ಅಬ್ಬಬ್ಬಾ ಎಷ್ಟೊಂದು ಬಣ್ಣದ ಕುಂಬಳಗಳು! ಎಷ್ಟು ದಪ್ಪದ ಕಾಯಿಗಳು. ಸಾಲಾಗಿ ಜೋಡಿಸಿದ್ದನ್ನು ನೋಡಿದಾಗ ಶಿಸ್ತಿನ ಸಿಪಾಯಿಗಳು ಕವಾಯತು ಮಾಡಲು ನಿಂತಿಹರೇನೋ ಎಂದು ಭಾಸವಾಗುತ್ತದೆ. ಆ ಮಗುವನ್ನು ನೋಡಿ, ಕುಂಬಳಗಳನ್ನು ಹಾಕಿಕೊಂಡ ಗಾಡಿಯನ್ನು ತಳ್ಳಿಕೊಂಡು ಹೋಗುತ್ತಿದ್ದಾಳೆ ಅದರ ತಾಯಿ. ಆ ಹೆಂಗಸಂತೂ ಕುಂಬಳದಂತೆಯೇ ಗುಂಡ ಗುಂಡಗೆ ಇದ್ದಾಳೆ. ಅವಳು ಆವರಿಸಿರುವ ಕುಂಬಳ ನೋಡಿ. ಅವಳಂತೆಯೇ ಗುಂಡು ಗುಂಡಾಗಿದೆ. ಅಲ್ಲೊಂದು ಕುಂಬಳದಲ್ಲಿ ಮನೆಯನ್ನೆ ಕಟ್ಟಿಬಿಟ್ಟಿದ್ದಾರೆ.
ಎಲ್ಲರೂ ಅದರ ಮುಂದೆ ನಿಂತು ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಹುಲ್ಲಿನ ಎತ್ತರವಾದ ಗುಡ್ಡದ ಮೆಟ್ಟಲುಗಳನ್ನೇರಿ ಮಕ್ಕಳು ಆಟವಾಡುತ್ತಿದ್ದಾರೆ. ಸಾಲಾಗಿ ಹುಲ್ಲಿನ ಆಸನಗಳಲ್ಲಿ ಎಲ್ಲರೂ ಕುಳಿತುಕೊಂಡಿದ್ದಾರೆ. ಅಲ್ಲಿರುವ ಹುಲ್ಲಿನ ನಿಗೂಢ ತಾಣದಲ್ಲಿ ಮಕ್ಕಳು ಒಳಹೊಕ್ಕು ದಾರಿಯನ್ನು ಹುಡುಕಾಡಿ ಹೊರ ಬರುವ ಆಟವಾಡುತ್ತಿದ್ದಾರೆ. ಹೊರ ಬರಲು ಅಲ್ಲಿಯೇ ಓಡುತ್ತಿದ್ದಾರೆ. ಅಲ್ಲೊಬ್ಬಳು ಕುಂಬಳದ ಒಳಗಿನ ತಿರುಳನ್ನು ತೆಗೆದು ಅದರಲ್ಲಿ ಮನುಷ್ಯನ ಮುಖವನ್ನು ಕೊರೆಯುತ್ತಿದ್ದಾಳೆ. ಅವಳೆಷ್ಟು ಚಂದವಾಗಿದ್ದಾಳೆ! ಅದೆಷ್ಟು ಬಗೆಯ ಕುಂಬಳಗಳು ಬಿಳಿಯ ಕುಂಬಳ, ತಲೆಯ ಮೇಲಿನ ಪೇಟದಂತಿರುವ ಕುಂಬಳ, ಹಸಿರು ಕುಂಬಳ, ತನ್ನೊಡಲ ಮೇಲೆ ಗೆರೆಗಳನ್ನೆಳೆದುಕೊಂಡು ಅಲಂಕರಿಸಿಕೊಂಡ ಕುಂಬಳ, ಉದ್ದಕ್ಕೆ ಸೋರೆ ಬುರುಡೆಯಂತಿರುವ ಕುಂಬಳ….. ನೋಡಲೆರಡು ಕಣ್ಣು ಸಾಲದು. ಎಷ್ಟು ಚೆನ್ನಾಗಿದೆ. ಜೊತೆಗೆ ವಿಧವಿಧದ ಜೋಳಗಳು. ನೋಡುವವರಿಗೆ, ಖರೀದಿಸುವವರಿಗೆ ಎಲ್ಲರಿಗೂ ಒಂದು ಹಬ್ಬದಂತಿರುವ ಈ ದೃಶ್ಯ ಅಮೆರಿಕಾದ ಸ್ಯಾನ್ ಫಾನ್ಸಿಸ್ಕೋನದು. ಅತಿ ಹೆಚ್ಚು ಕುಂಬಳಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಕ್ಯಾಲಿಫೋರ್ನಿಯಾ ಸಹ ಹೆಸರಾಗಿದೆ.
ಅಕ್ಟೋಬರ್ ತಿಂಗಳಲ್ಲಿ ಸಿಹಿಗುಂಬಳದ ಫಸಲು ಬರುತ್ತದೆ. ಆಗ ಹೊಲಗಳಲ್ಲಿ ಕುಂಬಳಕಾಯಿಗಳ ಸುಗ್ಗಿಯೋ ಸುಗ್ಗಿ. ಎಲ್ಲೆಡೆ ಬೆಳೆದ ಕುಂಬಳಗಳನ್ನು ಒಂದೆಡೆ ತಂದು ಜೋಡಿಸುತ್ತಾರೆ. ಒಂದು ರೀತಿಯಲ್ಲಿ ಕುಂಬಳದ ಸಂತೆ ಎನ್ನಬಹುದು. ಚಿನ್ನದ ಬಣ್ಣ ಆಕರ್ಷಕ ಕುಂಬಳಕಾಯಿಗಳನ್ನು ನೋಡಲೇ ಚಂದ. ಸಾಲು ಸಾಲಾಗಿ ಪವಡಿಸಿದ ಕುಂಬಳಗಳು ಎಲ್ಲರನ್ನೂ ಆಕರ್ಷಿಸುತ್ತವೆ. ರೈತರು ಬೆಳೆದ ಕುಂಬಳಕಾಯಿಗಳನ್ನು ಮಾರುವ ಒಂದು ಪರಿ ಎನ್ನಬಹುದು. ಕುಂಬಳಕಾಯಿಗಳನ್ನು ಬಳಸಿ ಮಾಡಿದ ಮನೆ, ಒಣಗಿದ ಹುಲ್ಲಿನ ಆಸನಗಳು, ಮಕ್ಕಳು ಮೆಟ್ಟಿಲುಗಳನ್ನು ಹತ್ತಿ ಮೇಲೇರುವ ಹುಲ್ಲಿನ ಬೆಟ್ಟ, ಯಾರಿಗೆ ಯಾವುದು ಬೇಕೋ ಆ ಕುಂಬಳಗಳನ್ನು ಆರಿಸಿ, ಕೊಂಡುಕೊಳ್ಳಬಹುದು.
ಅವುಗಳನ್ನು ತೆಗೆದುಕೊಂಡು ಬರಲು ಪುಟ್ಟ ಬಂಡಿಗಳು. ಅದರಲ್ಲಿ ಕುಂಬಳಗಳನ್ನು ಹಾಕಿ ಎಳೆದುಕೊಂಡು ಬರುವ ಮಕ್ಕಳು. ಎಲ್ಲರಿಗೂ ವಾರದ ಕೊನೆಯಲ್ಲಿ ಮಕ್ಕಳನ್ನು ಕರೆದುಕೊಂಡು ಬಂದು ಕಾಲ ಕಳೆಯಲು ಒಂದು ಅವಕಾಶ. ಅತಿ ಹೆಚ್ಚು ದಪ್ಪದ, ಗಾತ್ರದ, ತೂಕದ ಕುಂಬಳಕಾಯಿಗಳಿಗೆ ಬಹುಮಾನವನ್ನು ನೀಡುವ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಪೆರೇಡುಗಳನ್ನೂ ನಡೆಸುತ್ತಾರೆ. ಒಟ್ಟಾರೆ ಬಹಳ ಆದರದಿಂದ ಅದನ್ನು ಬರಮಾಡಿಕೊಳ್ಳುತ್ತಾರೆ. ಬೆಳೆದ ರೈತನಿಗೂ ಒಳ್ಳೆಯ ಹಣ ಮತ್ತು ಸಂತೋಷ ಸಿಗುತ್ತದೆ.
ಕುಂಬಳಕ್ಕೂ ಹ್ಯಾಲೋವಿನ್‌ಗೂ ನಂಟು
ಪ್ರತಿ ವರ್ಷ ಅಕ್ಟೋಬರ್ 31ರಂದು ಹ್ಯಾಲೋವಿನ್ ದಿನವನ್ನು ಆಚರಿಸಲಾಗುತ್ತದೆ. ಹ್ಯಾಲೋವಿನ್ ಎಂದರೆ ಸಂತ ಎಂದು ಅರ್ಥ. ಸಂತರನ್ನು, ಮೃತಪಟ್ಟವರನ್ನು, ಹುತಾತ್ಮರಾದ ಯೋಧರನ್ನು ನೆನಪಿಸಿಕೊಳ್ಳುವ ದಿನ. ನಮ್ಮ ಮಹಾಲಯ ಅಮಾವಾಸ್ಯೆಯನ್ನು ನೆನಪಿಸುತ್ತದೆ. ಹಿಂದಿನಿಂದಲೂ ಸುಗ್ಗಿಯ ಕಾಲದಲ್ಲೇ ಈ ದಿನ ಆಚರಿಸಲಾಗುತ್ತಿದೆ. ಹೀಗಾಗಿ ಕುಂಬಳದ ಬಳಕೆ ಹೇರಳವಾಗಿ ಆಗುತ್ತದೆ. ಕುಂಬಳಗಳಿಂದ ಮಾಡಿದ ತೂಗುದೀಪಗಳನ್ನು ಮನೆಯ ಮುಂದೆ ಇಡುತ್ತಾರೆ. ಮನೆಯ ಮುಂದೆ ಕುಂಬಳಗಳಿಗೆ ವಿಧ ವಿಧದ ಅಲಂಕಾರದ ಕೆತ್ತನೆ, ಕುಸುರಿ ಕೆಲಸಗಳನ್ನು ಮಾಡಿ ಇಡುತ್ತಾರೆ. ಆ ದಿನ ಮಕ್ಕಳು ವಿಧ ವಿಧದ ಛದ್ಮ ವೇಷ ಧರಿಸಿ ಮನೆ ಮನೆಗೂ ಭೇಟಿ ನೀಡುತ್ತಾರೆ. ಆ ಮಕ್ಕಳಿಗೆ ಸಿಹಿ ಮತ್ತು ಚಾಕಲೇಟ್‌ಗಳನ್ನು ನೀಡಲಾಗುತ್ತದೆ. ಮಕ್ಕಳಿಗೆ ವಿಧ ವಿಧದ ವೇಷ ಧರಿಸಿ, ಮನೆಗಳಿಗೆ ಹೋಗುವುದೇ ಒಂದು ಮಜಾ! ಹಾರರ್ ವೇಷ ಧರಿಸಿ ಪಾರ್ಟಿಗಳನ್ನು ಮಾಡುತ್ತಾರೆ. ಭವಿಷ್ಯವನ್ನು ಹೇಳುವುದು, ಭೂತ ಪ್ರೇತಗಳ ಚಲನಚಿತ್ರ ನೋಡುವುದು ರೂಢಿಯಲ್ಲಿ ಬಂದಿದೆ. ಅಂತೆಯೇ ಕುಂಬಳದ ದೀಪಗಳನ್ನೂ ಮನೆಯ ಮುಂದೆ ಬೆಳಗಿಸುತ್ತಾರೆ. ಮನೆಯ ಮುಂದೆ ಕುಂಬಳನ್ನು ಇಟ್ಟಾಗ ಕ್ಷುದ್ರಶಕ್ತಿಗಳನ್ನು ದೂರವಿಡುತ್ತದೆ ಎನ್ನುವ ನಂಬಿಕೆ. ಎಲ್ಲಿಂದ ಎಲ್ಲಿಗೆ ಹೋದರೂ ಮನುಷ್ಯ ಕೆಲವು ನಂಬಿಕೆಗಳನ್ನು ಬಿಡಾರ.
– ಮಂಜುಳಾ ರಾಜ್