ನೋಬೇಕ್‌ ಬಟರ್‌ ಪೀನಟ್‌ ಬೈಟ್ಸ್

ಸಾಮಗ್ರಿ : 2 ಕಪ್‌ ತರಿ ಮಾಡಿದ ಓಟ್ಸ್, ಅರ್ಧ ಕಪ್‌ ಪೀನಟ್‌ ಬಟರ್‌, 7-8 ಚಮಚ ಮೇಪಲ್ ಸಿರಪ್‌, ಒಂದಿಷ್ಟು ಚಾಕಲೇಟ್ ಚಿಪ್ಸ್.

ವಿಧಾನ : ಒಂದು ಬಟ್ಟಲಿಗೆ ಎಲ್ಲಾ ಸಾಮಗ್ರಿಗಳನ್ನೂ ಬೆರೆಸಿಕೊಂಡು ಅರ್ಧ ಗಂಟೆ ಕಾಲ ಫ್ರಿಜ್‌ನಲ್ಲಿ ಇರಿಸಿ. ನಂತರ ಇದರಿಂದ ಚಿತ್ರದಲ್ಲಿರುವಂತೆ ಸಣ್ಣ ಸಣ್ಣ ಉಂಡೆ ಮಾಡಿ, ಏರ್‌ಟೈಟ್‌ ಕಂಟೇನರ್‌ಗೆ ತುಂಬಿಸಿಡಿ.

ರಾಗಿ ಬಿಸ್ಕತ್ತು

AA-cinamon-cookies-(21)

 

ಸಾಮಗ್ರಿ : ಅರ್ಧರ್ಧ ಕಪ್‌ ರಾಗಿ ಹಿಟ್ಟು, ಗೋಧಿ ಹಿಟ್ಟು, ಬೆಣ್ಣೆ, ಬ್ರೌನ್‌ ಶುಗರ್‌, ತುಸು ಬೇಕಿಂಗ್‌ ಪೌಡರ್‌, ಕೋಕೋ ಪೌಡರ್‌, ವೆನಿಲಾ ಎಕ್ಸ್ ಟ್ರಾಕ್ಟ್, ಹಾಲು.

ವಿಧಾನ : ಮೊದಲು ರಾಗಿಹಿಟ್ಟನ್ನು ಬಾಣಲೆಯಲ್ಲಿ (ಮಂದ ಉರಿ) ತುಸು ತುಪ್ಪ ಹಾಕಿ ಹುರಿಯಿರಿ. ಇದನ್ನು ಬೇಸನ್ನಿಗೆ ಸುರಿದು ಉಳಿದೆಲ್ಲ ಸಾಮಗ್ರಿ ಬೆರೆಸಿಕೊಳ್ಳಿ. ಪೂರಿಗಿಂತಲೂ ಮೃದುವಾದ ಹಿಟ್ಟು ಕಲಸಿಡಿ. ನಂತರ ಇದಕ್ಕೆ ಬೆಣ್ಣೆ ಬೆರೆಸಿ, ಮೃದುವಾಗಿ ನಾದಿಕೊಳ್ಳಿ. 10 ನಿಮಿಷ ಫ್ರಿಜ್‌ನಲ್ಲಿಟ್ಟು, ನಂತರ ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ, ದಪ್ಪ ಚಪಾತಿಯಾಗಿ ಲಟ್ಟಿಸಿ. ಅದರ ಮೇಲೆ ಕಟರ್‌ ಇರಿಸಿ ಗುಂಡಗಿನ ಬಿಸ್ಕತ್ತು ಕತ್ತರಿಸಿ. ಮೊದಲೇ ಪ್ರೀಹೀಟ್‌ ಮಾಡಿದ ಓವನ್ನಿನಲ್ಲಿ, 160 ಡಿಗ್ರಿ ಶಾಖದಲ್ಲಿ ಇನ್ನು 12-15 ನಿಮಿಷ ಹದನಾಗಿ ಬೇಕ್‌ ಮಾಡಿ. ನಂತರ ಇವನ್ನು ಹೊರತೆಗೆದು ಆರಲು ಬಿಟ್ಟು, ಗಾಳಿಯಾಡದ ಕಂಟೇನರ್‌ಗೆ ಹಾಕಿಟ್ಟು, ಬೇಕಾದಾಗ ಸವಿಯಿರಿ.

ಕ್ರಿಸ್ಪಿ ದಾಲ್ಚಿನ್ನಿ ಕುಕೀಸ್

AA-ragi-biscuits-(15)

ಸಾಮಗ್ರಿ : 1 ಕಪ್‌ ಗೋಧಿಹಿಟ್ಟು ಅರ್ಧರ್ಧ ಕಪ್‌ ಬೆಣ್ಣೆ, ಪುಡಿ ಸಕ್ಕರೆ, 3-4 ಸಣ್ಣ ಚಮಚ ತುಪ್ಪದಲ್ಲಿ ಹುರಿದ ದಾಲ್ಚಿನ್ನಿ ಪುಡಿ, ತುಸು ಜಾಯಿಕಾಯಿ ಪುಡಿ, ವೆನಿಲಾ ಎಕ್ಸ್ ಟ್ರಾಕ್ಟ್, ಹಾಲು, ಬೆಣ್ಣೆ.

ವಿಧಾನ : ಗೋಧಿಹಿಟ್ಟಿಗೆ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ಮೃದು ಹಿಟ್ಟು ಕಲಸಿ, ಬೆಣ್ಣೆ ಬೆರೆಸಿ ನಾದಿಕೊಳ್ಳಿ. ನಂತರ ಇದನ್ನು ಲಟ್ಟಿಸಿ, ಕುಕೀಸ್‌ ಕಟರ್‌ನಿಂದ ಕತ್ತರಿಸಿ. ನಂತರ ಇವನ್ನು ಮೊದಲೇ ಪ್ರೀಹೀಟ್‌ ಮಾಡಿದ ಓವನ್ನಿನಲ್ಲಿ 160 ಡಿಗ್ರಿ ಶಾಖದಲ್ಲಿ, 15-20 ನಿಮಿಷ ಬೇಕ್‌ ಮಾಡಿ. ಆರಿದ ನಂತರ ಗಾಳಿಯಾಡದ ಡಬ್ಬಕ್ಕೆ ತುಂಬಿಸಿಡಿ.

ಎಗ್‌ ಲೆಸ್‌ ಕೋಕೋನಟ್‌ ಕುಕೀಸ್‌

AA-eggless-coconut-cookies-(6)

ಸಾಮಗ್ರಿ : 1-1 ಕಪ್‌ ಗೋಧಿ ಹಿಟ್ಟು, ಸಕ್ಕರೆ, ಅರ್ಧರ್ಧ ಕಪ್‌ ಕೊಬ್ಬರಿ ತುರಿ, ಬೆಣ್ಣೆ, ತುಸು ವೆನಿಲಾ ಎಕ್ಸ್ ಟ್ರಾಕ್ಟ್, ಹಾಲು.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿ ಮೃದು ಹಿಟ್ಟು ಕಲಸಿ, ಬೆಣ್ಣೆಯಿಂದ ನಾದಿಕೊಳ್ಳಿ. ಕೊನೆಯಲ್ಲಿ ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ, ತೆಳು ವಡೆ ತರಹ ತಟ್ಟಿಕೊಂಡು, ಕೊಬ್ಬರಿಯಲ್ಲಿ ಹೊರಳಿಸಿ. ಇದನ್ನು ಓವನ್ನಿನಲ್ಲಿ 15 ನಿಮಿಷ 160 ಡಿಗ್ರಿ ಶಾಖದಲ್ಲಿ ಬೇಕ್‌ ಮಾಡಿ. ನಂತರ ಏರ್‌ ಟೈಟ್‌ ಡಬ್ಬಕ್ಕೆ ಹಾಕಿ, ಬೇಕಾದಾಗ ಸವಿಯಿರಿ.

ಬನಾನಾ ಓಟ್‌ ಮೀಲ್ ‌ಕುಕೀಸ್‌

AA-banana-oatmeal-cookies

ಸಾಮಗ್ರಿ : 2 ಮಾಗಿದ ಚುಕ್ಕೆ ಬಾಳೆಹಣ್ಣು, ಒಂದೂವರೆ ಕಪ್‌ ಓಟ್ಸ್ ಅಗತ್ಯವಿದ್ದಷ್ಟು ಪೀನಟ್‌ ಬಟರ್‌, ತುಪ್ಪದಲ್ಲಿ ಹುರಿದ ತರಿಯಾದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ.

ವಿಧಾನ : ಎಲ್ಲಾ ಸಾಮಗ್ರಿ ಬೆರೆಸಿಕೊಂಡು ಮೃದುವಾದ ಮಿಶ್ರಣ ಕಲಸಿಡಿ, ಬೆಣ್ಣೆ ಹಾಕಿ ನಾದಿಕೊಳ್ಳಿ. ನಂತರ ಇದನ್ನು ದಪ್ಪ ಚಪಾತಿಯಾಗಿ ಲಟ್ಟಿಸಿ, ಚಿತ್ರದಲ್ಲಿರುವಂತೆ ಗುಂಡಗೆ ಕತ್ತರಿಸಿ. ಆಮೇಲೆ ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿ 160 ಡಿಗ್ರಿ ಶಾಖದಲ್ಲಿ 10-12 ನಿಮಿಷ ಬೇಕ್‌ ಮಾಡಿ. ಓಟ್‌ ಮೀಲ್ ಕುಕೀಸ್‌ ಸವಿಯಲು ಸಿದ್ಧ!

ಬ್ರೋಕನ್‌ ವೀಟ್‌ ಬೆಲ್ಲದ ಕುಕೀಸ್‌

AA-whole-wheat-jaggery-cookies-(3)

ಸಾಮಗ್ರಿ : 1 ಕಪ್‌ ಬ್ರೋಕನ್‌ ವೀಟ್‌, ಅರ್ಧರ್ಧ ಕಪ್‌ ಮೈದಾ, ತುಪ್ಪ, ಬೆಲ್ಲ, ತುಸು ಬೇಕಿಂಗ್‌ ಪೌಡರ್‌, ಏಲಕ್ಕಿ ಪುಡಿ, ದಾಲ್ಚಿನ್ನಿ ಪುಡಿ, ಹಾಲು, ಬೆಣ್ಣೆ.

ವಿಧಾನ : ಮೊದಲು ಬ್ರೋಕನ್‌ ವೀಟ್‌ನ್ನು ತುಪ್ಪದಲ್ಲಿ ಲಘುವಾಗಿ ಹುರಿಯಿರಿ. ಅದರೊಂದಿಗೆ ಮೇಲಿನ ಎಲ್ಲಾ ಸಾಮಗ್ರಿ ಹಾಕಿ ಬೆರೆಸಿಕೊಂಡು ಮೃದು ಹಿಟ್ಟು ಕಲಸಿ. ಇದಕ್ಕೆ ಬೆಣ್ಣೆ ಹಾಕಿ ನಾದಿಕೊಂಡು, ದಪ್ಪ ಚಪಾತಿಯಾಗಿ ಲಟ್ಟಿಸಿ, ಗುಂಡಗೆ ಕತ್ತರಿಸಿ. ಇವನ್ನು ಓವನ್ನಿನಲ್ಲಿ 160 ಡಿಗ್ರಿ ಶಾಖದಲ್ಲಿ 17-18 ನಿಮಿಷ ಬೇಕ್‌ ಮಾಡಿ. ಬೆಲ್ಲ ಬ್ರೋಕನ್‌ ವೀಟ್‌ ಬಿಸ್ಕತ್ತು ರೆಡಿ!

ಚಂಚಂ

AA-chamcham-(4)

ಸಾಮಗ್ರಿ : 1 ಲೀ. ಗಟ್ಟಿ ಹಾಲು, 2 ಚಿಟಕಿ ಏಲಕ್ಕಿ ಪುಡಿ, 4 ಚಮಚ ಕೊಬ್ಬರಿ ತುರಿ, ಅರ್ಧ ಕಪ್‌ ಖೋವಾ, ತುಸು ಕೇಸರಿ, ನಿಂಬೆರಸ, ಪುಡಿ ಸಕ್ಕರೆ, ಪಿಸ್ತಾ, ಬಾದಾಮಿ ಚೂರು.

ವಿಧಾನ : ಮೊದಲು ಬಾಣಲೆಯಲ್ಲಿ ಹಾಲು ಕಾಯಿಸಿ. ಇದಕ್ಕೆ ನಿಂಬೆರಸ ಹಿಂಡಿಕೊಂಡು, ಹಾಲು ಒಡೆದ ಮೇಲೆ ಗಟ್ಟಿ ಅಂಶದಿಂದ ಪನೀರ್‌ ತಯಾರಿಸಿ. ಇದನ್ನು ತೆಳು ಬಟ್ಟೆಯಲ್ಲಿ ಕಟ್ಟಿ ತೂಗು ಹಾಕಿ, ತೇವಾಂಶ ಹಿಂಗುವಂತೆ ಮಾಡಿ. ನಂತರ ಪನೀರ್‌ನ್ನು ಚೆನ್ನಾಗಿ ಮಸೆಯಿರಿ. ಅದೇ ಬಾಣಲೆಯಲ್ಲಿ ಸಕ್ಕರೆಗೆ ನೀರು ಬೆರೆಸಿ ಒಂದೆಳೆ ಪಾಕ ತಯಾರಿಸಿ. ಇದಕ್ಕೆ ಏಲಕ್ಕಿಪುಡಿ ಸಹ ಬೆರೆಸಿಕೊಳ್ಳಿ. ಈಗ ಪನೀರ್‌ನ್ನು ಉಂಡೆಗಳಾಗಿಸಿ, ಉದ್ದಕ್ಕೆ ಹೊಸೆದು ಚಿತ್ರದಲ್ಲಿರುವಂತೆ ಮಾಡಿ. ಇದನ್ನು ಪಾಕಕ್ಕೆ ಹಾಕಿದ ಮೇಲೆ ಮಂದ ಉರಿ ಮಾಡಿ ಮುಚ್ಚಿಡಿ. ಒಂದು ಬಟ್ಟಲಿಗೆ ಖೋವಾ, ಕೇಸರಿ, ಕೊಬ್ಬರಿ, ಪುಡಿ ಸಕ್ಕರೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಬಾಣಲೆಯಿಂದ ಚಂಚಂ ಹೊರತೆಗೆದು ಆರಲು ಬಿಡಿ. ಇದನ್ನು ಮಧ್ಯದಲ್ಲಿ ಕತ್ತರಿಸಿ, ಖೋವಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಇದಕ್ಕೆ ತುಂಬಿಸಿ. ಇದರ ಮೇಲೆ ತುಪ್ಪದಲ್ಲಿ ಹುರಿದ ಬಾದಾಮಿ, ಪಿಸ್ತಾ ಚೂರು ಉದುರಿಸಿ ಸವಿಯಲು ಕೊಡಿ.

ಮಸೂರು ಬೇಳೆ ವಡೆ

AA-masoor-daal-ki-chaap-(5)

ಸಾಮಗ್ರಿ : 1 ಕಪ್‌ ಮಸೂರು ಬೇಳೆ, 4-5 ಈರುಳ್ಳಿ, 2 ಚಮಚ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಹೆಚ್ಚಿದ ಹಸಿ ಮೆಣಸು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.

ವಿಧಾನ : ಮೊದಲು ಮಸೂರು ಬೇಳೆಯನ್ನು ಕುಕ್ಕರಿನಲ್ಲಿ 2 ಸೀಟಿ ಬರುವಂತೆ ಬೇಯಿಸಿ. ನೀರು ಸೋಸಿಕೊಂಡು, ಬೇಳೆಯನ್ನು ಲಘು ಮಸೆಯಿರಿ. ಇದಕ್ಕೆ ಹೆಚ್ಚಿದ ಈರುಳ್ಳಿ, ಹಸಿ ಮೆಣಸು ಹಾಗೂ ಉಳಿದೆಲ್ಲ ಸಾಮಗ್ರಿ ಬೆರೆಸಿಕೊಂಡು ವಡೆ ಮಿಶ್ರಣ ಕಲಸಿಡಿ. ಇದರಿಂದ  ಜಿಡ್ಡು ಸವರಿದ ಅಂಗೈ ಮೇಲೆ ವಡೆ ತಟ್ಟಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಇರುವಾಗಲೇ ಕಾಯಿ ಚಟ್ನಿ ಜೊತೆ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ