ಅದಾಗಲೇ ಸಂಜೆ ಮಬ್ಬುಗತ್ತಲೆ ಆವರಿಸತೊಡಗಿತು. ಚಳಿಗಾಲದ ದಿನಗಳು, ಹೀಗಾಗಿ 6 ಗಂಟೆಗೆ ಕತ್ತಲೆ ಎನಿಸುತ್ತಿತ್ತು. ಆಫೀಸಿನಲ್ಲಿ ದುಡಿದು ದಣಿದುಹೋದ ರಾಗಿಣಿ ಮನೆಯತ್ತ ನಡೆದಳು. ಅವಳು ಒಳಗೆ ಬರುತ್ತಿದ್ದಂತೆಯೇ ಅವಳ ಮಕ್ಕಳಾದ ಆಶಾ ಉಷಾ ಓಡಿಬಂದು ಅಮ್ಮಾ…..ಅಮ್ಮಾ ಎನ್ನುತ್ತಾ ಅವಳ ಕಾಲು ಕಟ್ಟಿಕೊಂಡರು. ಉಷಾ ಯಾಕೋ ಬಿಕ್ಕಳಿಸುತ್ತಿದ್ದಳು.

“ಯಾಕಮ್ಮಾ….. ಏನಾಯ್ತು?”

“ಅಮ್ಮಾ….. ಇಲ್ಲಿ ಎಲ್ಲರೂ ನಮ್ಮನ್ನು ನೋಡಿ, ಪಾಪದ….. ಮುಂಡೇವು ಎನ್ನುತ್ತಾ ಮರುಕ ತೋರಿಸುತ್ತಾರೆ. ಇವತ್ತು ಅಜ್ಜಿಯನ್ನು ನೋಡಲು ಒಬ್ಬ ಆಂಟಿ ಬಂದಿದ್ದರು. ಅವರು ನನ್ನನ್ನು ಮುದ್ದಿಸುತ್ತಾ, ಕಣ್ಣೀರು ಸುರಿಸುತ್ತಾ, `ಅಯ್ಯೋ ಪಾಪ…. ತಂದೆ ಇಲ್ಲದ ಈ ಮಕ್ಕಳನ್ನು ಮುಂದೆ ಯಾರು ಮದುವೆಯಾಗುತ್ತಾರೋ ಏನೋ?’ ಅಮ್ಮ, ನಮಗೆ ಅಪ್ಪ ಇದ್ದಾರೆ. ಆದರೆ ಅವರೇಕೆ ಹಾಗೆ ಹೇಳುತ್ತಿದ್ದರು?” ಎಂದು ಮುಗ್ಧವಾಗಿ ಕೇಳಿದಳು.

8 ವರ್ಷದ ಪುಟ್ಟ ಮಗಳು ಹಾಗೆ ಕೇಳಿದರೆ ರಾಗಿಣಿ ಮಗಳಿಗೆ ಏನೆಂದು ವಿವರಿಸಲು ಸಾಧ್ಯ? ಮಗಳನ್ನು ವಾತ್ಸಲ್ಯದಿಂದ ಅಪ್ಪಿಕೊಳ್ಳುತ್ತಾ ಹೇಳಿದಳು, “ಇಂಥ ಮಾತುಗಳಿಗೆ ಕಿವಿ ಕೊಡಬೇಡ ಮಗು. ನೀನು ನನ್ನ ಮುದ್ದಿನ ರಾಜಕುಮಾರಿ ಅಲ್ವಾ?” ಎನ್ನುತ್ತಾ ಪರ್ಸ್‌ನಲ್ಲಿದ್ದ ಚಾಕಲೇಟ್‌ ತೆಗೆದು ಮಗಳಿಗೆ ಕೊಟ್ಟಳು.

ಉಷಾ ಸಂಭ್ರಮದಿಂದ ಅದನ್ನು ಪಡೆದು ಆಡಲು ಹೋದಳು. ಚಿಕ್ಕವಳು ಉಷಾ ಏನೋ ಸಮಾಧಾನಗೊಂಡು ಹೋದಳು. ಆದರೆ ದೊಡ್ಡವಳು 10 ವರ್ಷದ ಆಶಾಳಿಗೆ ಕೆಲವು ವಿಷಯಗಳು ಅರ್ಥವಾಗುತ್ತಿತ್ತು. ಇನ್ನು ಮುಂದೆ ಪಪ್ಪ ಜೊತೆ ನಮ್ಮ ಸಂಬಂಧ ಮುಗಿಯಿತು ಎಂದೇ ತಿಳಿಯಬೇಕೆಂದು ಗೊತ್ತಾಯಿತು. ಹೀಗಾಗಿ ಯಾರಾದರೂ ಅವಳನ್ನು ಪಾಪದವಳು ಅಥವಾ ಅವಳ ತಾಯಿ ಮಕ್ಕಳಿಗೆ ತಂದೆ ಇಲ್ಲದಂತೆ ಮಾಡಿದಳು ಎಂದರೆ ಜಗಳಕ್ಕೆ ಸಿದ್ಧಳಾಗುತ್ತಿದ್ದಳು.

ಈ ಕಾರಣದಿಂದ ಎಲ್ಲರೂ ಅವಳ ವಿರುದ್ಧ ದೂರು ಹೇಳುತ್ತಿದ್ದರು. “ರಾಗಿಣಿ, ನಿನ್ನ ಹಿರಿ ಮಗಳಿಗೆ ಸ್ವಲ್ಪ ಸರಿಯಾಗಿ ಬುದ್ಧಿ ಕಲಿಸು. ಎಲ್ಲರೊಂದಿಗೂ ಜಗಳ ಆಡಲು ಸಿದ್ಧಳಾಗುತ್ತಾಳೆ,” ಎನ್ನುತ್ತಿದ್ದರು.

ಆಗಾಗ ರಾಗಿಣಿ ಆಶಾಳಿಗೆ ಹೇಳುತ್ತಿದ್ದುದುಂಟು, “ಮಗು, ಈ ಜನರ ಜೊತೆ ಅನಗತ್ಯವಾಗಿ ವಾದ ಮಾಡಲು ಹೋಗಬೇಡ…… ನೀನು ಆ ಜಾಗದಿಂದ ತಕ್ಷಣ ಬೇರೆ ಕಡೆ ಹೋಗಿಬಿಡು.”

ಆದರೆ ಆಶಾ ಪ್ರತಿ ದಿನ ಯಾರಾದರೊಬ್ಬರ ಜೊತೆ ಈ ವಿವಾದಕ್ಕೆ ಸಿಲುಕದೆ ಬರುತ್ತಿರಲಿಲ್ಲ. ಒಮ್ಮೆ ಮನೆಯಲ್ಲಿ, ಒಮ್ಮೆ ಶಾಲೆಯಲ್ಲಿ ಇಂಥ ಘಟನೆಗಳು ಮರುಕಳಿಸುತ್ತವೆ ಇದ್ದವು.

ಊಟ ಆದ ನಂತರ ತಾಯಿ ಜಾನಕಮ್ಮ ಯಾರೊಂದಿಗಾದರೂ ಹರಟೆಗೆ ಕೂರುತ್ತಾರೆ ಎಂದು ರಾಗಿಣಿಗೆ ಚೆನ್ನಾಗಿ ಗೊತ್ತಿತ್ತು. ಬಂದವರು ಆ ಮಕ್ಕಳನ್ನು ಉದ್ದೇಶಿಸಿ ಏನಾದರೊಂದು ಹೇಳದೆ ಇರುತ್ತಿರಲಿಲ್ಲ. “ಅಲ್ಲಾ ಜಾನಕಮ್ಮ, ಈ ವಯಸ್ಸಾದ ಕಾಲದಲ್ಲಿ ನಿಮಗೆಂಥ ಕಷ್ಟ ಬಂತು ನೋಡ್ರಿ…… ರಾಗಿಣಿ ಏನೋ ಬೆಳಗಾದರೆ ನೀಟಾಗಿ ಡ್ರೆಸ್‌ ಮಾಡಿಕೊಂಡು ಆಫೀಸಿಗೆ ಹೊರಟುಬಿಡ್ತಾಳೆ. ಆದರೆ ಜಾನಕಮ್ಮ ಇಡೀ ದಿನ ಈ ಮೊಮ್ಮಕ್ಕಳಿಗಾಗಿ ಬೇಯಿಸೋದೇ ಆಯ್ತು. ಅವರಿಗೆ ತಿಂಡಿ ಮಾಡು, ಬಾಕ್ಸ್ ರೆಡಿ ಮಾಡಿ ಶಾಲೆಗೆ ಕಳುಹಿಸು, ಬಂದ ಮಕ್ಕಳಿಗೆ ಊಟ ಬಡಿಸು, ಮಕ್ಕಳನ್ನು ಸುಧಾರಿಸು ಇದೇ ಆಯಾ ಕೆಲಸ ಆಗೋಯ್ತು ರೀ ಪಾಪ…..”

ಮೀರಾ ಮಾತು ಕೇಳಿ ಗಾಯತ್ರಿ ಹೇಳುತ್ತಿದ್ದಳು, “ಸುಮ್ನೆ ಇರಿ ಮೀರಾ…… ಆ ಆಶಾ ಕೇಳಿಸ್ಕೊಂಡ್ರೆ ಸರ್ರಂತ ಸಿಡುಕುತ್ತಾ ಜಗಳಕ್ಕೆ ಬಂದುಬಿಡುತ್ತೆ,” ಅವರ ಮಾತಿಗೆ ಎಲ್ಲರೂ ಸುಮ್ಮನಾಗಿ ವಿಷಯ ಬದಲಾಯಿಸುವರು.

ತಕ್ಷಣ ಮೀರಾ ಎದ್ದು ನಿಂತವರೇ, “ಆದರೂ ಜಾನಕಮ್ಮ ಆ ಸಣ್ಣ ಹುಡುಗಿಗೆ ನೀವೇಕೆ ಹೆದರಬೇಕು? ನಿಮ್ಮ ಕಷ್ಟ ಸುಖ ನಾವು ವಿಚಾರಿಸಿದರೆ ತಪ್ಪೇ? ಎಲ್ಲಕ್ಕೂ ಮೂಗು ತೂರಿಸಿಕೊಂಡು ಬರಬಾರದು ಅಂತ ಅದಕ್ಕೆ ಈಗಿನಿಂದಲೇ ಬುದ್ಧಿ ಕಲಿಸಿ….. ನನ್ನ ಮೊಮ್ಮಗಳು ಹೀಗೆ ಬಾಯಿ ಮಾಡಿದರೆ ನಾನಂತೂ ನಾಲ್ಕು ಬಡಿಯೋದೇ…..” ಕೊನೆಗೆ ಜಾನಕಮ್ಮನವರದೇ ತಪ್ಪು ಎಂಬಂತೆ ಭರತವಾಕ್ಯ ನುಡಿದು ಹೊರಡುತ್ತಿದ್ದರು.

ಯಾವಾಗ ಆಶಾ ಒಳಗೆ ಬಂದಳೋ ಈ ಆಂಟಿಯರೆಲ್ಲ ಮಾತು ಮುಗಿಸಿ, ಮೀಟಿಂಗ್‌ ಮುಗಿಸಿ ಹೊರಡುವರು.

ಬಿಕ್ಕಳಿಸುತ್ತಿದ್ದ ಅಜ್ಜಿಯ ಬಳಿಗೆ ಬಂದು ಆಶಾ ಕೇಳುವಳು, “ಅಜ್ಜಿ, ಅಳಬೇಡಿ ಸುಮ್ಮನಿರಿ. ನೀವು ಹೋಗಿ ಮಲಗಿ, ನಾನೇ ಮೈಕ್ರೋವೇವ್‌ನಲ್ಲಿ ಉಪ್ಪಿಟ್ಟು ಬಿಸಿ ಮಾಡಿ ಉಷಾಗೂ ಕೊಡ್ತೀನಿ.”

“ಸಾಕು ಸುಮ್ನಿರಮ್ಮ….. ಆಮೇಲೆ ಇದನ್ನೇ ನೆಪ ಮಾಡಿಕೊಂಡು ನಿಮ್ಮಮ್ಮ ಬಂದ ಮೇಲೆ, ಅಜ್ಜಿ ಎಲ್ಲರ ಜೊತೆ ಹರಟೆ ಹೊಡೆಯುತ್ತಿದ್ದರು. ನಾನೇ ತಿಂಡಿ ಬಿಸಿ ಮಾಡಿಕೊಂಡೆ ಅಂತ ಚಾಡಿ ಬೇರೆ ಹೇಳ್ತೀಯಾ!”

ಅಜ್ಜಿಯ ಈ ಮಾತು ಕೇಳಿ ಆಶಾಳ ಮೂಡ್‌ ಹಾಳಾಯ್ತು. ಆದರೆ ಅಮ್ಮನ ಮಾತು ನೆನಪಾಗಿ ಏನೂ ಹೇಳದೆ, ತಾನು ಬಿಸಿ ಮಾಡಿದ್ದನ್ನು 2 ತಟ್ಟೆಗೆ ಹಾಕಿ, ಉಷಾಳನ್ನು ತಿನ್ನಲು ಕರೆದಳು. ಅವರು ತಿಂದ ಮೇಲೆ, ತಟ್ಟೆ ವಾಷ್‌ ಬೇಸನ್‌ಗೆ  ಹಾಕಿ, ಟೇಬಲ್ ಒರೆಸಿ ಜಾನಕಮ್ಮ ಮಲಗಲು ಹೊರಟರು.

ಅಂದು ಭಾನುವಾರ. ರಾಗಿಣಿ ಒಗೆದ ಬಟ್ಟೆಗಳನ್ನು ಒಣಗಿಸುತ್ತಿದ್ದಳು. ಆಗ ಉಷಾ ಹೊರಗಿನಿಂದ ಅಳುತ್ತಾ ಒಳಗೆ ಬಂದಳು, “ಏನಾಯ್ತಮ್ಮ ಉಷಾ….. ಯಾಕೆ ಅಳ್ತಿದ್ದಿ?” ರಾಗಿಣಿ ಮಗಳನ್ನು ವಿಚಾರಿಸಿದಳು.

“ಅಮ್ಮ 3ನೇ ಫ್ಲಾಟ್‌ ರಂಜಿತಾ ಮನೆಗೆ ಲೂಡೋ ಆಡಲು ಹೋಗಿದ್ದೆ. ಆಗ ಅವರ ತಾಯಿ ರೇವತಿ ಆಂಟಿ ಬಂದು ನನ್ನನ್ನು ಅಲ್ಲಿಂದ ಎಬ್ಬಿಸಿ ಬಾಗಿಲಿಗೆ ಕಳಿಸುತ್ತಾ, “ನಿಮ್ಮಮ್ಮ  ಡೈವೋರ್ಸಿ…. ಗಂಡನ ಜೊತೆ ಜಗಳ ಆಡಿ ತಾಯಿ ಮನೆ ಸೇರಿದ್ದಾಳೆ. ನಿಮ್ಮಂಥ ಮಕ್ಕಳು ನಮ್ಮ ಮಕ್ಕಳ ಜೊತೆ ಸೇರಬಾರದು. ಇನ್ನು ಮುಂದೆ ನಮ್ಮ ಮನೆಗೆ ಬರಬೇಡ!” ಅಂತ ಬೈದುಬಿಟ್ಟರಮ್ಮ……” ಎಂದು ಅಮ್ಮನ ಮಡಿಲು ಸೇರಿ ಮತ್ತೆ ಬಿಕ್ಕಿಳಿಸಿದಳು.

ರಾಗಿಣಿಗೆ ಚಿಂತೆ ಹೆಚ್ಚಿತು. ಬೆಳಗ್ಗೆ ಅಮ್ಮನ ಜೊತೆ ಇದೇ ವಿಷಯವಾಗಿ ಚರ್ಚೆ ನಡೆದಿತ್ತು. ಆ ಕೋಪವನ್ನು ಮಗಳ ಮೇಲೆ ತೋರಿಸುತ್ತಾ, ಅವಳ ಕೆನ್ನೆಗೊಂದು ಬಾರಿಸಿದಳು.

“ಯಾಕೆ ಅವರ ಮನೆಗೆ ಆಡಲು ಹೋಗ್ತೀಯಾ? ಇಲ್ಲೇ ಅಕ್ಕನ ಜೊತೆ ಆಡಬಾರದೇ?”

“ಅಮ್ಮ ಡೈವೋರ್ಸಿ ಅಂದ್ರೇನು? ಆ ಆಂಟಿ ಯಾಕೆ ಹಾಗೆ ಹೇಳಿದರು?” ರಾಗಿಣಿಗೆ ಅಳು ಉಕ್ಕಿ ಬಂತು. ಉಷಾಳನ್ನು ಆಶಾಳಿಗೊಪ್ಪಿಸಿ ತನ್ನ ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದುಕೊಂಡಳು. ಕಣ್ಣೀರು ಹರಿಯಿತು. ಅವಳ ಬಗ್ಗೆ ತಾಯಿಯ ದೃಷ್ಟಿಯೂ ಬದಲಾಗಿತ್ತು. ಮಗಳು ಬಂದು ತವರಿನಲ್ಲೇ ನೆಲೆಸಿದ್ದು ಅವರಿಗೂ ಯಾಕೋ ಸರಿ ಕಾಣಲಿಲ್ಲ. ಸದಾ ಮುಖ ದುಮ್ಮಿರಿಸಿಕೊಂಡು ಇರುತ್ತಿದ್ದರು. ಮಕ್ಕಳ ಜೊತೆಯೂ ಹಾರ್ದಿಕವಾಗಿ ಮಾತನಾಡುತ್ತಿರಲಿಲ್ಲ.

ರಾಗಿಣಿ ಅಡುಗೆಮನೆಗೆ ಬಂದು ಏನಾದರೂ ಮಾಡೋಣ ಅನ್ನುವಷ್ಟರಲ್ಲಿ ಸಿಡುಕುವರು, “ನಾನೇ ಮಾಡ್ತಿದ್ದೀನಲ್ಲಮ್ಮ….. ನೀನೇಕೆ ಬಂದು ಅದನ್ನು ಆ ಕಡೆ ಇರಿಸಿದೆ?” ರಾಗಿಣಿ ತಾನೇ ಏನಾದರೂ ತಯಾರಿಸಿಕೊಟ್ಟರೆ ಬೇಕೆಂದೇ ಅವಳ ಮುಂದೆ ಅದನ್ನು ತಿನ್ನದೆ ಸರಿಸಿಬಿಡುತ್ತಿದ್ದರು. ಅದರಲ್ಲಿ ಅದಿಲ್ಲ ಇದಿಲ್ಲ ಎಂದು ದೋಷ ಎಣಿಸುವರು. ರಾಗಿಣಿಯನ್ನು ಗೊಣಗುತ್ತಾ, ಮಕ್ಕಳನ್ನು ಗದರಿಕೊಳ್ಳುವರು.

ಆಶಾ ಶಾಲೆಯಿಂದ ಯಾವುದೋ ಫಾರ್ಮ್ ತಂದಾಗ ಅದರಲ್ಲಿ ತಂದೆಯ ಹೆಸರು ಭರ್ತಿ ಮಾಡುವಾಗ ಸುರೇಶ್‌ಚಂದ್ರ ಎಂದು ಬರೆಯುವಾಗ ಕೈ ತಡೆಯಿತು. ಆ ಮಾಜಿ ಪತಿಯ ಹೆಸರು ಬಂದಾಗೆಲ್ಲ ಅವಳ ಕೋಪ ಮಿತಿ ಮೀರುತ್ತಿತ್ತು.

ಅವನ ನೆನಪು, ಅವನಿಂದ ಆದ ನಿತ್ಯ ಶೋಷಣೆ ಎಲ್ಲಾ ಅವಳ ಸಂಕಟ ಹೆಚ್ಚಿಸುತ್ತಿತ್ತು.

ಸುರೇಶನ ಜೊತೆ ರಾಗಿಣಿ ತನ್ನ ಜೀವನದ ಬಹು ಅಮೂಲ್ಯ ಕ್ಷಣವನ್ನು ಕಳೆದಿದ್ದಳು. ಅವಳನ್ನು ಪ್ರೇಮಿಸುತ್ತಿದ್ದುದೇನೋ ನಿಜ, ಆದರೆ ಅತಿಯಾದ ಕೋಪದಿಂದ ಯಾವಾಗ ಕೆಟ್ಟ ಬೈಗುಳ, ಕೈ ಎತ್ತಿ ಹೊಡೆಯವ ಹಂತಕ್ಕೆ ಇಳಿಯುತ್ತಿದ್ದನೋ ತಿಳಿಯುತ್ತಿರಲಿಲ್ಲ. ಹೀಗಾಗಿ ರಾಗಿಣಿ ಪ್ರತಿ ಕ್ಷಣ ಹೆದರಿಕೊಂಡೇ ಜೀವಿಸುತ್ತಿದ್ದಳು.

ಮೊದಲ ಮಗಳ ಹೆರಿಗೆಗೆಂದು ತವರಿಗೆ ಬಂದಾಗ ಅವನು ಕುಡಿಯುವುದನ್ನು ಕಲಿತಿದ್ದ. ಅದನ್ನು ಬೇಡ ಎಂದು ಪ್ರತಿಭಟಿಸಿದಾಗೆಲ್ಲ ಮನೆ ರಣರಂಗವಾಗುತ್ತಿತ್ತು. ಅಂತೂ ಹೇಗೋ ಸಂಭಾಳಿಸಿಕೊಂಡು ಸಂಸಾರ ಉಳಿಸಿಕೊಂಡಳು.

ಮುಂದೆ 2ನೇ ಮಗಳ ಹೆರಿಗೆಗೆಂದು ಬರುವಷ್ಟರಲ್ಲಿ, ಸಹೋದ್ಯೋಗಿ ಜೊತೆ ಅಫೇರ್‌ ನಡೆಸುತ್ತಾ ಅವಳನ್ನು ಮನೆಗೆ ಕರೆತರುವ ದುಸ್ಸಾಹಸ ಮಾಡುತ್ತಿದ್ದ. ಮತ್ತದೇ ಅಳು, ರೋಧನ, ಪ್ರತಿಭಟನೆ….. ಕಾರಣವಿಲ್ಲದೆ ಅವನ ಸಿಟ್ಟು ಕೆರಳುತ್ತಿತ್ತು.

ಒಮ್ಮೆ ಅವನು ಕುಡಿದು ಬಂದು ಬಿದ್ದುಕೊಂಡಿದ್ದಾಗ ಮಗು ಯಾವುದಕ್ಕೋ ರಚ್ಚೆ ಹಿಡಿದು ಸತತ ಅಳುತ್ತಿತ್ತು. ಸಹನೆ ಕಳೆದುಕೊಂಡ ಅವನು ದೈತ್ಯನಂತೆ ಎದ್ದು ಬಂದು ಮಗುವನ್ನು ಎತ್ತಿ ನೆಲಕ್ಕೆ ಅಪ್ಪಳಿಸುವುದರಲ್ಲಿದ್ದ. ಆಗ ರಾಗಿಣಿ ಚಂಡಿ ಚಾಮುಂಡಿಯಾಗಿ ಅವನೊಂದಿಗೆ ಹೋರಾಡಿ ಮಗುವನ್ನು ಉಳಿಸಿಕೊಂಡಿದ್ದಳು. ಆ ಕ್ಷಣವೇ ಆ ನರಕದಿಂದ ಪಾರಾಗಿ ಸ್ವತಂತ್ರವಾಗಿ ಬದುಕಲು ನಿರ್ಧರಿಸಿದಳು.

ಮಾರನೇ ದಿನ ಸುರೇಶ್‌ ನಶೆ ಇಳಿಸಿಕೊಂಡವನೇ ಇವಳ ತವರಿಗೆ ಬಂದು ಕ್ಷಮಾಪಣೆ ಕೇಳಿ, ಕಣ್ಣೀರಿನ ನಾಟಕವಾಡಿದ. ರಾಗಿಣಿ ಅದಕ್ಕೆ ಕರಗಲೇ ಇಲ್ಲ. 2 ದಿನ ಅಲ್ಲೇ ಇದ್ದು, ಅವಳು ಬರುವುದೇ ಇಲ್ಲ ಎಂದಾಗ ಅವನು ಶಾಪ ಹಾಕುತ್ತಾ ಅಲ್ಲಿಂದ ಹೊರಟುಹೋದ.

ಪತಿಯ ಕ್ರೂರ ಪಂಜಾದಿಂದ ಬಿಡಿಸಿಕೊಳ್ಳಲು ಬಯಸಿದಳು ರಾಗಿಣಿ. ಅವನಿಂದ ಅವಳು ಜೀವನಾಂಶ ಸಹ ಬಯಸಲಿಲ್ಲ. ಹೀಗಾಗಿ ಪರಸ್ಪರ ಸಹಮತಿಯಿಂದ ಬೇಗ ಬೇಗ ವಿಚ್ಛೇದನ ಪ್ರಕ್ರಿಯೆ ಮುಗಿಯಿತು. ಮಗನ ದುಷ್ಟತನ, ದುಸ್ಸಾಹಸ ತಿಳಿದಿದ್ದ ಅತ್ತೆ ಮನೆಯವರು ಅವಳ ನಿರ್ಧಾರ ವಿರೋಧಿಸಲಿಲ್ಲ. ಮಗ ಅವರ ಪಾಲಿಗೆ ಎಂದೋ ಶತ್ರುವಾಗಿದ್ದ.

ಅಂದಿನಿಂದ ರಾಗಿಣಿ ಮಕ್ಕಳ ಸಮೇತ ತವರಿನಲ್ಲೇ ಉಳಿದುಬಿಟ್ಟಳು. ಅವಳು ಬಂದ ಹೊಸತರಲ್ಲಿ ಜಾನಕಮ್ಮ ಮಗಳ ಪರವಾಗಿಯೇ ಇದ್ದರು.

ಅವಳ ತಂದೆ ತೀರಿಕೊಂಡಿದ್ದರು. ಇವಳ ವಿದ್ಯಾರ್ಹತೆಗೆ ತಕ್ಕಂತೆ ಅವರ ಆಫೀಸಿನಲ್ಲೇ ಪರೀಕ್ಷೆ ಪಾಸು ಮಾಡಿ ಕೆಲಸ ಪಡೆದಳು. ಅಂತೂ ಅವಳ ಜೀವನದ ಎರಡನೇ ಅಧ್ಯಾಯ ಶುರುವಾಗಿತ್ತು. ಅಂತೂ ಜೀವನ ಸರಾಗವಾಗಿ ನಡೆಯತೊಡಗಿತು. ಅವಳು ಮಕ್ಕಳನ್ನು ಅಮ್ಮನ ಸುಪರ್ದಿಗೊಪ್ಪಿಸಿ ನೆಮ್ಮದಿಯಾಗಿ ಕೆಲಸಕ್ಕೆ ಹೊರಡುವಳು. ಅಮ್ಮನಿಗೆ ಪ್ರತಿ ಸಲ ಸಂಬಳ ನೀಡುತ್ತಾ, ಮನೆಯ ಹೊರಗಿನ ಎಲ್ಲಾ ಕೆಲಸ ನಿರ್ವಹಿಸುತ್ತಾ, ತನ್ನ ಕರ್ತವ್ಯ ಪೂರೈಸುವಳು.

ಅವಳೆಂದೂ ಅಡುಗೆಮನೆಯ ಬಗ್ಗೆ ಚಿಂತಿಸಲಿಲ್ಲ. ಅಮ್ಮ ಎಲ್ಲಾ ಸಂಭಾಳಿಸುತ್ತಿದ್ದರು. ಮಕ್ಕಳ ಊಟತಿಂಡಿ, ಶಾಲೆಗೆ ಟಿಫನ್‌ ಬಾಕ್ಸ್, ಮಕ್ಕಳ ಒಟ್ಟಾರೆ ಯೋಗಕ್ಷೇಮ ಎಲ್ಲ ಅವರದೇ ಜವಾಬ್ದಾರಿ ಆಗಿತ್ತು. ಅಸಲಿಗೆ ಅವರೀಗ ಮೂರು ಮಕ್ಕಳ ತಾಯಿ ಆಗಿದ್ದರು. ಹೀಗೆ ಮನೆಯಲ್ಲೂ, ಆಫೀಸಿನಲ್ಲೂ ಅವಳು ಒಟ್ಟಾರೆ ಬಿಝಿ ಆಗಿಹೋದಳು.

ಆಫೀಸಿನಲ್ಲೂ ಅವಳು ತನ್ನ ಅಪಾರ ಶ್ರದ್ಧೆ, ನಿಷ್ಠೆಯ ಪರಿಶ್ರಮದ ದುಡಿಮೆಯಿಂದ ಒಳ್ಳೆಯ ಹೆಸರು ಗಳಿಸಿದ್ದಳು. ವರುಣ್‌ ಅವಳ ಬಾಸ್‌ ಆಗಿದ್ದ. ಅವರಿಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತಾ, ಸ್ನೇಹ ಗಾಢವಾಗಿ ಮುಂದೆ ಪ್ರೇಮಕ್ಕೆ ತಿರುಗಿತು. ಅವಳು ಆಫೀಸಿನಲ್ಲಿ ಓಟಿ ಇದೆ ಎಂದು ಹೇಳಿ ಎಷ್ಟೋ ಸಲ ತಡವಾಗಿ ಮನೆಗೆ ಬರುತ್ತಿದ್ದಳು. ರಜೆ ದಿನಗಳಲ್ಲೂ ಏನೋ ಒಂದು ನೆಪದಲ್ಲಿ ಇಬ್ಬರೂ ಹೊರಗೆ ಭೇಟಿ ಆಗುತ್ತಿದ್ದರು.

ಆದರೆ ಇವರಿಬ್ಬರ ಅಫೇರ್‌ ವಿಷಯ ಜಾನಕಮ್ಮನವರಿಗೆ ತಿಳಿದಾಗ ಅನರ್ಥವಾಯಿತು. ಅಂದಿನಿಂದ ಅವರ ದೃಷ್ಟಿಕೋನ, ಮಾತಿನ ಧಾಟಿಯೇ ಬದಲಾಯಿತು. ಹೀಗೆ ದಿನಗಳು ಸರಿದು ಮಕ್ಕಳು ದೊಡ್ಡವರಾದರು. ಜಾನಕಮ್ಮನ ಕೋಪ ಕಡಿಮೆ ಆಗಿರಲಿಲ್ಲ. ಆಶಾ ಈಗ 14 ವರ್ಷದ ಹುಡುಗಿ, ಮೈನೆರದು ಹೈಸ್ಕೂಲಿಗೆ ಸೇರಿದ್ದಳು. ಉಷಾ 12ರ ಪೋರಿ. ಚಿಕ್ಕ ವಯಸ್ಸಿಗೇ ಬಹಳ ಗಾಂಭೀರ್ಯ ಕಲಿತಿದ್ದಳು.

ಒಮ್ಮೆ ರಾಗಿಣಿ ವರುಣ್‌ ಜೊತೆ ಬೈಕ್‌ನಲ್ಲಿ ಮನೆಗೆ ಬಂದಿಳಿದಳು. ಸಂಜೆ 6ರ ನಸುಗತ್ತಲು. ಬಾಲ್ಕನಿಯಲ್ಲಿ ಉಷಾ ಅಜ್ಜಿ ಜೊತೆ ನಿಂತಿದ್ದಳು. ಮನೆಯ ತಿರುವಿನಲ್ಲಿ ವರುಣ್‌ ರಾಗಿಣಿಯನ್ನು ಇಳಿಸಿ ಕಿಸ್‌ ಮಾಡಿ, ಬೈ ಹೇಳಿ ಹೊರಟಿದ್ದನ್ನು ಇವರು ಪ್ರತ್ಯಕ್ಷ ಕಂಡರು. ಇನ್ನೇನು? ಮನೆಯಲ್ಲಿ ರಾದ್ಧಾಂತ ನಡೆಯಿತು.

ಜಾನಕಮ್ಮನಿಗೆ ಮಗಳ ಇಂಥ ವ್ಯವಹಾರ ಇಷ್ಟವಾಗದೆ, ತಮ್ಮ ಮಾತನ್ನು ಬೇಕೆಂದೇ ತಿರಸ್ಕರಿಸುತ್ತಿದ್ದಾಳೆ ಎಂದು ಸಿಟ್ಟು ಹೆಚ್ಚಿತು. ಮಾತಿಗೆ ಮಾತು ಬೆಳೆದು ಜಾನಕಮ್ಮ ಮಗಳನ್ನು ಮನೆ ಬಿಟ್ಟು ಹೋಗುವಂತೆ ಗದರಿದರು. 1 ವಾರ ಕಾಲಾವಕಾಶ ಕೇಳಿದ ರಾಗಿಣಿಗೆ ದೂರದ ಏರಿಯಾದಲ್ಲಿ ವರುಣ್‌ ಡಬ್ಬಲ್ ಬೆಡ್‌ ರೂಮಿನ ಫ್ಲಾಟ್‌ ಬಾಡಿಗೆಗೆ ಕೊಡಿಸಿದ.

ಅಂತೂ ಅಮ್ಮನ ಮನೆ ತೊರೆದು ಈಗ ನಿಜ ಅರ್ಥದಲ್ಲಿ ತನ್ನದೇ ಸ್ವತಂತ್ರ ಜೀವನ ನಡೆಸಲು ಮಕ್ಕಳೊಡನೆ ಹೊಸ ಮನೆಗೆ ಬಂದಿಳಿದಳು. ಮನೆಗೆಲಸಕ್ಕೆಂದು ಗೌರಿ ನೇಮಕಗೊಂಡಳು. ಎಂದಿನಂತೆ ಜೀವನ ಮತ್ತೊಂದು ಹೊಸ ತಿರುವು ಪಡೆಯಿತು.

ವರುಣನ ಸಾಂಗತ್ಯ ರಾಗಿಣಿಗೆ ಪರಿಪೂರ್ಣತೆ ತಂದುಕೊಟ್ಟಿದೆ ಎನಿಸುತ್ತಿತ್ತು. ನೆನೆದಾಗ ವರುಣ್‌ ಬಂದು ಇವಳ ಮನೆಯಲ್ಲೇ ಉಳಿಯುತ್ತಿದ್ದ. ತನ್ನ ದೂರದ ಕಸಿನ್‌ ಎಂದೇ ಅಪಾರ್ಟ್‌ಮೆಂಟ್‌ನಲ್ಲಿ ಪರಿಚಿತರಿಗೆ ಹೇಳಿಕೊಂಡಳು.

ಈ ರೀತಿ ವರುಣನ ಜೊತೆ ಅವಳೇನೋ ಧನ್ಯತೆಯ ಜೀವನ ನಡೆಸುತ್ತಿದ್ದಳು. ಎಲ್ಲಕ್ಕೂ ಇವಳ ಮೂಲಾಧಾರವಾಗಿದ್ದ ವರುಣ್‌, ಮನೆಯ ಬಾಡಿಗೆ ಮಾತ್ರವಲ್ಲದೆ ಯಾವುದೇ ದೊಡ್ಡ ಖರ್ಚು ಬಂದರೂ ತಾನೇ ವಹಿಸಿಕೊಳ್ಳುತ್ತಿದ್ದ. ಮಕ್ಕಳು ಸಹ ಈ ಹೊಸ ಅಂಕಲ್ ಜೊತೆ ಹಾರ್ದಿಕವಾಗಿ ವ್ಯವಹರಿಸುತ್ತಿದ್ದರು. ರಾಗಿಣಿ ಎಲ್ಲಾ ಸರಿಹೋಯ್ತು ಎಂದೇ ಭಾವಿಸಿದ್ದಳು. ಆದರೆ ಸಮಾಜ ಸುಮ್ಮನಿದ್ದೀತೇ…..?

ದೊಡ್ಡವರಾಗಿದ್ದ ಮಕ್ಕಳು ಇದೀಗ ಎಲ್ಲಾ ಸೂಕ್ಷ್ಮಗಳನ್ನು ಅರಿತುಕೊಂಡಿದ್ದರು. ಆಗಾಗ ಅವರ ಕಂಗಳಲ್ಲಿದ್ದ ಪ್ರಶ್ನಾರ್ಥಕ ನೋಟಗಳಿಗೆ ಎಷ್ಟೋ ಸಲ ರಾಗಿಣಿ ಏನೂ ಉತ್ತರಿಸಲಾಗದೆ ಸುಮ್ಮನಾಗುತ್ತಿದ್ದಳು. ವರುಣ್‌ ಈಗಾಗಲೇ ಮದುವೆ ಆಗಿದ್ದ. ಅವನದು ದೊಡ್ಡ ಜಾಯಿಂಟ್‌ ಫ್ಯಾಮಿಲಿ, ಬಲವಂತವಾಗಿ ಅವನಿಗೆ ಸೋದರತ್ತೆ ಮಗಳು ನಂದಿನಿ ಜೊತೆ ಮದುವೆ ಮಾಡಿಸಿದ್ದರು. ಅತ್ತೆ ಪಾಲಿನ ಆಸ್ತಿ ಅವನಿಗೇ ಬಂದಿತ್ತು. ಇಬ್ಬರು ಗಂಡು ಮಕ್ಕಳ ತಂದೆ ಅವನು. ಹೆಚ್ಚು ವಿದ್ಯಾವಂತೆ ಅಲ್ಲದ, ಕಪ್ಪು ರೂಪಿನ ನಂದಿನಿ ಎಂದೂ ಅವನ ಮನ ಗೆದ್ದಿರಲಿಲ್ಲ. ಶಿವಮೊಗ್ಗದಲ್ಲೇ ಅವರೆಲ್ಲ ನೆಲೆಸಿದ್ದರು.

ಖ್ಯಾತ ಕಂಪನಿಯ ದೊಡ್ಡ ಕೆಲಸಕ್ಕಾಗಿ ಅವನು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದ. ಹೀಗಾಗಿ ರಾಗಿಣಿಯನ್ನು ಪ್ರೇಯಸಿಯಾಗಿಸಿಕೊಂಡು ವಿಲಾಸಿ ಜೀವನ ನಡೆಸುತ್ತಿದ್ದ. ಮನೆಗೆ ಅವನು ಸಂಬಳ ಕಳಿಸುವ ಪ್ರಶ್ನೆಯೇ ಇರಲಿಲ್ಲ, ಹೀಗಾಗಿ ಗಳಿಸಿದ್ದನ್ನೆಲ್ಲ ಇಲ್ಲಿ ಮಜಾ ಉಡಾಯಿಸುತ್ತಿದ್ದ. ತಾನು ರಾಗಿಣಿಯನ್ನು ಮದುವೆ ಆಗಲಾರೆ ಎಂಬುದನ್ನು ಮೊದಲೇ ಸ್ಪಷ್ಟಪಡಿಸಿದ್ದ. ರಾಗಿಣಿ ತಿಳಿದೂ ತಿಳಿದೂ ಇದಕ್ಕೆ ಒಪ್ಪಿದ್ದಳು.

ಇತ್ತ ರಾಗಿಣಿ ಅವನನ್ನೇ ತನ್ನ ಸರ್ವಸ್ವ ಎಂದು ಎಲ್ಲವನ್ನೂ ಅರ್ಪಿಸಿಕೊಂಡು, ನಿಷ್ಠೆಯಿಂದ ಅವನೊಂದಿಗೆ ಸಂಸಾರ ನಡೆಸಿದ್ದಳು. ಆದರೆ ಸಮಾಜದಲ್ಲಿ ಅವಳಿಗೆ ಅವನ ಪತ್ನಿಯ ಸ್ಥಾನ ಸಿಗಲು ಸಾಧ್ಯವಿರಲಿಲ್ಲ. ಪ್ರತ್ಯೇಕವಾಗಿ ಅವರಿಬ್ಬರೂ ಹೊರಗೆ ಸುತ್ತಾಡಲು ಹೋಗುತ್ತಿದ್ದರೆ ವಿನಾ, ಅವನೆಂದೂ ಅವಳನ್ನು ಸಂಗಾತಿ ಎಂದು ಬಹಿರಂಗ ಸಾಮಾಜಿಕ ಸಮಾರಂಭಗಳಿಗೆ ಕರೆದೊಯ್ಯುತ್ತಿರಲಿಲ್ಲ. ಹತ್ತಿರದ ಫ್ರೆಂಡ್ಸ್ ಪಾರ್ಟಿಗಳಿಗೆ ಹೋಗುತ್ತಿದ್ದರು, ಅದು ಬೇರೆ ವಿಷಯ. ಬೆಂಗಳೂರಿನಂಥ ಮಹಾನಗರದಲ್ಲಿ ಪಾರ್ಟಿಗಳಿಗೆ ಬಂದವರು ಯಾರು ಎಂಬುದನ್ನು ಯಾರೂ ವೈಯಕ್ತಿಕ ದೃಷ್ಟಿಯಿಂದ ಗಮನಿಸುವುದಿಲ್ಲ ಎಂಬುದನ್ನು ಇವರಿಬ್ಬರೂ ಚೆನ್ನಾಗಿಯೇ ತಿಳಿದಿದ್ದರು.

ಒಂದು ಸಲ ರಾಗಿಣಿಗೆ ವಿಪರೀತ ತಲೆನೋವು ಹೆಚ್ಚಾಗಿ ಅವಳು ಅರ್ಧ ದಿನ ರಜೆ ಹಾಕಿ ಮನೆಗೆ ಬಂದು ಮಲಗಿಬಿಟ್ಟಳು. 4 ಗಂಟೆ ಹೊತ್ತಿಗೆ ಉಷಾ ಬಂದು ಬೆಲ್ ಮಾಡಿದಾಗ ಎದ್ದು ಬಾಗಿಲು ತೆರೆದಳು. ತನ್ನ ಪುಸ್ತಕ ಮೇಜಿನ ಮೇಲಿರಿಸಿ ಉಷಾ ಅಳುತ್ತಾ ಸೋಫಾದಲ್ಲೇ ಮಲಗಿಬಿಟ್ಟಳು. ರಾಗಿಣಿ ಮಗಳನ್ನು ಕಾರಣ ವಿಚಾರಿಸಿದಳು.

“ಅಮ್ಮಾ, ನಾನು ಸ್ನೇಹಾ ಮನೆಗೆ ನೋಟ್ಸ್ ಮಾಡಿಕೊಳ್ಳಲು ಹೋಗಿದ್ದೆ. ನಮ್ಮ ಕೆಲಸ ಅರ್ಧ ಮುಗಿದಿತ್ತು. ಅವರ ಅಜ್ಜಿ ಬಂದು ನನ್ನನ್ನು ಎಬ್ಬಿಸಿ ಓಡಿಸಿಬಿಟ್ಟರು. `ನಿಮ್ಮಮ್ಮ ಯಾರೋ ಪರಪುರುಷನ ಜೊತೆ ವಾಸವಾಗಿದ್ದಾಳೆ…. ನಿಮ್ಮಂಥ ಹೆಣ್ಣುಮಕ್ಕಳು ನಮ್ಮಂಥವರ ಮನೆಗೆ ಬರಬಾರದು!’ ಎನ್ನುತ್ತಾ ಬಾಗಿಲು ಹಾಕಿಕೊಂಡರು…..” ಎಂದು ಬಿಕ್ಕಳಿಸತೊಡಗಿದಳು. ಎಂದಿನಂತೆ ರಾಗಿಣಿ ಮಗಳ ಕೆನ್ನೆಗೆ ಸಿಟ್ಟಿನಿಂದ ಬಾರಿಸುತ್ತಾ, “ಇನ್ನೊಂದು ಸಲ ಯಾರ ಮನೆಗಾದರೂ ಹೋದರೆ ನಾನೇ ನಿನ್ನ ಕಾಲು ಮುರೀತೀನಿ!” ಎಂದು ಹೋಗಿ ತನ್ನ ಕೋಣೆಯಲ್ಲಿ ಬಿದ್ದುಕೊಂಡಳು.

ಮಗಳನ್ನೇನೋ ಗದರಿಸಿ ಹೊಡೆದು ಬಂದಿದ್ದಳು. ಈಗ ಅವಳ ಆತ್ಮಸಾಕ್ಷಿ ಅವಳನ್ನೇ 108 ಪ್ರಶ್ನೆ ಕೇಳತೊಡಗಿತು.

“ಅಮ್ಮ ಪರಪುರುಷ ಅಂದ್ರೆ ಯಾರು?”

ಮಕ್ಕಳ ಈ ಮುಗ್ಧ ಪ್ರಶ್ನೆಗೆ ಅವಳು ಏನೆಂದು ಉತ್ತರಿಸಿಯಾಳು? ಅವಳು ಮಕ್ಕಳ ಇಂಥ ಪ್ರಶ್ನೆಗೆ ಎಂದೆಂದೂ ಉತ್ತರಿಸಲಾರಳು.

ಆಶಾಳಿಗಂತೂ ವರುಣ್‌ ಅಂಕಲ್ ಬಂದು ರಾತ್ರಿ ಹೊತ್ತು ತಮ್ಮ ಮನೆಯಲ್ಲೇ ಉಳಿಯುವುದು ಮೊದಲಿನಿಂದ ಇಷ್ಟವಿರಲಿಲ್ಲ. ಹಗಲಿನಲ್ಲಿ ಬಂದು ಹಾಲ್ ನಲ್ಲಿ ಕುಳಿತು ಮಾತನಾಡಿಸಿಕೊಂಡು ಹೋಗಲಿ, ಆದರೆ ರಾತ್ರಿ ಅಮ್ಮನ ಕೋಣೆಯಲ್ಲೇ ಉಳಿಯುವುದೇಕೆ? ಉಷಾಳ ಮತ್ತೊಂದು ಸಮಸ್ಯೆ ಎಂದರೆ ಅವಳು ಪಾರ್ಕಿನಲ್ಲಿ ಆಡಲಿಕ್ಕೂ ಯಾರ ಮನೆಗಾದರೂ ಹೋದರೂ ಇಂಥದ್ದೇ ಅಸಂಬದ್ಧ ಪ್ರಶ್ನೆಗಳನ್ನು ಕೇಳಿ ಅವಳನ್ನು ಅಳಿಸುವರು.

ಕೆಲವೊಮ್ಮೆ ಸುಜಾತಾ ಆಂಟಿ ಆಶಾಳನ್ನು ಕರೆದು ಇಲ್ಲಸಲ್ಲದ ಪ್ರಶ್ನೆ ಕೇಳುತ್ತಿದ್ದರು. “ಅದೇಮ್ಮ…… ನಿಮ್ಮ ಮನೆಗೆ ಬಂದು ಉಳಿಯುತ್ತಾರಲ್ಲ, ಆ ಅಂಕಲ್ ನಿಮ್ಮ ತಂದೆ ಅಲ್ಲ ಅಲ್ಲವೇ? ಮತ್ಯಾಕೆ ಇಲ್ಲೇ ಇರ್ತಾರೆ?” ಆಶಾಳಿಗೆ ಉಸಿರುಗಟ್ಟಿಸುವಷ್ಟು ಅಳು ಬರುತ್ತಿತ್ತು. ಎಷ್ಟೋ ಸಲ ಅಮ್ಮ ಇಲ್ಲದ ಸಂದರ್ಭದಲ್ಲಿ ಹೀಗಾದಾಗೆಲ್ಲ ಅವಳು ತನ್ನ ಕೋಣೆಯಲ್ಲಿ ಮಲಗಿ ಅಳುತ್ತಾಳೆ. ಅಮ್ಮನ ಬಳಿ ಇದರ ಬಗ್ಗೆ ಮಾತನಾಡಲು ಹೋದರೆ ಅವಳೂ ಸಿಡುಕುತ್ತಾಳೆ.

ಆಗ ಅವಳ ಪುಟ್ಟ ತಂಗಿ ಉಷಾ ನೀರು ತಂದುಕೊಟ್ಟು ಕಣ್ಣೀರು ಒರೆಸುತ್ತಾ, “ಯಾಕಕ್ಕಾ ಅಳ್ತಾ ಇದ್ದೀಯಾ?” ಎಂದು ವಾತ್ಸಲ್ಯದಿಂದ ವಿಚಾರಿಸುತ್ತಾಳೆ. ಆಗ ಆಶಾ ತಾನೇ ಸಮಾಧಾನ ತಂದುಕೊಳ್ಳುತ್ತಾ, “ನಿಂಗೆ ಅದೆಲ್ಲ ಅರ್ಥ ಆಗೋಲ್ಲ ಬಿಡು ಉಷಾ,” ಎನ್ನುತ್ತಾಳೆ.

“ಹೋಗಲಿ ಬಿಡಕ್ಕಾ…. ನೀನು ಅಳಬೇಡ. ನೀನು ಅತ್ತರೆ ನಂಗೂ ಅಳು ಬರುತ್ತೆ.”

ಆಶಾಳಿಗೆ ತಂಗಿ ಮೇಲೆ ಅಪಾರ ಪ್ರೀತಿ ಉಕ್ಕಿ ಬಂತು. ನಂತರ ಅಮ್ಮ ಮಾಡಿಟ್ಟಿದ್ದ ತಿಂಡಿಯನ್ನು ಮೈಕ್ರೋವೇವ್ ‌ನಲ್ಲಿ ಬಿಸಿ ಮಾಡಿ ಇಬ್ಬರೂ ತಿಂದರು. ಉಷಾ ಒಮ್ಮೊಮ್ಮೆ ಅಜ್ಜಿಯನ್ನು ನೆನಪಿಸಿಕೊಂಡು, “ಅಕ್ಕಾ, ಅಲ್ಲಿ ಅಜ್ಜಿ ನಮಗಾಗಿ ಎಷ್ಟು ಚೆನ್ನಾಗಿ ತಿಂಡಿ ಮಾಡಿಕೊಡ್ತಿದ್ದರು….. ನಾವೇಕೆ ಈಗ ಅಜ್ಜಿ ಮನೆಗೆ ಹೋಗಬಾರದು?”

“ಬಿಡು, ಉಷಾ….. ಟಿವಿಯಲ್ಲಿ ಒಳ್ಳೆ ಪ್ರೋಗ್ರಾಂ ಇದೆ ನೋಡೋಣ,” ಎನ್ನುತ್ತಾ ಆಶಾ ಮಾತು ಮರೆಸುವಳು.

“ಸರಿ, ಟಿವಿ ಹಾಕು. ಹೋಂವರ್ಕ್‌ ಮಾಡುತ್ತಲೇ ಮಧ್ಯೆ ಮಧ್ಯೆ ಅದನ್ನು ನೋಡೋಣ,” ಎನ್ನುತ್ತಾ ಉಷಾ ತಾನೇ ಟಿವಿ ಆನ್ ಮಾಡಿದಳು. ಇಬ್ಬರೂ ತಮ್ಮ ಪುಸ್ತಕ ಹರಡಿಕೊಂಡು ಅದರ ಮುಂದೆ ಕುಳಿತರು. ಟಿವಿಯ ಕಾರ್ಟೂನ್‌ ಶೋ ಅವರ ದುಃಖವನ್ನು ಎಷ್ಟೋ ಮರೆಸುತ್ತಿತ್ತು.

ರಾಗಿಣಿ ಅಂದು ಹೆಚ್ಚಿನ ಕೆಲಸ ಮುಗಿಸಿ ಮನೆಗೆ ಬಂದಾಗ 7.30 ಆಗಿತ್ತು. ಇಂದು ಅವಳ ಮೂಡ್‌ ಪೂರ್ತಿ ಕೆಟ್ಟಿತ್ತು. ವರುಣನ ಹಿರಿ ಮಗ ಹೈಸ್ಕೂಲ್ ‌ಕಲಿಯುತ್ತಿದ್ದ. ಬೆಂಗಳೂರಿನಲ್ಲಿ ಯಾವುದೋ ಪರೀಕ್ಷಾರ್ಥವಾಗಿ ಅವನು ಇಲ್ಲಿಯೇ 6 ತಿಂಗಳು ಉಳಿಯಬೇಕಿತ್ತು. ವರುಣ್‌ ಮಗನನ್ನು ತನ್ನ ಬಳಿ ಕರೆಸಿಕೊಂಡಿದ್ದ. ಹೀಗಾಗಿ ಇವರಿಬ್ಬರ ಭೇಟಿ ಅಪರೂಪವಾಗುತ್ತಿತ್ತು.

ಮಕ್ಕಳು ಹೋಂವರ್ಕ್‌ ಜೊತೆ ಟಿವಿ ನೋಡುತ್ತಿರುವುದನ್ನು ಕಂಡು ಅವಳ ತಲೆ ಕೆಟ್ಟಿತು. “ಸದಾ ಟಿವಿ ನೋಡೋದೇ ಆಗೋಯ್ತು…. ಓದುಬರಹದ ಕಡೆ ನಿಮಗೆ ಗಮನವೇ ಇರೋಲ್ಲ,” ಎನ್ನುತ್ತಾ ಟಿವಿ ಆರಿಸಿದಳು.

ಅಮ್ಮನ ಕೋಪ ಗಮನಿಸಿ ಮೌನವಾಗಿ ಅವರು ಪುಸ್ತಕ ಸಮೇತ ತಮ್ಮ ಕೋಣೆ ಸೇರಿಕೊಂಡರು. ಮಕ್ಕಳ ಶಾಲೆಯ ವಾರ್ಷಿಕೋತ್ಸವ ಸಮಾರಂಭ ಬಂದಿತು. ಎಲ್ಲಾ ಮಕ್ಕಳೂ ಸಹಜವಾಗಿಯೇ ತಮ್ಮ ತಾಯಿ ತಂದೆ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದರು. ಆಶಾ ಸಹ ಸಹಪಾಠಿಗಳೊಂದಿಗೆ ಒಂದು ನೃತ್ಯ ಪ್ರದರ್ಶನ ನೀಡಲಿದ್ದಳು. ವೇದಿಕೆಯಿಂದ ಅವಳು ಅಮ್ಮ ಬಂದಿರಬಹುದೇ ಎಂದು ದೂರದವರೆಗೆ ದಿಟ್ಟಿಸಿ ನೋಡಿದಳು.

ಆದರೆ ತಾನು ಆಫೀಸ್‌ ಕೆಲಸದ ನಿಮಿತ್ತ ಹೊರಗೆ 4 ದಿನ ಹೈದರಾಬಾದಿಗೆ ಹೋಗಬೇಕೆಂದು ವರುಣ್‌ ತನ್ನ ಮಗ ಪಾರ್ಥನನ್ನು ಇವರ ಮನೆಯಲ್ಲೇ ಬಿಟ್ಟಿದ್ದ. ಅವನ ಪರೀಕ್ಷೆಗಳಿಗೆ ರಾಗಿಣಿ ಸಹಾಯ ಮಾಡುತ್ತಿದ್ದ ಕಾರಣ ಮಗಳ ಶಾಲೆಗೆ ಬರಲು ಆಗಿರಲಿಲ್ಲ.

ಕ್ರಮೇಣ ಪಾರ್ಥ ಹೆಚ್ಚು ಹೆಚ್ಚಾಗಿ ಇಲ್ಲೇ ಇರತೊಡಗಿದ. ತಾಯಿ ಸದಾ ವರುಣ್‌ ಹಾಗೂ ಅವರ ಮಗ ಪಾರ್ಥನ ಕಡೆಗೇ ಮಹತ್ವ ಕೊಡುತ್ತಾ ತಮ್ಮನ್ನು ನಿರ್ಲಕ್ಷಿಸುತ್ತಿರುವುದನ್ನು ಆಶಾ ಬೇಗ ಗಮನಿಸಿದಳು. ಅವರಿಬ್ಬರನ್ನೂ ಸದಾ ಖುಷಿಯಾಗಿಡುವುದೇ ಅಮ್ಮನ ಮೊದಲ ಆದ್ಯತೆ ಎಂಬುದನ್ನು ಗುರುತಿಸಿಕೊಂಡಳು.

ಈ ವಿಷಯ ಹೇಗೋ ಏನೋ ಆಶಾ ಉಷಾರ ಸಹಪಾಠಿಗಳವರೆಗೂ ತಿಳಿದೇಹೋಯಿತು. ಸ್ಕೂಲ್ ವ್ಯಾನಿನಲ್ಲಿ ಇವರ ಅಕ್ಕಪಕ್ಕದ ಮನೆಯ ಮಕ್ಕಳು ಪಾರ್ಥನ ಬಗ್ಗೆ ವಿಚಾರಿಸುತ್ತಾ, ಶಾಲೆಯಲ್ಲಿ ತಮ್ಮ ಸಹಪಾಠಿಗಳ ಬಳಿಯೂ ಹಂಚಿಕೊಂಡಿದ್ದರು. ಈ ಕುರಿತು ಸಹಪಾಠಿಗಳ 108 ಕುತೂಹಲಕರ ಪ್ರಶ್ನೆಗಳಿಗೆ ಉತ್ತರಿಸುವುದು ಇವರಿಂದ ಸಾಧ್ಯವಾಗದ ಮಾತಾಗಿತ್ತು. ಅವರ ಮಾರ್ಮಿಕ ಪ್ರಶ್ನೆಗಳಿಗೆ ತತ್ತರಿಸಿ ಹೋಗುತ್ತಿದ್ದರು.

“ಏನೇ ಆಶಾ, ನಿಮಗೆ ನಿಮ್ಮ ತಂದೆಯ ಮುಖ ನೆನಪಾದರೂ ಇದೆಯೋ ಇಲ್ಲವೋ?”

“ಈ ಅಂಕಲ್ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ತಾರ?”

“ಆ ಪಾರ್ಥ ನಿಮ್ಮ ಮೇಲೆ ರೋಪ್ ತೋರಿಸ್ತಾನಾ?”

“ಈಗ ಈ ಪ್ರಶ್ನೆಗಳು ಬೇಡ…. ಸುಮ್ಮನೆ ಇರಿ!’ ಎಂದು ಎಷ್ಟೋ ಸಲ ಅವಳು ಅವರನ್ನು ಗದರುತ್ತಿದ್ದಳು.

ಈ ಏರಿಯಾದ ರಾದ್ಧಾಂತವೇ ಬೇಡ, ಇವೆಲ್ಲದರ ಸಹವಾಸದಿಂದ ದೂರ ಹೋಗೋಣ ಎಂದು ಬೆಂಗಳೂರಿನ ತೀರಾ ಊರಾಚೆ ರಾಗಿಣಿ ಒಂದು ಫ್ಲಾಟ್‌ ಖರೀದಿಸಿದಳು. ಈಗ ವರಣ್‌ ಶಾಶ್ವತ ಮಗನ ಜೊತೆ ಅಲ್ಲೇ ಶಿಫ್ಟ್ ಆದ.

ವರುಣನ ಮಗ ಸಹಜವಾಗಿಯೇ ಬೆಂಗಳೂರಿನಲ್ಲೇ ಕಾಲೇಜಿಗೆ ಸೇರಿದ್ದ. ಫ್ಲಾಟ್‌ ಖರೀದಿಗೆ ಹಣ ಸಾಲದಾಗಲು ಇಬ್ಬರೂ ಜಾಯಿಂಟ್‌ ಅಕೌಂಟ್‌ ತೆರೆದು, ಪಾರ್ಟ್‌ನರ್‌ ಎಂಬಂತೆ ಸೇಲ್ ಡೀಡ್‌ ಮಾಡಿಟ್ಟರು. ಮುಕ್ಕಾಲು ಪಾಲು ಹಣ ವರುಣ್‌ ತಾನೇ ಕೊಟ್ಟಿದ್ದ.

ಇದೀಗ ಆಶಾ ಕಾಲೇಜು ಸೇರಿದ್ದಳು. ಅವಳ ಸ್ವಭಾವ ಮೊದಲಿನಂತೆ ಖಂಡಿತಾ ಮೃದುವಾಗಿರದೆ ಒರಟಾಗಿತ್ತು. ಈಗ ಅವಳು ಅಮ್ಮನ ಯಾವ ಮಾತಿಗೂ ಕ್ಯಾರೇ ಅನ್ನುತ್ತಿರಲಿಲ್ಲ. ಫ್ಯಾಷನೆಬಲ್ ಡ್ರೆಸೆಸ್‌, ಸ್ಕೂಟಿ, ಕೋಚಿಂಗ್‌ ಕ್ಲಾಸೆಸ್‌ ಎಂದು ಸದಾ ಹೊರಗೆ ಇರುತ್ತಿದ್ದಳು. ಹೀಗಾಗಿ ತಾಯಿಯ ಯಾವ ಮಾತಿಗೂ ಬೆಲೆ ಕೊಡದೆ, `ನೀನು ಅಂಕಲ್, ಪಾರ್ಥ ಇವರನ್ನು ನೋಡಿಕೊ. ನನ್ನ ಪಾಡಿಗೆ ನಾನಿರ್ತೀನಿ, ಉಷಾ ಚಿಂತೆ ನಿನಗೆ ಬೇಡ!’ ಎಂದೇ ಬಾಯಿ ಬಡಿಯುತ್ತಿದ್ದಳು.

ಇದೀಗ ಉಷಾ ಸಹ 10ನೇ ತರಗತಿ ಬಂದಿದ್ದರಿಂದ ಅವಳಿಗೆ ಮನೆಯ ಸಂಪೂರ್ಣ ವ್ಯವಹಾರ ತಿಳಿಯುತ್ತಿತ್ತು. ಅಕ್ಕ ತಂಗಿ ಇಬ್ಬರೂ ಈಗ ಒಗ್ಗಟ್ಟಾಗಿದ್ದರು. ಈಗ ಸಿಡುಕುವ ಸರದಿ ಅವರದಾಗಿತ್ತು. ರಾಗಿಣಿಗೆ ಇದು ಬಿಸಿ ತುಪ್ಪವಾಯ್ತು.

ಕಾಲೇಜು ಕಿಶೋರಿಯಾಗಿದ್ದ ಆಶಾ ತನ್ನ ಬಾಲ್ಯದ ದಿನಗಳನ್ನು ಹಾಗೆ ಒಮ್ಮೆ ನೆನೆದಳು. ಚಿಕ್ಕಂದಿನಿಂದಲೂ ಅಕ್ಕಪಕ್ಕದವರು, ಪರಿಚಿತರು ಎಲ್ಲರಿಂದಲೂ ಅಪಾರ ತಿರಸ್ಕಾರಕ್ಕೆ ಒಳಗಾಗಿದ್ದಳು. ತಂಗಿಯ ದೈನ್ಯ ಮುಖ ನೆನೆಪಾದಾಗ ಈಗ ಕೆಟ್ಟ ಕೋಪ ಕೆರಳುತ್ತಿತ್ತು. ಇಡೀ ಸಮಾಜದ ಮೇಲೆ ಏನೋ ಒಂದು ಬಗೆಯ ತಿರಸ್ಕಾರ…..

ಯಾರ ಮೇಲೋ ಸೇಡು ತೀರಿಸಿಕೊಳ್ಳುವ ಹುಚ್ಚು ಆವೇಶ! ತನ್ನ ಬಗೆ ಬಗೆಯ ಫ್ಯಾಷನೆಬಲ್ ಡ್ರೆಸ್‌ಗಳಿಂದ, ತನ್ನ ಡೈನಮಿಕ್ ವ್ಯಕ್ತಿತ್ವದಿಂದ ಕಾಲೇಜು ಹುಡುಗರನ್ನು ಚಿಟಕಿ ಹೊಡೆಯುವಷ್ಟರಲ್ಲಿ ಬುಗುರಿಯಂತೆ ಆಡಿಸುತ್ತಿದ್ದಳು.

ಆಶಾ ಬೇಕೆಂದೇ ಆನ್‌ಲೈನ್‌ನಲ್ಲಿ ಬಗೆಬಗೆಯ ಡಿಸೈನರ್‌ ಡ್ರೆಸೆಸ್‌ ಆರ್ಡರ್‌ ಮಾಡುತ್ತಿದ್ದಳು. ರಾಗಿಣಿ ಮಗಳನ್ನು ತಡೆದು ಎಚ್ಚರಿಸಿದಾಗೆಲ್ಲ ತಕ್ಷಣ ಸಿಡುಕುತ್ತಿದ್ದಳು, “ನಿನಗಿಂತಲೂ ನಾನು ಕಡಿಮೆ ಖರ್ಚು ಮಾಡ್ತಿದ್ದೀನಿ ಬಿಡಮ್ಮ….. ನೀನು ಹೊರಗೆ ಆಫೀಸಿಗೆ ಹೋಗುವ ಹಾಗೇ ನಾನು ಕಾಲೇಜು, 108 ವಿಸಿಟ್ಸ್ ಅಂತ ಹೋಗಲೇಬೇಕಾಗುತ್ತದೆ…..”

ರಾಗಿಣಿಗೆ ಮಗಳ ಮಾತಿಗೆ ಎದುರು ಹೇಳಲು ಆಗುತ್ತಿರಲಿಲ್ಲ. ಮಕ್ಕಳ ಮುಂದೆ ತಾನು ಅಸಹಾಯಕಳೆಂದೇ ಭಾವಿಸಿದಳು. ಮಗಳನ್ನು ಸರಿಪಡಿಸುವ ಯಾವ ಉಪಾಯ ಅವಳಿಗೆ ಹೊಳೆಯುತ್ತಿರಲಿಲ್ಲ.

ಆಶಾ ಶಾಲೆಯಲ್ಲೂ ಬೇಕಾದಷ್ಟು ಅಪಮಾನ ಸಹಿಸಿದ್ದಳು. ಹುಡುಗಿಯರು ಇವಳ ಸ್ನೇಹ ಬೆಳೆಸಲು ಬಯಸುತ್ತಿರಲಿಲ್ಲ. ಅವಳನ್ನು ತಮ್ಮ ಗ್ರೂಪಿಗೆ ಎಂದೂ ಸೇರಿಸಿಕೊಳ್ಳುತ್ತಿರಲಿಲ್ಲ. ಅವಳನ್ನು ವಿಚಿತ್ರವಾಗಿ ಗುರಾಯಿಸುತ್ತಿದ್ದರು.

ಎಲ್ಲರೂ ತಂತಮ್ಮ ಅಪ್ಪಂದಿರ ಪ್ರೀತಿವಾತ್ಸಲ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಯಾರೋ ಅಪ್ಪನೊಂದಿಗೆ ಸಿನಿಮಾಗೆ ಹೋಗಿದ್ದರೆ, ಇನ್ನಾರೋ ಪಿಕ್ನಿಕ್‌ಗೆ ಹೋಗಿದ್ದರು. ಎಲ್ಲರೂ ಫೇಸ್‌ಬುಕ್‌, ವಾಟ್ಸ್ಆ್ಯಪ್‌ಗಳಲ್ಲಿ ಫೋಟೋ ಹಾಕಿಕೊಳ್ಳುವರು. ಇದನ್ನೆಲ್ಲ ನೋಡಿ ಆಶಾಳಿಗೆ ಕಂಬನಿ ಉಕ್ಕಿ ಬರುತ್ತಿತ್ತು.

ಅವರುಗಳು ಆ ಕುರಿತು ಹೆಮ್ಮೆಯಿಂದ ಹೇಳಿಕೊಳ್ಳುವಾಗ, ಅವಳು ತನ್ನ ಮುಖ ಬೇರೆಡೆ ತಿರುಗಿಸಿಕೊಳ್ಳುವಳು. ಅವರೇನಾದರೂ ಅವಳು ತಮ್ಮ ಮಾತು ಕೇಳಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ದರೆ ಬೇಕೆಂದೇ, “ನಿನಗೆ ಇದೆಲ್ಲ ಏನು ಗೊತ್ತಾಗಬೇಕು? ನಿಮ್ಮಮ್ಮ ನಿಮ್ಮಪ್ಪನ್ನ ಬಿಟ್ಟು ಪರಪುರುಷನೊಡನೆ ಇದ್ದಾಳೆ!” ಎನ್ನುವರು.

ಇದಂತೂ ಕಹಿ ಸತ್ಯವಾಗಿತ್ತು. ಈ ಕಾರಣದಿಂದೀ ಅವಳ ಮನಸ್ಸು ಹುಣ್ಣಾಗುತ್ತಿತ್ತು. ಅವಳು ಬಲು ಕಷ್ಟದಿಂದ ತನ್ನ ಕಂಬನಿ ಕಾಣದಂತೆ ನಿಯಂತ್ರಿಸುತ್ತಿದ್ದಳು. ಅವಳ ಪಕ್ಕದ ಮನೆಯ ಶೀಲಾ ಇವರ ಮನೆಯ 1-1 ಸಂಗತಿಗಳನ್ನೂ ಶಾಲೆಯ ಎಲ್ಲರಿಗೂ ತಲುಪಿಸುವಳು. ಹೀಗಾಗಿ ಅವರೆಲ್ಲ ಈ ವಿಷಯವನ್ನೇ ದೊಡ್ಡ ಗಾಸಿಪ್‌ ಆಗಿಸುವರು.

ಕಾಲೇಜು ಕನ್ಯೆಯಾದ ಆಶಾಳಿಗೆ ಚಿಕ್ಕಂದಿನ ತರಹ ಅಳುತ್ತಾ ಕುಳಿತರೆ ಲಾಭವಿಲ್ಲ ಎಂಬುದರ ಅರಿವಾಗಿತ್ತು. ಈಗ ತಾನು ಬಿಂದಾಸ್‌ ಆಗಿ ತನ್ನನ್ನು ಕಡೆಗಣಿಸಿದವರಿಗೆಲ್ಲ ತಕ್ಕ ಪಾಠ ಕಲಿಸಲು ನಿರ್ಧರಿಸಿದಳು.

ಆಶಾಳಿಗೆ ಅಡುಗೆ ಕಲೆ ಸಹಜವಾಗಿ ಸಿದ್ಧಿಸಿತ್ತು. ಒಂದು ದಿನ ವರುಣ್‌ ಅಂಕಲ್ ಗಾಗಿ ಯೂಟ್ಯೂಬ್‌ನೋಡಿಕೊಂಡು ಮಲಾಯಿ ಕೋಫ್ತಾ ಮಾಡಿಕೊಟ್ಟಳು. ವರುಣ್‌ ಅದರಿಂದ ಬಹಳ ಖುಷಿಗೊಂಡು ಮಾರನೇ ದಿನವೇ ಅವಳಿಗೆ ಸ್ಕೂಟಿ ಕೊಡಿಸಿದ! ಅವಳು ಮಾಡಿಕೊಡುತ್ತಿದ್ದ ಬಗೆಬಗೆಯ ಚೈನೀಸ್‌, ಪಿಜ್ಜಾ ಬರ್ಗರ್‌ಗಳಿಂದ ಮನಸೋತು ಅವಳಿಗೊಂದು ಆ್ಯಡ್‌ ಆನ್‌ ಎಟಿಎಂ ಕಾರ್ಡ್‌ಕೊಡಿಸಿದ. ಇದರಿಂದ ಹಾಯಾಗಿ ಅವಳು ಮನಸ್ಸು ಬಂದಂತೆ ಖರ್ಚು ಮಾಡಲು ದಾರಿಯಾಯಿತು.

ಕಾಲೇಜಿನಲ್ಲಿ ಕ್ಯಾಂಟೀನ್‌, ಹುಡುಗರ ಜೊತೆ ಹೊರಗಿನ ಓಡಾಟ, ಹೋಟೆಲ್‌, ಪಾರ್ಕ್‌, ಮಾಲ್ ಎಂದು ಸುತ್ತಾಡುತ್ತಾ ಬಿಂದಾಸ್ ಆಗಿ ಖರ್ಚು ಮಾಡುತ್ತಿದ್ದಳು. ಈಗ ಅವಳ ಲೈಫ್‌ ಸ್ಟೈಲೇ ಬದಲಾಗಿ ಹೋಗಿತ್ತು. ಎಟಿಎಂ ಕಾರ್ಡ್‌ನಿಂದ ಆನ್‌ಲೈನ್‌ ಶಾಪಿಂಗ್‌, ಫ್ಯಾಷನೆಬಲ್ ಡ್ರೆಸೆಸ್‌, ಹೇರ್‌ ಸ್ಟೈಲ್ ಮೇಕಪ್‌ಗಾಗಿ ಬ್ಯೂಟಿಪಾರ್ಲರ್‌ ಭೇಟಿ, ತಂಗಿಗೊಂದಿಷ್ಟು ಪಾಕೆಟ್‌ ಮನಿ….. ಇತ್ಯಾದಿ ಎಲ್ಲದಕ್ಕೂ ಧಾರಾಳ ಖರ್ಚು ಮಾಡುವಳು. ತಾಯಿಯ ಅಂಕೆ ಇಲ್ಲ, ಕೇಳುವವರ ಕಾಟವಿಲ್ಲ!

ವರುಣ್‌ ಅಂಕಲ್ನ್ನು ಖುಷಿಪಡಿಸುವುದರಲ್ಲಿ ಈಗ ಅವಳಿಗೆ ಹೆಚ್ಚಿನ ಲಾಭವಿತ್ತು. ಮಗಳು ತಂದೆಯನ್ನು ನೋಡಿಕೊಳ್ಳುವ ಹಾಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ಈಗವನಿಗೆ ರಾಗಿಣಿ ಕೈಲಿ ಸೇವೆ ಮಾಡಿಸಿಕೊಳ್ಳುವುದಕ್ಕಿಂತ ವಯಸ್ಸಿಗೆ ಬಂದ ಮಗಳ ಕೈಲಿ ಸೇವೆ ಮಾಡಿಸಿಕೊಳ್ಳುವುದೇ ಹೆಚ್ಚು ಪ್ರಿಯವೆನಿಸತೊಡಗಿತು.

ವರುಣನೊಂದಿಗೆ ಮಗಳ ಬಾಂಧವ್ಯ ಈ ರೀತಿ ಹೊಸ ತಿರುವು ಪಡೆಯುತ್ತಿರುವುದನ್ನು ರಾಗಿಣಿ ಅರಗಿಸಿಕೊಳ್ಳದಾದಳು. ಅವನ ಪಕ್ಕ ಕುಳಿತು ಮಗಳು ಹರಟೆಗೆ ತೊಡಗಿದಂತೆ, ಏನೋ ಕೆಲಸದ ನೆಪ ಹೇಳಿ ರಾಗಿಣಿ ಅವಳನ್ನು ಅಲ್ಲಿಂದ ಎಬ್ಬಿಸುತ್ತಿದ್ದಳು. ಜಾಣೆ ಆಶಾ ಇದನ್ನು ಬೇಗ ಗುರುತಿಸಿಕೊಂಡು ಮನದಲ್ಲೇ ನಗುವಳು.

ಕಾಲೇಜಿನಲ್ಲಂತೂ ಅವಳ ಫ್ರೆಂಡ್ಸ್ ಗ್ಯಾಂಗಿಗೆ ಕೊರತೆ ಇರಲಿಲ್ಲ. ಎಷ್ಟೋ ಸಲ ತಾನೇ ಅವರಿಗೆ ಕ್ಯಾಂಟೀನ್‌ನಲ್ಲಿ ಟ್ರೀಟ್ ಕೊಡಿಸುತ್ತಿದ್ದಳು. ಈಗವರು ಹೊಸ ಏರಿಯಾದ ಹೊಸ ಮನೆಗೆ ಬಂದಿದ್ದರಿಂದ ರಾಗಿಣಿ ವರುಣ್‌ ಮೊದಲಿಗಿಂತ ಎಷ್ಟೋ ಪ್ರೌಢರಾದ್ದರಿಂದ ಅವರಿಗೆ ಈ ಮೂವರೂ ಮಕ್ಕಳೆಂದೇ ಎಲ್ಲರೂ ಭಾವಿಸಿದ್ದರು. ಹಾಗಾಗಿ ಆಶಾ ಅದರ ಲಾಭ ಪಡೆದಳು. ಅತುಲ್ ‌ನ ಹೊಸ ಗಾಡಿ, ಅವನ ಸ್ಟೈಲಿಶ್‌ ಪರ್ಸನಾಲ್ಟಿಗೆ ಅವಳು ಬೇಗ ಮಾರುಹೋದಳು. ಫೈನಲ್ ಇಯರ್‌ ವಿದ್ಯಾರ್ಥಿಯಾಗಿದ್ದ ಅತುಲ್ ‌ಇಡೀ ಕಾಲೇಜಿಗೆ ಬಿಂದಾಸ್‌ ಹೀರೋ ಆಗಿದ್ದ. ಅತ್ತ ಉಷಾಳಿಗೆ ಮೈಸೂರಿನಲ್ಲಿ ಎಂಜಿನಿಯರಿಂಗ್‌ಗೆ ಸೀಟ್‌ ಸಿಗದ ಕಾರಣ, ಬೆಂಗಳೂರಿನ ಕಾಲೇಜ್‌ ಸೇರಿ, ಹಾಸ್ಟೆಲ್ ವಾಸದಲ್ಲಿದ್ದಳು.

ಕ್ರಮೇಣ ಆಶಾ ವರುಣನ ಹೆಚ್ಚಿನ ಕೆಲಸಗಳಲ್ಲಿ ನೆರವಾಗತೊಡಗಿದಳು. ಬೆಳಗಿನ ಬೆಡ್‌ ಕಾಫಿ, ಉಪಾಹಾರ, ಮಧ್ಯಾಹ್ನದ ಲಂಚ್ ಬಾಕ್ಸ್, ರಾತ್ರಿ ಊಟ….. ಎಲ್ಲವನ್ನೂ ತಾನೇ ನೋಡಿಕೊಳ್ಳುತ್ತಿದ್ದಳು. ವರುಣ್‌ ಅವಳ ಕೆಲಸಗಳಿಂದ ಸಂತೃಪ್ತನಾಗಿ ಆಶಾಳ ತಲೆ ಸವರುತ್ತಿದ್ದರೆ ರಾಗಿಣಿಗೆ ಉರಿದು ಹೋಗುತ್ತಿತ್ತು. ಆದರೆ ವರುಣನ ಎದುರು ಅದನ್ನು ನೇರವಾಗಿ ಪ್ರತಿಭಟಿಸುವಂತಿರಲಿಲ್ಲ. ತಾಯಿ ಮಗಳಿಬ್ಬರೂ ವರುಣ್‌, ಪಾರ್ಥರ ಕೆಲಸಗಳನ್ನು ಪೈಪೋಟಿಯಿಂದ ಮಾಡಿಕೊಡುತ್ತಿದ್ದರು.

ರಾಗಿಣಿ ಒಮ್ಮೊಮ್ಮೆ ಆಶಾಳನ್ನು ಗುರಾಯಿಸುತ್ತಾ, “ನೀನ್ಯಾಕೆ ಸದಾ ಅಡುಗೆಮನೆಗೆ ಎಡತಾಕುವುದು? ನಿನ್ನ ಸ್ಟಡೀಸ್‌ ಕಡೆ ಗಮನ ಕೊಡು. ನಾನು ಎಲ್ಲಾ  ನೋಡ್ಕೋತೀನಿ, ಸಹಾಯಕ್ಕೆ ಗೌರಿ ಇದ್ದೇ ಇದ್ದಾಳೆ……”

ವರುಣನ ಪ್ಲೇಟಿಗೆ ಪಿಜ್ಜಾ ಜೋಡಿಸುತ್ತಾ ಆಶಾ ಹೇಳಿದಳು, “ಅಂಕಲ್, ಈ ಪಿಜ್ಜಾ ಸ್ವಲ್ಪ ಟ್ರೈ ಮಾಡಿ ನೋಡಿ…. ಯೂಟ್ಯೂಬ್‌ನೋಡಿ ನಾನು ಇದರ ಟಾಪಿಂಗ್‌ ಕಲಿತಿದ್ದೇನೆ.”

ತಾನು ಅದನ್ನು ರುಚಿ ನೋಡುವ ಮೊದಲು ವರುಣ್‌ ಆಶಾಳಿಗೂ ಒಂದು ತುಂಡು ತಿನ್ನಿಸಿದ. ರಾಗಿಣಿ ತಪ್ಪು ತಿಳಿಯಬಾರದೆಂದು ಅವಳಿಗೂ ಒಂದು ತುಂಡು ತಿನ್ನಿಸಿದ. “ಆಶಾ, ನಿಜಕ್ಕೂ ಇದು ವೆರಿ ಟೇಸ್ಟಿ…… ಫೆಂಟಾಸ್ಟಿಕ್‌!” ಆದರೆ ರಾಗಿಣಿಗೆ ಆ ಪಿಜ್ಜಾದಲ್ಲಿ ಏನೇನೂ ರುಚಿ ಕಾಣಿಸಲಿಲ್ಲ.

ಆಫೀಸಿನಲ್ಲಿ ಕೆಲವು ದಿನಗಳಿಂದ ರಾಗಿಣಿ ಗಮನಿಸುತ್ತಿದ್ದಾಳೆ, ವರುಣ್‌ ಮತ್ತೆ ಮತ್ತೆ ರೂಪಾಳನ್ನು ತನ್ನ ಛೇಂಬರ್‌ಗೆ ಕರೆಸಿಕೊಳ್ಳುತ್ತಿದ್ದ. ಎಷ್ಟೋ ಸಲ ಅವಳು ಬಗ್ಗಿ ನೋಡಿ ಖಚಿತಪಡಿಸಿಕೊಂಡಿದ್ದಳು. ಇಬ್ಬರೂ ಗಹಗಹಿಸಿ ನಗುತ್ತಾ ಕಾಫಿ ಗುಟುಕರಿಸುತ್ತಿದ್ದರು.

ವರುಣ್‌ ಕ್ರಮೇಣ ತನ್ನ ಕೈಯಿಂದ ಜಾರಿಹೋಗುತ್ತಿದ್ದಾನೆ ಎಂಬುದನ್ನು ರಾಗಿಣಿ ಗ್ರಹಿಸಿದಳು. ಒಂದು ಕ್ಷಣ ಅವಳ ಕೈ ಕಾಲು ತಣ್ಣಗಾಗಿ ಹೋಯಿತು. ಈಗಂತೂ ಅವಳಿಗೆ ಎದ್ದರೆ ಕೂತರೆ ಇದೇ ದೊಡ್ಡ ಚಿಂತೆಯಾಯಿತು. ಅವಳಲ್ಲಿ ಡಿಪ್ರೆಶನ್‌ ಮನೆ ಮಾಡಿತು….. ಆತ್ಮವಿಶ್ವಾಸ ತಂತಾನೇ ಕುಸಿಯುತ್ತಾ ಹೋಯಿತು.

ಅವಳ ಮನೆಗೆಲಸದ ಗೌರಿ, ತಾನು ಹೋಗುತ್ತಿದ್ದ ಮಠದ ಗುರುಗಳು ಬಹಳ ಪ್ರಭಾವಶಾಲಿ ಎಂದು ಸದಾ ಹೊಗಳುತ್ತಿದ್ದಳು. ಅವರ ಬಳಿ ತಾನು ಹೋಗಿ ಕೇಳಿಕೊಂಡರೆ ವರುಣ್‌ ಮತ್ತೆ ತನಗೇ ಒಲಿಯುವಂತೆ ಏನಾದರೂ ವಶೀಕರಣ ಮಂತ್ರ ಉಪದೇಶಿಸಬಹುದು ಎಂಬ ದೂರಾಲೋಚನೆ ಅವಳಿಗೆ ಮೂಡಿತು. ಆದಷ್ಟು ಬೇಗ ಆ ಗುರುಗಳ ಬಳಿ ಹೋಗಲು ನಿರ್ಧರಿಸಿದಳು.

ರಾಗಿಣಿ ಗಂಡನಿಂದ ವಿಚ್ಛೇದನ ಪಡೆದ ಬಳಿಕ ಅವನನ್ನು ಸಂಪೂರ್ಣ ಮರೆತೇಹೋಗಿದ್ದಳು. ವರುಣ್‌ ಅವಳ ಜೀವನದಲ್ಲಿ ಜೀವವಾಗಿ ಅಷ್ಟು ಬೆರೆತುಹೋಗಿದ್ದ. ಅವನನ್ನೇ ತನ್ನ ಪತಿ ಎಂದು ನಂಬಿ ನಿಷ್ಠೆಯಿಂದ ಮುನ್ನಡೆದಿದ್ದಳು.

ವರುಣನನ್ನು ಕಾಯಾ, ವಾಚಾ, ಮನಸಾ ಪ್ರೇಮಿಸುತ್ತಿದ್ದ ರಾಗಿಣಿ ಅವನ ಮಗ ಪಾರ್ಥನನ್ನು ತನ್ನ ಬಳಿ ಇರಿಸಿಕೊಂಡು ಸ್ವಂತ ಮಗನ ಪ್ರೀತಿ ತೋರುತ್ತಾ ವಾತ್ಸಲ್ಯದಿಂದ ಬೆಳೆಸಿದ್ದಳು. ಯಾವತ್ತೂ ಮಲತಾಯಿ ಧೋರಣೆ ತೋರದೆ, ಅವನು ಅನಾರೋಗ್ಯಕ್ಕೆ ತುತ್ತಾದಾಗೆಲ್ಲ ತನ್ನ ಆಹಾರ, ನಿದ್ದೆ ಮರೆತು ಸ್ವಂತ ಮಗನಂತೆಯೇ ಸೇವೆ ಮಾಡಿದ್ದಳು. ಇಷ್ಟೆಲ್ಲ ನಿಷ್ಠೆ ತೋರಿ ಅವನ ಪತ್ನಿಯಂತೆಯೇ ನಡೆದುಕೊಂಡಿದ್ದರೂ, ಸ್ವಭಾತಃ ಚಪಲಚೆನ್ನಿಗರಾಯನಾದ ವರುಣ್‌ ಒಮ್ಮೆ ರೂಪಾ, ಇನ್ನೊಮ್ಮೆ ಪ್ರೇಮಾ ಎಂದು ಯಾರು ಯಾರನ್ನೋ ತನ್ನ ಕಣ್ಣ ಮುಂದೆಯೇ ಮೆರೆಸುತ್ತಿರುವುದನ್ನು ಕಂಡು ರೋಸಿಹೋಗಿದ್ದಳು.

ಅವನ ಈ ವರ್ತನೆ ಅವಳಿಗೆ ನುಂಗಲಾರದ ತುತ್ತಾಗಿತ್ತು, ಬದುಕಿದ್ದರೂ ಅವಳು ಹೆಣದಂತಾಗಿದ್ದಳು. ಹೀಗಾಗಿ ಹೇಗಾದರೂ ಗೌರಿಯ ಆ ಗುರುಗಳ ಸೇವೆ ಮಾಡಿ ಮತ್ತೆ ವರುಣ್‌ ತನಗೇ ಅಂಟಿಕೊಳ್ಳುವಂತೆ ವಶೀಕರಣ ಮಂತ್ರದ ದೀಕ್ಷೆಗಾಗಿ ಪಣತೊಟ್ಟಳು. ಗೌರಿಗಂತೂ ತನ್ನ ಈ ಒಡತಿಯ ನಿಷ್ಠಾವಂತ ಪ್ರೇಮದ ಬಗ್ಗೆ ಗೊತ್ತಿತ್ತು, ಅವಳಿಗಾಗಿ ಸಹಾಯ ಮಾಡಲು ಸಿದ್ಧಳಾದಳು. ತನ್ನನ್ನು ಮನೆಯ ಸದಸ್ಯಳಂತೆಯೇ ಮೊದಲಿನಿಂದ ಆದರಿಸುತ್ತಿದ್ದ ಒಡತಿಗೆ ಕೈಲಾದ ನೆರವು ನೀಡಲು ಅವಳು ಸದಾ ತಯಾರಿದ್ದಳು.

ದಿನೇ ದಿನೇ ಗೌರಿಯ ಬಾಯಲ್ಲಿ ಆ ಗುರುಗಳ ಗುಣಗಾನ ಕೇಳುತ್ತಿದ್ದ ರಾಗಿಣಿ, ಅವರನ್ನು ಭೇಟಿಯಾಗಿ ತನ್ನ ಸಮಸ್ಯೆ ಪರಿಹರಿಸಿಕೊಳ್ಳಲೇಬೇಕು ಎಂದು ನಿಶ್ಚಯಿಸಿದಳು. ಗುರುಗಳ ಬಳಿ ಒಡತಿಯನ್ನು ಕರೆದೊಯ್ಯುವ ಮೊದಲೇ ಗೌರಿಗೆ ಒಡತಿಯ ಗೋಳಿನ ಕಥೆಯೆಲ್ಲ ಸಂಪೂರ್ಣ ತಿಳಿದಿತ್ತು. ಒಮ್ಮೆ ಗೌರಿ ಗುರುಗಳ ಆಶೀರ್ವಾದ ಬೇಡಿದ್ದಾಗ, ಅವಳಿಗೆ ಆ ವರ್ಷ ಖಂಡಿತಾ ಮಗುವಾಗುತ್ತದೆ ಎಂದು ಅವರು ಹರಸಿದ್ದರು, ಕಾಕತಾಳೀಯವೆಂಬಂತೆ ಅದೇ ವರ್ಷದ ಕೊನೆಯಲ್ಲಿ ಅವಳಿಗೆ ಗಂಡು ಮಗು ಹುಟ್ಟಿತ್ತು! ಅಂದಿನಿಂದ ಗೌರಿ ಆ ಗುರುಗಳ ಪರಮಶಿಷ್ಯೆ ಆಗಿಹೋಗಿದ್ದಳು.

ರಾಗಿಣಿ ಆ ಗುರುಗಳ ಬಳಿ ಬಂದಾಗ ಅವರು ಕಣ್ಣು ಮುಚ್ಚಿ ಧ್ಯಾನಾಸಕ್ತರಾಗಿದ್ದರು. ಅವಳು ಅರ್ಧ ಗಂಟೆ ಕಾದ ಬಳಿಕ ಒಳಗೆ ಗುರುಗಳ ದರ್ಶನಕ್ಕೆ ಕರೆ ಬಂತು. ಅವಳು ಅವರ ಬಳಿ ತನ್ನ ಸಮಸ್ಯೆ ಹೇಳಿಕೊಳ್ಳುವ ಮೊದಲೇ, ಅವಳ ಅಂಗೈ ನೋಡಿ, ಅವಳ ಇಡೀ ಜಾತಕ ಹೇಳಿಬಿಟ್ಟರು!

ಗುರುಗಳ ಕುರಿತಾಗಿ ಅವಳ ಶ್ರದ್ಧಾಭಕ್ತಿ ಹೆಚ್ಚಲು ಇದೊಂದು ಪ್ರಸಂಗವೇ ಸಾಕಾಯಿತು. ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಂತೆ ಅವಳ ಕಂಗಳಿಂದ ಧಾರಾಕಾರವಾಗಿ ಕಂಬನಿ ಹರಿಯಿತು. ಅವಳು ಮುಂದೆ ಬಂದು ಅವರ ಕಾಲಿಗೆ ನಮಸ್ಕರಿಸಿದಳು.

“ಇರಲಿ ಮಗಳೆ, ಸಮಾಧಾನ ಮಾಡಿಕೊ….. ನಿನ್ನ ಕರುಣಾಜನಕ ಕಥೆ ನಿನ್ನ ಅಂಗೈ ರೇಖೆಗಳಲ್ಲೇ ಗೋಚರಿಸುತ್ತಿದೆ….. ಅಳಬೇಡ, ಇನ್ನು ಮುಂದೆ ನಿನ್ನ ದುಃಖ ಪೂರ್ತಿ ಕಳೆಯಿತೆಂದೇ ತಿಳಿ!” ಎಂದು ಸಮಾಧಾನದ 4 ಮಾತುಗಳನ್ನಾಡಿದರು.

“ನಾವು ಹಿಮಾಲಯದ ತಪ್ಪಲಲ್ಲಿ ಹಲವು ವರ್ಷಗಳ ತಪಸ್ಸಿನಿಂದ ಸಿದ್ಧಿ ಪಡೆದಿದ್ದೇವೆ. ಹೀಗಾಗಿ ನಿನ್ನಂಥ ಅಸಹಾಯಕರ ಕಷ್ಟಗಳಿಗೆ ಪರಿಹಾರ ಸೂಚಿಸಬಲ್ಲರಾಗಿದ್ದೇವೆ! ನನ್ನ ಪೂರ್ವಾಶ್ರಮದ ಹೆಸರೂ ನೆನಪಿಲ್ಲ, ನನ್ನ ಹುಟ್ಟಿನ ಮೂಲದ ಬಗ್ಗೆಯೂ ಗೊತ್ತಿಲ್ಲ….. ಜನರ ಸೇವೆಯೇ ಜನಾರ್ಧನನ ಸೇವೆ ಎಂದು ಬದುಕುತ್ತಿದ್ದೇನೆ!”

“ಗುರುಗಳೇ, ಈಗ ನೀವೇ ನನ್ನನ್ನು ಕಾಪಾಡಬೇಕು….. ನನ್ನ ಪತಿ ವರುಣ್‌ ಪರಸ್ತ್ರೀ ಸಂಗಕ್ಕೆ ಹೋಗದಂತೆ ರಕ್ಷಾಕವಚ ನೀಡಿ, ಅನುಗ್ರಹಿಸಿ.”

“ಮಗು, ನಿನ್ನ ಸಂಕಟಗಳೆಲ್ಲ ಗೊತ್ತಾಯಿತು. ಆ ರೂಪಾ, ಪ್ರೇಮಾ ನಿನ್ನ ಜೀವನದ ಬೆಳಕನ್ನು ಕತ್ತಲೆ ಮಾಡುತ್ತಿದ್ದಾರೆ.” ಗುರುಗಳು ಅಷ್ಟು ಸಮರ್ಪಕವಾಗಿ ಅವರುಗಳ ಹೆಸರು ಹೇಳಿದ್ದು ಕೇಳಿ ತಕ್ಷಣ ಅವರ ಮಂದಿರದಲ್ಲಿದ್ದ ಹುಂಡಿಗೆ 2 ಸಾವಿರದ ನೋಟಿನ ಕಾಣಿಕೆ ಅರ್ಪಿಸಿ, ಕೈ ಜೋಡಿಸಿ ವಂದಿಸಿದಳು.

“ಮಗು, ಈ ಕಷಾಯ ಸ್ವೀಕರಿಸು. ಇದನ್ನು ವಿಶೇಷವಾಗಿ ಮಂತ್ರಿಸಲಾಗಿದೆ. ನಿನ್ನ ಪತಿಗೆ ಇಂದಿನಿಂದ 15 ದಿನಗಳ ಕಾಲ ಇದನ್ನು ಆಹಾರದಲ್ಲಿ ಬೆರೆಸಿಕೊಡು. ನಿನ್ನನ್ನು ಬಿಟ್ಟು ಅವನು ಪರಸ್ತ್ರೀಯತ್ತ ಕಣ್ಣೆತ್ತಿ ನೋಡಿದರೆ ಕೇಳು!”

ಹೀಗೆ ಮುಂದಿನ ವಾರಗಳಲ್ಲಿ ಅವಳಿಗೆ ಮಂತ್ರ, ತಾಯಿತ, ಹವನಹೋಮಗಳ ನೆಪದಲ್ಲಿ ಧಾರಾಳ ಖರ್ಚಾಯಿತು. ತಿಂಗಳು ಕಳೆಯುವಷ್ಟರಲ್ಲಿ ರೂಪಾ ಬೇರೆ ಕಂಪನಿ ಸೇರಿದ್ದರೆ, ಪ್ರೇಮಾ ಮದುವೆಯಾಗಿ ಕೆಲಸ ಬಿಟ್ಟಿದ್ದಳು. ಇದರಿಂದ ರಾಗಿಣಿಗೆ ಗುರುಗಳ ಬಗ್ಗೆ ಇದ್ದ ಶ್ರದ್ಧಾಭಕ್ತಿ ಇನ್ನಷ್ಟು ಹೆಚ್ಚಿತು. ವರುಣ್‌ ಸಹ ಹಿಂದಿನಂತೆಯೇ ಅವಳಲ್ಲಿ ಆಸಕ್ತಿ ತೋರಿಸತೊಡಗಿದ.

ಈ ಬಾರಿ ಪೂಜೆಗೆ ಹೋದ ರಾಗಿಣಿ ಧಾರಾಳವಾಗಿ 10 ಸಾವಿರ ರೂ. ದಕ್ಷಿಣೆ ಸಲ್ಲಿಸಿ ಅಡ್ಡಬಿದ್ದಳು. ಗುರುಗಳು ಹೇಳಿ ಕಳುಹಿಸಿದಾಗೆಲ್ಲ ಇತರ ರೂಪದಲ್ಲಿ ದಾನದಕ್ಷಿಣೆ ಧಾರಾಳ ಕೊಡುವಳು.ಈ ರೀತಿ ರಾಗಿಣಿ ತನ್ನ ಭವಿಷ್ಯ ಸುಧಾರಿಸುವಲ್ಲಿ ವ್ಯಸ್ತಳಾಗಿದ್ದರೆ, ಅತ್ತ ಮಗಳು ಆಶಾ ಅತುಲ್‌ರ ಸ್ನೇಹ ಪ್ರೇಮದಲ್ಲಿ ಬದಲಾಗಿತ್ತು. ಅವರು ಪರಸ್ಪರ ಬಿಟ್ಟಿರಲಾಗದ ಹಂತ ತಲುಪಿದ್ದರು.

ಅತುಲ್ ‌ಶ್ರೀಮಂತ ವ್ಯಾಪಾರಿಗಳ ವಂಶದ ಏಕಮಾತ್ರ ಕುಡಿಯಾಗಿದ್ದ. ಅವನು ಸದಾ ಬಣ್ಣ ಬಣ್ಣದ ಚಿಟ್ಟೆಗಳ ಸಹವಾಸದಲ್ಲಿ ಉನ್ಮುಕ್ತನಾಗಿದ್ದ. ಬಲು ಸ್ಮಾರ್ಟ್‌ಸ್ಟೈಲಿಶ್‌, ಕಾಲೇಜಿನ ಡ್ಯಾಶಿಂಗ್‌ ಹೀರೋ ಆಗಿದ್ದ. ಅವನ ತಂದೆ ಅತಿ ದೊಡ್ಡ ವಜ್ರದ ವ್ಯಾಪಾರಿ ಆಗಿದ್ದರು, ನಗರದ ಭಾರಿ ಶ್ರೀಮಂತ ಕುಳ ಎನಿಸಿದ್ದರು. ಮೈಸೂರಿನಲ್ಲೇ 4 ಕಡೆ ಶೋರೂಂ ಹೊಂದಿದ್ದ ಅವರಿಗೆ ಮಗ ಹೆಸರಿಗೆ ಡಿಗ್ರಿ ತಗೊಂಡರೆ ಸಾಕಿತ್ತು. ಕಾಲೇಜಿಗೆ ಹೋಗುವುದೇ ಮೋಜು ಉಡಾಯಿಸಲು ಎಂಬಂತೆ ಅವನಿಗಾಗಿತ್ತು. ಫೈನಲ್ ವರ್ಷದ ವಿದ್ಯಾರ್ಥಿಯಾದ ಕಾರಣ, ಆಶಾ ಜೊತೆ ಕಾಟಾಚಾರಕ್ಕೆ ಕ್ಯಾಂಪಸ್‌ ಇಂಟರ್ ವ್ಯೂ ಮುಗಿಸಿದ್ದ.

ಆಶಾ ಎಷ್ಟೋ ಸಲ ಅತುಲ್‌ನ ಮನೆಗೂ ಹೋಗಿ ಬಂದಿದ್ದಳು. ಅವನ ತಾಯಿ ತಂದೆಯರನ್ನೂ ಭೇಟಿ ಆಗಿದ್ದಳು. ಇವಳ ಮೃದು ವ್ಯವಹಾರ, ವಿನಯಶೀಲತೆ ಆ ದಂಪತಿಗಳ ಮನ ಗೆದ್ದಿತ್ತು. ಹೀಗಾಗಿ ಆಶಾ ಅತುಲ್‌ನಲ್ಲಿ ಹೆಚ್ಚು ಮೋಹಗೊಂಡಿದ್ದಳು.

ಒಂದು ದಿನ ಆಶಾ ಅತುಲ್‌ನನ್ನು ಮನೆಗೆ ಕರೆತಂದು ತಾಯಿಗೂ ಪರಿಚಯಿಸಿದಳು. ಅತುಲ್‌ನ ಆಕರ್ಷಕ ವ್ಯಕ್ತಿತ್ವ, ಶ್ರೀಮಂತ ಮನೆತನದ ಪರಿಚಯದ ಅರಿವಾದ ರಾಗಿಣಿಗೆ ಈ ಹುಡುಗ ತನ್ನ ಮಗಳನ್ನು ಮದುವೆಯಾದರೆ ಅದಕ್ಕಿಂತ ಮಿಗಿಲಾದುದು ಬೇರೊಂದಿಲ್ಲ ಎಂದೇ ಹಿಗ್ಗಿದಳು. ಆಗಾಗ ಮಗಳಿಗೆ ಅತುಲ್‌ನ ಬಳಿ ಮದುವೆ ಪ್ರಸ್ತಾಪದ ಬಗ್ಗೆ ಖಚಿತಪಡಿಸಿಕೊಳ್ಳಲು ಹೇಳುತ್ತಿದ್ದಳು.

ರಾಗಿಣಿಗಂತೂ ಅತುಲ್ ‌ತನ್ನ ಭಾವಿ ಅಳಿಯ ಎಂದೇ ಅನಿಸತೊಡಗಿತು. ಹೀಗಾಗಿ ಮಗಳು ಅವನೊಂದಿಗೆ ಸ್ವಚಂದವಾಗಿ ಓಡಾಡಲು ಎಂದೂ ಆಕ್ಷೇಪಿಸಲಿಲ್ಲ, ಬದಲಿಗೆ ಪ್ರೋತ್ಸಾಹಿಸುತ್ತಿದ್ದಳು. ಇವರಿಬ್ಬರೂ ಪರಸ್ಪರ ಗಾಢ ಪ್ರೇಮದಲ್ಲಿ  ಮುಳುಗಿದ್ದರು.

ಒಮ್ಮೆ ಭಾನುವಾರದಂದು ಅತುಲ್‌ನ ಮನೆಯವರನ್ನು ರಾಗಿಣಿ ಊಟಕ್ಕೆ ಬರಬೇಕೆಂದು ಔಪಚಾರಿಕ ಆಹ್ವಾನ ನೀಡಿದ್ದಳು. ತಮ್ಮ ಬಗ್ಗೆ ಅವರಿಗೆ ತಿಳಿಯಲಿ, ಅವರ ಮನದಲ್ಲೇನಿದೆ ಎಂದು ತಿಳಿಯೋಣ ಎಂಬುದು ಅವಳ ಅಭಿಪ್ರಾಯ. ಅವರು ಔತಣಕ್ಕೆ ಬಂದ ದಿನ ವರುಣ್‌ ಇರಲಿಲ್ಲ. ಅನಿವಾರ್ಯ ಕಾರಣಗಳಿಂದ ಹಿಂದಿನ ದಿನವೇ ಅವನು ಊರಿಗೆ ಹೋಗಬೇಕಾಗಿತ್ತು.

ಆಶಾಳನ್ನು ಮೊದಲೇ ಮೆಚ್ಚಿಕೊಂಡಿದ್ದ ಆ ದಂಪತಿ, ಈ ಸಂಬಂಧ ತಮಗೆ ಒಪ್ಪಿಗೆ ಎಂದು ತಿಳಿಸಿದಾಗ ರಾಗಿಣಿ ಸಂತಸದಿಂದ ಆಕಾಶಕ್ಕೆ ಏಣಿ ಹಾಕಿದಳು. ಒಂದೇ ಭೇಟಿಯಲ್ಲಿ ಎಲ್ಲ ಇಷ್ಟು ಬೇಗ ನಿಶ್ಚಯವಾಗಿ ಬಿಡುತ್ತದೆ ಎಂದು ಅವಳು ಎಣಿಸಿರಲಿಲ್ಲ. ಇದೆಲ್ಲ ಗುರುಗಳ ಆಶೀರ್ವಾದದಿಂದಲೇ ಎಂದು ಭಾವಿಸಿದ ರಾಗಿಣಿ ಅವರ ಪಾದಗಳಿಗೆ ಎರಗಿ ಅನೇಕ ಕಾಣಿಕೆ ಅರ್ಪಿಸಿದಳು.

“ಇದೆಲ್ಲ ನಿಮ್ಮ ಕೃಪೆಯಿಂದ ನಡೆದಿದೆ ಗುರುಗಳೇ…… ನಿಮ್ಮ ಆಶೀರ್ವಾದದಿಂದ ಅಷ್ಟು ದೊಡ್ಡ ಮನೆತನಕ್ಕೆ ನನ್ನ ಮಗಳು ಸೊಸೆಯಾಗಿ ಸೇರಲಿದ್ದಾಳೆ,” ಎಂದು ಗದ್ಗದಿತಳಾಗಿ ನುಡಿದಳು.

ಹುಡುಗನ ಕಡೆಯವರ ವೈಭವಕ್ಕೆ ತಕ್ಕಂತೆ ಪಂಚತಾರಾ ಹೋಟೆಲ್ ನಲ್ಲಿ ಎಂಗೇಜ್‌ಮೆಂಟ್‌ ಜರುಗಿತು. ಅವರೇ ಧಾರಾಳ ಖರ್ಚು ಮಾಡಿ ಇವರು ಒಬ್ಬನೇ ಮಗನ ಮದುವೆಯ ಸಮಸ್ತ ಜವಾಬ್ದಾರಿ ಹೊತ್ತಿದ್ದರು. ರಾಗಿಣಿ ಕಡೆಯಿಂದ ವಿಶೇಷ ಬಂಧು ಬಳಗ ಯಾರೂ ಇರಲಿಲ್ಲ, ತಾಯಿ ಜಾನಕಮ್ಮ ಹಳೆಯ ಕೋಪ ಮರೆತು ಸಂಭ್ರಮದಿಂದ ಮೊಮ್ಮಗಳ ಲಗ್ನಪತ್ರಿಕೆಯಲ್ಲಿ ಓಡಾಡಿದರು. ಒಂದಷ್ಟು ಆಫೀಸ್‌ ಸಿಬ್ಬಂದಿ ಬಂದಿದ್ದರು.

cellibration-story-B

ಅತುಲ್‌ನ ಕಡೆಯ ಬಂಧು ಬಳಗದ ಪರಿವಾರವೇ ದೊಡ್ಡದಾಗಿತ್ತು. ಆ ದಿನ ಮದುವೆ ಮುಹೂರ್ತ ನಿಶ್ಚಯಿಸಲಾಯಿತು. ಅತುಲ್‌ನ ಕಡೆಯವರು ಇವರ ಬಂಧು ಬಳಗದ ವಿಚಾರವಾಗಿ ಏನೂ ಹೆಚ್ಚಿಗೆ ಪ್ರಶ್ನಿಸಲು ಹೋಗಲಿಲ್ಲ. ಅವರಿಗದು ಬೇಕಾಗಿಯೂ ಇರಲಿಲ್ಲ. ಮಗ ಮೆಚ್ಚಿದ ಹುಡುಗಿಯನ್ನು ಮನೆ ತುಂಬಿಸಿಕೊಳ್ಳಬೇಕು ಎಂಬುದಷ್ಟೇ ಅವರ ಗುರಿಯಾಗಿತ್ತು.

ಹುಡುಗನ ಕಡೆಯರ ಅಂತಸ್ತಿಗೆ ತಕ್ಕಂತೆ ಅಲ್ಲದಿದ್ದರೂ, ತನ್ನ ಪ್ರಯತ್ನಕ್ಕೆ ಮೀರಿ ರಾಗಿಣಿ ಮಗಳ ಮದುವೆಯ ತಯಾರಿ ನಡೆಸಿದಳು. ತನ್ನ ಸಂಪಾದನೆಯ ಸಿಂಹಪಾಲನ್ನು ಮದುವೆಯ ಶಾಪಿಂಗ್‌, ಮತ್ತಿತರ ಖರ್ಚುಗಳಿಗಾಗಿ ಬಳಸಿದಳು. ವರುಣ್ ಯಾಕೋ ಈ ಮದುವೆಯಲ್ಲಿ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ.

ಇಂದಿನ ಆಧುನಿಕ ಕಾಲಕ್ಕೆ ತಕ್ಕಂತೆ ಮದುವೆಯ ಹಿಂದಿನ ದಿನ ವರನ ಕಡೆಯವರು ಮೆಹಂದಿ, ಸಂಗೀತ ಶಾಸ್ತ್ರ ಇರಬೇಕೆಂದು ಬಯಸಿದರು. ಈ ಉತ್ತರ ಭಾರತದ ಪದ್ಧತಿಗಳು ಈಗ ದೇಶದೆಲ್ಲೆಡೆ ಫ್ಯಾಷನ್‌ ಆಗಿ ಆಚರಣೆಯಲ್ಲಿತ್ತು. ಮಗಳಿಗೆ ಅಂಥ ದೊಡ್ಡ ಕಡೆ ಸಂಬಂಧ ಸಿಗುವುದು ಹೆಚ್ಚೋ ಎಂದು ರಾಗಿಣಿ ಖುಷಿಯಿಂದ ಎಲ್ಲದಕ್ಕೂ ಒಪ್ಪಿಕೊಂಡಳು.

ಮದುವೆ ಮನೆಗೆ ಬಂದವರನ್ನೆಲ್ಲ ಆದರದಿಂದ ಬರಮಾಡಿಕೊಂಡು, ಅಚ್ಚುಕಟ್ಟಾಗಿ ಸತ್ಕರಿಸಿದಳು. ಎಲ್ಲರೂ ಅವಳಿಗೆ ಕಂಗ್ರಾಟ್ಸ್ ಹೇಳುತ್ತಿದ್ದರು. ವರುಣ್‌ ಸಹ ಮದುವೆಯಲ್ಲಿ ಪಾಲ್ಗೊಳ್ಳಲಿ ಎಂದು ಅವಳ ಕಂಗಳು ಅವನನ್ನು ಅರಸುತ್ತಿದ್ದವು.

ಆದರೆ ಅವನು ಎಲ್ಲಿಯೂ ಕಂಡುಬರಲಿಲ್ಲ. ಅವನ ಫೋನ್‌ ಯಾಕೋ ಸ್ವಿಚ್‌ ಆಫ್‌ ಆಗಿತ್ತು. ವರುಣನಿಗೆ ಎಂದು ಅವಳು ವಹಿಸಿದ ಮದುವೆಯ ಕೆಲಸಗಳನ್ನು ಯಾವುದೂ ಅವನು ಜವಾಬ್ದಾರಿಯುತವಾಗಿ ನಿರ್ವಹಿಸಲಿಲ್ಲ. ಅವನೆಂದೂ ಹೀಗೆ ನಿರ್ಲಕ್ಷ್ಯ ತೋರುತ್ತಿರಲಿಲ್ಲ.

ಇಷ್ಟು ದೊಡ್ಡ ಸಂಭ್ರಮದ ಮದುವೆ, ಅತಿಥಿಗಳ ದೊಡ್ಡ ಗುಂಪು ನೆರೆದಿತ್ತು. ಗಂಡಿನ ಕಡೆಯವರು ಮಂಟಪಕ್ಕೆ ಬಂದಿಳಿಯುವುದೊಂದೇ ಬಾಕಿ ಇತ್ತು. ಇತ್ತ ವರುಣನ ಫೋನ್‌ ಸ್ವಿಚ್‌ ಆನ್‌ ಆಗಲೇ ಇಲ್ಲ.

ಯಾವುದೋ ಅನಿಷ್ಠ ನಡೆಯಲಿದೆ ಎಂಬಂತೆ ಅವಳ ಹೃದಯ ಹೊಡೆದುಕೊಳ್ಳತೊಡಗಿತು. ಅವಳ ಮುಖ ವಿವರ್ಣ ಆಗುತ್ತಿತ್ತು. ಅಷ್ಟರಲ್ಲಿ ಅವಳ ಫೋನ್‌ ರಿಂಗಾಯ್ತು. ಅತುಲ್‌ನ ತಾಯಿ ರೇವತಿ ಮಾತನಾಡುತ್ತಿದ್ದರು. ರಾಗಿಣಿ ತಕ್ಷಣ ಆ ಕೂಡಲೇ ತಮ್ಮ ಮನೆಗೆ ಬರಬೇಕೆಂದು ಆಕ್ಷೇಪಿಸುವಂತೆ ಆಗ್ರಹಿಸಿದ್ದರು. ತಾಯಿಯ ಮುಖ ಕಪ್ಪಿಟ್ಟಿರುವುದನ್ನು ಗಮನಿಸಿಯೇ ಏನೋ ಅಚಾತುರ್ಯ ನಡೆದಿದೆ ಎಂದು ಆಶಾ ಉಷಾ ಅರ್ಥ ಮಾಡಿಕೊಂಡರು. ಅವಳು ಮತ್ತೆ ಮತ್ತೆ ವರುಣನಿಗೆ ಫೋನ್‌ ಮಾಡಲು ಯತ್ನಿಸಿದ್ದೆಲ್ಲ ವ್ಯರ್ಥವೇ ಆಗುತ್ತಿತ್ತು.

ಮದುವೆ ಮನೆ ಮೌನವಾಯಿತು. ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುವಲ್ಲಿ ರಾಗಿಣಿ ವಿಫಲಳಾದಳು. ಅಳು ಉಕ್ಕುಕ್ಕಿ ಬರುತ್ತಿತ್ತು. ಕ್ಷಣ ಮಾತ್ರದಲ್ಲಿ ಮದುವೆ ಮಂಟಪದಲ್ಲಿ ಹಾವು ನುಗ್ಗಿದಂತೆ ಎಲ್ಲೆಡೆ ನಿಶ್ಚಲತೆ ಆವರಿಸಿತು. ಮದುವೆಗೆ ಬಂದ್ದಿದ್ದ ಜನರೆಲ್ಲ ತಲೆಗೊಂದು ಮಾತನಾಡತೊಡಗಿದರು. ಮೌನದ ಮಧ್ಯೆ ವಾತಾವರಣದಲ್ಲಿ ಗೊಣಗುಟ್ಟುವಿಕೆ ಸಹ ಕೇಳತೊಡಗಿತು. ಎಲ್ಲರೂ ಬಾಯಿಗೆ ಬಂದಂತೆ ಏನೇನೋ ಹೇಳುತ್ತಿದ್ದರು.

ಬೀಗರ ಮನೆಯಿಂದ ಏನೋ ಅವಸರದ ಸಂದೇಶ ಬಂದಿದೆ, ಅನಿವಾರ್ಯವಾಗಿ ತಾನೀಗ ಅವರ ಮನೆಗೆ ಹೋಗಬೇಕಿದೆ ಎಂದು ಹೇಗೋ ಧೈರ್ಯ ತಂದುಕೊಂಡ ರಾಗಿಣಿ ಅಲ್ಲಿದ್ದ ಜನರಿಗೆ ತಿಳಿಸಿ ಅವರ ಸಂದೇಹ ನಿವಾರಣೆ ಮಾಡಿದಳು. ಸಧ್ಯ…. ಇಷ್ಟೇನೇ, ತಾವೆಣಿಸಿದಂತೆ ಇನ್ನೇನೂ ಅನಾಹುತವಿಲ್ಲ ಎಂದು ಎಲ್ಲರೂ ನಿಟ್ಟುಸಿರಿಟ್ಟರು.

“ಅಮ್ಮಾ, ನೀನು ಅವರ ಮುಂದೆ ಬಲು ದೈನ್ಯಳಾಗಿ ಅತ್ತು ಕರೆದು ಮಾಡಬೇಡ. ಅವರ ಪ್ರಶ್ನೆಗೆ ಧೈರ್ಯವಾಗಿ ಉತ್ತರಿಸು,” ಎಂದು ಆಶಾ ತಾನೇ ಅಮ್ಮನನ್ನು ಸಮಾಧಾನಪಡಿಸಿದಳು.

ರಾಗಿಣಿ ಮಗಳನ್ನು ಸಂತೈಸಿ ತಾನು ಯಶಸ್ವಿಯಾಗಿ ಸಂಧಾನ ಮಾಡಿಕೊಂಡು ಬರುತ್ತೇನೆಂದು ತಾನೇ ಕಾರ್‌ ಡ್ರೈವ್ ‌ಮಾಡಿಕೊಂಡು ಬೀಗರ ಮನೆ ಕಡೆ ಹೊರಟಳು.

ಕೆಲವು ಕ್ಷಣ ಮದುವೆ ಮನೆಯಲ್ಲಿ ಭೀಕರ ಮೌನ ಹರಡಿದ್ದು ನಿಜ. ರಾಗಿಣಿ ಹೇಗಾದರೂ ಬೀಗರನ್ನು ಸಮಾಧಾಪಡಿಸಿ ಬರುತ್ತಾಳೆ, ಇನ್ನೇನೂ ಚಿಂತೆ ಇಲ್ಲ ಎಂದೇ ಅವರು ನಂಬಿದರು.

ಕೆಲವರು ಬೇಕೆಂದೇ ವ್ಯಂಗ್ಯ ನಗು ನಗುತ್ತಿದ್ದರು. ಯಾವುದೋ ಪರಪುರುಷನ ಸಂಬಂಧ ಹೊಂದಿದವಳು, ಈಗ ಮಗಳ ಮದುವೆ ಮಾಡಲು ಹೊರಟರೆ ಸಮಾಜ ಸುಮ್ಮನೆ ಬಿಟ್ಟೀತೇ ಎಂದು ತಂತಮ್ಮಲ್ಲೇ ವ್ಯಂಗ್ಯವಾಡಿಕೊಂಡರು. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈಗ ರಾಗಿಣಿ ಅನುಭವಿಸುತ್ತಾಳೆ ಎಂದು ನಕ್ಕರು. ಬೇಕೆಂದೇ ಅಂಥ ಸಂಬಂಧ ಹೊಂದಿದ್ದಳು, ಇಂಥ ದೊಡ್ಡ ಮನೆ ಬೀಗರ ಸಂಬಂಧಕ್ಕೆ ಏಕೆ ಆಸೆಪಡಬೇಕಾಗಿತ್ತು? ತಾನೆಲ್ಲಿದ್ದೇನೆ, ಎಂಥ ಸಂಬಂಧಕ್ಕೆ ಕೈಚಾಚಿದ್ದೇನೆ ಎಂಬ ಪ್ರಜ್ಞೆ ಮೊದಲೇ ಇರಬೇಕಿತ್ತಲ್ಲವೇ…..? ಹೀಗೆ 108 ಮಾತುಗಳು.

ಅವಳು ಬೀಗರ ಮನೆ ತಲುಪಿದಾಗ ಅಲ್ಲಿಗೆ ಈಗಾಗಲೇ ಆಗಮಿಸಿದ್ದ ವರುಣ್‌ ಮತ್ತು ಅವನ ಪತ್ನಿಯನ್ನು ಕಂಡು ಇವಳ ಜಂಘಾಬಲವೇ ಉಡುಗಿತು. ಎಲ್ಲ ಕನ್ನಡಿ ತರಹ ಸ್ಪಷ್ಟ ಅರ್ಥವಾಯಿತು. ಈ ಮದುವೆ ಬೇಡ! ಎಂಬುದೊಂದೇ ಅವರ ಹಠವಾಗಿತ್ತು. ರಾಗಿಣಿ ಅವರ ಮುಂದೆ ಸೆರಗೊಡ್ಡಿ ಬೇಡಿದಳು, ಕಣ್ಣೀರ ಧಾರೆ ಹರಿಸಿದಳು. ವರುಣ್‌ ಒಂದೂ ಮಾತನಾಡದೆ ಮೂಕನಂತೆ ಕುಳಿತಿದ್ದ. ಅತುಲ್‌ನ ತಾಯಿ ರೇವತಿ ಬಳಿ ಮಗಳಿಗೆ ಬಾಳು ಕೊಡುವಂತೆ, ಸೊಸೆಯಾಗಿ ಸ್ವೀಕರಿಸುವಂತೆ ಇನ್ನಿಲ್ಲದಂತೆ ಬೇಳಾಡಿದಳು. ಆದರೆ ಅವರುಗಳ ಮನಸ್ಸು ಕರಗಲೇ ಇಲ್ಲ.

“ಯಾರಿಗೆ ಸಂಬಂಧ ನಿಭಾಯಿಸಲು ಬರುವುದಿಲ್ಲವೇ ಅಂಥವಳ ಮಗಳು ಈ ಮನೆಗೆ ಸೊಸೆಯಾಗಿ ಬರುವುದೇ ಬೇಡ….. ನಿಮ್ಮ ದಾರಿ ನೀವು ನೋಡಿಕೊಳ್ಳಿ!” ಅವರುಗಳ ಮಾತು ಇವಳ ಕಿವಿಗೆ ಕಾದ ಸೀಸವಾಯಿತು. ಇವಳ ಅನಂತ ಗೋಳಾಟಕ್ಕೆ ಅವರ ಮನ ಕರಗಲಿಲ್ಲ. ಅತುಲ್ ‌ತಟಸ್ಥನಾಗಿದ್ದು ತಾಯಿತಂದೆಗೆ ಯಾವ ಮಾತನ್ನೂ ಹೇಳಲಿಲ್ಲ.

ಇಂಥದ್ದೇನೋ ಅನಾಹುತ ನಡೆಯಬಹುದು ಎಂದು ನೆನೆಸಿ ಆಶಾ, ತಂಗಿ ಜೊತೆ ಅಲ್ಲಿಗೆ ಧಾವಿಸಿ ಬಂದಳು. ಅಲ್ಲಿನ ಪರಿಸ್ಥಿತಿ ತಕ್ಷಣ ಅರ್ಥವಾಯಿತು.

“ಅಮ್ಮ, ಏಳಮ್ಮ….. ನನಗೆ ಈ ಮದುವೆ ಖಂಡಿತಾ ಬೇಡ! ಅತುಲ್‌ನಂಥ ಹೇಡಿಯನ್ನು ಮದುವೆ ಆಗಲು ನಾನೂ ಸಿದ್ಧಳಿಲ್ಲ….. ಹೋಗೋಣ ನಡಿ,” ಎಂದಳು.

“ಅಕ್ಕಾ…. ಇಂಥ ಹೇಡಿ, ಊಸರುವಳ್ಳಿಯಿಂದ ನೀನು ಬಚಾವಾದೆ ಎಂದೇ ಭಾವಿಸು,” ಉಷಾ ಸಹ ಅಕ್ಕನನ್ನು ಸಮರ್ಥಿಸಿಕೊಂಡಳು.

“ಸುಮ್ಮನೆ ಇರ್ರಮ್ಮ…. ನೀವು ಮಕ್ಕಳು…. ಹಾಗೆಲ್ಲ ದೊಡ್ಡ ದೊಡ್ಡ ಮಾತು  ಮಾತನಾಡಬಾರದು,” ರಾಗಿಣಿ ಮಕ್ಕಳಿಗೆ ತಿಳಿಯ ಹೇಳಲು ಯತ್ನಿಸಿದಳು.

“ಏನೂ ಬೇಡಮ್ಮ…… ಇದೇ ಜನ ನಾಳೆ ಮದುವೆ ಆದಮೇಲೆ ನಿಮ್ಮ ಮಗಳು ನಿಮ್ಮಲ್ಲೇ ಇರಲಿ ಎದು ತಳ್ಳಿಹೋಗಿದ್ದರೆ ಏನು ಮಾಡುವುದು? ಇವರ ಅಸಲಿ ಮುಖದ ಪರಿಚಯ ಮೊದಲೇ ಆಗಿದ್ದು ಒಳ್ಳೆಯದಾಯ್ತು!” ಆಶಾಳ ಆವೇಶ ಹೆಚ್ಚುತ್ತಿತ್ತು.

ಅಸಹಾಯಕಳಾದ ರಾಗಿಣಿಯ ಆರ್ತನಾದ ಕೇಳಿಸಿಕೊಳ್ಳುವವರು ಯಾರೂ ಇರಲಿಲ್ಲ, ಅವಳ ಬಿಕ್ಕಳಿಸುವಿಕೆ ಅಲ್ಲಿ ಅರಣ್ಯರೋದನವಾಗಿತ್ತು.

“ಅಮ್ಮ, ಈ ಮದುವೆ ನಿಂತು ಹೋಯಿತೇ ಹೊರತು ನಮ್ಮೆಲ್ಲರ ಪ್ರಾಣ ಹೋಗಿಲ್ಲ. ಧೈರ್ಯವಾಗಿ ನಿಂತು ಭವಿಷ್ಯ ಎದುರಿಸೋಣ. ಮೊದಲು ಇಲ್ಲಿಂದ ಹೊರಡೋಣ ನಡೆಯಮ್ಮ,” ಎಂದು ಮಕ್ಕಳು ಒತ್ತಾಯಿಸಿದರು.

ಅಲ್ಲಿಂದ ಎದ್ದ ಅವರು ನೇರ ಹೊರಬಂದರು. ರಾಗಿಣಿಯ ಎಂಗೇಜ್‌ಮೆಂಟ್‌ಮುಖ ನಿಸ್ತೇಜಆಗಿತ್ತು. ಮಕ್ಕಳಿಬ್ಬರ ಭುಜದ ಮೇಲೆ ಕೈ ಇರಿಸುತ್ತಾ ಹೇಳಿದಳು, “ಹೌದು, ನೀನು ಹೇಳಿದ್ದು ಸರಿ. ಈ ಜೀವನ ಇಲ್ಲಿಗೆ ಮುಗಿದುಹೋಗಲಿಲ್ಲ. ನಾವು ನಾಳಿನ ಸಂಘರ್ಷ ಎದುರಿಸಲು ಸಿದ್ಧರಾಗೋಣ,” ಎಂದು ವಿಶ್ವಾಸದಿಂದ ಹೆಜ್ಜೆ ಹಾಕಿದಳು. ಮಕ್ಕಳು ತಾಯಿಯ ಆಸರೆಯಾದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ