ವರ್ಕ್‌ ಫ್ರಮ್ ಹೋಮ್ ಅಂದರೆ ಮನೆಯಲ್ಲಿಯೇ ಕುಳಿತು ನೌಕರಿ ಮಾಡುವುದು. ಕೆಲವು ಕೆಲಸಗಳು ಹೇಗಿವೆ ಎಂದರೆ, ಅವನ್ನು ಮನೆಯಲ್ಲಿಯೇ ಕುಳಿತು ಮಾಡಬಹುದಾಗಿದೆ. ನೀವು ಜಗತ್ತಿನ ಯಾವುದೇ ಮೂಲೆಯಲ್ಲಿರಿ, ಇಂಟರ್‌ ನೆಟ್‌ ಹೈಗೂ ವೈಫೈನ ಸಹಾಯದಿಂದ ಈ ಕೆಲಸಗಳನ್ನು ಮಾಡಿ ಮುಗಿಸಬಹುದು. ಇದರಲ್ಲಿ ಕೆಲಸ ಕೊಡುವವರಿಗೆ ಮತ್ತು ಮಾಡುವವರಿಗೆ ಇಬ್ಬರಿಗೂ ಲಾಭ ಇದೆ. ಅದರಲ್ಲೂ ವಿಶೇಷವಾಗಿ ಎಂತಹ ತಾಯಂದಿರು ಹಾಗೂ ಅಪ್ಪಂದಿರಿಗೆ ಇದು ಉಪಯುಕ್ತ ಎಂದರೆ, ಮಕ್ಕಳ ಮೇಲೆ ಹೆಚ್ಚಿನ ಗಮನ ಕೊಡಲು ಇಚ್ಛಿಸುವವರಿಗೆ ಇದು ಹೇಳಿ ಮಾಡಿಸಿದಂತಹ ಒಂದು ಕೆಲಸ. ಮೊದಲು ಇದು ಪಶ್ಚಿಮದ ವಿಕಸಿತ ದೇಶಗಳಿಗೆ ಸೀಮಿತವಾಗಿತ್ತು. ಆದರೆ ಈಗ ಇದು ನಮ್ಮ ದೇಶದಲ್ಲೂ ಇಂಟರ್‌ ನೆಟ್‌ ಹಾಗೂ ಲೈಫೈನ ವ್ಯಾಪಕ ವಿಸ್ತಾರದಿಂದ ವರ್ಕ್‌ ಫ್ರಮ್ ಹೋಮ್ ಸಾಧ್ಯ ಎನಿಸುವಂತಾಗಿದೆ.

ಯಾವ ಕೆಲಸಗಳು ಮನೆಯಲ್ಲೇ ಸಾಧ್ಯ?

ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿತ ಕೆಲಸ ಕಾರ್ಯಗಳನ್ನು ಇಂಟರ್‌ ನೆಟ್‌ ಮತ್ತು ಲೈಫೈನ ಮುಖಾಂತರ ಮಾಡಬಹುದಾಗಿದೆ.

ವರ್ಚುವಲ್ ‌ಅಸಿಸ್ಟೆಂಟ್‌ : ನೀವು ವರ್ಚುವಲ್ ಅಸಿಸ್ಟೆಂಟ್‌ನ ಕಂಪನಿಯನ್ನು ಮನೆಯಿಂದಲೇ ನಡೆಸಬಹುದು ಅಥವಾ ನಿಮಗೆ ಕೆಲಸ ಕೊಡುವ ಯಾವುದಾದರೂ ಕಂಪನಿಗಾಗಿ ಮನೆಯಿಂದಲೇ ಕೆಲಸ ಮಾಡಿ ಕೊಡಬಹುದು. ಚಿಕ್ಕಪುಟ್ಟ ಬಿಸ್‌ ನೆಸ್‌ ನವರು ತಮ್ಮದೇ ಆದ ನೌಕರರನ್ನು ಹೊಂದುವುದು ಕಷ್ಟ. ಅವರಿಗೆ ಮನೆಯಿಂದಲೇ ಕೆಲಸ ಮಾಡಿಕೊಡುವವರು ಬೇಕಿರುತ್ತಾರೆ.

ಮೆಡಿಕಲ್ ಟ್ರಾನ್ಸ್ ಸ್ಕ್ರಿಪ್ಟ್ಸ್ : ವೈದ್ಯರ ಮಾತುಗಳನ್ನು ಆಲಿಸಿ, ಅವರ ಸೂಚನೆ, ಚಿಕಿತ್ಸೆ ಮತ್ತು ಔಷಧಿಗೆ ಸಂಬಂಧಿಸಿದ ವಿಷಯಗಳನ್ನು ಕಂಪ್ಯೂಟರ್‌ ಮೇಲೆ ಟೈಪ್‌ ಮಾಡಬೇಕಿರುತ್ತದೆ. ಇಲ್ಲಿ ವೈದ್ಯರ ಉಚ್ಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗುತ್ತದೆ.

ಅನುವಾದಕ : ಒಂದಕ್ಕಿಂತ ಹೆಚ್ಚು ಪ್ರಚಲಿತದಲ್ಲಿರುವ ಅಂತಾರಾಷ್ಟ್ರೀಯ ಭಾಷೆಗಳನ್ನು ಬಲ್ಲವರಾಗಿದ್ದರೆ, ನಿಮಗೆ ಅನುವಾದಕರಾಗಿ ಕೆಲಸ ಮಾಡುವ ಅವಕಾಶಗಳು ಲಭಿಸಬಹುದು. ಜಗತ್ತಿನಲ್ಲಿ ಇಂತಹ ಬಹಳಷ್ಟು ಕಂಪನಿಗಳಿದ್ದು ಅವು ತಮ್ಮ ಬಳಿಯಿರುವ ಆಡಿಯೋ ಫೈಲ್ಸ್ ಅಥವಾ ಡಾಕ್ಯುಮೆಂಟ್‌ ಗಳನ್ನು ಭಾಷಾಂತರ ಮಾಡಲು ನಿಮ್ಮಂತಹ ನುರಿತ, ಶ್ರದ್ಧೆಯುಳ್ಳ ಕೆಲಸಗಾರರಿಗಾಗಿ ಕಾಯುತ್ತಿರಬಹುದು.

ವೆಬ್‌ ಡಿಸೈನರ್‌ : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವರ್ಕ್‌ ಫ್ರಮ್ ಹೋಮಿನ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ. ಈ ಕ್ಷೇತ್ರದಲ್ಲಿ ವರ್ಚುವಲ್ ‌ಅಸಿಸ್ಟೆಂಟ್‌ ವೆಬ್‌ ಡೆವಲಪರ್‌ ಅಥವಾ ಡಿಸೈನರ್‌, ಹೊಸ ಕಸ್ಟಮ್ ವೆಬ್‌ ಡಿವೈಸ್‌ಅಥವಾ ಅವರ ವೆಬ್‌ ನಲ್ಲಿ ಬದಲಾವಣೆ ಸುಧಾರಣೆ ಅಥವಾ ಅಪ್‌ ಡೇಟಿಂಗ್‌ನ ಅವಶ್ಯಕತೆ ಉಂಟಾಗುತ್ತದೆ.

ಕಾಲ್ ‌ಸೆಂಟರ್‌ ಪ್ರತಿನಿಧಿ : ಇದರಲ್ಲೂ ಸಾಕಷ್ಟು ಅವಕಾಶಗಳು ಲಭ್ಯವಿವೆ. ನಾವು ಯಾವುದಾದರೂ ಕಂಪನಿಗೆ ಯಾವುದೇ ಸಾಮಗ್ರಿ ಅಥವಾ ಸೇವೆಗೆ ಆರ್ಡರ್‌ ಕೊಡುತ್ತಿದ್ದರೆ, ಅತ್ತ ಕಡೆಯಿಂದ ನಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯಕ್ತಿ ಯಾವುದೇ ಕಾಲ್ ಸೆಂಟರ್‌ ನಲ್ಲಿ ಇರದೆ, ಅವರ ಪ್ರತಿನಿಧಿಯಾಗಿದ್ದು ಮನೆಯಿಂದಲೇ ಕುಳಿತು ಕೆಲಸ ಮಾಡುತ್ತಿರಬಹುದು.

ಸಹಾಯಕ ತಾಂತ್ರಿಕ ತಜ್ಞ : ಕಾಲ್ ಸೆಂಟರಿನಲ್ಲಿ ತನ್ನ ಕಂಪ್ಯೂಟರ್‌ ಹಾಗೂ ಇತರೆ ಉಪಕರಣಗಳ ಮೇಂಟೇನೆನ್ಸ್ ಅಥವಾ ದುರಸ್ತಿ ಇಲ್ಲಿ ಆಧುನೀಕರಣಕ್ಕಾಗಿ ಕಾಲಕಾಲಕ್ಕೆ ತಂತ್ರಜ್ಞಾನದ ಅವಶ್ಯಕತೆ ಉಂಟಾಗುತ್ತದೆ. ಅದನ್ನು ಮನೆಯಲ್ಲಿ ಕುಳಿತೇ ಬಗೆಹರಿಸಬಹುದು. ಒಮ್ಮೊಮ್ಮೆ ಆನ್‌ ಸೈಟ್‌ ಹೋಗಬೇಕಾಗುತ್ತದೆ. ನೀವು ಕಂಪ್ಯೂಟರ್‌, ಇಂಟರ್‌ ನೆಟ್‌, ಮೋಡಮ್, ವೈಫೈ ಮುಂತಾದವುಗಳ ಬಗ್ಗೆ ಮಾಹಿತಿ ಹೊಂದಿದ್ದರೆ, ಇದನ್ನು ನೀವೇ ಮಾಡಬಹುದು.

ಟ್ರಾವೆಲ್ ‌ಏಜೆಂಟ್‌ :  ಒಂದು ವೇಳೆ ನಿಮಗೆ ಈ ಬಿಸ್‌ ನೆಸ್‌ ನ ಮಾಹಿತಿ ಇದ್ದರೆ, ನೀವು ಮನೆಯಲ್ಲಿ ಕುಳಿತುಕೊಂಡೇ ಈ ಕೆಲಸ ಮಾಡಬಹುದು.

ಶೈಕ್ಷಣಿಕ ಕೆಲಸ : ಶಾಲೆ ಹಾಗೂ ಕಾಲೇಜುಗಳಲ್ಲಿ ಎಂತಹ ಕೆಲವು ವಿದ್ಯಾರ್ಥಿಗಳಿದ್ದಾರೆಂದರೆ, ಅವರಿಗೆ ಕೋಚ್‌ ಅಥವಾ ಟ್ಯೂಟರ್‌ಅವಶ್ಯಕತೆ ಉಂಟಾಗುತ್ತದೆ. ಇತ್ತೀಚೆಗೆ ದೂರ ಶಿಕ್ಷಣ ಹಾಗೂ ಕರೆಸ್ಪಾಂಡೆನ್ಸ್ ಕೋರ್ಸ್‌ ಗಳ ಟ್ರೆಂಡ್‌ ಜೋರಾಗಿದೆ. ಅದರಿಂದಾಗಿಯೂ ವರ್ಕ್‌ ಫ್ರಮ್ ಹೋಮ್ ನ ಅವಕಾಶಗಳು ಹೆಚ್ಚಾಗಿ ತೆರೆದುಕೊಂಡಿವೆ.

ಲೇಖಕ/ಸಂಪಾದಕ : ಬರವಣಿಗೆ, ತಿದ್ದುಪಡಿ ಅಥವಾ ಎಡಿಟಿಂಗ್‌ಕೆಲಸ ಅದರಲ್ಲೂ ವಿಶೇಷವಾಗಿ ವೆಬ್‌ ಗಾಗಿ ಮನೆಯಿಂದಲೇ ಕೆಲಸ ಮಾಡಿಕೊಡಬಹುದು. ಒಂದು ವೇಳೆ ಬರವಣಿಗೆಯ ಮಾಹಿತಿ ಇಲ್ಲದಿದ್ದರೂ ಬ್ಲಾಗ್‌ ಸ್ಪೆಯರ್‌ ಆಗಿ ಜಾಯಿನ್‌ ಆಗಬಹುದು. ಇದರಲ್ಲಿ ಸಾಕಷ್ಟು ಕುತೂಹಲ ಇದೆ ಜೊತೆಗೆ ಹಣ ಕೂಡ.

ಫ್ರಾಂಚೈಸಿ : ನಿಮಗೆ ಬಿಸ್‌ ನೆಸ್‌ ಬಗ್ಗೆ ಪ್ರಾಥಮಿಕ ಮಾಹಿತಿ ಇದ್ದರೆ ನೀವು ಇದರಲ್ಲಿ ಒಂದಿಷ್ಟು ಹಣವನ್ನು ತೊಡಗಿಸಬಹುದು ಎನ್ನುವುದಾದರೆ ಯಾವುದಾದರೂ ಕಂಪನಿ ಅಥವಾ ಫ್ರಾಂಚೈಸಿ ತೆಗೆದುಕೊಂಡು ಮನೆಯಿಂದಲೇ ಈ ಕೆಲಸ ಮಾಡಬಹುದು.

ಚೆಸ್‌ ಕೋಚ್‌ : ನಿಮಗೆ ಚೆಸ್‌ ಆಟದ ಬಗ್ಗೆ ಗೊತ್ತಿದ್ದರೆ, ಕಂಪ್ಯೂಟರ್‌ ಮತ್ತು ಇಂಟರ್‌ ನೆಟ್‌ ನ ಸ್ಕೈಪ್‌ ಮುಖಾಂತರ ಮಕ್ಕಳಿಗೆ ಮನೆಯಲ್ಲಿ ಕುಳಿತೇ ಚೆಸ್‌ ಹೇಳಿಕೊಡಬಹುದು. ವಿದೇಶದಲ್ಲಿರುವ ಭಾರತೀಯ ಮಕ್ಕಳು ಚೆಸ್‌ ನ ಕೋಚಿಂಗ್‌ ಪಡೆಯಲು ಅಪೇಕ್ಷಿಸುತ್ತಾರೆ. ಅದಕ್ಕಾಗಿ ಗಂಟೆಗೆ ಇಂತಿಷ್ಟು ಮೊತ್ತ ನಿಗದಿ ಮಾಡಬಹುದು.

ವರ್ಕ್‌ ಫ್ರಮ್ ಹೋಮ್ ನ ಲಾಭಗಳು

ನೀವು ಮಕ್ಕಳಿಗೆ ಹಾಗೂ ಕುಟುಂಬದವರಿಗೆ ಹೆಚ್ಚಿನ ಸಮಯ ಕೊಡಬಹುದು. ಮಗು ಚಿಕ್ಕದಾಗಿದ್ದರೆ ಇದರಿಂದ ಇನ್ನೂ ಅನುಕೂಲ.

ಇದು ಕೆಲವರಿಗೆ ಹೆಚ್ಚಿನ ಆದಾಯದ ಮೂಲವಾಗಿದೆ.

ಯಾರ ಪತಿಯರಿಗೆ ಮೇಲಿಂದ ಮೇಲೆ ವರ್ಗಾವಣೆ ಆಗುತ್ತಿರುತ್ತೊ, ಅಂತಹ ಮಹಿಳೆಯರಿಗೆ ವರ್ಕ್‌ ಫ್ರಮ್ ಹೋಮ್ ಒಂದು ಒಳ್ಳೆಯ ಉಪಾಯ.

ವಿಕಲಚೇತನರು ಕೂಡ ತಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯಿಂದ ಕೆಲಸ ಮಾಡಬಹುದು.

ನೀವು ಮುಂಜಾನೆ ಬೇಗನೇ ಎದ್ದು ಬಸ್‌ ಅಥವಾ ಟ್ರೇನ್‌ ಇಲ್ಲವೇ ನೀವೇ ಡ್ರೈವ್ ಮಾಡಿಕೊಂಡು ಹೋಗಬೇಕಾದ ಅಗತ್ಯವಿಲ್ಲ. ಮಹಿಳೆಯರಿಗಂತೂ ಇದು ಹೆಚ್ಚು ಉಪಯುಕ್ತ. ಅವರಿಗೆ ದಿನ ಮೇಕಪ್‌ ಮಾಡಿಕೊಳ್ಳಬೇಕಾದ ಅವಶ್ಯಕತೆ ಇಲ್ಲ.

ನೀವು ಆಗಾಗ ಕೆಲಸದಿಂದ ಒಂದಿಷ್ಟು ವಿಶ್ರಾಂತಿ ಪಡೆದು ಮನಗೆಲಸಗಳನ್ನು ಮಾಡಿಕೊಳ್ಳಬಹುದು.

ನೀವು ಸ್ವತಃ ಶಿಸ್ತು ಪಾಲಿಸುವವರಾಗಿದ್ದರೆ, ಮನೆಯವರು ನಿಮ್ಮ ಕೆಲಸದ ಮಹತ್ವ ಅರಿತಿದ್ದರೆ, ನೀವು ಆ ಕೆಲಸ ಸುಲಭವಾಗಿ ಮಾಡಬಹುದು.

ಹೊರಗೆ ಕೆಲಸ ಮಾಡುವುದರಿಂದ ನೀವು ಕ್ಯಾಂಟೀನ್‌, ರೆಸ್ಟೋರೆಂಟಿನ ಆಹಾರ ಸೇವಿಸಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ಖರ್ಚಾಗುತ್ತದೆ. ವರ್ಕ್‌ ಫ್ರಮ್ ಹೋಮಿನಿಂದ ಹಣದ ಉಳಿತಾಯದ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸಬಹುದು.

ಆಫೀಸ್‌ ಬಾಡಿಗೆ, ಉದ್ಯೋಗಿಗಳ ಮೇಲಾಗುವ ಇತರೆ ಖರ್ಚು ಅಂದರೆ ವಿದ್ಯುತ್‌, ಏರ್‌ ಕಂಡೀಶನರ್‌, ವಾಹನ ಭತ್ಯೆ, ಅಪಘಾತ ವಿಮೆ ಮುಂತಾದವುಗಳ ಉಳಿತಾಯವಾಗುತ್ತದೆ.

ಮನೆಯಿಂದ ಕೆಲಸ ಮಾಡುವ ಉಪಕರಣಗಳ ಮೇಲಾಗುವ ಖರ್ಚಿನ ಮೇಲೆ ಆದಾಯ ತೆರಿಗೆಯ ವಿನಾಯ್ತಿ ಪಡೆಯಬಹುದು.

ಹವಾಮಾನದ ವೈಪರೀತ್ಯಗಳು ಅಂದರೆ ಮಳೆ, ಗಾಳಿ, ಬಿಸಿಲಿನ ಪ್ರಖರತೆ, ಚಳಿಯ ಪ್ರಕೋಪವನ್ನು ಎದುರಿಸಬೇಕಾಗಿಲ್ಲ.

ವರ್ಕ್‌ ಫ್ರಮ್ ಹೋಮಿನಿಂದ ಹಾನಿಗಳು

ಮನೆಯಿಂದಲೇ ಕೆಲಸ ಮಾಡುವ ಈ ವಿಧಾನದಿಂದ ಕೆಲವು ಹಾನಿಗಳೂ ಇವೆ.

ಬೇರೆಯವರ ಜೊತೆ ನೇರ ಸಂಪರ್ಕ ಹಾಗೂ ಮಾತುಕತೆಯಿಂದ ನೀವು ವೆಚಿತರಾಗುವಿರಿ.

ಕೆಲಸದವರು ನಡುನಡುವೆ ನಿಮ್ಮ ಕೆಲಸಕ್ಕೆ ಅಡಚಣೆಯನ್ನುಂಟು ಮಾಡಬಹುದು.

ನಿಮ್ಮ ವಾಣಿಜ್ಯ ವ್ಯವಹಾರ ಮತ್ತು ಸ್ಕಿಲ್ ‌ಸಂಯುಕ್ತ ರೂಪದಲ್ಲಿ ವಿಕಸನಗೊಳಿಸುವುದಿಲ್ಲ.

ವರ್ಕ್‌ ಫ್ರಮ್ ಹೋಮಿನಲ್ಲಿ ಶಿಸ್ತಿನಿಂದ ಕೆಲಸ ಮಾಡದೇ ಇದ್ದರೆ ನೀವು ಸೋಮಾರಿಗಳಾಗುವ ಸಾಧ್ಯತೆ ಹೆಚ್ಚು.

ಆಫೀಸಿನಲ್ಲಿ ಕೆಲಸ ಮಾಡುವಾಗ ಅಲ್ಲಿನ ಕಂಪ್ಯೂಟರ್‌ ಗಳಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡಾಗ ತಕ್ಷಣವೇ ದುರಸ್ತಿ ಕೆಲಸ ಆಗಬಹುದು. ಆದರೆ ಮನೆಯಲ್ಲಿ ವಿಳಂಬವಾಗುತ್ತದೆ.

ಮನೆಯಲ್ಲಿ ಕೆಲಸ ಮಾಡುವುದರಿಂದ ಸ್ಪರ್ಧಾತ್ಮಕ ಭಾವನೆ ಕಡಿಮೆಯಾಗುತ್ತದೆ. ಯಾವುದೇ ಬಿಸ್‌ ನೆಸ್‌ ನಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸಿಗೆ ಕಾಂಪಿಟಶನ್‌ ಒಳ್ಳೆಯದು.

ಬಾಸ್‌ ನಿಂದ ಹೊತ್ತಲ್ಲದ ಹೊತ್ತಿನಲ್ಲಿ ನಿಮಗೆ ಕಾಲ್ ‌ಗಳು, ನಿರ್ದೇಶನಗಳು ದೊರೆಯಬಹುದು.

ವರ್ಕ್‌ ಫ್ರಮ್ ಹೋಮಿನಿಂದ ಏಕಾಂಗಿತನ ಭಾಸವಾಗಬಹುದು. ಆಫೀಸ್‌ ನಲ್ಲಿ ಸಹೋದ್ಯೋಗಿಗಳ ಜೊತೆ ಅಷ್ಟಿಷ್ಟು ಚರ್ಚೆ ಖುಷಿಯಲ್ಲಿ ತೇಲಿಸುತ್ತದೆ.

ನೀವು ನಿಮ್ಮದೇ ಆದ ಸ್ಟೈಲಿನಲ್ಲಿ ಕೆಲಸ ಮಾಡುವಿರಿ, ನಿಮಗೆ ನಿಮ್ಮ ಸೀನಿಯರ್‌ ಗಳಿಂದ ಕಲಿಯುವ ಅವಕಾಶ ತಪ್ಪಿ ಹೋಗುತ್ತದೆ.

– ಶ್ರೀಕಲಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ