ಅಹಮದಾಬಾದ್‌ನ್ನು ಸ್ಥಳೀಯ ಭಾಷೆಯಲ್ಲಿ `ಅಮ್ದಾಬಾದ್’ ಎಂದು ಕರೆಯಲಾಗುತ್ತದೆ. ಅದು ಗುಜರಾತಿನ ಮಹತ್ವದ ನಗರ, ಹಿಂದೆ ರಾಜಕೀಯ ರಾಜಧಾನಿಯೂ ಆಗಿತ್ತು. ಭಾರತದ 7ನೇ ಅತಿ ದೊಡ್ಡ ಮಹಾನಗರ. ಪ್ರವಾಸೋದ್ಯಮದ ಸಾರ್ಥಕ ಪ್ರಯತ್ನಗಳಿಂದಾಗಿ ಅದು ಪ್ರಸ್ತುತ ಅತ್ಯಂತ ಮೆಚ್ಚಿನ ಪ್ರವಾಸಿ ತಾಣವಾಗಿದೆ.
ನಾವು ನಮ್ಮ ಪ್ರವಾಸವನ್ನು ಗಾಂಧಿ ಆಶ್ರಮದಿಂದ ಆರಂಭಿಸಿದೆ. ನಮ್ಮದೇ ಆದ ಒಂದು ತಂಡವಿತ್ತು. ಹೀಗಾಗಿ ನಾವು ಟ್ರಾವೆಲರ್ ಬುಕ್ ಮಾಡಿದ್ದೆ. ಆ ಕಾರಣದಿಂದ ನಮಗೆ ಹೆಚ್ಚು ಸಮಯ ವ್ಯರ್ಥ ಮಾಡಬೇಕಾಗಿ ಬರಲಿಲ್ಲ.
ಗಾಂಧಿ ಆಶ್ರಮ : ಗುಜರಾತ್ ತನ್ನ ವೇಷಭೂಷಣ ಹಾಗೂ ಸಂಸ್ಕೃತಿ ಕಾರಣದಿಂದ ಪ್ರಸಿದ್ಧಿ ಪಡೆದಿರುವಂತೆ, ಪ್ರವಾಸಿ ತಾಣಗಳಿಂದಲೂ ಪ್ರಸಿದ್ಧಿ ಪಡೆದಿದೆ.
ಪೋರಬಂದರ್ ನಲ್ಲಿ ಗಾಂಧೀಜಿಯವರಿಗೆ ಅಹಮದಾಬಾದ್ ಬಗ್ಗೆ ವಿಶೇಷ ಒಡನಾಟ ಇತ್ತು. ಇದೇ ಕಾರಣದಿಂದ ಅವರು ಸಬರಮತಿ ಆಶ್ರಮ ತೆರೆದರು. 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಮರಳಿದ ಬಳಿಕ ಅದೇ ಅವರ ವಾಸಸ್ಥಳವಾಗಿತ್ತು. ಕಸ್ತೂರ ಬಾ ಗಾಂಧಿ ಕೂಡ ಇಲ್ಲಿಯೇ ನೆಲೆಸಿದ್ದರು. ಇಬ್ಬರ ವಾಸಸ್ಥಳಗಳನ್ನು ಇಲ್ಲಿ ಕಾಣಬಹುದು. ಸಬರಮತಿ ಆಶ್ರಮವನ್ನು ಗಾಂಧಿ ಆಶ್ರಮ ಎಂದೇ ಕರೆಯಲಾಗುತ್ತದೆ. ಅದನ್ನು ನೋಡಿದಾಗ, ಗಾಂಧೀಜಿಯವರು ಇಲ್ಲೇ ಎಲ್ಲೋ ಹತ್ತಿರದಲ್ಲಿ ಇದ್ದಾರೆ ಎಂಬ ಅನುಭವ ಬರುತ್ತದೆ. ಈ ಆಶ್ರಯದಲ್ಲಿ ಗಾಂಧೀಜಿಯವರಿಗೆ ಸಂಬಂಧಿಸಿದ ಸಾಹಿತ್ಯ ಮತ್ತು ಅವರ ಜೀವನಕ್ಕೆ ಸಂಬಂಧಪಟ್ಟ ಅಪರೂಪದ ಚಿತ್ರಗಳು ನೋಡಲು ಸಿಗುತ್ತವೆ.
ಗಾಂಧಿಯವರು ತಮ್ಮ ಮೊದಲ ಆಶ್ರಮವನ್ನು ಅಹಮದಾಬಾದ್‌ನ ಕೋಚಕಾಬ್‌ನಲ್ಲಿ 1915ರಲ್ಲಿ ಸ್ಥಾಪನೆ ಮಾಡಿದರು. ಬಳಿಕ 1917ರಲ್ಲಿ ಅದನ್ನು ಸಬರಮತಿ ದಂಡೆಗೆ ಸ್ಥಳಾಂತರ ಮಾಡಲಾಯಿತು. ಹಾಗಾಗಿಯೇ ಇದನ್ನು `ಸಬರಮತಿ ಆಶ್ರಮ’ ಎಂದು ಕರೆಯಲಾಯಿತು.
1917 ರಿಂದ 1930ರ ತನಕ ಗಾಂಧೀಜಿಯವರು ಇಲ್ಲಿ ವಾಸ್ತವ್ಯ ಹೂಡಿದ್ದರು. ಮಾರ್ಚ್, 1930ರಂದು ಗಾಂಧೀಜಿಯವರು ಇಲ್ಲಿಂದಲೇ ಉಪ್ಪಿನ ಸತ್ಯಾಗ್ರಹಕ್ಕಾಗಿ ದಂಡೀ ಸತ್ಯಾಗ್ರಹ ಆರಂಭಿಸಿದ್ದರು.
ಈ ಆಶ್ರಮ 3 ಅದ್ಭುತ ಸ್ಥಳಗಳಿಂದ ಆವರಿಸಿದೆ. ಒಂದೆಡೆ ಸಬರಮತಿ ನದಿ, ಇನ್ನೊಂದೆಡೆ ಸ್ಮಶಾನ ಘಾಟ್ ಹಾಗೂ ಮೂರನೇ ಬದಿ ಜೈಲು ಇದೆ. ಇಲ್ಲಿ ಇರುವವರನ್ನು ಗಾಂಧೀಜಿಯವರು ಸತ್ಯಾಗ್ರಹಿಗಳೆಂದು ಕರೆಯುತ್ತಿದ್ದರು. ಅವರ ಪ್ರಕಾರ ಸತ್ಯಾಗ್ರಹಿಗಳ ಬಳಿ 2 ಪರ್ಯಾಯಗಳು ಮಾತ್ರ ಇರುತ್ತಿದ್ದವು. ಜೈಲಿಗೆ ಹೋಗುವುದು ಇಲ್ಲಿ ಜೀವನ ಮುಗಿಸಿ ಸ್ಮಶಾನಕ್ಕೆ ಹೋಗುವುದು.ಆಶ್ರಮದ ಮುಖ್ಯ ಸ್ಥಳ `ಹೃದಯ ಕುಂಜ’ ಅಲ್ಲಿಯೇ ಬಾಪೂಜಿ ವಾಸಿಸುತ್ತಿದ್ದರು. ಅವರು ಬಳಸುತ್ತಿದ್ದ ಪರಿಕರಗಳನ್ನೆಲ್ಲ ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಅವುಗಳಲ್ಲಿ ಅವರು ಬರೆದ ಪತ್ರಗಳು ಮುಖ್ಯವಾಗಿವೆ. ಸಂಗ್ರಹಾಲಯದ ಒಂದು ಸ್ಥಳವನ್ನು `ಮೈ ಲೈಫ್ ಈಸ್ ಮೈ ಮೆಸೇಜ್’ ಎಂದು ಕರೆಯಲಾಗುತ್ತದೆ. ಇಲ್ಲಿ ಅವರ ಜೀವನಕ್ಕೆ ಸಂಬಂಧಪಟ್ಟ 8 ವಿಶಾಲ ಪೇಂಟಿಂಗ್ ಗಳಿವೆ. ಅವುಗಳಲ್ಲಿ ಅವರ ಜೀವನಗಾಥೆಯನ್ನು ಹತ್ತಿರದಿಂದ ಕಾಣಬಹುದು.
ಸಬರಮತಿ ಆಶ್ರಮದೆದುರು `ತೋರಣ್ ರೆಸ್ಟುರಾ’ಗೆ ಹೋಗುವುದರ ಅರ್ಥ ಅದ್ಭುತ. ಗುಜರಾತಿ ಥಾಲಿಯ ಆನಂದ ಅನುಭವಿಸುವುದಾಗಿದೆ. ಗುಜರಾತ್‌ಗೆ ಹೋದರೆ ಅಲ್ಲಿನ ಊಟದ ಮಜವನ್ನು ಅನುಭವಿಸಲೇಬೇಕು.
ಅಲ್ಲಿಂದ ನಾವು ಲಾಲ್ ದರ್ ಲಾಜಾದತ್ತ ಪ್ರಯಾಣ ಬೆಳೆಸಿದೆ. ಅಲ್ಲಿ ಪ್ರಸಿದ್ಧ ಸಿದ್ಧಿ ಸಯ್ಯದ್ ಮಸೀದಿ ಇದೆ.
ಸಿದ್ಧಿ ಸೈಯ್ಯದ್ ಮಸೀದಿ :
1573ರಲ್ಲಿ ಅಹಮದಾಬಾದ್ ನಲ್ಲಿ ಮೊಘಲರ ಅವಧಿಯಲ್ಲಿ ನಿರ್ಮಾಣವಾದ ಕೊನೆಯ ಮಸೀದಿಯಾಗಿದೆ. ಇದರ ಪಶ್ಚಿಮ ಭಾಗದ ಕಿಟಕಿಯ ಮೇಲಿನ ಕಲ್ಲಿನ ಮೇಲೆ ಕೆತ್ತಲಾದ ಚಿತ್ರಗಳು ಬಹಳ ಪ್ರಸಿದ್ಧಿ ಪಡೆದಿವೆ. ಇದು ಆಗಿನ ಕಾಲದ ಶಿಲ್ಪಕಲೆಯ ವೈಶಿಷ್ಟ್ಯತೆಯನ್ನು ಬಿಂಬಿಸುತ್ತದೆ.
ಬಳಿಕ ಅಲ್ಲಿಯೇ ಸಮೀಪದಲ್ಲಿದ್ದ ಮಾರುಕಟ್ಟೆಯತ್ತ ಸಾಗಿದೆ. ಅಲ್ಲಿ ಖರೀದಿದಾರರ ಜನಜಂಗುಳಿ ಕಂಡುಬರುತ್ತಿತ್ತು. ಹಾಗೆಯೇ ಅಲ್ಲಿಂದ 2 ಕಿ.ಮೀ. ದೂರ ಸಾಗಿದರೆ ಝೂಲತಾ ಮಿನಾರ್ ಸಿಗುತ್ತದೆ.
ಝೂಲತಾ ಮಿನಾರ್ :
ಇಲ್ಲಿ 2 ತೂಗಾಡುವ ಮಿನಾರುಗಳ ಜೋಡಿಯಿದೆ. ಅವುಗಳಲ್ಲಿ ಒಂದು ಸಿದ್ಧಿ ಬಶೀರ್ ಮಸೀದಿ. ಇದು ಸಾರಂಗಪುರ ದರ್ವಾಜಾ ಭಾಗದಲ್ಲಿದ್ದರೆ, ಇನ್ನೊಂದು ಅಹಮದಾಬಾದ್ ರೈಲ್ವೇ ಸ್ಟೇಷನ್ ಸಮೀಪವಿದೆ. ಈ ಮಿನಾರ್ ಗಳ ವಿಶೇಷತೆಯೇನೆಂದರೆ, ಅವುಗಳಲ್ಲಿ ಒಂದು ಮಿನಾರ್ ಅಲ್ಲಾಡಿದರೆ, ಸ್ವಲ್ಪ ಹೊತ್ತಿನ ಬಳಿಕ ಇನ್ನೊಂದು ಮಿನಾರ್ ಕೂಡ ಅಲ್ಲಾಡುತ್ತದೆ. ಸಿದ್ಧಿ ಬಶೀರ್ ಮಸೀದಿ 3 ಮಹಡಿಯದ್ದಾಗಿದ್ದು, ಅಲ್ಲಿನ ಬಾಲ್ಕನಿಯಲ್ಲಿ ಸಾಕಷ್ಟು ಕೆತ್ತನೆ ಕಾರ್ಯ ಕಂಡುಬರುತ್ತದೆ. ಸುಲ್ತಾನ್ ಅಹಮದಾಶಾಹನ ಕೈಕೆಳಗೆ ಕೆಲಸ ಮಾಡುತ್ತಿದ್ದ ಸಿದ್ಧಿ ಬಶೀರ್ ಅವನ್ನೆಲ್ಲ ಚಿತ್ರಿಸಿದನೆಂದು ಹೇಳಲಾಗುತ್ತದೆ. ಮಸೀದಿ ಅಲ್ಲಾಡಲು ಏನು ಕಾರಣವೆಂದು ಈವರೆಗೂ ಪತ್ತೆಹಚ್ಚಲು ಆಗಿಲ್ಲ. ಇದರ ನಿರ್ಮಾಣದ ಹಿಂದೆ ಗಾಢ ರಹಸ್ಯವೊಂದು ಅಡಗಿದೆ.
ದಿಲ್ಲಿ ದರ್ವಾಜಾದಲ್ಲಿ ಸಾಗುವಾಗ ಮಿರ್ಜಾಪುರ ರೋಡ್ ನಲ್ಲಿ ಹಥಿಸಿಂಗ್ ಜೈನ್ ಮಂದಿರವೊಂದು ಕಂಡುಬರುತ್ತದೆ. ಅಲ್ಲಿರುವ ಸುಂದರ ಶಿಲ್ಪಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯದಿರುವುದೇ ಒಂದು ಸಜೆ ಎಂಬಂತೆ ಭಾಸವಾಗುತ್ತದೆ.
ಹಥಿಸಿಂಗ್ ಜೈನ್ ಮಂದಿರ :
15ನೇ ತೀರ್ಥಂಕರ ಧರ್ಮನಾಥರಿಗೆ ಸಮರ್ಪಿತ ಈ ಮಂದಿರವನ್ನು ಅಹಮದಾಬಾದಿನ ಉದ್ಯಮಿ ಹಥಿಸಿಂಗ್ ತಮ್ಮ ಹೆಂಡತಿಯ ಸ್ಮರಣೆಗಾಗಿ ನಿರ್ಮಿಸಿದ್ದಾರೆ. 1848ರಲ್ಲಿ ಈ ಮಂದಿರ ಬಿಳಿ ಕಲ್ಲಿನಿಂದ ನಿರ್ಮಾಣವಾಗಿದ್ದು, ಅದ್ಭುತ ಶಿಲ್ಪ ಕೌಶಲವನ್ನು ಬಿಂಬಿಸುತ್ತದೆ. ಅದರಲ್ಲಿ ಒಂದು ಮಂಟಪ, ಸುಂದರ ನಕ್ಷೆಗಳುಳ್ಳ 12 ಕಂಬಗಳಿವೆ. ಇಲ್ಲಿ ಜೈನ ತೀರ್ಥಂಕರರ 52 ಮಂದಿರಗಳಿವೆ. ಮಂದಿರದ ಹೊರಗೆ ಮುಖ್ಯ ದ್ವಾರದ ಎದುರು ಕೀರ್ತಿ ಸ್ತಂಭವಿದೆ. ಅದು 78 ಮೀಟರ್ ಎತ್ತರವಿದ್ದು, ಅದರ ಮೇಲಿರುವ ಕೆತ್ತನೆಗೂ ಮೊಘಲರ ಕೆತ್ತನೆ ಸಾಕಷ್ಟು ಹೋಲಿಕೆ ಕಂಡುಬರುತ್ತದೆ. ಈ ಎರಡು ಅಂತಸ್ತಿನ ಮಂದಿರ ವಾಸ್ತು ಶಿಲ್ಪದ ಯಾವುದೇ ಚಮತ್ಕಾರಕ್ಕಿಂತ ಕಡಿಮೆ ಏನಿಲ್ಲ.
ಸಂಜೆಯಾಗುತ್ತಿದ್ದಂತೆ ನಾವು ಹ್ಯಾಂಡಿಕ್ರಾಫ್ಟ್ ಬಜಾರಿಗೆ ಭೇಟಿ ಕೊಟ್ಟೆ. ಅಲ್ಲಿ ಗುಜರಾತಿ ಪೋಷಾಕುಗಳು ಚನಿಯಾ ಚೋಲಿ ಅಥವಾ ಆರ್ಟಿಫಿಶಿಯಲ್ ಜ್ಯೂವೆಲರಿಗಳು ಹೆಚ್ಚಾಗಿ ಕಂಡುಬಂದವು. ಮಕ್ಕಳಿಗಾಗಿ ಕೆಲವು ವಿಶಿಷ್ಟ ಪೋಷಾಕುಗಳನ್ನು ಖರೀದಿಸಿ ಅಲ್ಲಿಂದ ನಾವು ಸರ್ಖೇಜ್ ರೋಜಾದತ್ತ ಸಾಗಿದೆ.
ಸರ್ಖೇಜ್ ರೋಜಾ :
ಅಹಮದಾಬಾದ್ ನಲ್ಲಿ ಸರ್ಖೇಜ್ ರೋಜಾ ಪರಿಸರ ಜಾದೂವಿನಂತೆ ಕಂಡುಬರುತ್ತದೆ. ಬಹಳ ಹಳೆಯ ಆದರೆ ಅತ್ಯಂತ ಸುಂದರವಾಗಿ ಕಂಡುಬರುವ ಈ ಕಟ್ಟಡಗಳ ಸಮೂಹ ಒಂದು ಚಿಕ್ಕ ಕೆರೆಯ ಮೇಲಿದೆ. ಅದನ್ನು ಅಹಮದಾಬಾದನ್ನು ಆಳುತ್ತಿದ್ದ ದೊರೆ ಉಪಯೋಗಿಸುತ್ತಿದ್ದ. ಅಲ್ಲಿ ಒಂದು ಪ್ರಾರ್ಥನಾ ಕಕ್ಷೆ, ಸುಂದರ ಗುಂಬಜ್, ವಿಶಾಲ ಜ್ಯಾಮಿತೀಯ ಕಿಟಕಿಗಳನ್ನು ಅಳವಡಿಸಲಾಗಿದೆ. ಸೂರ್ಯನ ದಿಸೆ ಬದಲಾದಂತೆ ನೆಲದ ಮೇಲೆ ಬೀಳುವ ಆಕೃತಿಗಳು ಬದಲಾಗುತ್ತಾ ಹೋಗುತ್ತವೆ. ಫ್ರಾನ್ಸ್ ನ ಒಬ್ಬ ಶಿಲ್ಪಿ ಕೊರ್ಬೆಸೊರ್ ಈ ವಿನ್ಯಾಸವನ್ನು ಅಥೆನ್ಸ್ ನ ಆರ್ಕೊಪೊಲೀಸಿಗೆ ಹೋಲಿಸಿದ್ದಾರೆ. ಹೀಗಾಗಿ ಇದನ್ನು ಅಹಮದಾಬಾದಿನ ಆರ್ಕೊಪೊಲೀಸ್ ಎಂದು ಕರೆಯಲಾಗುತ್ತದೆ.
ಅಲ್ಲಿಂದ 32 ಕಿ.ಮೀ. ದೂರದಲ್ಲಿ ಗಾಂಧಿನಗರಕ್ಕೆ ಹೋಗಲು ಸಜ್ಜಾದೆ. ದಾರಿ ಮಧ್ಯದಲ್ಲಿ ನಾವು ಡೋಕ್ಲಾ ತಿಂದು ಮಜ್ಜಿಗೆ ಕುಡಿದೆವು.
ದಂಡೀ ಕುಟೀರ :
ಮಹಾತ್ಮಾ ಗಾಂಧೀಜಿಯವರ ಜೀವನ ಹಾಗೂ ಶಿಕ್ಷಣವನ್ನು ಅವಲಂಬಿಸಿದ ಭಾರತದ ಏಕೈಕ ಸಂಗ್ರಹಾಲಯ. ಗಾಂಧೀಜಿಯವರ ಆರಂಭಿಕ ಜೀವನದ ಚಿತ್ರಣವನ್ನು ಆಡಿಯೋ ವಿಷುವಲ್ ನ ನೆರವಿನಿಂದ ಸುಂದರವಾಗಿ ನಿರೂಪಿಸಲಾಗಿದೆ. ಗಾಂಧೀಜಿಯವರ ಜೀವನವನ್ನು ಆಧರಿಸಿದ ಪರಿಷತ್ ತಂತ್ರಜ್ಞಾನದೊಂದಿಗೆ ಈ ಸಂಗ್ರಹಾಲಯವನ್ನು ರೂಪಿಸಲಾಗಿದೆ. ಇದರಲ್ಲಿ ಆಡಿಯೋ, ವಿಡಿಯೋ ಹಾಗೂ 3ಡಿ ದೃಶ್ಯ 360 ಡಿಗ್ರಿ ಶೋ ಹಾಗೂ ಡಿಸ್ ಪ್ಲೇಯ ಪ್ರಯೋಗ ಮಾಡಲಾಗುತ್ತದೆ.
ದಂಡೀ ಕುಟೀರ 41 ಮೀಟರ್ ಎತ್ತರ ಶಂಕುವಿನ ಆಕಾರದಲ್ಲಿದೆ. ಇದು ಉಪ್ಪಿನ ಗುಡ್ಡೆಯ ಥರ ಕಾಣಿಸುತ್ತದೆ. ಈ ಉಪ್ಪಿನ ಗದ್ದೆ 1930ರಲ್ಲಿ ಬ್ರಿಟಿಷ್ ಸರ್ಕಾರ ಉಪ್ಪಿನ ಮೇಲೆ ಹೇರಲಾದ ತೆರಿಗೆಯ ವಿರುದ್ಧ ನಡೆಸಿದ ಪ್ರತಿಭಟನೆಯನ್ನು ಸೂಚಿಸುತ್ತದೆ.
ದಂಡೀ ಕುಟೀರ ಮ್ಯೂಸಿಯಂ :
10,700 ಚದರ ಮೀಟರ್ ಜಾಗದಲ್ಲಿ ವ್ಯಾಪಿಸಿದ ಈ ಮ್ಯೂಸಿಯಂನಲ್ಲಿ 40.5 ಮೀಟರ್‌ನ ಸಾಲ್ಟ್ ಮ್ಯೂಸಿಯಂ ಇದೆ. ಇಲ್ಲಿ 14 ಬಗೆಯ ಮಲ್ಟಿ ಮೀಡಿಯಾ ಇವೆ. ಮೂರನೇ ಮಹಡಿಯಿಂದ ಮ್ಯೂಸಿಯಂನ ವೀಕ್ಷಣೆ ಮಾಡಬೇಕು. ಇದು ಒಂದು ರೀತಿಯ ಸೆಲ್ಫ್ ಗೈಡ್ ಮ್ಯೂಸಿಯಂ ಆಗಿದೆ. ಏಕೆಂದರೆ ನೀವು ಒಳಗೆ ಪ್ರವೇಶಿಸುತ್ತಿದ್ದಂತೆಯೇ ಹೆಡ್ ಫೋನ್ ಕೊಡಲಾಗುತ್ತದೆ. ಇದು ಸೆನ್ಸರ್ ನೊಂದಿಗೆ ಸಂಪರ್ಕಿಸಲ್ಪಟ್ಟಿರುತ್ತದೆ. ಇದರಲ್ಲಿ ಆಡಿಯೋ ಗೈಡ್ ಸಿಸ್ಟಂ ಅಳವಡಿಸಲಾಗಿರುತ್ತದೆ.
ಅಂದರೆ ನೀವು ಯಾವ ಪೋಸ್ಟರಿನ ಎದುರು ನಿಂತಿರುತ್ತೀರೊ, ಅದರ ಬಗ್ಗೆಯೇ ನೀವು ಆಡಿಯೋ ಕೇಳಿಸಿಕೊಳ್ಳಬಹುದು.
ಪ್ರತಿ ಅರ್ಧ ಗಂಟೆಗೆ 50 ಜನರ ಗುಂಪು ಒಳಗೆ ಪ್ರವೇಶಿಸುತ್ತದೆ. ಕುಟೀರವನ್ನು ನೋಡಿ ಮುಗಿಸಲು ಒಂದೂವರೆ ಗಂಟೆ ಸಮಯ ತಗುಲುತ್ತದೆ.
ಈ ಸಂಗ್ರಹಾಲಯ ಅವರ ಜೀವನಗಾಥೆಯನ್ನಷ್ಟೇ ಪ್ರಸ್ತುತಪಡಿಸುವುದಿಲ್ಲ, ಅವರ ವಿಚಾರಗಳು ಹಾಗೂ ಆದರ್ಶವನ್ನು ತಿಳಿಸಲು ನೆರವಾಗುತ್ತದೆ.
3ನೇ ಮಹಡಿ ಅವರ ಬಾಲ್ಯದಿಂದ ಹಿಡಿದು ಲಂಡನ್ನಿಗೆ ಹೋಗಿದ್ದ ತನಕದ ಪ್ರವಾಸವನ್ನು ಪ್ರಸ್ತುತಪಡಿಸುತ್ತದೆ. 2ನೇ ಮಹಡಿ ಲಂಡನ್ನಿನಿಂದ ದಕ್ಷಿಣ ಆಫ್ರಿಕಾದ ತನಕ ಪ್ರವಾಸದ ವರ್ಣನೆಯನ್ನು ನೀಡುತ್ತದೆ. ಮೊದಲನೇ ಮಹಡಿಯಲ್ಲಿ ಒಂದು ಟ್ರೇನ್ ಇದ್ದು, ಅದರಲ್ಲಿ ಕುಳಿತು ಅವರು ಬನಾರಸ್ಸಿಗೆ ಬಂದಿದ್ದರು. ಆಗ ಬನಾರಸ್ ಹಿಂದೂ ವಿಶ್ವ ವಿದ್ಯಾಲಯಕ್ಕೆ ಅಡಿಗಲ್ಲನ್ನು ಇಡಲಾಗಿತ್ತು. ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಪಟ್ಟ ಘಟನಾವಳಿಗಳ ಚಿತ್ರಣ ನಿಮಗಿಲ್ಲಿ ಸಿಗುತ್ತದೆ.
ಅಕ್ಷರಧಾಮ ಮಂದಿರ :
ಇಲ್ಲಿಂದ 12 ನಿಮಿಷದ ದೂರದಲ್ಲಿದೆ. ಆ ಮಂದಿರ ಎಷ್ಟು ವಿಶಾಲವಾಗಿದೆಯೆಂದರೆ, ಇಲ್ಲಿ ದಾರಿ ತಪ್ಪುವುದು ಸಹಜವೇ ಹೌದು. ಸಂಜೆ ಹೊತ್ತು ಇಡೀ ಮಂದಿರ ಸುಂದರ ಬೆಳಕಿನಿಂದ ಕಂಗೊಳಿಸುತ್ತದೆ.
ಮಾನೇಕ್ ಚೌಕ್ :
ಅಹಮದಾಬಾದಿಗೆ ಹೋದಾಗ ನೀವು ಇಲ್ಲಿನ ಪ್ರಸಿದ್ಧ ಮಾನೇಕ್ ಚೌಕ್ ಗೆ ಹೋಗದಿದ್ದರೆ ನಿಮ್ಮ ಪ್ರವಾಸ ಅಪೂರ್ಣವಾದಂತೆಯೇ ಸರಿ. ಈ ಮಾರುಕಟ್ಟೆ ದಿನಕ್ಕೆ 3 ಸಲ ತನ್ನ ಸ್ವರೂಪ ಬದಲಿಸಿಕೊಳ್ಳುತ್ತದೆ. ಮುಂಜಾನೆ ಇಲ್ಲಿ ತರಕಾರಿ ವ್ಯಾಪಾರಿಗಳು ಕಂಡುಬಂದರೆ, ಮಧ್ಯಾಹ್ನ ಆಭರಣ ವ್ಯಾಪಾರಿಗಳು, ಬಟ್ಟೆ ವ್ಯಾಪಾರಿಗಳು ವಹಿವಾಟು ನಡೆಸುತ್ತಾರೆ. ಸಂಜೆ ಹೊತ್ತು ವ್ಯಾಪಾರಿಗಳು ಇಲ್ಲಿ ಬಗೆಬಗೆಯ ತಿಂಡಿಗಳನ್ನು ಮಾರಾಟ ಮಾಡುತ್ತಾರೆ.
ರಸ್ತೆ ಬದಿ ಚೆಸ್ : ಉತ್ತರ ಅಹಮದಾಬಾದಿನ 1 ಕಿ.ಮೀ. ದೂರದಲ್ಲಿ ಮಿರ್ಜಾಪುರದಲ್ಲಿ ಚೆಸ್ ಆಟ ಆಡುವವರಿಗಾಗಿ ಆಟದ ಮೈದಾನ ಇದೆ. ಇಲ್ಲಿ ಅಷ್ಟೇ ಅಲ್ಲ ರಸ್ತೆ ಬದಿ ಸಹ ಚೆಸ್ ಆಡುತ್ತ ಬೆಟ್ಟಿಂಗ್ ಮಾಡುತ್ತಿರುವುದು ಕಂಡುಬರುತ್ತದೆ.
– ಪ್ರತಿನಿಧಿ
ಹೇಗೆ ತಲುಪುದು?
ವಿಮಾನದ ಮೂಲಕ : ಬೆಂಗಳೂರಿನಿಂದ ನೇರವಾಗಿ ಅಹಮದಾಬಾದ್ ತಲುಪಲು ವಿಮಾನ ಸೌಕರ್ಯವಿದೆ.
ರೈಲಿನಲ್ಲಿ : ಬೆಂಗಳೂರಿನಿಂದ ಗುಜರಾತಿಗೆ ನೇರವಾಗಿ ಸಂಚರಿಸುವ ಹಲವು ರೈಲುಗಳ ಸಂಪರ್ಕವಿದೆ. ಅದರ ಮಾಹಿತಿಯನ್ನು ನೀವು ಸಮೀಪದ ರೈಲು ನಿಲ್ದಾಣಕ್ಕೆ ಹೋಗಿ ಪಡೆಯಬಹುದು.
ರಸ್ತೆ ಮೂಲಕ : ಗುಜರಾತಿನ ರಸ್ತೆ ಸಂಪರ್ಕ ವ್ಯವಸ್ಥೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಹಳ ಚೆನ್ನಾಗಿದೆ. ಇಲ್ಲಿ 68,900 ಕಿ.ಮೀ. ರಸ್ತೆ ಇದ್ದು, ಅದರಲ್ಲಿ 1572 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಿದೆ. ಹೀಗಾಗಿ ರಸ್ತೆ ಮೂಲಕ ಗುಜರಾತಿಗೆ ತಲುಪಬಹುದು.