ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರೂ ಮುಂದಿಟ್ಟ ಹೆಜ್ಜೆ ಹಿಂದಿಡಲು ಒಪ್ಪದೆ ದಿಟ್ಟತನದಿಂದ ಮುಂದೆ ಸಾಗಿ `ಯಶಸ್ವಿ ಮಹಿಳಾ ಉದ್ಯಮಿ' ಎನಿಸಿಕೊಂಡು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ನಿಜಕ್ಕೂ ಅಸಾಧಾರಣ ಸಾಧನೆಯೇ ಹೌದು. ಅಂತಹ ಅಪರೂಪದ ಸಾಧನೆ ಮಾಡಿದವರು ಸ್ನೇಹಾ ರಾಕೇಶ್.
ಸ್ನೇಹಾ ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನವರು. ತಾತನ ಆಶ್ರಯದಲ್ಲಿ ಬೆಳೆದ ಅವರು ಎಸ್.ಎಸ್.ಎಲ್.ಸಿ ತನಕ ಓದಿದ್ದು ಸರ್ಕಾರಿ ವಸತಿ ಶಾಲೆಯಲ್ಲಿ, ಅದೂ ಕೂಡ ಕನ್ನಡ ಮಾಧ್ಯಮದಲ್ಲಿ.ಉದ್ಯೋಗಕ್ಕಾಗಿ ಬೆಂಗಳೂರಿಗೆ ಶಿಕ್ಷಣ ಒಂದು ಹಂತಕ್ಕೆ ಬಂದ ಬಳಿಕ ಜೀವನೋಪಾಯಕ್ಕೆಂದು ಸ್ನೇಹಾ ಬೆಂಗಳೂರಿಗೆ ಬರುತ್ತಾರೆ. ಇಂಗ್ಲಿಷ್ ಬಾರದೇ ಇರುವುದು ಅವರ ಮುಂದಿನ ದಾರಿಗೆ ಅಡಚಣೆಯಾಗಿ ಪರಿಣಮಿಸುತ್ತದೆ. ಆ ತೊಡಕನ್ನು ನಿವಾರಿಸಿಕೊಂಡು ಇಂಗ್ಲಿಷ್ ಕರಗತ ಮಾಡಿಕೊಂಡು ಚಿಕ್ಕಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ.
ಸ್ನೇಹಿತರು ಎಂಜಿನಿಯರಿಂಗ್ ಶಿಕ್ಷಣ ಮುಂದುವರಿಸಿರುವುದು ಸ್ನೇಹಾ ಅವರಲ್ಲಿ ತಾನೂ ಶಿಕ್ಷಣ ಮುಂದುವರಿಸಬೇಕೆಂಬ ತುಡಿತ ಹೆಚ್ಚುವಂತೆ ಮಾಡುತ್ತದೆ. ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆಯಿತ್ತು. ಉದ್ಯೋಗದ ಜೊತೆ ಜೊತೆಗೆ ಶಿಕ್ಷಣ ಎಂಬ ಧ್ಯೇಯವನ್ನಿಟ್ಟುಕೊಂಡು ಸ್ನೇಹಾ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಮಾಡಲು ಸಂಜೆ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾರೆ. ಅದು ನಿಜಕ್ಕೂ ಸಂದಿಗ್ಧ ಸಮಯವೇ ಹೌದು. ವಿಶ್ರಾಂತಿಯಿಲ್ಲದೆ ಎರಡಕ್ಕೂ ನ್ಯಾಯ ಒದಗಿಸಬೇಕಾದ ಸ್ಥಿತಿಯಿತ್ತು. ಆದರೆ ಪರೀಕ್ಷೆ ಬಂದಾಗ ಕಂಪನಿಗಳಿಂದ ರಜೆ ಸಿಗದೇ ಸಮಸ್ಯೆಯಾಗುತ್ತಿತ್ತು. ಅಂತಹ ಸ್ಥಿತಿಯಲ್ಲಿ ಉದ್ಯೋಗ ತೊರೆದು ಓದಿನಲ್ಲಿ ಮಗ್ನರಾಗಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸುತ್ತಿದ್ದರು.
ಪರೀಕ್ಷೆ ಮುಗಿದ ಬಳಿಕ ಪುನಃ ಉದ್ಯೋಗದ ಬೇಟೆ ಶುರುವಾಗುತ್ತಿತ್ತು. ಹೀಗೆ ಅನೇಕ ಸಲ ಪುನರಾವರ್ತನೆಯಾಯಿತು. ಕೊನೆಗೆ ಪರಿಸ್ಥಿತಿ ಹೇಗಾಗಿಬಿಟ್ಟಿತೆಂದರೆ, ``ನೀವು ಪದೇ ಪದೇ ಕಂಪನಿಗಳನ್ನು ಬದಲಿಸುತ್ತಿದ್ದೀರಿ, ನಿಮಗೆ ಅನುಭವ ಎಲ್ಲಿಂದ ಬರುತ್ತೆ? ಹೀಗಾಗಿ ನಿಮ್ಮನ್ನು ನಮ್ಮ ಕಂಪನಿಗೆ ಸೇರಿಸಿಕೊಳ್ಳುವುದು ಕಷ್ಟ,'' ಎಂದು ಹೇಳತೊಡಗಿದರು.
ಉದ್ಯೋಗ ನಿರಾಕರಣೆಯೇ....ಅವರ ಬಳಿ ಕೆಲಸ ಮಾಡಬೇಕೆನ್ನುವ ತುಡಿತ, ಛಲವೇನೊ ಇತ್ತು. ಆದರೆ ಕಂಪನಿಗಳು ಹೀಗೆ ಉದ್ಯೋಗ ನಿರಾಕರಣೆ ಮಾಡುತ್ತಿರುವುದು ಅವರಲ್ಲಿ ತಾವೇ ಸ್ವತಃ ಕೆಲಸ ಶುರು ಮಾಡಬೇಕೆಂಬ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಮಾಡುತ್ತದೆ.
ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸಾಕಷ್ಟು ಪಳಗಿದ್ದ ಸ್ನೇಹಾ ಫ್ರೀಲಾನ್ಸ್ ಆಗಿ ಪ್ರಾಜೆಕ್ಟ್ ಮಾಡಿಕೊಡಲು ಶುರು ಮಾಡುತ್ತಾರೆ. ಅದರಲ್ಲಿನ ಯಶಸ್ಸು ಅವರಿಗೆ ಮತ್ತಷ್ಟು ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರುವಂತೆ ಮಾಡುತ್ತದೆ. ಇದೇ ಮುಂದೆ ತಮ್ಮದೇ ಆದ ಕಂಪನಿ ಆರಂಭಿಸಲು ಪ್ರೇರಣೆಯಾಗುತ್ತದೆ.
2012ರಲ್ಲಿ `ವಿ ಕ್ರಿಯೇಟ್ ಸಾಫ್ಟ್ ವೇರ್ ಸಲ್ಯೂಷನ್' ಹೆಸರನಲ್ಲಿ ಕಂಪನಿ ಶುರು ಮಾಡುತ್ತಾರೆ. ಅದಕ್ಕೆ ಯಶಸ್ಸು ದೊರೆಯುತ್ತಿದ್ದಂತೆ 2015ರಲ್ಲಿ ಕಂಪನಿಯ ಹೆಸರನ್ನು `ಆಕರ್ ಮ್ಯಾಕ್ಸ್' ಎಂದು ಬದಲಿಸುತ್ತಾರೆ. ಅಲ್ಲಿಂದ ಅವರ ಯಶಸ್ಸಿನ ಪಯಣ ಭಾರತದಿಂದ ಹೊರಗೂ ಸಾಗುತ್ತದೆ. ಸಿಂಗಪೂರ್, ದುಬೈ, ಯು.ಕೆ., ಬೆಲ್ಜಿಯಂ ದೇಶಗಳಲ್ಲೂ ಆಕರ್ ಮ್ಯಾಕ್ಸ್ ನ ರೆಕ್ಕೆ ಪಸರಿಸಿದ್ದು ಇದೀಗ ಯೂರೋಪ್‌ನಲ್ಲೂ ತಮ್ಮ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಯುತ್ತಿದೆ.