ಬೆಂಗಳೂರಿನ ಜಕ್ಕೂರು ಬಳಿಯ ಶ್ರೀರಾಮಪುರ ಕ್ರಾಸ್‌ ಹತ್ತಿರ ಕೆಲವು ತಿಂಗಳುಗಳ ಹಿಂದೆ `ಮಾದರಿ ಪಾರಂಪರಿಕ ಗ್ರಾಮ’ವೊಂದು ತಲೆ ಎತ್ತಿದೆ. ಬೆಂಗಳೂರಿನ ಪ್ರವಾಸಿ ನಕ್ಷೆಯಲ್ಲಿ ಈ ಮೂಲಕ ಸುಂದರ ತಾಣವೊಂದು ಸೇರ್ಪಡೆಯಾದಂತಾಗಿದೆ.

ಕರ್ನಾಟಕ ಸರ್ಕಾರದ ಗ್ರಾಮೀಣಾಭಿೃದ್ಧಿ ಇಲಾಖೆ 11 ಕೋಟಿ ರೂ.ಗಳ ವೆಚ್ಚದಲ್ಲಿ ಈ ಪಾರಂಪರಿಕ ಗ್ರಾಮವನ್ನು ನಿರ್ಮಿಸಿದೆ. ಸಾವಿರಾರು ಶಿಲ್ಪ ಕಲಾವಿದರ 3 ವರ್ಷಗಳ ಅಗಾಧ ಪರಿಶ್ರಮದಿಂದ ಈ ಗ್ರಾಮ ಸೃಷ್ಟಿಯಾಗಿದೆ. ಡಾ. ಬಿ.ಜಿ. ಸೊಲಬಕ್ಕನವರ ಸಮರ್ಥ ನೇತೃತ್ವದಲ್ಲಿ ಈ ಊರಿನ ಒಂದೊಂದು ಶಿಲ್ಪಗಳು ಅರಳಿ ನಿಂತಿವೆ.

ಅವರು ಈ ಮುಂಚೆ ಹಾವೇರಿ ಜಿಲ್ಲೆಯ ಗೊಟಗೋಡಿನಲ್ಲಿ ಉತ್ಸವ ರಾಕ್‌ ಗಾರ್ಡನ್‌ ಸ್ಥಾಪನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಗೆ ಪಾತ್ರರಾಗಿದ್ದರು. ಆ ಬಳಿಕ ಅವರು ಆಲಮಟ್ಟಿಯಲ್ಲಿ ರಾಕ್‌ ಗಾರ್ಡನ್‌, ಕೃಷ್ಣಾ ಉದ್ಯಾನವನ, ಲವಕುಶ ಉದ್ಯಾನವನ ಹಾಗೂ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪನೆ ಮಾಡಿದರು. 2018ರಲ್ಲಿ ಅವರು ಬೆಂಗಳೂರಿನ ಈ ಅದ್ಭುತ ಹಳ್ಳಿಯ ಕೆಲಸ ಕೈಗೆತ್ತಿಕೊಂಡು 2020ರ ನವೆಂಬರ್‌ನಲ್ಲಿ ಮುಗಿಸಿಕೊಟ್ಟರು. ಅದಾದ ಕೆಲವೇ ದಿನಗಳಲ್ಲಿ ಅವರು ಮೃತರಾದದ್ದು ಮಾತ್ರ ವಿಷಾದದ ಸಂಗತಿ.

ಇಲ್ಲಿ ಏನೇನಿದೆ?

ಇಲ್ಲಿ ಏನೇನಿದೆ ಎನ್ನುವುದಕ್ಕಿಂತ ಇಲ್ಲಿ ಏನಿಲ್ಲ ಎಂದು ಕೇಳಿದರೆ ಹೆಚ್ಚು ಸೂಕ್ತ ಎನಿಸುತ್ತದೆ. ಒಂದು ಹಳ್ಳಿಯ ಜನಜೀವನ ಹೇಗಿರುತ್ತದೆ, ಅಲ್ಲಿನ ವ್ಯವಸ್ಥೆ, ಅಲ್ಲಿನ ದೈನಂದಿನ ಚಟುವಟಿಕೆಗಳ ಸಂಪೂರ್ಣ ಚಿತ್ರಣವನ್ನು ಇಲ್ಲಿ ಕಣ್ಣಿಗೆ ಕಟ್ಟುವಂತೆ ಶಿಲ್ಪಗಳಲ್ಲಿ ಸೃಷ್ಟಿಸಲಾಗಿದೆ. ಈ ಮಾದರಿ ಪಾರಂಪರಿಕ ಗ್ರಾಮಕ್ಕೆ ಬರಲು ಯೋಜಿಸುವಿರಾದರೆ ಸಾಕಷ್ಟು ಸಮಯ ಇಟ್ಟುಕೊಂಡು ಬನ್ನಿ.

ಬೆಳಗ್ಗೆ 11ರೊಳಗೆ ಬಂದರೆ ಬಿಸಿಲಿನ ಪ್ರಖರತೆ ಏರುವುದರೊಳಗೆ ನೋಡಿಕೊಂಡು ಹೋಗಬಹುದು. ಇಲ್ಲಿನ ಮಾದರಿ ಗ್ರಾಮದಲ್ಲಿ ಆಯಾ ಮನೆಗಳು ಹಾಗೂ ಪ್ರತಿಯೊಂದು ಘಟಕವನ್ನು ಕೂಲಂಕಷವಾಗಿ ಗಮನಿಸುತ್ತಾ, ಅಲ್ಲಿ ಕೊಟ್ಟಿರುವ ಮಾಹಿತಿ ಫಲಕವನ್ನು ಓದಿದರೆ ಮಾತ್ರ ದೃಶ್ಯ ವೈಭವವನ್ನು ಅರ್ಥ ಮಾಡಿಕೊಳ್ಳಬಹುದು.

ಮಾದರಿ ಗ್ರಾಮದೊಳಗೆ ಹೆಜ್ಜೆಯಿಟ್ಟಾಗ….ಕೌಂಟರಿನಲ್ಲಿ ಟಿಕೆಟ್‌ ಪಡೆದು (50 ರೂ.) ಒಳಗೆ ಹೆಜ್ಜೆ ಇಡುತ್ತಿದ್ದಂತೆ, ಹಳ್ಳವೊಂದರ ಜಗಲಿಕಟ್ಟೆ ನಿಮ್ಮ ಕಣ್ಣಿಗೆ  ಬೀಳುತ್ತದೆ. ಅಲ್ಲಿ ಒಬ್ಬ ತಾತ ಮಲಗಿದ್ದಾನೆ. ಕೆಳಗೆ 4-5 ಜನ ಕಡೆ ಆಟದಲ್ಲಿ ಮಗ್ನರಾಗಿದ್ದಾರೆ. ಆ ನಾಲ್ಕೈದು ಜನರ ಸಮೂಹ ವಿವಿಧ ಧರ್ಮಗಳ ಸಂಗಮವೇ ಆಗಿದೆ. ಆ ಮೂಲಕ ಶಿಲ್ಪಕಲಾ ತಜ್ಞರು ಗ್ರಾಮೀಣ ಭಾಗದ ಭಾವೈಕ್ಯತೆಯನ್ನು ಬಿಂಬಿಸಿದ್ದಾರೆ. ಇನ್ನೊಂದು ಬದಿಯಲ್ಲಿ ಮಕ್ಕಳು ಗೋಲಿ ಆಟದಲ್ಲಿ ಮಗ್ನರಾಗಿರುವುದು ಕಂಡುಬರುತ್ತದೆ.

ಅಲ್ಲಿಂದ ಕೆಲವೇ ಹೆಜ್ಜೆಗಳ ಅಂತರದಲ್ಲಿ ನಾಟಿ ವೈದ್ಯರ ಮನೆ ಕಾಣಿಸುತ್ತದೆ. ಗ್ರಾಮ್ಯ ಭಾಗದಲ್ಲಿ ಜನಪ್ರಿಯನಾಗಿರುವ ಒಬ್ಬ ವೈದ್ಯ ಕೈಗೆ ಕಟ್ಟು ಹಾಕಿ ಸಲಹೆ ಕೊಡುತ್ತಿರುವುದು ಗೋಚರಿಸುತ್ತದೆ. ಅಲ್ಲಿಯೇ ಪಕ್ಕದಲ್ಲಿ ಪುಟ್ಟ ಕಿರಾಣಿ ಅಂಗಡಿಯೊಂದರಲ್ಲಿ ವ್ಯಾಪಾರಿ ವ್ಯಾಪಾರದಲ್ಲಿ ಮಗ್ನರಾಗಿರುವುದು ಕಾಣಬರುತ್ತದೆ. ಅದರ ಪಕ್ಕದಲ್ಲಿ ಸಿಂಪಿಗನ ಮನೆ, ಪತ್ತಾರನ ಮನೆಗಳಿವೆ. ಒಂದೆಡೆ ಅಂಗಡಿ, ಇನ್ನೊಂದೆಡೆ ಅವರ ಮನೆಯವರು ಕುಟುಂಬದ ಉದ್ಯೋಗಕ್ಕೆ ಕೈಜೋಡಿಸುತ್ತಿರುವುದು ಎದ್ದು ಕಾಣುತ್ತದೆ.

ಹಾಗೆಯೇ ಹೆಜ್ಜೆ ಹಾಕುತ್ತಾ ಸಾಗಿದಾಗ ಮಂಗಳೂರು ಶೈಲಿಯ ಮನೆಯಲ್ಲಿ ನವದಂಪತಿಗಳು ಕಣ್ಣಿಗೆ ಬೀಳುತ್ತಾರೆ. ವರನ ತಂದೆತಾಯಿ ನವ ದಂಪತಿಗಳನ್ನು ಬೆರಗುಗಣ್ಣಿನಿಂದ ನೋಡುತ್ತಿರುವುದು ಗಮನ ಸೆಳೆಯುತ್ತದೆ.

ಗೌಡರ ಮನೆ

IMG_3892

ಅದೇ ದಾರಿಯಲ್ಲಿ ಮನೆಯ ಮುಂದಿನ ಒಂದು ಪಡಸಾಲೆಯಲ್ಲಿ ಕುಲಕರ್ಣಿ ಲೆಕ್ಕ ಬರೆಯುತ್ತಾ ಕುಳಿತಿದ್ದಾನೆ. ಅವನ ಮುಂದೆ ಸ್ವಲ್ಪ ದೂರದಲ್ಲಿ ಕೆಲವರು ಕುಲಕರ್ಣಿಯು ಏನು ಹೇಳಬಹುದು ಎಂದು ಕಾಯುತ್ತಾ ಕುಳಿತಿದ್ದಾರೆ. ಅಲ್ಲಿಯೇ ಪಕ್ಕದಲ್ಲಿ ಧಾರವಾಡ ಕಡೆಯ ಗೌಡರ ಮನೆಯೊಂದು ಕಂಡುಬರುತ್ತದೆ. ಅದು ಗೌಡರ ಮನೆಯ ಅದ್ಧೂರಿತನ, ಅವರ ಮನೆಯ ಹೋರಿಗಳು, ಹೈನುಗಾರಿಕೆ, ಆಳುಕಾಳು, ನಾಯಿಬೆಕ್ಕುಗಳ ಸಹಿತ ಎಲ್ಲವನ್ನು ಎಳೆಎಳೆಯಾಗಿ ಬಿಂಬಿಸಲಾಗಿದೆ. ಮೂಲೆಯೊಂದರ ಜಗಲಿಕಟ್ಟೆಯ ಮೇಲೆ ನಾಯಿಯೊಂದು ಏಳೆಂಟು ಮರಿಗಳಿಗೆ ಜನ್ಮ ನೀಡಿದ್ದು, ಅವುಗಳಿಗೆ ಹಾಲುಣಿಸುವ ದೃಶ್ಯ ಹಳ್ಳಿಯ ಸೂಕ್ಷ್ಮತೆಯನ್ನು ತಿಳಿಸುತ್ತದೆ.

ವೈವಿಧ್ಯತೆಯ ಬಿಂಬ

 

ಮುಂದೆ ಹೋದಾಗ ಚಿಕ್ಕಮಗಳೂರು ಕಡೆಯ ಎಣ್ಣೆ ತೆಗೆಯುವ ಗಾಣಿಗರ ಮನೆ ಆ ದೃಶ್ಯವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಆ ಮನೆಯ ಮಗು ತಾತನ ಜೊತೆ ಸಂಭಾಷಿಸುವ ದೃಶ್ಯ ಮೂರನೇ ಪೀಳಿಗೆಗೆ ಆ ಉದ್ಯೋಗವನ್ನು ಕೊಂಡೊಯ್ಯುತ್ತಿರುವಂತೆ ಭಾಸವಾಗುತ್ತದೆ.

ಹಳ್ಳಿಗಳಲ್ಲಿ ಮುಂಚೆ ಗ್ಯಾಸ್‌ ಒಲೆಗಳಿರಲಿಲ್ಲ. ಆಗ ಸೌದೆ ಒಲೆಯೇ ಗತಿ. ಮನೆಯ ಯಜಮಾನ ಕಟ್ಟಿಗೆ ಒಡೆಯುತ್ತಿರುವ ದೃಶ್ಯ, ಇನ್ನೊಂದೆಡೆ ಮನೆಯ ಯಜಮಾನಿ ಸಗಣಿಯಿಂದ ಗೋಡೆಯ ಮೇಲೆ ಬೆರಣಿ ತಟ್ಟುತ್ತಿರುವುದು ಅವರ ಶ್ರಮದ ಜೀವನವನ್ನು ತೋರಿಸುತ್ತದೆ.

ಅಲ್ಲಿಂದ ಮುಂದೆ ಸಾಗಿದಾಗ ಮನೆಯ ಹಿತ್ತಲಲ್ಲಿ ಮಹಿಳೆಯೊಬ್ಬಳು 501 ಸಬಕಾರ ಹಚ್ಚಿ ಒಟ್ಟೆ ಒಗೆಯುತ್ತಿರುವುದು ಅಂದಿನ ದಿನಗಳ ಬಟ್ಟೆ ಸೋಪಿನ ಜನಪ್ರಿಯತೆಯನ್ನು ನೆನಪಿಸುವಂತೆ ಮಾಡುತ್ತದೆ.

ಅದಾದ ಬಳಿಕ ಅಗಸರ ಮನೆ ಕಂಡುಬರುತ್ತದೆ. ಅಲ್ಲಿ ಇಸ್ತ್ರೀ ಮಾಡುತ್ತಿರುವ ಪುರುಷ ಹಾಗೂ ಕತ್ತೆಗಳ ಮೇಲೆ ಬಟ್ಟೆ ಗಂಟು ಹೊರಿಸಿಕೊಂಡು ಕೆರೆಗೆ ಹೊರಟ ಮಹಿಳೆ ಕಂಡುಬರುತ್ತಾಳೆ. ಅಲ್ಲಿಯೇ ಪಕ್ಕದಲ್ಲಿ ಗ್ರಾಮೀಣ ಆಟಿಕೆ ತಯಾರಕ ವಾಸವಾಗಿದ್ದಾನೆ. ಅವನ ಆಟಿಕೆ ವಸ್ತುಗಳಿಗೆ ಬೆರಗಾದ ಮಹಿಳೆಯೊಬ್ಬಳು ತನ್ನ ಮಗುವಿಗೆ ಗೊಂಬೆ ಖರೀದಿಸಲು ಚೌಕಾಶಿ ನಡೆಸುತ್ತಿರುವುದು ಕಂಡುಬರುತ್ತದೆ.

ಅಲ್ಲಿಂದ ಮುಂದೆ ಹೆಜ್ಜೆ ಹಾಕಿದಾಗ ಬಿದಿರಿನಿಂದ ಬುಟ್ಟಿ, ಮೊರ, ಚಾಪೆ ಹೆಣೆಯುವ ಮೇದಾರನ ಬದುಕು ಕಣ್ಣಿಗೆ ಬೀಳುತ್ತದೆ. ಅದರ ಪಕ್ಕದಲ್ಲಿಯೇ ಮಣ್ಣನ್ನು ಹದಗೊಳಿಸುತ್ತಿರುವ ಕುಂಬಾರನ ದರ್ಶನವಾಗುತ್ತದೆ. ಆ ಮನೆಯ ಪಕ್ಕದಲ್ಲಿಯೇ ತಾಮಟಿಗನ ಕುಟುಂಬ ವಾಸವಿದೆ. ಅವನ ಮನೆಯಲ್ಲಿ ಹಳೆಯ ಕಾಲದ ಅದೆಷ್ಟೋ ಪಾತ್ರೆಪಗಡೆಗಳು ಕಂಡುಬರುತ್ತವೆ.

IMG_3910

ಒಂದು ಗ್ರಾಮವೊಂದರೆ ಅಲ್ಲಿ ಕ್ಷೌರಿಕ ಇರದಿದ್ದರೆ ಹೇಗೆ? ಅವನು ಅಂತಿಂಥ ಕ್ಷೌರಿಕನಲ್ಲ, ಮನೆಮನೆಗೆ ಹೋಗಿ ಕ್ಷೌರ ಮಾಡುವವ. ಕೊಪ್ಪಳ ಜಿಲ್ಲೆಯಲ್ಲಿ ಈ ಪದ್ಧತಿ ಇನ್ನೂ ಜೀವಂತ ಇರುವುದನ್ನು ಈ ದೃಶ್ಯ ಬಿಂಬಿಸುತ್ತದೆ.

ಅಲ್ಲಿಯೇ ಪಕ್ಕದಲ್ಲಿ ಗ್ರಾಮೀಣ ಬಡಗಿಯ ಮನೆಯ ದೃಶ್ಯವಿದೆ. ಯಾದವಗಿರಿ ಜಿಲ್ಲೆಯ ಅಂತಹ ಕುಟುಂಬವೊಂದನ್ನು ಈ ವಿಭಾಗ ಪ್ರತಿನಿಧಿಸುತ್ತದೆ.

ಈ ಮಾದರಿ ಗ್ರಾಮದಲ್ಲಿ ಕೊಡಗಿನ ವಿಶಿಷ್ಟ ಸಂಪ್ರದಾಯದ ಉಡುಪು ತೊಟ್ಟ ಕುಟುಂಬವೊಂದರ ದರ್ಶನ ಕೂಡ ಆಗುತ್ತದೆ.

ಸಾಲಿ ಗುಡಿಯ ನೆನಪು ಗ್ರಾಮದ ಮೂಲೆಗೆ ಬರುತ್ತಿದ್ದಂತೆ ಗುಡಿಯ ಪ್ರಾಂಗಣದಲ್ಲಿ ಶಾಲೆಯೊಂದು ನಡೆಯುತ್ತಿರುವುದು ಕಂಡು ಬರುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಗುಡಿಯಲ್ಲಿ ನಡೆಯುವ ಶಾಲೆಗಳಿಗೆ `ಸಾಲಿ ಗುಡಿ’ ಎಂದು ಕರೆಯುತ್ತಿದ್ದರು. 70ರ ದಶಕದಲ್ಲಿ ನಾನು ಕೂಡ ಅಂತಹ ಶಾಲೆಯಲ್ಲಿ ಓದಿದ್ದರಿಂದ ಅಂದಿನ ದಿನಗಳ ನೆನಪು ನನ್ನ ಕಣ್ಮುಂದೆ ಸರಿದುಹೋಯಿತು.

ಶಾಲೆಯ ಬಳಿಕ ಒಂದು ಬಯಲು ಜಾಗದಲ್ಲಿ ಪಂಚಾಯತ್‌ ಕಟ್ಟೆ ಕಾಣಿಸುತ್ತದೆ. ಅಲ್ಲಿ ಊರಿನ ಗೌಡರು ಯಾವುದೊ ನ್ಯಾಯ ತೀರ್ಮಾನದಲ್ಲಿ ಮಗ್ನರಾಗಿರುವುದು ಕಂಡುಬಂತು. ಅಲ್ಲಿಯೇ ಪಕ್ಕದಲ್ಲಿ ಗ್ರಾಮದ ಮುಖ್ಯ ಬಾವಿ ಕಣ್ಣಿಗೆ ಬೀಳುತ್ತದೆ. ಕೆಲವು ಮಹಿಳೆಯರು ಗಡಗಡೆ (ರಾಟೆ)ಯ ಸಹಾಯದಿಂದ ನೀರು ಸೇದುತ್ತಿರುವುದು ಕಂಡುಬರುತ್ತದೆ. ಅಲ್ಲಿಯೇ ಪಕ್ಕದಲ್ಲಿ ಹಳ್ಳಿಯ ಮಕ್ಕಳು ತಮ್ಮದೇ ಆದ ಆಟ ಆಡುವಲ್ಲಿ ಮಗ್ನರಾಗಿದ್ದಾರೆ.

ಅಲ್ಲಿಂದ ಮುಂದೆ ಹೆಜ್ಜೆ ಹಾಕುತ್ತಿದ್ದಂತೆ ಗ್ರಾಮೀಣ ಬೆಸ್ತರ ಕುಟುಂಬ ವಾಸಿಸುವುದು ಕಂಡುಬಂತು. ಅದಾದ ಬಳಿಕ ಲಂಬಾಣಿ ಮಹಿಳೆಯೊಬ್ಬಳು ಕಾಡಿನಿಂದ ಕಟ್ಟಿಗೆ ಹೊತ್ತು ತರುತ್ತಿರುವುದು ಹಾಗೂ ಆಕೆಯ ಕುಟುಂಬದ ಚಿತ್ರಣ ಕಣ್ಮುಂದೆ ಬರುತ್ತದೆ. ಅದಾದ ಬಳಿಕ ಚಮ್ಮಾರನ ಮನೆ ಕಾಣಿಸುತ್ತದೆ. ಅಲ್ಲಿ ಆತ ಚರ್ಮ ಹದ ಮಾಡಿ ಚಪ್ಪಲಿ ತಯಾರಿಸಲು ಅಣಿಯಾಗುತ್ತಿರುವುದು ಕಂಡುಬರುತ್ತದೆ.

ಗ್ರಾಮವೆಂದರೆ ಕೆಸರು ಕೊಚ್ಚೆ ಇದ್ದದ್ದೇ. ಅಲ್ಲಿ ಹಂದಿಗಳು ಆಹಾರ ಹುಡುಕುತ್ತಿರುವುದು ಕಂಡುಬರುತ್ತದೆ. ಇದು ಕಲಾವಿದನ ನೈಜ ಗ್ರಾಮ ಕಲ್ಪನೆಯನ್ನು ಬಿಂಬಿಸುತ್ತದೆ.

ಕೃಷಿಕರ ವೈವಿಧ್ಯಮಯ ಚಟುವಟಿಕೆ

IMG_3937

ಗ್ರಾಮ್ಯ ಚಟುವಟಿಕೆಯಿಂದ ಈಗ ಕೃಷಿ ಚಟುವಟಿಕೆಗಳನ್ನು ಗಮನಿಸುವ ಸಮಯ. ಅಲ್ಲಿ ರೈತರು ತಮ್ಮ ಹೊಲಗಳಲ್ಲಿ ಬೀಜ ಬಿತ್ತನೆ, ರಂಟೆ ಹೊಡೆಯುವುದು, ಕುಂಟೆ ಹೊಡೆಯುವಂತಹ ದೃಶ್ಯಗಳು ಕಂಡುಬರುತ್ತವೆ. ಇನ್ನೊಂದು ಕಡೆ ಹುಡುಗಿಯೊಬ್ಬಳು ತನ್ನ ಬಂಧುಬಾಂಧವರಿಗೆ ಬುತ್ತಿಯ ಬುಟ್ಟಿ ಹೊತ್ತು ತರುತ್ತಿರುವ ದೃಶ್ಯ ಕೃಷಿ ಕುಟುಂಬವೊಂದರ ಚಿತ್ರಣವನ್ನು ಕಣ್ಮುಂದೆ ತರುತ್ತದೆ.

ಇನ್ನೊಂದು ಬದಿಯಲ್ಲಿ ಮೇಟಿಯ ಸುತ್ತ ತಿರುಗುತ್ತ ನಾಲ್ಕು ಎತ್ತುಗಳು ಕಣ ಮಾಡುತ್ತಿರುವುದು ಕಂಡುಬರುತ್ತದೆ. ಅಲ್ಲಿಯೇ ನೊಗದ ಅತ್ತ ಇತ್ತ ಚಿಕ್ಕ ಮಕ್ಕಳಿಬ್ಬರು ಆಟದಲ್ಲಿ ಮಗ್ನರಾಗಿರುವುದು ಕಂಡುಬರುತ್ತದೆ.

ಊರ ಸಂತೆ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಊರಿನ ಹೊರಭಾಗದಲ್ಲಿ ಸೇರಿರುವುದು ಕಂಡುಬರುತ್ತದೆ. ಅಲ್ಲಿ ಬಗೆಬಗೆಯ ಹಣ್ಣು ತರಕಾರಿಗಳು, ಒಣ ಪದಾರ್ಥಗಳನ್ನು ಮಾರುವುದರಲ್ಲಿ ಮಗ್ನರಾಗಿದ್ದಾರೆ. ಅದು ನೈಜ ಮಾರುಕಟ್ಟೆಯಂತೆಯೇ ಭಾಸವಾಗುತ್ತದೆ.

ಜಾನುವಾರು ಸಂತೆ

ತರಕಾರಿ ಮಾರುಕಟ್ಟೆಯ ಎದುರು ಬದಿಯಲ್ಲಿ ಜಾನುವಾರುಗಳ ಸಂತೆಯ ವೈಭದ ದೃಶ್ಯ ಕಣ್ಣಿಗೆ ಬೀಳುತ್ತದೆ. ರಾಜ್ಯದಲ್ಲಿ ಹೋರಿ ಎತ್ತುಗಳಲ್ಲಿ ಎಷ್ಟು ಪ್ರಭೇದಗಳಿವೆಯೋ ಅಷ್ಟು ಬಗೆಯ ಜಾತಿಯ ಹೋರಿಗಳನ್ನು ಇಲ್ಲಿ ಕಾಣಬಹುದು. ರೈತರು, ದಲ್ಲಾಳಿಗಳು ಅವರ ನೈಜ ವೇಷ, ಮುಸುಕಿನಡಿ ವ್ಯಾಪಾರ ಕುದುರಿಸುತ್ತಿರುವ ದೃಶ್ಯ ನೋಡುಗರನ್ನು ಬೆರಗುಗೊಳ್ಳುವಂತೆ ಮಾಡುತ್ತದೆ.

ಕುಸ್ತಿ ಮೈದಾನ

ಊರಿನಲ್ಲಿ  ಹಾಲು ಜೇನು ಯಥೇಚ್ಛವಾಗಿರುವುದರಿಂದ ಅಲ್ಲಿ ಅನೇಕ ಪೈಲ್ವಾನರು ಇದ್ದೇ ಇರುತ್ತಾರೆ. ಅವರಿಗಾಗಿ ವರ್ಷದ ನಿರ್ದಿಷ್ಟ ದಿನಗಳಂದು ಕುಸ್ತಿ ಸ್ಪರ್ಧೆಗಳು ಆಯೋಜಿಸಲ್ಪಡುತ್ತವೆ. ಬೃಹತ್‌ ಮೈದಾನದಲ್ಲಿ ಎರಡು ಜೋಡಿಗಳು ಕುಸ್ತಿಯಲ್ಲಿ ಮಗ್ನರಾಗಿರುವುದು, ಆ ದೃಶ್ಯ ನೋಡಲು ಅಸಂಖ್ಯ ಜನ ಅಲ್ಲಿ ಸೇರಿರುವುದು ನೋಡುರಿಗೆ ನಾವು ನಿಜವಾಗಿಯೂ ಕುಸ್ತಿ ಮೈದಾನದಲ್ಲಿಯೇ ಇದ್ದೇವೆ ಎಂಬಂತೆ ಭಾಸವಾಗುತ್ತದೆ.

ರಂಗ ಚಟುವಟಿಕೆ

IMG_3935

ಇದು ಕೊನೆಯ ಸುತ್ತಿನ ವೀಕ್ಷಣೆಯ ಸಮಯ. ಇದು ಅಖಂಡ ಕರ್ನಾಟಕ ಸಾಂಸ್ಕೃತಿಕ ವೈಭವವನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಈ ವಿಭಾಗದಲ್ಲಿ ಕರಡಿ ಮಜಲು, ಗೀಗೀ ಪದ, ಯಕ್ಷಗಾನ, ಕಿನ್ನರಿಜೋಗಿ, ಗೊಂದಲಿಗರು, ಬುರ್ರಕಥಾ, ಕೊರಗರ ಕುಣಿತ, ಬಹುರೂಪಿಗಳು, ಗೌಳಿಗರ ಕುಣಿತ, ಕಂಸಾಳೆ, ಹುತ್ತರಿ ಕುಣಿತ, ಹುಲಿವೇಷ ಹೀಗೆ ವೈವಿಧ್ಯಮಯ ಕಲೆಗಳನ್ನು ಪ್ರದರ್ಶಿಸುವವರ ಸಮೂಹ ಕಂಡುಬರುತ್ತದೆ.

ಆ ವಿಭಾಗದಿಂದ ಹೊರ ಬರುತ್ತಿದ್ದಂತೆ ರಂಗಮಂದಿರವೊಂದು ಕಂಡುಬರುತ್ತದೆ. ಅದು ನೈಜ ರಂಗಮಂದಿರ ಹೌದು. ಮಾದರಿ ಪಾರಂಪರಿಕ ಗ್ರಾಮದ ಉದ್ಘಾಟನೆ ಸಮಾರಂಭ ನಡೆದದ್ದು ಅಲ್ಲಿಯೇ. ರಂಗಮಂದಿರದ ಅಂಚಿನವರೆಗೆ ಅದರ ನಿರ್ವಹಣೆಗಾಗಿ ಹಲವು ಕುಟುಂಬಗಳು ವಾಸವಿದ್ದು, ಅವರ ಚಟುವಟಿಕೆಯನ್ನು ಶಿಲ್ಪಕಲೆಯಲ್ಲಿ ದಾಖಲಿಸಿರುವುದು ಕಲಾವಿದರ ಕಲ್ಪನೆ ಎಷ್ಟು ಅಗಾಧ ಎನ್ನುವುದನ್ನು ತೋರಿಸುತ್ತದೆ. ರಂಗಮಂದಿರದ ಹೊರಭಾಗದಲ್ಲಿ ಯಕ್ಷಗಾನ, ಆಟಿಕಳಂಜ, ಪಾರಿಜಾತ, ಕಾಡುಗೊಲ್ಲರು, ಕಣಿಪದ ಹೇಳುವವರು, ಜೋಗತಿ, ಚೌಡಕಿ ಪದ ಹೇಳುವವರು ತಮ್ಮ ವಿಶಿಷ್ಟ ವೇಷಭೂಷಣದಲ್ಲಿ ಕಂಡುಬರುತ್ತಾರೆ.

ಹೊರಭಾಗದ ಉದ್ಯಾನವನದಲ್ಲಿ ಡೋಲು ಬಾರಿಸುವವರು ಸೇರಿದಂತೆ ವಿವಿಧ ವಾದ್ಯ ನುಡಿಸುವವರ ಶಿಲಾ ಪ್ರತಿಮೆಗಳು ಕಂಡುಬರುತ್ತವೆ. ಅಲ್ಲಿಯ ಇನ್ನೊಂದು ಆಕರ್ಷಣೆ ಎಂದರೆ ಗರ್ದಿಗಮತ್ತು ತೋರಿಸುವ ಕಲಾವಿದನ ಪ್ರತಿಮೆ. ಅದರ ಮುಂದೆ ಮಕ್ಕಳು ಉತ್ಸಾಹದಿಂದ ವೀಕ್ಷಿಸುತ್ತಿರುವುದು ಕಂಡುಬರುತ್ತದೆ.

ಕಂಬಳಕ್ಕೊಂದು ಗದ್ದೆ

ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ `ಕಂಬಳ’ಕ್ಕಾಗಿಯೇ ಒಂದು ವಿಶಿಷ್ಟ ಗದ್ದೆಯನ್ನು ಇಲ್ಲಿ ಸೃಷ್ಟಿಸಲಾಗಿದೆ. ಅಲ್ಲಿ ದಷ್ಟಪುಷ್ಟವಾಗಿ ಕೋಣಗಳನ್ನು ಓಡಿಸುತ್ತಿರುವ ಉತ್ಸಾಹಿ ಯುವಕನನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಬೃಹತ್‌ ದಂಡೇ ಅಲ್ಲಿ ಸೇರಿದೆ. ಈ ದೃಶ್ಯ ವೈಭವ ನೋಡಿದಾಗ ಶಿಲ್ಪ ಕಲಾವಿದರ ಅದ್ಭುತ ಕೈಚಳಕ ಬೆರಗು ಮೂಡಿಸುತ್ತದೆ.

ವಿಶಿಷ್ಟ ಯೋಜನೆ

IMG_3920

ಈ ಮಾದರಿ ಪಾರಂಪರಿಕ ಗ್ರಾಮ ನಿರ್ಮಾಣವಾಗಲು 3 ವರ್ಷ ತಗುಲಿದೆ. ಇಲ್ಲಿರುವ ಸಾವಿರಾರು ಪ್ರತಿಮೆಗಳನ್ನು ಅದೆಷ್ಟೋ ಕಲಾವಿದರು ಎಷ್ಟೊಂದು ತಾಳ್ಮೆಯಿಂದ ಸೃಷ್ಟಿಸಿದ್ದಾರೆ ಎನ್ನುವುದು ಅರಿವಿಗೆ ಬರುತ್ತದೆ. ಇಲ್ಲಿರುವ ಪ್ರತಿಯೊಂದು ಪ್ರತಿಮೆಗಳು ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿ ನಿರ್ಮಾಣವಾಗಿವೆ. ಅಲ್ಲಿಂದ ಟ್ರಕ್‌ಗಳಲ್ಲಿ ಜೋಪಾನವಾಗಿ ಇಲ್ಲಿಗೆ ಸಾಗಿಸಲಾಗಿದೆ.

ಕುಂಬಾರ, ಕಮ್ಮಾರ, ಮೇದಾರ ಮುಂತಾದವರ ಪ್ರತಿಮೆಗಳನ್ನು ಮೊದಲು ನಿರ್ದಿಷ್ಟ ಸ್ಥಾನದಲ್ಲಿಟ್ಟು ಬಳಿಕ ಮನೆ ನಿರ್ಮಾಣ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಮನೆ ಕಟ್ಟಿದ ಬಳಿಕ ಒಳಗೆ ಅವನ್ನು ಕ್ರೇನ್‌ ಮೂಲಕ ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ.

ಪಾರಂಪರಿಕ ಗ್ರಾಮದ ಪ್ರತಿಯೊಂದು ಮನೆಗೂ ಬೇಕಾದ ಚೌಕಟ್ಟುಗಳು, ಬಾಗಿಲಗಳ ಕಂಬಗಳು, ತೊಲೆಗಳು, ಫೋಟೋಗಳನ್ನು ಸಂಗ್ರಹಿಸಿ ಇಲ್ಲಿ ಅಳವಡಿಸಿರುವುದರಿಂದ ಗ್ರಾಮ ಪರಂಪರೆಗೆ ಹೆಚ್ಚು ಮೆರುಗು ಕೊಡುತ್ತದೆ.

ಬೆಂಗಳೂರು ಆಸುಪಾಸಿನವರು, ಬೆಂಗಳೂರಿಗೆ ಪ್ರವಾಸಕ್ಕೆಂದು ಬರುವವರು ನೋಡಲೇಬೇಕಾದ ಅದ್ಭುತ ಪ್ರವಾಸಿ ತಾಣವಿದು.

ಹೇಗೆ ತಲುಪುವುದು?

IMG_3911

ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ, ಕೆ.ಆರ್‌. ಮಾರುಕಟ್ಟೆ, ಶಿವಾಜಿನಗರ ಮುಂತಾದ ಕಡೆಯಿಂದ ಯಲಹಂಕ ಕಡೆ ಸಂಚರಿಸುವ ಬಿಎಂಟಿಸಿ ಬಸ್ಸಿನಲ್ಲಿ ಹತ್ತಿ ಬ್ಯಾಟರಾಯನಪುರ ನಿಲುಗಡೆಯಲ್ಲಿ ಇಳಿದು, ಅಮೃತಹಳ್ಳಿ ರಸ್ತೆಯ ಕಡೆ ಬಂದು ಅಲ್ಲಿಂದ ಆಟೋದಲ್ಲಿ ಶ್ರೀರಾಮಪುರ ಕ್ರಾಸ್‌ನಲ್ಲಿ ಇಳಿದರೆ ನಿಮಗೆ `ಮಾದರಿ ಪಾರಂಪರಿಕ ಗ್ರಾಮ’ ಸಿಗುತ್ತದೆ.

– ಅಶೋಕ ಚಿಕ್ಕಪರಪ್ಪಾ

ಬೆಂಕಿ ಜ್ವಾಲೆಯ ಎಫೆಕ್ಟ್ ರೈತ ಕುಟುಂಬವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಕುಟುಂಬದವರಿಗಾಗಿ ರೊಟ್ಟಿ ಬಡಿಯುತ್ತಿರುವ ದೃಶ್ಯ, ಅದನ್ನು ತಲೆಯ ಮೇಲೆ ಸುಡುವ ದೃಶ್ಯ ಕಲಾವಿದನ ಜಾಣ್ಮೆಯನ್ನು ತೋರಿಸುತ್ತದೆ. ಬೆಂಕಿ ಜ್ವಾಲೆಯ ಎಫೆಕ್ಟ್ ನ್ನು ನೈಜ ಎನ್ನುವ ರೀತಿಯಲ್ಲಿ ಬೆಳಕಿನ ವಿನ್ಯಾಸದಲ್ಲಿ ತೋರಿಸಲಾಗಿದೆ.

ಅದೇ ರೀತಿ ಕಮ್ಮಾರನ ಕುಲುವೆಯ ದೃಶ್ಯವನ್ನು ತೋರಿಸಲಾಗಿದೆ. ಕಮ್ಮಾರ ಕಬ್ಬಿಣ ಕಾಯಿಸುತ್ತಿದ್ದಾಗ. ಅವನ ಮಗ ತಿದಿ ಒತ್ತುತ್ತಿರುವ ದೃಶ್ಯ ಅತ್ಯಂತ ನೈಜ ಎಂಬಂತೆ ಭಾಸವಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ