ಒಂದು ದಿನ ಗೌತಮ್ ತನ್ನ ಮೋಟರ್‌ ಬೈಕ್‌ ಮೇಲೆ ಆಶಾಳನ್ನು ಕೂರಿಸಿಕೊಂಡು ಬೆಂಗಳೂರು ಮಹಾನಗರದಿಂದ ತುಸು ದೂರದಲ್ಲಿದ್ದ ಒಂದು ಪಾರ್ಕಿನತ್ತ ಲಾಂಗ್‌ ಡ್ರೈವ್ ‌ಹೊರಟ. ಅಲ್ಲೊಂದು ಸುಂದರ ಕಾರಂಜಿ ಇತ್ತು. ಮೂಲೆ ಬೆಂಚನ್ನು ಹುಡುಕಿ ಪ್ರೇಮಿಗಳಿಬ್ಬರೂ ಏಕಾಂತದಲ್ಲಿ ಗುಸುಗುಸು ಸಂಭಾಷಣೆಯಲ್ಲಿ ಮುಳುಗಿಹೋದರು. ತಮ್ಮನ್ನು ಆ ಮುಸ್ಸಂಜೆಯಲ್ಲಿ ಗಮನಿಸುವವರು ಯಾರೂ ಇಲ್ಲ ಎಂಬುದೇ ದೊಡ್ಡ ವರದಾನವಾಗಿತ್ತು.

ಕಾರಂಜಿಯಿಂದ ಅಲ್ಲಿ ಪುಟ್ಟದೊಂದು ಕೊಳ ಆಗಿತ್ತು. ಯಾರೋ ಅದಕ್ಕೆ ಕಲ್ಲು ಎಸೆದು ಛಳ್‌….. ಎಂದು ಸದ್ದು ಮಾಡಿದರು. “ಯಾರೋ ಹತ್ತಿರಾನೇ ಬಂದಿದ್ದಾರೆ ಅನ್ಸುತ್ತೆ, ಕೊಳಕ್ಕೆ ಕಲ್ಲು ಬಿದ್ದ ಸದ್ದಾಯಿತು. ನಮ್ಮನ್ನು ನೋಡಿಬಿಟ್ಟರೆ ಕಷ್ಟ…..” “ಅರೆ…… ಹಾಗೇನಿಲ್ಲ ಬಿಡು. ಒಮ್ಮೊಮ್ಮೆ ಮೀನುಗಳು ಸಹ ಮೇಲೆ ಬಂದು ಕುಪ್ಪಳಿಸುತ್ತಿರುತ್ತವೆ. ಬಹುಶಃ ಇದೂ ಅದರದೇ ಸದ್ದಿರಬೇಕು,” ಎಂದು ಅವಳಿಗೆ ಇನ್ನಷ್ಟು ಒತ್ತರಿಸಿ ಕುಳಿತುಕೊಂಡ. ಅವಳ ಮೈನ ಸುಗಂಧ ಅವನಿಗೆ ಮತ್ತೇರಿಸುತ್ತಿತ್ತು. ಅವಳ ತಲೆಗೂದಲನ್ನು ಚುಂಬಿಸುತ್ತಾ, “ನೀನು ಯಾವ ಶ್ಯಾಂಪೂ ಬಳಸುತ್ತೀಯಾ?” ಎಂದು ಕೇಳಿದ. ನಸುನಗುವೇ ಅವಳ ಉತ್ತರವಾಯಿತು.

ಹಾಯಾಗಿ ಆ ಕಲ್ಲು ಬೆಂಚಿನಲ್ಲಿ ಕಾಲು ನೀಟಿ, ಅವಳ ಮಡಿಲಲ್ಲಿ ಒರಗಿದ. ಅವಳು ಬಗ್ಗಿ, ಅವನ ಮುಖದ ಮೇಲೆ ತನ್ನ ಕೂದಲು ಹರಡುತ್ತಾ, ಅವನ ಮೀಸೆ ಜೊತೆ ಚಿನ್ನಾಟವಾಡತೊಡಗಿದಳು. ಅವಳನ್ನು ಚುಂಬಿಸುತ್ತಾ, ಮತ್ತೆ ಮತ್ತೆ ಅವಳ ಕಣ್ಣಲ್ಲೇ ದೃಷ್ಟಿ ನೆಟ್ಟಿದ್ದ.

“ಇದೇನು ಇಷ್ಟೊದು ದಿಟ್ಟಿಸುತ್ತಿರುವೆ? ನಾವೇನು ಹೊಸ ಪ್ರೇಮಿಗಳೇ?” ಎಂದಳು.

“ನಿನ್ನ ಕಂಗಳನ್ನು ನೋಡುತ್ತಿದ್ದರೆ ನಾನು ಈ ಪ್ರಪಂಚವನ್ನೇ ಮರೆಯುತ್ತೇನೆ…..”

“ಓಹೋ….. ಕವಿ ಮಹಾಶಯ ವರ್ಣನೆ ಸಾಕು. ಇನ್ನು ಹೊರಡೋಣವೇ? ಕತ್ತಲೆ ಆಗುವಷ್ಟರಲ್ಲಿ ನಾನು ಮನೆಯಲ್ಲಿರಬೇಕು. ಗೆಳತಿ ಮನೆಗೆ ಅಂತ ಸುಳ್ಳು ಹೇಳಿ ಬಂದಿದ್ದೀನಿ…..” ಎನ್ನುತ್ತಾ ಅವಳು ಅಲ್ಲಿಂದ ನಿಧಾನ ಎದ್ದಳು. ತನ್ನ ಸೀರೆಯನ್ನು ಸರಿಪಡಿಸಿ, ತಲೆಗೂದಲನ್ನು ಹಿಂದಕ್ಕೆ ಬಾಚಿಕೊಂಡಳು. ತೆಳು ನೀಲಿ ಸೀರೆ ಅವಳ ಚೆಲುವಿಗೆ ಚೆನ್ನಾಗಿ ಒಪ್ಪುತ್ತಿತ್ತು. ಅಷ್ಟರಲ್ಲಿ ಗಾಳಿ ಬೀಸಲು ಅವಳ ಸೆರಗು ಅವನ ಮುಖಕ್ಕೆ ಬಡಿಯಿತು.

ಗೌತಮ್ ಅವಳ ಸೆರಗನ್ನು ತನ್ನ ಕುತ್ತಿಗೆಗೆ ಸುತ್ತಿಕೊಂಡ. “ಅಯ್ಯೋ…. ಸೆರಗು ಬಿಡು….. ನೋಡಿದವರು ಏನೆಂದುಕೊಂಡಾರು?”

“ಈ ಹಿತಕರವಾದ ತಂಗಾಳಿಯಲ್ಲಿ ಇಂಥ ಚೆಲುವೆ ಬಳಿ ಇರಲು….. ಇಷ್ಟು ಬೇಗ ಕಳಿಸಲಾದೀತೇ?”

“ಬಿಡೀಪ್ಪಾ….. ಲೇಟ್‌ ಆಗೋಗಿದೆ……”

“ಇದೋ ಬಿಟ್ಟೆ……” ಎನ್ನುತ್ತಾ ಅವಳ ನಡು ಬಳಸಿ ಹಿತವಾಗಿ ಅಪ್ಪಿಕೊಂಡ. ಅವನನ್ನು ಬಿಟ್ಟು ಹೋಗಲು ಅವಳಿಗೂ ಮನಸ್ಸಿಲ್ಲ.  ಆದರೆ ತಡವಾಗಿ ಹೋದರೆ….? ಒಲ್ಲದ ಮನದಿಂದ ಇಬ್ಬರೂ ಮನೆ ಕಡೆ ನಡೆದರು.

ಇವರಿಬ್ಬರ ಈ ಪ್ರೇಮಲೀಲೆಯನ್ನು ದೂರದಲ್ಲಿ ಕುಳಿತಿದ್ದ ಪ್ರೌಢ ದಂಪತಿ ನೋಡುತ್ತಿದ್ದರು. ಅವರೇ ಡಾಕ್ಟರ್‌ ಪ್ರೇಮನಾಥ್‌ ಹಾಗೂ ಡಾಕ್ಟರ್‌ ಶೀಲಾ ಮೂರ್ತಿ. ಆ ಪಾರ್ಕಿನ ಹತ್ತಿರದಲ್ಲೇ ಅವರ ಖಾಸಗಿ ನರ್ಸಿಂಗ್‌ ಹೋಂ ಇತ್ತು. ಆಸ್ಪತ್ರೆಯ ಜಂಜಾಟದಿಂದ ತುಸು ಬಿಡುವಾದಾಗ ಎಂದಾದರೂ ಈ ಪಾರ್ಕಿನ ಕೊಳದ ಬಳಿ ಬಂದು ಕುಳಿತು ರಿಲ್ಯಾಕ್ಸ್ ಆಗುತ್ತಿದ್ದರು. ಆ ಪ್ರೇಮಿಗಳು ಹೊರಟ ನಂತರ ಶೀಲಾ ಹೇಳಿದಳು, “ನನಗೆ ಈ ಹುಡುಗ ಗೊತ್ತು….. ನನ್ನ ತವರಿನ ಮನೆ ಹತ್ತಿರವೇ ಇವನು ವಾಸವಿದ್ದ. ಮಹಾ ಷೋಕಿವಾಲ, ಹುಡುಗು ಬುದ್ಧಿಯವನು. ಶ್ರೀಮಂತ ತಂದೆಯ ಒಬ್ಬನೇ ಮಗ, ಹಣದ ಮದದಿಂದ ಹೀಗಾಗಿದ್ದಾನೆ. ಇನ್ನೂ ಡಿಗ್ರಿ ಸಹ ಮುಗಿಸಿಲ್ಲ, ಫೇಲ್ ‌ಆಗಿ ಆಗಿ ಅದೇ ಅಂತಿಮ ವರ್ಷದ ವಿದ್ಯಾರ್ಥಿ ಅಂತ ಬಸ್ಕಿ ಹೊಡೀತಿದ್ದಾನೆ.

“ಈ ರೀತಿ ಹೊಸ ಹೊಸ ಹುಡುಗಿಯರನ್ನು ಕರೆದುಕೊಂಡು ಬಂದು ತನ್ನ ಪ್ರೇಮಜಾಲಕ್ಕೆ ಬೀಳಿಸಿಕೊಳ್ಳುತ್ತಾನೆ ಅನ್ಸುತ್ತೆ. ಕೆಲಸ ಮುಗಿದ ಮೇಲೆ ಅವಳಿಗೆ ಟಾಟಾ….. ಬೈ…..ಬೈ…. ಹಿಂದೊಬ್ಬ ಹುಡುಗಿ ಇವನಿಂದ ವಂಚಿತಳಾಗಿ ಆತ್ಮಹತ್ಯೆಗೆ ಸಹ ಯತ್ನಿಸಿದ್ದಳು. ಹೇಗೋ ಬಚಾವಾದಳು…..”

ಅದಕ್ಕೆ ಡಾ. ಪ್ರೇಮ್, “ಬಿಡು…. ಈ ಯೌವನದ ವಯಸ್ಸೇ ಹಾಗೆ….. ಮೋಹದಾವೇಶಕ್ಕೆ ಸಿಲುಕಿ ಹೀಗೆ ಆಡುತ್ತಾರೆ….. ವಿವೇಕದ ಕಡಿವಾಣ ಇಲ್ಲದಿದ್ದರೆ ಹಳ್ಳಕ್ಕೆ ಬೀಳಬೇಕಾದ್ದೆ….. ಬೇರೆಯವರ ವಿಷಯ ನಮಗೇಕೆ…..?” ಎಂದರು.

ಈ ಘಟನೆ ನಡೆದ 4-5 ತಿಂಗಳ ನಂತರ ಅಂದು ಈ ಡಾಕ್ಟರ್‌ ದಂಪತಿ ನೈಟ್‌ ಡ್ಯೂಟಿ ನೋಡುತ್ತಿದ್ದಾಗ ಇದೇ ಹುಡುಗಿ ಪೇಶೆಂಟ್ ಆಗಿ ಇವರ ಬಳಿ ಬಂದಳು.

ಆ ಹುಡುಗಿಯ ತಾಯಿ ತಂದೆ ಆಟೋದಿಂದ ಇಳಿದು, ಆಸರೆ ನೀಡಿ, ಆ ಹುಡುಗಿಯನ್ನು ನಿಧಾನವಾಗಿ ನಡೆಸುತ್ತಾ ಡಾಕ್ಟರ್‌ ಬಳಿ ಕರೆತಂದರು. ಎಮರ್ಜೆನ್ಸಿ ರೂಮಿನಲ್ಲಿ ನರ್ಸ್‌ ಅವಳನ್ನು ಮಲಗಿಸಿದಳು. ಆಗ ತಾಯಿ ಹೇಳಿದಳು, “ಇವತ್ತು ಮಧ್ಯಾಹ್ನದಿಂದ ಇವಳಿಗೆ ಹೊಟ್ಟೆನೋವು….. ಸಂಜೆ ಹೊತ್ತಿಗೆ ಬ್ಲೀಡಿಂಗ್‌ ಶುರುವಾಗಿ ಸುಸ್ತಾಗಿ ಹೋಗಿದ್ದಾಳೆ…..”

ತಕ್ಷಣ ಡಾಕ್ಟರ್‌ ಹುಡುಗಿಯ ಬಿಪಿ ಚೆಕ್‌ ಮಾಡಿದರು. ತಕ್ಷಣ ಪತ್ನಿಯನ್ನು ಫೋನಿನಲ್ಲಿ ಕರೆದು, “ಡಾ. ಶೀಲಾ, ನೀವು ತಕ್ಷಣ ಇಲ್ಲಿಗೆ ಹೊರಟು ಬನ್ನಿ. ಇಲ್ಲೊಂದು ಎಮರ್ಜೆನ್ಸಿ ಕೇಸ್‌ ಬಂದಿದೆ.”

ಎರಡೇ ನಿಮಿಷಗಳಲ್ಲಿ ಸ್ತ್ರೀರೋಗ ತಜ್ಞೆ ಡಾ. ಶೀಲಾ ಅಲ್ಲಿಗೆ ಹಾಜರಾದರು. ಅವರು ರೋಗಿಯನ್ನು ಬೆಡ್‌ ಮೇಲೆ ಮಲಗಿಸಿ ಪರದೆ ಹಾಕಿಸಿದರು.

“ಇವಳಿಗೆ ಜಾಸ್ತೀನೇ ಬ್ಲೀಡಿಂಗ್‌ ಆಗಿದೆ. ತಕ್ಷಣ ಆಪರೇಷನ್‌ ಮಾಡಬೇಕು….. ಅದಕ್ಕೆ ವ್ಯವಸ್ಥೆ ಆಗಲಿ…. ಬಲವಂತದ ಅಬಾರ್ಷನ್‌ ಆಗಿದೆ….”

ಆಪರೇಷನ್‌ ಹೆಸರು ಕೇಳಿ ಹುಡುಗಿಯ ತಾಯಿ ತಂದೆ ಹೆದರಿದರು. “ಡಾಕ್ಟರ್‌, ನಮ್ಮ ಮಗಳ ಜೀವಕ್ಕೇನೂ ಅಪಾಯ ಇಲ್ಲ ತಾನೇ?”

“ಈಗಲೇ ಏನೂ ಹೇಳೋಕ್ಕಾಗಲ್ಲ. ನೀವೆಲ್ಲ ಓ.ಟಿ. ಹೊರಗೆ ವೆಯ್ಟ್ ಮಾಡಿ,” ಸಿಸ್ಟರ್‌ಗೆ ಸೂಚನೆ ನೀಡಿ ಪತಿ ಜೊತೆ ಆಕೆ ಆಪರೇಷನ್‌ಗೆ ಸಿದ್ಧರಾಗತೊಡಗಿದರು.

ಸ್ವಲ್ಪ ಹೊತ್ತಿನ ನಂತರ ಓ.ಟಿ.ಯಿಂದ ಹೊರಬಂದ ಒಬ್ಬ ನರ್ಸ್‌ ಕೇಳಿದಳು, “ನೀವೇನಾ ಈ ಹುಡುಗಿಯ ತಾಯಿ ತಂದೆ….?”

“ಹೌದು…..” ಎಂದರು ತಂದೆ.

“ಬೇಗ ಇದಕ್ಕೆ ಸಹಿ ಹಾಕಿ. ಈಗಲೇ ನಿಮ್ಮ ಮಗಳಿಗೆ ಆಪರೇಷನ್‌ ಮಾಡಬೇಕು,” ಎಂದು ಅವಸರಪಡಿಸಿದಳು.

“ವಿಷಯ ಏನು ಸಿಸ್ಟರ್‌?”

“ಈಗ ಅದೆಲ್ಲ ಹೇಳಲು ಸಮಯ ಇಲ್ಲ. ಬಾಕಿ ವಿವರ ಆಪರೇಷನ್‌ ನಂತರ ಡಾಕ್ಟರ್‌ ಬಳಿ ಕೇಳಿಕೊಳ್ಳಿ. ಈಗ ರೋಗಿಯ ಜೀವ ಉಳಿಯುವುದೇ ಮುಖ್ಯ…… ಈಗಲೇ 2 ಬಾಟಲ್ ರಕ್ತ ತಂದು ನಮ್ಮ ಬ್ಲಡ್‌ ಬ್ಯಾಂಕಿಗೆ ಜಮಾ ಮಾಡಿ,” ಎಂದು ಬೇರೊಂದು ಚೀಟಿ ನೀಡಿ ಆಕೆ ಬೇಗ ಒಳಗೆ ಓಡಿದಳು. ತಕ್ಷಣ ಅವರು ತಮ್ಮ ಗೆಳೆಯನ ಮಗನಿಗೆ ಫೋನ್‌ ಮಾಡಿದರು. 24ರ ಹುಡುಗ ತನ್ನ ಗೆಳೆಯನ ಜೊತೆ ಬಂದು ರಕ್ತ ಕೊಟ್ಟು ಹೊರಟ.

ಇವರು ಆ ಹುಡುಗನಿಗೆ ಧನ್ಯವಾದ ಹೇಳಿ ಉಪಾಹಾರ ಕೊಡಿಸಿ ಕಳುಹಿಸಿದರು. ನಂತರ ಹುಡುಗಿಯ ತಾಯಿ ತಂದೆ, ತಮ್ಮ ಮಗಳಿಗೆ ಇದ್ದಕ್ಕಿದ್ದಂತೆ ಹೀಗೇಕಾಯಿತೋ ಎಂದು ಪೇಚಾಡುತ್ತಾ ಕಳವಳಗೊಂಡರು.

ಓ.ಟಿ.ಯಲ್ಲಿ ಡಾಕ್ಟರ್‌ ಆಶಾಳನ್ನು ಕೇಳಿದರು, “ಏನಮ್ಮಾ, ನೀನು ಸದಾ ಆ ಲೇಕ್‌ ಪಾರ್ಕ್‌ಗೆ ನಿನ್ನ ಬಾಯ್‌ ಫ್ರೆಂಡ್‌ ಜೊತೆ ಬರ್ತಿದ್ದೆಯಲ್ಲ, ಇದು ಅದರದೇ ಪರಿಣಾಮವೇ…..?”

ಆಗ ಆಶಾ ಅಳುತ್ತಾ ಹೇಳಿದಳು, “ಓ….. ನಿಮಗೂ ಅದು ಗೊತ್ತೆ? ನನ್ನ ಒಂದು ಘೋರ ತಪ್ಪಿನ ಪರಿಣಾಮ ಇಂದು ನಮ್ಮ ಕುಟುಂಬದ ಮರ್ಯಾದೆ ಬೀದಿಗೆ ಬರುವಂತಾಗಿದೆ. ನಿಮ್ಮಲ್ಲಿ ಒಂದೇ ರಿಕ್ವೆಸ್ಟ್, ಆಪರೇಷನ್‌ ಮಾಡಿ….. ಆದರೆ ನನ್ನ ಜೀವ ಉಳಿಸಬೇಡಿ. ನನ್ನಂಥ ಕುಲದ್ರೋಹಿಗೆ ಇದೇ ಸರಿಯಾದ ಶಿಕ್ಷೆ….” ಎಂದು ಬಿಕ್ಕಿದಳು.

“ಹಾಗೆಲ್ಲ ಹೇಳಬಾರದಮ್ಮ…… ಧೈರ್ಯ ತಂದುಕೋ. ಡಾಕ್ಟರ್‌ ಅಂದ್ರೆ ಹೇಗಾದರೂ ಸರಿ, ಜೀವ ಕಾಪಾಡುವವರೇ ಹೊರತು ಜೀವ ತೆಗೆಯುವವರಲ್ಲ. ನೀನು ಒಂದೇ ಮನಸ್ಸಿನಿಂದ ಎಲ್ಲಾ ವಾಸಿ ಆಗಲಿ, ದೃಢವಾಗಿ ಜೀವನ ಎದುರಿಸುತ್ತೇನೆ ಎಂದು ಪ್ರಾರ್ಥಿಸಿಕೋ…. ಎಲ್ಲ ಸರಿಹೋಗುತ್ತದೆ,” ಎಂದು ಆಕೆ ರೋಗಿಗೆ ಧೈರ್ಯ ತುಂಬಿದರು.

“ಆದರೆ ಈ ಕಳಂಕ ಹೊತ್ತು ನಾನು ಹೇಗೆ ಜೀವಿಸಲಿ ಡಾಕ್ಟರ್‌? ನೀವು ಹೇಗಾದರೂ ಬದುಕಿಸುತ್ತೀರಿ, ನನಗೆ ಗೊತ್ತು….. ಆದರೆ ಈ ಕಳಂಕದಿಂದ ಬಚಾವಾಗಲಾರದೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆನಷ್ಟೆ…… ದಯವಿಟ್ಟು ನನ್ನನ್ನು ಇಲ್ಲೇ ಸಾಯಲು ಬಿಡಿ.”

“ನೀನು ಖಂಡಿತಾ ಗಾಬರಿಗೊಳ್ಳಬೇಡ. ನಾನು ನಿನ್ನ ಹೆಸರಿಗೆ ಕಳಂಕ ಬಾರದಂತೆ ಕಾಪಾಡುತ್ತೇನೆ. ನೀನು ಇಲ್ಲಿಂದ ಆರೋಗ್ಯಕರವಾಗಿ ಮನೆಗೆ ಹೋಗುತ್ತೀಯಾ…. ಮುಂದೆ ನಿನ್ನ ಓದು, ಕೆರಿಯರ್‌ ಬಗ್ಗೆ ಗಮನಕೊಡು, ನಿನ್ನ ತಾಯಿ ತಂದೆಯರ ಗೌರವ ಕಾಪಾಡು!”

“ಆಗಲಿ…. ಥ್ಯಾಂಕ್ಸ್ ಡಾಕ್ಟರ್‌…..”

“ಧೈರ್ಯ ಕಳೆದುಕೊಳ್ಳಬೇಡ. ಈಗ ನಿನ್ನ ಮೇಲೆ ಅನೆಸ್ತೇಶಿಯಾದ (ಅರಿವಳಿಕೆ) ಪ್ರಭಾವ ಆಗುತ್ತೆ, ಸ್ವಲ್ಪ ಹೊತ್ತಿಗೆ ಆಪರೇಷನ್ ಆಗಿಯೇ ಹೋಗುತ್ತದೆ,” ಎಂದರು ಡಾಕ್ಟರ್‌.

ಸುಮಾರು 2 ಗಂಟೆಗಳ ನಂತರ ಡಾ. ಶೀಲಾ ಓ.ಟಿ.ಯಿಂದ ಹೊರಬಂದರು. ಅವರನ್ನು ನೋಡುತ್ತಲೇ ಆಶಾಳ ತಾಯಿ ತಂದೆ ಓಡಿಬಂದರು.

“ಈಗ ನಮ್ಮ ಮಗಳು ಹೇಗಿದ್ದಾಳೆ ಡಾಕ್ಟರ್‌?”

“ನೀವು ಸಕಾಲಕ್ಕೆ ನಿಮ್ಮ ಮಗಳನ್ನು ಆಸ್ಪತ್ರೆಗೆ ಕರೆತಂದಿರಿ. ಇಲ್ಲದ್ದಿದರೆ ಇನ್ನಷ್ಟು ಹೆಚ್ಚು ರಕ್ತ ಹೋಗಿ ಅವಳ ಪ್ರಾಣಕ್ಕೇ ಕುತ್ತು ಬರುತ್ತಿತ್ತು. ನಿಮ್ಮ ಮಗಳ ಆಪರೇಷನ್‌ ಸಕ್ಸಸ್‌ ಆಗಿದೆ….. ಈಗ ಇನ್ನೇನೂ ಅಪಾಯವಿಲ್ಲ!”

“ಆದರೆ…. ಅವಳಿಗೆ ಏನಾಗಿತ್ತು?” ಮೂರ್ತಿ ಚಿಂತೆಯಿಂದ ಕೇಳಿದರು.

“ನೀವಿಬ್ಬರೂ ನನ್ನೊಂದಿಗೆ ನನ್ನ ಕ್ಯಾಬಿನ್‌ಗೆ ಬನ್ನಿ…..”

ಅವರಿಬ್ಬರೂ ತಮ್ಮ ಕ್ಯಾಬಿನ್‌ಗೆ ಬಂದ ನಂತರ ತುಸು ನೀರು ಕುಡಿದು ಸುಧಾರಿಸಿಕೊಂಡ ಡಾ. ಶೀಲಾ ಕೇಳಿದರು, “ನೀವು ಫೈಲ್‌ನಲ್ಲಿ ನಿಮ್ಮ ಮಗಳ ವಯಸ್ಸು 17 ಅಂತ ಬರೆದಿದ್ದೀರಿ….ಅಂದ್ರೆ ಅವಳಿನ್ನೂ ಅಪ್ರಾಪ್ತ ವಯಸ್ಕಳು….. ಒಂದು  ಪ್ರಶ್ನೆ ಕೇಳ್ತೀನಿ, ಗಾಬರಿಗೊಳ್ಳಬೇಡಿ. ರತ್ನಾ….. ನಿಮ್ಮ ಮಗಳು ಗರ್ಭವತಿ ಆಗಿದ್ದಳೇ?”

ರತ್ನಮ್ಮ ತಲೆ ತಗ್ಗಿಸಿದರು. “ಆದರೆ….. ಇದು ಹೇಗೆ ಸಾಧ್ಯ?”

“ಅದನ್ನು ನಿಮ್ಮ ಮಗಳೇ ವಿವರಿಸಬೇಕಷ್ಟೆ. ಅವಳ ಒಂದು ಫರ್ಟಿಲೈಸ್ಡ್ ಎಗ್‌ ಗರ್ಭಾಶಯ ತಲುಪಲಿಲ್ಲ. ಫೆಲೋಪಿಯನ್ ಟ್ಯೂಬ್‌ನಲ್ಲೇ ಉಳಿದುಬಿಟ್ಟಿತ್ತು. ಆ ಭ್ರೂಣ ಗರ್ಭಕೋಶ ತಲುಪದೆ ಹೀಗೆ ಹಿಗ್ಗಿದ ಕಾರಣ, ಸುತ್ತಲ ಗೋಡೆ ಒಡೆದು ಹೀಗೆ ರಕ್ತ ಸ್ರಾವ ಜಾಸ್ತಿ ಆಯ್ತು. ಆ ನಾಳವನ್ನು ಕತ್ತರಿಸಿ ಎಸೆದು, ನಾವು ಹೊಲಿಗೆ ಹಾಕಿದ್ದೇವೆ. ಈಗ ಇನ್ನೇನೂ ಭಯವಿಲ್ಲ.”

ಆಶಾಳ ತಾಯಿ ತಂದೆ ಆಶ್ಚರ್ಯದಿಂದ ಇವರ ಕಡೆ ನೋಡುತ್ತಾ, ಸಂಕೋಚದಿಂದ ತಲೆತಗ್ಗಿಸಿದರು.

1 ವಾರದ ನಂತರ ಚೇತರಿಸಿಕೊಂಡ ಆಶಾ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದಳು. ಆಗ ಡಾಕ್ಟರ್‌ರ ಅಸಿಸ್ಟೆಂಟ್‌ ಡ್ಯೂಟಿ ಡಾಕ್ಟರ್ ಕೇಳಿದರು, “ಡಿಸ್‌ಚಾರ್ಜ್‌ ಸಮ್ಮರಿಯಲ್ಲಿ ಏನು ಬರೋಣ ಡಾಕ್ಟರ್‌? ಈ ಸಂದರ್ಭದಲ್ಲಿ ನಿಮ್ಮನ್ನು ಕೇಳಿ ಬರೆಯುವಂತೆ ಹೇಳಿದಿರಿ.”

”ಪೇಶೆಂಟ್‌ಗೆ ನೀಡುವ ಡಿಸ್‌ಚಾರ್ಜ್‌ ಸ್ಲಿಪ್‌ನಲ್ಲಿ ನಡೆದ ಸತ್ಯವನ್ನೇ ಬರೆಯಿರಿ. ಆಸ್ಪತ್ರೆಯ ಫೈಲ್ ನಲ್ಲಿ ಮಾತ್ರ ಬಲಗಡೆಯ ಫೆಲೋಪಿಯನ್‌ ಟ್ಯೂಬ್‌ ಒಡೆದಿತ್ತು ಎಂದಷ್ಟೇ ಬರೆಯಿರಿ. ಅದನ್ನು ಆಪರೇಷನ್‌ ಮಾಡಿ ತೆಗೆದಿರುವುದಾಗಿ ನಮೂದಿಸಿ. ಮುಂದೆ ಇನ್ನೊಂದು ಸೂಚನೆ ಸೇರಿಸಿ. ಪೂರ್ಣ ವಿವರ ಗೈನಕಾಲಜಿಸ್ಟ್ ರಿಪೋರ್ಟ್‌ನಲ್ಲಿದೆ ಅಂತ. ಈ ಎಲ್ಲಾ ಪೇಪರ್ಸ್‌ ಫೈಲ್ ‌ಮಾಡಿ ನನಗೆ ಕೊಡಿ. ಈ ವಿಷಯ ನಮ್ಮಿಬ್ಬರಲ್ಲಿ ಮಾತ್ರ ಇರಲಿ, ಖಂಡಿತಾ ಇದನ್ನು ನೀವು ಬೇರೆಯವರ ಜೊತೆ ಹಂಚಿಕೊಳ್ಳಬಾರದು. ನೀವು ಒಬ್ಬ ಹೆಣ್ಣಾದ ಕಾರಣ ಯಾಕೆ ಏನು ಅಂತ ಇಷ್ಟು ಹೊತ್ತಿಗೆ ಅರ್ಥ ಆಗಿರುತ್ತೆ….”

ಶೀಲಾರ ಪತಿ ಡಾ. ಪ್ರೇಮ್ ಅಷ್ಟು ಹೊತ್ತಿಗೆ ಅಲ್ಲಿಗೆ ತಲುಪಿದ್ದರು. ಅವರು ಇದನ್ನೆಲ್ಲ ಗಮನಿಸಿ, “ಶೀಲಾ, ಇದೇನು ಮಾಡುತ್ತಿರುವೆ? ಆಸ್ಪತ್ರೆಯ ಫೈಲ್ ನಲ್ಲೇ ಒರಿಜಿನಲ್ ಆಪರೇಷನ್ನಿನ ರೆಕಾರ್ಡ್ಸ್ ಇರಲಿ ಬಿಡು. ಒಬ್ಬ ಆದರ್ಶ ವೈದ್ಯಳಾಗಿ ನೀನು ಹೀಗೆ ಮಾಡಬಾರದು. ರೋಗಿಯ ಕಡೆ ಅಧಿಕ ಕರುಣೆ ತೋರಿಸಲು ಹೋಗಿ ಆಸ್ಪತ್ರೆಯ ನಿಯಮ ಮುರಿಯಬಾರದು.”

“ಆಸ್ಪತ್ರೆ ನಿಯಮದ ದೃಷ್ಟಿಯಿಂದ ನೀವು ಹೇಳುತ್ತಿರುವುದು ಸರಿ. ಆದರೆ ಹಾಗೆ ಮಾಡುವುದರಿಂದ, ಅಪ್ರಾಪ್ತ ವಯಸ್ಕಳ ಈ ಅನೈತಿಕ ಪ್ರೆಗ್ನೆನ್ಸಿಯ ವಿಷಯ ಊರಿಗೆಲ್ಲ ತಿಳಿದು ಎಲ್ಲರೂ ಆಡಿಕೊಳ್ಳುವಂತಾಗುತ್ತದೆ. ಅದರಿಂದ ಇವಳ ಭವಿಷ್ಯದ ಮೇಲೂ ದುಷ್ಪರಿಣಾಮ ಆಗುತ್ತದೆ. ನಾನು ಕರ್ತವ್ಯ ನಿಷ್ಠ ಡಾಕ್ಟರ್‌ಮಾತ್ರವಲ್ಲ, ಅದಕ್ಕೆ ಮುಂಚೆ ಒಬ್ಬ ಹೆಣ್ಣು! ಹೀಗಾಗಿ ಈ ಹುಡುಗಿಯ ನೋವು ಚೆನ್ನಾಗಿ ಗೊತ್ತಾಗುತ್ತದೆ.”

ನಂತರ ಆಕೆ ಆಶಾ ತಂದೆಗೆ ಹೇಳಿದರು, “ನಿಮ್ಮ ಫೈಲ್ ‌ನಲ್ಲಿ ನಾನು ಸತ್ಯ ಬರೆಯಲೇಬೇಕು. ಇದೋ ಈ ಫೈಲ್ ‌ತಗೊಳ್ಳಿ, ಇದನ್ನು ಬೇಕಾದರೆ ನೀವು ಇಟ್ಟುಕೊಳ್ಳಬಹುದು ಅಥವಾ ನಷ್ಟಪಡಿಸಿಬಿಡಿ. ನಿಮ್ಮ ಮಗಳ ಹಿತದೃಷ್ಟಿಯಿಂದ ಏನು ಮಾಡಬಹುದೋ ನನ್ನ ಕೈಲಾದಷ್ಟನ್ನು ನಾನು ಮಾಡಿದ್ದೇನೆ.”

“ಮುಂದೆ ನನ್ನ ಮಗಳು ತಾಯಿ ಆಗುವಳೋ….. ಇಲ್ಲವೋ?”

“ಖಂಡಿತಾ ತಾಯಿ ಆಗುತ್ತಾಳೆ. ಒಂದನ್ನು ಮಾತ್ರ ನಾವು ಕತ್ತರಿಸಿದ್ದೇವೆ. ಇನ್ನೊಂದು ಫೆಲೋಪಿಯನ್‌ ಟ್ಯೂಬ್‌ ಅವಳ ಗರ್ಭಕೋಶದ ಬಳಿ ಸುರಕ್ಷಿತವಾಗಿದೆ,” ಎಂದರು ಡಾ. ಶೀಾ.

“ಆದರೆ ಆಪರೇಷನ್‌ ಗುರುತು ಇವಳ ಹೊಟ್ಟೆಯ ಮೇಲೆ ಉಳಿದು ಬಿಡುತ್ತದಲ್ಲವೇ? ಮದುವೆ ನಂತರ ಅದು ಇವಳ ಗಂಡನಿಗೆ ತಿಳಿದುಹೋದರೆ  ಏನು ಗತಿ……?”

“ನಾನು ಲೆಪ್ರೋಸ್ಕೋಪಿ ವಿಧಾನದಿಂದ ಇವಳಿಗೆ ಆಪರೇಷನ್‌ ಮಾಡಿದ್ದೇನೆ. ಬಲು ಸಣ್ಣ ಗುರುತು ಮಾತ್ರ ಇದೆ. ಅವಳ ಹೊಟ್ಟೆಯ ಬಳಿ ಯಾವುದೇ ಗುರುತು ಇರುವುದಿಲ್ಲ. ಈಗ ಆಗಿರುವ ಸಣ್ಣ ಕಲೆ ಸಹ, ಕ್ರೀಂ ಹಚ್ಚುವುದರಿಂದ ತಾನೇ ಮರೆ ಆಗುತ್ತದೆ. ಆಶಾಳ ಮದುವೆಗೆ ಇನ್ನೂ ಬಹಳಷ್ಟು ಕಾಲಾವಕಾಶವಿದೆ. ಆ ಬಗ್ಗೆ ನಾನು ಅವಳೊಂದಿಗೆ ಮಾತನಾಡಿದ್ದೇನೆ. ಅವಳಿಗೆ ತಾನು ಮಾಡಿಕೊಂಡ ಈ ಸ್ವಯಂಕೃತ ಅಪರಾಧದ ಬಗ್ಗೆ ಸ್ಪಷ್ಟ ಅರಿವಾಗಿದೆ, ಬಹಳ  ಪಶ್ಚಾತ್ತಾಪ ಪಡುತ್ತಿದ್ದಾಳೆ. ಹೀಗಾಗಿ ಮುಂದೆ ತನ್ನ ಓದು, ಕೆಲಸ, ಕೆರಿಯರ್‌ ಕಡೆ ಹೆಚ್ಚು ಗಮನಹರಿಸುತ್ತೇನೆ ಎಂದು ಪ್ರಾಮಿಸ್‌ ಮಾಡಿದ್ದಾಳೆ. ತನ್ನ ಎಂ.ಎ. ಮುಗಿದ ನಂತರ, ಕೆಲಸ ಆದ ಮೇಲೆ ಮದುವೆ ವಿಷಯ ಎಂದು ಖಚಿತಪಡಿಸಿದ್ದಾಳೆ.”

ಆಶಾ ಡಿಸ್‌ಚಾರ್ಜ್‌ ಆಗಿ ಮನೆಗೆ ಬಂದ ಮೇಲೆ ತಾಯಿ ರತ್ನಮ್ಮನ ಬಳಿ, “ಅಮ್ಮಾ, ನಿಮ್ಮಿಬ್ಬರ ಬಳಿ ನಾನೆಷ್ಟು ಕ್ಷಮಾಪಣೆ ಕೇಳಿಕೊಂಡರೂ ಸಾಲದು…. ಈಗ ನಾನು ಯಾರಿಗೂ ಮುಖ ತೋರಿಸಲಾರದವಳಾಗಿದ್ದೇನೆ….. ನಾನು ಬದುಕಿ ತಾನೇ ಏನು ಪ್ರಯೋಜನ?” ಎಂದು ಬಿಕ್ಕಳಿಸಿದಳು.

“ಖಂಡಿತಾ ಅಂಥ ಹುಚ್ಚು ಆಲೋಚನೆಗಳು ನಿನ್ನ ತಲೆಗೆ ಬರಲೇಬಾರದು! ಎಂದೆಂದೂ ಅಂಥ ಪ್ರಯತ್ನಕ್ಕೆ ಕೈ ಹಾಕುವುದಿಲ್ಲ ಎಂದು ನನ್ನ ತಲೆ ಮೇಲೆ  ಕೈಯಿಟ್ಟು ಪ್ರಮಾಣ ಮಾಡು…… ಇದನ್ನು ಒಂದು ದುರ್ಘಟನೆ ಎಂದು ಮರೆತುಬಿಡು. ಮುಂದೆ ಎಂದೂ ಯಾರ ಬಳಿಯೂ ಇದರ ಬಗ್ಗೆ ಚರ್ಚಿಸಲು ಹೋಗಬೇಡ. ಮದುವೆಯಾದ ಮೇಲೆ ಅತಿ ಆದರ್ಶವಾದಿಯಂತೆ ನಿನ್ನ ಗಂಡನಿಗೂ ಇದನ್ನು ತಿಳಿಸಲು ಹೋಗಬೇಡ, ಆದದ್ದು ಆಗಿ ಹೋಯಿತು. ಮನಸ್ಸಿಟ್ಟು ಓದಿ, ಕೆಲಸಕ್ಕೆ ಸೇರು….. ನಂತರ ಮದುವೆ ಬಗ್ಗೆ ಯೋಚಿಸೋಣ, ನೀನೇನೂ ಗಾಬರಿ ಆಗಬೇಡಮ್ಮ…..” ಎಂದು ಮಗಳ ಬಳಿ ಪ್ರಮಾಣ ಮಾಡಿಸಿಕೊಂಡರು.

ನಂತರ ಅವರು ಪತಿಯತ್ತ ತಿರುಗಿ, “ಆಶಾ ಬಳಿ ಇನ್ನು ಮುಂದೆ ನಾವು ಈ ಬಗ್ಗೆ ಚರ್ಚಿಸುವುದೇ ಬೇಡ. ನಾನು ಅವಳಿಗೆ ಈ ಬಗ್ಗೆ ಸಂಪೂರ್ಣ ವಿವರಿಸಿದ್ದೇನೆ. ತನ್ನ ಸ್ವಯಂಕೃತ ಅಚಾತುರ್ಯಕ್ಕಾಗಿ ಬಹಳ ಪಶ್ಚಾತ್ತಪ ಪಡುತ್ತಿದ್ದಾಳೆ. ಇನ್ನು ಅವಳ ಗಮನವೆಲ್ಲ ಓದಿನ ಕಡೆಗಿರಲಿ.”

“ಹೌದು ರತ್ನಾ, ನೀನು ಹೇಳಿದ್ದು ಸರಿಯಾಗಿದೆ. ಆ ಲೇಡಿ ಡಾಕ್ಟರ್‌ ಇಂಥ ರಿಪೋರ್ಟ್‌ ನೀಡಿ ನಮ್ಮ ಮಗಳ ಭವಿಷ್ಯ ಕಾಪಾಡಿದ್ದಾರೆ. ಅವರಿಗೆ ನಾವು ಎಂದೆಂದೂ ಚಿರಋಣಿಗಳು,” ಎಂದರು.

dr-ki-maharbani-story2

ಈ ಘಟನೆ ನಡೆದ 7 ವರ್ಷಗಳ ನಂತರ ಆಶಾ ಮತ್ತೆ ಅದೇ ಡಾಕ್ಟರ್‌ ಬಳಿ ಬಂದಿದ್ದಳು. ಈ ಸಲ ಅವಳು ಮದುವೆ ಆಗಿ ತನ್ನ ಪತಿ ಜೊತೆ ಡಾಕ್ಟರ್‌ ಶೀಲಾರನ್ನು ಭೇಟಿಯಾಗಲು ಬಂದಿದ್ದಳು. ಗರ್ಭವತಿಯಾದ ಅವಳು ರೆಗ್ಯುಲರ್‌ ಚೆಕ್‌ ಅಪ್‌ಗಾಗಿ ಬಂದಿದ್ದಳು. ಆಶಾಳ ಪತಿ ಸುರೇಶ್‌ನನ್ನು ಹೊರಗೆ ಇರಲು ಹೇಳಿ, ಡಾಕ್ಟರ್‌ ಶೀಲಾ ಆಶಾಳ ತಪಾಸಣೆಗಾಗಿ ಒಳಗೆ ಕರೆದೊಯ್ದರು.

ಡಾಕ್ಟರ್‌ ಶೀಲಾ ಆಶಾಳನ್ನು ಪರೀಕ್ಷಿಸುತ್ತಾ ಕೇಳಿದರು, “ನಿನ್ನ ಹೊಟ್ಟೆ ಮೇಲಿನ ಆ ಹಳೆಯ ಆಪರೇಷನ್‌ ಗುರುತು ಬಹುತೇಕ ಮರೆಯಾಗಿದೆ. ಈಗ ಎಷ್ಟನೇ ತಿಂಗಳು ನಡೆಯುತ್ತಿದೆಯಮ್ಮ?”

“ಬಹುಶಃ 5ನೇ ತಿಂಗಳಿರಬೇಕು.”

ತಪಾಸಣೆ ಮುಗಿಸಿ ಡಾಕ್ಟರ್‌ ಹೇಳಿದರು, “ಮಗು ಚೆನ್ನಾಗಿ ಆರೋಗ್ಯಕರವಾಗಿ ಬೆಳೆಯುತ್ತಿದೆ. ನಿನ್ನ ಊಟ ತಿಂಡಿ ಕಡೆ ಹೆಚ್ಚಿನ ಗಮನ ಕೊಡು. ಸದಾ ಆ್ಯಕ್ಟಿವ್ ‌ಆಗಿರಬೇಕು. ಬೆಳಗ್ಗೆ ಸಂಜೆ ಹೊತ್ತು ವಾಕಿಂಗ್‌, ಲುಘು ವ್ಯಾಯಾಮ, ಮನೆಗೆಲಸ….. ಎಲ್ಲಾ ಮಾಡುತ್ತಿರು. ಇದರಿಂದ ಸಹಜ ಪ್ರಸವಕ್ಕೆ ಅನುಕೂಲವಾಗುತ್ತದೆ. ಗರ್ಭಿಣಿ ಆದ ತಕ್ಷಣ ಸದಾ ಮಲಗಿ ವಿಶ್ರಾಂತಿ ಪಡೆಯುತ್ತಿರಬೇಕು ಅಂತೇನಿಲ್ಲ. ನಿನ್ನ ಗಂಡ ಹೊರಗೆ ಬಹಳ ಚಡಪಡಿಸುತ್ತಿದ್ದಾರೆ. ನಿನ್ನನ್ನು ಬಹಳ ಪ್ರೀತಿಸುತ್ತಾರೆ ಅನ್ಸುತ್ತೆ….. ಅಲ್ವಾ…..?”

“ಹೌದು ಡಾಕ್ಟರ್‌, ಆ ವಿಷಯದಲ್ಲಿ ನಾನು ಬಹಳ ಭಾಗ್ಯಶಾಲಿ! ನನ್ನ ಹಿಂದಿನ ಕರ್ಮಕಾಂಡದ ಬಗ್ಗೆ ಅವರಿಗೇನೂ ಹೇಳಿಲ್ಲ. ನಾನು ಆತ್ಮಹತ್ಯೆಯ ಬಗ್ಗೆಯೂ ಯೋಚಿಸಿದ್ದೆ. ನಿಮ್ಮ ಹಿತನುಡಿಗಳಿಂದ, ಧೈರ್ಯದ ಮಾತುಗಳಿಂದ ನಾನು ಬದುಕುಳಿದೆ. ನಿಮ್ಮಿಂದ ನನ್ನ ಭವಿಷ್ಯ ಬೆಳಗಿತು! ನಿಮಗೆ ಕೃತಜ್ಞತೆ ಹೇಳಲು ನನ್ನ ಬಳಿ ನಿಜಕ್ಕೂ ಮಾತುಗಳೇ ಇಲ್ಲ…..” ಹೇಳುವಷ್ಟರಲ್ಲಿ ಅವಳು ಕಂಬನಿ ಮಿಡಿದಳು.

“ಅದೆಲ್ಲ ಏನಿಲ್ಲಮ್ಮ….. ನನ್ನ ಕರ್ತವ್ಯ ನಾನು ಮಾಡಿದ್ದೇನೆ. ನಡಿ, ಮೊದಲು ಈ ಗುಡ್‌ ನ್ಯೂಸ್‌ನ್ನು ನಿನ್ನ ಗಂಡನಿಗೆ ತಿಳಿಸೋಣ.”

ಅವರ ಕ್ಯಾಬಿನ್‌ನಿಂದ ಹೊರಬಂದ ಮೇಲೂ ಆಶಾಳ ಮುಖದಲ್ಲಿ ತುಸು ಆತಂಕವಿತ್ತು. ಅದನ್ನು ಗಮನಿಸಿ ಮತ್ತೆ ಅವಳಿಗೆ ಡಾಕ್ಟರ್ ಪ್ರೋತ್ಸಾಹದ ನುಡಿಗಳನ್ನಾಡಿದರು. ಇದೀಗ ನಿಧಾನವಾಗಿ ಅವಳ ಮುಖದಲ್ಲಿ ಮಂದಹಾಸ ಮಿನುಗಿತು.

ಅವಳ ಪತಿ ಸುರೇಶ್‌, “ಡಾಕ್ಟರ್‌ ಏನು ಹೇಳಿದರು ಆಶಾ?” ಎಂದು ಆತಂಕದಿಂದ ವಿಚಾರಿಸಿದ.

“ಏನಾದರೂ ಟೆನ್ಶನ್‌ ವಿಷಯ ಹೇಳಿದರೇನು….?”

“ಇಲ್ಲ….ಇಲ್ಲ…. ಇದು ಖುಷಿಯ ಆನಂದಾಶ್ರುಗಳು. ಕಂಗ್ರಾಟ್ಸ್, ಮಿಸ್ಟರ್‌ ಸುರೇಶ್‌! ನೀವು ತಂದೆ ಆಗ್ತಿದ್ದೀರಿ….. ನಿಮ್ಮ ಹೆಂಡತಿ 5 ತಿಂಗಳ ಗರ್ಭಿಣಿ, ಮಗು ಆರೋಗ್ಯಕರವಾಗಿ ಬೆಳೆಯುತ್ತಿದೆ. ನೆಕ್ಸ್ಟ್ ಟೈಮ್ ನೀವು ಚೆಕಪ್‌ಗೆ ಬಂದಾಗ ಖಂಡಿತಾ ಪೇಡಾ ಬಾಕ್ಸ್ ತರಬೇಕು,” ಎಂದು ಡಾಕ್ಟರ್‌ ಹಾರ್ದಿಕವಾಗಿ ನುಡಿದರು.

“ಅಷ್ಟು ಮಾತ್ರವಲ್ಲ ಸುರೇಶ್‌,  ಇವರು ನಮ್ಮ ಫ್ಯಾಮಿಲಿ ಡಾಕ್ಟರ್‌. ನಮ್ಮ ಕುಟುಂಬದಲ್ಲಿ ಯಾರಿಗೆ ಏನೇ ಆದರೂ ಇದೇ ನರ್ಸಿಂಗ್‌ ಹೋಮ್ ಗೆ ಬರುತ್ತೇವೆ. ಈ ಡಾಕ್ಟರ್‌ ದಂಪತಿಗಳ ಕರ್ತವ್ಯ ನಿಷ್ಠೆಯಿಂದಾಗಿ ನಮ್ಮ ಮನೆಯವರೆಲ್ಲ ಸದಾ ಸ್ವಸ್ಥರಾಗಿದ್ದೇವೆ. ಇವರ ಉಪಕಾರ ನಾವು ಈ ಜನ್ಮದಲ್ಲಿ ಮರೆಯುವ ಹಾಗಿಲ್ಲ.”

“ಡಾಕ್ಟರ್‌, ಪೇಡಾ ಬಾಕ್ಸ್ ಮಾತ್ರವಲ್ಲ, ನೀವು ಸಾರ್‌ ಜೊತೆ ಖಂಡಿತಾ ಬಂದು ನಮ್ಮ ಮನೆಯ ಆತಿಥ್ಯ ಪಡೆಯಬೇಕು,” ಎಂದಾಗ ಸುರೇಶನ ಮಾತಿಗೆ ಡಾಕ್ಟರ್‌ ಒಪ್ಪಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ