ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರೂ ಮುಂದಿಟ್ಟ ಹೆಜ್ಜೆ ಹಿಂದಿಡಲು ಒಪ್ಪದೆ ದಿಟ್ಟತನದಿಂದ ಮುಂದೆ ಸಾಗಿ `ಯಶಸ್ವಿ ಮಹಿಳಾ ಉದ್ಯಮಿ’ ಎನಿಸಿಕೊಂಡು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ನಿಜಕ್ಕೂ ಅಸಾಧಾರಣ ಸಾಧನೆಯೇ ಹೌದು. ಅಂತಹ ಅಪರೂಪದ ಸಾಧನೆ ಮಾಡಿದವರು ಸ್ನೇಹಾ ರಾಕೇಶ್.
ಸ್ನೇಹಾ ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನವರು. ತಾತನ ಆಶ್ರಯದಲ್ಲಿ ಬೆಳೆದ ಅವರು ಎಸ್.ಎಸ್.ಎಲ್.ಸಿ ತನಕ ಓದಿದ್ದು ಸರ್ಕಾರಿ ವಸತಿ ಶಾಲೆಯಲ್ಲಿ, ಅದೂ ಕೂಡ ಕನ್ನಡ ಮಾಧ್ಯಮದಲ್ಲಿ.ಉದ್ಯೋಗಕ್ಕಾಗಿ ಬೆಂಗಳೂರಿಗೆ ಶಿಕ್ಷಣ ಒಂದು ಹಂತಕ್ಕೆ ಬಂದ ಬಳಿಕ ಜೀವನೋಪಾಯಕ್ಕೆಂದು ಸ್ನೇಹಾ ಬೆಂಗಳೂರಿಗೆ ಬರುತ್ತಾರೆ. ಇಂಗ್ಲಿಷ್ ಬಾರದೇ ಇರುವುದು ಅವರ ಮುಂದಿನ ದಾರಿಗೆ ಅಡಚಣೆಯಾಗಿ ಪರಿಣಮಿಸುತ್ತದೆ. ಆ ತೊಡಕನ್ನು ನಿವಾರಿಸಿಕೊಂಡು ಇಂಗ್ಲಿಷ್ ಕರಗತ ಮಾಡಿಕೊಂಡು ಚಿಕ್ಕಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡಲು ಶುರು ಮಾಡುತ್ತಾರೆ.
ಸ್ನೇಹಿತರು ಎಂಜಿನಿಯರಿಂಗ್ ಶಿಕ್ಷಣ ಮುಂದುವರಿಸಿರುವುದು ಸ್ನೇಹಾ ಅವರಲ್ಲಿ ತಾನೂ ಶಿಕ್ಷಣ ಮುಂದುವರಿಸಬೇಕೆಂಬ ತುಡಿತ ಹೆಚ್ಚುವಂತೆ ಮಾಡುತ್ತದೆ. ಹೊಟ್ಟೆಪಾಡಿಗಾಗಿ ಉದ್ಯೋಗ ಮಾಡಲೇಬೇಕಾದ ಅನಿವಾರ್ಯತೆಯಿತ್ತು. ಉದ್ಯೋಗದ ಜೊತೆ ಜೊತೆಗೆ ಶಿಕ್ಷಣ ಎಂಬ ಧ್ಯೇಯವನ್ನಿಟ್ಟುಕೊಂಡು ಸ್ನೇಹಾ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಮಾಡಲು ಸಂಜೆ ಕಾಲೇಜೊಂದಕ್ಕೆ ಸೇರಿಕೊಳ್ಳುತ್ತಾರೆ. ಅದು ನಿಜಕ್ಕೂ ಸಂದಿಗ್ಧ ಸಮಯವೇ ಹೌದು. ವಿಶ್ರಾಂತಿಯಿಲ್ಲದೆ ಎರಡಕ್ಕೂ ನ್ಯಾಯ ಒದಗಿಸಬೇಕಾದ ಸ್ಥಿತಿಯಿತ್ತು. ಆದರೆ ಪರೀಕ್ಷೆ ಬಂದಾಗ ಕಂಪನಿಗಳಿಂದ ರಜೆ ಸಿಗದೇ ಸಮಸ್ಯೆಯಾಗುತ್ತಿತ್ತು. ಅಂತಹ ಸ್ಥಿತಿಯಲ್ಲಿ ಉದ್ಯೋಗ ತೊರೆದು ಓದಿನಲ್ಲಿ ಮಗ್ನರಾಗಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸುತ್ತಿದ್ದರು.
ಪರೀಕ್ಷೆ ಮುಗಿದ ಬಳಿಕ ಪುನಃ ಉದ್ಯೋಗದ ಬೇಟೆ ಶುರುವಾಗುತ್ತಿತ್ತು. ಹೀಗೆ ಅನೇಕ ಸಲ ಪುನರಾವರ್ತನೆಯಾಯಿತು. ಕೊನೆಗೆ ಪರಿಸ್ಥಿತಿ ಹೇಗಾಗಿಬಿಟ್ಟಿತೆಂದರೆ, “ನೀವು ಪದೇ ಪದೇ ಕಂಪನಿಗಳನ್ನು ಬದಲಿಸುತ್ತಿದ್ದೀರಿ, ನಿಮಗೆ ಅನುಭವ ಎಲ್ಲಿಂದ ಬರುತ್ತೆ? ಹೀಗಾಗಿ ನಿಮ್ಮನ್ನು ನಮ್ಮ ಕಂಪನಿಗೆ ಸೇರಿಸಿಕೊಳ್ಳುವುದು ಕಷ್ಟ,” ಎಂದು ಹೇಳತೊಡಗಿದರು.
ಉದ್ಯೋಗ ನಿರಾಕರಣೆಯೇ….ಅವರ ಬಳಿ ಕೆಲಸ ಮಾಡಬೇಕೆನ್ನುವ ತುಡಿತ, ಛಲವೇನೊ ಇತ್ತು. ಆದರೆ ಕಂಪನಿಗಳು ಹೀಗೆ ಉದ್ಯೋಗ ನಿರಾಕರಣೆ ಮಾಡುತ್ತಿರುವುದು ಅವರಲ್ಲಿ ತಾವೇ ಸ್ವತಃ ಕೆಲಸ ಶುರು ಮಾಡಬೇಕೆಂಬ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಮಾಡುತ್ತದೆ.
ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸಾಕಷ್ಟು ಪಳಗಿದ್ದ ಸ್ನೇಹಾ ಫ್ರೀಲಾನ್ಸ್ ಆಗಿ ಪ್ರಾಜೆಕ್ಟ್ ಮಾಡಿಕೊಡಲು ಶುರು ಮಾಡುತ್ತಾರೆ. ಅದರಲ್ಲಿನ ಯಶಸ್ಸು ಅವರಿಗೆ ಮತ್ತಷ್ಟು ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರುವಂತೆ ಮಾಡುತ್ತದೆ. ಇದೇ ಮುಂದೆ ತಮ್ಮದೇ ಆದ ಕಂಪನಿ ಆರಂಭಿಸಲು ಪ್ರೇರಣೆಯಾಗುತ್ತದೆ.
2012ರಲ್ಲಿ `ವಿ ಕ್ರಿಯೇಟ್ ಸಾಫ್ಟ್ ವೇರ್ ಸಲ್ಯೂಷನ್’ ಹೆಸರನಲ್ಲಿ ಕಂಪನಿ ಶುರು ಮಾಡುತ್ತಾರೆ. ಅದಕ್ಕೆ ಯಶಸ್ಸು ದೊರೆಯುತ್ತಿದ್ದಂತೆ 2015ರಲ್ಲಿ ಕಂಪನಿಯ ಹೆಸರನ್ನು `ಆಕರ್ ಮ್ಯಾಕ್ಸ್’ ಎಂದು ಬದಲಿಸುತ್ತಾರೆ. ಅಲ್ಲಿಂದ ಅವರ ಯಶಸ್ಸಿನ ಪಯಣ ಭಾರತದಿಂದ ಹೊರಗೂ ಸಾಗುತ್ತದೆ. ಸಿಂಗಪೂರ್, ದುಬೈ, ಯು.ಕೆ., ಬೆಲ್ಜಿಯಂ ದೇಶಗಳಲ್ಲೂ ಆಕರ್ ಮ್ಯಾಕ್ಸ್ ನ ರೆಕ್ಕೆ ಪಸರಿಸಿದ್ದು ಇದೀಗ ಯೂರೋಪ್‌ನಲ್ಲೂ ತಮ್ಮ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಯುತ್ತಿದೆ.
ನಿರಾಕರಣೆಯೇ ಛಲಕ್ಕೆ ಕಾರಣ
ಪರೀಕ್ಷೆಯ ಕಾರಣದಿಂದ ಸ್ನೇಹಾ ಕಂಪನಿಗಳನ್ನು ಬದಲಿಸಬೇಕಾಗಿತ್ತು. ಆ ಬಳಿಕ ಪುನಃ ಉದ್ಯೋಗಕ್ಕಾಗಿ ಹುಡುಕಾಟ ನಡೆಯುತ್ತಿತ್ತು. ಪದೇ ಪದೇ ಕಂಪನಿಗಳನ್ನು ಬದಲಿಸುವ ಸ್ನೇಹಾರ ನಿರ್ಧಾರಕ್ಕೆ ಕಂಪನಿಗಳು ಉದ್ಯೊಗ ಕೊಡಲು ನಿರಾಕರಿಸತೊಡಗಿದವು. ಆ ನಿರಾಕರಣೆಯೇ ತನಗೆ ಸ್ವಂತ ಕಂಪನಿ ಸ್ಥಾಪನೆ ಮಾಡಲು ಕಾರಣವಾಯಿತು ಎಂದು ಅವರು ಹೇಳುತ್ತಾರೆ.
ಪ್ರತಿಭಾ ಶೋಧನೆ ಯಶಸ್ಸು, ಕೀರ್ತಿ, ಪ್ರಶಸ್ತಿಗೆ ಹಿಗ್ಗದೆ ತಮ್ಮ ಪಾಡಿಗೆ ತಾವು ಸಹೋದ್ಯೋಗಿಗಳ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವ ಪ್ರವೃತ್ತಿ ಸ್ನೇಹಾ ಅವರನ್ನು ಹಿಂದೆ ತಾವು ಸಾಗಿ ಬಂದ ದಾರಿಯನ್ನೆಂದೂ ಮರೆಯದೆ, ಆರ್ಥಿಕವಾಗಿ ಹಿಂದುಳಿದ, ಪ್ರತಿಭಾವಂತ ಯುವಜನತೆಗೆ ಕಂಪ್ಯೂಟರ್ ವಿಜ್ಞಾನದ ಹಲವು ಮಜಲುಗಳ ಬಗ್ಗೆ ಉಚಿತವಾಗಿ ತರಬೇತಿ ನೀಡುವುದರ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮತ್ತು ದುಡಿಯುವ ಛಲ ಮೂಡಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು `ಸಮಗ್ರಾಭಿವೃದ್ಧಿ ಟ್ರಸ್ಟ್’ ಆರಂಭಿಸಿದ್ದಾರೆ. ಈ ಟ್ರಸ್ಟ್ ಮೂಲಕ ಈತನಕ ತರಬೇತಿ ಪಡೆದವರ ಸಂಖ್ಯೆ 3000 ಕ್ಕಿಂತ ಹೆಚ್ಚು.
ಯೂರೋಪ್ ಸಂಸತ್ತಿನಲ್ಲಿ ಮಾತಾಡಿದಾಗ ಯುವ ಜನತೆಗೆ ಉಚಿತ ತರಬೇತಿ ಮೂಲಕ ಸ್ವಾವಲಂಬನೆಯ ದಾರಿ ಸುಗಮಗೊಳಿಸುತ್ತಿರುವ ಸ್ನೇಹಾರ ಪ್ರಯತ್ನಕ್ಕೆ ಹತ್ತು ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಯೂರೋಪ್ ಸಂಸತ್‌ನಲ್ಲಿ ಮಾತಾಡುವ ಅಪೂರ್ವ ಅವಕಾಶ ಅವರಿಗೆ ಸಿಕ್ಕಿತ್ತು. ಅದು ಅವರಿಗೆ ಅಲ್ಲಿ ಮಾತನಾಡಿದ ಪ್ರಥಮ ಕನ್ನಡ ಮಹಿಳೆ ಎಂಬ ಹೆಮ್ಮೆಯ ಕಿರೀಟವನ್ನು ಮುಡಿಸಿತು. ಈ ಒಂದು ದಾಖಲೆ ಜನರಲ್ ನಾಲೆಜ್ ಪುಸ್ತಕಗಳಲ್ಲೂ ದಾಖಲಾದದ್ದು ಸ್ನೇಹಾರಿಗೆ ಹೆಮ್ಮೆಯ ವಿಷಯವೆನಿಸುತ್ತದೆ.
ಪ್ರಶಸ್ತಿ ಎಂದರೆ ಜವಾಬ್ದಾರಿ
ಸಾಲು ಸಾಲು ಪ್ರಶಸ್ತಿಗಳು ಸ್ನೇಹಾರನ್ನು ಹುಡುಕಿಕೊಂಡು ಬಂದವು. ಆ ಬಗ್ಗೆ ಕೇಳಿದರೆ ಅವರು ಖುಷಿಯಿಂದ ಪುಳಕಿತರಾಗುವುದಿಲ್ಲ, `ಅವು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ, ಗುಣಮಮಟ್ಟದ ಕೆಲಸ ಮಾಡು ಎಂದು ಸೂಚಿಸುತ್ತವೆ,’ ಎನ್ನುತ್ತಾರೆ ಸ್ನೇಹಾ.
ಪ್ರಶಸ್ತಿಗಳು ಬಂದ ಬಳಿಕವೇ ನನಗೆ ನನ್ನ ಜೀವನವನ್ನು ಮತ್ತಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು ಎಂದೂ ಸ್ನೇಹಾ ಹೇಳುತ್ತಾರೆ.
ಪ್ರೇರಣಾಸ್ಪದ ದಂಪತಿಗಳು
`ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯವರು ಕಷ್ಟದ ಹಿನ್ನೆಲೆಯಿಂದ ಬಂದು ಬಹುದೊಡ್ಡ ಕಂಪನಿಯೊಂದನ್ನು ಹುಟ್ಟುಹಾಕಿದರು. ಅವರು ನನ್ನ ಸ್ಛೂರ್ತಿ, ಪ್ರೇರಣೆಯಾಗಿದ್ದಾರೆ. ನನ್ನ ಪತಿ ರಾಜೇಶ್ ಕೂಡ ನನ್ನ ಎಲ್ಲ ಕಾರ್ಯಕ್ಕೂ ಪ್ರೋತ್ಸಾಹಿಸುತ್ತಾರೆ, ಜೊತೆಗಿರುತ್ತಾರೆ. ಅವರೂ ನನ್ನ ಆದರ್ಶ. ನನಗೆ ಇಷ್ಟವಾದ ಪುಸ್ತಕವೆಂದರೆ ಡೇವಿಡ್ ಡೆ ಶಾರ್ಟ್ಡ್ ಅವರ `ದಿ ಮ್ಯಾಜಿಕ್ ಆಫ್ ದಿ ಥಿಂಕಿಂಗ್ ಬಿಗ್.’ ಜೀವನದ ಗುಣಮಟ್ಟ ಸುಧಾರಣೆಗೆ ಆಲೋಚನೆಯ ಗುಣಮಟ್ಟ ಉನ್ನತವಾಗಿರಬೇಕು ಎನ್ನುವುದು ಈ ಪುಸ್ತಕದ ಸಂದೇಶಕ್ಕೆ ಹೊಸತನದ ಅನ್ವೇಷಣೆಗಾಗಿ ನಾನು ಬೇರೆ ಬೇರೆ ಪುಸ್ತಕಗಳನ್ನು ಅವಲೋಕಿಸುತ್ತಿರುತ್ತೇನೆ ಎಂದು ಸ್ನೇಹಾ ಹೇಳುತ್ತಾರೆ.
ಬೇರೆಯವರಿಗೆ ಕಷ್ಟ ಬರಬಾರದು
ಬೆಂಗಳೂರಿಗೆ ಬಂದು ನೆಲೆ ಕಂಡುಕೊಳ್ಳಲು ಸ್ನೇಹಾ ಬಹಳ ಕಷ್ಟಪಟ್ಟಿದ್ದರು. ಅಂದಿನ ಆ ದಿನಗಳ ಬಗ್ಗೆ ಖೇದವೇನೂ ಇಲ್ಲವಾದರೂ, ಈಗಿನ ಯುವ ಜನಾಂಗಕ್ಕೆ ಅಂತಹ ಸ್ಥಿತಿ ಬರಬಾರದು ಎಂದು ತಾವು ಯುವಕ/ಯುವತಿಯರಿಗೆ ಉಚಿತ ತರಬೇತಿ ನೀಡುತ್ತಿದ್ದೇನೆ. ಆ ಮೂಲಕ ಅವರು ಸೂಕ್ತ ನೆಲೆ ಕಂಡುಕೊಳ್ಳಬೇಕು ಎನ್ನುವ ಅಪೇಕ್ಷೆ ತಮ್ಮದಾಗಿದೆಯೆಂದು ಸ್ನೇಹಾ ಹೇಳುತ್ತಾರೆ.
ಅವಮಾನ ನಿಂದನೆಗಳು ಶಾಶ್ವತವಲ್ಲ
ಜೀವನದಲ್ಲಿ ಮುಂದೆ ಬರಬೇಕೆಂದು ಕನಸು ಕಾಣುತ್ತಿರುವ ಇಂದಿನ ಆಧುನಿಕ ಯುವತಿಯರಿಗೆ ನೀವೇನು ಹೇಳಬಯಸುತ್ತೀರಿ ಎಂದು ಕೇಳಿದರೆ, “ಜೀವನದಲ್ಲಿ ಅನುಭವಿಸಿದ ಕಷ್ಟಗಳು, ನಿಂದನೆ, ಅವಮಾನಗಳು ಶಾಶ್ವತವಲ್ಲ. ಅವುಗಳಿಗೆ ಕುಗ್ಗದೆ ಮುಂದಿಡುವ ಗುರಿಯ ಕಡೆ ಗಮನಹರಿಸಬೇಕು. ಗುರಿ ಸಾಧಿಸುವ ತನಕ ಪ್ರಯತ್ನ ಮುಂದುವರಿಸಿ. ಒಮ್ಮೆ ಎಡವಿದರೆ ಮತ್ತೆ ಮತ್ತೆ ಎಡವುತ್ತೇವೆ ಎಂಬ ಆತಂಕ ಬೇಡ,’ ಎಂಬ ಧೈರ್ಯದ ಮಾತುಗಳನ್ನು ಹೇಳುತ್ತಾರೆ.
ನಿಮ್ಮ ಮುಂದಿನ ಗುರಿ ಏನು? ಎಂದು ಕೇಳಿದರೆ, ಇನ್ನಷ್ಟು ಜನರಿಗೆ ಉದ್ಯೋಗ ಕೊಡಬೇಕು, ಮತ್ತಷ್ಟು ಜನರ ಖುಷಿಯಲ್ಲಿ ಖುಷಿ ಕಾಣಬೇಕು ಎನ್ನುವುದೇ ನನ್ನ ಯೋಜನೆ ಎನ್ನುತ್ತಾರೆ.
– ಅಶೋಕ ಚಿಕ್ಕಪರಪ್ಪಾ