ಅನಿತಾ ರಾವ್ ‌ಅವರದು ಅತ್ಯಂತ ವಿಶಿಷ್ಟ ವ್ಯಕ್ತಿತ್ವ. ಗಗನಸಖಿಯಾಗಿ ಅನೇಕ ದೇಶಗಳನ್ನು ಸುತ್ತಿದ್ದ ಅವರು, ಅತ್ಯಂತ ವೈಭಿನ್ನಬಹುದಾದ ಸೆಲೆನ್‌ ಸ್ಟಾರ್‌ ಸೌಲಭ್ಯ ಪಡೆದರು. ಮದುವೆ ಬಳಿಕ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಪತಿ ಅಶ್ವಿನ್‌ ರಾವ್ ಜೊತೆ ಅಮೆರಿಕಾದಲ್ಲಿದ್ದರು. ಅಲ್ಲಿನ ಏಕತಾನತೆಯ ಜೀವನ ಬೇಸರ ಹುಟ್ಟಿಸಿತ್ತು. ಅಲ್ಲಿಂದ ಭಾರತಕ್ಕೆ ಮರಳಿದ ಬಳಿಕ ಅವರ ಜೀವನದಲ್ಲಿ ಬಹಳಷ್ಟು ಬದಲಾವಣೆ ಉಂಟಾಯಿತು, ಕ್ರಿಯಾಶೀಲವಾಯಿತು. ‘ಸಕ್ರಿಯಾ’ ಎಂಬ ಚಾರಿಟೆಬಲ್ ಸಂಸ್ಥೆ ಹುಟ್ಟುಹಾಕುವಂತಾಯಿತು.

`ಸಕ್ರಿಯಾ’ ಮೂಲಕ ಅವರು ಸಾಮಾನ್ಯ ಮಹಿಳೆಯರಿಗೆ ಗೊತ್ತಿಲ್ಲದ ಮುಟ್ಟಿನ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಹೊಸ ಹೊಸ ಯೋಚನೆ ಯೋಜನೆ ಮಾಡುತ್ತಿದ್ದಾರೆ.

ಆರಂಭಿಕ ಜೀವನ

ಅನಿತಾ ರಾವ್ ಶೇಷಾದ್ರಿಪುರಂನ ಮಹಿಳಾ ವಿದ್ಯಾಲಯದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು. ಆ ಬಳಿಕ  ಕೆಎಲ್ಇ ಕಾಲೇಜಿನಲ್ಲಿ ಓದು ಮುಂದುವರಿಸಿದರು. ಇನ್ನು ಓದು ಮುಂದುವರಿಸಿರುವ ಸಂದರ್ಭದಲ್ಲಿ ಪತ್ರಿಕೆಯೊಂದರಲ್ಲಿ ಬಂದ ಜಾಹೀರಾತು ಅವರ ಗಮನ ಸೆಳೆಯಿತು. ಅದು `ಕ್ಯಾಬಿನ್‌ ಕ್ರೂ’ ನೇಮಕಾತಿ ಕುರಿತಾದದ್ದು. ಆಶ್ಚರ್ಯದ ಸಂಗತಿಯೆಂದರೆ, ಅನಿತಾ ಅವರಿಗೆ `ಕ್ಯಾಬಿನ್‌ ಕ್ರೂ’ ಎಂದರೇನು ಎಂಬುದೇ ಗೊತ್ತಿರಲಿಲ್ಲ. ಶಬ್ದಕೋಶದಲ್ಲಿ ಅದರ ಅರ್ಥ ನೋಡಿದಾಗ ಅದು ಗಗನಸಖಿ ಹುದ್ದೆಗೆ ನಡೆಸುವ ಸಂದರ್ಶನ ಎನ್ನುವುದು ಗೊತ್ತಾಯಿತು.

`ಗಲ್ಫ್ ಏರ್‌’ ಸಂಸ್ಥೆ ತನ್ನ ವಿಮಾನ ಸೇವೆಗಾಗಿ ಮದ್ರಾಸಿನಲ್ಲಿ ಸಂದರ್ಶನ ಏರ್ಪಡಿಸಿತ್ತು. ಅನಿತಾ ಹಾಗೂ ಅವರ ಗೆಳತಿ ಅಲ್ಲಿಗೆ ಹೋದಾಗ, “ನಿಮಗೆ ಈಜು ಬರುತ್ತದೆಯೇ?” ಎಂಬ ಪ್ರಶ್ನೆಗೆ ತಡವರಿಸುತ್ತಾ, “ಇಲ್ಲ,” ಎಂದು ಹೇಳಿದ್ದಾರೆ. ಇನ್ನು ತಮ್ಮ ಸಂದರ್ಶನ ವಿಫಲವಾಯಿತು ಎಂದು ಅನಿತಾ ರಾವ್ ‌ಅಂದುಕೊಂಡಿದ್ದರು. ಆದರೆ ಸಂದರ್ಶಕರು ನೀವು ಆಯ್ಕೆಯಾಗಿದ್ದೀರಿ. ಆದರೆ 1 ತಿಂಗಳಲ್ಲಿ ಈಜು ಕಲಿತುಕೊಂಡು ಬರಬೇಕು ಎಂದು ಹೇಳಿದರು. ಅಂತೂ ಅನಿತಾ ರಾವ್ ‌ಗಗನಸಖಿಯಾಗಿ ಬಹ್ರೇನ್‌ಗೆ ಹೋದರು.

ಬಹ್ರೇನ್‌ನಿಂದ ಬೇರೆ ಬೇರೆ ರಾಷ್ಟ್ರಗಳ ಮಹತ್ವದ ನಗರಗಳಿಗೆ ಸಂಚರಿಸುವ ಅವಕಾಶ ಸಿಕ್ಕಿತು. ಪ್ರತಿನಿತ್ಯ 1500 ಜನರನ್ನು ಭೇಟಿ ಮಾಡುತ್ತಿದ್ದ ಅವರು, ಬಹುಭಾಷೆ, ಬಹು ಸಂಸ್ಕೃತಿ, ವೈವಿಧ್ಯಮಯ ಆಹಾರ ಪದ್ಧತಿಗಳನ್ನು ತೀರಾ ಹತ್ತಿರದಿಂದ ಕಾಣಲು ಸಾಧ್ಯವಾಯಿತು. ಎಲ್ಲದಕ್ಕಿಂತಲೂ ಹೆಚ್ಚಾಗಿ ಇದೆಲ್ಲದರಿಂದ ಅವರ ಕಮ್ಯುನಿಕೇಶನ್‌ ಸ್ಕಿಲ್ ವೃದ್ಧಿಯಾಯಿತು. ಬೇರೆಯವರು ಏನು ಹೇಳುತ್ತಾರೆ ಎಂದು ಕೇಳಿಸಿಕೊಳ್ಳುವ ತಾಳ್ಮೆಯ ಗುಣ ಅವರಲ್ಲಿ ವಿಕಸಿತವಾಯಿತು.

ಗಗನಸಖಿಯಾಗಿದ್ದ 6-7 ವರ್ಷಗಳಲ್ಲಿ ಅವರು 60ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ಕೊಟ್ಟರು. ಅವರಿಗೆ ಸಿಗುವ ಸೌಲಭ್ಯ ವೈಭವದಿಂದ ಕೂಡಿದ್ದಾಗಿರುತ್ತಿತ್ತು. ಒಬ್ಬ ವ್ಯಕ್ತಿಗೆ ಇದಕ್ಕಿಂತ ಖುಷಿ ಇನ್ನೇನು ಬೇಕು? ಆದರೂ ಅವರ ಮನಸ್ಸಿನಲ್ಲಿ `ಕೇವಲ ನನಗಾಗಿ ನಾನು ಬದುಕಿದರೆ ಅದು ಜೀವನವೇ?’ ಎಂದು ಪ್ರಶ್ನೆ ಏಳುತ್ತಿತ್ತು. ಬೇರೆಯವರಿಗಾಗಿ ಏನಾದರೂ ಮಾಡಬೇಕು ಎಂದು ಅವರು ಮನಸ್ಸಿನಲ್ಲಿ ತುಡಿಯುತ್ತಿತ್ತು. ಆದರೆ ಗಗನಸಖಿಯಾಗಿ ಏನನ್ನು ಮಾಡಲು ಸಾಧ್ಯವಿರಲಿಲ್ಲ.

ವಿವಾಹದ ಬಳಿಕ

ಈ ಮಧ್ಯೆ ಕುಟುಂಬದವರು ಕಲಬುರ್ಗಿ ಮೂಲದ ಅಶ್ವಿನ್‌ ರಾವ್ ಜೊತೆ ಅನಿತಾ ಅವರ ಮದುವೆ ನಿಶ್ಚಯ ಮಾಡಿದರು. ಕುಟುಂಬ ಜೀವನದ ನಿಜ ಅರ್ಥ ತಿಳಿದಿದ್ದ ಅನಿತಾ ಗಗನಸಖಿ ಹುದ್ದೆಗೆ ರಾಜೀನಾಮೆ ನೀಡಿ `ಕುಟುಂಬ ಸಖಿ’ಯಾದರು. ಪತಿ ಸಾಫ್ಟ್ ವೇರ್‌ಎಂಜಿನಿಯರ್‌ ಆಗಿದ್ದರು. ಪ್ರಾಜೆಕ್ಟ್  ವರ್ಕ್‌ ಮೇಲೆ ಅಮೆರಿಕಾದಲ್ಲಿದ್ದರು. ಅನಿತಾ ಕೂಡ ಅಮೆರಿಕಾಕ್ಕೆ ಹೋದರು. ಆದರೆ ಅಲ್ಲಿನ ಯಾಂತ್ರಿಕ, ಏಕತಾನತೆಯ ಜೀವನ ಅವರಿಗೆ ಬೇಸರ ಮೂಡಿಸತೊಡಗಿತು.

ಪತಿಯ ಪ್ರಾಜೆಕ್ಟ್ ವರ್ಕ್‌ ಮುಗಿದಿದ್ದರಿಂದ ಅವರು ಭಾರತಕ್ಕೆ ಮರಳಲು ನಿರ್ಧರಿಸಿದಾಗ ಅನಿತಾಗೆ ಎಲ್ಲಿಲ್ಲದ ಖುಷಿಯಾಯಿತು.

ಸ್ವಚ್ಛತೆಯ ಅರಿವು

ಬೆಂಗಳೂರಿಗೆ ವಾಪಸ್ಸಾದ ಬಳಿಕ ಅನಿತಾ ಬಹಳಷ್ಟು ಕ್ರಿಯಾಶೀಲರಾದರು. ಹೊರಗಡೆ ಸುತ್ತಾಡಲು ಹೋದಾಗ ಮಹಿಳೆಯರಿಗೆ ಸ್ವಚ್ಛತೆಯ ಬಗ್ಗೆ, ಅದರಲ್ಲೂ ಮುಟ್ಟಿನ ಸ್ವಚ್ಛತೆಯ ಅರಿವು ಇಲ್ಲದಿರುವುದು ಅವರ ಗಮನಕ್ಕೆ ಬಂತು. ಅವರಿಗಾಗಿ ತಾನು ಏನನ್ನಾದರೂ ಮಾಡಬೇಕೆಂಬ ಯೋಚನೆ ಅವರ ಮನಸ್ಸಿನಲ್ಲಿ ಮೂಡುತ್ತಿತ್ತು.

ಸಾಮಾನ್ಯ ಮಹಿಳೆಯರಿಗೆ ಮುಟ್ಟಿನ ಸ್ವಚ್ಛತೆಯ ಅರಿವು ಮೂಡಿಸಲು `ಸಕ್ರಿಯಾ’ ಎಂಬ ಚಾರಿಟೇಬ್‌ ಟ್ರಸ್ಟ್ ವೊಂದನ್ನು ಹುಟ್ಟುಹಾಕಿ ಅದರ ಮೂಲಕ ತಮ್ಮ ಕಾರ್ಯಾಚರಣೆ ಆರಂಭಿಸಿದರು.

ಮಹಿಳೆಯರಿಗೆ ತಿಳಿವಳಿಕೆ ಕೊಡಲು ಮೊದಲು ಅದರ ಬಗ್ಗೆ ತನಗೆ ಸಾಕಷ್ಟು ಮಾಹಿತಿ ಇರಬೇಕು ಎಂಬ ನಿಟ್ಟಿನಲ್ಲಿ ಅನಿತಾ ಬಹಳಷ್ಟು ಮಾಹಿತಿಗಳನ್ನು ಕಲೆ ಹಾಕಿದರು. ಆ ಬಳಿಕವೇ ಅವರು ಮುಟ್ಟಿನ ಸ್ವಚ್ಛತೆಯ ಬಗ್ಗೆ ವೈದ್ಯರಷ್ಟೇ ನಿಖರ ಮಾಹಿತಿಯನ್ನು ಮಹಿಳೆಯರಿಗೆ ತಲುಪಿಸತೊಡಗಿದರು.

ತಮ್ಮ ಮನೆ ಆಸುಪಾಸಿನ ಸ್ಲಂಗಳಿಂದ ಈ ಕಾರ್ಯಾಚರಣೆಯನ್ನು ಆರಂಭಿಸಿ, ಕಾಲೇಜುಗಳು, ಸಂಘಸಂಸ್ಥೆಗಳು, ಆಫೀಸ್‌ಗಳು ಹೀಗೆ ಎಲ್ಲ ಕಡೆಯೂ ತೆರಳಿ ಮುಟ್ಟಿನ ಸ್ವಚ್ಛತೆಯ ಬಗ್ಗೆ ಮಹಿಳೆಯರಿಗೆ ತಿಳಿಸತೊಡಗಿದರು.

ತನ್ನ ಈ ರೀತಿಯ `ಅಭಿಯಾನ’ದಿಂದ ಕೆಲವೇ ಕೆಲವು ಜನರನ್ನು ತಲುಪಲು ಸಾಧ್ಯ. ಹೆಚ್ಚೆಚ್ಚು ಜನರನ್ನು ಹೇಗೆ ತಲುಪಬಹುದು ಎಂದು ಅವರು ಯೋಚಿಸುತ್ತಿದ್ದಾಗ ಯೂ ಟ್ಯೂಬ್‌ ಮೂಲಕ ವಿಡಿಯೋ ಹಾಕಿ ಏಕಕಾಲಕ್ಕೆ ಲಕ್ಷಾಂತರ ಜನರನ್ನು ತಲುಪಬಹುದೆಂದು ಅವರ ಅರಿವಿಗೆ ಬಂತು. ಸಂಪರ್ಕ ಕಲೆ ಹಾಗೂ ಕನ್ನಡ, ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಅನಿತಾ ರಾವ್ ‌ಈಗ ವಿಶಿಷ್ಟ ವಿಡಿಯೋಗಳ ಮೂಲಕ ದೇಶದ ಮೂಲೆ ಮೂಲೆಗೂ ಚಿರಪರಿಚಿತರಾಗಿದ್ದಾರೆ.

ಏಕಾಂಗಿ ಕಾರ್ಯಕರ್ತೆ

`ಸಕ್ರಿಯಾ’ ಚಾರಿಟೆಬಲ್ ಟ್ರಸ್ಟ್ ಆರಂಭಿಸಿರುವ ಅನಿತಾ ರಾವ್ ‌ಬೆಂಗಳೂರಿನಲ್ಲಿ ಏಕಾಂಗಿಯಾಗಿಯೇ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಮಾತ್ರ ಬೇರೆ ಬೇರೆ ಸಂಘಸಂಸ್ಥೆಗಳು, ಎನ್‌ಜಿಓಗಳು ಅವರ ಅಭಿಯಾನದಲ್ಲಿ ಕೈಜೋಡಿಸುತ್ತಿವೆ.

ಕೆ2ಕೆ ಅಭಿಯಾನ

J9A6714-a

`ಕೆ2ಕೆ’ ಅಂದರೆ ಕಾರ್ಗಿಲ್ ‌ಟು ಕನ್ಯಾಕುಮಾರಿತನಕ ನಡೆದ ಅಭಿಯಾನಕ್ಕಿಟ್ಟ ಹೆಸರು. ದೇಶದ ವಿವಿಧ ನಗರಗಳಲ್ಲಿ 2020ರ ಡಿಸೆಂಬರ್‌ 6 ರಂದು ಏಕಕಾಲಕ್ಕೆ ನಡೆಯಿತು. ಅಭಿಯಾನದಲ್ಲಿ ಕೈ ಜೋಡಿಸಿದ ಕಾರ್ಯಕರ್ತರು ಅಂದು ಮಹಿಳೆಯರು ಹೆಚ್ಚೆಚ್ಚು ಸೇರುವ ಜಾಗಗಳಲ್ಲಿ ಲ್ಯಾಪ್‌ಟಾಪ್‌ ಅಥವಾ ತೆರೆಯ ಮೇಲೆ ಅನಿತಾ ರಾವ್ ವಿಡಿಯೋಗಳನ್ನು ಪ್ರದರ್ಶಿಸಿದರು. ಈ ಅಭಿಯಾನ ಬಹಳಷ್ಟು ಯಶಸ್ಸು ಕಂಡಿತು. ಬಹಳಷ್ಟು ಮಹಿಳೆಯರು, `ನಮಗೆ ಈ ವಿಷಯವೇ ಗೊತ್ತಿರಲಿಲ್ಲ. ನಿಮ್ಮಿಂದಾಗಿ ನಮ್ಮಲ್ಲಿ ಬದಲಾವಣೆ ಬಂತು,’ ಎಂದು ಹೇಳಿಕೊಂಡರು.

ಇದೇ ರೀತಿಯ ಅಭಿಯಾನವನ್ನು `ಯುಟಿ’ ಅಂದರೆ ಯೂನಿಯನ್‌ ಟೆರಿಟರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಲಾಯಿತು.

ಕಾರಾಗೃಹಗಳಲ್ಲೂ ಅಭಿಯಾನಮೇ 28 ರಂದು ಕೆ2ಕೆ ಹಾಗೂ ಯುಟಿಯ ಎಲ್ಲಾ ಕಾರಾಗೃಹಗಳಲ್ಲಿ ಅಂತರಾಷ್ಟ್ರೀಯ ಮುಟ್ಟಿನ ಸ್ವಚ್ಛತಾ ದಿನದಂದು ಮಹಿಳಾ ಕೈದಿಗಳಿಗಾಗಿ ಮುಟ್ಟಿನ ಸ್ವಚ್ಛತೆಯ ಅರಿವು ಮೂಡಿಸುವ ಅಭಿಯಾನ ನಡೆಸಲಿದ್ದಾರೆ.

ನೆರೆಯ ರಾಷ್ಟ್ರಗಳಾದ ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್‌, ಮಲೇಷಿಯಾ, ನೇಪಾಳ ಹಾಗೂ ಆಫ್ಘಾನಿಸ್ತಾನದಲ್ಲೂ ಈ ಅಭಿಯಾನ ನಡೆಯಲಿದೆ.

ವಿಶಿಷ್ಟ ಪರಿಸರ ದಿನ

ಅನಿತಾ ರಾವ್ ‌ಗಗನಸಖಿಯಾಗಿದ್ದರು. ಅವರ ಯೋಚನೆಗಳು ಕೂಡ ಗಗನಮುಖಿಯಾಗಿರುತ್ತವೆ. ಜೂನ್‌ 5 `ಪರಿಸರ ದಿನ’ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಹೊರಟಿದ್ದಾರೆ. ಹೆಲಿಕಾಫ್ಚರ್‌ ಒಂದನ್ನು ಬಾಡಿಗೆಗೆ ಪಡೆದು ಅಂದು ರಾಮನಗರ ಅರಣ್ಯ ಪ್ರದೇಶದ ಮೇಲ್ಭಾಗದಿಂದ ಬೀಜದ ಉಂಡೆಗಳನ್ನು ಉದುರಿಸುವ ಮೂಲಕ ಪರಿಸರಕ್ಕೆ ವಿಶಿಷ್ಟ ಕೊಡುಗೆ ಕೊಡಲು ಹೊರಟಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರಿಗೂ ತಿಳಿವಳಿಕೆ

ಲೈಂಗಿಕ ರೋಗಗಳಿಂದ ಹೇಗೆ ರಕ್ಷಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಅನಿತಾ ರಾವ್, ಲೈಂಗಿಕ ಕಾರ್ಯಕರ್ತೆಯರಿಗೂ ಅಭಿಯಾನ ನಡೆಸುವ ಯೋಚನೆ ಇಟ್ಟುಕೊಂಡಿದ್ದಾರೆ.

ಬೆಂಗಳೂರಿನ 500ಕ್ಕೂ ಹೆಚ್ಚು ಸ್ಲಂಗಳಿಗೆ ಭೇಟಿ ಕೊಟ್ಟು, ಅಲ್ಲಿನ ಮಹಿಳೆಯರಿಗೆ ತಿಳಿವಳಿಕೆ ಮೂಡಿಸಬೇಕು. ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬೇಕು? ಎಂಬ ಬಗ್ಗೆಯೂ ಅರಿವು ಮೂಡಿಸಲು ನಿರ್ಧರಿಸಿದ್ದಾರೆ.

ಪ್ರಶಸ್ತಿಗಳು

ಅನಿತಾರವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಜಿಟಿಎಫ್‌ ಅವಾರ್ಡ್‌ ಬಂದಿದೆ. ಅಖಿಲ ಭಾರತ ಮಟ್ಟದಲ್ಲಿ ಏಕಕಾಲಕ್ಕೆ ಮುಟ್ಟಿನ ಸ್ವಚ್ಛತೆಯ ಅರಿವು ಮೂಡಿಸಿದ್ದಕ್ಕಾಗಿ ಕಾಂ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌, ಸ್ಮೃತಿ ಸಾಧನಾ ಅವಾರ್ಡ್‌, ಲೀಡ್‌ ಇಂಡಿಯಾ ಫೌಂಡೇಶನ್‌ ಅವಾರ್ಡ್‌ಗಳು ಬಂದಿವೆ.

ಮನೆಯಿಂದಲೇ ಶುರುವಾಗಲಿ

ಇಂದಿನ ಯುವತಿಯರಿಗೆ ಸಮಾಜ ಸೇವೆಯ ಬಗ್ಗೆ ನೀವೇನು ಹೇಳಬಯಸುವಿರಿ? ಎಂಬ ಪ್ರಶ್ನೆಗೆ, `ಸಮಾಜ ಸೇವೆಗಾಗಿ ಹೊರಗೆ ಹೋಗಬೇಕೆಂದೇನಿಲ್ಲ. ಮನೆಯಿಂದಲೇ ಸಮಾಜ ಸೇವೆ ಶುರು ಮಾಡಬಹುದು. ನಿಮ್ಮ ಮನೆಯ ಹಿರಿಯರಿಗೆ, ಕೆಲಸದವರಿಗೆ, ಅಕ್ಕಪಕ್ಕದವರಿಗೆ ಸ್ವಚ್ಛತೆಯ ಮಹತ್ವದ ಬಗ್ಗೆ ತಿಳಿ ಹೇಳಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಸಂವಹನ ಕಲೆ ಹಾಗೂ ಕನ್‌ವಿನ್ಸಿಂಗ್‌ ಕೆಪ್ಯಾಸಿಟಿ ಹೆಚ್ಚುತ್ತದೆ,” ಎಂದು ಹೇಳಿದರು.

ಮುಂಬರುವ ವರ್ಷಗಳಲ್ಲಿ ರೊಬೋಟ್‌ಗಳ ಆಗಮನದಿಂದ ನಿರುದ್ಯೋಗದ ಪ್ರಮಾಣ ಹೆಚ್ಚಾಗಬಹುದು. ಹಾಗಾಗಿ ರೋಬೊಗಳು ಮಾಡಲಾಗದ ಕೆಲಸಗಳನ್ನು ಕಲಿತುಕೊಂಡು ವೃತ್ತಿಪರತೆ ಬೆಳೆಸಿಕೊಳ್ಳಬೇಕೆಂದೂ ಅವರು ಕಿವಿಮಾತು ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ