`ನಾಳೆ ಭಾನುವಾರ. ಆಫೀಸಿಗೆ ರಜೆ. ಅಲಾರ್ಮ್ ಬಂದ್‌ ಮಾಡಿ ಮಲಗುವೆ.’ ಎಂದು ಯೋಚಿಸುತ್ತ ಆಶಾ ಮೊಬೈಲಿ‌ನತ್ತ ಹೆಜ್ಜೆ ಹಾಕಿದಳು. ಬಳಿಕ ವಾಟ್ಸ್ ಆ್ಯಪ್‌ನ ಆಕರ್ಷಕ ಹಸಿರು ಗುಂಡಿಯ ಮೇಲೆ ಟಚ್‌ ಮಾಡಿದ್ದಳು. ಸ್ಕ್ರಾಲ್ಪ್ ಮಾಡುತ್ತಾ ಮಾಡುತ್ತಾ ಅನಾಮಧೇಯ ನಂಬರಿನಿಂದ ಬಂದ ಮೆಸೇಜ್‌ ಮೇಲೆ ಬೆರಳು ನಿಂತುಬಿಟ್ಟಿತು.

“ಹೇಗಿದ್ದೀಯಾ ಆಶಾ?” ಅದನ್ನು ಓದಿ ಅದು ಯಾರ ಸಂದೇಶ ಎಂದು ಅವಳ ಅರಿವಿಗೆ ಬರಲಿಲ್ಲ. ಬಳಿಕ ಅವಳು ಡಿಪಿ ಮೇಲೆ ಕ್ಲಿಕ್‌ ಮಾಡಿದಾಗ ಅದು ಚಿರಪರಿಚಿತ ಎಂಬಂತೆ ಭಾಸವಾಯಿತು.

`ಹೇ! ಅವನು ಅನೂಪ್‌` ಆಶಾಳ ಮೆದುಳು ಆ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

“ಫೈನ್‌,” ಎಂದು ಟೈಪ್‌ ಮಾಡಿ ಅವಳು ಹೆಬ್ಬೆಟ್ಟಿನ ಎಮೋಜಿಯೊಂದನ್ನು ಅದರ ಜೊತೆಗೆ ರವಾನಿಸಿದಳು.

“ಏನಾಯ್ತು? ಯಾರ ಮೆಸೇಜ್‌?” ಅಮ್ಮ ಆಕಸ್ಮಿಕವಾಗಿ ಕೇಳಿದಾಗ, ತನ್ನ ಕಳ್ಳತನ ಪತ್ತೆಯಾಯಿತು ಎಂಬಂತೆ ಆಶಾಗೆ ಅನಿಸಿತು.

“ಯಾರದ್ದೋ ಮೆಸೇಜು. ಅಪರಿಚಿತ ನಂಬರಿನಿಂದ ಬಂದಿದೆ,” ಎಂದು ಹೇಳಿ ಆಶಾ ವಿಷಯವನ್ನು ಬದಿಗಿಡಲು ನೋಡಿದಲು.

“ನೋಡು, ನಾಳೆ ಸೋಮುವನ್ನು 4 ಗಂಟೆಗೆ ಎಬ್ಬಿಸು. ಅವನಿಗೆ ಫೈನ್‌ ಎಗ್ಸಾಮ್ ಪ್ರಾಜೆಕ್ಟ್ ಕೆಲಸ ಮುಗಿಸಬೇಕಂತೆ. ಅವನಿಗೆ 1 ಕಪ್‌ ಚಹಾ ಕೂಡ ಮಾಡಿಕೊಡು. ಏಕೆಂದರೆ ಅವನಿಗೆ ನಿದ್ರೆಯ ಮಂಪರು ಬರದಿರಲಿ,” ಅಮ್ಮ ಅವಳಿಗೆ ಆದೇಶ ನೀಡುತ್ತಾ ಮಲಗುವ ಕೋಣೆಗೆ ಹೊರಟರು.

ಅಲಾರ್ಮ್ ಬಂದ್‌ ಮಾಡಲು ಅವಳ ಕೈ ಒಮ್ಮೆಲೆ ನಿಂತುಬಿಟ್ಟಿತು. ಅವಳು ಮೊಬೈಲ‌ನ್ನು ಚಾರ್ಜಿಗೆ ಹಾಕಿದಳು. ಬ್ಯಾಟರಿ ಲೋ ಆಗಿ, ಮುಂಜಾನೆ ಸ್ವಿಚ್‌ ಆಫ್‌ ಆಗಿ ಅಲಾರ್ಮ್ ಆಗದಿದ್ದರೆ ಏನು ಮಾಡುವುದು? 4 ಗಂಟೆಗೆ ಅವನನ್ನು ಎಬ್ಬಿಸದಿದ್ದರೆ ಅವನು ಇಡೀ ದಿನ ಮುಖ ಊದಿಸಿಕೊಂಡು ಕೂತಿರುತ್ತಾನೆ. ಅಮ್ಮನೂ ಕೂಡ ಕೋಪ ಮಾಡಿಕೊಳ್ಳುತ್ತಾಳೆ. ಹೀಗೆಲ್ಲ ಯೋಚಿಸಿ ಅವಳಿಗೆ ರಾತ್ರಿಯಿಡೀ ನಿದ್ರೆಯೇ ಬರಲಿಲ್ಲ. ಅವಳಿಗೆ ನಿದ್ರೆ ಬರದೇ ಇರುವ ಕಾರಣ ಅನೂಪ್‌ ನ ಮೆಸೇಜ್‌ ಆಗಿತ್ತು.

ಆಶಾ ರಾತ್ರಿಯಿಡೀ ಅನೂಪ್‌ ಬಗ್ಗೆಯೇ ಯೋಚಿಸುತ್ತಿದ್ದಳು. ಅನೂಪ್‌ ಅವಳ ಕಾಲೇಜ್‌ ಕ್ಲಾಸ್‌ ಮೇಟ್‌ ಆಗಿದ್ದ. ಅವನ ಜೊತೆ ಆಗ ಇನ್ನಷ್ಟು ಸಮಯ ಕಳೆದಿದ್ದರೆ ಆ ಸ್ನೇಹ ಪ್ರೀತಿಯಲ್ಲಿ ಪರಿವರ್ತನೆ ಆಗಿಬಿಡ್ತಿತ್ತೋ ಏನೊ, ಕಾಲೇಜು ಶಿಕ್ಷಣದ ಬಳಿಕ ಅನೂಪ್ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ದೆಹಲಿಗೆ ಹೋದ. ಅವನ ಮುಂದೆ ಪ್ರೀತಿಯನ್ನು ವ್ಯಕ್ತಪಡಿಸಲೂ ಆಗಲಿಲ್ಲ. ಅವನ ಪ್ರತಿಕ್ರಿಯೆಯನ್ನು ಪಡೆಯಲೂ ಆಗಲಿಲ್ಲ. ಮನಸ್ಸಿನಲ್ಲಿದ್ದ ಪ್ರೀತಿ ಅಲ್ಲಿಯೇ ಹತ್ತಿಕ್ಕಲ್ಪಟ್ಟಿತು.

ಈ ಮಧ್ಯೆ ಆಶಾಳ ತಂದೆ ಅಪಘಾತವೊಂದರಲ್ಲಿ ತೀರಿಹೋದರು. ಅಮ್ಮನ ಜೊತೆ ತಮ್ಮ ಜವಾಬ್ದಾರಿಯೂ ಅವಳ ಕೊರಳಿಗೆ ಬಿತ್ತು. ಅಪ್ಪ ಹೋದ ಬಳಿಕ ಅಮ್ಮ ಆಗಾಗ ಅನಾರೋಗ್ಯ ಪೀಡಿತರಾಗತೊಡಗಿದರು. ಸೋಮು ಆಗ 6ನೇ ಕ್ಲಾಸಿನಲ್ಲಿ ಓದುತ್ತಿದ್ದ.

ಆಶಾಳಿಗೆ ತನ್ನ ತಂದೆಯ ನಿಧನಾನಂತರ ಅನುಕಂಪದ ನೌಕರಿ ಸಿಕ್ಕಿತು. ಅವಳು ಜೀವನದ ಜಂಜಾಟದಲ್ಲಿ ಸಿಲುಕುತ್ತಲೇ ಹೋದಳು. 10 ವರ್ಷಗಳ ಬಳಿಕ ಈಗ ಬಂದ ಅನೂಪ್‌ನ ಮೆಸೇಜ್‌ ಅವಳ ಹೃದಯದಲ್ಲಿ ಅಲ್ಲೋಲ ಕಲ್ಲೋಲವನ್ನುಂಟು ಮಾಡಿತ್ತು.

`ನಾಳೆ ಅವನ ಜೊತೆ ಮಾತಾಡ್ತೀನಿ,’ ಎಂದು ಯೋಚಿಸುತ್ತಾ ಅವಳಿಗೆ ನಿದ್ರೆ ಆವರಿಸಿಕೊಂಡಿತು.

ಮನೆ ಹಾಗೂ ಹೊರಗಿನ ಜವಾಬ್ದಾರಿಯನ್ನು ನಿಭಾಯಿಸಲು ಆಶಾ ಪ್ರತಿ ಮುಂಜಾನೆ 5ಕ್ಕೆ ಏಳಬೇಕಿತ್ತು. ರಾತ್ರಿ 11 ಗಂಟೆ ಆದರೂ ಮಲಗಲು ಆಗುತ್ತಿರಲಿಲ್ಲ. ಆಫೀಸಿಗೆ ಹೋಗುವ ಮೊದಲು ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟದ ತಯಾರಿಯನ್ನೆಲ್ಲ ಅವಳೇ ಮಾಡಿ ಮುಗಿಸಬೇಕಿತ್ತು. 10 ಗಂಟೆಗೆ ಅವಳು ಬಯೋಮೆಟ್ರಿಕ್‌ ನಲ್ಲಿ ತನ್ನ ಹಾಜರಾತಿ ಕೊಡಬೇಕಿತ್ತು. ಆಫೀಸ್‌ ಕೆಲಸ ಕಾರ್ಯಗಳ ನಡುವೆ ಸಂಜೆ 6 ಗಂಟೆ ಹೇಗಲಾಗುತ್ತಿತ್ತೋ ಅವಳಿಗೆ ಗೊತ್ತಾಗುತ್ತಿರಲಿಲ್ಲ. ಮನೆಗೆ ಬಂದು ಅಮ್ಮ ಮಾಡಿಕೊಟ್ಟ 1 ಕಪ್‌ ಚಹಾ ಕುಡಿದು ತನ್ನನ್ನು ತಾನು ರೀಚಾರ್ಜ್‌ ಮಾಡಿಕೊಂಡು ಮುಂದಿನ ಕೆಲಸ ಕಾರ್ಯಗಳಿಗೆ ಅಣಿಯಾಗಬೇಕಿತ್ತು.

ರಾತ್ರಿ 11 ಗಂಟೆತನಕ ಕಂಪ್ಯೂಟರಿನ ಹಾಗೆ ತನಗೆ ತಾನೇ ಶಟ್‌ ಡೌನ್‌ ಮಾಡಿಕೊಂಡು ನಿದ್ರೆಯೆಂಬ ಚಾರ್ಜಿಗೆ ಒಳಗಾಗುತ್ತಿದ್ದಳು. ಎಂದಾದರೊಮ್ಮೆ ಮನೆಗೆ ಅತಿಥಿಗಳು ಬಂದಾಗ ಅಥವಾ ಅಮ್ಮ ಅನಾರೋಗ್ಯ ಪೀಡಿತಳಾದಾಗ ಅವಳು ಇನ್ನಷ್ಟು ಹೆಕ್ಟಿಕಲ್ ಆಗುತ್ತಿದ್ದಳು. ಆ ಬಳಿಕ ಅವಳ ದೇಹ ರೋಬೋಟ್‌ ನಂತೆ ಆಗಿಬಿಡುತ್ತಿತ್ತು. ತನಗಾಗಿ ಎಂದಾದರೂ ಒಂದಿಷ್ಟು ಸಮಯ ಮೀಸಲಿಟ್ಟುಕೊಳ್ಳಲು ಅವಳಿಗೆ ಸಾಧ್ಯ ಆಗುತ್ತಲೇ ಇರಲಿಲ್ಲ.

ಯಾಂತ್ರಿಕವಾಗಿ ನಡೆಯುತ್ತಿದ್ದ ಜೀವನದಲ್ಲಿ ಆಕಸ್ಮಿಕವಾಗಿ ಬಂದ ಅನೂಪನ ಮೆಸೇಜ್‌ ಅವಳಲ್ಲಿ ಲೂಬ್ರಿಕೆಂಟ್‌ ನಂತೆ ಕೆಲಸ ಮಾಡಿತ್ತು.

ಬೆಳಗ್ಗೆ 11ಕ್ಕೆ ಆಫೀಸಿನ ದೈನಂದಿನ ಕೆಲಸದಿಂದ ಪುರಸತ್ತು ಪಡೆದು ಚಹಾಕ್ಕೆಂದು ಹೊರಟಾಗ ಅವಳಿಗೆ ಅನೂಪನ ನೆನಪಾಯಿತು.                                                                                                                                                                                                         ರಾತ್ರಿ ಬಂದ ಮೆಸೇಜ್‌ನಂಬರಿನ ಮೇಲೆ ಕ್ಲಿಕ್‌ ಮಾಡಿದಾಗ, ಅತ್ತ ಕಡೆಯಿಂದ ರಿಂಗ್‌ ಹೊಡೆದುಕೊಳ್ಳತೊಡಗಿತು. ಜೊತೆಗೆ ಇವಳ ಎದೆ ಬಡಿತ ಕೂಡ ಹೆಚ್ಚಾಯಿತು.

“ಹೇಗಿದ್ದೀಯಾ ಆಶಾ?” ಸ್ನೇಹಪೂರ್ಣ ಧ್ವನಿ ಕೇಳಿ ಆಶಾಳಲ್ಲಿ ಖುಷಿಯ ಸಿಂಚನವಾಯಿತು.

“ಅಷ್ಟಿಷ್ಟು…… ಒಂದಿಷ್ಟು ಫನ್ನಿ…..” ಅವಳು ತನ್ನ ಕಾಲೇಜು ಜೀವನದ ಡೈಲಾಗ್‌ ಹೊಡೆದು ಕಿಲಕಿಲಾಂತ ನಕ್ಕಳು. ಅನೂಪ್ ಕೂಡ ಅವಳ ನಗುವಿನಲ್ಲಿ ತನ್ನ ನಗು ಸೇರಿಸಿದ. ಇಬ್ಬರೂ ಬಹಳಷ್ಟು ಹೊತ್ತಿನತಕ ಅದು ಇದು ಅಂತ ಮಾತನಾಡತೊಡಗಿದರು. ಆಶಾಳ ತಂದೆಯ ನಿಧನದ ಬಗ್ಗೆ ಕೇಳಿ ಅವಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ. ಆಶಾ ಕೂಡ ಅವನ ಕುಟುಂಬದವರ ಬಗ್ಗೆ ವಿಚಾರಿಸಿ ಮುಂದೆಯೂ ನಾವು ಕಾಂಟ್ಯಾಕ್ಟಿನಲ್ಲಿರೋಣ ಎಂದು ಹೇಳುತ್ತಾ, ಮಾತಿಗೆ ವಿದಾಯ ಹಾಡಿದರು.

ಅನೂಪ್‌ ಜೊತೆಗೆ ಮಾತಾಡಿದ ಬಳಿಕ ಅವಳಿಗೆ ಅನಿಸಿದ್ದೇನೆಂದರೆ, ಯಾವ ರೀತಿ ಯಂತ್ರಗಳಲ್ಲಿ ತಾಂತ್ರಿಕ ಲೋಪ ಉಂಟಾಗುತ್ತದೋ, ಅದಕ್ಕೆ ದುರಸ್ತಿಯ ಅವಶ್ಯಕತೆ ಬೀಳುತ್ತೋ, ಅದೇ ಕೆಲಸ ಮನಸ್ಸಿನ ದುರಸ್ತಿಗೆ ಮೆಕ್ಯಾನಿಕ್‌ ನ ಅಗತ್ಯವಿದೆ. ಹಾಗೆಂದೇ ಇಂದು ಹಳೆಯ ಗೆಳೆಯನೊಂದಿಗೆ ಮಾತನಾಡಿ ಮನಸ್ಸು ಹಗುರವಾಗಿತ್ತು.

ಆಶಾ ಹಾಗೂ ಅನೂಪ್‌ ದಿನ ಫೋನಿನಲ್ಲಿ ಮಾತಾಡುತ್ತಿದ್ದರು. ಸಮಯ ಹಾಗೂ ಸಂಪರ್ಕದ ಖಾದ್ಯ ದೊರಕುತ್ತಿದ್ದುದರಿಂದ ಆ ಸಂಬಂಧ ಕೂಡ ಮತ್ತಷ್ಟು ಸೊಂಪಾಗಿ ಬೆಳೆಯುತ್ತಿತ್ತು. ಒಮ್ಮೊಮ್ಮೆ ಅನೂಪನನ್ನು ತನ್ನವನನ್ನಾಗಿಸಿಕೊಳ್ಳುವ ಅವಳ ಆಸೆ ಬಲಗೊಳ್ಳುತ್ತಿತ್ತು. ಆದರೆ ಅವನ ಹೆಂಡತಿಯ ನೆನಪಾಗಿ ಅವಳು ತನ್ನ ಮನಸ್ಸಿಗೆ ತಾನೇ ತಿಳಿಹೇಳುತ್ತಿದ್ದಳು.

“ನೋಡು, ನಾನು ಆಫೀಸ್‌ ಕೆಲಸದ ನಿಮಿತ್ತ ನಿನ್ನ ನಗರಕ್ಕೆ ಬಂದಿರುವೆ. ಹೋಟೆಲ್ ‌ರಾಜಹಂಸದಲ್ಲಿ ಉಳಿದುಕೊಂಡಿವೆ. ಸಂಜೆ ಬಂದು ಭೇಟಿ ಆಗ್ತೀಯಾ?” ಅನೂಪನ ಈ ಆಕಸ್ಮಿಕ ಆಹ್ವಾನದಿಂದ ಅವಳು ಚಕಿತಳಾಗಿಹೋದಳು.

“ಸರಿ ಆದರೆ…. ಯಾರಾದರೂ ನೋಡಿದರೆ ದೊಡ್ಡ ಗುಲ್ಲೆಬ್ಬಿಸಿಬಿಡುತ್ತಾರೆ. ನಾನು ಯಾರುಯಾರಿಗೆ ಅಂತ ಉತ್ತರ ಕೊಡಲಿ? ನಿನಗೇ ಗೊತ್ತು ಇದು ಅಷ್ಟು ದೊಡ್ಡ ನಗರವಲ್ಲ ಅಂತ,” ಎಂದು ಹೇಳಿದಳಾದರೂ, ಅವಳ ಮನಸ್ಸಿನಲ್ಲಿ ಇನ್ನೂ ಯುದ್ಧ ನಡೆಯುತ್ತಲೇ ಇತ್ತು. ಮನಸ್ಸಿನಲ್ಲಿಯೇ ಅವಳು ಅನೂಪನ ಸಂಗ ಬಯಸುತ್ತಿದ್ದಳು.

“ನೀನು ನನ್ನನ್ನು ಭೇಟಿಯಾಗದೆ ಇರಬಲ್ಲೆಯಾ? ನಾನು ನಿನ್ನಿಂದ ಕೆಲವೇ ನಿಮಿಷಗಳ ಅಂತರದಲ್ಲಿರುವೆ,” ಅನೂಪ್‌ಪ್ರೀತಿಯಿಂದ ಹೇಳಿದ.

“ಸರಿ ಸರಿ…. ಗೊತ್ತಾಯ್ತು. ನಾನು ಸಂಜೆ 5 ಗಂಟೆಗೆ ಬರ್ತೀನಿ,” ಕೊನೆಗೊಮ್ಮೆ ಆಶಾಳ ಹೃದಯ ಅವಳ ಮೆದುಳಿನೊಂದಿಗೆ ಹೋರಾಡಿ ಗೆಲುವು ಸಾಧಿಸಿತು.

ek-din-apne-liye-story2

ಅಷ್ಟೊಂದು ವರ್ಷಗಳ ಬಳಿಕ ಪ್ರಿಯಕರನನ್ನು ಕಂಡು ಆಶಾ ಭಾವುಕಳಾದಳು. ಅನೂಪನನ್ನು ತೋಳ್ತೆಕ್ಕೆಯಲ್ಲಿ ಬಂಧಿಸಿದಳು. ಅನೂಪ್‌ ಕೂಡ ಅವಳನ್ನು ಇನ್ನಷ್ಟು ಬಾಚಿಕೊಂಡ ಬಳಿಕ ಅವಳ ಹಣೆಗೊಂದು ಪ್ರೀತಿಯ ಮುತ್ತಿಟ್ಟ.

ಇಬ್ಬರೂ ಸುಮಾರು 1 ಗಂಟೆ ಕಾಲ ಜೊತೆ ಜೊತೆ ಕಳೆದರು. ಕಾಫಿ ಕುಡಿದರು, ಬಹಳಷ್ಟು ವಿಷಯ ಚರ್ಚಿಸಿದರು. ಅನೂಪ್‌ ಗೆ 7 ಗಂಟೆಗೆ ರೈಲು ಇತ್ತು. ಅವನು ಮತ್ತೊಮ್ಮೆ ಭೇಟಿಯಾಗುವ ಭರವಸೆ ಕೊಟ್ಟು ಅವಳಿಂದ ವಿದಾಯ ಪಡೆದುಕೊಂಡ.

ಅದೇ ರೀತಿ 6 ತಿಂಗಳು ಕಳೆಯಿತು. ಫೋನ್‌ನಲ್ಲಿ ಮಾತು, ವಿಡಿಯೋ ಚಾಟಿಂಗ್‌ ಮಾಡುತ್ತಾ ಬಹಳ ನಿಕಟವಾದರು.  ಒಮ್ಮೊಮ್ಮೆ ಇಬ್ಬರೂ ಅಂತರಂಗದ ಮಾತುಗಳನ್ನಾಡುತ್ತಿದ್ದರು. ಅದರಿಂದ ಆಶಾಳ ಮನಸ್ಸಿನಲ್ಲಿ ರೋಮಾಂಚನ ಉಂಟಾಗುತ್ತಿತ್ತು.

ಅದೊಂದು ದಿನ ಅನೂಪ್‌ ಹೆಂಡತಿ ತವರಿಗೆ ಹೋಗಿದ್ದಳು. ಆಗ ಅನು ಆಶಾ ಜೊತೆಗೆ ರಾತ್ರಿ ಬಹಳ ಹೊತ್ತಿನವರೆಗೆ ವಿಡಿಯೋ ಚಾಟ್‌ ಮಾಡುತ್ತಿದ್ದ.

“ಅನೂಪ್‌, ನಿನ್ನ ಶರ್ಟ್‌ ಕಳಚು” ಆಶಾ ಆಕಸ್ಮಿಕವಾಗಿ ಹೇಳಿದಳು.

ಅನೂಪ್‌ ತಕ್ಷಣವೇ ಶರ್ಟ್‌ ಕಳಚಿದ ಬಳಿಕ ಬನಿಯನ್‌…….

“ಈಗ ನಿನ್ನ ಸರದಿ,” ಎಂದು ಅನೂಪ್‌ ಹೇಳಿದ. ಆಗ ಆಶಾಳ ಮುಖ ನಾಚಿಕೆಯಿಂದ ಕೆಂಪಗಾಯಿತು. ಅವಳು ತಕ್ಷಣವೇ ಚಾಟ್ ಮಾಡುವುದನ್ನು ನಿಲ್ಲಿಸಿಬಿಟ್ಟಳು. ಆದರೆ ಆಶಾಳ ಮನಸ್ಸಿನಲ್ಲಿ  ಅನೂಪ್‌ ಬಗೆಗಿನ ಕಾಮನೆಗಳು ತೀವ್ರ ಹೆಚ್ಚುತ್ತಾ ಹೋದವು. ಸೋಮು ಹಾಗೂ ಅಮ್ಮನ ಜವಾಬ್ದಾರಿಯ ಕಾರಣದಿಂದ ಅವಳು ತನ್ನ ಮದುವೆಯ ಬಗ್ಗೆ ಯೋಚಿಸಲು ಆಗುತ್ತಿರಲಿಲ್ಲ. ಆದರೆ ಅವಳದ್ದೇ ಆದ ಕೆಲವು ಕಾಮನೆಗಳು ಬಿಟ್ಟು ಬಿಟ್ಟು ಹುಚ್ಚೆದ್ದು ಕುಣಿಯುತ್ತಿದ್ದವು.

`ನನಗೆ ಒಂದು ದಿನವಾದರೂ ಅನೂಪ್‌ ಜೊತೆಗೆ ಕಾಲ ಕಳೆಯುವ ಅವಕಾಶ ಸಿಕ್ಕರೆ ಸಾಕು ಎಂದು ಅವಳು ಯೋಚಿಸುತ್ತಿದ್ದಳು. ಆ ಒಂದು ದಿನ ಇಡೀ ಜೀವನ ಆನಂದಿಸುತ್ತೇನೆ. ಅನೂಪನ ಪ್ರೀತಿಯನ್ನು ಮನಸ್ಸು ಮೆದುಳಿನಲ್ಲಿ ಅಚ್ಚೊತ್ತುವಂತೆ ಮಾಡುತ್ತೇನೆ,’ ಆಶಾ ತಾನೇ ಕಲ್ಪಿಸಿಕೊಳ್ಳತೊಡಗಿದಳು. ನಾಳೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ಒಂದು ರಾತ್ರಿ ತನ್ನಿಚ್ಛೆಯಂತೆ ಜೀವಿಸಲು ಅವಳು ಬಯಸಿದ್ದಳು.

ಅವಳು ಒಂದು ದಿನ ಹೆದರಿಕೆಯಿಂದಲೇ ತನ್ನ ಕಲ್ಪನೆಯನ್ನು ಅನೂಪ್‌ ಜೊತೆಗೆ ಶೇರ್‌ ಮಾಡಿಕೊಂಡಾಗ, ಅವನೂ ಕೂಡ ಅದಕ್ಕೆ  ರಾಜಿಯಾದ. ಇಬ್ಬರೂ ಯಾವುದಾದರೂ ಬೇರೆ ನಗರದಲ್ಲಿ ಭೇಟಿಯಾಗುವುದೆಂದು ನಿರ್ಧರಿಸಿದರು.

ಅನೂಪ್‌ ಗೆ ಅದು ಕಷ್ಟದ ಕೆಲಸ ಏನಾಗಿರಲಿಲ್ಲ. ಆಶಾಳಿಗೆ ಮಾತ್ರ ಹೊರಗೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಪರಿಸ್ಥಿತಿ ಕೂಡ ಆಶಾಳಿಗೆ ಅನುಕೂಲ ಕಲ್ಪಿಸಬೇಕು ಎನ್ನುತ್ತಿತ್ತೋ ಏನೋ, ಅವಳಿಗಾಗಿ ಒಂದು ದಿನ ಕೊಡಬೇಕು ಅಳಿಚ್ಛೆಯಂತೆ ಕಲ್ಪನಾ ಲೋಕದಲ್ಲಿ ಜೀವಿಸುವಂತೆ ಮಾಡಬೇಕು ಎನ್ನುತ್ತಿತ್ತು.

ಆಶಾಳ ಆಫೀಸಿನ ವಾರ್ಷಿಕ ಕ್ರೀಡಾಕೂಟಗಳ ಸ್ಪರ್ಧೆ ಏರ್ಪಾಟಾಗಿತ್ತು. ಆಶಾ ಚೆಸ್‌ನಲ್ಲಿ ಭಾಗಿಯಾಗಿದ್ದಳು. ಹೆಚ್ಚು ಸ್ಪರ್ಧಾಳುಗಳು ಇರದೇ ಇದ್ದುದರಿಂದ ಅವಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಈ ಸ್ಪರ್ಧೆಯ ಫೈನಲ್ ರೌಂಡ್‌ ಬೆಂಗಳೂರಿನಲ್ಲಿ ನಡಯಬೇಕಾದ್ದರಿಂದ ಅವಳು 2 ದಿನಗಳ ಮಟ್ಟಿಗೆ ಬೆಂಗಳೂರಿಗೆ ಹೋಗಬೇಕಿತ್ತು.

ಆಶಾ ಟೂರ್ನಮೆಂಟ್‌ ದಿನಾಂಕ ನಿಗದಿ ಆಗುತ್ತಿದ್ದಂತೆಯೇ ಅನೂಪ್‌ ಗೆ ವಿಷಯ ತಿಳಿಸಿದಳು. ಅಂದಹಾಗೆ ಆಶಾ ಸಹಿತ ಎಲ್ಲ ಕ್ರೀಡಾಪಟುಗಳಿಗೆ ಉಳಿದುಕೊಳ್ಳುವ ವ್ಯವಸ್ಥೆಯನ್ನು ಗೆಸ್ಟ್ ಹೌಸಿನಲ್ಲಿ ಮಾಡಲಾಗಿತ್ತು. ಆದರೆ ಆಶಾ ತನ್ನ ಗೆಳತಿಯ ಮನೆಯಲ್ಲಿ ಉಳಿದುಕೊಳ್ಳುವ ಪರ್ಮಿಶನನ್ನು ತನ್ನ ಲೀಡರ್‌ ನಿಂದ ಪಡೆದುಕೊಂಡಿದ್ದಳು.

ಆಶಾ ತನ್ನ ಸಹೋದ್ಯೋಗಿಗಳ ಜೊತೆ 7 ಗಂಟೆಗೆ ಬೆಂಗಳೂರು ತಲುಪಿದಳು. ಅನೂಪನ ರೈಲು 9 ಗಂಟೆಗೆ ಬರಲಿತ್ತು. ಆ ಬಳಿಕ ಇಬ್ಬರೂ ಗಂಡಹೆಂಡತಿಯರಂತೆ ಒಂದು ಹೋಟೆಲ್ ‌ನಲ್ಲಿ ಚೆಕ್‌ ಇನ್‌ ಆದರು. ಸ್ವಲ್ಪ ಹೊತ್ತು ಅದು ಇದು ಮಾತನಾಡಿದ ಬಳಿಕ ಆಶಾ ಅವನಿಗೆ ಹೇಳಿ ಹೊರಟಳು. ಏಕೆಂದರೆ ಮಧ್ಯಾಹ್ನ ಅವಳಿಗೆ ಮ್ಯಾಚ್‌ ಆಡಬೇಕಿತ್ತು. ಅಂದಹಾಗೆ ಇಬ್ಬರಿಗೂ ಈಗ ಅಗಲಿಕೆಯನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ಆದರೆ ಯಾವ ನೆಪದಿಂದ ಅವರ ಭೇಟಿಗೆ ಅವಕಾಶ ಸಿಕ್ಕಿತ್ತೋ, ಅದನ್ನು ನಿಭಾಯಿಸಲೇಬೇಕಿತ್ತು. ಇಲ್ಲದಿದ್ದರೆ ಇಡೀ ಟೀಮಿಗೆ ಅವಳ ಬಗ್ಗೆ ಸಂದೇಹವಾಗುತ್ತಿತ್ತು.

ಆಶಾ ಮನಸ್ಸಿಲ್ಲದ ಮನಸ್ಸಿನಿಂದ ಆಟ ಆಡಿದಳು. ಹೀಗಾಗಿ ಮೊದಲ ರೌಂಡ್‌ ನಲ್ಲೇ ಸೋತು ಹೊರಬಿದ್ದಳು. ಅವಳು ತನ್ನ ಟೀಮ್ ಲೀಡರಿಗೆ ತನ್ನ ಆರೋಗ್ಯ ಹದಗೆಟ್ಟಿರುವ ನೆಪ ಹೇಳಿ ಎರಡೇ ಗಂಟೆಯಲ್ಲಿ ಹೋಟೆಲಿಗೆ ವಾಪಸ್‌ ಆದಳು. ಅನೂಪ್‌ ಅವಳನ್ನು ಕಾಣುತ್ತಿದ್ದಂತೆಯೇ ತನ್ನ ಬಾಹುಗಳಲ್ಲಿ ಸೆಳೆದುಕೊಂಡ. ಅವಳ ಮುಖಕ್ಕೆ ಒಂದೇ ಸಮನೇ ಚುಂಬಿಸತೊಡಗಿದ. ಅವಳು ಹೇಗೋ ಅವನನ್ನು ತಡೆದಳು. ಅವಳು ಈ ಕ್ಷಣಗಳನ್ನು ಚಹಾದ ಗುಟುಕಿನಂತೆ ನಿಧಾನವಾಗಿ ಸವಿಯಬೇಕೆಂದು ಅಪೇಕ್ಷಿಸಿದ್ದಳು. ಆಶಾಳ ಆಗ್ರಹದ ಮೇರೆಗೆ ಇಬ್ಬರೂ ಮಾಲಿಗೆ ಸುತ್ತಾಡಲು ಹೋದರು. ರಾತ್ರಿ 9ರ ಬಳಿಕ ಡಿನ್ನರ್‌ ಮುಗಿಸಿ ರೂಮಿಗೆ ಬಂದಾಗ, ಅನೂಪ್‌ ಅವಳ ಯಾವೊಂದು ಮಾತನ್ನೂ ಕಿವಿಗೆ ಹಾಕಿಕೊಳ್ಳದೆ ಅವಳನ್ನು ತನ್ನತ್ತ ಸೆಳೆದುಕೊಂಡ.

ಆಶಾ ಪ್ರೀತಿಯ ಈ ಮೊದಲ ಮಳೆಯಲ್ಲಿ ಪೂರ್ತಿ ತೊಯ್ದುಹೋದಳು.

ಆ ಬಳಿಕ ಇಬ್ಬರೂ ರಾತ್ರಿಯಿಡೀ ಎಚ್ಚರಾಗಿಯೇ ಇದ್ದರು. ಬೆಳಗ್ಗೆ ಇಬ್ಬರೂ ಜೊತೆ ಜೊತೆಗೆ ಶವರ್‌ ಬಾತ್‌ ನ ಆನಂದ ಪಡೆದರು. ಸ್ನಾನ ಮಾಡುತ್ತಾ ಪುನಃ ಇಬ್ಬರೂ ಪ್ರೀತಿಯ ನದಿಯಲ್ಲಿ ತೇಲತೊಡಗಿದರು. ಇವತ್ತು ಅವಳಿಗೆ ತನ್ನ ಎಲ್ಲ ಇಚ್ಛೆಗಳು ನೆರವೇರಿದವು ಎನ್ನಿಸಿತು. ಈಗ ಅವಳಿಗೆ ಹೆಚ್ಚಿನ ಅಪೇಕ್ಷೆ ಇರಲಿಲ್ಲ.

ಈ ಮಧ್ಯೆ ಆಶಾಳ ಟೀಮ್ ಲೀಡರ್‌ ನಿಂದ ಫೋನ್‌ ಕರೆ. ಅವರು ರಾತ್ರಿ 10 ಗಂಟೆಗೆ ಹೊರಡಬೇಕಿತ್ತು. ಆಶಾ ಅನೂಪನ ಚುಂಬನ ಪಡೆದು ಹೋಟೆಲಿನಿಂದ ಹೊರಗೆ ಬಂದಳು. ಅನೂಪ್‌ ಅವಳಿಗಾಗಿ ಕ್ಯಾಬ್‌ ಬುಕ್‌ ಮಾಡಿದ್ದ.

“ಹೇಗಿತ್ತು ಅನುಭವ?” ಅನೂಪ್‌ ತುಂಟತನದಿಂದ ಕೇಳಿದ.

“ನಾನಿಂದು ಹೋಗಬೇಕಿದೆ. ಎಂದಾದರೊಮ್ಮೆ ಹೂಗಳನ್ನು ಕಿತ್ತು ಅದರ ಸುಗಂಧವನ್ನು ಗಾಳಿಯಲ್ಲಿ ವಿಲೀನಗೊಳಿಸಬೇಕು. ಎಂದಾದರೊಮ್ಮೆ ಮೇರೆ ಮೀರಿ ಹರಿಯುವುದರಲ್ಲಿ ತಪ್ಪೇನಿದೆ? ನನಗಾಗಿ ಅಪೇಕ್ಷಿಸುವಲ್ಲಿ ಯಾವುದೂ ಅಪರಾಧವಲ್ಲ…. ಸಮಾಜ ಇದನ್ನು ನೈತಿಕತೆಯ ತಕ್ಕಡಿಯಲ್ಲಿ ಹಾಕಿ ತೂಗಬಹುದು. ಆದರೆ ನಾನು ನನ್ನ ಮನಸ್ಸಿನ ಮಾತನ್ನು ಆಲಿಸಿದೆ. ಆಗ ಈ ಕಡೆಯ ತಟ್ಟೆ ನನಗೆ ಭಾರ ಎನಿಸಿತು,” ಆಶಾ ಅನೂಪ್‌ನ ಕೈ ಕುಲುಕುತ್ತ ದಾರ್ಶನಿಕಳ ಹಾಗೆ ಮಾತಾಡಿದಳು.

ಅನೂಪನಿಗೆ ಅವಳ ಮಾತು ಎಷ್ಟು ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಆಶಾ ಇಂದು ಒಂದು ದಿನ ತನಗಾಗಿ ಜೀವಿಸಿ ಬಹಳ ಖುಷಿಯಿಂದಿದ್ದಳು. ಈಗ ಅವಳು ಬೇರೆಯವರಿಗಾಗಿ ಜೀವಿಸಲು ಪುನಃ ಸನ್ನದ್ಧಳಾಗಿದ್ದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ