ಈ ಲೇಖನದ ಶೀರ್ಷಿಕೆ ವಿಚಿತ್ರವಾಗಿದೆಯಲ್ಲ ಅಂದುಕೊಂಡಿರಾ? ಹಿಂದಿನ ಕಾಲದಂತೆ ಕೇವಲ ಗಂಡನಿಗಾಗಿ ಮಾತ್ರವೇ ಎಂಬಂತೆ ಸಿಂಗರಿಸಿಕೊಳ್ಳುವುದಲ್ಲ. ಈಗ, ಅದನ್ನೂ ದಾಟಿ ಜೀವನ ಪ್ರವಾಹ ಹರಿದಂತೆ ಹೆಣ್ಣು ಮುಂದುವರಿಯಬೇಕಿದೆ. ಜೀವನದ ಪ್ರತಿ ಘಟ್ಟವನ್ನೂ ನೀಟಾಗಿ ಎದುರಿಸುತ್ತಾ ಸಾಗಬೇಕು. ಪ್ರತಿ ಹೆಣ್ಣೂ ತನ್ನ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸ ಹೊಂದಿರಬೇಕು ಹಾಗೂ ಅದನ್ನು ಗಳಿಸಲಿಕ್ಕಾಗಿ, ಮೇಕಪ್ ಅತಿ ಮುಖ್ಯವಾಗುತ್ತದೆ.
ಮೇಕಪ್ ಎಂದ ತಕ್ಷಣ ಮನಸ್ಸಿಗೆ ಹೊಳೆಯುವುದು ಬಗೆಬಗೆಯ ಬಣ್ಣ ಬಣ್ಣದ ಲಿಪ್‌ಸ್ಟಿಕ್, ಕ್ರೀಂ ಬಳಿದ ಮುಖ ಇತ್ಯಾದಿ. ಆದರೆ ಮೇಕಪ್‌ನ ಅಸಲಿ ಉದ್ದೇಶ ಮುಖದಲ್ಲಿನ ಕುಂದುಕೊರತೆಗಳನ್ನು ಮರೆಮಾಚುವುದು, ಮುಖಕ್ಕೆ ಹೆಚ್ಚು ಕಳೆ ಕೊಡುವ ಭಾಗ ಲಕಲಕ ಹೊಳೆಯುವಂತೆ ಮಾಡುವುದು.
ರೆಗ್ಯುಲರ್ ಆಗಿ ಮೇಕಪ್ ಮಾಡಿಕೊಳ್ಳುವ ಅನುಭವಿ ಹೆಂಗಸರನ್ನು ಕೇಳಿದರೆ, ಆಕೆ ತಾನು ಈಗಾಗಲೇ 40+ ದಾಟಿದ್ದರೂ ಮೇಕಪ್ ಮುಂದಕ್ಕೂ ಬೇಕೆನಿಸುತ್ತದೆ ಎಂದೇ ಹೇಳುತ್ತಾಳೆ. ಆಕೆ ಆತ್ಮವಿಶ್ವಾಸದಿಂದ ಹೇಳುವ ಮತ್ತೊಂದು ಮಾತೆಂದರೆ, ಪ್ರತಿ ವಯಸ್ಸಿನವರಿಗೂ ಬೇರೆ ಬೇರೆ ಆದ್ಯತೆಗಳಿರುತ್ತವೆ, ಹಾಗಾಗಿ ಪ್ರತಿ ವಯಸ್ಸಿನವರೂ ತಮ್ಮ ವಯಸ್ಸಿಗೆ ತಕ್ಕಂತೆ ಮೇಕಪ್ ಪ್ರಾಡಕ್ಟ್ಸ್ ಬದಲಿಸುತ್ತಾ ಇರಬೇಕು. ಸಾಮಾನ್ಯವಾಗಿ ಹೆಂಗಸರು ಒಂದೇ ಬಗೆಯ ಫೌಂಡೇಶನ್, ಫೇಸ್ ಪೌಡರ್ ಯಾ ಲಿಪ್‌ಸ್ಟಿಕ್ ಶೇಡ್ಸ್ ನ್ನು ಬಳಸುತ್ತಿರುತ್ತಾರೆ.
ಆದರೆ ನೀವೇ ಯೋಚಿಸಿ ನೋಡಿ, ನಿಮ್ಮ ಚರ್ಮ ವಯಸ್ಸಿಗೆ ತಕ್ಕಂತೆ ಮಾರ್ಪಡುತ್ತಿರುವಾಗ, ನೀವು ಒಂದೇ ಬಗೆಯ ಮೇಕಪ್‌ಪ್ರಾಡಕ್ಟ್ ಬಳಸುತ್ತಿದ್ದರೆ ಅದು ಸರೀಹೋದೀತೇ?
ವಯಸ್ಸು 6 ಇರಲಿ ಅಥವಾ 60, ಕನ್ನಡಿ ಹೆಣ್ಣಿನ ಅತಿ ನಿಕಟ ಸಂಗಾತಿ. ಹಾಗಾಗಿ ಕನ್ನಡಿ ಅವಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮೊದಲು ತಿಳಿಸಿಬಿಡುತ್ತದೆ. ಹಾಗಿರುವಾಗ ಕನ್ನಡಿ ನೀಡುವ ಸಲಹೆ ಪ್ರಕಾರ ವಯಸ್ಸು, ಏರಿದಂತೆ ನಮ್ಮ ಮೇಕಪ್ ಪ್ರಾಡಕ್ಟ್ಸ್ ಬದಲಾಯಿಸಬಾರದೇಕೆ? ಆಗ ನಾವು ಜೀವನವಿಡೀ ಸುಂದರವಾಗಿ ಸ್ಮಾರ್ಟ್ ಆಗಿ ಕಂಗೊಳಿಸಲು ಸಾಧ್ಯ.
ಅದಕ್ಕಾಗಿ ಈ ಕೆಳಗಿನ ಸಲಹೆ ಅನುಸರಿಸಿ :
1-10
ಮುದ್ದು ಮಗು ಇಂಚರಾಳನ್ನು ಅವಳ ಚಿಕ್ಕಮ್ಮನ ಮದುವೆಯಲ್ಲಿ ಎಲ್ಲರಿಗಿಂತ ಕ್ಯೂಟ್ ಬೇಬಿ ಎಂದು ಸಾರಲು ಅವರಮ್ಮ ಪಲ್ಲವಿ ಮನಸ್ಸು ಬಂದಂತೆ ಮೇಕಪ್ ಮಾಡಿದಳು. ಆ ಮಗುವಿಗಾದರೋ ಇನ್ನೂ 7 ವರ್ಷ ಅಷ್ಟೆ. ಹೀಗಾಗಿ ಮನ ಬಂದಂತೆ ಇಷ್ಟು ಚಿಕ್ಕ ಹುಡುಗಿಗೆ ಮೇಕಪ್ ಮಾಡಬಾರದು, ಅಥವಾ ಇದೇನು ಇಷ್ಟು ಚಿಕ್ಕ ಹುಡುಗಿಗೆ ಮೇಕಪ್ ಮಾಡಬೇಕೇ ಎಂದು ಮೂಗು ಮುರಿಯದಿರಿ. ಅದು ಹೆಣ್ತನದ ಹಕ್ಕು, ಹೀಗಾಗಿ ಲೈಟ್ ಮೇಕಪ್‌ನಲ್ಲಿ ತಪ್ಪಿಲ್ಲ.
1-10 ವರ್ಷದ ಹೆಣ್ಣುಮಕ್ಕಳಿಗೆ ಹೀಗೆ ಮೇಕಪ್ ಮಾಡಿ :
ಈ ವಯಸ್ಸಿನಲ್ಲಿ ಚರ್ಮ ಸಹಜವಾಗಿಯೇ ಮೃದು, ಕೋಮಲ ಆಗಿರುತ್ತದೆ. ಹೀಗಾಗಿ ಪ್ರತಿ ದಿನದ ಸ್ನಾನಕ್ಕೆ ಕೆಮಿಕಲ್ಸ್ ರಹಿತ ಮೈಲ್ಡ್ ಸೋಪ್‌ಶ್ಯಾಂಪೂ ಬಳಸಿರಿ.
ಈ ಮಕ್ಕಳಿಗೆ ಎಂದೂ ಮರೆತೂ ಸಹ ತುಟಿಗೆ ಲಿಪ್‌ಸ್ಟಿಕ್ ಹಚ್ಚಬಾರದು! ಈ ವಯಸ್ಸಿನಲ್ಲಿ ಮಕ್ಕಳ ತುಟಿ ನೈಸರ್ಗಿಕವಾಗಿಯೇ ಗುಲಾಬಿಯಾಗಿರುತ್ತದೆ. ಚಳಿ, ಮಳೆಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ಇದ್ದರೆ, ರಾತ್ರಿ ಮಲಗುವ ಮುನ್ನ ಮಕ್ಕಳ ತುಟಿಗಳಿಗೆ ಹಾಲಿನ ಕೆನೆ, ಗಟ್ಟಿಯಾದ ಕೊಬ್ಬರಿ ಎಣ್ಣೆ ಪದರ, ವ್ಯಾಸಲೀನ್ ಅಥವಾ ಗ್ಲಿಸರಿನ್ ಹಚ್ಚಿರಿ. ಅಮ್ಮ ಮೇಕಪ್ ಮಾಡಿಕೊಳ್ಳುವುದನ್ನು ನೋಡಿ 7-8 ವರ್ಷದ ಮಗಳು ಹಠ ಮಾಡಿದರೆ, ನೀವು ನ್ಯೂಡ್ ಲಿಪ್ ಜೆಲ್ ಲೈಟಾಗಿ ಟಚ್ ಮಾಡಿ, ಇದರಿಂದ ಹಾನಿ ಇಲ್ಲ.
ಮಕ್ಕಳು ಬೆಳಗ್ಗೆ ಸಂಜೆ ಫೇಸ್ ವಾಶ್ ಬಳಸಿ ಮುಖ ತೊಳೆಯುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು. ಈ ವಯಸ್ಸಿನಿಂದಲೇ ಬ್ಯೂಟಿಫುಲ್ ಸ್ಕಿನ್ ಬೆಳೆಸಬೇಕು. ಎಲ್ಲಾ ಬಗೆಯ (ಆಯ್ಲಿ, ಡ್ರೈ, ನಾರ್ಮಲ್) ಚರ್ಮದವರಿಗೂ ಅದು ನಿರಾಳವಾಗಿ ಉಸಿರಾಡಲು ಈ ರೀತಿಯ ಕ್ಲೆನಿಂಗ್ ಅತ್ಯಗತ್ಯ.
11-17
ಇಂದು ಮೃದುಲಾಳ ಬರ್ತ್‌ಡೇ! ಅವಳ ಶಾಲೆಯ ಫ್ರೆಂಡ್ಸ್ ಶುಭಾಶಯ ಕೋರಲು ಸಂಜೆಯ ಪಾರ್ಟಿಗೆ ಬರುವವರಿದ್ದರು. ಮೃದುಲಾ ಅಜ್ಜಿ ಕೊಡಿಸಿದ ಪರ್ಪಲ್ ಡ್ರೆಸ್ ಧರಿಸಿದ್ದಳು. ಕಿಶೋರಾವಸ್ಥೆಯಲ್ಲಿ ಸಹಜವಾಗಿ ಉಂಟಾಗುವಂತೆ ಅವಳ ಮುಖದಲ್ಲಿ ಆ್ಯಕ್ನೆ, ಕೆನ್ನೆ ಬಳಿ ಮೊಡವೆಗಳಿದ್ದವು. ಅದನ್ನು ಅಡಗಿಸಲು ಅವಳು ಅಮ್ಮನ ಫೌಂಡೇಶನ್ ಕ್ರೀಂ ಬಳಸಿದ್ದಳು. ಪರ್ಪಲ್ ಡ್ರೆಸ್‌ಗೆ ತಕ್ಕಂತೆ ಪರ್ಪಲ್ ಲಿಪ್‌ಸ್ಟಿಕ್ ಹಾಗೂ ಧಾರಾಳ ಮಸ್ಕರಾ ಅವಳನ್ನು ಬಫೂನ್‌ಆಗಿಸಿತು ಎಂದರೆ ಅತಿಶಯೋಕ್ತಿಯಲ್ಲ.
ಅಸಲಿಗೆ ಈ ಟೀನೇಜ್ ಘಟ್ಟ ಬಲು ನಾಜೂಕಾದುದು. ಆ ಸಮಯದಲ್ಲಿ ಬಳಸಲಾಗುವ ಪ್ರಸಾಧನಗಳೇ ಮುಂದಿನ ಹ್ಯಾಪಿ ಮೇಕಪ್‌ಗೆ ನಾಂದಿ. ಟೀನೇಜ್‌ನಲ್ಲಿ ಕ್ಲೆನ್ಸರ್, ಆ್ಯಸ್ಟ್ರಿಂಜೆಂಟ್, ಟೋನರ್‌ಗಳಿಗೆ ಮಹತ್ವಪೂರ್ಣ ಸ್ಥಾನವಿದೆ. ಈ 3 ಪ್ರಾಡಕ್ಟ್ ಗಳೂ ಟೀನೇಜರ್ಸ್‌ಗೆ ಅತ್ಯಗತ್ಯ ಬೇಕು. ಏಕೆಂದರೆ ಬಹುತೇಕರಿಗೆ ಈ ವಯಸ್ಸಿನಲ್ಲಿ ಚರ್ಮ ಆಯ್ಲಿ ಆಗಿರುತ್ತದೆ, ರೋಮರಂಧ್ರಗಳು ಕ್ಲೋಸ್ ಆಗಿ ನಂತರ ಆ್ಯಕ್ನೆ, ಮೊಡವೆಗಳಾಗಿ ಮಾರ್ಪಡುತ್ತವೆ.
ಹದಿಹರೆಯದವರು ಸನ್‌ಸ್ಕ್ರೀನ್ ಬಳಸಲು ಹಿಂಜರಿಯಬಾರದು. ಈ ವಯಸ್ಸಿನಲ್ಲಿ ಚರ್ಮ ಹೆಚ್ಚು ಆಯ್ಲಿ ಆಗುವುದರಿಂದ, ಗಮನಿಸತಕ್ಕ ಅಂಶವೆಂದರೆ ಈ ಪ್ರಸಾಧನಗಳು ನಾನ್ ಕೊಮೊಡೆ ಜಿನಿಸ್ ಆಗಿರಬೇಕು. ಅಂದ್ರೆ ಅದು ನಿಮ್ಮ ರೋಮರಂಧ್ರಗಳನ್ನು ಕ್ಲೋಸ್ ಮಾಡಬಾರದು. ಇದಕ್ಕೆ ಸನ್‌ಸ್ಕ್ರೀನ್ ಬಳಕೆ ಒಂದೇ ದಾರಿ. ಅದು ಚರ್ಮಕ್ಕೆ ಉತ್ತಮ ರಕ್ಷಣೆ ನೀಡಬಲ್ಲದು. ಝಿಂಕ್ ಆಕ್ಸೈಡ್‌ಯುಕ್ತ ಸನ್‌ಸ್ಕ್ರೀನ್ ಬಳಕೆಯಿಂದ ಆ್ಯಕ್ನೆ, ಮೊಡವೆಗಳು ಎಷ್ಟೋ ತಗ್ಗುತ್ತವೆ. ಆ್ಯಕ್ನೆ, ಮೊಡವೆಯುಳ್ಳವರು ಅವನ್ನು ಮರೆಮಾಚಲು ಫೌಂಡೇಶನ್‌ಗೆ ಮೊರೆ ಹೋಗಬಾರದು. ಅವನ್ನು ಎಂದೂ ಚಿವುಟಲು ಹೋಗಬೇಡಿ. ಆದರೆ ಸನ್‌ಸ್ಕ್ರೀನ್ ಲೋಶನ್ ಮಾತ್ರ ಎಲ್ಲಾ ಸಂದರ್ಭದಲ್ಲೂ ಬಳಸಲೇಬೇಕು. ಏಕೆಂದರೆ ಆ್ಯಕ್ನೆ, ಮೊಡವೆಗಳು ಸೂರ್ಯನ ಕಿರಣಗಳ ಪ್ರಭಾವದಿಂದಲೇ ಗಾಢ ಕಪ್ಪು ಕಲೆಯನ್ನು ಉಳಿಸಿಹೋಗುತ್ತವೆ. ಇವೆಲ್ಲದರಿಂದ ಮುಕ್ತಿ ಹೊಂದಲು ಸನ್‌ಸ್ಕ್ರೀನ್ ಬಳಕೆಯೊಂದೇ ಪರಿಹಾರ.
ಈ ಹದಿಹರೆಯದಲ್ಲಿ ಕಲರ್ಡ್ ಲಿಪ್ ಜೆಲ್ ಚೆಂದ ಕಾಣುತ್ತದೆ. ಆದರೆ ಮರೆತೂ ಅಗ್ಗದ ಮಾಲನ್ನು ಕೊಂಡು ತುಟಿಗೆ ಹಚ್ಚಬೇಡಿ. ವರ್ಷದಲ್ಲಿ ಒಂದೇ ಲಿಪ್‌ಸ್ಟಿಕ್ ಕೊಂಡರೂ ಸರಿ, ಅದು ಬ್ರಾಂಡೆಡ್ ಕಂಪನಿಯದೇ ಆಗಿರಲಿ.
ಮದುವೆ ಮತ್ತಿತರ ಶುಭ ಸಮಾರಂಭಗಳಿಗೆ ಪಿಂಕ್ ಲಿಪ್‌ಸ್ಟಿಕ್, ಒಂದು ಲೈಟ್ ಕೋಟ್ ಮಸ್ಕರಾ, ಗಾಢ ಕಾಡಿಗೆ (ಕಾಜಲ್), ಸನ್‌ಸ್ಕ್ರೀನ್ ಹಚ್ಚಿದ ನಂತರ ಅದರ ಮೇಲೆ ತೀಡಲಾದ ಒಂದು ತೆಳು ಪದರದ ಕಾಂಪ್ಯಾಕ್ಟ್ ನಿಮ್ಮ ವಯಸ್ಸಿನವರಿಗೆ ಧಾರಾಳ ಮೇಕಪ್ ಆಯ್ತು. ಸಿಂಪಲ್ ಮೇಕಪ್ ಇದ್ದಾಗ ಮಾತ್ರ ಹದಿಹರೆಯದಲ್ಲಿ ನೀವು ಹೆಚ್ಚು ಆಕರ್ಷಕವಾಗಿ ಕಾಣುವಿರಿ. ಆ್ಯಕ್ನೆ, ಮೊಡವೆಗಳಿದ್ದರೂ ಪರವಾಗಿಲ್ಲ, ಚರ್ಮದ ಲಾವಣ್ಯದ ಕಾರಣ ಲೈಟ್ ಮೇಕಪ್ ಆಕರ್ಷಕ ಎನಿಸುತ್ತದೆ.
ಅನುಪ್ರಭಾಳ ಮದುವೆ ಫಿಕ್ಸ್ ಆಗಿತ್ತು. ತನ್ನ ಮದುವೆಗೆ ಏನೆಲ್ಲ ಪ್ರೀವೆಡ್ಡಿಂಗ್ ಮೇಕಪ್ ತಯಾರಿ, ತನ್ನ ವ್ಯಾನಿಟಿ ಬ್ಯಾಗ್ ಅಪ್‌ಡೇಟ್ ಮಾಡಿಕೊಳ್ಳುವುದು ಹೇಗೆಂಬುದು ಅವಳ ಗೊಂದಲಕ್ಕೆ ಕಾರಣವಾಗಿತ್ತು. ಅಸಲಿಗೆ ಅನುಪ್ರಭಾಳಂಥವರಿಗೆ ಮೇಕಪ್‌ಎಂದರೆ ಫೌಂಡೇಶನ್, ಕಾಂಪ್ಯಾಕ್ಟ್, ಫೇಸ್ ಪೌಡರ್, ಲಿಪ್‌ಸ್ಟಿಕ್, ಕಾಜಲ್ ಇಷ್ಟೆ. ಅವಳು ಈ ಪ್ರಸಾಧನಗಳನ್ನು ಖರೀದಿಸಲು ಮಾರ್ಕೆಟ್‌ಗೆ ಹೋದಾಗ, ಅವಳೊಂದಿಗೆ ಕಸಿನ್ ರಾಧಾ ಅಕ್ಕ ಸಹ ಬಂದರು. ರಾಧಾ ಅಕ್ಕ ಅವಳಿಗೆ ಬಹಳಷ್ಟು ಉತ್ತಮ ಸಲಹೆಗಳನ್ನು ನೀಡಿದರು, ಇದರಿಂದ ಅನುಪ್ರಭಾ ದಂಗಾದಳು. ರಾಧಾರ ಸಲಹೆ ಹೀಗಿದ್ದವು :
ಫೌಂಡೇಶನ್ ಕೊಳ್ಳುವ ಮೊದಲು ಅದನ್ನು ಅಗತ್ಯವಾಗಿ ಮಣಿಕಟ್ಟಿನ ಬದಿಗೆ ತೀಡಿ ಪರೀಕ್ಷಿಸಿ. ಯಾವ ಫೌಂಡೇಶನ್ ನಿಮ್ಮ ಕೈಗಳ ಬಣ್ಣಕ್ಕೆ 100% ಮ್ಯಾಚ್ ಆಯಿತೋ, ಅದುವೇ ನಿಮ್ಮ ಬಾಡಿ ಸ್ಕಿನ್‌ಗೆ ಚೆನ್ನಾಗಿ ಹೊಂದುತ್ತದೆ ಎಂದರ್ಥ. ಇತ್ತೀಚೆಗೆ BBಕ್ರೀಂ ಬಳಕೆ ಸಹ ಅಷ್ಟೇ ಜನಪ್ರಿಯ. ಫೌಂಡೇಶನ್ ಕ್ರೀಂ ಬೇಡ ಎನಿಸಿದರೆ BB ಕ್ರೀಂ ಪರ್ಯಾಯ ಆಯ್ಕೆಯೇ ಸರಿ.
ನೀವು ನವ ವಧು ಆಗಿದ್ದರೆ, ಒಂದೊಂದು ಕೆಂಪು ಗುಲಾಬಿ, ಮೆರೂನ್, ರಾಣಿ, ಕಾಫಿ ಶೇಡ್ಸ್ನ ಲಿಪ್‌ಸ್ಟಿಕ್ಸ್ ನ್ನು ಅಗತ್ಯ ನಿಮ್ಮ ಬಳಿ ಇರಿಸಿಕೊಳ್ಳಿ. ಆದರೆ ಇವೆಲ್ಲವುಗಳ ಅನೇಕ ಶೇಡ್ಸ್ ಲಭ್ಯ. ಡಾರ್ಕ್ ಕಲರ್‌ನ ಡಾರ್ಕ್ ಶೇಡ್ಸ್, ಲೈಟ್ ಕಲರ್ ಲೈಟ್ ಶೇಡ್ಸ್ ಗೆ ಚೆನ್ನಾಗಿ ಹೊಂದುತ್ತವೆ. ಮ್ಯಾಟ್, ಗ್ಲಾಸಿ, ಕ್ರೀಂ ಬೇಸ್ಡ್ ಲಿಪ್‌ಸ್ಟಿಕ್ಸ್ ನಿಮ್ಮ ವ್ಯಾನಿಟಿಯಲ್ಲಿ ಇರಲ್ಬೇಕು. ಸಂದರ್ಭಕ್ಕೆ ತಕ್ಕಂತೆ ಇದನ್ನು ಬಳಸಿಕೊಳ್ಳಿ.
ಮಸ್ಕರಾ ನಿಮ್ಮ ಕಣ್ಣೆವೆಗಳನ್ನು ಇನ್ನಷ್ಟು ದೊಡ್ಡದಾಗಿಯೂ, ಗಾಢವಾಗಿಯೂ ತೋರಿಸುತ್ತದೆ. ಕಂಗಳಿಗೆ ಡ್ರಮಾಟಿಕ್ ಲುಕ್ಸ್ ಕೊಡುತ್ತದೆ. ಯಾವುದೇ ಉತ್ತಮ ಬ್ರಾಂಡೆಡ್ ಕಂಪನಿಯ ಒಂದು ಮಸ್ಕರಾವನ್ನೇ ಕೊಳ್ಳಿರಿ. ಏಕೆಂದರೆ ಇದು ಬಲು ಬೇಗ ಒಣಗುತ್ತದೆ.
ಐ ಲೈನರ್ ನಿಮ್ಮ ಕಂಗಳನ್ನು ಸುಂದರಗೊಳಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ. ವಾಟರ್ ಪ್ರೂಫ್ ಲಿಕ್ವಿಡ್ ಐ ಲೈನರ್ ಉತ್ತಮ ಆಯ್ಕೆಯಾಗಿದೆ. ಐ ಲೈನರ್‌ನ್ನು ಸದಾ ಹೊರ ಭಾಗದಿಂದ ಒಳಭಾಗದ ಕಡೆ ತೀಡಿರಿ.
ಕಂಗಳನ್ನು ಹಗಲಿನಲ್ಲಿ ಡೀಪ್ ಹಾಗೂ ಸಂಜೆ ಪಾರ್ಟಿಗಳಿಗೆ ಡಾರ್ಕ್ ಕಲರ್‌ಗಳಿಂದ (ಐ ಶೇಡ್ಸ್) ತೀಡಬೇಕು.
ರಾತ್ರಿ ಮಲಗುವ ಮುನ್ನ ಅಗತ್ಯ ನಿಮ್ಮ ಮೇಕಪ್ ಕಳಚಿಡಿ ಹಾಗೂ ಲೈಟ್ ನೈಟ್ ಕ್ರೀಂ ಹಚ್ಚಿ ಮಲಗಿರಿ.
18-35
ನೋಡ ನೋಡುತ್ತಿದ್ದಂತೆ ಅನುಪ್ರಭಾಳ ಮದುವೆಯಾಗಿ 5-6 ವರ್ಷ ಕಳೆಯಿತು. ಅವಳಿಗೊಂದು ಹೆಣ್ಣುಮಗು ಆಯಿತು. ಅದಾದ ಕೆಲವು ವರ್ಷಗಳಿಗೆ ಅನು 32ರ ಮಹಿಳೆಯಾದಳು. ರಾಧಕ್ಕನ ಸಲಹೆಗಳನ್ನು ಅವಳು ನಿಷ್ಠೆಯಿಂದ ಪಾಲಿಸುತ್ತಿದ್ದಳು. ಆದರೆ ಈಗ ಅವಳ ಚರ್ಮ ಮೊದಲಿನಂತೆ ಮೃದುವಾಗಿರಲಿಲ್ಲ. ಪ್ರಸವದ ನಂತರ ಪಿಗ್ಮೆಂಟೇಶನ್ ಸಮಸ್ಯೆ ಕಾಡತೊಡಗಿತು.
ನಂತರ ರಾಧಕ್ಕನಿಗೆ ಫೋನ್ ಮಾಡಿ ತಿಳಿಸಿದಳು. ಅನು, ನಿನ್ನ ಮದುವೆ ಆದಾಗ ನಿನಗೆ 24. ಈಗ 32ರ ಮಹಿಳೆ, ಹೀಗಾಗಿ ಮೇಕಪ್‌ನಲ್ಲಿ ಕೆಲವೊಂದು ಬದಲಾವಣೆ ಅನಿವಾರ್ಯ ಎಂದು ಹೇಳಿದರು.
30+ ನಂತರ ನಿಧಾನವಾಗಿ ವಿಟಮಿನ್‌ಸೀರಮ್ ಜೊತೆ ಗೆಳೆತನ ಬೆಳೆಸಿ. ಇದೊಂದು ಉತ್ತಮ ಆ್ಯಂಟಿ ಆಕ್ಸಿಡೆಂಟ್ ಆಗಿದ್ದು, ಚರ್ಮವನ್ನು ಸೂಕ್ಷ್ಮ ರೇಖೆಗಳು, ಏಜ್ ಸ್ಪಾಟ್‌ನಿಂದ ರಕ್ಷಿಸುತ್ತದೆ. ಇದನ್ನು ಅಗತ್ಯವಾಗಿ ರಾತ್ರಿ ಹೊತ್ತು ಬಳಸಿರಿ.
ಹೊರಗಡೆ ಹೋಗುತ್ತೀರೋ ಇಲ್ಲವೋ, ಅಗತ್ಯ ಸನ್‌ಸ್ಕ್ರೀನ್ ಹಚ್ಚಿಕೊಳ್ಳಿ. ಇದೂ ಸಹ ನಿಮ್ಮ ಚರ್ಮವನ್ನು ಯಂಗ್ ಆಗಿಸಲು ನೆರವಾಗುತ್ತದೆ, ಏಕೆಂದರೆ ಬಿಸಿಲಿನಿಂದಾಗುವ ಏಜ್ ಸ್ಪಾಟ್‌ನ ಹಾನಿಯಿಂದ ರಕ್ಷಿಸುತ್ತದೆ.
ಗ್ಲಾಸಿಗಿಂತ ಹೆಚ್ಚಾಗಿ ಮ್ಯಾಟ್ ಲಿಪ್‌ಸ್ಟಿಕ್ ಬಳಸುವುದು ಲೇಸು.
ಅಂಡರ್ ಐ ಸೀರಮ್ನ್ನು 30+ ನಂತರ ಬಳಸುತ್ತಿರಬೇಕು.
ನಿಮಗೆ ಸ್ಮೋಕಿ ಐಸ್ ಲುಕ್ಸ್ ಅಥವಾ ಡ್ರಮಾಟಿಕ್ ಲುಕ್ಸ್ ಬೇಕಿದ್ದರೆ ಅದಕ್ಕೆ ಪೂರಕವಾಗುವ ಉತ್ತಮ ಬ್ರಾಂಡೆಡ್ ಪ್ರಾಡಕ್ಟ್ ನ್ನೇ ಆರಿಸಿ. ಐ ಶ್ಯಾಡೋ ಬಣ್ಣವನ್ನು ಸಾವಧಾನವಾಗಿ ಆರಿಸಿ. ತಪ್ಪಾದ ಬಣ್ಣದ ಆಯ್ಕೆ ನಿಮ್ಮನ್ನು ಬಫೂನ್ ಆಗಿಸಬಹುದು.
ಪಿಗ್ಮೆಂಟೇಶನ್ ಸಮಸ್ಯೆ ಹಾರ್ಮೋನ್ ಇಂಬ್ಯಾಲೆನ್ಸ್ ಕಾರಣ ಆಗುತ್ತದೆ, ಆದರೆ ಇದನ್ನು ನಿರ್ಲಕ್ಷಿಸದಿರಿ. ಯಾವುದೇ ಉತ್ತಮ ಕನ್ಸೀಲರ್‌ನಿಂದ ನೀವು ಇದನ್ನು ಮರೆಮಾಚಬಹುದು. ನಂತರ ಅದರ ಮೇಲೆ ಒಂದು ಕೋಟ್ ಫೌಂಡೇಶನ್ ಹಚ್ಚಿ ಅದನ್ನು ನಿಮ್ಮ ಚರ್ಮಕ್ಕೆ ಮ್ಯಾಚ್ ಆಗುವಂತೆ ಮಾಡಿ. ಶಾಶ್ವತ ರೂಪದಲ್ಲಿ ಮುಕ್ತಿ ಪಡೆಯಲು ನೀವು ಸೀರಮ್ ಅಥವಾ ಆ್ಯಂಟಿ ಆಕ್ಸಿಡೆಂಟ್ ರಾತ್ರಿ ಹೊತ್ತು ಹಚ್ಚಬೇಕು. ಇದರಿಂದ ನಿಧಾನವಾಗಿ ಪರಿಣಾಮ ಕಾಣಿಸುತ್ತದೆ.
36-50
ಹೆಣ್ಣು 36+ ದಾಟಿದಾಗ, ಅವಳ ಮೇಕಪ್ ಮಾಡುವ ವಿಧಾನ ಟೀನೇಜ್+ ಯೌವನಕ್ಕಿಂತ ವಿಭಿನ್ನ ಆಗಿರಬೇಕು. 40+ ದಾಟುವ ಹೊತ್ತಿಗೆ ಚರ್ಮ ತುಸು ಸುಕ್ಕಾದಂತೆ, ಡ್ರೈ ಆಗುತ್ತದೆ, ಇದು ಅತಿ ಸಾಮಾನ್ಯ ವಿಚಾರ. ಇದಕ್ಕೆ ಕಾರಣ ಕೊಲೋಜನ್ ಕೊರತೆ. ಆದರೆ ತುಸು ಪ್ರಯಾಸ ಪಡುವುದರಿಂದ ನಿಮ್ಮ ಗ್ಲೋ ವಾಪಸ್ ಪಡೆಯಬಹುದು :
ಸದಾ ಪ್ರೈಮರ್ ಬಳಸಿರಿ. ಇದು ನಿಮ್ಮ ಚರ್ಮಕ್ಕೆ ಒಂದು ಸಮತಲ ರೂಪ ನೀಡುತ್ತದೆ. ಆದರೆ ನಿಮ್ಮ ಪ್ರೈಮರ್ ಹೈಡ್ರೇಟಿಂಗ್ ಆಗಿರಬೇಕು, ಇಲ್ಲದಿದ್ದರೆ ನಿಮ್ಮ ಚರ್ಮದ ಸೂಕ್ಷ್ಮ ರೇಖೆಗಳು ಸ್ಪಷ್ಟ ರೂಪದಲ್ಲಿ ಕಾಣತೊಡಗುತ್ತದೆ.
ಫೌಂಡೇಶನ್‌ನ ಒಂದು ಸರಿಯಾದ ಪದರ ಮುಖದಲ್ಲಿನ ಹಲವು ವರ್ಷಗಳ ಕೊರತೆಯನ್ನು ಕ್ಷಣದಲ್ಲಿ ನೀಗಿಸುತ್ತದೆ. ಆದರೆ ನೀವು ಬಳಸುವ ಫೌಂಡೇಶನ್ ನಿಮ್ಮ ಬಾಡಿ ಸ್ಕಿನ್‌ಗೆ 100% ಹೊಂದುವಂತಿರಬೇಕು ಎಂಬುದನ್ನು ನೆನಪಿಡಿ. ಇಲ್ಲದಿದ್ದರೆ ಮೇಕಪ್‌ನಿಂದ ಆಭಾಸವಾದೀತು.
ಯಾವುದೇ ಉತ್ತಮ ಕಂಪನಿಯ ಕನ್ಸೀಲರ್ ನೆರವಿನಿಂದ ಕಂಗಳ ಸಮೀಪದ ಕಪ್ಪು ಗೆರೆಗಳು ಹಾಗೂ ಪಿಗ್ಮೆಂಟೇಶನ್ ಕಲೆಗಳನ್ನು ಆರಾಮವಾಗಿ ಅಡಗಿಸುತ್ತದೆ.
ಲಿಪ್‌ಸ್ಟಿಕ್ ಹಚ್ಚುವ ಮೊದಲು ನೀವು ತುಟಿಗಳ ಡ್ರೈ ಚರ್ಮವನ್ನು ಬಲು ಸೌಮ್ಯ ಸ್ಕ್ರಬ್‌ನಿಂದ ತೊಲಗಿಸಿ. ನಂತರ ಲಿಪ್‌ಸ್ಟಿಕ್ ಹಚ್ಚುವ ಮೊದಲು ಲಿಪ್ ಬಾಮ್ ಬಳಸಿರಿ, ನಂತರ ಲಿಪ್ ಲೈನರ್ ಹಾಗೂ ಲಿಪ್‌ಸ್ಟಿಕ್‌ನಿಂದ ನಿಮ್ಮ ತುಟಿಗಳಿಗೆ ಅಂದದ ಲುಕ್ಸ್ ನೀಡಿ.
50ರ ನಂತರ
ಅಂದು ದಾಮಿನಿ ತನ್ನ 50 ವಸಂತಗಳನ್ನು ಪೂರೈಸಿದ್ದಳು. ಆ ಸಲುವಾಗಿ ಬೇಕಾದವರನ್ನೆಲ್ಲ ಕರೆದು ಒಂದು ಸಣ್ಣ ಪಾರ್ಟಿ ಏರ್ಪಡಿಸಿದ್ದಳು. ತಾವಿಂದು ಒಬ್ಬ ಪ್ರೌಢ ಮಹಿಳೆಯ ಬರ್ತ್‌ಡೇಗಾಗಿ ವಿಶ್ ಮಾಡಲು ಹೊರಟಿದ್ದೇವೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇದೇನು ಎಲ್ಲರೂ ದಾಮಿನಿಗೆ ಶುಭಾಶಯ ಕೋರುತ್ತಾ ಕೈ ಕುಲುಕುವಾಗ ನೋಡುತ್ತಾರೆ, ದಾಮಿನಿ ಬದಲು ಅವಳ ತಂಗಿ ಅಲ್ಲಿ ನಿಂತಂತಿದೆ! ಅವಳು ತನ್ನ ವೈಟ್ ಮೇಕಪ್‌ನಿಂದ ಬಲು ಸುಂದರವಾಗಿ ಕಾಣುತ್ತಿದ್ದಳು. ಅವಳ ಗೆಳತಿಯರು ಇದರ ರಹಸ್ಯ ಅರಿಯಲು ಬಯಸಿದಾಗ ದಾಮಿನಿ ಹೇಳಿದ್ದು ಒಂದೇ ಮಾತು `ಲೆಸ್ ಈಸ್ ಮೋರ್!’
ಈ ವಯಸ್ಸಿನವರು ತಮ್ಮ ನೈಸರ್ಗಿಕ ಸಡಿಲ ಚರ್ಮದ ಸಂರಕ್ಷಣೆಗೆ ಎಚ್ಚರ ವಹಿಸಬೇಕು, ಉತ್ತಮ ಮಾಯಿಶ್ಚರೈಸರ್‌ನಿಂದ ಅದನ್ನು ಸದಾ ಹೈಡ್ರೇಟ್‌ಗೊಳಿಸುತ್ತಿರಿ. ಈಗ ಪ್ರತಿ ದಿನ 2 ಸಲ ಅಗತ್ಯ ಸೀರಮ್ ಹಚ್ಚಿರಿ.
ಸನ್‌ಸ್ಕ್ರೀನ್ ಸದಾ ನಿಮ್ಮ ಬಳಿ ಇರಲೇಬೇಕು. ಅದು ಕ್ರೀಂ ಬೇಸ್ಡ್ ಆಗಿರುವುದು ಲೇಸು, ಅದೇ ತರಹ ಫೌಂಡೇಶನ್ ಸಹ ಲಿಕ್ವಿಡ್‌ಕ್ರೀಂ ಬೇಸ್ಡ್ ಆಗಿರಲಿ. ಇಲ್ಲದಿದ್ದರೆ ಚರ್ಮ ಬಹು ಬೇಗ ಡ್ರೈ ಕಳಾಹೀನ ಎನಿಸುತ್ತದೆ.
ಕಂಗಳು, ತುಟಿಗಳಿಗಾಗಿ ಡೀಪ್ ಕಲರ್ ಉತ್ತಮ ಎನಿಸುತ್ತದೆ. ವಯಸ್ಸು ಹೆಚ್ಚಿದಂತೆ ತುಟಿಗಳು ಸಹ ತೆಳು ಆಗತೊಡಗುತ್ತವೆ. ಹೀಗಾಗಿ ಲಿಪ್‌ಗ್ಲಾಸ್ ನೆರವಿನಿಂದ ಅದನ್ನು ತುಸು ತುಂಬಿಕೊಂಡಂತೆ ಹಾಗೂ ಗ್ಲಾಸಿ ಆಗಿ ತೋರಿಸಿ.
– ರುಕ್ಮಿಣಿ ರಾವ್