ಗಂಡ : ಅಕಸ್ಮಾತ್‌ ನಾನು ತಪ್ಪಿಸಿಕೊಂಡ್ರೆ ಏನು ಮಾಡ್ತೀಯಾ?

ಹೆಂಡತಿ : ಪೇಪರ್‌ನಲ್ಲಿ ಜಾಹೀರಾತು ಕೊಡ್ತೀನಿ.

ಗಂಡ : ವಾವ್‌! ಏನಂತ ಕೊಡ್ತೀಯಾ?

ಹೆಂಡತಿ : ಗಂಡ ಬೇಕಾಗಿದ್ದಾನೆ!

ಪತ್ನಿ : ಏನು ಮಾಡ್ತಿದ್ದೀರಿ?

ಪತಿ : ಸೊಳ್ಳೆ ಹೊಡೆದು ಸಾಯಿಸಿದೆ.

ಪತ್ನಿ : ಇದುವರೆಗೂ ಎಷ್ಟು ಸಾಯಿಸಿದಿರಿ?

ಪತಿ : 3 ಗಂಡು, 2 ಹೆಣ್ಣು ಸೊಳ್ಳೆಗಳು.

ಪತ್ನಿ : ಗಂಡು, ಹೆಣ್ಣು ಅಂತ ಹೇಗೆ ಹೇಳ್ತೀರಿ?

ಪತಿ : 3 ಸೊಳ್ಳೆಗಳು ನನ್ನ ಬಾಟಲ್ ಬಳಿ, 2 ನಿನ್ನ ಡ್ರೆಸ್ಸಿಂಗ್‌ ಟೇಬಲ್ ಬಳಿ ಇದ್ದವು.

ಪತ್ರಕರ್ತ : ನಿಮ್ಮ ಸಾಧನೆಗಳ ಬಗ್ಗೆ ಎಲ್ಲರಿಗೂ ಬಹಳ ಖುಷಿ ಇದೆ, ಹೆಮ್ಮೆ ಇದೆ. ಎಲ್ಲರೂ ನಿಮ್ಮನ್ನು ಭಾರತಮಾತೆಯ ಹೆಮ್ಮೆಯ ಪುತ್ರಿ ಅನ್ನುತ್ತಾರೆ…. ಈ ಬಗ್ಗೆ ನಿಮ್ಮ ಅಭಿಪ್ರಾಯ?

ನವ ನಟಿ : ಛೇ….ಛೇ…! ಈ ಮಾತನ್ನು ನಾನು ಒಪ್ಪೋದಿಲ್ಲ. ನಾನೇನಿದ್ದರೂ ಮಂಗಲಾದೇವಿಯ ಪುತ್ರಿ ಅಂತ ಎಲ್ಲರಿಗೂ ಅರ್ಥ ಆಗೋ ಹಾಗೇ ಬರೆದುಬಿಡಿ!

ರಾಮು : ಪ್ರತಿಭಟನೆ, ಮುಷ್ಕರ ನಡೆದಾಗೆಲ್ಲ ಹಾಲಿನವರು ರಸ್ತೆಗೆ ಲೀಟರ್‌ ಗಟ್ಟಲೆ ಹಾಲು ಸುರೀತಾರೆ!

ಸೋಮು : ಅದೇ ರೀತಿ ಸ್ಟ್ರೈಕ್‌ ನಡೆದಾಗೆಲ್ಲ ಟೊಮೇಟೊ ಬೆಳೆಗಾರರು ರಸ್ತೆಗೆ ಕೇಜಿಗಟ್ಟಲೇ ಟೊಮೇಟೊ ಸುರೀತಾರೆ.

ಗುಂಡ : ಆದರೆ ಪ್ರತಿ ಸಲ ಸ್ಟ್ರೈಕ್‌ ಮಾಡಿದಾಗಲೂ, ಈ ಬ್ಯಾಂಕಿನವರು ಮಾತ್ರ ಹೀಗೇನೂ ಮಾಡೋದಿಲ್ಲವಲ್ಲ…..?

ಗುಂಡ ತನ್ನ ಲವರ್‌ ಗುಂಡಿ ಜೊತೆ ಚಾಟ್‌ ಮಾಡುತ್ತಿದ್ದ…….

ಗುಂಡ : ಪ್ರಿಯೆ…. ಪ್ರಾಣಕಾಂತೆ…. ಮಲಗಿದ್ದರೆ ಕನಸಗಳನ್ನು ಮೆಸೇಜ್‌ ಮಾಡು. ಎಚ್ಚರವಾಗಿದ್ದರೆ ನಮ್ಮ ಪ್ರೇಮದ ಸವಿ ನೆನಪುಗಳನ್ನು ಕಳುಹಿಸು….. ನಗುತ್ತಿದ್ದರೆ ಖುಷಿ ಕಳುಹಿಸು…. ಅಳುತ್ತಿದ್ದರೆ ಕಂಬನಿಯ ಧಾರೆ ಕಳುಹಿಸು…. ಒಟ್ಟಾರೆ…

ಗುಂಡಿ : ಏ ಮಂಗ್ಯಾ…. ನಾನು ಪಾತ್ರೆ ತೊಳೀತಿದ್ದೀನಿ….. ಅದರ ಬಚ್ಚಲು ನೀರು ಕಳುಹಿಸಲೇನು?

ಗುಂಡ ಆಫ್‌ ಲೈನ್‌ ಆಗಿಹೋದ!

ರಂಗ : ಡಿಯರ್‌, ಐ ಲವ್ ಯೂ! ನನ್ನ ಮದುವೆ ಆಗ್ತೀಯಾ?

ರಂಗಿ : ಎಷ್ಟಯ್ಯ ನಿನ್ನ ಸಂಬಳ?

ರಂಗ : 10 ಸಾವಿರ!

ರಂಗಿ : ಛೀ….ಛೀ! ಅದು ನನ್ನ ತಿಂಗಳ ಸೋಪು ಶ್ಯಾಂಪೂ ಖರ್ಚಿಗೂ ಸಾಕಾಗೋಲ್ಲ.

ರಂಗ : ಯಾಕೆ? ನೀನು ಅಷ್ಟೊಂದು ಕೊಳಕಾ?

ಸೀನ : ಮದುವೆಯಲ್ಲಿ ಗಂಡಿಗಿಂತ ಹೆಣ್ಣಿನ ವಯಸ್ಸು ಕಡಿಮೆ ಇರಬೇಕು ಅಂತ ಯಾಕೆ ಹೇಳ್ತಾರೆ ಗೊತ್ತಾ?

ನಾಣಿ : ಚಿಕ್ಕವರು ಹೊಡೆದರೂ ದೊಡ್ಡವರು ಹೊಡೆಯಬಾರದು ಅಂತ….!

ತಿಮ್ಮ : ನಿನ್ನೆ ದಾರೀಲಿ ಬರೋವಾಗ ನನ್ನ ಹೆಂಡತಿ ಕಣ್ಣಿಗೆ ಧೂಳಿನ ಕಣ ಬಿತ್ತು ಕಣೋ…. ಅದನ್ನು ತೆಗೆಸೋಕ್ಕೆ ಆ ಡಾಕ್ಟರ್‌/ ರೂ. ಚಾರ್ಜ್‌ ಮಾಡಿದ್ರು, ಹೊಟ್ಟೆ ಉರಿದು ಹೋಯಿತು ಕಣಯ್ಯ.

ನಿಂಗ : ನೀನೇ ಪುಣ್ಯವಂತ ಬಿಡಯ್ಯ. ನಿನ್ನೆ ದಾರೀಲಿ ಬರೋವಾಗ ಜವಳಿ ಅಂಗಡಿಯ 5000/ ರೂ. ರೇಷ್ಮೆ ಸೀರೆ ನನ್ನ ಹೆಂಡತಿ ಕಣ್ಣಿಗೆ ಬೀಳಬೇಕೇ…….?

ಒಬ್ಬ ಅಜ್ಜಿ ದಿನಾ ಲಾಂಗ್‌ ಡ್ರೈವ್ ‌ಹೊರಡುವ ಬಸ್ಸಿನಲ್ಲಿ ಸ್ಟಾರ್ಟಿಂಗ್‌ ಪಾಯಿಂಟ್‌ ಏರಿ, ಕೊನೆ ಸ್ಟಾಪ್‌ನಲ್ಲಿ ಇಳಿಯುವಾಗ ಮರೆಯದೆ ಕಂಡಕ್ಟರ್‌ ಕೈಗೆ ಬಾದಾಮಿ, ಗೋಡಂಬಿ, ಪಿಸ್ತಾ ಇತ್ಯಾದಿ ಕೊಡುತ್ತಿರುತ್ತಾಳೆ.

ಕಂಡಕ್ಟರ್‌ಗಂತೂ ತಿಂಗಳು ಪೂರ್ತಿ ಹೀಗೆ ಡ್ರೈ ಫ್ರೂಟ್ಸ್ ಸವಿದು ಖುಷಿಯೋ ಖುಷಿ!

ಕಂಡಕ್ಟರ್‌ : ಅಜ್ಜಿ, ದಿನಾಲೂ ನೀನು ನಂಗೆ ತಿನ್ನೋಕೆ ಇಷ್ಟೊಂದು ಗೋಡಂಬಿ, ಬಾದಾಮಿ ಕೊಡ್ತೀಯಲ್ಲ… ನಿನ್ನ ಮೊಮ್ಮಗ ಸಹ ನನ್ನ ಹಾಗೇ ಇದ್ದಾನಾ…. ಬಹುಶಃ ಬೇಗ ತೀರಿಕೊಂಡ ಅಂತ ಕಾಣುತ್ತೆ, ಅದೇ ಪ್ರೀತಿಯಿಂದ ನನಗೆ ಕೊಡ್ತಿದ್ದೀಯಾ…. ಅಲ್ವಾ ಅಜ್ಜಿ?

ಅಜ್ಜಿ : ಅಯ್ಯೋ ಮಂಕು ಮುಂಡೇದೇ! ನನ್ನ ಮೊಮ್ಮಗ ಇನ್ನೂ 100 ವರ್ಷ ಬಾಳ್ತಾನೆ, ನೋಡೋಕೆ ನಿನಗಿಂತ ಹೈಕ್ಲಾಸ್‌ಆಗಿದ್ದಾನೆ, ಅವನ ಮುಂದೆ ನೀನೇ ಡಿಎಮ್ಮು……! ಬಸ್ಸು ಹತ್ತಿದಾಗ ಇವನ್ನು ಒಂದೊಂದಾಗಿ ಬಾಯಿಗೆ ಹಾಕಿಕೊಂಡು ಚೀಪ್ತಾ ಇರ್ತೀನಿ, ನನಗೆ ಹಲ್ಲಿಲ್ಲ…. ಬೊಚ್ಚುಬಾಯಿ ಅದಕ್ಕೆ. ಅಷ್ಟು ದುಬಾರಿಯಾದುದನ್ನು ನನ್ನ ಮೊಮ್ಮಗ ದಿನಾಲೂ ಕೊಡಿಸೋವಾಗ ಅದನ್ನು ಹಾಗೇ ಕಿಟಕಿಯಲ್ಲಿ ಬಿಸಾಡೋದು ಯಾಕೆ ಅಂತ ಇಳಿದು ಹೋಗೋವಾಗ ಪಾಪ ಅಂತ ನಿನಗೆ ಕೊಟ್ಟು ಹೋಗ್ತೀನಿ…. ಅಷ್ಟೆ!

ಬಸ್ಸು ವಾಪಸ್ಸು ಹೊರಟಾಗ ಟಿಕೆಟ್‌ ಇಶ್ಯು ಮಾಡುವುದನ್ನೂ ಮರೆತ ಕಂಡಕ್ಟರ್‌, ವಾಂತಿ ಮಾಡಲು ಕಿಟಕಿಯಲ್ಲಿ ಮುಖ ಇಟ್ಟುಕೊಂಡನು, ಕೊನೇ ಸ್ಟಾಪ್‌ ಬರುವವರೆಗೂ ತಲೆ ಒಳಗೆ ಎಳೆದುಕೊಂಡಿದ್ದರೆ ಕೇಳಿ!

ವಾಣಿ : ಅಗರಬತ್ತಿಯಲ್ಲಿ ಎರಡು ವಿಧ. ಒಂದು ದೇವರಿಗಾಗಿ, ಒಂದು ಸೊಳ್ಳೆಗಾಗಿ….

ರಾಣಿ : ಇದೆಲ್ಲ ಗೊತ್ತಿರೋದೇ ಬಿಡು. ಏನು ಹೇಳಬೇಕು ಅಂತಿದ್ದೀಯಾ?

ವಾಣಿ : ಇದರಲ್ಲಿ ಒಂದು ವಿಪರ್ಯಾಸ ಇದೆ, ಅದನ್ನು ಗಮನಿಸಿದ್ದೀಯಾ?

ರಾಣಿ : ಏನದು ನೀನೇ ಹೇಳು……?

ವಾಣಿ : ಪ್ರತಿ ಸಲ ಅಗರಬತ್ತಿ ಹಚ್ಚಿದಾಗಲೂ ದೇವರು ಬರೋದೆ ಇಲ್ಲ, ಸೊಳ್ಳೆ ಹೋಗೋದೇ ಇಲ್ಲ!

ಜ್ಯೋತಿಷಿ : ಎಲ್ಲಿ ಕೈ ತೋರಿಸು….. ನಿನ್ನ ಹೆಸರು ಗಂಗಪ್ಪ…..

ಗಂಗಪ್ಪ : ಹೌದು ಸ್ವಾಮಿ, ಕೈ ನೋಡುತ್ತವೇ ಹೇಳಿಬಿಟ್ಟಿರಿ.

ಜ್ಯೋತಿಷಿ : ನಿನ್ನ ಹೆಂಡತಿ ಗಯ್ಯಾಳಿ ಗಂಗಮ್ಮ.

ಗಂಗಪ್ಪ : ಸರಿಯಾಗಿ ಹೇಳಿದಿರಿ.

ಜ್ಯೋತಿಷಿ : ನಿನಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬನೇ ಮಗ!

ಗಂಗಪ್ಪ : ದಿಟ ಗುರುಗಳೇ!

ಜ್ಯೋತಿಷಿ : ನಿನ್ನ ತಾಯಿ ಮಾತ್ರ ಬದುಕಿದ್ದಾರೆ, ನಿನ್ನ ಬಳಿಯೇ ಇದ್ದಾರೆ.

ಗಂಗಪ್ಪ : ಅಯ್ಯೋ…. ಕೈ ನೋಡುತ್ತಲೇ ಇಷ್ಟೊಂದು ವಿಷಯ ಸಲೀಸಾಗಿ ಹೇಳಿಬಿಟ್ರಿ…. ಮುಂದಿನ ಭವಿಷ್ಯ ಹೇಳಿ…. ಲಾಟ್ರಿ ಗೀಟ್ರಿ ಸಿಗುತ್ತಾ ಅಂತ….

ಜ್ಯೋತಿಷಿ : ಬಡ್ಕೊಂಡ್ರು ನಿನ್ನ ಬುದ್ಧಿಗೆ! ಜಾತಕ ತಗೊಂಡು ಬಾರಯ್ಯ ಅಂದ್ರೆ ರೇಷನ್‌ ಕಾರ್ಡ್‌ ತಂದಿದ್ದೀಯಾ!

ನಾಣಿ : ನಮ್ಮ ಉ. ಭಾರತದಲ್ಲಿ ಹುಟ್ಟುವ ಮಕ್ಕಳಿಗೆ ಸರ್‌ ನೇಮ್ ಹೇಗೆ ಇಡ್ತಾರೆ ಗೊತ್ತಾ?

ವೆಂಕ : ಹೇಗೆ? ನೀನೇ ಹೇಳು.

ನಾಣಿ : ಒಂದೇ ಮಗುವಾದರೆ ಏಕನಾಥ್‌,  2 ದುಬೆ, 3 ತಿವಾರಿ, 4 ಚತುರ್ವೇದಿ, 5 ಪಾಂಡೆ, ಪರರದ್ದಾದರೆ ಮಿಶ್ರಾ, ಎಲ್ಲೋ ಕಸದ ತೊಟ್ಟಿಯಲ್ಲಿ ಸಿಕ್ಕಿದರೆ ಗುಪ್ತಾ!

ಗುಂಡ : ದೇವರ ಹುಂಡಿಗೆ ದುಡ್ಡು ಹಾಕಿ, `ದೇವರೆ, ಒಬ್ಬ ಫ್ರೆಂಡ್‌ ಕೊಡಪ್ಪ,’ ಅಂತ ಕೇಳಿಕೊಂಡೆ.

ವೆಂಕ : ನೋಡಿದ್ಯಾ…..? ದೇವರು ಅದಕ್ಕೆ ನನ್ನನ್ನು ನಿನಗೆ ಪರಿಚಯಿಸಿದ.

ಗುಂಡ : ಬಡ್ಕೊಂಡ್ರು….. ಹೊರಗಡೆ ಚಪ್ಪಲಿ ಬಿಟ್ಟಿದ್ದರಿಂದ ಅವರಿಗೆ 2 ರೂ. ನಾಣ್ಯ ಕೊಡಬೇಕು ಅಂತ, ಜೇಬಲ್ಲಿ ಇದ್ದ 1 ರೂ. ನಾಣ್ಯ ಹಾಕಿದ್ದಕ್ಕೆ ನೀನು ಸಿಕ್ಕಿದ್ದು….. ಕಾಸಿಗೆ ತಕ್ಕ ಕಜ್ಜಾಯ.

ವೆಂಕ : ಸರಿ, ಅದಕ್ಕೆ ಈಗೇನು ಮಾಡಬೇಕು ಅಂತೀಯಾ?

ಗುಂಡ : ಮುಂದಿನ ಸಲ ದೇವಸ್ಥಾನಕ್ಕೆ ಹೋಗುವಾಗ ಮನೆಯಲ್ಲೇ ಚಪ್ಪಲಿ ಬಿಟ್ಟು ಬರಿಗಾಲಲ್ಲಿ ನಡೆದುಕೊಂಡು ಹೋಗ್ತೀನಿ.

ಸುದ್ದಿ : ಶಾಲೆಯಲ್ಲಿ ಮಕ್ಕಳಿಗೆ ಮಾಸ್ಕ್, ಸಮವಸ್ತ್ರ ಕಡ್ಡಾಯ!

ಪತಿ : ನೋಡೇ, ಇವತ್ತು ನಿನ್ನ ಬದಲು ನಾನೇ ಶಾಲೆಗೆ ಹೋಗಿ ನಮ್ಮ ಮಗನ್ನ ಕರೆದುಕೊಂಡು ಬಂದಿದ್ದೀನಿ! ಬೇಗ ಬಿಸಿ ಬಿಸಿ ಕಾಫಿ ಮಾಡಿಕೊಡು.

ಪತ್ನಿ : ಕುಯ್ಯೋ ಮರ್ರೋ ಹಸಿವು… ಅಂತ ನನ್ನ ಪ್ರಾಣ ತಿನ್ನದೆ ಈ ಹುಡುಗ ಸೈಲೆಂಟಾಗಿ ನಿಂತಿದ್ದಾಗಲೇ ಅಂದುಕೊಂಡೆ, ಇದು ಖಂಡಿತಾ ನಮ್ಮ ಮನೆ ಮಗ ಅಲ್ಲ ಅಂತ…..! ಬಡ್ಕೊಂಡ್ರು ನಿಮ್ಮ ಬುದ್ಧಿಗೆ, ಇವನನ್ನು ಕರೆದುಕೊಂಡು ಹೋಗಿ ಬಿಟ್ಟು, ನಮ್ಮ ಹುಡುಗನ್ನ ಹುಡುಕಿಕೊಂಡು ಬನ್ನಿ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ