ಪರೀಕ್ಷೆಯ ಕೊನೆಯ ಪೇಪರ್‌ ಬರೆದು ಬಂದಿದ್ದ ಪವಿತ್ರಾ ಬಹಳ ಸುಸ್ತಾಗಿ ಹೋಗಿದ್ದಳು. ಮನೆಗೆ ಬಂದು 2 ತುತ್ತು ಉಂಡವಳೇ ಹಲವು ದಿನಗಳ ತಪ್ಪಿದ ನಿದ್ದೆಯನ್ನು ಪೂರೈಸುವಂತೆ ಮಲಗಿದವಳೇ, ಎದ್ದಾಗ ಸಂಜೆ 6 ಗಂಟೆ ಆಗಿತ್ತು. ಪೋರ್ಟಿಕೋದಲ್ಲಿ ನೋಡಿದಾಗ ಅಮ್ಮನ ಕಾರು ನಿಂತಿತ್ತು. ಓ….. ಅಮ್ಮ ಬಂದುಬಿಟ್ಟಿದ್ದಾರೆ ಅಂದುಕೊಂಡಳು. ಆವಳು ರಾಮುವಿಗೆ ಅಮ್ಮನ ಕೋಣೆಗೇ ಟೀ ತರುವಂತೆ ಹೇಳಿ, ನಿಧಾನವಾಗಿ ಅಮ್ಮನ ಕೋಣೆಯ ಕದ ಸರಿಸಿ ಒಳಗೆ ಹೋಗಲು ನೋಡಿದಳು.

ಅಮ್ಮ ಯಾವುದೋ ಫೋಟೋ ಕೈಯಲ್ಲಿ ಹಿಡಿದು ಬಿಕ್ಕಳಿಸುತ್ತಿದ್ದಳು, “ಇಂದು ಪವಿತ್ರಾಳ ಐಎಎಸ್‌ ಪರೀಕ್ಷೆ ಮುಗಿದಿದೆ. ಅದರಲ್ಲಿ ಅವಳು ಯಶಸ್ವಿಯಾಗಿ ಗೆದ್ದು ಬರುತ್ತಾಳೆ ಎಂದು ಅವಳ ತಂದೆಗೂ ಗ್ಯಾರಂಟಿ ಇದೆ. ಮಗಳನ್ನು ಐಎಎಸ್‌ ಆಫೀಸರ್‌ ಆಗಿಸುವ ನಿನ್ನ ಹಲವು ವರ್ಷಗಳ ಕನಸು ಇಷ್ಟರಲ್ಲೇ ನನಸಾಗಲಿದೆ…..”

ಪವಿತ್ರಾ ಅಲ್ಲಿಂದ ಮೌನವಾಗಿ ಹೊರಟುಹೋಗುವುದೇ ಸರಿ ಎಂದು ಭಾವಿಸಿದಳು. ಅವಳಿಗೆ ತಲೆ ಸುತ್ತಿ ಬಂದಂತಾಯಿತು. ಅಮ್ಮ ಅಳುತ್ತಾ ಹಾಗೇಕೆ ಹೇಳುತ್ತಿದ್ದಾಳೆ? `ಅವಳ ತಂದೆಗೂ ಅದರಲ್ಲಿ ಗ್ಯಾರಂಟಿ ಇದೆ….. ಮಗಳನ್ನು ಐಎಎಸ್‌ ಅಧಿಕಾರಿ ಆಗಿಸುವ ನಿನ್ನ ಕನಸು ನನಸಾಗಲಿದೆ…..? ಇದೆಂಥ ಅಸಂಬದ್ಧ ಮಾತುಗಳನ್ನಾಡುತ್ತಿದ್ದಾಳೆ ಡಿಗ್ರಿ ಕಾಲೇಜಿನ ಪ್ರಿನ್ಸಿಪಾಲ್ ‌ಆಗಿರುವ ನಮ್ಮಮ್ಮ ಪ್ರತಿಷ್ಠೆಗೆ ಹೆಸರಾದ ಮಾಲಿನಿ ಶರ್ಮಾಳ ಬಾಯಲ್ಲಿ ಇದೆಂಥ ಮಾತು? ಹಾಗಾದರೆ ಅವಳ ಕೈಯಲ್ಲಿದ್ದ ಆ ಫೋಟೋ ಯಾರದು? ಅವಳೇಕೆ ಹಾಗೆಲ್ಲ ಮಾತಾಡುತ್ತಿದ್ದಾಳೆ?’

ಟೀ ಟ್ರಾಲಿಯನ್ನು ತಳ್ಳಿಕೊಂಡು ಅಮ್ಮನ ಕೋಣೆಗೆ ಹೋಗುತ್ತಿದ್ದ ರಾಮುವನ್ನು ತಡೆದ ಪವಿತ್ರಾ, “ಅಲ್ಲಿ ಬೇಡ, ಡೈನಿಂಗ್ ರೂಮಿಗೆ ತೆಗೆದುಕೊಂಡು ಬಾ!”

“ಇದೇನಾಯ್ತು ಅಕ್ಕಾ? ಆಗಲೇ ಅಮ್ಮಾವ್ರ ಕೋಣೆ ಅಂದ್ರಿ, ಇದೀಗ ಡೈನಿಂಗ್‌ ರೂಂ ಅಂತೀರಿ….. ಮಧ್ಯಾಹ್ನ ಸಿನಿಮಾ ಸಿಡಿ ಹಾಕು ಅಂತ ನನಗೆ ಹೇಳಿ ಕೋಣೆಯಲ್ಲಿ ಚೆನ್ನಾಗಿ ನಿದ್ದೆ ಮಾಡಿಬಿಟ್ಟಿದ್ರಿ….. ಅಮ್ಮಾವ್ರು ನನ್ನನ್ನು ಬೈತಾ ಇದ್ರು……”

“ಓ….. ಅಮ್ಮಾ ಮಧ್ಯಾಹ್ನವೇ ಬಂದುಬಿಟ್ಟಿದ್ದರೇನು?” ಪವಿತ್ರಾ ರಾಮುವಿನ ಮಾತು ತಡೆಯುತ್ತಾ ಕೇಳಿದಳು.

“ಅಲ್ಲ…. ಬಂದದ್ದೇನೋ ಈಗಲೇ…. ನನಗೆ ಚೆನ್ನಾಗಿ ಬೈದು ತಮ್ಮ ಕೋಣೆಗೆ ಹೊರಟುಹೋದರು.”

`ಕೋಣೆಗೆ ಹೋಗಿ ಆ ಫೋಟೋ ಜೊತೆ ಮಾತನಾಡುತ್ತಿದ್ದಾಳೆ…… ಆದರೆ ಆ ಫೋಟೋ ಯಾರದಿರಬಹುದು?’ ಪವಿತ್ರಾ ಯೋಚಿಸತೊಡಗಿದಳು. ಅಷ್ಟರಲ್ಲಿ ಮಾಲಿನಿ ಇವರಿದ್ದ ಹಾಲ್‌ಗೆ ಬಂದಿದ್ದಳು. ಮುಖದಲ್ಲಿ ಅಳುವಿನ ಗುರುತು ಒಂದು ಚೂರು ಇಲ್ಲದಂತೆ ಒರೆಸಿಕೊಂಡು ಬಲವಂತದ ನಗು ತರಿಸಿದ್ದಳು.

ಆದರೆ ಕಂಗಳು ಮಾತ್ರ ಇನ್ನೂ ಡಲ್ ಆಗಿದ್ದ.ಅಮ್ಮನನ್ನು ಕಂಡು ಪವಿತ್ರಾ ಏನಾದರೂ ಕೇಳುವ ಮೊದಲೇ ಅಪ್ಪಾಜಿ ಅಲ್ಲಿಗೆ ಬಂದಿದ್ದರು, “ಹೋ ಡಿಪ್ಲೊಮ್ಯಾಟ್‌…..”

“ಡಿಪ್ಲೊಮ್ಯಾಟ್‌…..? ಯಾರಿಗೆ ಹೇಳ್ತಿದ್ದೀರಾ ಅಜಿತ್‌?”

“ಇನ್ನಾರು? ನನ್ನ ಮಗಳು ಪವಿತ್ರಾಗೆ ಹೇಳ್ತಿದ್ದೀನಿ…. ಅವಳು ಐಎಎಸ್‌ ಅಧಿಕಾರಿ ಅಂದ್ರೆ ಡಿಪ್ಲೊಮ್ಯಾಟ್‌ ಆಗೋದು ಗ್ಯಾರಂಟಿ ಆಯ್ತು ಅನ್ನು ಖುಷಿಯಲ್ಲಿ ಹೇಳ್ತಿದ್ದೀನಿ,” ಅವರ ಸಂತಸ ಮಾತುಗಳಲ್ಲಿ ತುಂಬಿ ತುಳುಕುತ್ತಿತ್ತು.

“ಇವತ್ತು ಕೊನೆಯ ಪೇಪರ್‌ನ ಎಲ್ಲಾ ಪ್ರಶ್ನೆಗಳೂ ಇವಳಿಗೆ ಬಲು ಸುಲಭ ಎಂದು ಪೇಪರ್‌ ನೋಡುತ್ತಲೇ ತಿಳಿಯಿತು.”

“ಆದರೆ ನಿಮಗೆ ಇವಳ ಪ್ರಶ್ನೆ ಪತ್ರಿಕೆ ಯಾರು ತೋರಿಸಿದರು?” ಮಾಲಿನಿ ಪ್ರಶ್ನಿಸಿದಳು.

“ಚಂದ್ರಕಾಂತ್‌ ಹೇಳಿದ. ಅವನು ಪರೀಕ್ಷೆ ಮುಗಿಸಿ ನೇರ ತನ್ನ ತಂದೆಯ ಬಳಿ ಬಂದಿದ್ದ. ಪರೀಕ್ಷೆ ಸರಸರ ಬರೆದು ಮುಗಿಸಿ, ಲೈಲಾದಲ್ಲಿ ಅವಳು ಇನ್‌ವಿಜಿಲೇಟರ್‌ಗೆ ಆತ್ಮವಿಶ್ವಾಸದಿಂದ ಉತ್ತರಿಸುತ್ತಿದ್ದ ರೀತಿಯಲ್ಲೇ ಅವಳು ಆಯ್ಕೆಗೊಳ್ಳುವ ಮೊದಲ 5 ಪರೀಕ್ಷಾರ್ಥಿಗಳಲ್ಲಿ ಖಂಡಿತಾ ಇರುತ್ತಾಳೆ ಎಂದು ಅವನಿಗೆ ಖಚಿತವಾಯಿತಂತೆ, ಅವರೆಲ್ಲ ಹಾಗೆ ತಲೆದೂಗುತ್ತಿದ್ದರಂತೆ…. ಅವನಿಂದ ಆ ಪ್ರಶ್ನೆಪತ್ರಿಕೆ ಪಡೆದು ನೋಡಿದಾಗ, ಅರೆ…. ಇದೆಲ್ಲ ನಿನ್ನೆ ರಾತ್ರಿ ನಾವಿಬ್ಬರೂ ಡಿಸ್ಕಸ್‌ ಮಾಡಿದ್ದೇ ಅಲ್ಲವೇ ಅಂತ ಬಹಳ ಖುಷಿಯಾಯ್ತು.”

“ಇವತ್ತು ಮಾತ್ರ ಅಲ್ಲಪ್ಪ, ನೀವು ಹಿಂದಿನ ಸಂಜೆ ಕುಳಿತು ರಿವೈಸ್‌ ಮಾಡಿಸುತ್ತಿದ್ದ ಎಷ್ಟೋ ಪ್ರಶ್ನೆಗಳು ಮಾರನೇ ಪೇಪರ್‌ನಲ್ಲಿ ಬರುತ್ತಿದ್ದ,” ಪವಿತ್ರಾ ಹೆಮ್ಮೆಯಿಂದ ಹೇಳಿದಳು.

“ವೆರಿಗುಡ್‌, ಕಲಿತಿದ್ದನ್ನು ಆ ರೀತಿ ರಿವೈಸ್‌ ಮಾಡುವುದರ ಪರಿಣಾಮ ಎಷ್ಟು ಒಳ್ಳೆಯದು ನೋಡಿದ್ಯಾ? ಚಂದ್ರಕಾಂತ್‌ ಕೂಡ ಅದನ್ನೇ ಹೇಳುತ್ತಿದ್ದ. ಅದು ಸರಿ, ಇವತ್ತು ಮಧ್ಯಾಹ್ನ ಪರೀಕ್ಷೆ ಮುಗಿಸಿ ಬಂದು ಏನು ಮಾಡಿದೆ?”

“ನನಗೆ ಸಿನಿಮಾ ಸಿ.ಡಿ ಹಾಕಲು ಹೇಳಿ ಅಕ್ಕಾ ಹೋಗಿ ಮಲಗಿಬಿಟ್ಟರು……” ಚಿಕ್ಕ ಮಕ್ಕಳಂತೆ ರಾಮು ಥಟ್ಟನೆ ಉತ್ತರಿಸಿದ.

“ಓ…… `ಮಿಲನ’ ಸಿನಿಮಾ ನೀನೊಬ್ನೇ ನೋಡಿದೆ. ಹೇಗಿತ್ತು?” ಅಜಿತ್‌ ತುಂಟತನದಲ್ಲಿ ಕೇಳಿದರು.

“ಚೆನ್ನಾಗಿತ್ತು….. ಪೂರ್ತಿ ನೋಡಲು ಆಗಲಿಲ್ಲ. ಅಷ್ಟರಲ್ಲಿ ಅಮ್ಮಾವ್ರು ಬಂದರು, ಬೈಸಿಕೊಂಡ ಮೇಲೆ ಟಿವಿ ಆಫ್‌ ಮಾಡಿದೆ.”

“ಹೋಗಲಿಬಿಡು, ಹೊರಗಿನಿಂದ ಊಟ ತರಿಸುತ್ತೇನೆ. ಎಲ್ಲರೂ ಕುಳಿತು ಹಾಯಾಗಿ ಆ ಸಿನಿಮಾ ಪೂರ್ತಿ ನೋಡೋಣ,” ಮಾಲಿನಿ ಹೇಳಿದಳು.

ಸಿನಿಮಾ ನೋಡುವಾಗ ಎಲ್ಲರ ಜೊತೆ ಮಾಲಿನಿ ಸಹ ಸಹಜವಾಗಿಯೇ ನಕ್ಕು ನಲಿದಳು. ಆದರೆ ಪವಿತ್ರಾಳಿಗೆ ಮಾತ್ರ ಅಮ್ಮನ ಆ ನಗು ಕೃತಕ, ಬೇಕೆಂದೇ ಸಹಜವಾಗಿರುವಂತೆ ನಟಿಸುತ್ತಿದ್ದಾಳೆ ಎನಿಸಿತು. ಮಾರನೇ ಬೆಳಗ್ಗೆ ಸಹ ಮಾಲಿನಿ ಎಲ್ಲರೊಡನೆ ಎಂದಿನಂತೆ ಬೆರೆತುಹೋಗಿದ್ದಳು.

“ಪವಿ, ನಿನಗೆ ಕಾರು ಬೇಕಂದ್ರೆ ನಾನು ಬಿಟ್ಟು ಹೋಗಿರ್ತೀನಿ. ಅಪ್ಪಾಜಿ ಜೊತೆಯಲ್ಲೇ ಹೋಗ್ತೀನಿ, ಅವರು ನನ್ನನ್ನು ಆಫೀಸ್‌ ಬಳಿ ಡ್ರಾಪ್‌ ಮಾಡ್ತಾರೆ,” ಎಂದು ಮಾಲಿನಿ ಮಗಳಿಗೆ ನೆನಪಿಸಿದಳು.

“ಅಯ್ಯೋ…. ಸಾಕಾಗಿದೆಯಮ್ಮ….. ಇವತ್ತು ನಾನು ಎಲ್ಲೂ ಹೋಗಲ್ಲಮ್ಮ, ಮನೆಯಲ್ಲೇ ಇದ್ದು ರೆಸ್ಟ್ ಪಡೆಯುತ್ತೇನೆ.”

“ಇರಲಿ, ಬೈ ಚಾನ್ಸ್ ನೀನೇನಾದರೂ ಮನಸ್ಸು ಬದಲಿಸಿ ಹೊರಗೆ ಹೋಗುವ ಪ್ರೋಗ್ರಾಂ ಹಾಕಿಕೊಂಡರೆ ನನಗೆ ಅಗತ್ಯ ಫೋನ್‌ ಮಾಡು. ಡ್ರೈವರ್‌ ಕೈಲಿ ಕಾರು ಕಳಿಸ್ತೀನಿ. ಅಜಿತ್‌, ನಿಮಗೇನಾದರೂ ಸಾಧ್ಯವಾದರೆ ಮಧ್ಯಾಹ್ನದ ಊಟಕ್ಕೆ ಇವಳಿಗೆ ಕಂಪನಿ ಕೊಡಲು ಮನೆಗೆ ಬರಲು ಆಗುತ್ತಾ…..?”

“ಅಯ್ಯೋ ಅಮ್ಮ…… ಪ್ಲೀಸ್‌…… ನೆಮ್ಮದಿಯಾಗಿ ಇಬ್ಬರೂ ಆಫೀಸಿಗೆ ಹೋಗಿ ಬನ್ನಿ…. ಹಾಗೂ ಬೇಕಿದ್ದರೆ ನಾನು ಒಂದು ಕ್ಯಾಬ್‌ ಬುಕ್‌ ಮಾಡಿಕೊಂಡು ಹೋಗಲಾರೆನೇ?” ಎಂದು ಕೇಳಿದಳು.

“ಇವತ್ತು ಹಾಯಾಗಿ ತಲೆಗೆ ಸ್ನಾನ ಮಾಡಿ ಇಡೀ ದಿನ ಮನೆಯಲ್ಲೇ ಇರ್ತೀನಿ. ಸಿಡಿ, ಮ್ಯೂಸಿಕ್‌, ಕಂಪ್ಲೀಟ್‌ ರೆಸ್ಟ್….. ಇಷ್ಟೇ ಇವತ್ತಿನ ಪ್ರೋಗ್ರಾಂ. ಮತ್ತೆ ರಾಮು, ನೀನು ನಿನ್ನ ಕೆಲಸ ನೋಡಿಕೋ, ಸುಮ್ಮನೆ ನನ್ನ ಹಿಂದೆ ಮುಂದೆ ಸುತ್ತಬೇಡ. ನಾನು ಇಲ್ಲೋ ಅಲ್ಲೋ ಎಲ್ಲೋ ಕುಳಿತಿರುತ್ತೇನೆ, ಮಲಗಿರುತ್ತೇನೆ…..”

“ನಡಿ ಮಾಲಿನಿ, ಇನ್ನೇನು ಹೇಳಬೇಡ. ಇಲ್ಲದಿದ್ದರೆ ನಾವು ಎಷ್ಟು ಹೊತ್ತಿಗೆ ಬರಬೇಕು ಏನು ಮಾಡಬೇಕು ಅಂತ ಆರ್ಡರ್‌ಮಾಡ್ತಾ ನಿಂತ್ರೆ ಕಷ್ಟ,” ಎಂದು ಪ್ರೀತಿಯಿಂದ ಮಗಳ ತಲೆ ಸವರಿ ಅಜಿತ್‌ ಹೊರಟರು.

ಅವರಿಬ್ಬರೂ ಹೊರಟ ನಂತರ ಪವಿತ್ರಾ ಟಿವಿ ಆನ್‌ ಮಾಡಿ, ಮತ್ತೊಂದು ಸ್ಟ್ರಾಂಗ್‌ ಡೋಸ್‌ ಕಾಫಿ ಹೀರುತ್ತಾ ಅರ್ಧ ಗಂಟೆ ಕಾಲ ಕಳೆದಳು. ಯಾಕೋ ಅದೂ ಬೋರಾಯ್ತು. ಥಟ್ಟನೆ ಏನೋ ನೆನಪಾದಂತೆ ಅಮ್ಮನ ಕೋಣೆಗೆ ಹೊರಟು ಅದೇ ಬೀರು ಮುಂದೆ ನಿಂತಳು.

ಅದಕ್ಕೆ ಬೀಗ ಹಾಕಿರಲಿಲ್ಲ, ಆದರೆ ಅದರೊಳಗಿನ ಸೇಫ್ಟಿ ಲಾಕರ್‌ಗೆ ಬೀಗ ಹಾಕಲಾಗಿತ್ತು. ಬಹುಶಃ ಅಮ್ಮ ತನ್ನ ರೇಷ್ಮೆ ಸೀರೆಗಳ ಕೆಳಗೆ ಕೀ ಇಟ್ಟಿರಬಹುದೇ….? ಎಂದು ತಡಕಾಡಿದಳು. ಅದು ಅಲ್ಲಿರಲಿಲ್ಲ, ನಂತರ ಬೇರೆ ಸೀರೆ, ಬಟ್ಟೆಗಳ ರಾಶಿ, ಫೈಲ್ಸ್ ಇಟ್ಟಿದ್ದ ಕಡೆ….. ತನಗೆ ಗೊತ್ತಿರುವ ಎಲ್ಲಾ ಜಾಗ ಹುಡುಕಿದರೂ ಇವಳಿಗೆ ಬೇಕಾದ ಫೋಟೋ, ಅಮ್ಮನ ಪರ್ಸನಲ್ ಡೈರಿ ಇತ್ಯಾದಿ ಏನೂ ಸಿಗಲಿಲ್ಲ. ನಿರಾಸೆಯಿಂದ ಎಲ್ಲವನ್ನೂ ಪರಿಶೀಲಿಸಿ, ಮತ್ತೆ ಹಿಂದಿನಂತೆಯೇ ಜೋಡಿಸಿಟ್ಟಳು.

ಬಹುಶಃ ಅಮ್ಮ ಸೇಫ್‌ ಕೀ ಸದಾ ತನ್ನ ಪರ್ಸ್‌ನಲ್ಲೇ ಇಟ್ಟುಕೊಂಡಿರುತ್ತಾಳೆ, ಹಾಗಿರುವಾಗ ಅಮ್ಮ ಮನೆಯಲ್ಲಿರುವಾಗ ಅದನ್ನಂತೂ ತೆರೆದು ನೋಡುವ ಹಾಗಿಲ್ಲ. ಅಮ್ಮ ಹೊರಗೆ ಹೊರಡುವಾಗ ಪ್ರತಿ ಸಲ ಮರೆಯದೆ ತನ್ನ ಪರ್ಸ್‌ ತೆಗೆದುಕೊಂಡು ಹೋಗುವುದರಿಂದ ಕೀ ತೆಗೆಯುವುದು ಭಾರೀ ಕಷ್ಟಕರ ಮಾತ್ರವಲ್ಲ ಅದು ಅಸಾಧ್ಯ ಎನಿಸಿತು.

ಏನಿರಬಹುದು ಅಮ್ಮನ ಈ ರಹಸ್ಯ? ಅವಳು ಹಾಗೇ ಮಾತನಾಡುತ್ತಿದ್ದುದಾದರೂ ಏಕೆ? ಅಮ್ಮನನ್ನು ನೇರವಾಗಿ ಕೇಳಲಾಗದು, ಮೊದಲಿನಿಂದ ಅವಳು ಮಹಾ ಸ್ಟ್ರಿಕ್ಟ್…… ಇದರಿಂದ ಬಹಳ ನೊಂದುಕೊಳ್ಳಬಹುದು….. ಅವಳ ದುಃಖ ಹೆಚ್ಚಿಸಬಾರದು. ಇನ್ನು ಅಪ್ಪನನ್ನು ಕೇಳೋಣವೆಂದರೆ ಅದು ಅಮ್ಮನ ವಿರುದ್ಧ ಕಂಪ್ಲೇಂಟ್‌ ಮಾಡಿದಂತಾಗುತ್ತದೆ. ಹಾಗಿದ್ದರೆ ವಿಷಯ ತಿಳಿಯಲು ತಾನು ಏನು ಮಾಡಬೇಕು? ಯಾರನ್ನು ಕೇಳುವುದು? ಆಗ ನೆನಪಾದಳೇ ಚಿತ್ರಾ ಆಂಟಿ. ಅವಳು ಅಮ್ಮನ ಬಾಲ್ಯ ಗೆಳತಿ, ಬಹುಶಃ ಅವಳಿಗೆ ಎಲ್ಲಾ ಗೊತ್ತಿರಬಹುದು. ಚಿತ್ರಾ ಬಳಿ ಪವಿತ್ರಾ ಮೊದಲಿನಿಂದಲೂ ಬಹಳ ಸಲುಗೆಯಿಂದಿದ್ದಳು. ಸುಲಭವಾಗಿ ಅಲ್ಲದಿದ್ದರೂ ಬಹಳ ವಿನಂತಿಸಿಕೊಂಡರೆ ಹೇಳಬಹುದು. ಚಿತ್ರಾ ತನ್ನ ಪತಿ ಮಿಲಿಟರಿ ರಿಟೈರ್ಡ್‌ ಅಧಿಕಾರಿ ಓಂಪ್ರಕಾಶ್‌ ಜೊತೆ ಬೆಂಗಳೂರಿನ ಹೊರವಲಯದ ಫಾರ್ಮ್ ಹೌಸ್‌ನಲ್ಲಿ ವಾಸವಾಗಿದ್ದಳು. ತಾನು ಅವಳನ್ನು ಭೇಟಿಯಾಗಲು ಬರುತ್ತಿರುವುದಾಗಿ ಪವಿತ್ರಾ ಹೇಳಿದಾಗ, ಚಿತ್ರಾ ಖುಷಿಯಿಂದ, “ಬೇಗ ಬಾ….. ಅದಕ್ಕೇನು ಅನುಮತಿ ಕೇಳಬೇಕೇ? ಅದು ಸರಿ, ನಿನ್ನ ಅಂಕಲ್ ಸಿಟಿ ಕಡೆ ಏನೋ ಕೆಲಸಕ್ಕೆ ಬಂದಿದ್ದಾರೆ. ನಿಮ್ಮ ಮನೆ ಬಳಿ ಬಂದು ಪಿಕ್‌ಅಪ್‌ ಮಾಡುವಂತೆ ಹೇಳುತ್ತೇನೆ. ನೀನು ನಮ್ಮಲ್ಲಿಗೆ ಬರುತ್ತಿದ್ದಿ ಅಂತ ನಿಮ್ಮಮ್ಮನಿಗೂ ಹೇಳಿಬಿಡ್ತೀನಿ ಇರು,” ಎಂದು ಸಂಭ್ರಮಿಸಿದಳು.

ನಂತರ ಪವಿತ್ರಾ ಅಪ್ಪನಿಗೆ ಫೋನ್‌ ಮಾಡಿ ತಾನು ಪರ್ಸನಲ್ ಇಂಟರ್‌ವ್ಯೂಗೆ ಮೊದಲು ತುಸು ರಿಲ್ಯಾಕ್ಸ್ ಆಗಲು ಬಯಸುವುದರಿಂದ ಚಿತ್ರಾ ಆಂಟಿ ಮನೆಗೆ 2-3 ದಿನಗಳ ಮಟ್ಟಿಗೆ ಹೋಗುತ್ತಿರುವ ವಿಷಯ ತಿಳಿಸಿದಳು.

“ಚಂದ್ರಕಾಂತ್‌ಗೆ ಫೋನ್‌ ಮಾಡಿ ನನ್ನ ಗಾಡಿ ತೆಗೆದುಕೊಂಡು ನಿನ್ನನ್ನು ಪಿಕ್‌ ಅಪ್‌ ಮಾಡಲು ಹೇಳಲೇ?” ಎಂದು ತಂದೆ ಕಾಳಜಿ ವ್ಯಕ್ತಪಡಿಸಿದರು.

“ಬೇಡ ಅಪ್ಪಾಜಿ, ಪ್ರಕಾಶ್‌ ಅಂಕಲ್ ಈ ಕಡೆ ಬರ್ತಿದ್ದಾರೆ. ಅವರೇ ನನ್ನನ್ನು ಕರೆದುಕೊಂಡು ಹೋಗ್ತಾರಂತೆ,” ಎಂದು ಹೇಳಿದಳು.

ಒಂದಿಷ್ಟು ಬಟ್ಟೆಬರೆ ತೆಗೆದುಕೊಂಡು ಪ್ರಕಾಶ್‌ ಅಂಕಲ್ ಜೊತೆ ಚಿತ್ರಾ ಮನೆಗೆ ಬಂದು ಸೇರಿದಳು. ಬಾಯಿ ತುಂಬಾ ವಟವಟ ಮಾತನಾಡುವ ಚಿತ್ರಾಳ ಜೊತೆ ಇಡೀ ದಿನ ಹರಟುತ್ತಾ, ತಿಂಡಿ, ಊಟ ವಿಶ್ರಾಂತಿಯಲ್ಲಿ ಕಳೆದಳು. ಮಾರನೇ ದಿನ ಪ್ರಕಾಶ್‌ಫಾರ್ಮ್ ಕಡೆ ಹೊರಟ ನಂತರ, ಪೀಠಿಕೆ ಇಲ್ಲದೆ ನೇರವಾಗಿ ಚಿತ್ರಾಳಿಗೆ ಹೇಳಿದಳು, “ಪರೀಕ್ಷೆಗಾಗಿ ಸತತ ತಯಾರಿ ನಡೆಸಿ ಬಹಳ ಸೋತು ಹೋಗಿದ್ದೇನೆ. ಮತ್ತೊಂದು ವಿಷಯ ಕೊರೆಯುತ್ತಿದೆ. ನಿಮ್ಮ ಬಳಿ ಅದರ ಬಗ್ಗೆ ಕೇಳೋಣ ಅಂತ ಬಂದೆ.”

“ಹೌದಮ್ಮ, ನಿನ್ನ ನೋಡಿದರೆ ಸೊರಗಿದ್ದಿ ಅನ್ಸುತ್ತೆ. ಅದೇನು ಅಂಥ ಚಿಂತೆ?”

“ಸರಿಯಾಗಿ ಹೇಳಿದ್ರಿ ಆಂಟಿ. ಇಲ್ಲಿ ಕೇವಲ ರಿಲ್ಯಾಕ್ಸ್ ಮಾಡಲು ಅಲ್ಲ, ನನ್ನ ಸಮಸ್ಯೆಗೆ ಪರಿಹಾರ ಹುಡುಕಲು ಬಂದೆ. ನನ್ನ ಅಜ್ಜಿ ಮನೆಯವರು ಅಮೆರಿಕಾದಲ್ಲಿದ್ದಾರೆ. ಅವರನ್ನು ಈ ಬಗ್ಗೆ ಕೇಳಲಾಗದು, ಫೋನಿನಲ್ಲಿ ಮಾತನಾಡುವ ವಿಷಯವಲ್ಲ. ನಮ್ಮಮ್ಮನ ಬಗ್ಗೆ ಚೆನ್ನಾಗಿ ಗೊತ್ತಿರುವವರು ಅಂದ್ರೆ ನೀವೇ? ಈಗ ನೀವೇ ಹೇಳಿ…..”

ಇವಳ ವಿವರಣೆ ಕೇಳಿ ಚಿತ್ರಾ ತಲೆ ಮೇಲೆ ಕೈಹೊತ್ತು ಕುಳಿತಳು. “ಆ ಮಾಲೂ ಎಷ್ಟು ಸಲ ಹೇಳೋದು…. ಕಳೆದು ಹೋದ ಸಂಗತಿ ಮರೆತುಬಿಡು ಅಂದ್ರೆ, ಅದನ್ನೇ ಇನ್ನೂ ತನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡು ಬಡಬಡಿಸುತ್ತಿರುತ್ತಾಳೆ. ಆದರೆ ಅವಳು ನನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ…. ಈ ಮಾತನ್ನು ನೀನು ನಿನ್ನ ತಂದೆಗೆ ಹೇಳಲಿಲ್ಲ ತಾನೇ?” ಚಿತ್ರಾ ಆತಂಕದಿಂದ ಕೇಳಿದಳು. ಇಲ್ಲಿಂದು ಪವಿತ್ರಾ ಖಚಿತಪಡಿಸಿದಾಗ ಚಿತ್ರಾಳಿಗೆ ತುಸು ನೆಮ್ಮದಿ ಎನಿಸಿತು.

“ಬಹಳ ಒಳ್ಳೆಯದನ್ನೇ ಮಾಡಿದೆ ಪವಿ…… ಇಲ್ಲದಿದ್ದರೆ ಆ ದೇವತಾ ಮನುಷ್ಯನ ಹೃದಯಕ್ಕೆ ಭಾವಿ ಆಘಾತವಾಗುತ್ತಿತ್ತು. ಆತನ ಉದಾತ್ತ ಗುಣ, ತ್ಯಾಗ, ಪ್ರೇಮಕ್ಕೆ ಮಾಲಿನಿ ಹೀಗಾ ಮಾಡುವುದು……? ಎಂದೋ ಬಿಟ್ಟುಹೋದ ಸಂಬಂಧವನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡು ಸತ್ತ ಹೆಣಕ್ಕೆ ಜೀವ ತುಂಬುವ ಪ್ರಯತ್ನ ಪಡುತ್ತಿದ್ದಾಳೆ……”

“ಇದೇನಾಂಟಿ, ಒಗಟಾಗಿ ಏನೋ ಹೇಳ್ತಿದ್ದೀರಿ….. ಸ್ವಲ್ಪ ವಿವರವಾಗಿ ತಿಳಿಸಬಾರದೇ?” ಪವಿತ್ರಾ ಕೇಳಿದಳು.

“ಹ್ಞಾಂ ಹೇಳ್ತೀನಿ, ಇದನ್ನು ಕೇಳಿದ ಮೇಲೆ ಆ ಹುಚ್ಚಿಯ ಬಗ್ಗೆ ತಪ್ಪು ಅಭಿಪ್ರಾಯ ತಳೆಯಬಾರದಷ್ಟೆ…..

“ಹಿಂದೆ ಕಾಲೇಜಿನಲ್ಲಿದ್ದಾಗ ನಾನು, ಮಾಲಿನಿ, ಅಜಿತ್‌, ಪ್ರಕಾಶ್‌, ಪ್ರದೀಪ್‌ ಎಲ್ಲರೂ ಒಟ್ಟಿಗೆ ಒಂದೇ ಕೋರ್ಸ್‌ನಲ್ಲಿ ಕಲಿಯುತ್ತಿದ್ದೆ. ಕಾಲ ಕ್ರಮೇಣ ನಾವು ಬಲು ಆಪ್ತರಾದೆವು. ಸಹಜವಾಗಿಯೇ ನಾನು ಪ್ರಕಾಶ್‌ ಕಡೆ, ಮಾಲಿನಿ ಪ್ರದೀಪ್‌ ಕಡೆ ಪ್ರೇಮ ಪಾಶದಲ್ಲಿ ಬಂಧಿಗಳಾದೆ. ಅಜಿತ್‌ ನಮ್ಮೆಲ್ಲರಿಗೂ ಬಹಳ ಸಹಾಯ ಮಾಡುತ್ತಾ, ನಾವು ಕ್ಲಾಸಸ್‌ ಬಂಕ್‌ ಮಾಡಿ ಸಿನಿಮಾಗೆ ಹೋದಾಗೆಲ್ಲ ನೋಟ್ಸ್ ಬರೆದು ಕೊಡುತ್ತಾ, ಪ್ರಾಕ್ಸಿ ಅಟೆಂಡೆನ್ಸ್ ಕೊಡಿಸುತ್ತಾ ನಮ್ಮನ್ನು ಕಾಪಾಡುತ್ತಿದ್ದರು.

adryshya-mohpas-story2

“ನಮ್ಮ ಪ್ರೇಮ ಗಟ್ಟಿಯಾಗುತ್ತಾ, ಮುಂದೆ ಮದುವೆಯಲ್ಲಿ ಮುಗಿಯಬೇಕೆಂದು ಕನಸು ಕಾಣುತ್ತಿದ್ದೆ. ನಂತರ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿದೆ. ನಾನು, ಮಾಲಿನಿ ಕಾಲೇಜಿನಲ್ಲಿ ಲೆಕ್ಚರರ್ಸ್‌ ಆದರೆ ಅಜಿತ್‌ ಐಎಎಸ್‌ ಪರೀಕ್ಷೆಗೆ ಪ್ರಯತ್ನಿಸಿ ಅದು ಯಶಸ್ವಿಯಾಗದೆ, ಬೇರೆ ಖಾಸಗಿ ನೌಕರಿಗೆ ಸೇರಿದರು.

“ನಮ್ಮಿಬ್ಬರ ಮನೆಗಳಲ್ಲಿ ಒಪ್ಪಿಗೆ ಪಡೆದು ನಾವು ಸಲೀಸಾಗಿ ಮದುವೆ ಆದೆ. ಆದರೆ ಪ್ರದೀಪ್‌ ಮನೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗಲಿಲ್ಲ. ಹೆಚ್ಚಿನ ವರದಕ್ಷಿಣೆಯ ದುರಾಸೆ ಇತ್ತು ಅವರಿಗೆ.

“ಆದರೆ ಮಾಲಿನಿ ಪ್ರದೀಪನ ಪ್ರೇಮದಲ್ಲಿ ಹುಚ್ಚಿಯಾಗಿದ್ದಳು. ತನ್ನ ಅಣ್ಣನಿಗೆ ಹೇಳಿ ಅಮೆರಿಕಾದಲ್ಲಿ ಒಂದು ಖ್ಯಾತ ಕಂಪನಿ ಮೂಲಕ ಅವನಿಗೆ ಅಲ್ಲೇ ನೌಕರಿ ಸಿಗುವ ವ್ಯವಸ್ಥೆ ಮಾಡಿಸಿದಳು. ಮಾಲಿನಿ ಅಣ್ಣ ಮಹೇಶ್‌ ಅಲ್ಲೇ ಸೆಟಲ್ ಆಗಿದ್ದರಿಂದ ಅದು ಸಲೀಸಾಗಿ ನೆರವೇರಿತು. ದೊಡ್ಡ ಮೊತ್ತದ ವರದಕ್ಷಿಣೆ ಸಹ ಸಿಕ್ಕಿತು. ಹೀಗಾಗಿ ಪ್ರದೀಪ್‌ ಮನೆಯವರು ಒಪ್ಪಿದರು.

“ಅವರ ಮದುವೆ ನಡೆಯಿತು. ಆದರೆ ಯಾವುದೋ ಕಾರಣಕ್ಕೆ ಮಾಲಿನಿಗೆ ಬೇಗ ಅಮೆರಿಕಾಗೆ ಹೋಗಲು ವೀಸಾ ಸಿಗಲಿಲ್ಲ. ಹೀಗಾಗಿ ಅತ್ತೆಮನೆಯಲ್ಲಿ ಅವಳು ಇಲ್ಲೇ, ತಿಂಗಳು ಕಳೆದ ಮೇಲೆ ಪ್ರದೀಪ್‌ ಅಲ್ಲೇ ಎಂಬಂತೆ ಆದರು. ಮೂರೇ ತಿಂಗಳಲ್ಲಿ ಮಾಲಿನಿ ಗರ್ಭಿಣಿ ಆದಳು.

“ಅವಳ ಅತ್ತೆ ಮನೆಯವರು ಬೇಕಾದಂತೆ ಆರೈಕೆ ಮಾಡಿದರು. ಆದರೆ ಸ್ಕ್ಯಾನಿಂಗ್‌ನಲ್ಲಿ ಮಾಲಿನಿ ಹೆಣ್ಣು ಮಗು ಹೊತ್ತಿದ್ದಾಳೆ ಎಂದು ತಿಳಿದಾಗ ಅದನ್ನು ತೆಗೆಸಿಬಿಡುವಂತೆ ಹೆಚ್ಚು ಒತ್ತಡ ಹೇರಿದರು. ಸ್ವಾಭಿಮಾನಿ ಮಾಲಿನಿ ಅದಕ್ಕೆ ಬಿಲ್‌ಕುಲ್ ‌ಒಪ್ಪಲಿಲ್ಲ. ಮುಂದೊಂದು ದಿನ ಅವಳ ಅತ್ತೆ ತನಗೆ ಗೊತ್ತಿದ್ದ ಯಾವುದೋ ಸೂಲಗಿತ್ತಿಯನ್ನು ಕರೆತಂದು ಮನೆಯಲ್ಲೇ ಗರ್ಭಪಾತಕ್ಕೆ ಏರ್ಪಾಡು ಮಾಡಿದರು.

“ಅವಳು ಹೇಗೋ ಕಷ್ಟಪಟ್ಟು ಅಲ್ಲಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿಬಂದಳು.

“ಆದರೆ….. ಅವಳು ಎಲ್ಲಿ ರಕ್ಷಣೆ ಪಡೆಯಬೇಕು? ಅವಳ ತಂದೆಗೆ ಹೃದಯಘಾತ ಆದುದರಿಂದ ಅವಳಣ್ಣ ಅವರಿಬ್ಬರನ್ನೂ ಅಮೆರಿಕಾಗೇ ಕರೆಸಿಕೊಂಡಿದ್ದರು. ಇಲ್ಲಿ ಪ್ರಕಾಶ್‌ ಆರ್ಮಿಯಲ್ಲಿದ್ದುದರಿಂದ ನಾನು ಒಬ್ಬಳೇ ಇರುವ ಬದಲು ಹಾಸ್ಟೆಲ್‌ನಲ್ಲಿ ಇರಬೇಕಾಯಿತು.

“ಮಾಲಿನಿ ನನ್ನ ಬಳಿ ಬಂದು ಎಲ್ಲಾ ಹೇಳಿಕೊಂಡಾಗ ಆ ರಾತ್ರಿ ನಮ್ಮ ಹಾಸ್ಟೆಲ್ ‌ವಾರ್ಡನ್‌ರನ್ನು ಒಪ್ಪಿಸಿ ಆ ರಾತ್ರಿ ಅವಳು ಅಲ್ಲೇ ಉಳಿಯುವಂತೆ ಮಾಡಿದೆ. ಮಾರನೇ ದಿನ ಎಲ್ಲಿಗೆ ಕಳುಹಿಸಲಿ?

“ಆಗ ನೆನಪಾದದ್ದು ಅಜಿತ್‌! ಅವರು ತಮ್ಮ ನಿವೃತ್ತ ಲಾಯರ್‌ ತಂದೆಯೊಡನೆ ವಾಸಿಸುತ್ತಿದ್ದರು. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರು. ನಾನು ನಡೆದದ್ದನ್ನು ವಿವರಿಸಿ, ಅವಳಿಗೆ ಅಲ್ಲೇ ಆಸರೆ ನೀಡುವಂತೆ ಪ್ರಾರ್ಥಿಸಿದೆ. ಅವರಿಬ್ಬರೂ ಒಪ್ಪಿದರು.

“ಅತ್ತ ಮಾಲಿನಿ ಪ್ರದೀಪನಿಗೆ ನಡೆದ ಘಟನೆ ವಿವರಿಸಿ ಹೇಗಾದರೂ ತನ್ನನ್ನು ಬೇಗ ಅಮೆರಿಕಾಗೆ ಕರೆಸಿಕೊಳ್ಳುವಂತೆ ಫೋನ್‌ನಲ್ಲಿ ಹೇಳಿದಳು. ಅತ್ತ ಅವನ ತಾಯಿ ಸಹ ಮಾತನಾಡಿ, ಗರ್ಭಪಾತಕ್ಕೆ ಅವಳನ್ನು ಒಪ್ಪಿಸುವಂತೆ ತಾಕೀತು ಮಾಡಿದರು. ಈಗಾಗಲೇ ಅಲ್ಲಿನ ದೊಡ್ಡ ಕಂಪನಿಯಲ್ಲಿ ಪಾರ್ಟ್‌ನರ್‌ ಆಗಿ ಸೆಟಲ್ ಆಗಿದ್ದ ಪ್ರದೀಪ್‌, ಮಾಲಿನಿಯ ಅಣ್ಣನ ಸಹಕಾರವಿಲ್ಲದೆ ಬಿಸ್‌ನೆಸ್‌ನಲ್ಲಿ ಮುನ್ನೇರಿದ್ದ. ಅವನಿಗೆ ಭಾರತಕ್ಕೆ ಮರಳುವ ಮನಸ್ಸಿರಲಿಲ್ಲ, ಈಗಾಗಲೇ ಅಲ್ಲಿ ಒಬ್ಬ ವಿದೇಶಿ ವಿಚ್ಛೇದಿತೆಯೊಂದಿಗೆ ಲಿವ್ ‌ಇನ್‌ ರಿಲೇಶನ್‌ ಹೊಂದಿದ್ದ.

“ತಾಯಿಯ ಮಾತಿನಂತೆ ನಡೆಯದಿದ್ದರೆ ತಮ್ಮಿಬ್ಬರ ಸಂಬಂಧ ಮುಗಿಯಿತು ಎಂದು ತಿಳಿ ಎಂದು ಬೆದರಿಕೆ ಒಡ್ಡಿದ. ಅವನಿಗೆ ಎಲ್ಲಕ್ಕಿಂತ ಕೋಪ ಬಂದದ್ದು ಎಂದರೆ ಯಾವ ಸಂಬಂಧ ಇಟ್ಟುಕೊಂಡು ಅವಿವಾಹಿತ ಅಜಿತ್‌ ಮನೆಯಲ್ಲಿ ಅವಳಿದ್ದಾಳೆ ಅಂತ……? ಅಷ್ಟಕ್ಕೂ ಆ ಮಗು ತನ್ನದೋ ಅಜಿತ್‌ದೋ ಎಂದು ವ್ಯಂಗ್ಯವಾಡಿದ್ದ.

“ಇಷ್ಟು ಸಾಲದೆಂಬಂತೆ ಅವಳ ಅತ್ತೆ ಮಾಲಿನಿ ಮನೆಯಿಂದ ಲಕ್ಷಾಂತರ ರೂ. ಹಣ, ಒಡವೆ ಕದ್ದು ಓಡಿಹೋಗಿದ್ದಾಳೆ ಎಂದು ಪೊಲೀಸ್‌ ಕಂಪ್ಲೇಂಟ್‌ ನೀಡಿ ಅವಳನ್ನು ಸೆರೆಗೆ ಹಾಕಿಸಿದರು. ಅಜಿತ್‌ ತನ್ನ ಲಾಯರ್‌ ತಂದೆಯ ಸಹಾಯದಿಂದ ಲಕ್ಷಾಂತರ ಅಮಾನತ್ತು ನೀಡಿ, ಅವಳನ್ನು ಬೇಲ್ ಮೇಲೆ ಬಿಡಿಸಿದರು.

“ಮುಂದೆ ಮಾಲಿನಿಗೆ ಈ ಸೆರೆವಾಸ ಒಂದು ಕಪ್ಪು ಚುಕ್ಕೆಯಾಗಿ ಅವಳು ಅಮೆರಿಕಾಗೆ ಅಣ್ಣನ ಬಳಿ ಹೋಗಲು ವೀಸಾ ಸಿಗಲೇ ಇಲ್ಲ…. ನಂತರ ಇಲ್ಲೇ ಉಳಿದು ಹೆಣ್ಣು ಮಗುವಿನ ತಾಯಿಯಾದಳು. ಅಷ್ಟರಲ್ಲಿ ಪ್ರದೀಪ್‌ನಿಂದ ವಿಚ್ಛೇದನ ಸಹ ಸಿಕ್ಕಿತು.

“ದೇವತಾ ಮನುಷ್ಯರಂತೆ ಅಜಿತ್‌ ಮಾಲಿನಿಯ ಕೈ ಹಿಡಿದು ಸಮಾಜದೆದುರು ಅವಳಿಗೆ ಪತ್ನಿಯ ಸ್ಥಾನ, ನಿನಗೆ ತಂದೆ ಸ್ಥಾನ ನೀಡಿ ಶಾಶ್ವತವಾಗಿ ಮಾಲಿನಿಯ ಜೀವನದ ಬೆಳಗುವ ತಾರೆಯಾದರು.

“ಅದೇನು ಕಷ್ಟಗಳು ಎದುರಾದವೋ…… ಅಜಿತ್‌ ಜೊತೆ ಮದುವೆಯಾದ ಮೇಲೆ ಮಾಲಿನಿಗೆ 3-4 ಸಲ ಸತತ ಅಬಾರ್ಷನ್‌ ಆಗಿ ಮುಂದೆ ಅವಳಿಗೆ ಮಕ್ಕಳೇ ಆಗಲಿಲ್ಲ….. ಅಂದಿನಿಂದ ಇಂದಿನವರೆಗೂ ಅಜಿತ್‌ ನಿನ್ನನ್ನು ತನ್ನ ಹೆತ್ತ ಮಗಳಂತೆಯೇ ಆದರಿಸುತ್ತಿದ್ದಾರೆ. ಆದರೆ ಆ ಮಾಲಿನಿ ಮಾತ್ರ…….

“ಪ್ರದೀಪನಿಂದ ಶಾಶ್ವತವಾಗಿ ದೂರವಾಗಿದ್ದರೂ ಅವನ ಮೇಲಿನ ಅತಿಯಾದ ವ್ಯಾಮೋಹ ಬಿಟ್ಟುಕೊಡಲಿಲ್ಲ. ಮೊದಲ ಪ್ರೇಮವನ್ನು ಯಾರೂ ಮರೆಯಲಾರರಂತೆ…. ಇವಳ ವಿಷಯದಲ್ಲಿ ಅದು ನಿಜವೇ ಆಯ್ತು. ಸದಾ ಅವನ ಫೋಟೋ ತನ್ನ ಬೀರುವಿನಲ್ಲಿರಿಸಿಕೊಂಡು, ಅವನ ನೆನಪಾದಾಗೆಲ್ಲ ಅದನ್ನು ಕಂಡು ಅತ್ತುಕೊಳ್ಳುತ್ತಾಳೆ……

“ಇದನ್ನೆಲ್ಲ ಪ್ರಾಮಾಣಿಕವಾಗಿ ನನ್ನ ಬಳಿ ಕನ್‌ಫೆಸ್‌ ಮಾಡಿಕೊಂಡಿದ್ದಳು. ಇದಾವುದೂ ಪಾಪ, ಅಜಿತ್‌ಗೆ ಗೊತ್ತಿಲ್ಲ…… ಆತನ ನಿರ್ಮಲ ಪ್ರೇಮಕ್ಕೆ ಹೀಗಾ ಮಾಡುವುದು ಎಂದು ನಾನು ಅವಳಿಗೆ ಕೇಳಿದಾಗ, ಇದು ನನ್ನ ಮಾನಸಿಕ ಪ್ರೇಮ. ಅದನ್ನು ಮರೆಯಲಾಗದು. ಆದರೆ ದೈಹಿಕವಾಗಿ ನಾನೆಂದೂ ಅಜಿತ್‌ಗೆ ದ್ರೋಹ ಬಗೆದಿಲ್ಲ ಎಂದು ಅತ್ತುಕೊಂಡಳು. ಅದು ಅವಳ ದೌರ್ಬಲ್ಯ….. ಪ್ರತಿ ಮನುಷ್ಯನಿಗೂ ಇರುವ ಒಂದು ವೀಕ್‌ನೆಸ್‌.

“ಈಗ ನಿನಗೆ ಗೊತ್ತಾಯಿತೇ….. ಅವಳೇಕೆ ಹಾಗೆ ಹೇಳಿದಳೆಂದು…. ಎಂದೆಂದೂ ಈ ವಿಷಯ ನಿನ್ನ ತಂದೆ ಬಳಿ ಚರ್ಚಿಸುವುದಿಲ್ಲ ಎಂದು ನನಗೆ ಪ್ರಾಮಿಸ್‌ ಮಾಡು!” ಎಂದು ಕೈ ಚಾಚಿದಳು ಚಿತ್ರಾ.

ಅವಳಿಗೆ ಪ್ರಾಮಿಸ್‌ ನೀಡುತ್ತಾ, “ಇಲ್ಲ ಆಂಟಿ…..ಕೇವಲ ನನ್ನ ಜನ್ಮಕ್ಕೆ ಕಾರಣನಾದ ಒಬ್ಬ ವ್ಯಕ್ತಿಗಿಂತ ಮೊದಲಿನಿಂದಲೂ ಇಲ್ಲಿಯವರೆಗೂ ನನ್ನನ್ನು ಕಾಪಾಡಿಕೊಂಡಿರುವ ಅಜಿತ್‌ ಪಪ್ಪಾ ನನ್ನ ದೇವರ ಸಮಾನ…. ಅವರನ್ನು ಕೊನೆಯವರೆಗೂ ನಾನು ಕಾಪಾಡಿಕೊಳ್ಳುತ್ತೇನೆ. ನಮ್ಮಮ್ಮನ ಹುಚ್ಚು ಪ್ರೇಮ ಹಾಗೇ ಇರಲಿ, ಅದರಿಂದ ನನಗಾವ ಲಾಭವೂ, ನಷ್ಟವೂ….. ಇಲ್ಲ.”

“ನಿನ್ನ ತಂದೆಗೆ ನೀನು ಚಂದ್ರಕಾಂತ್‌ನನ್ನು ಮದುವೆ ಆಗಬೇಕೆಂಬುದೇ ಮಹದಾಸೆ….”

“ಹಾಗೇ ಆಗಲಿ, ಆ ಉದಾತ್ತ ವ್ಯಕ್ತಿ ಏನೇ ಹೇಳಿದರೂ ಹಾಗೇ ನಡೆದುಕೊಳ್ಳಲು ನಾನು ಸಿದ್ಧ. ಇಂಥ ತಂದೆ ಎಲ್ಲರಿಗೂ ಸಿಗಲಿ ಎಂದೇ ನಾನು ಪ್ರಾರ್ಥಿಸುತ್ತೇನೆ,” ಎಂದಳು ಪವಿತ್ರಾ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ