ವ್ಯಂಗ್ಯ - ರಾಗಿಣಿ ರಾಮಚಂದ್ರ
ಗಂಡ ಹಾಗೂ ಮಕ್ಕಳು ಹೊರಗಿನ ರುಚಿ ರುಚಿಯಾದ ತಿಂಡಿಗಳನ್ನು ತಿಂದು ಮನೆಯಲ್ಲಿ ಸಾದಾ ಊಟಕ್ಕೇ ಬೇಡಿಕೆ ಸಲ್ಲಿಸುತ್ತಿದ್ದರು. ಅನಿವಾರ್ಯವಾಗಿ ಪ್ರಿಯಾಳಿಗೂ ಅದನ್ನೇ ತಿನ್ನಬೇಕಾಗಿ ಬರುತ್ತಿತ್ತು. ದಿನದಿನ ಇದೇ ಪದ್ಧತಿ ಮುಂದುವರಿದಾಗ ಪ್ರಿಯಾಗೆ ಒಂದು ಉಪಾಯ ಹೊಳೆಯಿತು.
ಅನಿಲ್ ಹಾಗೂ ಮಕ್ಕಳಾದ ಶುಭಾ ಮತ್ತು ಶಂಭು ಆಫೀಸ್‌ಗೆ ಹೊರಟುಹೋದಾಗ ಪ್ರಿಯಾ ಸ್ವಲ್ಪ ಹೊತ್ತು ಹಾಗೆಯೇ ಕುಳಿತು ಪತ್ರಿಕೆಯ ಪುಟಗಳನ್ನು ತಿರುಗಿಸತೊಡಗಿದಳು. ಆಕಸ್ಮಿಕವಾಗಿ ಅವಳ ಗಮನ ರೆಸಿಪಿಯ ಬಣ್ಣ ಬಣ್ಣದ ಪುಟಗಳ ಮೇಲೆ ಹೋಯಿತು. ಅದನ್ನು ಓದುತ್ತಿದ್ದಂತೆಯೇ ಅವಳ ಬಾಯಲ್ಲಿ ನೀರೂರಿತು. ಸಾಮಗ್ರಿಗಳತ್ತ ಗಮನಿಸಿದಳು. ಎಲ್ಲವೂ ಮನೆಯಲ್ಲಿ ಸಂಗ್ರಹವಿತ್ತು. ಪ್ರಿಯಾಳಿಗೆ ಹೊಸ ಹೊಸದನ್ನು ಮಾಡುವ ಹವ್ಯಾಸವಿತ್ತು. ಅವಳಿಗೆ ಬಗೆ ಬಗೆಯದನ್ನು ತಿನ್ನುವ ಅಭ್ಯಾಸವಿತ್ತು. ಆದರೆ ವ್ಯಾಯಾಮ ಮಾಡಿ ತನ್ನ ದೇಹ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿದ್ದಳು. ಅವಳದು ದಷ್ಟಪುಷ್ಟ ದೇಹ ಯಾವುದೇ ದೈಹಿಕ ತೊಂದರೆಗಳಿರಲಿಲ್ಲ. ಅವಳು ತನ್ನ ಜೀವನದ ಬಗ್ಗೆ ಸಂಪೂರ್ಣ ತೃಪ್ತಳಾಗಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ಅನಿಲ್ ಹಾಗೂ ಮಕ್ಕಳಿಗೆ ಮನೆಯಲ್ಲಿ ಸಾದಾಸೀದಾ ಊಟ ತಿಂಡಿ ಸೇವನೆಯ ಭೂತ ತಲೆ ಸೇರಿಕೊಂಡಿತ್ತು.
ಆಕಸ್ಮಿಕವಾಗಿ ಪ್ರಿಯಾ ತನ್ನ ಕುಟುಂಬದವರ ಬಗ್ಗೆ ಯೋಚಿಸತೊಡಗಿದಳು. ಪತಿ ಅನಿಲ್ ಮೊದಲಿನಿಂದಲೂ ತಿಂಡಿಪೋತ. ಆದರೆ ಹೆಚ್ಚುತ್ತಿರುವ ವಯಸ್ಸಿನ ಕಾರಣದಿಂದಾಗಿ ಅವರು ಇತ್ತೀಚೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಆರೋಗ್ಯದಿಂದಿರುವ ಹವ್ಯಾಸ ಮನೆಯ ಎಲ್ಲರಿಗೂ ತಗುಲಿಕೊಂಡಿತ್ತು. ಮನೆಯ ಪ್ರತಿಯೊಬ್ಬರೂ ಒಮ್ಮೆಲೆ ಬೇಯಿಸಿದ ತರಕಾರಿಗಳನ್ನೇ ತಿಂದು ಜೀವಿಸಬೇಕೆನ್ನುತ್ತಾರೆ. ಅದಕ್ಕೂ ಆಶ್ಚರ್ಯದ ಸಂಗತಿಯೆಂದರೆ, ಆಫೀಸಿನಲ್ಲಿ ಎಲ್ಲರೂ ಮಸಾಲೆಯುಕ್ತ ರುಚಿ ರುಚಿಯಾದ ತಿಂಡಿ ತಿಂದು ಬರುತ್ತಾರೆ. ಮನೆಯಲ್ಲಿ ಯಾವುದಾದರೂ ತಿಂಡಿ ತಯಾರಿಸಿದರೆ ಅವರ ದೃಷ್ಟಿ ಎಣ್ಣೆ, ಮಸಾಲೆ, ಕ್ಯಾಲೋರಿಯ ಕಡೆ ಹೋಗುತ್ತದೆ.
ರುಚಿಯಾದ ಪದಾರ್ಥಗಳು ಕ್ಯಾಲೋರಿಯುಕ್ತ ಆಗಿರುತ್ತವೆ. ಅದರಲ್ಲಿ ಪ್ರಿಯಾಳದ್ದೇನು ತಪ್ಪು? ಆಗ ಎಲ್ಲರೂ ಅವಳ ಹಿಂದೆ ಬಿದ್ದು ಎಷ್ಟೊಂದು ಹೆವಿ ಅಡುಗೆ ಮಾಡಿದ್ದೀಯಾ ಎಂದು ಹೇಳುತ್ತಾರೆ. ಆರೋಗ್ಯಕರ ಆಹಾರದ ಕುರಿತಂತೆ ತಾಯಿ ಮಕ್ಕಳು ಪತಿಯ ನಡುವೆ ದಿನ ಚರ್ಚೆ ನಡೆಯುತ್ತಿತ್ತು. ಅವರ ಮಾತಿನಿಂದ ರೋಸಿಹೋದ ಪ್ರಿಯಾ, ನಿಮ್ಮ ಆಫೀಸಿನಲ್ಲೂ ಬೇಯಿಸಿದ ತರಕಾರಿಗಳನ್ನಷ್ಟೇ ಏಕೆ ತಿನ್ನಬಾರದು ಎಂದು ಕೇಳುತ್ತಾಳೆ.
ಸಂಜೆ ಹೊತ್ತು ಮನೆಗೆ ವಾಪಸ್ ಬಂದಾಗ ಯಾರನ್ನು ಕೇಳಿದರೂ ತಾನು ಅದನ್ನು ತಿಂದೆ, ಇದನ್ನು ತಿಂದೆ ಎಂದು ಕೊಚ್ಚಿಕೊಳ್ಳುತ್ತಾರೆ. ಅದನ್ನು ಕೇಳಿ ಪ್ರಿಯಾಳ ಬಾಯಿಯಲ್ಲಿ ನೀರೂರುತ್ತಿತ್ತು. ಮನೆಯಲ್ಲಿ ತಾನು ಮೊಳಕೆ ಕಾಳಿನ ಪಲ್ಯ, ರೊಟ್ಟಿ ತಿನ್ನುತ್ತಿದ್ದರೆ, ಅತ್ತ ಮೂವರು ತಮ್ಮ ಆಫೀಸುಗಳಲ್ಲಿ ಪಿಜ್ಜಾ, ಬಿರಿಯಾನಿ ತಿನ್ನುತ್ತಿರುತ್ತಾರೆ. ಪತಿ ಅನಿಲ್ ಮಾಡುವ ಹೊಸ ನಾಟಕ ಏನೆಂದರೆ, ``ತಾನು ಇನ್ನು ಮುಂದೆ ಆಫೀಸಿಗೆ ಮನೆಯಿಂದಲೇ ತಿಂಡಿ ಊಟ ತೆಗೆದುಕೊಂಡು ಹೋಗುತ್ತೇನೆ. ಮನೆಯ ತಿಂಡಿಯೇ ಶ್ರೇಷ್ಠ ತಿಂಡಿ.''