ಆ ರಾತ್ರಿ ಗೀತಾ ಬಹಳ ಖುಷಿಯಾಗಿದ್ದಳು. ಅವಳು ಅಂದು ವಾಪಸ್ಸು ಮನೆಗೆ ಮರಳಿದಾಗ, ಹಿಂದಿನ ಎಲ್ಲಾ ನೆನಪುಗಳ ಅಲೆಗಳಲ್ಲಿ ಕೊಚ್ಚಿಹೋಗಿದ್ದಳು. ಹೀಗಾಗಿ ಅಂದು ಅವಳ ಬಳಿಯಿಂದ ನಿದ್ದೆ ಮಾರು ದೂರ ಹಾರಿಹೋಗಿತ್ತು. ಅವಳಿಗೆ ಎಲ್ಲೆಲ್ಲೂ ಸಮೀರನೇ ಕಂಡುಬರುತ್ತಿದ್ದ. `ಬಾನಲ್ಲೂ ನೀನೇ ಭುವಿಯಲ್ಲೂ ನೀನೇ.....' ಎನ್ನುತ್ತಾ ಎಲ್ಲಾ ಜಾಗದಲ್ಲೂ ಅವನನ್ನೇ ನೆನಪಿಸಿಕೊಳ್ಳುತ್ತಾ ತನ್ನಲ್ಲೇ ತಾನು ಕರಗಿಹೋದಳು.....ಮೊದಲ ಸಲ ಅವನನ್ನು ಭೇಟಿಯಾದಾಗ, ಅವನ ಮೋಹಕ ರೂಪಕ್ಕೆ ಮನಸೋತಳು. `ಲವ್ ಅಟ್ ಫಸ್ಟ್ ಸೈಟ್' ಎಂಬುದು ಬಹುಶಃ ಇದಕ್ಕೆ ಇರಬೇಕೇನೋ...... ಸಮೀರ್ ಎಂ.ಟೆಕ್ ಫೈನಲ್ ಇಯರ್ ವಿದ್ಯಾರ್ಥಿ. ಗೀತಾ ಫೈನಲ್ ಆರ್ಟ್ಸ್ ವಿದ್ಯಾರ್ಥಿನಿ. ಇಬ್ಬರೂ ಅರಿಯದ ಆಕರ್ಷಣೆಯಲ್ಲಿ ಪರಸ್ಪರ ಹತ್ತಿರ ಸೆಳೆಯಲ್ಪಡುತ್ತಿದ್ದರು. ಇಬ್ಬರೂ ಪ್ರತಿ ದಿನ ಭೇಟಿ ಆಗುತ್ತಿದ್ದರು. ಪ್ರೇಮ ಸಾಗರದಲ್ಲಿ ಮುಳುಗಿದ ಇಬ್ಬರಿಗೂ ಪರಸ್ಪರರನ್ನು ಬಿಟ್ಟು ಬದುಕುವುದು ದುಸ್ತರ ಎನಿಸಿತು.ಗೀತಾಳ ಸ್ನಿಗ್ಧ ಸೌಂದರ್ಯ ಹಾಗೂ ಮಧುರ ಸ್ವಭಾವದಿಂದ ಸಮೀರ್ ಅವಳೆಡೆ ಮುಗ್ಧನಾಗಿದ್ದ. ಗೀತಾ ಅಂತೂ ಬಹು ಬೇಗ ಸಮೀರನ ಆರಾಧಕಿ ಆದಳು. ಅವಳು ತನ್ನ ಕನಸಿನ ರಾಜಕುಮಾರನ ಬಗ್ಗೆ ನೆನಪಿಸಿಕೊಂಡಾಗೆಲ್ಲ ಅವಳಿಗೆ ಸಮೀರನ ಮುಖವೇ ಕಾಣಿಸುತ್ತಿತ್ತು.
ಗೀತಾ ಸಮೀರನನ್ನು ಪ್ರತಿ ದಿನ ಭೇಟಿ ಆಗುವಳು. ಒಂದು ದಿನ ಗೀತಾ ಸಮೀರನ ಪ್ರೇಮದಲ್ಲಿ ಕೊಚ್ಚಿ ಹೋಗಿ ಎಲ್ಲಾ ಸೀಮಾರೇಖೆ ದಾಟಿ ಸಮಾಗಮದಲ್ಲಿ ತೇಲಿಹೋದಳು. ಆದರೆ ಇಬ್ಬರೂ ತಿಳಿವಳಿಕೆ ಉಳ್ಳವರು, ಹೀಗಾಗಿ ಸಂಪೂರ್ಣ ಎಚ್ಚರಿಕೆ ವಹಿಸಿದ್ದರು.
ಗೀತಾಳ ಪ್ರೇಮ ತರಂಗದಲ್ಲಿ ಮಿಂದೆದ್ದ ಬಣ್ಣಬಣ್ಣದ ಗಾಳಿಪಟ ಆಕಾಶದ ಎತ್ತರದಲ್ಲಿ ಹಾರಾಡುತ್ತಿತ್ತು. ಹೀಗೆ ಇರಲು ಒಂದು ದಿನ ಆ ಗಾಳಿಪಟ ಸೂತ್ರ ಕಳಚಿಕೊಂಡು ಧಡ್ ಎಂದು ಬಂದು ನೆಲಕ್ಕೆ ಬಡಿಯಿತು. ನಡೆದದ್ದು ಇಷ್ಟೇ, ಸ್ನಾನ ಮಾಡುವಾಗ ಗೀತಾಳಿಗೆ ಕನ್ನಡಿಯಲ್ಲಿ ತನ್ನ ಬೆಂಭಾಗದಲ್ಲಿ ಒಂದು ಬಿಳಿಯ ಕಲೆ ಕಾಣಿಸಿಕೊಂಡಿತು.
ಅದನ್ನು ನೋಡಿ ಅವಳು ಬಹಳ ಗಾಬರಿಗೊಂಡಳು. ಇದು ಕ್ರಮೇಣ ಹರಡುತ್ತಾ ಹೆಚ್ಚಾದರೆ ಮುಂದೆ ವೈಟ್ ಪ್ಯಾಚೆಸ್, ತೊನ್ನು (ಲ್ಯುಕೊಡರ್ಮಾ) ರೋಗವಾಗಿ ಕಾಡಿದರೆ ಏನು ಗತಿ? ಸಮೀರನ ನೆನಪಾಗುತ್ತಿದ್ದಂತೆ ಅವಳು ಕಾಣುತ್ತಿದ್ದ ಮಧುರ ಕನಸು ಗಾಜಿನ ತರಹ ಛಿದ್ರಛಿದ್ರವಾಯಿತು. ಅವಳು ತನ್ನ ತಾಯಿ ರತ್ನಮ್ಮನಿಗೆ ಆ ಕುರಿತು ಅಳುತ್ತಲೇ ಹೇಳಿದಳು, ``ನೋಡಮ್ಮ..... ನನ್ನ ಬೆನ್ನಲ್ಲಿ ಇದೆಂಥ ಬಿಳಿ ಕಲೆ ಹರಡಿಕೊಳ್ಳುತ್ತಿದೆ....'' ಅದನ್ನು ನೋಡುತ್ತಲೇ ಆಕೆ ಸಹ ಬಹಳ ಕಳವಳಗೊಂಡರು.
ಆಕೆ ತಮ್ಮ ಗೆಳತಿ ಬಳಿ ಈ ಕುರಿತು ಹೇಳಿದಾಗ, ಅವರು ಯಾರೋ ದೂರದ ಮಠದಲ್ಲಿದ್ದ ಬಾಬಾ ಬಳಿ ಹೋಗಲು ತಿಳಿಸಿದರು. ``ನಡಿ ಗೀತಾ, ನಿನ್ನನ್ನು ಆ ಬಾಬಾ ಬಳಿ ಕರೆದುಕೊಂಡು ಹೋಗ್ತೀನಿ. ಕೆಲವು ವಾರಗಳ ಹಿಂದೆ ನನ್ನ ಗೆಳತಿ ಸುಜಾತಾಳ ಸೋದರ ಸೊಸೆಗೂ ಹೀಗೆ ಆಗಿತ್ತು. ಅವರು ಆ ಬಾಬಾ ಬಳಿ ಹೋಗಿ ಆಶೀರ್ವಾದ ಪಡೆದದ್ದರಿಂದ ಕೆಲವೇ ದಿನಗಳಲ್ಲಿ ಕಲೆ ಕಾಣದಂತೆ ಕಣ್ಮರೆ ಆಯಿತಂತೆ!''