು ಹೇಳೀಂದ್ರೆ…..” ಆದಷ್ಟೂ ತನ್ನ ಕೋಪಕ್ಕೆ ಕಡಿವಾಣ ಹಾಕುತ್ತಾ ಶಾಲಿನಿ ಕೇಳಿದಳು.

“ಶಾಲೂ ಡಿಯರ್‌….. ಆ ಹೊಸ ಕಾರನ್ನು ತಕ್ಷಣ……”

“ಚಂದ್ರಕಾಂತ್‌ರ ಮನೆಗೆ ಕಳುಹಿಸಬೇಕು, ಅಷ್ಟೇ ತಾನೇ…..”

“ಹೌದು, ಡಾರ್ಲಿಂಗ್‌….. ಬೇಗ ಪ್ಲೀಸ್‌……”

ಶಾಲಿನಿ ಕೋಪದಿಂದ ಆ ಕಾಲ್ ‌ಕಟ್‌ ಮಾಡುತ್ತಾ ಹೇಳಿದಳು.

“ರಾಮು, ಸ್ವಲ್ಪ ಗಾಡಿ ನಿಲ್ಲಿಸಪ್ಪ…..”

ರಾಮು ಗಾಬರಿಗೊಂಡ. ಇದೀಗ ತಾನೇ ಗ್ರೀನ್‌ ಸಿಗ್ನಲ್ ದಾಟಿ ವೇಗವಾಗಿ ಶಾಲೆ ಕಡೆ ಮುನ್ನುಗ್ಗುತ್ತಿದ್ದ. ಮೇಡಂ ಆರ್ಡರ್‌….. ಹೇಗೋ ಮಾಡಿ ರಸ್ತೆ ಬದಿಗೆ ತಂದು ನಿಲ್ಲಿಸಿದ. ಧುಮುಗುಟ್ಟುತ್ತಾ ಶಾಲಿನಿ ಕಾರಿನಿಂದ ಕೆಳಗಿಳಿದಳು. ಬೀನಾ ಸಹ ಅವಳನ್ನು ಅನುಸರಿಸಿದಳು.

“ರಾಮು ಕ್ವಿಕ್‌…… ಸಾರ್‌ ಫೋನ್‌ ಮಾಡಿದ್ರು, ಬೇಗ ಆ ಚಂದ್ರಕಾಂತ್‌ರ ಮನೆಗೆ ಹೋಗಿ ಪಿಕ್‌ಅಪ್‌ ಮಾಡಿ ಅವರನ್ನು ಆ ಹೊಸ ಸೆಟ್‌ಗೆ ತಲುಪಿಸು……”

“ಮೇಡಂ…. ಮತ್ತೆ ನೀವು?”

“ನಾನೀಗಲೇ ಕ್ಯಾಬ್‌ ಬುಕ್‌ ಮಾಡಿಕೊಳ್ತೀನಿ,” ಅವಳು ಮಾತು ಮುಗಿಸುವಷ್ಟರಲ್ಲಿ ಬೀನಾ ಕ್ಯಾಬ್‌ ಕರೆದಾಗಿತ್ತು. ಅವರಿಬ್ಬರೂ ಅದರಲ್ಲಿ ಶಾಲೆಯತ್ತ ಮುನ್ನಡೆದರು. ಶಾಲಿನಿಯ ಚಿಂತೆ ತುಂಬಿದ ಮುಖ ಕಂಡು ಬೀನಾಳಿಗೂ ಹಿಂಸೆ ಎನಿಸಿತು.

“ಇಷ್ಟೊಂದು ಟೆನ್ಸ್ ಆಗಬೇಡಿ ಶಾಲಿ….. ಶೂಟಿಂಗ್‌ ಮಧ್ಯೆ ಇದೆಲ್ಲ ಇದ್ದದ್ದೇ…..”

“ನನಗಂತೂ ಆ ಹಾಳು ಮುದುಕ ಚಂದ್ರಕಾಂತ್‌ನ್ನ ಕಂಡ್ರೆ ಮೈಯೆಲ್ಲ ಉರಿಯುತ್ತೆ…..” ಅವಳಿಗೆ ಬಿಕ್ಕಳಿಸುವಂತಾಗಿತ್ತು.

ಬೀನಾ ಅವಳನ್ನು ಸಮಾಧಾನಪಡಿಸುತ್ತಾ ಶಾಲಿನಿಯ ಬೆನ್ನು ಸವರಿದಳು. ಈ ಚಂದ್ರಕಾಂತ್‌ ಬಗ್ಗೆ ಆಗಾಗ ಗೆಳತಿಗೆ ಅಪ್‌ಸೆಟ್‌ಆಗಬೇಡ ಎಂದು ಹೇಳುತ್ತಲೇ ಇದ್ದಳು.

ಅವರು ಅಮರ್‌ಗೆ ಸ್ಯಾಂಡಲ್ ವುಡ್‌, ಕಿರುತೆರೆಯ ಗಾಡ್‌ ಫಾದರ್‌. ಕಿರುತೆರೆಯಿಂದ ಬೆಳ್ಳಿತೆರೆಗೆ ಅಮರ್‌ನನ್ನು ಮೇಲೆ ತಂದದ್ದೇ ಚಂದ್ರಕಾಂತ್‌, ಅವರು ಸೆಟ್‌ಗೆ ಬಂದು ಗೈಡ್‌ ಮಾಡದೆ ಅಮರ್‌ ಒಂದು ಹೆಜ್ಜೆ ಮುಂದಿಡುತ್ತಿರಲಿಲ್ಲ. ಆತನ ನಖರಾ ಸುಧಾರಿಸುವಷ್ಟರಲ್ಲಿ ನಿರ್ಮಾಪಕರು ಸೋತು ಸೊಪ್ಪಾಗುತ್ತಿದ್ದರು. ತಾನು ಹೇಳಿದ್ದೇ ಟೈಂ, ಕೇಳಿದ ಕಾರಿನಿಂದ ಪಿಕಪ್‌ ಡ್ರಾಪ್‌, ಕೇಳಿದಷ್ಟು ಸಂಭಾವನೆ, ಇತರೆ ಭತ್ಯೆಗಳು, ದುಬಾರಿ ಡ್ರಿಂಕ್ಸ್, ಪಂಚತಾರಾ ಹೋಟೆಲ್‌ಗಳಿಂದಲೇ ಊಟ….. ಒಂದೇ ಎರಡೇ…..ವಿದೇಶಕ್ಕೆ ಔಟ್‌ಡೋರ್‌ ಶೂಟಿಂಗ್‌ ಹೋದಾಗ ಆತನ ಬೇಡಿಕೆಗಳು ಗಗನಕ್ಕೇರುತ್ತಿದ್ದವು. ಆ ಸೀಸನ್‌ನಲ್ಲಿ ಲಭ್ಯವಿರದ ಹಣ್ಣು, ತರಕಾರಿಗಳೇ ಬೇಕೆಂದು ಮಗುವಿನಂತೆ ಹಠ ಹಿಡಿಯುತ್ತಿದ್ದ ಆ ಸಿಡುಕು ಮುದುಕ.

ಕಾಲೇಜು ದಿನಗಳಲ್ಲಿ ಅಮರ್‌ ನಾಟಕಗಳಲ್ಲಿ ಕೆಲಸ ಮಾಡುತ್ತಿದ್ದ. ಆಗೆಲ್ಲ ಇವನ ನಾಟಕಗಳಿಗೆ ಅವರೇ ನಿರ್ದೇಶಕರು. ಆತನ ಪ್ರತಿಭೆಗೆ ಎರಡು ಮಾತಿಲ್ಲ, ಹಾಗಾಗಿ ಅತಿ ಬೇಗನೆ ಕಿರುಹಿರಿ ತೆರೆಯ ಯಶಸ್ವಿ ನಿರ್ದೇಶಕರೆನಿಸಿದರು. ತಮ್ಮ ಕೆಲಸವನ್ನು ಅತಿ ಶ್ರದ್ಧೆ, ನಿಷ್ಠೆ, ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಪ್ರತಿ ಧಾರಾವಾಹಿ, ಚಿತ್ರಗಳ ಪ್ರತಿಯೊಂದು ಪಾತ್ರದ ಕಡೆಗೂ ಹದ್ದಿನ ಕಣ್ಣಿಡುತ್ತಿದ್ದರು. ಸರ್ರಂತ ಎಲ್ಲರ ಮೇಲೂ ರೇಗಿ ಸೆಟ್‌ನಲ್ಲಿ ಕೋಲಾಹಲ ಎಬ್ಬಿಸಿಬಿಡುತ್ತಿದ್ದರು. ಆತನ ಹೊಗಳಿಕೆಯ ಮಾತು ಕೇಳಲು, ನಟನೆಯಲ್ಲಿ ಸೈ ಎನಿಸಿಕೊಳ್ಳಲು ಯಶಸ್ವೀ ಹೀರೋ ಅಮರ್‌ ಮಾತ್ರವಲ್ಲದೆ, ಎಲ್ಲ ನಟನಟಿಯರೂ ಹಾತೊರೆಯುತ್ತಿದ್ದರು.

ಧಾರಾವಾಹಿಗಳ ಹಾಗೇ ಅಮರನಿಗೆ ಚಿತ್ರಗಳಲ್ಲೂ ಟಾಪ್‌ ಹೀರೋ ಆಗಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಒಂದು ಕಾಲದಲ್ಲಿ ಸ್ಟೇಜ್‌ ನಾಟಕಗಳಿಗೆ ಮಾತ್ರ ಸೀಮಿತನಾಗಿದ್ದ ಅಮರ್‌, ಒಮ್ಮೆ ಪತ್ರಿಕಾ ಪ್ರಕಟಣೆ ಕಂಡು ಟ್ಯಾಲೆಂಟ್‌ ಕಾಂಟೆಸ್ಟ್ ಗಾಗಿ ಅರ್ಜಿ ಗುಜರಾಯಿಸಿದ್ದ. ಅಲ್ಲಿಂದ ಕರೆ ಬಂದಾಗ ಅಮರ್‌ನನ್ನು ಹಿಡಿಯುವವರೇ ಇಲ್ಲ. ಅಲ್ಲಿನ ಸ್ಕ್ರೀನ್‌ ಟೆಸ್ಟ್ ನಲ್ಲಿ ಪಾಸಾಗಬೇಕು, ದೊಡ್ಡ ದೊಡ್ಡ ನಿರ್ಮಾಪಕ ನಿರ್ದೇಶಕರ ಎದುರು ಪಟಪಟನೆ ಡೈಲಾಗ್‌ ಡೆಲಿವರಿ ನೀಡಬೇಕಿತ್ತು. ಇದಕ್ಕಾಗಿ ಚಂದ್ರಕಾಂತ್‌ಇವನನ್ನು ಬೇಕಾದಷ್ಟು ಚೆನ್ನಾಗಿಯೇ ತಯಾರಿ ಮಾಡಿ ಕಳಿಸಿಕೊಟ್ಟರು.

“ನಿನ್ನ ಮೇಲೆ ಸಂಪೂರ್ಣ ವಿಶ್ವಾಸ ಇರಲಿ. ನೀನೊಬ್ಬ ಉತ್ತಮ ನಟ ಎಂಬುದರಲ್ಲಿ ಸಂದೇಹವಿಲ್ಲ,” ಎಂದು ಹುರಿದುಂಬಿಸಿ ಕಳುಹಿಸಿಕೊಟ್ಟರು.

ಸಹಜವಾಗಿಯೇ ಅಮರ್‌ ಧಾರಾವಾಹಿಗಳಿಗೆ ಆಯ್ಕೆಯಾಗಿದ್ದ, ಬೇಗನೇ ಚಿತ್ರಗಳೂ ದೊರಕಿದವು. ಕಾಲಕ್ರಮೇಣ ಅವರ ಮೇಲಿನ ಅಭಿಮಾನದಿಂದ ನಿರ್ಮಾಪಕರಿಗೆ ಅವರೇ ತನಗೆ ನಿರ್ದೇಶಕರಾಗಬೇಕೆಂದು ಒತ್ತಾಯ ಹೇರಿದ. ಅತಿ ಶೀಘ್ರದಲ್ಲೇ ತಮ್ಮ ಸ್ವಪ್ರತಿಭೆಯಿಂದ ಅವರೊಬ್ಬ ಸ್ಟಾರ್‌ ನಿರ್ದೇಶಕ ಎನಿಸಿದರು. ಕಾಲ ಕಳೆದಂತೆ ಚಿತ್ರೋದ್ಯಮದಲ್ಲಿ ಅವರ ಕೈ ಮೇಲಾಯಿತು. ಈ ನಿರ್ದೇಶಕರ ಚಿತ್ರದಲ್ಲಿ ನಟಿಸಿದರೆ ತಮ್ಮ ಸ್ಟಾರ್‌ ವ್ಯಾಲ್ಯೂ ಹೆಚ್ಚುತ್ತದೆಂದು ಪರಭಾಷೆಯವರೂ ಕಾಯುವಂತಾದಾಗ ಅವರನ್ನು ಇಡೀ ದಕ್ಷಿಣ ಚಿತ್ರರಂಗದಲ್ಲಿ ಹಿಡಿಯುವವರೇ ಇರಲಿಲ್ಲ!

ಧಾರಾವಾಹಿಗಳು ಮಾತ್ರವಲ್ಲದೆ, ದಕ್ಷಿಣದ ಚಿತ್ರಗಳಲ್ಲೂ ಅಮರ್‌ ಸ್ಟಾರ್‌ ನಟ ಎನಿಸಿದ. ಹೆಸರು, ಹಣ, ಕೀರ್ತಿ ರಾರಾಜಿಸಿತು. ಅತ್ತ ಚಂದ್ರಕಾಂತರ ಮನೆಯ ಸ್ಥಿತಿಯೂ ಎಷ್ಟೋ ಸುಧಾರಿಸಿತು. ಕೆಳ ಮಧ್ಯಮ ವರ್ಗದ ವ್ಯಕ್ತಿ ಈಗ ಪಾಷ್‌ ಲೊಕ್ಯಾಲಿಟಿಯ 2 ಅಂತಸ್ತಿನ ಬಂಗಲೆ, ಕಾರು, ಆಳುಕಾಳು ಎಲ್ಲಾ ಹೊಂದಿದ್ದರು. ಅವರ ಮೂರು ಹೆಣ್ಣು ಮಕ್ಕಳಿಗೂ ಚಿತ್ರೋದ್ಯಮದ ಖ್ಯಾತ ವ್ಯಕ್ತಿಗಳ ಮಕ್ಕಳೊಂದಿಗೆ ಮದುವೆ ಮಾಡಿಕೊಡಲಾಯಿತು.

ಅವರ ಪತ್ನಿ ಮಾಲತಿ ಈಗ ಪರಮ ಸುಖಿ. ಒಂದು ಕಾಲದಲ್ಲಿ ತಮ್ಮ ಸಂಸಾರ ಹೇಗೆ ಉದ್ಧಾರವಾಗುತ್ತದೆ, ತಮ್ಮ ಮಕ್ಕಳಿಗೆ ಮದುವೆ ಆಗುತ್ತದೆಯೇ ಎಂದು ಹೆದರುತ್ತಿದ್ದರು ಇಂದು ಮೊಮ್ಮಕ್ಕಳ ಬರ್ತ್‌ಡೇ ಆಚರಿಸುತ್ತಾ ಸಂಭ್ರಮಿಸುತ್ತಿದ್ದರು. ಕಾಲ ಬದಲಾದಂತೆ ಆ ದಂಪತಿಗಳಿಗೆ ಎಲ್ಲ ಸುಸೂತ್ರವಾಯಿತು.

ಮುಂದೆ ಅಮರನ ಮದುವೆ ಆಯಿತು. ತನ್ನ ಮದುವೆಯಲ್ಲಿ ಮೊದಲ ಬಾರಿಗೆ ಶಾಲಿನಿ ಚಂದ್ರಕಾಂತರನ್ನು ಕಂಡಳು. ಕುಳ್ಳಗೆ, ಡುಮ್ಮಗೆ, ಸ್ಟೈಲಾಗಿ ಸಿಗರೇಟ್‌ ಸೇದುತ್ತಾ, ಗ್ಲಾಸ್‌ ಮೇಲೆ ಗ್ಲಾಸಿನ ಪೆಗ್‌ ಏರಿಸುತ್ತಾ ಎಲ್ಲರನ್ನೂ ಗದರುವ ಧಾಟಿಯಲ್ಲೇ ಮಾತನಾಡಿಸುತ್ತಿದ್ದ ಆ ವ್ಯಕ್ತಿ ಇವಳಿಗೆ ಆದರಣೀಯ ಎಂದು ಅನಿಸಲೇ ಇಲ್ಲ.

ಆರತಕ್ಷತೆಯಲ್ಲಿ ತಮಗೆ ಶುಭಾಶಯ ಕೋರಲು ಬಂದ ಅವರನ್ನು ಹೆಂಡತಿಗೆ ಪರಿಚಯಿಸುತ್ತಾ ಅಮರ್‌ ಹೇಳಿದ, “ಇವರು ನನ್ನ ಚಿತ್ರೋದ್ಯಮದ ಗುರುಗಳು!”

ಇಬ್ಬರೂ ಬಾಗಿ ಅವರ ಪಾದ ಮುಟ್ಟಿ ವಂದಿಸಿದರು. ತಮ್ಮ ಮದುವೆ ಫಂಕ್ಷನ್‌ನಲ್ಲಿ ಆ ಮನುಷ್ಯನ ಗತ್ತುಗೈರತ್ತು, ಸಿನಿರಂಗದವರೆಲ್ಲ ಬಂದು ಆತನನ್ನು ಮುತ್ತಿಕೊಳ್ಳುವ ಪರಿ, ಆತನ ತೋರುತ್ತಿದ್ದ ಅಹಂಕಾರ…. ಯಾಕೋ ಏನೋ ಸರಿ ಇಲ್ಲ ಎಂದೇ ಶಾಲಿನಿಗೆ ಮತ್ತೆ ಮತ್ತೆ ಅನಿಸಿತು.

ಮುಂದೆ ಅಮರನ ಖ್ಯಾತಿ ಹೆಚ್ಚುತ್ತಿದ್ದಂತೆ ಈ ಮನುಷ್ಯನ ದುರಹಂಕಾರ ಹೆಚ್ಚುತ್ತಾ ಹೋಯಿತು. ಶಾಲಿನಿಯ ಮನದಲ್ಲಿ ಅವರ ಕುರಿತು ಎಂದೂ ಶ್ರದ್ಧೆ, ಗೌರಾವದರಗಳು ಬೆಳೆಯಲೇ ಇಲ್ಲ. ಆದರೆ ಪತಿಯ ಕಾರಣ ಆತನನ್ನು ಆಗಾಗ ಸಂಧಿಸಬೇಕಾಗುತ್ತಿತ್ತು, ಆತನ ನಖರಾ, ಕಿರುಕುಳ ಸಹಿಸಬೇಕಾಗುತ್ತಿತ್ತು.

ಅಮರ್‌ನಂಥ ಸ್ಟಾರ್‌ ನಟನನ್ನು ಎದುರು ಹಾಕಿಕೊಳ್ಳಲಾರದೆ ಅವನ ನಿರ್ಮಾಪಕರು ವಿಧಿಯಿಲ್ಲದೆ ಚಂದ್ರಕಾಂತ್‌ರನ್ನು ಸಹಿಸಿಕೊಳ್ಳುತ್ತಿದ್ದರು. ಸೆಟ್‌ನಲ್ಲಿ ಎಲ್ಲರ ಮೇಲೂ ರೇಗಾಡುವುದು ತಮ್ಮ ಹಕ್ಕು ಎಂಬಂತೆ ವರ್ತಿಸುತ್ತಿದ್ದರು. ಏನೇ ಆಗಲಿ, ಅಮರನಿಗಾಗಿ ನಿರ್ಮಾಪಕರು ಮಾತ್ರವಲ್ಲದೆ ಪ್ರೊಡಕ್ಷನ್‌ ಯೂನಿಟ್‌ನ ಇತರರೂ ಹಲ್ಲುಕಚ್ಚಿ ಸುಮ್ಮನಿರುತ್ತಿದ್ದರು.

ಅಂತೂ ಇಂತೂ ಶಾಲಿನಿ ಬೀನಾ ಆ ಶಾಲೆ ಬಳಿ ಬಂದಾಗ, ಗೆಳೆಯರ ದಂಡು ಕಟ್ಟಿಕೊಂಡು ಕಾಯುತ್ತಿದ್ದ ಮಕ್ಕಳಿಗೆ ಇವರು ಟ್ಯಾಕ್ಸಿಯಿಂದ ಇಳಿದದ್ದು ಕಂಡು ಘೋರ ನಿರಾಸೆಯಾಯಿತು. ಬೀನಾ ತಾನೇ ಮಕ್ಕಳಿಗೆ ಸಮಾಧಾನ ಹೇಳಿದಳು, “ದಾರಿ ಮಧ್ಯೆ ಗಾಡಿ ಪಂಕ್ಚರ್‌ ಆಯ್ತು…. ರಾಮು ಅಂಕಲ್ ಅದನ್ನು ಗ್ಯಾರೇಜಿಗೆ ಸಾಗಿಸಲು ಅಲ್ಲೇ ಕಾಯುತ್ತಾ ನಿಂತಿದ್ದಾರೆ, ಗ್ಯಾರೇಜ್‌ಮೆಕ್ಯಾನಿಕ್‌ ಇಷ್ಟು ಹೊತ್ತಿಗೆ ಬಂದಿರುತ್ತಾನೆ. ಅದು ರಿಪೇರಿ ಆದ ಮೇಲೆ ಇಲ್ಲಿಗೇ ಬರಬಹುದು, ಅಲ್ಲಿಯವರೆಗೂ ಎಲ್ಲರಿಗೂ ನನ್ನ ಐಸ್‌ ಕ್ರೀಂ ಟ್ರೀಟ್‌ ಇದೆ.”

ಸ್ಮಿತಾ ಏನೋ ಬೇರೆ ಮಜಬೂತಾದ ಗಾಡಿಯನ್ನೇ ಕಳುಹಿಸಿದ್ದಳು, ಆದರೆ ಅದು ಅಪ್ಪನ ಹೊಸ ಕಾರಲ್ಲ ಎಂದು ಮಕ್ಕಳು ಮುಖ ಊದಿಸಿಕೊಂಡರು. ಮಕ್ಕಳ ಸೋತ ಮುಖ ಕಂಡು ಶಾಲಿನಿಗೆ ಬಹಳ ದುಃಖವಾಯಿತು. ಮಕ್ಕಳ ಫ್ರೆಂಡ್ಸ್ ಜೊತೆ ಔಪಚಾರಿಕತೆಗಾಗಿ ಒಂದು ಲಾಂಗ್‌ ಡ್ರೈವ್ ‌ಹೋಗಿ ಅವರುಗಳನ್ನು ಮನೆ ತಲುಪಿಸಿ, ಇವರು ವಾಪಸ್ಸು ಮನೆಗೆ ಹೊರಟರು. ದಾರಿಯುದ್ದಕ್ಕೂ ಬೀನಾ ಮಕ್ಕಳನ್ನು ಸಮಾಧಾನಿಸುತ್ತಲೇ ಇದ್ದಳು. ಅಮರ್‌ ರಾತ್ರಿ ಮನೆಗೆ ಬಂದಾಗ 10 ಗಂಟೆ. ಶಾಲಿನಿಯ ಬಿಗಡಾಯಿಸಿದ ಮೂಡ್‌ ಕಂಡು ಅಮರ್‌ ಚಿಂತೆಯಿಂದ ಹೇಳಿದ, “ಅದೇನಾಯ್ತು ಗೊತ್ತಾ ಶಾಲೂ….. ಚಂದ್ರಕಾಂತ್‌ ಸಾರ್‌ ಇದೇ ಕಾರಿನಲ್ಲಿ ತಮ್ಮನ್ನು ಪಿಕ್‌ಡ್ರಾಪ್‌ ಮಾಡಬೇಕೆಂದು ಹಠ ಹಿಡಿದರು. ಶೂಟಿಂಗ್‌ಪೂರ್ತಿ ಮುಗಿಸಿ ಅವರನ್ನು ಮನೆ ತಲುಪಿಸಿ ಬರುವಷ್ಟರಲ್ಲಿ ಇಷ್ಟು ತಡವಾಯ್ತು. ಪ್ರೊಡ್ಯೂಸರ್‌ ಆನಂದ್‌ ಕುಮಾರ್‌ಗೆ ಲಕ್ಷಾಂತರ ರೂ. ನಷ್ಟ ಆಗಬಾರದೆಂದು ನಾನೇ ಅಡ್ಜಸ್ಟ್ ಮಾಡಬೇಕಾಯಿತು….. ಸಾರಿ ಡಿಯರ್‌, ನಾನೇನು ಮಾಡಲಿ ಹೇಳು?”

“ಆದರೆ ಆ ನಿಮ್ಮ ಗುರುಗಳಿಗೆ ನಮ್ಮ ಹೊಸ ಗಾಡಿಯ ಮೇಲೆಯೇ ಏಕೆ ಕಣ್ಣು? ಇದಕ್ಕೇಕೆ ಚಿಕ್ಕ ಮಕ್ಕಳ ಹಾಗೆ ಅವರು ಹಠ ಮಾಡುತ್ತಾರೆ?” ಶಾಲಿನಿಯ ಕೋಪ ಬಡಪಟ್ಟಿಗೆ ಕರಗಲಿಲ್ಲ.

mahanayak-story2

“ಇದರಿಂದ ಅವರ ಈಗೋ ಹರ್ಟ್‌ ಆಗದಂತೆ ನೋಡಿಕೊಳ್ಳಬೇಕಾದುದು ನನ್ನ ಕರ್ತವ್ಯ. ಅವರ ಸ್ವಭಾವ ನಿನಗೆ ಗೊತ್ತೇ ಇದೆ…..”

“ಹ್ಞೂಂ….ಹ್ಞೂಂ…. ಗೊತ್ತಿದೆ ಬಿಡಿ. ಈಗೋ ಬಿಟ್ಟರೆ ಅವರ ಬಳಿ ಬೇರೆ ಯಾವ ಸದ್ಗುಣ ಇದೆ ಹೇಳಿ…….”

ಈ ಮಾತಿಗೆ ಅಮರ್‌ ಉತ್ತರ ಹೇಳದಾದ. ಇದರಿಂದಾಗಿ ಮನೆಯ ವಾತಾವರಣ ಹಲವು ದಿನ ಟೆನ್ಶನ್‌ನಲ್ಲಿಯೇ ಕಳೆಯಿತು. ಇದರಿಂದ ಶಾಲಿನಿಗೆ ಅಮರ್‌ ಕುರಿತು ಚಿಂತೆ ಹೆಚ್ಚಿತು. ಇಷ್ಟೆಲ್ಲ ಲಕ್ಷಾಂತರ ದುಡಿಯುವ ಪತಿಗೆ ಮನೆಗೆ ಬಂದರೆ ನೆಮ್ಮದಿ ಇಲ್ಲ ಅಂದ್ರೆ, ಅವನನ್ನು ಅತಿಯಾಗಿ ಪ್ರೀತಿಸುವ ಅವಳ ಗತಿ ಏನಾಗಬೇಡ? ಆದರೆ ಅವನೇಕೆ ಆ ಚಂದ್ರಕಾಂತ್‌ರನ್ನು ಅಷ್ಟೊಂದು ಮೆರೆಸಬೇಕು? ಅವರಿಲ್ಲದೆ ಇವನ ಚಿತ್ರದ ಶೂಟಿಂಗ್‌ ಮುಂದುವರಿಯುವುದಿಲ್ಲ ಅಂದ್ರೆ ಏನರ್ಥ? ಯಶಸ್ಸಿನ ತುದಿಯಲ್ಲಿದ್ದರೂ ತನ್ನ ಮೇಲೇಕೆ ಅಮರ್‌ಗೆ 100% ಆತ್ಮವಿಶ್ವಾಸವಿಲ್ಲ? ಈಗಲೂ ಆತನನ್ನೇ ಗಾಡ್‌ಫಾದರ್‌ ಎಂದುಕೊಳ್ಳುತ್ತಾ ಬಾಲಬಡುಕನಾಗಿರಬೇಕಾದ ಅಗತ್ಯವಾದರೂ ಏನು? ಈ ರೀತಿ ಎಷ್ಟು ದಿನ ಆ ಮುದುಕನ ದಾಸ್ಯ ಸಹಿಸಬೇಕು? ಚಂದ್ರಕಾಂತ್‌ನೆರವಿಲ್ಲದಿದ್ದರೆ ಮುಂದೆ ಅಮರನಿಗೆ ಚಿತ್ರ ಧಾರಾವಾಹಿಗಳು ಸಿಗುವುದೇ ಇಲ್ಲವೇ? ಅಮರನಿಗೆ ಇದೇಕೆ ಅರ್ಥವಾಗುವುದಿಲ್ಲ? ಅಥವಾ…. ಇದನ್ನು ಹೊರತುಪಡಿಸಿ ಬೇರೇನಾದರೂ ಸಮಸ್ಯೆ ಇರಲು ಸಾಧ್ಯವೇ….? ಯೋಚಿಸಿ ಯೋಚಿಸಿ ಅವಳ ತಲೆ ಕೆಟ್ಟು ಹೋಯಿತು.

ನಿರಂಜನ್‌ ರಾವ್ ‌ಖ್ಯಾತಿವೆತ್ತ ನಿರ್ಮಾಪಕರು. ಅವರೊಂದು ಭಾರಿ ಬಜೆಟ್‌ನ ಅದ್ಭುತ ಆ್ಯಕ್ಷನ್‌ ಚಿತ್ರ ತಯಾರಿಸುತ್ತಿದ್ದರು. ಅಮರ್ ಅವರ ಅನೇಕ ಹಿಟ್‌ ಚಿತ್ರಗಳ ನಾಯಕ ಎನಿಸಿದ್ದ. ಅವರ ಅಚ್ಚುಮೆಚ್ಚಿನ ಹೀರೋ ಸಹ. ಅಂದುಕೊಂಡಂತೆಯೇ ಈ ಚಿತ್ರಕ್ಕೂ ಅವನೇ ನಾಯಕನಾಗಬೇಕಿತ್ತು. ಅವರು ಕನ್ನಡ ಮಾತ್ರವಲ್ಲದೆ, ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ಜೊತೆಗೆ ಹಿಂದಿ ಸೇರಿಸಿ ಈ ಚಿತ್ರ ತಯಾರಿಸುತ್ತಿದ್ದರು. ಈ ಚಿತ್ರದಲ್ಲಿ ಹಲವು ವಿದೇಶೀ ಕಲಾವಿದರೂ ಇದ್ದರು.

ಅದಕ್ಕಾಗಿ ಅಂದು ಲಕ್ಷಾಂತರ ರೂ. ವೆಚ್ಚದ ಭಾರಿ ಸೆಟ್‌ ರೆಡಿ ಆಗಿತ್ತು. ಪ್ರೆಸ್‌, ಮೀಡಿಯಾ ವರದಿಗಾರರು ಪ್ರತ್ಯಕ್ಷ ಸಾಕ್ಷಿಗಳಾಗಿ ಪ್ರಚಾರ ನೀಡುವವರಿದ್ದರು. ಅಮರ್‌ ತನ್ನ ಪತ್ನಿ ಶಾಲಿನಿಯೂ ಸೆಟ್‌ಗೆ ಬರಬೇಕೆಂದು ಬಯಸಿದ.

ಹಾಗೆ ನೋಡಿದರೆ ಅಮರ್‌ನ ಶೂಟಿಂಗ್‌ಗೆ ಶಾಲಿನಿ ಹೋಗುತ್ತಿದ್ದುದೇ ಬಹಳ ಕಡಿಮೆ ಎಂದೇ ಹೇಳಬೇಕು. ಇತ್ತೀಚೆಗೆ ಅವಳು ಹೋಗುವುದನ್ನು ಸಂಪೂರ್ಣ ಬಿಟ್ಟಿದ್ದಳೆಂದೇ ಹೇಳಬಹುದು. ಆ ಸೆಟ್‌ಗೆ ಬಂದು ಅಲ್ಲಿ ಚಂದ್ರಕಾಂತ್‌ ನಡೆಸುವ ದರ್ಬಾರನ್ನು ಸಹಿಸುವುದು ಅವಳಿಂದ ಆಗದ ಮಾತಾಗಿತ್ತು. ಆದರೆ ಈ ಸಲ ಪತಿಯ ಆಗ್ರಹದೊಂದಿಗೆ ನಿರಂಜನ್‌ ರಾಯರ ಒತ್ತಾಯ ಇದ್ದುದರಿಂದ ಅವಳು ಶೂಟಿಂಗ್‌ಗೆ ಹೋಗಲೇಬೇಕಾಯಿತು.

ಇವರು ಎದುರು ನೋಡುತ್ತಿದ್ದ ಆ ಶುಕ್ರವಾರ ಬಂದೇಬಿಟ್ಟಿತು. ಎಲ್ಲಾ ತಯಾರಿ ನಡೆಸಲಾಗಿತ್ತು. ವಿದೇಶಿ ಕಲಾವಿದರೊಂದಿಗೆ ಇತರರೆಲ್ಲರೂ ಸಿದ್ಧರಿದ್ದರು. ಆದರೆ ನಿಶ್ಚಿತ ಸಮಯಕ್ಕೆ ಶೂಟಿಂಗ್‌ ಮಾತ್ರ ಶುರುವಾಗಲಿಲ್ಲ. ಎಂದಿನಂತೆ ಚಂದ್ರಕಾಂತ್‌ ಅಂದೂ ಸಹ ಸಮಯಕ್ಕೆ ಹಾಜರಿರಲಿಲ್ಲ.

ಎಷ್ಟೋ ಸಲ ಅವರಿಗೆ ಫೋನ್‌  ಹೋಯ್ತು, ಬೆಸ್ಟ್ ಕಾರ್‌ ಕಳುಹಿಸಲಾಗಿತ್ತು. ಆದರೂ ಅವರು ಬರಲೇ ಇಲ್ಲ. ಈ ಚಿತ್ರದ ಮುಹೂರ್ತದ ದಿನದಿಂದಲೇ ಅವರು ಸಿಡಿಗುಟ್ಟುತ್ತಿದ್ದರು, ಏಕೆಂದರೆ ನಿರಂಜನ್‌ ರಾವ್ ಇವರ ಕೈಲಿ ಮುಹೂರ್ತಕ್ಕೆ ಪೂಜೆ ಮಾಡಿಸದೆ ಖ್ಯಾತ ವಿದೇಶಿ ಕಲಾವಿದರ ಕೈಲಿ ಮಾಡಿಸಿದ್ದರು.

ಬಹಳ ತಡವಾದಾಗ ಅಮರ್‌ ತಾನೇ ಅವರಿಗೆ ಫೋನ್‌ ಮಾಡಿದ. ಆಗ ಮಾಲತಿ ಕರೆ ಸ್ವೀಕರಿಸುತ್ತಾ, “ಏನು ಹೇಳಲಿ ಅಮರ್‌….. ಇವರಿಗೆ ಮತ್ತೆ ಮತ್ತೆ ಈ ವಿಷಯದ ಕುರಿತಾಗಿ ತಿಳಿಹೇಳಿ ನನಗೆ ಸಾಕಾಗಿ ಹೋಗಿದೆ! ಬೆಳಗ್ಗೆಯಿಂದ ವಿಪರೀತ ಕುಡಿದು ಜ್ಞಾನ ತಪ್ಪುವ ಸ್ಥಿತಿಗೆ ಬಂದಿದ್ದಾರೆ. ಒಂದೇ ಸಮ ನಿರಂಜನ್‌ ರಾಯರಿಗೆ ಬಾಯಿಗೆ ಬಂದಂತೆ ಶಾಪ ಹಾಕುತ್ತಿದ್ದಾರೆ…..” ವಿಷಯ ತಿಳಿದ ಶಾಲಿನಿಯ ಮನೋಸ್ಥಿತಿ ತೀರಾ ಕೆಟ್ಟಿತು. ಇಂಥ ಮನುಷ್ಯನಿಗಾಗಿ ಶೂಟಿಂಗ್‌ ನಿಲ್ಲಿಸಿರುವ ಅಮರ್‌ನ ಬಗ್ಗೆ ಇಲ್ಲಿಗೆ ಬಂದಿರುವವರೆಲ್ಲರೂ ಏನು ಭಾವಿಸಬಹುದು….? ಅದರಲ್ಲೂ ವಿದೇಶಿ ಕಲಾವಿದರನ್ನು ಹೀಗೆ ಸತಾಯಿಸುವುದು ಎಷ್ಟು ಸರಿ? ಇಂಥ ದೊಡ್ಡ ನಾಯಕ ನಟ….. ಇಷ್ಟೊಂದು ಅಸಮರ್ಥನೇ ಎಂದು ಮೀಡಿಯಾ ವ್ಯಂಗ್ಯವಾಗಿ ಕುಟುಕದಿರುವುದೇ? ಇವನೇಕೆ ಇಷ್ಟು ಅಸಹಾಯಕ ಎಂದು ಎಲ್ಲರೂ ಕೀಳಾಗಿ ಭಾವಿಸುವುದಿಲ್ಲವೇ?

ಅಳೆದೂ ಸುರಿದೂ ಅಂತೂ ಇಂತೂ ಶೂಟಿಂಗ್‌ ಶುರು ಮಾಡಿದ್ದಾಯಿತು. ಅಂದು ಚಂದ್ರಕಾಂತ್‌ರ ನೇತೃತ್ವವಿಲ್ಲದೆ ಮೊಟ್ಟ ಮೊದಲ ಬಾರಿಗೆ ಅಮರ್‌ ಕೆಲಸ ಆರಂಭಿಸಿದ್ದ.

“ಅಮರ್‌….. ಇದಂತೂ ಸುಪರ್ಬ್‌ ಜಾಬ್‌!” ಎಂದು ನಿರಂಜನ್‌ ಸಾಹೇಬರು ಅಮರ್‌ನನ್ನು ಹಾರ್ದಿಕವಾಗಿ ಅಪ್ಪಿಕೊಂಡು ಅಭಿನಂದಿಸಿದರು. ಅಮರನ ನಟನೆಯಿಂದ ವಿದೇಶೀ ಕಲಾವಿದರೂ ಬಹಳ ಪ್ರಭಾವಿತಗೊಂಡಿದ್ದರು.

ಮೇಕಪ್‌ ರೂಮಿಗೆ ಬಂದು ಶಾಲಿನಿ ಪತಿಯನ್ನು ಪ್ರಶಂಸಾಪೂರ್ವಕವಾಗಿ ನೋಡಿದಳು. “ಅವರ ನೇತೃತ್ವವಿಲ್ಲದೆ ನೀವು ಖಂಡಿತಾ ಉತ್ತಮ ಕೆಲಸ ಮಾಡಬಲ್ಲಿರಿ, ಯಶಸ್ವಿ ಆಗಬಲ್ಲಿರಿ! ಹಾಗಿರುವಾಗ ಅವರ ಇಷ್ಟೊಂದು ನಖರಾ ಸಹಿಸುವ ಅಗತ್ಯವೇನಿದೆ? ಇಂಥ ಶೋಷಣೆಯ ಉದ್ದೇಶವಾದರೂ ಏನು? ನೀವು ಅವರ ಬಾಲವಲ್ಲ… ನಿಮ್ಮಿಂದ ಅವರು ಎಂಬುದನ್ನು ಮರೆಯದಿರಿ…. ಅವರು ಇಲ್ಲದೆಯೇ ನೀವು ಖಂಡಿತಾ ಈ ಚಿತ್ರ ಗೆಲ್ಲಬಲ್ಲಿರಿ….”

“ಅವರಿಲ್ಲದೆ ನಾನು ಕೆಲಸ ಮಾಡಬಲ್ಲೆ ಎಂಬುದು ನನಗೆ ಗೊತ್ತಿದೆ ಶಾಲೂ…..”

“ಹೀಗಿರುವಾಗ ಪ್ರತಿ ಸಲ ಇವತ್ತಿನ ಹಾಗೆಯೇ ಮಾಡಬಹುದಲ್ಲ…..?”

“ಶಾಲೂ….. ಆ ವ್ಯಕ್ತಿ…. ಜೀವನದಲ್ಲಿ ಹೆಚ್ಚಿನದೇನನ್ನೂ ಸಾಧಿಸಲಿಲ್ಲ…. ನನ್ನ ಸ್ಟಾರ್‌ ಡಮ್ ಹೆಸರಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೀಗೆ ಅವರಿಲ್ಲದೆ ನಾನೇ ಬೆಳೆಯಬಲ್ಲೆ ಎಂದು ಪ್ರೂವ್ ‌ಮಾಡಿದರೆ ಆ ವ್ಯಕ್ತಿ ಕುಸಿದುಹೋಗುತ್ತಾರೆ, ಆಗ ಅವರ ಗತಿ ಏನಾದೀತು? ಅವರ ಕುಟುಂಬದ ಗತಿ ಏನಾದೀತು…..? ನೀನೇ ಹೇಳು,” ಶಾಲಿನಿ ಅವಾಕ್ಕಾಗಿ ಅವನ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದಳು.

ಇವರು ಈ ಮಾತುಗಳಲ್ಲಿ ಮುಳುಗಿದ್ದಾಗ ಅದಾನ ಮಾಯದಲ್ಲಿ ನಿರಂಜನ್‌ ರಾನೇ ಅಲ್ಲಿ ಬಂದು ನಿಂತಿದ್ದರೋ ಗೊತ್ತಿಲ್ಲ, ನಿಧಾನವಾಗಿ ಹೇಳಿದರು, “ಹೌದಮ್ಮ ಶಾಲಿನಿ, ಈ ವಿಷಯ ಇಡೀ ಇಂಡಸ್ಟ್ರಿಗೇ ಗೊತ್ತು. ಕೇವಲ….. ಅಮರ್‌ನ ಮೇಲಿನ ಅಭಿಮಾನದಿಂದ ಎಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ!”

ಆಗ ಶಾಲಿನಿಗೆ ಸ್ಪಷ್ಟ ಅರಿವಾಯಿತು, ತನ್ನ ಪತಿ ಕೇವಲ ರೀಲ್ ‌ನಾಯಕ ಅಲ್ಲ, ರಿಯಲ್ ಆಗಿಯೂ ಮಹಾನಾಯಕ ಅಂತ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ